Home Blog Page 315

ಜೋಗ್ ಫಾಲ್ಸ್ ನಲ್ಲಿ ಬಂಡೆ ಕುಸಿತ; ಭಾರೀ ಶಬ್ದಕ್ಕೆ ಬೆಚ್ಚಿಬಿದ್ದ ಪ್ರವಾಸಿಗರು, ಸ್ಥಳೀಯರು

ಶಿವಮೊಗ್ಗ: ವಿಶ್ವ ವಿಖ್ಯಾತ ಜೋಗ್ ಫಾಲ್ಸ್‌ನಲ್ಲಿ ಬಂಡೆಯೊಂದು ಕುಸಿದು ಬಿದ್ದ ಪರಿಣಾಮ ಭಾರೀ ಶಬ್ದ ಉಂಟಾಗಿ ಪ್ರವಾಸಿಗರು ಹಾಗೂ ಸ್ಥಳೀಯರು ಬೆಚ್ಚಿಬಿದ್ದ ಘಟನೆ ನಡೆದಿದೆ.

ಜೋಗ್ ಜಲಪಾತದ ರಾಕೆಟ್ ಫಾಲ್ಸ್ ಭಾಗದಲ್ಲಿ ಬಂಡೆಯ ಒಂದು ಪದರ ಕಳಚಿ ಬಿದ್ದಿದ್ದು, ಸುಮಾರು 100 ಅಡಿ ಎತ್ತರದಿಂದ ಈ ಕುಸಿತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಬಂಡೆ ಕುಸಿದ ರಭಸಕ್ಕೆ ಭಾರೀ ಶಬ್ದ ಕೇಳಿಬಂದಿದ್ದು, ಸ್ಥಳದಲ್ಲಿದ್ದ ಪ್ರವಾಸಿಗರು ಕೆಲಕಾಲ ಆತಂಕಕ್ಕೊಳಗಾದರು. ಬಂಡೆ ಕೆಳಗೆ ಬೀಳುತ್ತಿದ್ದಂತೆ ಜಲಪಾತದ ಅಡಿಭಾಗದಲ್ಲಿದ್ದ ನೀರು ತೀವ್ರವಾಗಿ ಕಲಕಿದ ದೃಶ್ಯ ಕಂಡುಬಂದಿದೆ.

ಬೇಸಿಗೆ ಹಿನ್ನೆಲೆ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುವುದರಿಂದ ಬಂಡೆಗಳು ಬಿಸಿಲಿನ ತಾಪಕ್ಕೆ ಬಿಸಿಯಾಗಿ ಪದರ ಕಳಚಿರಬಹುದೆಂದು ಸ್ಥಳೀಯರು ಶಂಕಿಸಿದ್ದಾರೆ. ಈ ರೀತಿಯ ಘಟನೆಗಳು ಈ ಹಿಂದೆಯೂ ನಡೆದಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಜಲಪಾತದ ಸುತ್ತಮುತ್ತಲಿನ ಪ್ರದೇಶದಲ್ಲಿ ಮತ್ತಷ್ಟು ಬಂಡೆ ಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

 

ಪಶ್ಚಿಮ ಬಂಗಾಳ ಮತ ಎಣಿಕೆ ಸಿಬ್ಬಂದಿ ನೇಮಕ ವಿವಾದ: ಟಿಎಂಸಿ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ವಲಯ ಉದ್ಯಮಗಳ (ಪಿಎಸ್ಯು) ನೌಕರರನ್ನು ನೇಮಿಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ಈ ಸಂಬಂಧ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಟಿಎಂಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜಾಯ್ಮಲ್ಯ ಬಾಗ್ಚಿ ಅವರಿದ್ದ ಪೀಠ ನಡೆಸಿತು.

