Home Blog Page 312

ಬೌರಿಂಗ್ ಆಸ್ಪತ್ರೆ ದುರಂತ: ಕಾಂಪೌಂಡ್ʼ ಗಳ ಬಳಿ ಯಾರೂ ಮಾರಾಟ ಮಾಡಬೇಡಿ – ಖರ್ಗೆ ಮನವಿ

ಕಲಬುರಗಿ: ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಏಳು ಮಂದಿ ಮೃತಪಟ್ಟ ದುರಂತಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ ಭವಿಷ್ಯದಲ್ಲಿ ಇಂತಹ ಅವಘಡಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಖರ್ಗೆ, “ಕುಸಿದ ಕಾಂಪೌಂಡ್ ಹಳೆಯದಾಗಿತ್ತೇ ಅಥವಾ ಕಳಪೆ ಗುಣಮಟ್ಟದಲ್ಲಿ ನಿರ್ಮಿಸಲಾಗಿತ್ತೇ ಎಂಬ ಬಗ್ಗೆ ತನಿಖೆ ನಡೆಸಬೇಕು. ದುರಂತದಲ್ಲಿ ಹಾನಿಗೊಳಗಾದವರಿಗೆ ಹಾಗೂ ಅಲ್ಲಿ ವ್ಯಾಪಾರ ಮಾಡುತ್ತಿದ್ದ ಸಣ್ಣ ವ್ಯಾಪಾರಿಗಳಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು” ಎಂದು ಹೇಳಿದರು.

ಅದಲ್ಲದೆ ಭವಿಷ್ಯದಲ್ಲಿ ಇಂತಹ ಅನಾಹುತಗಳು ಸಂಭವಿಸದಂತೆ ಕ್ರಮ ಕೈಗೊಳ್ಳಬೇಕು. ಕಾಂಪೌಂಡ್‌ಗಳ ಬಳಿ ಬೀದಿ ವ್ಯಾಪಾರಕ್ಕೆ ಅವಕಾಶ ನೀಡಬಾರದು. ಕಾಂಪೌಂಡ್​ಗಳ ಬಳಿ ಯಾರೂ ಮಾರಾಟ ಮಾಡಬೇಡಿ ಎಂದು ಖರ್ಗೆ ಮನವಿ ಮಾಡಿದರು.

ಪುಟ್ಪಾತ್ ಮೇಲೆ ವ್ಯಾಪಾರ ಮಾಡುವ ಸಣ್ಣ ವ್ಯಾಪಾರಿಗಳ ಸಮಸ್ಯೆಗಳನ್ನು ನಾವು ಅರ್ಥಮಾಡಿಕೊಳ್ಳಬೇಕು. ಅವರನ್ನು ಅಲ್ಲಿಂದ ತೆರವುಗೊಳಿಸಲು ಹೋದರೆ, ‘ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿದ್ದೀರಿ’ ಎನ್ನುತ್ತಾರೆ. ಆದರೆ ನಗರದ ನಾಗರಿಕರಿಗೆ ಅನಾನುಕೂಲವಾಗಬಾರದು.

ಮುನ್ಸಿಪಾಲಿಟಿಗಳು ಅವರಿಗೆ ಯೋಗ್ಯವಾದ ಸ್ಥಳಗಳನ್ನು ಒದಗಿಸಬೇಕು. ಇಂದು ಬೆಂಗಳೂರಿನಲ್ಲಿ ನಡೆದಂತೆ ನಾಳೆ ಇನ್ನೊಂದು ಕಡೆ ಆಗದಂತೆ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಗಿಗ್ ವರ್ಕರ್‌ಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಸಹಾಯ ಮಾಡಬೇಕು ಎಂದು ಖರ್ಗೆ ಒತ್ತಾಯಿಸಿದರು.

ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ತೀವ್ರ ಕುಸಿತ: ಕುಡಿಯುವ ನೀರಿನ ಸಂಕಷ್ಟದ ಎಚ್ಚರಿಕೆ

0

ಮೈಸೂರು: ರಾಜ್ಯದ ಪ್ರಮುಖ ನೀರಿನ ಮೂಲಗಳಲ್ಲಿ ಒಂದಾದ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದಲ್ಲಿ ನೀರಿನ ಮಟ್ಟ ದಾಖಲೆಯಷ್ಟು ಕುಸಿತ ಕಂಡಿದ್ದು, ಪರಿಸ್ಥಿತಿ ಗಂಭೀರ ಹಂತಕ್ಕೆ ತಲುಪಿದೆ.

