Home Blog Page 32

ಹಬ್ಬದ ಪ್ರಯಾಣಿಕರಿಗೆ ಗುಡ್‌ನ್ಯೂಸ್: ಹುಬ್ಬಳ್ಳಿ–ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು!

0

ಹುಬ್ಬಳ್ಳಿ: ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಾಗೂ ಛತ್ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಯಂತ್ರಿಸಲು ಹುಬ್ಬಳ್ಳಿ–ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.

ರೈಲು ಸಂಖ್ಯೆ 07341 ಎಸ್‌ಎಸ್‌ಎಸ್ ಹುಬ್ಬಳ್ಳಿ–ಚಿಕ್ಕಮಗಳೂರು ವಿಶೇಷ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 5ರಿಂದ ಅಕ್ಟೋಬರ್ 31ರವರೆಗೆ ಪ್ರತಿ ಶನಿವಾರ ಮತ್ತು ಭಾನುವಾರ ಸಂಚರಿಸಲಿದೆ. ಬೆಳಗ್ಗೆ 5 ಗಂಟೆಗೆ ಹುಬ್ಬಳ್ಳಿಯಿಂದ ಹೊರಡುವ ರೈಲು ಬೆಳಗ್ಗೆ 11.15ಕ್ಕೆ ಚಿಕ್ಕಮಗಳೂರು ತಲುಪಲಿದೆ.

ಹಿಂತಿರುಗುವ ರೈಲು ಸಂಖ್ಯೆ 07342 ಚಿಕ್ಕಮಗಳೂರು–ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ಇದೇ ಅವಧಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸಂಚರಿಸಲಿದೆ. ಈ ರೈಲು ಸಂಜೆ 5.30ಕ್ಕೆ ಚಿಕ್ಕಮಗಳೂರಿನಿಂದ ಹೊರಟು ರಾತ್ರಿ 11.20ಕ್ಕೆ ಹುಬ್ಬಳ್ಳಿ ತಲುಪಲಿದೆ.

ಹಲವು ನಿಲ್ದಾಣಗಳಲ್ಲಿ ನಿಲುಗಡೆ:

ವಿಶೇಷ ರೈಲು ಕುಂದಗೋಳ, ಸಂಶಿ, ಯಲವಿಗಿ, ಹಾವೇರಿ, ಬ್ಯಾಡಗಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಅಜ್ಜಂಪುರ, ಬೀರೂರು, ಕಡೂರು, ಸಖರಾಯಪಟ್ಟಣ ಸೇರಿದಂತೆ ಮಾರ್ಗಮಧ್ಯದ ಹಲವು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

ರೈಲಿನಲ್ಲಿ ಏನೆಲ್ಲ ಸೌಲಭ್ಯ?

ವಿಶೇಷ ರೈಲಿನಲ್ಲಿ ಒಂದು ಸ್ಲೀಪರ್ ಕ್ಲಾಸ್, 7 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಹಾಗೂ 2 ಲಗೇಜ್-ಕಮ್-ಬ್ರೇಕ್/ದಿವ್ಯಾಂಗಜನ ಬೋಗಿಗಳು ಇರಲಿವೆ.

ಹಬ್ಬದ ಸಂದರ್ಭದಲ್ಲಿ ಹುಬ್ಬಳ್ಳಿ–ಚಿಕ್ಕಮಗಳೂರು ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಈ ವಿಶೇಷ ರೈಲು ಹೆಚ್ಚುವರಿ ಸಾರಿಗೆ ಸೌಲಭ್ಯ ಒದಗಿಸಲಿದೆ. ಇದರಿಂದ ಹಬ್ಬದ ವೇಳೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಜಿಲ್ಲಾ ಕ್ರೀಡಾಂಗಣದಲ್ಲಿ ಅವೈಜ್ಞಾನಿಕ ಸಿಂಥೆಟಿಕ್ ಮೈದಾನ ನಿರ್ಮಾಣ ಖಂಡನೀಯ: ರಾಜು ಖಾನಪ್ಪನವರ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಷ್ಟ್ರೀಯ ಹಬ್ಬಗಳು, ದಸರಾ ಕ್ರೀಡೆಗಳು ಸೇರಿದಂತೆ ವಿವಿಧ ಕ್ರೀಡಾಕೂಟಗಳಿಗೆ ವೇದಿಕೆಯಾಗಿರುವ ನಗರದ ಜಿಲ್ಲಾ ಕ್ರೀಡಾಂಗಣವನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವ ಬದಲು ಅವೈಜ್ಞಾನಿಕವಾಗಿ ಸಿಂಥೆಟಿಕ್ ಫುಟ್‌ಬಾಲ್ ಮೈದಾನ ನಿರ್ಮಾಣಕ್ಕೆ ಮುಂದಾಗಿರುವುದು ಖಂಡನೀಯ ಎಂದು ಹಿಂದೂ ಸಂಘಟನೆಯ ಮುಖಂಡ ರಾಜು ಖಾನಪ್ಪನವರ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾರಂಭಿಸಿರುವ ಸಿಂಥೆಟಿಕ್ ಫುಟ್‌ಬಾಲ್ ಮೈದಾನದ ಕಾಮಗಾರಿಗೆ ಕ್ರೀಡಾಪಟುಗಳ ವಿರೋಧವಿದ್ದು, ಕೂಡಲೇ ಕಾಮಗಾರಿ ಸ್ಥಗಿತಗೊಳಿಸಿ ಕ್ರೀಡಾಪಟುಗಳ ಅಗತ್ಯಕ್ಕೆ ತಕ್ಕಂತೆ ಕ್ರೀಡಾಂಗಣ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಬಾಸ್ಕೆಟ್‌ಬಾಲ್ ಹಾಗೂ ಸ್ಕೇಟಿಂಗ್‌ಗೆ ಒಂದೇ ಮೈದಾನವನ್ನು ಬಳಸುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾ ಚಟುವಟಿಕೆಗಳ ಬಗ್ಗೆ ಸಮರ್ಪಕ ಅರಿವು ಹೊಂದಿರುವ ಅಧಿಕಾರಿಗಳು ಇಂತಹ ಯೋಜನೆಗಳನ್ನು ರೂಪಿಸಬೇಕಿತ್ತು. ಆದರೆ, ಕ್ರೀಡಾಪಟುಗಳಿಗೆ ಅನುಕೂಲವಾಗುವ ಬದಲು ತೊಂದರೆ ಉಂಟುಮಾಡುವ ರೀತಿಯಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ದೂರಿದರು.