ವಿಚಾರಣೆ ವೇಳೆ ಟಿಎಂಸಿ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಚುನಾವಣಾ ಆಯೋಗ ಹೊರಡಿಸಿದ ಸುತ್ತೋಲೆ ರಾಜ್ಯ ಸರ್ಕಾರಿ ನೌಕರರನ್ನು ಉದ್ದೇಶಪೂರ್ವಕವಾಗಿ ಮತ ಎಣಿಕೆ ಪ್ರಕ್ರಿಯೆಯಿಂದ ಹೊರಗಿಡುವ ಉದ್ದೇಶ ಹೊಂದಿದೆ ಎಂದು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ, ಚುನಾವಣಾ ಆಯೋಗದ ನಿಯಮಗಳು ಸ್ಪಷ್ಟವಾಗಿವೆ ಎಂದು ತಿಳಿಸಿದರು. ಮತ ಎಣಿಕೆ ಮೇಲ್ವಿಚಾರಕರು ಹಾಗೂ ಸಹಾಯಕ ಸಿಬ್ಬಂದಿಯನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರಿಂದ ನೇಮಿಸಬಹುದು ಎಂದು ನಿಯಮದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹೀಗಾಗಿ ಕೇಂದ್ರ ನೌಕರರನ್ನು ನೇಮಿಸುವುದು ಯಾವುದೇ ರೀತಿಯ ನಿಯಮ ಉಲ್ಲಂಘನೆ ಅಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.

ಮತ ಎಣಿಕೆ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಏಜೆಂಟರು ಸ್ಥಳದಲ್ಲೇ ಹಾಜರಿರಲಿರುವುದರಿಂದ, ಮೇಲ್ವಿಚಾರಕರು ಕೇಂದ್ರದವರೇ ಅಥವಾ ರಾಜ್ಯದವರೇ ಎಂಬುದರಿಂದ ವಿಶೇಷ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಚುನಾವಣಾ ಆಯೋಗಕ್ಕೆ ನೇಮಕಾತಿ ಸಂಬಂಧ ಸಂಪೂರ್ಣ ಅಧಿಕಾರವಿದ್ದು, ಈ ಹಂತದಲ್ಲಿ ಹೊಸ ಆದೇಶ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಸುಪ್ರೀಂಕೋರ್ಟ್, ಟಿಎಂಸಿ ಅರ್ಜಿಯನ್ನು ವಜಾಗೊಳಿಸಿತು.

ಇದೇ ವೇಳೆ, ಏಪ್ರಿಲ್ 13ರಂದು ಹೊರಡಿಸಿದ್ದ ಸುತ್ತೋಲೆಯನ್ನು ಸಂಪೂರ್ಣವಾಗಿ ಅನುಸರಿಸುವುದಾಗಿ ಚುನಾವಣಾ ಆಯೋಗ ನ್ಯಾಯಾಲಯಕ್ಕೆ ಭರವಸೆ ನೀಡಿದೆ. ಜೊತೆಗೆ ಮತ ಎಣಿಕೆ ಪ್ರಕ್ರಿಯೆಯ ವಿಡಿಯೊ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು 45 ದಿನಗಳವರೆಗೆ ಸಂರಕ್ಷಿಸುವುದಾಗಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಹೆಚ್ಚುವರಿ ನಿರ್ದೇಶನ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ರಸ್ತೆ ದಾಟುವಾಗಲೇ ದುರಂತ: ತಲೆ ಸುತ್ತಿ ಬಿದ್ದ ವಿದ್ಯಾರ್ಥಿ ಮೇಲೆ ಬಸ್ ಹರಿದು ಸಾವು!

ಬೆಂಗಳೂರು: ರಸ್ತೆ ದಾಟಲು ಕಾಯುತ್ತಿದ್ದ ವೇಳೆ ತಲೆಸುತ್ತಿ ಬಿದ್ದ ವಿದ್ಯಾರ್ಥಿಯೊಬ್ಬ ಖಾಸಗಿ ಬಸ್‌ಗೆ ಸಿಲುಕಿ ಮೃತಪಟ್ಟಿರುವ ದುರ್ಘಟನೆ ಬಾಗಲೂರು-ಹೆಣ್ಣೂರು ರಸ್ತೆಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ವರುಣ್ (16) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ಈ ಘಟನೆ ಸಂಭವಿಸಿದೆ.