ಜಲಾಶಯದ ಸಂಗ್ರಹ ಮಟ್ಟ 94 ಅಡಿಗೆ ಇಳಿಕೆಯಾಗಿದ್ದು, ಒಟ್ಟು ಲಭ್ಯ ನೀರಿನ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಉಳಿದ ನೀರನ್ನು ಅತ್ಯಂತ ಜಾಗರೂಕತೆಯಿಂದ ಬಳಕೆ ಮಾಡುವಂತೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿಗಾವಳಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ಪ್ರಕಾರ, ಕಳೆದ ವರ್ಷ ಇದೇ ಅವಧಿಯಲ್ಲಿ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ ಕ್ರಮವಾಗಿ 19.50 ಟಿಎಂಸಿಎಫ್‌ಟಿ ಮತ್ತು 9.25 ಟಿಎಂಸಿಎಫ್‌ಟಿ ನೀರು ಇದ್ದರೆ, ಈ ವರ್ಷ ಅದು 18.52 ಟಿಎಂಸಿಎಫ್‌ಟಿ ಮತ್ತು 6.23 ಟಿಎಂಸಿಎಫ್‌ಟಿ ಆಗಿದೆ.

ಸಾಮಾನ್ಯವಾಗಿ ಈ ಸಮಯದಲ್ಲಿ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 100 ಅಡಿ ಇರುವುದಾದರೂ, ಈ ಬಾರಿ ತಾಪಮಾನ ಏರಿಕೆಯಿಂದ ನೀರಿನ ಆಳ ಕುಸಿತಗೊಂಡಿದೆ. ಇದರ ಪರಿಣಾಮವಾಗಿ ಪಾಚಿ ಬೆಳವಣಿಗೆ ಹೆಚ್ಚಾಗಿ ನೀರಿನ ಗುಣಮಟ್ಟ ಕುಸಿಯುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ. ಇದರಿಂದ ನೀರಿನ ರುಚಿ ಮತ್ತು ಆರೋಗ್ಯದ ಮೇಲೆ ಪರಿಣಾಮ ಬಿದ್ದು, ನೀರಿನಿಂದ ಹರಡುವ ರೋಗಗಳ ಅಪಾಯವೂ ಹೆಚ್ಚಾಗಿದೆ.

ಮಾಜಿ ನೀರಾವರಿ ಕಾರ್ಯದರ್ಶಿ ಕ್ಯಾಪ್ಟನ್ ರಾಜಾ ರಾವ್ ಅವರ ಪ್ರಕಾರ, ಈಗಿನ ಪರಿಸ್ಥಿತಿ ಅತ್ಯಂತ ಎಚ್ಚರಿಕೆಯ ಹಂತದಲ್ಲಿದ್ದು, ನೀರಿನ ಮಿತ ಬಳಕೆ ಅನಿವಾರ್ಯವಾಗಿದೆ. ಹಾಗೆಯೇ ಕೆಎಸ್‌ಎನ್‌ಡಿಎಂಸಿ ಮಾಜಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಅವರು ನೀಡಿರುವ ಮಾಹಿತಿಯಂತೆ, ಪ್ರಸ್ತುತ ಲೈವ್ ಸ್ಟೋರೇಜ್ ಸುಮಾರು 10 ಟಿಎಂಸಿಎಫ್‌ಟಿ ಇದ್ದು, ಅದರಲ್ಲಿ ಬಹುಪಾಲು ನೀರನ್ನು ಬೆಂಗಳೂರು, ಮೈಸೂರು, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳ ಕುಡಿಯುವ ನೀರಿಗಾಗಿ ಬಳಸಲಾಗುತ್ತಿದೆ.

ಕೆಆರ್‌ಎಸ್‌ನಿಂದ ಟಿ.ಕೆ. ಹಳ್ಳಿ ವರೆಗೆ ನೀರು ಸಾಗಿಸುವ ವೇಳೆ ಸಹ ಆವಿಯಾಗುವ ಪ್ರಮಾಣ ಹೆಚ್ಚಾಗಿದ್ದು, ನೀರಿನ ನಷ್ಟವೂ ಗಮನಾರ್ಹವಾಗಿದೆ. ಜೂನ್ ಮಧ್ಯಭಾಗದವರೆಗೆ ಮಳೆ ಆರಂಭವಾಗದಿದ್ದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ: ಸ್ಥಳ ಪರಿಶೀಲನೆ ಬಳಿಕ ಲೋಕಾಯುಕ್ತರು ಹೇಳಿದ್ದೇನು?