ಸಿಂಥೆಟಿಕ್ ಫುಟ್‌ಬಾಲ್ ಮೈದಾನ ನಿರ್ಮಿಸಿದರೆ ಅದರೊಳಗೆ ಇತರರು ಓಡಾಡಲು ಸಾಧ್ಯವಾಗುವುದಿಲ್ಲ. ಜತೆಗೆ ಸಿಂಥೆಟಿಕ್ ಮೈದಾನದ ನಿರ್ವಹಣೆಯೂ ಕಷ್ಟಕರವಾಗಿದೆ. ಹೀಗಿರುವಾಗ ಜಿಲ್ಲಾ ಕ್ರೀಡಾಂಗಣದಂತಹ ಬಹುಪಯೋಗಿ ಮೈದಾನದಲ್ಲಿ ಇಂತಹ ಕಾಮಗಾರಿಗೆ ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು.

ಈಗಾಗಲೇ ಅಥ್ಲೆಟಿಕ್ಸ್ ಟ್ರ್ಯಾಕ್‌ನಲ್ಲಿಯೂ ಸಮರ್ಪಕ ವ್ಯವಸ್ಥೆ ಇಲ್ಲ. ಕೇವಲ ನಾಲ್ಕು ಮಂದಿ ಏಕಕಾಲಕ್ಕೆ ಓಡುವಷ್ಟು ಮಾತ್ರ ಅವಕಾಶವಿದೆ. ಇಂತಹ ಸಮಸ್ಯೆಗಳನ್ನು ಪರಿಹರಿಸುವ ಬದಲು ಮತ್ತೊಂದು ಸಿಂಥೆಟಿಕ್ ಗ್ರೌಂಡ್ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ. ಸ್ಥಳೀಯ ಕ್ರೀಡಾಪಟುಗಳು ಹಾಗೂ ಮಕ್ಕಳಿಗೆ ಆಟವಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಈಗಿರುವ ಸಿಂಥೆಟಿಕ್ ಟ್ರ್ಯಾಕ್‌ಗೆ ಸುಮಾರು 18 ವರ್ಷಗಳಾಗಿದ್ದು, ಅದರ ಬಳಕೆಯ ಅವಧಿಯೂ ಮುಗಿದಿದೆ. ಹೀಗಾಗಿ ಅದರ ಸ್ಥಿತಿಗತಿ ಪರಿಶೀಲಿಸಿ, ಕ್ರೀಡಾಪಟುಗಳ ಅಗತ್ಯಕ್ಕೆ ಅನುಗುಣವಾಗಿ ಹೊಸ ವ್ಯವಸ್ಥೆ ರೂಪಿಸಬೇಕು. ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ಈ ಕುರಿತು ತಕ್ಷಣ ಗಮನಹರಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟದ ರೂಪುರೇಷೆ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಕ್ರೀಡಾ ಇಲಾಖೆಯ ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕ್ರೀಡಾಪಟುಗಳ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಬೇಕು. ಫುಟ್‌ಬಾಲ್ ಮೈದಾನ ನಿರ್ಮಾಣದ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಕೂಡಲೇ ನಿಲ್ಲಿಸಿ, ಜಿಲ್ಲೆಯ ವಿವಿಧ ಕ್ರೀಡೆಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ರವಿಕಾಂತ ಅಂಗಡಿ ಮಾತನಾಡಿ, ಕ್ರೀಡಾ ಇಲಾಖೆಯಲ್ಲಿ ಕ್ರೀಡೆ ಬಗ್ಗೆ ಸಂಪೂರ್ಣ ಜ್ಞಾನ ಹಾಗೂ ಅನುಭವ ಹೊಂದಿರುವ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಹಲವು ಇಲಾಖೆಗಳ ಜವಾಬ್ದಾರಿಯನ್ನು ಒಬ್ಬರೇ ಅಧಿಕಾರಿಗಳು ನಿರ್ವಹಿಸುತ್ತಿರುವುದರಿಂದ ಕ್ರೀಡಾ ಕ್ಷೇತ್ರದ ಸಮಸ್ಯೆಗಳಿಗೆ ಸಮರ್ಪಕ ಪರಿಹಾರ ದೊರೆಯುತ್ತಿಲ್ಲ ಎಂದು ಹೇಳಿದರು.

ಪ್ರಭಾರಿ ಅಧಿಕಾರಿಗಳ ಮೂಲಕ ಈ ರೀತಿಯ ಮಹತ್ವದ ಕಾಮಗಾರಿಗಳನ್ನು ನಿರ್ವಹಿಸುವುದು ಕ್ರೀಡಾಪಟುಗಳಿಗೆ ತೊಂದರೆ ಉಂಟುಮಾಡುತ್ತಿದೆ. ಈಗಿರುವ ಮೈದಾನವನ್ನು ಅದರ ಮೂಲ ಸ್ವರೂಪದಲ್ಲಿಯೇ ಸಮರ್ಪಕವಾಗಿ ಅಭಿವೃದ್ಧಿಪಡಿಸಬೇಕು. ಕ್ರೀಡಾಪಟುಗಳಿಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸದೆ ಹೊಸ ಕಾಮಗಾರಿಗಳಿಗೆ ಮುಂದಾಗುವುದು ಸರಿಯಲ್ಲ ಎಂದರು.

ವೆಂಕನಗೌಡ ಗೋವಿಂದಗೌಡ್ರ ಮಾತನಾಡಿ, ಕ್ರೀಡಾ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆಯಿದೆ. ಮೂರು-ನಾಲ್ಕು ಇಲಾಖೆಗಳ ಜವಾಬ್ದಾರಿಯನ್ನು ಒಬ್ಬ ಅಧಿಕಾರಿಗೆ ವಹಿಸುವುದರಿಂದ ಕ್ರೀಡಾ ಚಟುವಟಿಕೆಗಳ ಮೇಲ್ವಿಚಾರಣೆಗೆ ತೊಂದರೆಯಾಗುತ್ತಿದೆ. ಕ್ರೀಡಾ ಕ್ಷೇತ್ರದ ಬಗ್ಗೆ ಜ್ಞಾನ ಹೊಂದಿರುವ ಅಧಿಕಾರಿಗಳನ್ನು ನೇಮಕ ಮಾಡಬೇಕು. ಫುಟ್‌ಬಾಲ್ ಮೈದಾನ ನಿರ್ಮಾಣಕ್ಕೆ ಕ್ರೀಡಾಂಗಣದ ಹೃದಯಭಾಗದಲ್ಲಿರುವ ವಾಕಿಂಗ್ ಸಾಲನ್ನು ಬಳಸಬೇಕು ಎಂದು ಒತ್ತಾಯಿಸಿದರು.

