Home Blog Page 319

ಹಾಬಲಕಟ್ಟಿ‌ ಜಾತ್ರಾ ಮಹೋತ್ಸವಕ್ಕೆ ಸನ್ನಿ ಲಿಯೋನ್ ಅಭಿಮಾನಿಗಳಿಂದ “ವೆಲ್‌ಕಮ್ ಫ್ಲೆಕ್ಸ್”

0

-ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹಾಬಲಕಟ್ಟಿ ಗ್ರಾಮದಲ್ಲಿ ಸನ್ನಿ ಲಿಯೋನ್ ಅಭಿಮಾನಿ ಬಳಗ.

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಜಾತ್ರಾ ಮಹೋತ್ಸವ ಎಂದ ಮೇಲೆ ಭಕ್ತರು, ಗಣ್ಯರು ತಮ್ಮೂರ ಜಾತ್ರೆಗೆ ಸ್ವಾಗತ ಕೋರುವ ಫ್ಲೆಕ್ಸ್ ಹಾಕೋದು ಕಾಮನ್. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಾಬಲಕಟ್ಡಿಯ ಶ್ರೀ ಶರಣಬಸವೇಶ್ವರ ಜಾತ್ರಾ ನಿಮಿತ್ತ ಗ್ರಾಮದಲ್ಲಿ ಹಲವು ಬ್ಯಾನರ್‌ಗಳನ್ನು ಹಾಕಲಾಗಿದೆ. ಗಮನ ಸೆಳೆದ ಬ್ಯಾನರ್ ಎಂದರೆ ಸನ್ನಿ ಲಿಯೊನ್ ಅಭಿಮಾನಿಗಳು ಸ್ವಾಗತ ಕೋರಿದ ಫ್ಲೆಕ್ಸ್!!

ಇಂದು ಹಾಬಲಕಟ್ಟಿ ಗ್ರಾಮದಲ್ಲಿ ಜಾತ್ರೆಯ ನಿಮಿತ್ತ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿತ್ತು.ಜಾತ್ರೆ ಹಾಗೂ ವಿವಾಹಕ್ಕೆ ಬರುವ ಜನರನ್ನು ಸನ್ನಿ ಲಿಯೋನ ಹೆಸರಲ್ಲಿ ಬ್ಯಾನರ್ ಹಾಕಿ ಸ್ವಾಗತ ಕೊರಲಾಗಿದೆ. ನಾಡಿನಲ್ಲಿ ಸನ್ನಿಲಿಯೋನ್ ಅಭಿಮಾನಿಗಳಿದ್ದಾರೆ ಎನ್ನುವುದಕ್ಕೆ ಹಾಬಲಿಕಟ್ಟಿ ಗ್ರಾಮದ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ.

ನವೀನ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಬಣಕಾರ್

ವಿಜಯಸಾಕ್ಷಿ ಸುದ್ದಿ, ಹಿರೇಕೆರೂರ:

ರಷ್ಯಾ ಶೆಲ್ ದಾಳಿಯಿಂದ ಉಕ್ರೇನ್ ನಲ್ಲಿ ಮೃತ ಪಟ್ಟ ವೈದ್ಯಕೀಯ ವಿದ್ಯಾರ್ಥಿ ಡಾ. ನವೀನ್ ಗ್ಯಾನಗೌಡ್ರ ಮೃತ ದೇಹ ಇಂದು ಮುಂಜಾನೆ ಅವರ ಸ್ವಗೃಹ ಹಾವೇರಿ ಜಿಲ್ಲೆ ರಾಣೇಬೆನ್ನೂರ್ ತಾಲ್ಲೂಕಿನ ಚಳಗೇರೆ ಗ್ರಾಮಕ್ಕೆ ಆಗಮಿಸಿದ್ದು, ಮಾಜಿ ಶಾಸಕ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು. ಬಿ. ಬಣಕಾರ್ ನವೀನ್ ಪಾರ್ಥಿವ ಶರೀರ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಎಂಎಚ್‌ಪಿಎಸ್ ಕಟ್ಟಡ ಉಳಿಸಿ ಇತಿಹಾಸ ಪರಂಪರೆ ಸಂರಕ್ಷಿಸಿ

0

ಹಳೆಯ ವಿದ್ಯಾರ್ಥಿಗಳ ಒತ್ತಾಯ

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ಇಲ್ಲಿನ ನಗರಸಭೆ ಬಳಿಯ ಸ್ಟೇಷನ್ ರಸ್ತೆಯಲ್ಲಿರುವ ನಗರದ ಪ್ರತಿಷ್ಠಿತ ಸರ್ಕಾರಿ ಎಂಎಚ್‌ಪಿಎಸ್ (ಇಂದಿನ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ) ಕಟ್ಟಡಕ್ಕೆ ಸುಮಾರು 150 ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಹೈದರಾಬಾದ್ ನವಾಬರ ಆಳ್ವಿಕೆಯ ಕಾಲದ ಪ್ರಮುಖ ಆಡಳಿತಾಧಿಕಾರಿಯ ಬಂಗಲೆಯಾಗಿದ್ದ ಈ ಐತಿಹಾಸಿಕ ಕಟ್ಟಡ ನೆಲಸಮಗೊಳಿಸಿ ಗುರುಭವನ ನಿರ್ಮಿಸಲು ಉದ್ದೇಶಿಸಿರುವ ಕ್ರಮ ಕೈಬಿಡಬೇಕು.ಆಕರ್ಷಕ ಕಟ್ಟಡವನ್ನು ಮೂಲಸ್ವರೂಪದಲ್ಲಿಯೇ ಉಳಿಸಿಕೊಂಡು ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲಿಡಬೇಕು ಅಥವಾ ಪಾರಂಪರಿಕ ಕಟ್ಟಡವಾಗಿ ಸಂರಕ್ಷಿಸಬೇಕು ಎಂದು ಶಾಲೆಯ ಹಳೆಯ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ರವಿವಾರ ಸಂಜೆ ಶಾಲಾ ಆವರಣದಲ್ಲಿ ಸಭೆ ಸೇರಿದ ಹಳೆಯ ವಿದ್ಯಾರ್ಥಿಗಳು ಶಾಲೆ ಹಾಗೂ ಈ ಆವರಣದೊಂದಿಗಿನ ಒಡನಾಟವನ್ನು ಮೆಲುಕು ಹಾಕುವುದರ ಜೊತೆಗೆ ಐತಿಹಾಸಿಕ ಹಿನ್ನೆಲೆಯುಳ್ಳ ಶಾಲೆಯ ಮುಖ್ಯ ಕಟ್ಟಡವನ್ನು ಮೂಲ ಸ್ವರೂಪದಲ್ಲಿ ಉಳಿಸಿಕೊಂಡು ಈ ಭಾಗದ ಚರಿತ್ರೆಯ, ಪರಂಪರೆಯ ದ್ಯೋತಕವನ್ನಾಗಿ ಮುಂದಿನ ಪೀಳಿಗೆಗೆ ಪರಿಚಯಿಸಲು ಕಾಪಾಡಿಕೊಳ್ಳಬೇಕು.

ಸ್ಟೇಷನ್ ರಸ್ತೆಯ ಎಂಎಚ್‌ಪಿಎಸ್ ಶಾಲೆ ಸುಮಾರು 7 ದಶಕಗಳ ಇತಿಹಾಸ ಹೊಂದಿದೆ.ಇಂದಿನ ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆಯಿಲ್ಲದ ಗುಣಮಟ್ಟದ ಶಿಕ್ಷಣ ನೀಡಿದೆ.ಕ್ರೀಡೆ,ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಮಹತ್ವದ ಸಾಧನೆ ಮಾಡಿದ ಸರ್ಕಾರಿ ಶಾಲೆ ಇದಾಗಿದೆ. ಸಾರ್ವಜನಿಕ ವಲಯದ ಶಿಕ್ಷಣ ಸಂಸ್ಥೆಗೆ ಮಾದರಿಯಾಗಿ ಈ ಶಾಲೆಯನ್ನು ಪುನರ್ ರೂಪಿಸಿ ,ಅಭಿವೃದ್ಧಿ ಪಡಿಸುವ ಸಂಕಲ್ಪ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಆಗಬೇಕಾಗಿದೆ.