ತಂದೆಯ ಆರೋಗ್ಯ ಸರಿಯಿಲ್ಲದ ಹಿನ್ನೆಲೆ ಔಷಧಿ ತರಲು ವರುಣ್ ಮನೆಯಿಂದ ಹೊರಟಿದ್ದನು. ಬಾಗಲೂರು-ಹೆಣ್ಣೂರು ರಸ್ತೆಯಲ್ಲಿ ರಸ್ತೆ ದಾಟಲು ಕಾಯುತ್ತಿದ್ದ ವೇಳೆ ತಲೆಸುತ್ತಿ ಏಕಾಏಕಿ ಕೆಳಗೆ ಬಿದ್ದಿದ್ದಾನೆ. ಇದೇ ಸಂದರ್ಭದಲ್ಲಿ ಅಲ್ಲಿಂದ ಸಾಗುತ್ತಿದ್ದ ಖಾಸಗಿ ಬಸ್‌ನ ಅಡಿಗೆ ಸಿಲುಕಿದ್ದು, ಬಸ್ ತಲೆಯ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಈ ಭೀಕರ ಅಪಘಾತದ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪರಿಶೀಲನೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಸಂಬಂಧ ಹೆಣ್ಣೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಧರ್ಮಸ್ಥಳ ಕುರಿತು ಅವಹೇಳನ ಆರೋಪ: ಗಿರೀಶ್ ಮಟ್ಟಣ್ಣನವರ್ ವಿರುದ್ಧ ಎಫ್‌ಐಆರ್

ಬೆಂಗಳೂರು: ಧರ್ಮಸ್ಥಳ ಕ್ಷೇತ್ರದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಕಾವೇರಿ ಎಂಬವರು ನೀಡಿದ ದೂರು ಆಧಾರವಾಗಿ ಬೆಂಗಳೂರಿನ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ದೂರಿನ ಪ್ರಕಾರ, ಗಿರೀಶ್ ಮಟ್ಟಣ್ಣನವರ್ ಅವರು ಯೂಟ್ಯೂಬ್ ಚಾನೆಲ್ ಮೂಲಕ ಧರ್ಮಸ್ಥಳ ಹಾಗೂ ಕ್ಷೇತ್ರದಲ್ಲಿ ಮದುವೆಯಾದ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹೇಳಿಕೆಗಳಿಂದ ಧಾರ್ಮಿಕ ಭಾವನೆಗಳಿಗೆ ಹಾಗೂ ಮಹಿಳೆಯರ ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಾಹಿತಿಯಂತೆ, 2023ರ ಡಿಸೆಂಬರ್ 4ರಂದು ಉಜಿರೆಯಲ್ಲಿ ನಡೆದ ‘ಜನಾಂದೋಲ’ ಕಾರ್ಯಕ್ರಮದಲ್ಲಿ ಗಿರೀಶ್ ನೀಡಿದ ಭಾಷಣದ ವಿಡಿಯೋವನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗಿತ್ತು.

ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಕುಟುಂಬದಲ್ಲಿ ಸಂತಸ: ಗಮನ ಸೆಳೆದ ತೇಜಸ್ವಿ ಸೂರ್ಯ ಪೋಸ್ಟ್

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಹೆಗ್ಡೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಡಿಸಿಎಂ ಕುಟುಂಬದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ಈ ವಿಚಾರ ತಿಳಿದ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್, ಮೊಮ್ಮಗಳನ್ನು ಮುದ್ದಾಡಿ ಮಗಳ ಆರೋಗ್ಯ ವಿಚಾರಿಸಿದರು.

https://twitter.com/Tejasvi_Surya/status/2050256338643779783https://twitter.com/Tejasvi_Surya/status/2050256338643779783

ವಿಶೇಷವೆಂದರೆ ಕಾರ್ಮಿಕ ದಿನಾಚರಣೆ, ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ ಅವರ ಜನ್ಮದಿನ ಹಾಗೂ ಶುಭ್ರ ಪೂರ್ಣಿಮೆಯ ದಿನವೇ ಡಿ.ಕೆ. ಶಿವಕುಮಾರ್ ತಾತನಾಗಿರುವುದು ಕುಟುಂಬದ ಸಂತಸವನ್ನು ಮತ್ತಷ್ಟು ಹೆಚ್ಚಿಸಿದೆ. ಮಾಧ್ಯಮ ಪ್ರತಿನಿಧಿಗಳು ಈ ಕುರಿತು ಪ್ರಶ್ನಿಸಿದಾಗ ಡಿಸಿಎಂ ಮುಗುಳ್ನಗೆಯೊಂದಿಗೆ ಸಂತಸ ವ್ಯಕ್ತಪಡಿಸಿದರು.

ಈ ಮಧ್ಯೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ.