ಅರವಿಂದ ಹುಲ್ಲೂರು ಮಾತನಾಡಿ, ಸಿಂಥೆಟಿಕ್ ಟ್ರ್ಯಾಕ್‌ಗೆ ಪ್ರತಿದಿನ ನೀರುಣಿಸುವ ಅಗತ್ಯವಿದೆ. ಆದರೆ, ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ಸೌಲಭ್ಯವೇ ಸಮರ್ಪಕವಾಗಿಲ್ಲ. ಮೂಲಸೌಲಭ್ಯಗಳನ್ನೇ ಕಲ್ಪಿಸದೆ ದುಬಾರಿ ಕಾಮಗಾರಿಗಳಿಗೆ ಆದ್ಯತೆ ನೀಡುವುದು ಎಷ್ಟರ ಮಟ್ಟಿಗೆ ಸೂಕ್ತ ಎಂದು ಪ್ರಶ್ನಿಸಿದರು.

ಕ್ರೀಡಾ ಕ್ಷೇತ್ರದ ಬಗ್ಗೆ ಜ್ಞಾನ ಹೊಂದಿರುವ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಜಿಲ್ಲಾ ಕ್ರೀಡಾಂಗಣವನ್ನು ರಾಜಕೀಯ ಹಸ್ತಕ್ಷೇಪದಿಂದ ಮುಕ್ತಗೊಳಿಸಿ, ಕ್ರೀಡಾಪಟುಗಳ ಅಗತ್ಯಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪರಮೇಶ ನಾಯಕ್, ಮಹಾಂತೇಶ ಪಾಟೀಲ, ದೇವರಾಜ ದೊಡ್ಡಮನಿ, ನಾಗರಾಜ ಬಂಡಿವಡ್ಡರ, ಮಲ್ಲಿಕಾರ್ಜುನ ಬನ್ನಿಗಿಡದ, ಸಾಗರ, ಪ್ರಭು ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜಿಲ್ಲಾ ಕ್ರೀಡಾಂಗಣವು ಎಲ್ಲ ಕ್ರೀಡಾಪಟುಗಳಿಗೂ ಉಪಯೋಗವಾಗುವಂತಿರಬೇಕು. ಅವೈಜ್ಞಾನಿಕ ಕಾಮಗಾರಿಗಳ ಮೂಲಕ ಅದರ ಮೂಲ ಸ್ವರೂಪಕ್ಕೆ ಧಕ್ಕೆ ತರಬಾರದು. ಸಿಂಥೆಟಿಕ್ ಫುಟ್‌ಬಾಲ್ ಮೈದಾನ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಿ, ಸ್ಥಳೀಯ ಕ್ರೀಡಾಪಟುಗಳು ಹಾಗೂ ಮಕ್ಕಳ ಅಗತ್ಯಕ್ಕೆ ತಕ್ಕ ಮೂಲಸೌಕರ್ಯ ಕಲ್ಪಿಸಬೇಕು.

– ರಾಜು ಖಾನಪ್ಪನವರ

ಸಾಮರಸ್ಯ, ಸಹಬಾಳ್ವೆ ಬೆಳೆಸುವುದೇ ನಿಜವಾದ ಅಭಿವೃದ್ಧಿ: ಯಳವತ್ತಿಯಲ್ಲಿ ಜಿ.ಎಸ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗ್ರಾಮದ ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಕಟ್ಟಡ ಹಾಗೂ ಮೂಲಸೌಕರ್ಯಗಳ ನಿರ್ಮಾಣವಲ್ಲ, ಜನರಲ್ಲಿ ಪ್ರೀತಿ, ಸಹಕಾರ, ಸಾಮರಸ್ಯ ಹಾಗೂ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುವುದೂ ನಿಜವಾದ ಅಭಿವೃದ್ಧಿಯ ಭಾಗವಾಗಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.

ತಾಲೂಕಿನ ಯಳವತ್ತಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಗುಂಡೇಶ್ವರ ಸಮುದಾಯ ಭವನವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮಗಳ ಅಭಿವೃದ್ಧಿಯು ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಕೃಷಿಯನ್ನೇ ಬದುಕಾಗಿಸಿಕೊಂಡಿರುವ ಗ್ರಾಮೀಣ ಜನರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರ, ಧರ್ಮನಿಷ್ಠೆ ಹಾಗೂ ಮಾನವೀಯ ಮೌಲ್ಯಗಳನ್ನು ನೀಡಬೇಕು ಎಂದು ಉಜ್ಜಯಿನಿ ಪೀಠದ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಜಗದ್ಗುರುಗಳು ಆಶೀರ್ವಚನ ನೀಡಿದರು.

ಸಮುದಾಯ ಭವನವು ಗ್ರಾಮದ ಸಾಮಾಜಿಕ ಬದುಕಿನ ಕೇಂದ್ರವಾಗಿ ರೂಪುಗೊಳ್ಳಬೇಕು. ಎಲ್ಲ ಸಮುದಾಯದವರು ಭವನವನ್ನು ಸಮಾನವಾಗಿ ಬಳಸಿಕೊಂಡು ಸೌಹಾರ್ದತೆ ಹಾಗೂ ಸಹಬಾಳ್ವೆಗೆ ಮಾದರಿಯಾಗಬೇಕು ಎಂದು ಹೇಳಿದರು.

ಇಂದು ತಂತ್ರಜ್ಞಾನ, ಸಂಪರ್ಕ ಸಾಧನಗಳು, ರಾಜಕೀಯ ಸೇರಿದಂತೆ ವಿವಿಧ ಕಾರಣಗಳಿಂದ ಸಮಾಜದಲ್ಲಿ ಸೌಹಾರ್ದತೆ ಹಾಗೂ ಸಾಮರಸ್ಯಕ್ಕೆ ಧಕ್ಕೆಯಾಗುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಎಲ್ಲ ಜಾತಿ-ಜನಾಂಗದವರು ಸಹೋದರತ್ವದ ಭಾವನೆಯಿಂದ ಬದುಕು ಸಾಗಿಸುತ್ತಿರುವ ಪರಂಪರೆ ಇಂದಿಗೂ ಜೀವಂತವಾಗಿದ್ದು, ಅದು ಮುಂದುವರಿಯಬೇಕು ಎಂದರು.