ಹೈದ್ರಾಬಾದ್ ನವಾಬರ ಆಳ್ವಿಕೆಯ ಕಾಲದಲ್ಲಿ ಜಹಗೀರು ಜಿಲ್ಲೆಯಾಗಿದ್ದ ಕೊಪ್ಪಳ ಐತಿಹಾಸಿಕ ಹಿನ್ನೆಲೆ ಯ ಸ್ಮಾರಕವೂ ಕೂಡ ಇದಾಗಿದೆ.
ಮುಖ್ಯ ಕಟ್ಟಡದ ಎರಡೂ ಬದಿಗೆ ಗೋಲಾಕಾರದ ಕೊಠಡಿಗಳು, ಹೊರಗಿನ ಪರಿಸರ ವೀಕ್ಷಿಸಬಹುದಾದ ಜಾಲರಿ ಮಾದರಿಯ ಕಾಂಕ್ರೀಟ್ ರಚನೆಯ ಕಾರಿಡಾರ್, ವಿಶಾಲ ಸೆಂಟ್ರಲ್ ಹಾಲ್, ಐದಾರು ಕೊಠಡಿಗಳನ್ನು ಹೊಂದಿದೆ.ಮೊದಲ ನೋಟಕ್ಕೆ ತನ್ನತ್ತ ಆಕರ್ಷಿಸುವ ಚುಂಬಕ ಶಕ್ತಿ ಹೊಂದಿರುವ ಈ ಭವ್ಯ ಕಟ್ಟಡವನ್ನು ಉಳಿಸಿಕೊಳ್ಳುವುದು ಶಾಲೆಯ ಹಳೆಯ ವಿದ್ಯಾರ್ಥಿಗಳಷ್ಟೇ ಅಲ್ಲ ಕೊಪ್ಪಳದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯೂ ಆಗಿದೆ.ಈ ಕುರಿತು ಶಿಕ್ಷಣ ಸಚಿವರು,ಸ್ಥಳೀಯ ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸಭೆ ನಿರ್ಣಯಿಸಿತು.

ಪತ್ರಕರ್ತ ಬಸವರಾಜ ಕರುಗಲ್ ಮಾತನಾಡಿ, ಕೊಪ್ಪಳದಲ್ಲಿದ್ದ ಐತಿಹಾಸಿಕ ಕಮಾನುಗಳನ್ನು ಈಗಾಗಲೇ ನೆಲಸಮಗೊಳಿಸಿ ಊರಿನ ಅಸ್ಮಿತೆಯನ್ನು ಕಳೆಯಲಾಗಿದೆ. ಈಗ ನಾವು ಕಲಿತ ಶಾಲೆ ಹಾಗೂ ಶಾಲೆಯ ನೆನಪುಗಳನ್ನು ನೆಲಸಮಗೊಳಿಸುವ ಕಾರ್ಯಕ್ಕೆ ಕೈ ಹಾಕಿರುವುದು ಖಂಡನೀಯ. ನವಾಬರ ಕಾಲದ ಕಟ್ಟಡಗಳು ನಮ್ಮ ಹೆಮ್ಮೆಯ ಸ್ಮಾರಕಗಳನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಈ ಶಾಲೆಯ ಹಳೆಯ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಕೊಪ್ಪಳದ ಸಮಸ್ತ ನಾಗರಿಕರಿಗೂ ಇದೆ ಎಂದರು.

ಮಂಜುನಾಥ ಗೊಂಡಬಾಳ ಮಾತನಾಡಿ, ಜಿಲ್ಲಾ ಗುರುಭವನ ಬೇರೆ ಕಡೆ ಇದಕ್ಕಿಂತ ವಿಶಾಲವಾದ ಸ್ಥಳದಲ್ಲಿ ನಿರ್ಮಿಸಲಿ, ಐತಿಹಾಸಿಕ ಕಟ್ಟಡ ಧ್ವಂಸ ಮಾಡುವುದು ಬೇಡ ಈ ಕುರಿತು ಶಾಸಕರು,ಚುನಾಯಿತ ಪ್ರತಿನಿಧಿಗಳ ಗಮನ ಸೆಳೆಯೋಣ ಎಂದರು.

ಪ್ರಾಸ್ತಾವಿಕ ಮಾತನಾಡಿದ ಡಿ.ಗುರುರಾಜ , ಪ್ರಾಚೀನ ಸ್ಮಾರಕಗಳು ಹಾಗೂ 100 ವರ್ಷಗಳಿಗಿಂತ ಹಳೆಯದಾದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಕಾನೂನಿನಲ್ಲಿ ಅವಕಾಶಗಳಿವೆ ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದರು.

ನಾಗರಾಜನಾಯಕ ಡೊಳ್ಳಿನ ಮಾತನಾಡಿ, ನವಾಬರ ಆಳ್ವಿಕೆಯ ಕಾಲದಲ್ಲಿ ಜಿಲ್ಲಾಧಿಕಾರಿ/ಉಪವಿಭಾಗಾಧಿಕಾರಿ ಬಂಗಲೆಯಾಗಿದ್ದ ಈ ನಿವಾಸವನ್ನು ಅಂದಿನ ಕೇಂದ್ರ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸೂಚನೆ ಮೇರೆಗೆ ಭಾರತದ ಸೇನೆ ವಶಪಡಿಸಿಕೊಂಡು ಹೈದ್ರಾಬಾದ್ ವಿಮೋಚನೆಗೆ ಪ್ರಮುಖ ಹೆಜ್ಜೆ ಇರಿಸಿತ್ತು.ಇಂತಹ ಮಹತ್ವದ ಘಟನೆಗೆ ಸಾಕ್ಷಿಯಾದ ಈ ಕಟ್ಟಡ ಉಳಿಸಿಕೊಂಡರೆ,ಮುಂದಿನ ಪೀಳಿಗೆಗೆ ಇತಿಹಾಸ ಪರಿಚಯಿಸಲು ಸಹಕಾರಿಯಾಗುತ್ತದೆ ಎಂದರು.

ಪ್ರಶಾಂತ ಮಾದಿನೂರ, ಗಿರೀಶ ಪಾನಘಂಟಿ, ಮಂಜುನಾಥ ಡೊಳ್ಳಿನ, ರಾಜೀವ್ ಭದ್ರಾಪೂರ, ಸಂತೋಷ ಹಾಲಳ್ಳಿ, ಅಮರೇಶ ಮುರಲಿ, ಬಸವೇಶ ಕೋರಿ,ಕೃಷ್ಣ ಚಿತ್ರಗಾರ, ವಿನೋದ ಚೆನ್ನಿನಾಯ್ಕರ್, ಸಜ್ಜಾದ ಹುಸೇನ್, ಮಂಜುನಾಥ ಸೊಂಡ್ಲಿ, ಅಮರೇಶ ಕೋರಿ, ಶ್ರೀನಿವಾಸ, ಶ್ರೀಕಾಂತ್ ಭದ್ರಾಪೂರ ಮತ್ತಿತರ ಹಳೆಯ ವಿದ್ಯಾರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಲಕ್ಷ ಲಕ್ಷ ರೂ.ಗಳ ಅಂದರ್-ಬಾಹರ್! ಸರಕಾರಿ ನೌಕರ ಸೇರಿ 17ಜನರ ಬಂಧನ, ಮುಂಡರಗಿಯಲ್ಲಿ ಫಂಡ್ ರೇಡ್

ಫಂಡ್ ಎಬಿ ಅಡ್ಡೆ ಮೇಲೆ ಎಸ್ಪಿ ಶಿವಪ್ರಕಾಶ್ ನೇತೃತ್ವದಲ್ಲಿ ಪೊಲೀಸರ ದಾಳಿ; 14 ಲಕ್ಷ ರೂ. ಜಪ್ತಿ, ಗದಗನ ಜೂಜುಕೋರರು ಪರಾರಿ?