ಬೆಂಗಳೂರು: ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಏಳು ಮಂದಿ ಸಾವನ್ನಪ್ಪಿದ ಪ್ರಕರಣವನ್ನು ಕರ್ನಾಟಕ ಲೋಕಾಯುಕ್ತ ಗಂಭೀರವಾಗಿ ಪರಿಗಣಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲು ನಿರ್ಧರಿಸಿದೆ.

ಗುರುವಾರ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, ಆಡಳಿತಾತ್ಮಕ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳ ಪರಿಶೀಲನೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಪೌಂಡ್ ಗೋಡೆಯ ಅಡಿಪಾಯ ಅತ್ಯಂತ ದುರ್ಬಲವಾಗಿರುವುದು ಪ್ರಾಥಮಿಕ ಪರಿಶೀಲನೆಯಲ್ಲಿ ಕಂಡುಬಂದಿದೆ ಎಂದು ಹೇಳಿದರು.

“ಪ್ರತಿ ವರ್ಷ ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತದೆ ಎಂಬುದು ಅಧಿಕಾರಿಗಳಿಗೆ ತಿಳಿದಿದ್ದರೂ, ಇಂತಹ ದುರ್ಬಲ ಗೋಡೆಯ ಪಕ್ಕದಲ್ಲೇ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಿರುವುದು ಸ್ಪಷ್ಟ ಬೇಜವಾಬ್ದಾರಿ. ಕೇವಲ ಒಂದು ಗಂಟೆ ಮಳೆಗೆ ಗೋಡೆ ಕುಸಿದಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟಿಸುತ್ತದೆ” ಎಂದು ಅವರು ಹೇಳಿದರು.

ಈ ಪ್ರಕರಣದಲ್ಲಿ ಕೆಳಹಂತದ ಸಿಬ್ಬಂದಿಯನ್ನು ಮಾತ್ರ ಹೊಣೆಗಾರರನ್ನಾಗಿ ಮಾಡದೇ, ಸಂಬಂಧಪಟ್ಟ ಉನ್ನತಾಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತರು ಸ್ಪಷ್ಟಪಡಿಸಿದರು.

ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಸಂಬಂಧಿತ ಹಿರಿಯ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಪರಿಗಣಿಸಿ ತನಿಖೆ ಮುಂದುವರಿಸಲಾಗುವುದು ಎಂದು ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರು ಮಳೆಗೆ ಹೊಸ ದಾಖಲೆ: 111 ಮಿ.ಮೀ ಧಾರಾಕಾರ ಮಳೆ, ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ನಗರದಲ್ಲಿ ಏಪ್ರಿಲ್ 29ರಂದು ಸುರಿದ ಆಲಿಕಲ್ಲು, ಗುಡುಗು ಮತ್ತು ಮಿಂಚಿನ ಸಹಿತ ಧಾರಾಕಾರ ಮಳೆ ಏಪ್ರಿಲ್ ತಿಂಗಳ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದೆ. ಸಂಜೆ ಒಂದೇ ಅವಧಿಯಲ್ಲಿ 111 ಮಿಲಿಮೀಟರ್ ಮಳೆಯಾಗಿದ್ದು, 2001ರ ದಾಖಲೆಗೂ ಸಮೀಪದ ಮಟ್ಟ ತಲುಪಿದೆ.

ನಗರದ ವಿವಿಧ ಭಾಗಗಳಲ್ಲಿ ಭಾರೀ ಮಳೆ ದಾಖಲಾಗಿದ್ದು, ಸಂಪಂಗಿರಾಮನಗರದಲ್ಲಿ 39 ಮಿ.ಮೀ, ಪುಲಕೇಶಿನಗರದಲ್ಲಿ 36.50 ಮಿ.ಮೀ, ಬೊಮ್ಮನಹಳ್ಳಿಯಲ್ಲಿ 31 ಮಿ.ಮೀ, ಕಾಟನ್ಪೇಟೆಯಲ್ಲಿ 29 ಮಿ.ಮೀ, ಎಚ್‌ಎಎಲ್ ವಿಮಾನ ನಿಲ್ದಾಣ ಪ್ರದೇಶದಲ್ಲಿ 25 ಮಿ.ಮೀ, ಬಿಟಿಎಂ ಲೇಔಟ್‌ನಲ್ಲಿ 22.50 ಮಿ.ಮೀ ಹಾಗೂ ಮಾರತ್ತಹಳ್ಳಿಯಲ್ಲಿ 18.50 ಮಿ.ಮೀ ಮಳೆಯಾಗಿದೆ.