ದೇವರು, ಧರ್ಮ, ಶಿಕ್ಷಣ ಹಾಗೂ ಸಮಾಜಕ್ಕಾಗಿ ನಿತ್ಯದ ಬದುಕಿನಲ್ಲಿ ಕೈಲಾದಷ್ಟು ಸಹಾಯ-ಸಹಕಾರ ಮಾಡುವ ಮೂಲಕವೇ ಬದುಕಿಗೆ ಸಾರ್ಥಕತೆ ದೊರೆಯುತ್ತದೆ ಎಂದು ಜಗದ್ಗುರುಗಳು ತಿಳಿಸಿದರು.

ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ ಹಾಗೂ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಯಾವುದೇ ಗ್ರಾಮದ ಪ್ರಗತಿಗೆ ಸರ್ಕಾರದ ಯೋಜನೆಗಳ ಜತೆಗೆ ಸ್ಥಳೀಯ ಜನರ ಸಹಕಾರ ಹಾಗೂ ಸಂಘಟಿತ ಪ್ರಯತ್ನವೂ ಅಗತ್ಯವಾಗಿದೆ. ಗ್ರಾಮಸ್ಥರ ಸಹಭಾಗಿತ್ವದಿಂದ ನಿರ್ಮಾಣಗೊಂಡಿರುವ ಇಂತಹ ಜನೋಪಯೋಗಿ ಕಟ್ಟಡಗಳು ಮುಂದಿನ ಪೀಳಿಗೆಗೂ ಪ್ರಯೋಜನಕಾರಿಯಾಗಲಿವೆ ಎಂದರು.

ಭವನ ನಿರ್ಮಾಣಕ್ಕೆ ಶ್ರಮಿಸಿದ ಶ್ರೀ ಗುಂಡೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ, ಗುರುಹಿರಿಯರು, ದಾನಿಗಳು ಹಾಗೂ ಗ್ರಾಮಸ್ಥರ ಕಾರ್ಯವನ್ನು ಗಣ್ಯರು ಶ್ಲಾಘಿಸಿದರು.

ಶ್ರೀ ಗುಂಡೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಗುಂಡಪ್ಪಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಟಿ. ಈಶ್ವರ, ಸುನೀಲ ಮಹಾಂತಶೆಟ್ಟರ, ಈರಪ್ಪ ಶಿಗ್ಲಿ, ಬೂದನಗೌಡ ನಿಂಗನಗೌಡ್ರ, ಜೋಗೆಪ್ಪ ಶಿರಬಡಗಿ, ಮೃತ್ಯುಂಜಯ ಹಿರೇಮಠ, ಫಕೀರೇಶ ಜವಳಿ, ವಿರೂಪಾಕ್ಷ ಮೇಟಿ, ಎಸ್.ಜಿ. ಪಾಟೀಲ, ಎಸ್.ಜಿ. ಕಲ್ಮೇಶ್ವರಮಠ, ಜಿ.ಬಿ. ಪೂಜಾರ, ವಿ.ಜಿ. ಪಾಟೀಲ, ಆರ್.ಬಿ. ಮಲ್ಲರಡ್ಡಿ, ಆರ್.ಎಸ್. ನಿಂಗನಗೌಡ್ರ, ವಿಶ್ವನಾಥ ಚಿಂಚಲಿ, ಸಿ.ಬಿ. ಪಾಟೀಲ ಸೇರಿದಂತೆ ಶ್ರೀ ಗುಂಡೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯ ಸದಸ್ಯರು, ಗ್ರಾಮದ ಗುರುಹಿರಿಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಂಗವಾಗಿ ಮುಂಡರಗಿಯ ಕರ್ನಾಟಕ ಜಾನಪದ ಕಲಾ ಸಂಘದಿಂದ ಜಾನಪದ ಸಂಭ್ರಮ ಕಾರ್ಯಕ್ರಮ ನಡೆಯಿತು. ಜಾನಪದ ಕಲಾವಿದರು ವಿವಿಧ ಕಲಾ ಪ್ರಕಾರಗಳ ಮೂಲಕ ಗ್ರಾಮೀಣ ಸಂಸ್ಕೃತಿ, ಪರಂಪರೆ ಹಾಗೂ ಜನಜೀವನವನ್ನು ಅನಾವರಣಗೊಳಿಸಿದರು. ಜಾನಪದ ಗೀತೆ, ನೃತ್ಯ ಹಾಗೂ ವಿವಿಧ ಕಲಾ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮೆರುಗು ತಂದವು.

ಗ್ರಾಮದ ಅಭಿವೃದ್ಧಿ ಎಂದರೆ ಕೇವಲ ರಸ್ತೆ ಮತ್ತು ಕಟ್ಟಡಗಳ ನಿರ್ಮಾಣವಲ್ಲ. ಜನರ ನಡುವೆ ಪ್ರೀತಿ, ಸಹಕಾರ, ಸಾಮರಸ್ಯ ಮತ್ತು ಸಾಮಾಜಿಕ ಪ್ರಜ್ಞೆ ಬೆಳೆಯಬೇಕು. ಸಮುದಾಯ ಭವನಗಳು ಎಲ್ಲ ವರ್ಗದ ಜನರನ್ನು ಒಂದುಗೂಡಿಸುವ ಕೇಂದ್ರಗಳಾಗಿ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ವೇದಿಕೆಗಳಾಗಿ ರೂಪುಗೊಳ್ಳಬೇಕು.

– ಜಿ.ಎಸ್. ಪಾಟೀಲ, ವಿಧಾನಸಭೆ ಸಭಾಧ್ಯಕ್ಷರು

ಸೆ. 5ರಿಂದ ಮನೆ ಬಾಗಿಲಿಗೆ ‘ಪ್ರಜಾಸೇವೆ’

0

ವಿಜಯಸಾಕ್ಷಿ ಸುದ್ದಿ, ಗದಗ: ಸಾರ್ವಜನಿಕರ ಕುಂದುಕೊರತೆಗಳಿಗೆ ಕೇವಲ ಉತ್ತರ ನೀಡುವುದಷ್ಟೇ ಅಲ್ಲದೆ, ಸಮಸ್ಯೆಗಳಿಗೆ ತ್ವರಿತ ಹಾಗೂ ತೃಪ್ತಿಕರವಾದ ಗುಣಮಟ್ಟದ ಪರಿಹಾರ ಒದಗಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಪ್ರಜಾಸೇವಾ ಆಂದೋಲನದಡಿ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಆಯೋಜಿಸಲಾಗುತ್ತಿರುವ ಸಭೆಗಳ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸೆಪ್ಟೆಂಬರ್ 5ರಿಂದ ‘ಪ್ರಜಾಸೇವೆ ಅಭಿಯಾನ ನಿಮ್ಮ ಮನೆ ಬಾಗಿಲಿಗೆ’ ಕಾರ್ಯಕ್ರಮ ಆರಂಭವಾಗಲಿದೆ. ಪ್ರತಿ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆವರೆಗೆ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಪ್ರಜಾಸೇವಾ ಆಂದೋಲನ ಸಭೆಗಳು ನಡೆಯಲಿವೆ. ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಇತ್ಯರ್ಥ ಹಾಗೂ ಗುಣಮಟ್ಟದ ಪರಿಹಾರ ದೊರೆಯುವಂತೆ ಅಧಿಕಾರಿಗಳು ಅಗತ್ಯ ಪೂರ್ವಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.