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಲಕ್ಷ ಲಕ್ಷ ಹಣ ಪಟಕ್ಕಿಟ್ಟು ಅಂದರ್ ಬಾಹರ್ ಆಡುತ್ತಿದ್ದ ಓರ್ವ ಸರ್ಕಾರಿ ನೌಕರ ಸೇರಿದಂತೆ 17 ಜನರು ಅಂದರ್ ಆಗಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಿದರಹಳ್ಳಿ ಬಳಿ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿರುವ ಪೊಲೀಸರು ವಿವಿಧ ಜಿಲ್ಲೆಯ ಜೂಜುಕೋರರ ಹೆಡೆಮುರಿ ಕಟ್ಟಿದ್ದು, ಈ ಬಗ್ಗೆ ಗದಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ವಿಜಯ ಬಿರಾದಾರ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ಪಂಢ್ ಅಡ್ಡೆಯ ಮೇಲೆ ದಾಳಿ ನಡೆಸಿದ ಖಾಕಿಪಡೆ 17 ಆರೋಪಿಗಳಿಂದ ಒಟ್ಟು 14.83 ಲಕ್ಷ ರೂ.ಗೂ ಅಧಿಕ ಹಣ, 04 ಕಾರು ಹಾಗೂ 18 ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ.

ಎಫ್‌ಡಿಎ ನೌಕರ, ಗುತ್ತಿಗೆ ನೌಕರ, ಚಾಲಕ, ವ್ಯಾಪಾರ, ಕೂಲಿ, ಹಮಾಲಿ, ಶೇತ್ಕಿ ಉದ್ಯೋಗ ಮಾಡುತ್ತಿದ್ದವರು ಇಸ್ಪೀಟು ಎಲೆ ಸಾಹಾಯದಿಂದ ಅಂದರ್ ಬಾಹರ್ ಆಟದ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ವಿಚಿತ್ರವೆಂದರೆ ಗದಗ ಮೂಲದ 15ಕ್ಕೂ ಹೆಚ್ಚು ಆರೋಪಿಗಳು ಪರಾರಿಯಾಗಿದ್ದು, ಬೇರೆ ಜಿಲ್ಲೆಗಳಾದ ಚಿತ್ರದುರ್ಗ, ಹಾವೇರಿ, ದಾವಣಗೆರೆ, ವಿಜಯನಗರ, ಬಳ್ಳಾರಿಯ ಆರೋಪಿಗಳು ಅಂದರ್ ಆಗಿರುವುದು ಅಚ್ಚರಿಗೆ ಕಾರಣವಾಗಿದೆ‌. ಸಿಕ್ಕ ಆರೋಪಿಗಳ ಮೇಲೆ ಕೆ.ಪಿ ಆ್ಯಕ್ಟ್ 87 ಕಲಂನಡಿ ಸ್ವಂತ ಲಾಭಕ್ಕಾಗಿ ಜೂಜಾಟ ಕೇಸ್ ದಾಖಲಿಸಲಾಗಿದೆ.

ದಾಳಿ ಮಾಡಿದ ಪೊಲೀಸ್ ತಂಡ

ಗದಗ ಜಿಲ್ಲೆಯಾದ್ಯಂತ ಬಹಳ ದಿನಗಳಿಂದ ಆಯಾ ಕಟ್ಟಿನ ಜಾಗಗಳಲ್ಲಿ ಫಂಡ್ ಗೇಮ್ ನಡೆಯುತ್ತಲಿದೆ. ಇದು ಪೊಲೀಸರಿಗೂ ಗೊತ್ತಿದೆ. ಆದರೆ, ಎಲ್ಲವೂ ಗೊತ್ತಿದ್ದರೂ ಗೊತ್ತಿಲ್ಲದಂತೆ ಜಾಣ ಮೌನವಹಿಸಿದ್ದ ಪೊಲೀಸ್ ಅಧಿಕಾರಿಗಳು ದಿಢೀರ್ ಅಂತಾ ಫಂಡ್ ಅಡ್ಡೆಯ ಮೇಲೆ ದಾಳಿ ನಡೆಸಿದ್ದು ಯಾಕೆ? ಎಂಬ ಮಾತುಗಳು ಕೇಳಿ ಬರುತ್ತಿವೆ. ಕಳೆದ ವರ್ಷ ಮೇನಲ್ಲಿ‌ ಫಂಡ್ ಅಡ್ಡೆಯ ಮೇಲೆ ನಡೆದ ದಾಳಿಯ ಬಳಿಕ ಅತ್ತಕಡೆಗೆ ಗಮನ ಹರಸದ ಪೊಲೀಸರು ಪುನಃ ಘರ್ಜಸಿದ್ದಾರೆ.

ಫಂಡ್ ಗೇಮ್ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ವಿಜಯ ಬಿರಾದಾರ, ಇನ್ಸ್‌ಪೆಕ್ಟರ್ ಮಹಾಂತೇಶ್ ಟಿ. ಹಾಗೂ 10ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.

ಓರ್ವ ಸರ್ಕಾರಿ ನೌಕರ ಬಲೆಗೆ

ಫಂಡ್ ಗೇಮ್ ವೇಳೆ ಸಿಕ್ಕಿಬಿದ್ದ 17 ಜನರ ಪೈಕಿ ಓರ್ವ ಸರ್ಕಾರಿ ನೌಕರ ಹಾಗೂ ಹೊರಗುತ್ತಿಗೆ ನೌಕರ ಇದ್ದಾರೆ. ಹೂವಿನಹಡಗಲಿಯ ಮಾಗಳ ಹೈಸ್ಕೂಲ್‌ನಲ್ಲಿ ಎಫ್‌ಡಿಎ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬಿ.ಆರ್.ವೆಂಕಟೇಶ ನಾಯಕ ಹಾಗೂ ಚಿತ್ರದುರ್ಗದ ಸರ್ವೇ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರನಾಗಿರುವ ಕಾಶಿವಿಶ್ವನಾಥ ಶಿವಣ್ಣ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.

ಜೂಜಾಟದ ವೇಳೆ ಸಿಕ್ಕಿಬಿದ್ದವರು:

1) ಎಂ.ತಿಪ್ಪೇಸ್ವಾಮಿ ಮಲ್ಲೇಶಪ್ಪ (42)
ಕೊಟ್ಟೂರ, ಡ್ರೈವರ್. 2) ಕೊಟ್ರಯ್ಯ ಮರಿಕೊಟ್ರಯ್ಯ (51) ಕೊಟ್ಟೂರ, ವ್ಯಾಪಾರಸ್ಥ. 3) ಕೊಮಾರೆಪ್ಪ ಸಣ್ಣದುರಗಪ್ಪ ಬಣಕಾರ (50) ಕೊಟ್ಟೂರ, ಕೂಲಿ.
4) ಶಿವು ಬುಳ್ಳಮ್ಮ (19) ಕೊಟ್ಟೂರ, ಹಮಾಲಿ.
5) ಬಿ.ಆರ್.ವೆಂಕಟೇಶ ನಾಯಕ (42) ಹೂವಿನಹಡಗಲಿ. ಎಫ್‌ಡಿಎ ಮಾಗಳ ಹೈಸ್ಕೂಲ್.
6) ಚಂದ್ರಶೇಖರ ಸಿದ್ದಪ್ಪ (28) ಚಿತ್ರದುರ್ಗ, ಡ್ರೈವರ್.
7) ಲೋಕೇಶ ಮಲ್ಲೇಶಪ್ಪ ಪತ್ರಿ (32) ಹರಪನಹಳ್ಳಿ, ಶೇತ್ಕಿ. 8) ಅಶೋಕ ಮಲ್ಲಪ್ಪ ಮಡಿವಾಳರ (37) ತಂಗೋಡ, ಹೋಟೆಲ್ ಕೆಲಸ. 9) ಮಂಜುನಾಥ ರುದ್ರಮುನಿಯಪ್ಪ ಮುದ್ದಣ್ಣನವರ (28) ಕೂಡ್ಲಗಿ, ಕಾರು ಚಾಲಕ. 10) ನಾಗೇಶ ರೇವಣ್ಣ ಕೆ. (35),
ಕೂಡ್ಲಗಿ, ಶೇತ್ಕಿ. 11) ಎಸ್.ಕೊಟ್ರೇಶ ಶರಣಪ್ಪ (45) ವಿಜಯನಗರ, ಗುತ್ತಿಗೆದಾರ. 12) ಫಕ್ಕಿರಪ್ಪ ಬಸವರಾಜ ಕೂಡ್ಲಗಿ (31) ಹರಪನಹಳ್ಳಿ, ಡ್ರೈವರ್. 13) ರಾಜಶೇಖರ ಹನಮಂತಪ್ಪ ಬಾರಕೇರ (30) ದಾವಣಗೇರಿ, ಡ್ರೈವರ್. 14) ಎ.ಆನಂದ ಅಜಣ್ಣ (33) ಚಳಕೇರಿ, ಡ್ರೈವರ್. 15) ಎಂ‌.ರವಿಂದ್ರನಾಥ ಹನಮಂತ ನಾಯಕ (45) ದಾವಣಗೇರಿ, ಶೇತ್ಕಿ. 16) ಕಾಶಿವಿಶ್ವನಾಥ ಶಿವಣ್ಣ (24) ಚಿರ್ತದುರ್ಗ, ಗುತ್ತಿಗೆ ನೌಕರ ಸರ್ವೇ ಇಲಾಖೆ. 17) ದುರಗಪ್ಪ ಚಂದ್ರಪ್ಪ ಎಂ. (38) ವಿಜಯನಗರ, ಶೇತ್ಕಿ.