ಹವಾಮಾನ ಇಲಾಖೆ ಮುಂದಿನ ಮೂರು ದಿನಗಳವರೆಗೆ ನಗರದಲ್ಲಿ ಮಳೆ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದ್ದು, ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿಯೂ ಬೀಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಗರಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಧಾರವಾಡ, ಗದಗ, ಬಳ್ಳಾರಿ, ವಿಜಯನಗರ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿಯೂ ಜಾರಿಯಾಗಿದೆ.

ಮಳೆಯಿಂದ ಸಂಭವಿಸಿದ ಅವಾಂತರಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಬೆಂಗಳೂರು ಮಹಾನಗರದಲ್ಲಿ ಮ್ಯಾನ್ಹೋಲ್ ಸ್ವಚ್ಛತೆ, ಅಪಾಯಕಾರಿ ಮರದ ಕೊಂಬೆಗಳ ತೆರವು ಮತ್ತು ರಸ್ತೆಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವಂತೆ ಸಿದ್ದರಾಮಯ್ಯ ಅವರು ಜಿಬಿಎ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅಂಡರ್‌ಪಾಸ್‌ಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು ಹಾಗೂ ಬೌರಿಂಗ್ ಆಸ್ಪತ್ರೆ ರೀತಿಯ ದುರ್ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಬೆಂಗಳೂರು ಮಳೆಯ ಅವಾಂತರಕ್ಕೆ ಮೃತರ ಸಂಖ್ಯೆ 10ಕ್ಕೆ ಏರಿಕೆ: ಗೋಡೆ ಕುಸಿತ, ವಿದ್ಯುತ್ ಶಾಕ್, ಮೇಲ್ಚಾವಣಿ ಬಿದ್ದು ಸರಣಿ ದುರಂತ

ಬೆಂಗಳೂರು: ನಗರದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಾಗೂ ಗಾಳಿಗೆ ಸಂಬಂಧಿಸಿದ ಅವಘಡಗಳಿಂದ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಗಾಳಿ-ಮಳೆಗೆ ಮನೆ ಮೇಲ್ಚಾವಣಿ ಕುಸಿದು ಮತ್ತೊಂದು ದುರಂತ ಸಂಭವಿಸಿದ್ದು, ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.

ಮೃತ ವ್ಯಕ್ತಿಯನ್ನು ಮಂಜುನಾಥ್ ಎಂದು ಗುರುತಿಸಲಾಗಿದೆ. ಮನೆಯ ಮೇಲ್ಚಾವಣಿಗೆ ಗಾಳಿಯಿಂದ ಹಾರದಂತೆ ಇಡಲಾಗಿದ್ದ ಕಲ್ಲುಗಳು ಗಾಳಿಯ ತೀವ್ರತೆಗೆ ಸರಿದು ಬಿದ್ದಿದ್ದು, ಮಂಜುನಾಥ್ ಮಲಗಿದ್ದ ಸ್ಥಳದ ಮೇಲೆ ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಇದರ ಜೊತೆಗೆ ನಗರದಲ್ಲಿ ಸರಣಿ ದುರಂತಗಳು ನಡೆದಿದ್ದು, ಬೌರಿಂಗ್ ಆಸ್ಪತ್ರೆಯ ಹಳೆಯ ಕಾಂಪೌಂಡ್ ಗೋಡೆ ಕುಸಿದು ಸಂಭವಿಸಿದ ಘಟನೆ ಅತ್ಯಂತ ಭೀಕರವಾಗಿದೆ. ಈ ಘಟನೆಯಲ್ಲಿ ಮಗು ಸೇರಿದಂತೆ ಒಟ್ಟು 7 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಮೊಹಮ್ಮದ್ ಅಬ್ದುಲ್ (52), ಫಯಾಜ್ ಅಹ್ಮದ್ (39), ಮುಸಾವಿರ್ ಬೇಗಂ (6), ಸ್ಮಿತಾ (47), ಲತಾ (57), ನಸೀಮುಲ್ಲಾ (19) ಮತ್ತು ಸಲಾವುದ್ದೀನ್ ಅನ್ಸಾರಿ (36) ಸೇರಿದ್ದಾರೆ.