ಜಿಲ್ಲೆಯ ಎಲ್ಲ ತಾಲೂಕು ಹಾಗೂ ಹೋಬಳಿ ಮಟ್ಟದ ಸಭೆಗಳನ್ನು ನಿಗದಿತ ಸಮಯಕ್ಕೆ ಅಚ್ಚುಕಟ್ಟಾಗಿ ಆಯೋಜಿಸಬೇಕು. ಸಭೆಗಳ ನೇರ ಪ್ರಸಾರ ವ್ಯವಸ್ಥೆಯನ್ನು ಮುಖ್ಯಮಂತ್ರಿಗಳ ಕಚೇರಿಗೆ (ಸಿಎಂಒ) ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ, ಸ್ಥಳೀಯ ಶಾಸಕರ ನೇತೃತ್ವದಲ್ಲಿ ಎರಡನೇ ಹಾಗೂ ನಾಲ್ಕನೇ ಶನಿವಾರ ಪ್ರಜಾಸೇವಾ ಆಂದೋಲನ ಸಭೆಗಳು ನಡೆಯಲಿವೆ ಎಂದು ತಿಳಿಸಿದರು.

ಮನೆ-ಮನೆಗೆ ತೆರಳಿ ಕಾರ್ಯಕ್ರಮದ ಕುರಿತು ಜಾಗೃತಿ ಮೂಡಿಸಬೇಕು. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸಭೆಯಲ್ಲಿ ಸಲ್ಲಿಸಲು ಅನುಕೂಲವಾಗುವಂತೆ ನಿಗದಿತ ಅರ್ಜಿ ನಮೂನೆಗಳನ್ನು ಮನೆಗಳಿಗೆ ತಲುಪಿಸಬೇಕು. ಸಭೆಗೆ ಆಗಮಿಸುವಾಗಲೇ ಅರ್ಜಿಗಳನ್ನು ಭರ್ತಿ ಮಾಡಿಕೊಂಡು ಬರುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿಯೇ ಇತ್ಯರ್ಥಪಡಿಸಬಹುದಾದ ಅರ್ಜಿಗಳಿಗೆ ಯಾವುದೇ ವಿಳಂಬ ಮಾಡದೆ ತಕ್ಷಣ ಪರಿಹಾರ ಒದಗಿಸಬೇಕು. ಅಧಿಕಾರ ವ್ಯಾಪ್ತಿಯಲ್ಲಿರುವ ವಿಷಯಗಳಿಗೆ ಮೇಲಾಧಿಕಾರಿಗಳ ಮಾರ್ಗದರ್ಶನದ ನೆಪ ಹೇಳದೆ, ಅಧಿಕಾರಿಗಳು ಸ್ವತಃ ಸೂಕ್ತ ನಿರ್ಧಾರ ಕೈಗೊಂಡು ಸಾರ್ವಜನಿಕರಿಗೆ ಪರಿಹಾರ ನೀಡಬೇಕು ಎಂದು ಕಟ್ಟುನಿಟ್ಟಾಗಿ ಹೇಳಿದರು.

ಸಾರ್ವಜನಿಕರು ಗ್ರಾಮ ಒನ್ ಕೇಂದ್ರಗಳಲ್ಲಿಯೂ ತಮ್ಮ ಅರ್ಜಿ ಹಾಗೂ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ. ಪ್ರಜಾಸೇವೆ ಸಭೆ ನಡೆಯುವ ಸ್ಥಳದಲ್ಲೂ ಗ್ರಾಮ ಒನ್ ಮಳಿಗೆ ಸ್ಥಾಪಿಸಿ, ಕಂಪ್ಯೂಟರ್ ಹಾಗೂ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲಾಗುವುದು. ಸ್ಥಳದಲ್ಲಿಯೇ ಆನ್‌ಲೈನ್ ಮೂಲಕ ಅರ್ಜಿ ಹಾಗೂ ದೂರು ಸಲ್ಲಿಸಲು ಅವಕಾಶ ನೀಡಲಾಗುವುದು.

ಸಾರ್ವಜನಿಕರು ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ, ಸಹಾಯವಾಣಿ ಸಂಖ್ಯೆ 1902 ಅಥವಾ ipgrs.karnataka.gov.in ಮೂಲಕವೂ ಅರ್ಜಿ ಹಾಗೂ ಅಹವಾಲುಗಳನ್ನು ಸಲ್ಲಿಸಬಹುದು ಎಂದು ತಿಳಿಸಿದರು.

ಪಿಂಚಣಿ, ಪಹಣಿ, ವಸತಿ, ಹೊಸ ಪಡಿತರ ಚೀಟಿ, ಸಾರಿಗೆ, ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ದೇವಸ್ಥಾನ ಜೀರ್ಣೋದ್ಧಾರ, ಸರ್ಕಾರಿ ಶಾಲೆ ಹಾಗೂ ಅಂಗನವಾಡಿಗಳ ಅಭಿವೃದ್ಧಿ, ವಿಬಿಜಿ ರಾಮ್‌ಜಿ, ಪೊಲೀಸ್ ಸೇವೆ, ಖಾಸಗಿ ಉದ್ಯೋಗ, ಕೆರೆ ತುಂಬಿಸುವ ಯೋಜನೆ, ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಸಾರ್ವಜನಿಕರು ಅರ್ಜಿ ಹಾಗೂ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಸ್ವೀಕೃತ ಅರ್ಜಿಗಳನ್ನು ಪ್ರತಿ ಬುಧವಾರ ತಾಲೂಕು, ಉಪವಿಭಾಗ ಹಾಗೂ ಜಿಲ್ಲಾ ಮಟ್ಟದಲ್ಲಿ ಮೂರು ಹಂತಗಳಲ್ಲಿ ಪರಿಶೀಲಿಸಿ ವಿಲೇವಾರಿ ಕ್ರಮ ಕೈಗೊಳ್ಳಲಾಗುವುದು. ಬೆಳಿಗ್ಗೆ 9ರಿಂದ 11 ಗಂಟೆಯವರೆಗೆ ತಾಲೂಕು ಮಟ್ಟದಲ್ಲಿ, ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಉಪವಿಭಾಗಾಧಿಕಾರಿ ಮಟ್ಟದಲ್ಲಿ ಹಾಗೂ ಮಧ್ಯಾಹ್ನ 3ರಿಂದ ಸಂಜೆ 5 ಗಂಟೆಯವರೆಗೆ ಜಿಲ್ಲಾಧಿಕಾರಿ ಮಟ್ಟದಲ್ಲಿ ಅರ್ಜಿಗಳ ಪರಿಶೀಲನೆ ನಡೆಯಲಿದೆ ಎಂದು ತಿಳಿಸಿದರು.