ಸಾಮಾನ್ಯವಾಗಿ ರಾಜಕೀಯ ವಿಚಾರಗಳಲ್ಲಿ ಡಿ.ಕೆ. ಶಿವಕುಮಾರ್ ಮತ್ತು ತೇಜಸ್ವಿ ಸೂರ್ಯ ನಡುವಿನ ವಾಗ್ವಾದಗಳು ಚರ್ಚೆಗೆ ಗ್ರಾಸವಾಗುತ್ತವೆ. ಆದರೆ ಅಭಿವೃದ್ಧಿ ವಿಚಾರಗಳಲ್ಲಿ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಹಲವು ಉದಾಹರಣೆಗಳಿವೆ.

ನಿನ್ನೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮಗಳಲ್ಲಿ ಇಬ್ಬರೂ ಭಾಗವಹಿಸಿದ್ದರು. ಇದೇ ವೇಳೆ ತಾನು ಶೀಘ್ರದಲ್ಲೇ ತಾತನಾಗಲಿದ್ದೇನೆ ಎಂಬ ಸಂತಸದ ಸುದ್ದಿಯನ್ನು ಡಿ.ಕೆ. ಶಿವಕುಮಾರ್ ತಮ್ಮೊಂದಿಗೆ ಹಂಚಿಕೊಂಡಿದ್ದರು ಎಂದು ತೇಜಸ್ವಿ ಸೂರ್ಯ ಎಕ್ಸ್ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಪತ್ನಿ ಚಿನ್ನಾಭರಣ ಸಮೇತ ಪರಾರಿ: ಇಬ್ಬರು ಮಕ್ಕಳನ್ನು ಕೊಂದು ಪತಿ ಆತ್ಮಹತ್ಯೆ!

ತುಮಕೂರು: ಕುಟುಂಬ ಕಲಹದ ಹಿನ್ನೆಲೆ ಮನನೊಂದು ವ್ಯಕ್ತಿಯೊಬ್ಬ ತನ್ನಿಬ್ಬರು ಪುಟ್ಟ ಮಕ್ಕಳನ್ನು ಹತ್ಯೆಗೈದು ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ನಡೆದಿದೆ.

ಶುಕ್ರವಾರ ರಾತ್ರಿ ಈ ದಾರುಣ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಅಕ್ಕಪಕ್ಕದ ನಿವಾಸಿಗಳು ಗಮನಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತನನ್ನು ಆಲ್ಕೆರೆ ಗ್ರಾಮದ ಮಲ್ಲೇಶ್ವರಸ್ವಾಮಿ ದೇವಾಲಯದ ಅರ್ಚಕ ಹಾಗೂ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಶಿವಣ್ಣ (40) ಎಂದು ಗುರುತಿಸಲಾಗಿದೆ. ಸಾವಿಗೂ ಮುನ್ನ ಆತ ತನ್ನ ಮಕ್ಕಳಾದ ಜೀವನ್ (10) ಮತ್ತು ಪ್ರಾಣೇಶ್ (5) ಅವರನ್ನು ಉಸಿರುಗಟ್ಟಿಸಿ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಶಿವಣ್ಣನ ಪತ್ನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು ಎನ್ನಲಾಗಿದ್ದು, ಇದೇ ವಿಚಾರವಾಗಿ ದಂಪತಿಗಳ ನಡುವೆ ಆಗಾಗ ಕಲಹ ನಡೆಯುತ್ತಿತ್ತು. ಸುಮಾರು ಒಂದು ವಾರದ ಹಿಂದೆ ಆಕೆ ಗಂಡ ಮತ್ತು ಮಕ್ಕಳನ್ನು ಬಿಟ್ಟು ಮನೆ ತೊರೆದಿದ್ದಳು. ಈ ಕುರಿತು ಶಿವಣ್ಣ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪೊಲೀಸರ ಮಧ್ಯಸ್ಥಿಕೆಯಿಂದ ಆಕೆ ಮನೆಗೆ ಮರಳಿದ್ದರೂ, ಮರುದಿನ ಶಿವಣ್ಣ ಕೆಲಸಕ್ಕೆ ತೆರಳಿದ್ದ ಸಮಯದಲ್ಲಿ ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣದೊಂದಿಗೆ ಮತ್ತೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ತಿಳಿದುಬಂದಿದೆ.