ಮಳೆಯಿಂದ ರಕ್ಷಣೆಗಾಗಿ ಬೌರಿಂಗ್ ಆಸ್ಪತ್ರೆಯ ಹಳೆಯ ಕಾಂಪೌಂಡ್ ಗೋಡೆಯಡಿ ಆಶ್ರಯ ಪಡೆದಿದ್ದವರ ಮೇಲೆ ಗೋಡೆ ಕುಸಿದು ಬಿದ್ದು ಈ ದುರಂತ ಸಂಭವಿಸಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮತ್ತೊಂದು ಘಟನೆಯಲ್ಲಿ ಯಾರಬ್ ನಗರ ಪ್ರದೇಶದಲ್ಲಿ ವಿದ್ಯುತ್ ಶಾಕ್ ತಗುಲಿ ಸೈಯದ್ ಸೂಫಿಯಾನ್ ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಬೈಕ್ ಪಾರ್ಕ್ ಮಾಡುವ ವೇಳೆ ವಿದ್ಯುತ್ ತಂತಿ ಅಥವಾ ಕಂಬದಿಂದ ವಿದ್ಯುತ್ ಹರಿದು ಈ ದುರಂತ ಸಂಭವಿಸಿದೆ.

ಇದೇ ರೀತಿಯಲ್ಲಿ ಜೆ.ಪಿ. ನಗರ ವ್ಯಾಪ್ತಿಯ ಮಿನಿ ಫಾರೆಸ್ಟ್ 15ನೇ ಕ್ರಾಸ್ ಬಳಿ ನಡೆದ ಮತ್ತೊಂದು ಘಟನೆಯಲ್ಲಿ ರಘು ಎಂಬ 30-35 ವರ್ಷದ ವ್ಯಕ್ತಿ ವಿದ್ಯುತ್ ಕಂಬದ ಬಳಿ ಬಿದ್ದಿದ್ದ ತಂತಿಗೆ ತಗುಲಿ ಸಾವನ್ನಪ್ಪಿದ್ದಾರೆ.

ನಗರದಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಈ ಅವಘಡಗಳಿಂದ ನಾಗರಿಕರು ಆತಂಕಗೊಂಡಿದ್ದು, ಮಳೆಗಾಲದ ಸುರಕ್ಷತಾ ಕ್ರಮಗಳನ್ನು ತಕ್ಷಣ ಬಲಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳ ಕಟ್ಟಡಗಳ ಸುರಕ್ಷತೆ ಪರಿಶೀಲನೆಗೆ ಆದೇಶ: ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಸೂಚನೆ

ಬೆಂಗಳೂರು: ನಗರದ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಕಟ್ಟಡಗಳು ಹಾಗೂ ಕಾಂಪೌಂಡ್ ಗೋಡೆಗಳ ಸಾಮರ್ಥ್ಯ ಪರಿಶೀಲನೆ ನಡೆಸುವಂತೆ ಸಂಬಂಧಿತ ಇಲಾಖೆಗಳಿಗೆ ಸೂಚನೆ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಬೌರಿಂಗ್ ಆಸ್ಪತ್ರೆಯಲ್ಲಿ ಕಾಂಪೌಂಡ್ ಗೋಡೆ ಕುಸಿದು ಸಂಭವಿಸಿದ ಅವಘಡದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಗಾಯಾಳುಗಳ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳಿಗೆ ಈ ಮಾಹಿತಿ ನೀಡಿದರು.

ಭವಿಷ್ಯದಲ್ಲಿ ಇಂತಹ ಅವಘಡಗಳು ಮರುಕಳಿಸದಂತೆ ಬೌರಿಂಗ್, ವಿಕ್ಟೋರಿಯಾ, ಕೆ.ಸಿ. ಜನರಲ್ ಹಾಗೂ ಸಿ.ವಿ. ರಾಮನ್ ನಗರ ಆಸ್ಪತ್ರೆ ಸೇರಿದಂತೆ ನಗರದ ಎಲ್ಲ ಸರ್ಕಾರಿ ಆಸ್ಪತ್ರೆಗಳ ಹಳೆಯ ಕಟ್ಟಡಗಳು ಮತ್ತು ಕಾಂಪೌಂಡ್ ಗೋಡೆಗಳ ಸ್ಥಿತಿಗತಿಯನ್ನು ಪರಿಶೀಲಿಸಲು ಲೋಕೋಪಯೋಗಿ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಹೇಳಿದರು.

ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಪಾಲಿಕೆಯ ಮುಖ್ಯ ಎಂಜಿನಿಯರ್‌ಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

ಅವಘಡದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಜೊತೆಗೆ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಸರ್ಕಾರದಲ್ಲಿ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತವೆ ಎಂದು ಪುನರುಚ್ಚರಿಸಿದ ಅವರು, ಜನರ ಸುರಕ್ಷತೆಗೆ ಆದ್ಯತೆ ನೀಡಲಾಗುವುದು ಎಂದರು.

ಹೆಂಡತಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಗಂಡ..!

0

ಮೈಸೂರು: ಸಣ್ಣ ವಿಚಾರವಾಗಿ ಆರಂಭವಾದ ಕೌಟುಂಬಿಕ ಕಲಹ ಕೊಲೆಯಲ್ಲಿ ಅಂತ್ಯಗೊಂಡಿರುವ ದಾರುಣ ಘಟನೆ ಮೈಸೂರಿನ ಹಳೆ ಕೆಸರೆ ಗ್ರಾಮದಲ್ಲಿ ನಡೆದಿದೆ. ಪತ್ನಿ ಮನೆಗೆ ತಡವಾಗಿ ಬರುತ್ತಿದ್ದಾಳೆ ಎಂಬ ಅನುಮಾನದಿಂದ ಪತಿ ಆಕೆಯನ್ನು ಕ್ರೂರವಾಗಿ ಹತ್ಯೆಗೈದಿದ್ದಾನೆ.

ಮೃತಳನ್ನು ಪುಷ್ಪ (24) ಎಂದು ಗುರುತಿಸಲಾಗಿದೆ. ಆರೋಪಿ ಪತಿ ಮಹೇಶ್ ಪತ್ನಿಯನ್ನು ಕೊಡಲಿಯಿಂದ ಹೊಡೆದು ಬಳಿಕ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪುಷ್ಪ ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿರುವ ಖಾಸಗಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ಕಾರಣದಿಂದ ಅವರು ಪ್ರತಿದಿನ ರಾತ್ರಿ ಮನೆಗೆ ತಡವಾಗಿ ಬರುತ್ತಿದ್ದರು. ಇದೇ ವಿಚಾರಕ್ಕೆ ಪುಷ್ಪ ಮತ್ತು ಮಹೇಶ್ ನಡುವೆ ಪ್ರತಿದಿನ ಗಲಾಟೆ ನಡೆಯುತ್ತಿತ್ತು. ಹೆಂಡತಿ ಮನೆಗೆ ತಡವಾಗಿ ಬರುವ ವಿಚಾರಕ್ಕೆ ಮಹೇಶ್ ಆಕೆಯ ಮೇಲೆ ತೀವ್ರವಾಗಿ ಅನುಮಾನ ಪಡುತ್ತಿದ್ದ ಎನ್ನಲಾಗಿದೆ.

ನಿನ್ನೆ ತಡರಾತ್ರಿ ಕೆಲಸ ಮುಗಿಸಿ ಮನೆಗೆ ಬಂದ ಪುಷ್ಪ ಅವರೊಂದಿಗೆ ಇದೇ ವಿಷಯವಾಗಿ ಮತ್ತೆ ವಾಗ್ವಾದ ನಡೆದಿದೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡ ಮಹೇಶ್ ಮನೆಯಲ್ಲಿದ್ದ ಕೊಡಲಿಯಿಂದ ಪುಷ್ಪ ತಲೆಗೆ ಬಲವಾಗಿ ಹೊಡೆದಿದ್ದಾನೆ.

ಪುಷ್ಪ ಕೆಳಗೆ ಬಿದ್ದ ನಂತರ, ಅಷ್ಟಕ್ಕೇ ನಿಲ್ಲಿಸದ ಮಹೇಶ್ ದಿಂಬಿನಿಂದ ಆಕೆಯ ಮುಖವನ್ನು ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಘಟನೆ ಬಳಿಕ ಮಹೇಶ್ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ನರಸಿಂಹರಾಜ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

 