ಅರ್ಜಿ ವಿಲೇವಾರಿ ಪ್ರಗತಿ ಕುರಿತು ಪ್ರತಿ 15 ದಿನಕ್ಕೊಮ್ಮೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿಲ್ಲೆಗೆ ಭೇಟಿ ನೀಡಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರಕ್ಕೆ ಸೂಚನೆ ನೀಡಲಿದ್ದಾರೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳು ರಾಜ್ಯಮಟ್ಟದ ಪ್ರಗತಿ ಪರಿಶೀಲನಾ ಸಭೆಯೂ ನಡೆಯಲಿದೆ ಎಂದು ಹೇಳಿದರು.

ಸಾರ್ವಜನಿಕರಿಗೆ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಇಲಾಖೆಗಳ ಸೇವೆಗಳ ಕುರಿತು ಸಮರ್ಪಕ ಮಾಹಿತಿ ದೊರೆಯುವಂತೆ ಪ್ರತಿಯೊಂದು ಇಲಾಖೆಯೂ ತಮ್ಮ ಯೋಜನೆಗಳ ವಿವರಗಳನ್ನು ಒಳಗೊಂಡ ಮಾಹಿತಿ ಪುಸ್ತಕ ಅಥವಾ ಮಾಹಿತಿ ಫಲಕಗಳನ್ನು ಪ್ರದರ್ಶಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್., ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಡಿವೈಎಸ್‌ಪಿ ಮುರ್ತುಜಾ ಖಾದ್ರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಅರ್ಜಿದಾರರಿಗೆ ಕೇವಲ ಉತ್ತರ ನೀಡುವುದಷ್ಟೇ ಅಧಿಕಾರಿಗಳ ಕರ್ತವ್ಯವಲ್ಲ. ಅವರ ಸಮಸ್ಯೆಗೆ ಸಂಪೂರ್ಣ ತೃಪ್ತಿಕರ ಹಾಗೂ ಗುಣಮಟ್ಟದ ಪರಿಹಾರ ಒದಗಿಸಬೇಕು. ತಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ಸಮಸ್ಯೆಗಳನ್ನು ವಿಳಂಬ ಮಾಡದೆ ಸ್ಥಳೀಯ ಮಟ್ಟದಲ್ಲಿಯೇ ಇತ್ಯರ್ಥಪಡಿಸಬೇಕು.

– ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ

ಮನೇರೆಗಾ ಕಾಮಗಾರಿಯಲ್ಲಿ₹37.63 ಲಕ್ಷ ಆಕ್ಷೇಪಣೆ!

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಕಳೆದ ೨೦೨೫-೨೬ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ವಿವಿಧ ಕಾಮಗಾರಿಗಳಲ್ಲಿ ದಾಖಲೆಗಳ ಹೊಂದಾಣಿಕೆ ಇಲ್ಲದಿರುವುದು ಸೇರಿದಂತೆ ಹಲವು ಕಾರಣಗಳಿಂದ ₹೩೭.೬೩ ಲಕ್ಷ ಮೊತ್ತವನ್ನು ಆಕ್ಷೇಪಣೆಗೆ ಒಳಪಡಿಸಲಾಗಿದೆ ಎಂದು ಮನರೇಗಾ ತಾಲೂಕು ಸಂಪನ್ಮೂಲ ವ್ಯಕ್ತಿ ಸಂತೋಷ ಪಾಟೀಲ ತಿಳಿಸಿದರು.

ಲಕ್ಕುಂಡಿ ಗ್ರಾಮ ಪಂಚಾಯಿತಿ ವತಿಯಿಂದ ಇಲ್ಲಿನ ದುರ್ಗಾದೇವಿ ಸಮುದಾಯ ಭವನದಲ್ಲಿ ನಡೆದ ೨೦೨೫-೨೬ನೇ ಸಾಲಿನ ಮನರೇಗಾ ಯೋಜನೆ ಹಾಗೂ ೧೫ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆ ಗ್ರಾಮಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.

ದನದ ದೊಡ್ಡಿ, ಮನೆ ನಿರ್ಮಾಣ, ಬದು ನಿರ್ಮಾಣ, ಅರಣ್ಯೀಕರಣ, ಸಿ.ಸಿ. ರಸ್ತೆ, ಗಟಾರು ನಿರ್ಮಾಣ, ಶಾಲಾ ಆಟದ ಮೈದಾನ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ₹೧,೦೯,೪೧,೨೪೯ ಕೂಲಿ ಮೊತ್ತ ಹಾಗೂ ₹೧೩,೭೭,೩೨೨ ಸಾಮಗ್ರಿ ಮೊತ್ತ ಸೇರಿ ಒಟ್ಟು ₹೧,೨೩,೧೮,೫೭೧ ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.

ಕಾಮಗಾರಿಗಳ ಅಳತೆ ಪುಸ್ತಕಗಳಿಗೆ ಚೆಕ್ ಮೆಷರ್‌ಮೆಂಟ್ ಇಲ್ಲದಿರುವುದು, ಬಿಲ್‌ಗಳಲ್ಲಿ ಪೂರೈಕೆದಾರರ ಸಹಿ ಇಲ್ಲದಿರುವುದು, ಕೆಟಿಟಿಪಿ ನಿಯಮಗಳನ್ನು ಪಾಲಿಸದಿರುವುದು ಹಾಗೂ ಅರಣ್ಯ ಇಲಾಖೆ ಕಾಮಗಾರಿಗಳಿಗೆ ನೀರು ಹಾಕಿರುವ ಕುರಿತು ಛಾಯಾಚಿತ್ರಗಳಿಲ್ಲದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ₹೩೭,೬೩,೮೪೧ ಮೊತ್ತವನ್ನು ಆಕ್ಷೇಪಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು.