ಶಾಲಾ ಮಕ್ಕಳ ಮೇಲೆ ಹೆಜ್ಜೇನು ದಾಳಿ; ಹಲವು ಮಕ್ಕಳು ಅಸ್ವಸ್ಥ

ವಿಜಯಸಾಕ್ಷಿ ಸುದ್ದಿ, ಗದಗ:

ಹೆಜ್ಜೇನು ಗೂಡಿಗೆ ಬೆಂಕಿಯ ಹೊಗೆ ತಾಕಿದ ಪರಿಣಾಮ ಶಾಲಾ ಮಕ್ಕಳನ್ನು ಅಟ್ಟಾಡಿಸಿಕೊಂಡು ಕಚ್ಚಿದ ಮನಕಲಕುವ ಘಟನೆ ಬೆಟಗೇರಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಬೆಟಗೇರಿ ಲೊಯೊಲಾ ಸ್ಕೂಲ್ ನಲ್ಲಿ ಪರೀಕ್ಷೆ ಮುಗಿಸಿದ ನಂತರ ವಿದ್ಯಾರ್ಥಿಗಳು ಮನೆ ಕಡೆ ಹೊರಟಿದ್ದಾರೆ. ಆದರೆ ಕೆಲ ಮಕ್ಕಳು ಆಟೋ ಬರುವುದು ತಡವಾಗಿದ್ದರಿಂದ ಕಿತ್ತೂರ ಚನ್ನಮ್ಮ ಉದ್ಯಾನವನದಲ್ಲಿ ಆಟ ಆಡುತ್ತಿದ್ದರು. ಈ ಸಂದರ್ಭದಲ್ಲಿ ಪಾರ್ಕ್ ಬಳಿ ಇರುವ ಮನೆಯೊಂದರ ಮುಂದೆ ವೃದ್ಧರೊಬ್ಬರೊಬ್ಬರು ಕಸಕ್ಕೆ ಬೆಂಕಿ ಹಚ್ಚಿದ್ದರಿಂದ ಹೊಗೆ ಜೋರಾಗಿದೆ ಎನ್ನಲಾಗಿದೆ. ಇದರಿಂದಾಗಿ ವಾಟರ್ ಟ್ಯಾಂಕ್ ಮೇಲೆ ಇದ್ದ ಹೆಜ್ಜೇನು ಮಕ್ಕಳ ಮೇಲೆ ದಾಳಿ ನಡೆಸಿವೆ.

ಇದರಿಂದ ಭಯಭಿತಗೊಂಡ ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಆದರೂ ಬಿಡದ ಜೇನುಹುಳಗಳು ಕಚ್ಚಿ ಗಾಯಗೊಳಿಸಿವೆ. ನೋವು, ಸಂಕಟ ತಾಳಲಾರದೆ ಸುಮಾರು 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಕೆಲ ಜನರ ಮೇಲೂ ಹೆಜ್ಜೇನು ದಾಳಿ ಮಾಡಿವೆ.

ಹೆಜ್ಜೇನು ದಾಳಿಯಿಂದ ಅಸ್ವಸ್ಥಗೊಂಡ ಮಕ್ಕಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಇನ್ನೂ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮರಕ್ಕೆ ಕಾರು ಡಿಕ್ಕಿ; ಮೂವರು ಯುವಕರು ಸ್ಥಳದಲ್ಲೇ ಸಾವು, ಇನ್ನೊಬ್ಬ ಗಂಭೀರ

ವಿಜಯಸಾಕ್ಷಿ ಸುದ್ದಿ, ರೋಣ:

ವೇಗವಾಗಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹುಣಸೆ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಗಂಭೀರ ಗಾಯಗೊಂಡಿರುವ ಘಟನೆ ನರೇಗಲ್ ರಸ್ತೆಯ ಕೆಎಸ್‌ಆರ್‌ಟಿಸಿ ಬಸ್ ಘಟಕದ ಬಳಿ ಶನಿವಾರ ನಡೆದಿದೆ.

ರೋಣ ಪಟ್ಟಣದಿಂದ ಗದಗ ಕಡೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಘಟನೆ ಕಣ್ಣಾರೇ ಕಂಡ ಲಾರಿ ಚಾಲಕ, ಕಾರಿನಲ್ಲಿ ಸಿಲುಕಿದ್ದ ಮೃತ ಮೂವರನ್ನು ಹಾಗೂ ಓರ್ವ ಗಾಯಾಳನ್ನು ಹೊರಗೆ ತೆಗೆದಿದ್ದಾನೆ.

ಗದಗ ನಗರದ ಥೀಸ್ ಬಿಲ್ಡಿಂಗ್ ‌ನಿವಾಸಿ, ಟಾಂಗಾಕೂಟ ಬಳಿಯ ವಿಜಯ ಜನರಲ್ ಸ್ಟೋರ್ಸ್‌ ಮಾಲೀಕನ ಪುತ್ರ ದರ್ಶನ್ ರಾಜಪುರೋಹಿತ್, ತಾಜನಗರದ ಶೌಕತ್ ಅಲಿಖಾನ್, ಇನ್ನೊಬ್ಬ ಮೈಫೂಝ್ ಆಲಂ ಮೃತ ದುರ್ದೈವಿಗಳಾಗಿದ್ದು, ಮುಲ್ಲಾ ಎಂಬಾತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ತಿಳಿದ ರೋಣ ಸಿಪಿಐ ಸುಧೀರಕುಮಾರ್ ಬೆಂಕಿ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗದಗನಲ್ಲಿ ‘ದಿ ಕಾಶ್ಮೀರ್ ಫೈಲ್ಸ್ ‘ ಉಚಿತ ವೀಕ್ಷಣೆಗೆ ಅವಕಾಶ: ಸಚಿವ ಸಿ.ಸಿ.ಪಾಟೀಲ

ವಿಜಯಸಾಕ್ಷಿ ಸುದ್ದಿ, ಗದಗ:

‘ದೇಶದಾದ್ಯಂತ ಭಾರೀ ಸಂಚಲನ ಮೂಡಿಸಿರುವ ‘ದಿ ಕಾಶ್ಮೀರ ಫೈಲ್ಸ್’ ಹಿಂದಿ ಚಲನಚಿತ್ರವನ್ನು ಗದಗನಲ್ಲಿ ಮಾ.20,21 ಮತ್ತು‌ 23ರಂದು ಉಚಿತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ‌’ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ‌ ನಡೆದ ಸಿದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗದಗ-ಬೆಟಗೇರಿ ನಗರದ ಶಾಂತಿ ಚಿತ್ರಮಂದಿರಲ್ಲಿ ತೆರೆಕಂಡಿರುವ ದಿ‌ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಮಾ.20, 21 ಮತ್ತು 23ರಂದು ಗದಗ ಜನತೆ ಉಚಿತ ವೀಕ್ಷಿಸಲು ಅವಕಾಶ ನೀಡಲಾಗಿದೆ. 12 ರಿಂದ 3 ಗಂಟೆ, 3 ರಿಂದ 6 ಗಂಟೆಯವರೆಗಿನ ಎರಡು ಶೋಗಳು ಉಚಿತವಿರಲಿವೆ. ಮೂರು ದಿನದ ಆರು ಶೋಗಳಿಗೆ ಸಂದಾಯವಾಗುವ ಹಣವನ್ನು ಚಿತ್ರಮಂದಿರದ ಮಾಲೀಕರಿಗೆ ಪಾವತಿಸಲಾಗಿದೆ ಎಂದು ತಿಳಿಸಿದರು.

‘ಜಮ್ಮು ಕಾಶ್ಮೀರದಲ್ಲಿ ಅಂದು ಪಂಡಿತರ ಮೇಲಿನ ದೌರ್ಜನ್ಯ, ಮಹಿಳೆಯರನ್ನು ವಿಚಿತ್ರವಾಗಿ‌ ನಡೆಸಿಕೊಂಡ ರೀತಿಯನ್ನು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ತೆರೆದಿಟ್ಟಿದೆ. ಸಿನಿಮಾ ವೀಕ್ಷಿಸಿವಾಗ ಗೊತ್ತಿಲ್ಲದೆ ಕಣ್ಣಂಚಲ್ಲಿ ನೀರು ತುಂಬಿ ಬರುತ್ತವೆ’ ಎಂದು ಸಿ.ಸಿ.ಪಾಟೀಲ ಹೇಳಿದರು.

ಈ ಸಂದರ್ಭದಲ್ಲಿ ವಿಪ ಸದಸ್ಯ ಎಸ್.ವ್ಹಿ.ಸಂಕನೂರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ‌ ಬಾಕಳೆ, ಬಿಜೆಪಿ ಮುಖಂಡರಾದ ಅನಿಲ್ ಮೆಣಸಿನಕಾಯಿ, ಸಂಗಮೇಶ ದುಂದೂರ, ರಾಜು ಕುರುಡಗಿ, ಎಂ.ಎಸ್.ಕರೀಗೌಡ್ರ ಸೇರಿದಂತೆ ಅನೇಕರು ಇದ್ದರು.

ಪೊಲೀಸರ ನಿದ್ದೆಗೆಡಸಿದ್ದ ಕಳ್ಳರ ಬಂಧನ; ಅಪಾರ ಪ್ರಮಾಣದ ಚಿನ್ನಾಭರಣ ವಶ

ವಿಜಯಸಾಕ್ಷಿ ಸುದ್ದಿ, ಹಿರೇಕೆರೂರ:

ಕಳೆದ ಒಂದು ತಿಂಗಳಿಂದ ಹಿರೇಕೆರೂರ ಹಾಗೂ ರಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿ, ಹಿರೇಕೆರೂರ ಪೊಲೀಸರ ನಿದ್ದೆಗೆಡಿಸಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ರಫೀಕ್ ನಜೀರಸಾಬ್ ಕಚವಿ, ಮುಬಾರಕ್ ಖಾದರಸಾಬ್ ಇಂಗಳಗೊಂದಿ ಹಾಗೂ ಸಾಧಿಕ್ ಸೈಯದ್ ಅಹ್ಮದ್ ರಟ್ಟಿಹಳ್ಳಿ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 185 ಗ್ರಾಂ ಚಿನ್ನ, 555ಗ್ರಾಂ ಬೆಳ್ಳಿ, 90 ಸಾವಿರ ನಗದು, ಕೃತ್ಯಗಳಿಗೆ ಬಳಿಸಿದ ಮೂರು ಮೊಬೈಲ್ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಕಳ್ಳತನ ಪ್ರಕರಣ ಬೇದಿಸಲು ಡಿವೈಎಸ್‌ಪಿ ಟಿ.ವಿ.ಸುರೇಶ್, ಸಿಪಿಐ ಆರ್.ಆರ್.ಪಾಟೀಲ್ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿತ್ತು.
ಆರೋಪಿಗಳ ಪತ್ತೆಗೆ ಶ್ರಮಿಸಿದ ರಟ್ಟಿಹಳ್ಳಿ ಪಿಎಸ್‌ಐ ಕೃಷ್ಣಪ್ಪ ತೋಪಿನ್, ಹಂಸಭಾವಿ ಪಿಎಸ್‌ಐ ಚಂದನ ಚಲುವಯ್ಯಾ, ಹಿರೇಕೆರೂರ ಪಿಎಸ್‌ಐ ವಸಂತ ಕುಮಾರ್, ಪ್ರೊಬೇಶನರಿ ಮಹಿಳಾ ಪಿಎಸ್‌ಐ ವೀಣಾ, ಸಿಬ್ಬಂದಿಗಳಾದ ಡಿ.ಎಸ್.ದೊಡ್ಮನಿ, ಕೇಶವ ಕೊಲಪ್ಪನವರ್, ರವಿ ಲಮಾಣಿ, ಬಸವರಾಜ್ ಸಣ್ಣಪ್ಪನವರ್, ಕೃಷ್ಣ ಕೊರವರ, ಪರಶುರಾಮ್ ಹೊಸಳ್ಳಿ, ಮನೋಹರ ಭೋಗಾವಿ, ಫಯಾಜ್ ಕುಂದೂರು, ಮಂಜುನಾಥ್ ಕಾಟೇನಳ್ಳಿ, ಚಂದ್ರಶೇಖರ ಅಂಬಿಗೇರ, ಮಹೇಶ್ ಒಡೇರಳ್ಳಿ, ಸತೀಶ್, ಮಂಜುನಾಥ ಹಂಚಿನಮನಿ, ಮಾರುತಿ ಹಾಲಭಾವಿ, ಬಸವರಾಜ್ ಡೋಣನವರ್, ರಮೇಶ್ ಬಡಿಗೇರ್, ಎನ್.ಹೆಚ್.ಡೋಲೆ ಅವರ ಕಾರ್ಯಕ್ಕೆ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯಪ್ಪ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಪೇದೆ ಆತ್ಮಹತ್ಯೆ ಪ್ರಕರಣ; ಇಬ್ಬರು ಪತ್ರಕರ್ತರು, ಎಎಸ್ಐ, ನಾಲ್ವರು ಪೊಲೀಸರು ಸೇರಿ 9 ಜನರ ಮೇಲೆ ಎಫ್‌ಐಆರ್

ವಿಜಯಸಾಕ್ಷಿ ಸುದ್ದಿ, ಗದಗ:

ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಪಿ ಸಿ ಪಾಟೀಲ್ ಅಲಿಯಾಸ್ ಅಜ್ಜುಗೌಡ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಎಎಸ್‌ಐ ಪುಟ್ಟಪ್ಪ ಕೌಜಲಗಿ ಸೇರಿದಂತೆ ಐವರು ಪೊಲೀಸರು, ಇಬ್ಬರು ಪತ್ರಕರ್ತರು ಸೇರಿದಂತೆ ಒಂಬತ್ತು ಜನರ ಮೇಲೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪತ್ರಕರ್ತ ಗಿರೀಶ್ ಕುಲಕರ್ಣಿ, ಗುರುರಾಜ ಬಸವರಾಜ ತಿಳ್ಳಿಹಾಳ, ವಿಠ್ಠಲ ಚಿದಾನಂದ ಹಬೀಬ, ಖಾಸಗಿ ವಾಹಿನಿಯ ವರದಿಗಾರ ಭೀಮನಗೌಡ ಪಾಟೀಲ್, ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಎಎಸ್ಐ ಪುಟ್ಟಪ್ಪ ಕೌಜಲಗಿ, ಪೇದೆ ಸಿ.ವ್ಹಿ.ನಾಯ್ಕರ, ಟ್ರಾಫಿಕ್ ಪೊಲೀಸ್ ಠಾಣೆಯ ದಾದಾಪೀರ ಮಂಜಲಾಪೂರ, ಸಿಇಎನ್ ಪೊಲೀಸ್ ಠಾಣೆಯ ಶರಣಪ್ಪ ಅಂಗಡಿ ಹಾಗೂ ಮುಂಡರಗಿ ಠಾಣೆಯ ಅಂದಪ್ಪ ಹಣಜಿ ಸೇರಿ ಒಂಬತ್ತು ಜನರ ಮೇಲೆ ಮೃತ ಪೊಲೀಸ್ ಪೇದೆಯ ತಂದೆ ಚನ್ನವೀರಗೌಡ ಶಂಕರಗೌಡ ಪಾಟೀಲ್ ದೂರು ದೂರು‌ ನೀಡಿದ್ದಾರೆ.