ಬೆಂಗಳೂರು ಮಳೆ ಅವಾಂತರಕ್ಕೆ 10 ಬಲಿ: ಇಂದೂ ಆಲಿಕಲ್ಲು ಸಹಿತ ಮಳೆಯ ಮುನ್ಸೂಚನೆ

ಬೆಂಗಳೂರು: ಬುಧವಾರ ನಗರಾದ್ಯಂತ ಸುರಿದ ಭಾರೀ ಆಲಿಕಲ್ಲು ಮಳೆಯಿಂದ 10 ಮಂದಿ ಸಾವನ್ನಪ್ಪಿದ್ದು, ಹಲವು ಅವಾಂತರಗಳು ಸಂಭವಿಸಿವೆ. ಈ ನಡುವೆಯೇ ಇಂದು ಕೂಡ ಬೆಂಗಳೂರಿನಲ್ಲಿ ಗುಡುಗು-ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆ ನೀಡಿರುವ ಮಾಹಿತಿಯಂತೆ, ಮೇ 1ರವರೆಗೆ ನಗರದಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಗುಡುಗು, ಮಿಂಚು ಹಾಗೂ ಬಿರುಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿರುವುದರಿಂದ ನಾಗರಿಕರು ಎಚ್ಚರಿಕೆಯಿಂದಿರಬೇಕು ಎಂದು ಸೂಚಿಸಲಾಗಿದೆ.

ಬೇಸಿಗೆಯ ಬಿಸಿಲಿಗೆ ಬೇಸತ್ತಿದ್ದ ಬೆಂಗಳೂರಿಗರಿಗೆ ಮಳೆ ತಂಪು ನೀಡಿದರೂ, ಅದರ ಅಬ್ಬರ ಭಾರೀ ಅನಾಹುತಗಳಿಗೆ ಕಾರಣವಾಯಿತು. ಬೌರಿಂಗ್ ಆಸ್ಪತ್ರೆಯಲ್ಲಿ ಗೋಡೆ ಕುಸಿದು ಏಳು ಮಂದಿ ಮೃತಪಟ್ಟಿದ್ದು, ಪ್ರತ್ಯೇಕ ಘಟನೆಗಳಲ್ಲಿ ಇನ್ನೂ ಮೂವರು ಜೀವ ಕಳೆದುಕೊಂಡಿದ್ದಾರೆ.

ಧಾರಾಕಾರ ಮಳೆಯಿಂದ ನಗರದಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, 170ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಜೊತೆಗೆ 408 ಮರಗಳ ಕೊಂಬೆಗಳು ಮುರಿದು ಬಿದ್ದಿದ್ದು, ಅನೇಕ ಕಡೆ ಟ್ರಾಫಿಕ್ ಜಾಮ್ ಉಂಟಾಯಿತು.

ನಗರದ ಐದು ಪಾಲಿಕೆ ವ್ಯಾಪ್ತಿಗಳಲ್ಲಿನ 68 ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನಕ್ಕೆ ತೀವ್ರ ತೊಂದರೆ ಉಂಟಾಗಿದೆ. ಹವಾಮಾನ ಇಲಾಖೆ ಪ್ರಕಾರ, ಕಳೆದ 25 ವರ್ಷಗಳ ಬಳಿಕ ಏಪ್ರಿಲ್ ತಿಂಗಳಲ್ಲಿ ಇಷ್ಟೊಂದು ಪ್ರಮಾಣದ ದಾಖಲೆ ಮಳೆಯಾಗಿದೆ.

ಲಡಾಖ್ʼನಲ್ಲಿ ಮುಂಜಾನೆ ಭೂ ಕಂಪನ: 4.1 ತೀವ್ರತೆ ದಾಖಲು

0

ಲೇಹ್: ಲಡಾಖ್‌ನ ಲೇಹ್ ಪ್ರದೇಶದಲ್ಲಿ ಗುರುವಾರ ಮುಂಜಾನೆ 4.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕೆಲಕಾಲ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಮುಂಜಾನೆ ಸುಮಾರು 3:54ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಭೂಕಂಪದ ಕೇಂದ್ರಬಿಂದು ಲೇಹ್‌ನಲ್ಲಿ 150 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ. ಇದು ಮಧ್ಯಮ ತೀವ್ರತೆಯ ಭೂಕಂಪವಾಗಿದ್ದು, ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ವರದಿಗಳು ಲಭ್ಯವಾಗಿಲ್ಲ.

ಭೂಕಂಪದ ಕಂಪನ ಅನುಭವವಾಗುತ್ತಿದ್ದಂತೆ ಮನೆಯೊಳಗಿದ್ದ ಹಲವರು ಆತಂಕದಿಂದ ಹೊರಗೆ ಓಡಿ ಬಂದಿದ್ದಾರೆ. ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ಸಹಜಗೊಂಡಿದ್ದು, ಜನರು ತಮ್ಮ ಮನೆಗಳಿಗೆ ಮರಳಿದ್ದಾರೆ.