ಈ ಬೆಳವಣಿಗೆಯಿಂದ ತೀವ್ರ ಮನನೊಂದ ಶಿವಣ್ಣ, ಜೀವನದ ಬಗ್ಗೆ ಜಿಗುಪ್ಸೆಗೊಂಡು ಮಕ್ಕಳನ್ನು ಹತ್ಯೆ ಮಾಡಿ ಬಳಿಕ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಘಟನಾ ಸ್ಥಳಕ್ಕೆ ಕುಣಿಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳೊಂದಿಗೆ ತಂದೆಯೂ ಸಾವನ್ನಪ್ಪಿರುವ ಘಟನೆ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಡಾಲಿ ಧನಂಜಯ್ ಮನೆಗೆ ಗಂಡು ಮಗು ಆಗಮನ ಸಂತೋಷದಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ಕುಟುಂಬ

ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಮತ್ತು ಡಾ. ಧನ್ಯತಾ ದಂಪತಿಗೆ ಗಂಡು ಮಗು ಜನಿಸಿದ್ದು, ಕುಟುಂಬದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಈ ಸಂತಸದ ಸುದ್ದಿಯನ್ನು ಧನಂಜಯ್ ಅವರು ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಇತ್ತೀಚೆಗಷ್ಟೇ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯ ಬಗ್ಗೆ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದರು. ಆ ಸಂದರ್ಭದಲ್ಲಿ ಅವರು ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡು “Our universe is expanding” ಎಂಬ ಕ್ಯಾಪ್ಷನ್‌ನೊಂದಿಗೆ ಪೋಸ್ಟ್ ಮಾಡಿದ್ದರು.

2025ರ ಫೆಬ್ರವರಿ 16ರಂದು ಮೈಸೂರಿನಲ್ಲಿ ಡಾಲಿ ಧನಂಜಯ್ ಅವರು ಡಾ. ಧನ್ಯತಾ ಅವರನ್ನು ವಿವಾಹವಾಗಿದ್ದರು. ಮದುವೆ ಹಾಗೂ ಆರತಕ್ಷತೆ ಸಮಾರಂಭಗಳಲ್ಲಿ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದ ಪ್ರಮುಖರು ಭಾಗವಹಿಸಿ ದಂಪತಿಗೆ ಶುಭಹಾರೈಸಿದ್ದರು.

ಇದೀಗ ಗಂಡು ಮಗುವಿನ ಆಗಮನದೊಂದಿಗೆ ಧನಂಜಯ್ ಕುಟುಂಬದಲ್ಲಿ ಸಂಭ್ರಮ ಹೆಚ್ಚಿದ್ದು, ಅಭಿಮಾನಿಗಳು ಹಾಗೂ ಚಿತ್ರರಂಗದವರು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆ ಸುರಿಸುತ್ತಿದ್ದಾರೆ.

42°C ಹಿಟ್‌ವೇವ್ ಎಚ್ಚರಿಕೆ ನಡುವೆಯೂ ಇಂದು ಬೆಂಗಳೂರಿನಲ್ಲಿ ಮಳೆಯ ಅಬ್ಬರ

ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಮೂರು ದಿನಗಳಿಂದ ಆಲಿಕಲ್ಲು ಸಹಿತ ಮಳೆಯ ಅಬ್ಬರ ಮುಂದುವರಿದಿದ್ದು, ಇಂದು ಕೂಡ ರಾಜ್ಯದ ಹಲವೆಡೆ ಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಒಂದೆಡೆ ಮಳೆ, ಇನ್ನೊಂದೆಡೆ ಸುಡುತ್ತಿರುವ ಬಿಸಿಲು – ರಾಜ್ಯದಲ್ಲಿ ಹವಾಮಾನ ಸಂಪೂರ್ಣ ಅಸ್ಥಿರವಾಗಿದೆ.

ಕಲಬುರಗಿ ಮತ್ತು ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತಾಪಮಾನ 42 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಲಿದ್ದು, ಮುಂದಿನ ಮೂರು ದಿನಗಳವರೆಗೆ ಇದೇ ರೀತಿಯ ತೀವ್ರ ಬಿಸಿಲು ಮುಂದುವರಿಯಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ 30–40 ಕಿ.ಮೀ ವೇಗದ ಗಾಳಿಯೊಂದಿಗೆ ಸಾಧಾರಣ ಮಳೆಯ ಸಾಧ್ಯತೆ ಇದೆ.

ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಜೊತೆಗೆ ಕೆಲವೆಡೆ ಹೀಟ್‌ವೇವ್ ಅಲರ್ಟ್ ಕೂಡ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಗ್ರಾಮಾಂತರ, ಮೈಸೂರು, ಮಂಡ್ಯ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಜೋರು ಮಳೆಯ ಮುನ್ಸೂಚನೆ ಇದೆ.

ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಅಲರ್ಟ್ ನಡುವೆ ಅನಾಹುತಗಳೂ ದಾಖಲಾಗಿವೆ. ಜೆ.ಪಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊಂದೆಡೆ ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತದಿಂದ ಭೀಕರ ದುರಂತ ಸಂಭವಿಸಿದ್ದು, 7 ಮಂದಿ ಮೃತಪಟ್ಟಿರುವುದು ಆತಂಕ ಹೆಚ್ಚಿಸಿದೆ.

ಒಟ್ಟಿನಲ್ಲಿ ಹವಾಮಾನ ಅಸ್ಥಿರತೆಯಿಂದ ರಾಜ್ಯದಲ್ಲಿ ಮಳೆ–ಬಿಸಿಲಿನ ಜೊತೆಗೆ ಜೀವಹಾನಿಯ ಶಾಕ್ ಘಟನೆಗಳು ಜನರನ್ನು ಕಂಗಾಲು ಮಾಡಿವೆ.

ಡಿ. ಸುಧಾಕರ್​​ ಆರೋಗ್ಯದ ಬಗ್ಗೆ ಬಿಗ್​​ ಅಪ್ಡೇಟ್ ನೀಡಿದ ಸಹೋದರ

ಬೆಂಗಳೂರು/ಚಿತ್ರದುರ್ಗ: ಶ್ವಾಸಕೋಶದ ಗಂಭೀರ ಸೋಂಕಿನಿಂದ ಜೀವ-ಮರಣ ಹೋರಾಟ ನಡೆಸುತ್ತಿದ್ದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ಅವರ ಆರೋಗ್ಯದಲ್ಲಿ ಮಹತ್ವದ ಚೇತರಿಕೆ ಕಂಡುಬಂದಿದೆ. ಕೆಲ ದಿನಗಳಿಂದ ಆತಂಕದಲ್ಲಿ ಕಾಯುತ್ತಿದ್ದ ಅಭಿಮಾನಿಗಳಿಗೆ ಇದೀಗ ದೊಡ್ಡ ನೆಮ್ಮದಿ ಸಿಕ್ಕಿದೆ.

ಸಚಿವರ ಸಹೋದರ ಡಿ.ಕುಮಾರ್ ಮಾಹಿತಿ ನೀಡಿದ್ದು, “ಸುಧಾಕರ್ ಅವರಿಗೆ ಪ್ರಜ್ಞೆ ಬಂದಿದೆ. ಅವರು ಕಣ್ಣು ತೆರೆದು ಪ್ರತಿಕ್ರಿಯೆ ನೀಡಿದ್ದಾರೆ. ನೂರಕ್ಕೆ ನೂರರಷ್ಟು ಗುಣಮುಖರಾಗುತ್ತಾರೆ ಎಂಬ ವಿಶ್ವಾಸವಿದೆ. ಶೀಘ್ರದಲ್ಲೇ ಹಿರಿಯೂರಿಗೆ ಮರಳಿ ಜನಸೇವೆ ಮುಂದುವರಿಸುತ್ತಾರೆ” ಎಂದು ತಿಳಿಸಿದ್ದಾರೆ.

ಮೊಣಕಾಲಿನ ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಸಚಿವರಿಗೆ ಬಳಿಕ ಶ್ವಾಸಕೋಶದಲ್ಲಿ ಗಂಭೀರ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ವೈದ್ಯರು ನೀಡಿದ ಮಾಹಿತಿಯಂತೆ, ಅವರು ವೆಂಟಿಲೇಟರ್ ಮತ್ತು ಎಕ್ಮೋ ಸಹಾಯದಿಂದ ಉಸಿರಾಟ ನಡೆಸುತ್ತಿದ್ದರು.