ದೂರಿನಲ್ಲಿ ಏನಿದೆ?:

ಅಜ್ಜುಗೌಡ ಪಾಟೀಲ್ (ಪಿ ಸಿ ಪಾಟೀಲ್) ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಈತನಿಗೆ ನಾಲ್ಕೈದು ತಿಂಗಳಿನಿಂದ ಆರೋಪಿತರಾದ ಗಿರೀಶ್ ಕುಲಕರ್ಣಿ ಮತ್ತು ಈತನೊಂದಿಗೆ ಗುರುರಾಜ ತಿಳ್ಳಿಹಾಳ, ವಿಠ್ಠಲ ಚಿದಾನಂದ ಹಬೀಬ, ಭೀಮನಗೌಡ ಪಾಟೀಲ ಇವರು ವಿನಾಕಾರಣ ತೊಂದರೆ ಕೊಡುತ್ತಾ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಅಲ್ಲದೆ, ಮೊಬೈಲ್‌ನಲ್ಲಿ ಮೆಸೇಜ್‌ಗಳು, ಫೋಟೋಗಳು ನಮ್ಮ ಹತ್ತಿರವಿದ್ದು ಎಸ್‌ಪಿ ಅವರಿಗೆ ತೋರಿಸುತ್ತೇವೆ ಎಂದು ಹೆದರಿಸುತ್ತಿದ್ದರು.

ಅದರಂತೆ ಇನ್ನುಳಿದ ಆರೋಪಿಗಳು ಸ್ಟೇಶನ್ ಮಾಹಿತಿ, ಸ್ಟೇಶನ್‌ನಲ್ಲಿ ದಾಖಲಾದ ಪ್ರಕರಣದಲ್ಲಿನ ವಿಷಯದ ಬಗ್ಗೆ, ವೈಯಕ್ತಿಕ ವೀಕನೆಸ್ ಬಗ್ಗೆ ಇವರಿಗೆ ತಿಳಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಗಳು ಕಾಟ ಕೊಡುತ್ತಿದ್ದರು ಎನ್ನಲಾಗಿದೆ.

ಇದರಿಂದಾಗಿ ನಾಲ್ಕು ಪುಟಗಳಲ್ಲಿ ತನ್ನ ಸಾವಿನ ಬಗ್ಗೆ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಪವಾಡಿಗೌಡ ಅವರ ಸಾವಿಗೆ ಈ ಎಲ್ಲ ಒಂಬತ್ತು ಜನ ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

//ಜೇಮ್ಸ್ ಸಿನಿಮಾ ವಿಮರ್ಶೆ//ದೇಶಪ್ರೇಮಿ‌ ಸೈನಿಕನ ಸ್ನೇಹದ ಸೇಡು

0


ರೇಟಿಂಗ್:***1/2


ತಾರಾಗಣ:
ಪುನೀತ್ ‌ರಾಜ್‌ಕುಮಾರ್, ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ರಂಗಾಯಣ ರಘು, ಅವಿನಾಶ್, ಪ್ರಿಯಾ ಆನಂದ್, ತಿಲಕ್, ಶೈನ್ ‌ಶೆಟ್ಟಿ, ಶ್ರೀಕಾಂತ್, ಶರತ್, ರಿಷಿ, ಸಾಧುಕೋಕಿಲ, ಚಿಕ್ಕಣ್ಣ, ನಯನಾ, ಗೋವಿಂದ್‌ರಾಜ್, ಹರ್ಷ, ಕಾವ್ಯಾಶಾಸ್ತ್ರಿ, ಅಶ್ವಿನಿ‌ಹಾಸನ್. , ನಿರ್ದೇಶನ: ಚೇತನ್ ನಿರ್ಮಾಪಕ: ಕಿಶೋರ ಪತ್ತಿಕೊಂಡ ಸಂಗೀತ: ಚರಣ್‌ರಾಜ್ ಛಾಯಾಗ್ರಹಣ: ಸ್ವಾಮಿಗೌಡ ಸಂಕಲನ: ದೀಪು ಎಸ್.ಕುಮಾರ್

ಬಸವರಾಜ ಕರುಗಲ್.
“ಇವ್ನು ರೇಸ್‌ಗೆ ಇಳಿಯಲ್ಲ, ಇಳಿದ್ರೆ ಅದು ರೇಸ್ ಅಲ್ಲ, ಒನ್ ಮ್ಯಾನ್ ಶೋ”

ಇದು ಜೇಮ್ಸ್ ಸಿನಿಮಾ ನಾಯಕನ ಇಂಟರ್‌ಡಕ್ಷನ್ ಡೈಲಾಗ್.. ಈ ಡೈಲಾಗ್ ಇಡೀ ಸಿನಿಮಾದುದ್ದಕ್ಕೂ ನಿಜ ಅನ್ಸುತ್ತೆ… ಜೇಮ್ಸ್ ಸಿನಿಮಾದಲ್ಲಿ ಮಾತಿನ ಅಬ್ಬರಕ್ಕಿಂತ ಗುಂಡಿನ ಆರ್ಭಟವೇ ಹೆಚ್ಚು. ಸಾಹಸ ದೃಶ್ಯಗಳಿಗೆ ತೂಕ ಅಪಾರ. ಕಥೆ ಒಂಚೂರು ಸಪೂರ.

ಜೇಮ್ಸ್ ಕಥೆ ಸರಳವಾಗಿದ್ದರೂ ಪ್ರೇಕ್ಷಕರನ್ನು ಸೀಟಿನ‌ ತುದಿಗೆ ಜಾರಿಸುವ ಉದ್ದೇಶದಿಂದಲೇ ಅಲ್ಲಲ್ಲಿ ಟ್ವಿಸ್ಟ್, ಟರ್ನ್, ಫ್ಲ್ಯಾಶ್‌ಬ್ಯಾಕ್‌ಗಳ ಮೂಲಕ ಕಥೆಯನ್ನ ಹೆಣೆಯಲಾಗಿದೆ. ದೇಶಪ್ರೇಮ‌ ಬಿಂಬಿಸುವ, ಅನಾಥನಾಗಿದ್ದರೂ ಗೆಳೆತನದ ಬಾಂಧವ್ಯ ಸಾರುವ ಜೊತೆಗೆ ಸ್ನೇಹಕ್ಕಾಗಿಯೇ ಸೇಡು ತೀರಿಸಿಕೊಳ್ಳುವ ಹೊಸತನ ಸೇರಿಸಲಾಗಿದೆ.