ಇದೇ ವೇಳೆ ಅಫ್ಘಾನಿಸ್ಥಾನದಲ್ಲಿಯೂ 4.3 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿರುವುದಾಗಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

ಭೂಕಂಪದ ಪರಿಣಾಮ ಯಾವುದೇ ಗಂಭೀರ ಹಾನಿ ಉಂಟಾಗದಿದ್ದರೂ, ಮುಂಜಾನೆ ಸಂಭವಿಸಿದ ಈ ಕಂಪನ ಸ್ಥಳೀಯರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತು.

ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ: ನಾಮಪತ್ರ ಸಲ್ಲಿಕೆಗೂ ಮುನ್ನ ರಾಜಕೀಯ ಗದ್ದಲ!

ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಜಕೀಯ ತಾಪಮಾನ ತಾರಕಕ್ಕೇರಿದ್ದು, ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇನ್ನೇನು ಕೆಲವೇ ನಿಮಿಷಗಳಲ್ಲಿ ಆರಂಭಗೊಳ್ಳಲಿದೆ.

ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಭ್ಯರ್ಥಿಗಳು ಸಹಾಯಕ ಆಯುಕ್ತರು ಹಾಗೂ ಪುರಸಭೆ ಮುಖ್ಯಾಧಿಕಾರಿಗಳ ಮುಂದೆ ತಮ್ಮ ನಾಮಪತ್ರ ಸಲ್ಲಿಸುವ ಹುಮ್ಮಸ್ಸಿನಲ್ಲಿದ್ದಾರೆ. ಭಾರತೀಯ ಜನತಾ ಪಕ್ಷದಿಂದ ಚಿಂತರಪಳ್ಳಿ ಬಣಕಾರ ಸುರೇಶ್ ಒಮ್ಮತದ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದು, ಅವರ ನಾಮಪತ್ರ ಸಲ್ಲಿಕೆ ಖಚಿತವಾಗಿದೆ.

ಇನ್ನು ಕಾಂಗ್ರೆಸ್ ಪಾಳಯದಲ್ಲಿ ಗೊಂದಲ ಗರಿಗೆದರಿದ್ದು, ತೆಲಿಗಿ ನೆಲ್ಲು ಇಸ್ಮಾಯಿಲ್ ಸಾಬ್, ರೇಷ್ಮಾ ಸಿಖಂದರ್, ಅಜೀಜುಲ್ಲಾ, ಖಾಜಾ ಬನ್ನಿ ಹಾಗೂ ಗುಂಡ್ರು ಸರಸ್ವತಿ ಸೇರಿದಂತೆ ಐವರು ಆಕಾಂಕ್ಷಿಗಳು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ. ಕೊನೆಯ ಕ್ಷಣದಲ್ಲಿ ಇಬ್ಬರು ಪ್ರಬಲ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದ್ದು, ಅಂತಿಮ ಆಯ್ಕೆಯಲ್ಲಿ ಅಚ್ಚರಿಯ ತಿರುವು ಕಂಡು ಬರುವ ಸೂಚನೆಗಳು ಗೋಚರಿಸುತ್ತಿವೆ.

ಈ ನಡುವೆ ಸ್ಥಳೀಯ ಮಟ್ಟದಲ್ಲಿ ಹೈಕಮಾಂಡ್ ಆಗಿರುವ ಮಾಜಿ ಶಾಸಕ ಭೀಮಾನಾಯ್ಕ ಅವರ ನಿರ್ಧಾರವೇ ಕಾಂಗ್ರೆಸ್‌ನಲ್ಲಿ ಅಂತಿಮವಾಗಿದ್ದು, ಅವರ ಬೆಂಬಲ ಯಾರಿಗೆ ಸಿಗಲಿದೆ ಎಂಬ ಕುತೂಹಲ ತಾರಕಕ್ಕೇರಿದೆ.

ಈ ಚುನಾವಣೆಯಲ್ಲಿ ಹಣದ ಹರಿವು ಸಾಧ್ಯತೆ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಜೋರಾಗಿದ್ದು, ಈ ಕದನವು ಪ್ರತಿಷ್ಠಿತ ಹಾಗೂ ತೀವ್ರ ಪೈಪೋಟಿಯೊಂದಾಗಿ ರೂಪುಗೊಳ್ಳುವುದು ಖಚಿತವಾದಂತಾಗಿದೆ.