ಕಿಮ್ಸ್ ಆಸ್ಪತ್ರೆಯ ತಜ್ಞ ವೈದ್ಯ ಡಾ. ಮಂಜುನಾಥ್ ಹೇಳಿದ್ದಂತೆ, ಸೋಂಕು ನಿಯಂತ್ರಣಕ್ಕೆ ತರಲು ಚಿಕಿತ್ಸೆ ಮುಂದುವರಿಸಲಾಗಿದ್ದು, ಅಗತ್ಯವಿದ್ದರೆ ಶ್ವಾಸಕೋಶ ಕಸಿ ಮಾಡುವ ಸಾಧ್ಯತೆಯೂ ಪರಿಶೀಲಿಸಲಾಗುತ್ತಿತ್ತು. ಈ ಹೇಳಿಕೆಗಳಿಂದಾಗಿ ಅಭಿಮಾನಿಗಳು ಹಾಗೂ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗಿತ್ತು.

ಸಚಿವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಹೊರಬಿದ್ದ ಬೆನ್ನಲ್ಲೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೇರಿದಂತೆ ಅನೇಕ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.

ಇದೀಗ ಆರೋಗ್ಯದಲ್ಲಿ ಕಂಡುಬಂದ ಸುಧಾರಣೆ ರಾಜಕೀಯ ವಲಯ ಹಾಗೂ ಅಭಿಮಾನಿಗಳಲ್ಲಿ ಆಶಾಕಿರಣ ಮೂಡಿಸಿದ್ದು, ಸಚಿವರು ಶೀಘ್ರ ಗುಣಮುಖರಾಗಲಿ ಎಂಬ ಪ್ರಾರ್ಥನೆಗಳು ಮುಂದುವರಿದಿವೆ.

ಶಾಸಕ ನೇಮಿರಾಜ್ ನಾಯ್ಕ ವಿರುದ್ಧ 30% ಕಮಿಷನ್ ಆರೋಪ

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪುರಸಭೆಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ರೇಷ್ಮಾ ಸಿಕಂದರ್ ಅವರಿಗೆ ಅಭಿನಂದನೆ ಸಲ್ಲಿಸಿದ ಬಳಿಕ, ಹಾಲಿ ಶಾಸಕ ನೇಮಿರಾಜ್ ನಾಯ್ಕ ವಿರುದ್ಧ ಗಂಭೀರ ಆರೋಪಗಳನ್ನು ಮಾಜಿ ಶಾಸಕ ಭೀಮಾನಾಯ್ಕ ಮಾಡಿದ್ದಾರೆ.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಜನರ ಸಹಾಯದಿಂದ ಅಧಿಕಾರಕ್ಕೆ ಬಂದ ಬಳಿಕ ಜನರನ್ನೇ ಮರೆತು, ಅಭಿವೃದ್ಧಿ ಕಾಮಗಾರಿಗಳಲ್ಲಿ 30% ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

2016ಕ್ಕೂ ಮೊದಲು ಚಿಂತರಪಳ್ಳಿ ಮತ್ತು ಹಗರಿಬೊಮ್ಮನಹಳ್ಳಿ ಗ್ರಾಮಪಂಚಾಯಿತಿಗಳು ದೇಶದಲ್ಲೇ ಅತಿ ದೊಡ್ಡ ಪಂಚಾಯಿತಿಗಳಾಗಿದ್ದು (82 ಸದಸ್ಯರು), ಅವುಗಳನ್ನು ತಮ್ಮ ಅವಧಿಯಲ್ಲಿ ರಾಜಕೀಯ ಇಚ್ಛಾಶಕ್ತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ ಎಂದರು. ಆ ನಂತರದಿಂದ ಹಗರಿಬೊಮ್ಮನಹಳ್ಳಿ ಪುರಸಭೆಯಲ್ಲಿ ಜೋಗಿ ಹನುಮಂತಪ್ಪರಿಂದ ರೇಷ್ಮಾ ಸಿಕಂದರ್‌ವರೆಗೆ ಐದು ಕಾಂಗ್ರೆಸ್ ಅಧ್ಯಕ್ಷರು ಆಯ್ಕೆಯಾಗಿದ್ದಾರೆ ಎಂದು ಹೇಳಿದರು.