ಜೇಮ್ಸ್-ಇದೊಂದು ಸೆಕ್ಯುರಿಟಿ ಏಜೆನ್ಸಿಯ ಹೆಸರು. ಈ ಹೆಸರು ಇಡಲು ರೋಚಕ ಮತ್ತು‌ ಇಂಟರೆಸ್ಟಿಂಗ್ ಹಿನ್ನೆಲೆ ಇದೆ. ಅದೇನು ಅನ್ನೋದನ್ನ ಸಿನಿಮಾ ನೋಡಿ ತಿಳ್ಕೊಂಡರೇನೇ ಚೆಂದ. ಖಳನೊಬ್ಬನಿಗೆ‌ ಮೂರು ತಿಂಗಳು ಭದ್ರತೆ ನೀಡುವ ಕೆಲಸ ಒಪ್ಪಿಕೊಳ್ಳುವ ಸಂತೋಷ್‌ಕುಮಾರ್ ಜೇಮ್ಸ್ ಏಜೆನ್ಸಿಯ ರೂವಾರಿ. ಆ ಖಳನಿಗೆ ರಕ್ತಸಂಬಂಧಿಯೇ ವಿಲನ್, ಅಂತಾರಾಷ್ಟ್ರೀಯ ಮಟ್ಟದ ಡ್ರಗ್ಸ್ ದಂಧೆಯ ಕಿಂಗ್‌ಪಿನ್‌ಗಳು ಇಬ್ಬರೂ ವಿಲನ್‌ಗಳು ಮಾರ್ಕೆಟ್‌ನಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಇಬ್ಬರು ಡಾನ್‌ಗಳ ನಡುವೆ ಆಗಾಗ ಗುಂಡಿನ ಸುರಿಮಳೆ, ಲಾಂಗುಗಳ ಜಡೀಮಳೆ, ಒಮ್ಮೆ ಅಘೋರಿಗಳ ಅಟ್ಯಾಕ್, ಮತ್ತೊಮ್ಮೆ ಸೂಟು-ಬೂಟುಧಾರಿಗಳ ಕಾರ್ ಚೇಸಿಂಗ್..ಒಂಥರಾ ಹಾಲಿವುಡ್ ಮೂವ್ ರೇಂಜ್‌ಗೆ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ..

ಸೆಕ್ಯುರಿಟಿ ನೀಡುವ ವಿಲನ್ ತಂಗಿ ಜೊತೆಗೆ ನಾಯಕ ಸಂತೋಷ್‌ಗೆ ಲವ್ವು, ಇದಕ್ಕೆ ನಾಯಕಿಯ ಅಣ್ಣ ಡಾನ್‌ನ ಗ್ರೀನ್ ಸಿಗ್ನಲ್.. ಸಂತೋಷ್ ಎಂದರೆ ಪ್ರೀತಿ, ವಿಶ್ವಾಸ, ನಂಬಿಕೆ ಎನ್ನುವ ಡಾನ್‌ನ ಡೈಲಾಗ್ ಇನ್ನು ಮುಗಿದಿರಲ್ಲ, ಸಂತೋಷ್ ಅಂದ್ರೆ ಭಯಾನೂ ಇರಬೇಕು ಸರ್ ಎಂದು ಹೇಳಿ ನಾಯಕನಿಂದ ವಿಲನ್ ಪಡೆ ಛಿದ್ರ ಛಿದ್ರ…ಈ ಹೊತ್ತಿಗೆ ಸಂತೋಷ್ ನಾಯಕನೋ? ಖಳನಾಯಕನೋ? ಎನ್ನುವ ಹುಳ ತಲೆಗೆ ಬೀಳುತ್ತಿದ್ದಂತೆ ವಿರಾಮ.

ಆನಂತರ ಶುರುವಾಗೋದು ಫ್ಯಾಮಿಲಿ ಡ್ರಾಮಾ, ಸಿನಿಮಾದ ಎರಡನೇ ಭಾಗದಲ್ಲಿ‌ ನಿಜವಾದ ಕಥೆ ಗರಿಗೆದರುತ್ತೆ. ವಿಲನ್‌ ಎನಿಸಿದವನು ಮತ್ತೇ ಹೀರೋ ಆಗ್ತಾನೆ. ಸಂತೋಷ್ ಮಿಲ್ಟ್ರಿಯಲ್ಲಿ‌ ಮೇಜರ್ ಆಗಿ ಭಯೋತ್ಪಾದಕರನ್ನು‌ ಮಟ್ಟ ಹಾಕುವ ಸಣ್ಣ ಎಳೆ ಇಣುಕಿ ಹೋಗುತ್ತದೆ. ಇದೇ ಫ್ಲ್ಯಾಶ್‌ಬ್ಯಾಕ್‌ನಲ್ಲಿ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಸಹ ಬಂದು ಹೋಗುತ್ತಾರೆ. ಪುನೀತ್‌ಗೆ ಶಿವಣ್ಣ‌ ಗುರಿ ತೋರಿದರೆ, ರಾಘಣ್ಣ ಗುರುವಾಗಿ ಮುನ್ನಡೆಸುವ ಝಲಕ್ ಪ್ರೇಕ್ಷಕರನ್ನು ಪುಳಕಿತರನ್ನಾಗಿಸುತ್ತದೆ. ಆನಂತರ ಮತ್ತದೇ ಗುಂಡಿನ ಮೊರೆತ, ಸಿಡಿಮದ್ದುಗಳ ಸದ್ದು, ಅಂತಿಮವಾಗಿ ಖಳರ ಹೆಡೆಮುರಿ..

ಒಟ್ಟಾರೆ ಜೇಮ್ಸ್ ಗೆಳೆತನಕ್ಕಾಗಿ‌ ರಿವೇಂಜ್ ತೆಗೆದುಕೊಳ್ಳುವ ದೇಶಪ್ರೇಮಿ ಸೈನಿಕನ ಕಥೆ ಹೊಂದಿದ್ದು, ಅಪ್ಪು ಅಭಿಮಾನಿಗಳಿಗೆ‌ ದೊಡ್ಡ ಹಬ್ಬ. ಜೊತೆಗೆ ಪುನೀತ್‌ರ ಕೊನೆಯ ಸಿನಿಮಾ ಬೇರೆ.. ಎಲ್ಲ ವರ್ಗದ‌ ಜನರನ್ನು ಸೆಳೆಯಲು ಸರ್ಕಸ್‌ ಮಾಡಿರುವುದು‌ ಗೊತ್ತಾಗುತ್ತದೆ. ಕೆಲವು ಕಡೆ ಪುನೀತ್ ಡ್ಯೂಪ್ ಬಳಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಪುನೀತ್ ನಟನೆಗೆ ಶಿವಣ್ಣ ಧ್ವನಿ‌ ನೀಡಿರುವುದು ಹೇಗಿದೆ ಎಂದರೆ ಇಡೀ ಸಿನಿಮಾದುದ್ದಕ್ಕೂ ಇಬ್ಬಿಬ್ಬರು ಹೀರೋಗಳನ್ನು ನೋಡಿದಂತೆ ಭಾಸವಾಗುತ್ತೆ. ತೆರೆಯಲ್ಲಿ‌ ಪುನೀತ್ ಕಂಡರೆ ಧ್ವನಿ‌ ಕೇಳುತ್ತಿದ್ದಂತೆ ಪುನೀತ್ ಪಾತ್ರದಲ್ಲಿ ಶಿವಣ್ಣ ಸಹ ಕಲ್ಪನೆಯಲ್ಲಿ ಬರ್ತಾರೆ.