೧೫ನೇ ಹಣಕಾಸು ಯೋಜನೆಯಡಿ ಕುಡಿಯುವ ನೀರು, ಬೀದಿ ದೀಪ, ಶಾಲಾ ಮೈದಾನ, ಗಟಾರು, ಹೈಮಾಸ್ಟ್, ಸ್ವಚ್ಛತೆ ಸೇರಿದಂತೆ ೧೧ ಕಾಮಗಾರಿಗಳಿಗೆ ₹೫೦,೨೩,೦೯೮ ವೆಚ್ಚ ಮಾಡಲಾಗಿದೆ. ಈ ಪೈಕಿ ₹೫೯,೬೭೪ ತೆರಿಗೆ ಭರಣ ಮಾಡಿಲ್ಲ ಎಂದು ಸಭೆಗೆ ತಿಳಿಸಲಾಯಿತು.

ಗ್ರಾಮಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕುಬೇರಪ್ಪ ಬೆಂತೂರು, ಕಳೆದ ಎರಡು-ಮೂರು ವರ್ಷಗಳಿಂದ ಸಾಮಾಜಿಕ ಪರಿಶೋಧನೆಯಲ್ಲಿ ವಿವಿಧ ಕಾಮಗಾರಿಗಳ ಲಕ್ಷಾಂತರ ರೂಪಾಯಿ ಮೊತ್ತವನ್ನು ಆಕ್ಷೇಪಣೆಗೆ ಒಳಪಡಿಸಲಾಗುತ್ತಿದೆ. ಆದರೆ ಆಕ್ಷೇಪಣೆಗೆ ಒಳಪಟ್ಟ ಹಣದ ವಸೂಲಾತಿ ಆಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಅಧಿಕಾರಿಗಳು ಗ್ರಾಮಸಭೆಗೆ ಮಾಹಿತಿ ನೀಡುವುದಿಲ್ಲ. ಇದರಿಂದ ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ದೊರೆಯದೆ ಚರ್ಚೆ ಮುಗಿದುಹೋಗುತ್ತದೆ ಎಂದು ದೂರಿದರು.

ಲಕ್ಷ ರೂಪಾಯಿ ಮೀರಿದ ಕಾಮಗಾರಿಗಳನ್ನು ಟೆಂಡರ್ ಕರೆಯದೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಪ್ರಸ್ತುತ ನಡೆಯುತ್ತಿರುವ ವಿಬಿಜಿ ರಾಮ್‌ಜಿ ಕಾಮಗಾರಿಗಳಲ್ಲಿ ವಿಕಲಚೇತನರನ್ನು ಕೂಲಿ ಕೆಲಸಕ್ಕೆ ತೆಗೆದುಕೊಳ್ಳದಿರುವ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು.

ಎಂಕೆಬಿಎಸ್ ಶಾಲೆಯಲ್ಲಿ ಶೌಚಾಲಯ ನಿರ್ಮಾಣ, ಶಾಲಾ ಮೈದಾನದಲ್ಲಿರುವ ತೆರೆದ ಬಾವಿಗೆ ಮುಚ್ಚಳ ಅಳವಡಿಕೆ ಸೇರಿದಂತೆ ಇತರ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಾಕಷ್ಟು ಬಾರಿ ತಿಳಿಸಿದರೂ ಕಾಳಜಿ ವಹಿಸಿಲ್ಲ ಎಂದು ಗ್ರಾಮಸ್ಥರು ದೂರಿದರು.

ಕಳೆದ ವರ್ಷದ ಉದ್ಯೋಗ ಖಾತ್ರಿ ಯೋಜನೆಯ ಆಕ್ಷೇಪಣೆ ಹಣದ ವಸೂಲಾತಿ ಕುರಿತು ಗ್ರಾಮಸಭೆಯಲ್ಲಿ ಚರ್ಚೆಯಾಗದಿರುವ ಬಗ್ಗೆ ನಾಗಮ್ಮ ಹಾಲಿನವರ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಪಿಡಿಒ ಉತ್ತರಿಸಿದರು.

ಪ್ರಸ್ತುತ ಆರಂಭವಾಗಿರುವ ಕಾಮಗಾರಿ ಸ್ಥಳಗಳು ದೂರದಲ್ಲಿದ್ದು, ಕೆಲಸದ ಸ್ಥಳಕ್ಕೆ ತೆರಳಲು ಹೆಚ್ಚಿನ ಸಮಯ ಬೇಕಾಗುತ್ತಿದೆ. ಆದ್ದರಿಂದ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಕೂಲಿ ಕಾರ್ಮಿಕರು ಗ್ರಾಮಸಭೆಯಲ್ಲಿ ಒತ್ತಾಯಿಸಿದರು.

ಸತತವಾಗಿ ೧೨೫ ದಿನಗಳ ಕೆಲಸ ನೀಡಬೇಕು, ಕೆಲಸದ ಸ್ಥಳಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ಕೂಲಿ ಮೊತ್ತವನ್ನು ಶೀಘ್ರ ಪಾವತಿಸಬೇಕು ಹಾಗೂ ಆರೋಗ್ಯ ಕಿಟ್ ವಿತರಿಸಬೇಕು ಎಂದು ಕಾರ್ಮಿಕರು ಆಗ್ರಹಿಸಿದರು.

ಇದಕ್ಕೆ ಸ್ಪಂದಿಸಿದ ಪಿಡಿಒ ಅಮೀರನಾಯಕ, ಸಾರಿಗೆ ವ್ಯವಸ್ಥೆ ಕಲ್ಪಿಸುವ ಕುರಿತು ಯಾವುದೇ ಆದೇಶ ಬಂದಿಲ್ಲ. ಆದರೆ ಕೆಲಸದ ಸ್ಥಳಗಳಿಗೆ ೨೦ ಕ್ಯಾನ್ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಲಕ್ಕುಂಡಿಯಲ್ಲಿ ವಿಬಿಜಿ ರಾಮ್‌ಜಿ ಕಾಮಗಾರಿ ಆರಂಭಿಸಲಾಗಿದ್ದು, ಕಾರ್ಮಿಕರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದ ಗ್ರಾಮೀಣ ಕ್ಷೇತ್ರ ಸಮನ್ವಯಾಧಿಕಾರಿ ಜೆ.ಎ. ಭಾವಿಕಟ್ಟಿ ಮಾತನಾಡಿದರು. ಆಡಳಿತಾಧಿಕಾರಿ ಶಿವಕುಮಾರ ವಾಲಿ, ತಾಂತ್ರಿಕ ಸಹಾಯಕ ವಿಜಯ ಅಬ್ಬಿಗೇರಿ, ಸಾಮಾಜಿಕ ಪರಿಶೋಧನೆ ತಂಡದ ವಸಂತ ಹಾದಿಮನಿ, ಮಲ್ಲಪ್ಪ ಜಿನಗಿ, ಮೈಲಾರಪ್ಪ ಹುಯಿಲಗೋಳ, ಮಂಜುನಾಥ ಹುಡೇದ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಸಾಮಾಜಿಕ ಪರಿಶೋಧನೆಯಲ್ಲಿ ಲಕ್ಷಾಂತರ ರೂಪಾಯಿ ಮೊತ್ತವನ್ನು ಆಕ್ಷೇಪಣೆಗೆ ಒಳಪಡಿಸಲಾಗುತ್ತಿದೆ. ಆದರೆ ಆ ಹಣದ ವಸೂಲಾತಿ ಏನಾಯಿತು ಎಂಬ ಮಾಹಿತಿ ಗ್ರಾಮಸಭೆಗೆ ನೀಡಬೇಕು.