ಹೆಬಿಟೇಟ್ ಕಂಪನಿಗೆ ಸುಮಾರು ₹200 ಕೋಟಿ ಅನುದಾನ ನೀಡಲಾಗಿದ್ದು, ಅದರಲ್ಲಿ ₹100 ಕೋಟಿ ಕಮಿಷನ್ ಪಡೆದಿರುವ ಆರೋಪವಿದೆ ಎಂದು ಹೇಳಿದರು. ಕ್ಷೇತ್ರಕ್ಕೆ ಬಂದ ₹25 ಕೋಟಿ ಅನುದಾನದಲ್ಲಿ ಬಹುಪಾಲು ಕೊಟ್ಟೂರು ಭಾಗಕ್ಕೆ ಮೀಸಲಿಟ್ಟಿದ್ದಾರೆ ಎಂದು ದೂರಿದರು. ವಿವಿಧ ಯೋಜನೆಗಳಿಂದ ಬಂದ ಸುಮಾರು ₹500 ಕೋಟಿ ಅನುದಾನ ಸರಿಯಾಗಿ ಬಳಕೆಯಾಗಿಲ್ಲ ಎಂದೂ ಆರೋಪಿಸಿದರು.

ಜಾಗಟಗೆರೆ–ರಾಮಪುರ ರಸ್ತೆ ಮೂರು ತಿಂಗಳಲ್ಲಿ ಹಾಳಾಗಿರುವುದು, ಮನೆ ಇಲ್ಲದ ಪ್ರದೇಶಗಳಲ್ಲಿ ಸಿಸಿ ರಸ್ತೆ ನಿರ್ಮಿಸಿರುವುದು ಸೇರಿದಂತೆ ಹಲವು ಉದಾಹರಣೆಗಳನ್ನು ಅವರು ನೀಡಿದರು. ಮಾಲವಿ ಜಲಾಶಯದ ಗೇಟ್ ಅಳವಡಿಕೆ ಕಾಮಗಾರಿಯಲ್ಲಿ ಕೂಡ 30% ಕಮಿಷನ್ ಬೇಡಿಕೆಯ ಕಾರಣ ಕೆಲಸ ವಿಳಂಬವಾಗಿದೆ ಎಂದು ಹೇಳಿದರು. ಈ ಎಲ್ಲ ವಿಷಯಗಳನ್ನು ಪರಿಶೀಲಿಸಿ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಸಾಹಿರಾಬಾನು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಕ್ಕಿ ತೋಟೇಶ, ಕಾಂಗ್ರೆಸ್ ಮುಖಂಡರಾದ ಬಿ. ಚಂದ್ರಪ್ಪ, ನಿಕಟಪೂರ್ವ ಪುರಸಭೆ ಅಧ್ಯಕ್ಷ ಎಂ. ಮರಿರಾಮಪ್ಪ, ಹಾಲ್ದಾಳ್ ವಿಜಯಕುಮಾರ್, ಹಿರಿಯ ಕಾಂಗ್ರೆಸ್ಸಿಗ ಹೆಗ್ಡಾಳ್, ಡಿಶ್ ಮಂಜುನಾಥ್, ರಾಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿಗೋಣಿಬಸಪ್ಪ, ಪುರಸಭಾ ಸದಸ್ಯ ಪವಾಡಿ ಹನುಮಂತಪ್ಪ, ಸೆರೆಗಾರ ಹುಚ್ಚಪ್ಪ, ಬಾಲಕೃಷ್ಣ ಬಾಬು, ಕರ್ಕೀಹಳ್ಳಿ ಚಂದ್ರಪ್ಪ, ಕೆಜಿಎನ್ ಅಲ್ಲಭಕ್ಷಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗುರುಬಸವರಾಜ ಸೊನ್ನದ, ಆರ್.ಎಸ್.ಎಸ್.ಎನ್. ಅಧ್ಯಕ್ಷ ದಾದಮ್ಮನವರ ಬಸವರಾಜ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಆರ್. ವೆಂಕಟೇಶ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

“ಅಭಿವೃದ್ಧಿ ಕಾಮಗಾರಿಗಳಲ್ಲಿ ಮುಂಗಡವಾಗಿ 30% ಕಮಿಷನ್ ಪಡೆದು ಕೆಲಸ ಮಾಡಲಾಗುತ್ತಿದೆ”

ಮಾಜಿ ಶಾಸಕ ಭೀಮಾನಾಯ್ಕ