ಜೇಮ್ಸ್‌ನಲ್ಲಿ ಕಲಾವಿದರ ದೊಡ್ಡ ದಂಡೇ‌ ಇದೆ. ಎಲ್ಲ ಕಲಾವಿದರಿಗೂ ಸ್ಕ್ರೀನ್ ಸಿಕ್ಕಿದೆ. ಆದರೆ ಬಹುತೇಕ ಕಲಾವಿದರು ಹೀಗೇ ಬಂದು, ಹಾಗೇ ಹೋಗುವಷ್ಟು ಮಾತ್ರ ಸ್ಪೇಸ್ ಪಡೆದಿದ್ದಾರೆ. ಚಿಕ್ಕಣ್ಣ, ಸಾಧುಕೋಕಿಲ ಇದ್ದರೂ ಕಾಮಿಡಿ ಅಷ್ಟಾಗಿ ವರ್ಕೌಟ್ ಆಗಿಲ್ಲ. ಚೇಸಿಂಗ್ ಸೀನ್‌ಗಳಲ್ಲಿ ಸ್ವಾಮಿಗೌಡ ಅವರ ಕ್ಯಾಮೆರಾ ಕಣ್ಣಿಗೆ ಒಂದು ಸಲಾಂ ಹೇಳಬಹುದು. ಸಂಗೀತ ನಿರ್ದೇಶಕ ಚರಣ್‌ರಾಜದ ಹಿನ್ನೆಲೆ ಸಂಗೀತದಲ್ಲಿ ಗೆದ್ದಿದ್ದಾರೆ, ಹಾಡುಗಳಿಗೆ ಸಂಗೀತ ನೀಡುವಲ್ಲಿ ಎಡವಿದ್ದಾರೆ.

ನಾಯಕ ಪುನೀತ್ ಅವರನ್ನ ತೆರೆಯ ಮೇಲೆ‌ ನೋಡುವುದೇ ಖುಷಿ. ಕೊನೆ ಸಿನಿಮಾ ಎನ್ನುವ ಕಾರಣಕ್ಕೆ ಸಿಕ್ಕಾಪಟ್ಟೆ‌ ಕ್ರೇಜ್ ಕ್ರಿಯೆಟ್ ಮಾಡಿದ ಜೇಮ್ಸ್‌, ಜಗತ್ತಿನಾದ್ಯಂತ ಕೆಜಿಎಫ್‌ ನಂತರ ಗ್ರ್ಯಾಂಡ್ ಒಪನಿಂಗ್ ಪಡೆದ ಕನ್ನಡದ ಎರಡನೇ ಸಿನಿಮಾ. ಪುನೀತ್ ಅವರ ಅಭಿನಯದ ಬಗ್ಗೆ ಹೇಳೋದೇನಿಲ್ಲ, ಕರ್ನಾಟಕದ ಮತ್ತೊಂದು ರತ್ನ. ಈಚೆಗಷ್ಟೇ ಅವರಿಗೆ ಮೈಸೂರು ವಿವಿ ಗೌಡಾ ನೀಡಿದ್ದನ್ನ ಚಿತ್ರತಂಡ ಅಪ್ಡೇಟ್ ಮಾಡಿಕೊಂಡು ಡಾ.ಪುನೀತ್ ರಾಜ್‌ಕುಮಾರ್ ಅಂತ ಟೈಟಲ್ ಕಾರ್ಡ್‌ನಲ್ಲಿ ಸೇರಿಸಿರುವುದು ಖುಷಿಯ ಸಂಗತಿ. ಅಪ್ಪು ಎಲ್ಲ ಸಿನಿಮಾಗಳಂತೆ ಡ್ಯಾನ್ಸ್, ಫೈಟ್‌‌ನಲ್ಲಿ ಸಖತ್ ಪವರ್. ಅದರಲ್ಲೂ ಜೇಮ್ಸ್‌ನ ಫೈಟಿಂಗ್ ಸೀನ್‌ಗಳು ಹಾಲಿವುಡ್ ಮಾದರಿಯಲ್ಲಿವೆ. ನಾಯಕಿ ಪ್ರಿಯಾ ಆನಂದ್ ರಾಜಕುಮಾರ ಸಿನಿಮಾ ನಂತರ ಮತ್ತೇ ಅಪ್ಪುಗೆ‌ ಜೋಡಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅವರ ನಟನೆ ಸುಧಾರಣೆ ಕಂಡಿದೆ ಎನ್ನಬಹುದು. ಖಳರಾಗಿ ಶರತ್‌ಕುಮಾರ್, ಶ್ರೀಕಾಂತ್, ಮುಕೇಶ್ ರಿಷಿ, ಆದಿತ್ಯ ಮೆನನ್ ಮತ್ತಿತರರು ಖಳರಾಗಿ ವಿಜೃಂಭಿಸಿದ್ದಾರೆ. ಇಡೀ ಸಿನಿಮಾ ತುಂಬಾ ರಿಚ್ ಆಗಿ ಮೂಡಿ ಬಂದಿದ್ದು, ಸ್ಥಳೀಯವಾಗಿ ಕೊಪ್ಪಳದ ಗಂಗಾವತಿ, ಹೊಸಪೇಟೆ, ಮಡಿಕೇರಿ, ಬೆಂಗಳೂರು, ಮೈಸೂರು ಸೇರಿದಂತೆ ಕಾಶ್ಮೀರ ಹಾಗೂ ವಿದೇಶದ‌ ಕೆಲ ಲೋಕೇಷನ್‌‌ಗಳಲ್ಲಿ ಶೂಟಿಂಗ್ ಆಗಿದೆ. ನಿರ್ಮಾಣದಲ್ಲಿ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಎಲ್ಲೂ ಕಾಂಪ್ರೊಮೈಸ್ ಆಗಿಲ್ಲ. ನಿರ್ದೇಶಕ ಚೇತನ್‌ ಹರಿತವಾದ, ಕಚಗುಳಿ ಇಡುವ ಮಾತುಗಳನ್ನು ಬರೆಯುವಿಕೆಯಲ್ಲಿ‌ ಹಿಡಿತ ಸಾಧಿಸಿದವರು. ಆದ್ರೆ ಜೇಮ್ಸ್‌ನಲ್ಲಿ ಚೇತನ್ ಲೇಖನಿ ಯೊಕೊ ಹರಿತವಾಗಿಲ್ಲ. ಕೆಲವು ಕಡೆ ಕಣ್ಣಂಚು ಒದ್ದೆಯಾಗಿಸುವ ದೃಶ್ಯಗಳನ್ನು ಸೇರಿಸಿ ಹೆಣ್ಮಕ್ಕಳು‌ ಸಹ ಜೇಮ್ಸ್ ಕಣ್ತುಂಬಿಕೊಳ್ಳಬಹುದು ಎಂಬುದನ್ನು ಹೇಳಲು ಒದ್ದಾಡಿರುವುದು ಗೊತ್ತಾಗುತ್ತದೆ. ನಿರ್ದೇಶಕನಾಗಿ‌ ದೊಡ್ಡ ಬಜೆಟ್ ಸಿನಿಮಾ‌ ನಿರ್ದೇಶಿಸಿದ್ದು ಚೇತನ್‌ ಹೆಗ್ಗಳಿಕೆ ಎನ್ನಬಹುದು.

ಒಟ್ಟಾರೆ ಜೇಮ್ಸ್ ಸಿನಿಮಾ, ಪುನೀತ್ ಅಭಿಮಾನಿಗಳಿಗೆ ಹೋಳಿ‌ಹಬ್ಬ, ಹೆಣ್ಮಕ್ಕಳಿಗೆ ಯುಗಾದಿ, ಯುವಕರಿಗೆ ದಸರಾ, ಫ್ಯಾಮಿಲಿಗೆ ದೀಪಾವಳಿ. ಗನ್‌ಗಳ ಮೊರೆತ ಸಹಿಸುವುದಾದರೆ ಮುಜುಗರ‌ ಇಲ್ಲದೇ ಕುಟುಂಬಸಮೇತ ಜೇಮ್ಸ್‌ನನ್ನು‌ ನೋಡಿ, ಹರಸಿ, ಹಾರೈಸಿ, ಆಶಿರ್ವದೀಸಬಹುದು.

ಪ್ರದರ್ಶನ: ಶ್ರೀ ಲಕ್ಷ್ಮೀ ಚಿತ್ರಮಂದಿರ, ಕೊಪ್ಪಳ.

ಸ್ಟಾರ್ ರೇಟಿಂಗ್: * : ಚನ್ನಾಗಿಲ್ಲ ** : ಸುಮಾರಾಗಿದೆ *** : ಚನ್ನಾಗಿದೆ **** : ತುಂಬಾ ಚನ್ನಾಗಿದೆ ***** : ಮಿಸ್ ಮಾಡ್ದೆ ನೋಡಿ

error: Content is protected !!