— ಕುಬೇರಪ್ಪ ಬೆಂತೂರು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ

ಧರ್ಮಗಳ ನಡುವೆ ದ್ವೇಷ ಬೇಡ… ಸಂವಾದ ಬೇಕು: ರಂಭಾಪುರಿ ಶ್ರೀ

0

ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು: ಜವಾಬ್ದಾರಿಯುತ ಸ್ಥಾನದಲ್ಲಿರುವ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಧರ್ಮದಂತಹ ಸೂಕ್ಷ್ಮ ವಿಷಯಗಳ ಕುರಿತು ಹೆಚ್ಚು ಸಂಯಮದಿಂದ ಮಾತನಾಡಬೇಕಿತ್ತು ಎಂದು ವೀರಶೈವ ಪಂಚಪೀಠಗಳ ಒಕ್ಕೂಟ ವ್ಯವಸ್ಥೆಯ ಸಂಚಾಲಕರಾದ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ವಿಷಾದ ಹಾಗೂ ಆತಂಕ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಹಿಂದೂ ಸಂಸ್ಕೃತಿ ಹಾಗೂ ಇಸ್ಲಾಂ ಧರ್ಮದ ಕುರಿತು ಸಚಿವರು ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿರುವ ಹಿನ್ನೆಲೆಯಲ್ಲಿ, ಬುಧವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ನಡೆದ ಶ್ರಾವಣ ಮಾಸದ ಧರ್ಮ ಸಮಾರಂಭದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ಯಾವುದೇ ಧರ್ಮವನ್ನು ಗೌರವಿಸುವುದು ತಪ್ಪಲ್ಲ. ಆದರೆ, ಒಂದು ಧರ್ಮವನ್ನು ಮತ್ತೊಂದು ಧರ್ಮದೊಂದಿಗೆ ಹೋಲಿಸಿ ಶ್ರೇಷ್ಠತೆಯ ಮಾನದಂಡದಲ್ಲಿ ಮಾತನಾಡುವುದು ಸಮಾಜದಲ್ಲಿ ಅನಗತ್ಯ ಭಾವನಾತ್ಮಕ ಗೊಂದಲಕ್ಕೆ ಕಾರಣವಾಗಬಹುದು ಎಂದು ಹೇಳಿದರು.

ಭಾರತದ ವೈಶಿಷ್ಟ್ಯವೇ ಸರ್ವಧರ್ಮ ಸಮಭಾವ, ಪರಸ್ಪರ ಗೌರವ ಮತ್ತು ಸಹಬಾಳ್ವೆಯಾಗಿದೆ. ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ವಿಶಾಲ ಮಾನವೀಯ ದೃಷ್ಟಿಕೋನವನ್ನು ನಮ್ಮ ಸಂಸ್ಕೃತಿ ಪ್ರತಿಪಾದಿಸಿದೆ ಎಂದು ತಿಳಿಸಿದರು.

ಸಚಿವರ ಹೇಳಿಕೆಯನ್ನು ವಿರೋಧಿಸುವ ನೆಪದಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾತನಾಡುವುದು ಕೂಡ ಸರಿಯಲ್ಲ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಸ್ಪಷ್ಟಪಡಿಸಿದರು.

ವಿರೋಧ ಇರಬೇಕಾದುದು ವ್ಯಕ್ತಿಯ ಹೇಳಿಕೆಯ ವಿರುದ್ಧವೇ ಹೊರತು ಯಾವುದೇ ಸಮುದಾಯದ ವಿರುದ್ಧ ಅಲ್ಲ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಪರಸ್ಪರ ಗೌರವ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.

ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರಡ್ಡಿ ಅವರು ವಿದ್ಯಾರ್ಥಿಗಳು ಹಾಗೂ ಯುವಜನಾಂಗಕ್ಕೆ ಮಾರ್ಗದರ್ಶನ ನೀಡುವ ಮಹತ್ವದ ಸ್ಥಾನದಲ್ಲಿದ್ದಾರೆ. ಆದ್ದರಿಂದ ಅವರ ಸಾರ್ವಜನಿಕ ಹೇಳಿಕೆಗಳು ಸಮಾಜದಲ್ಲಿ ಏಕತೆ, ಶಾಂತಿ ಮತ್ತು ಪರಸ್ಪರ ಗೌರವವನ್ನು ಬೆಳೆಸುವಂತಿರಬೇಕು ಎಂದು ಅಭಿಪ್ರಾಯಪಟ್ಟರು.

ಯಾವುದೇ ಧರ್ಮವನ್ನು ಮತ್ತೊಂದು ಧರ್ಮಕ್ಕಿಂತ ಮೇಲು ಅಥವಾ ಕೀಳು ಎಂದು ನೋಡುವ ಬದಲು ಎಲ್ಲ ಧರ್ಮಗಳಿಗೂ ಸಮಾನ ಗೌರವ ನೀಡುವ ನಿಲುವು ಸ್ಪಷ್ಟವಾಗಬೇಕು. ಅವರವರ ಧರ್ಮ ಅವರಿಗೆ ಶ್ರೇಷ್ಠವಾಗಿದೆ ಎಂದು ಹೇಳಿದರು.

ಹಿಂದೂ ಸಂಸ್ಕೃತಿಯ ಗೌರವವನ್ನು ಎತ್ತಿಹಿಡಿಯುವುದು ಮತ್ತೊಂದು ಧರ್ಮದ ವಿರೋಧವಲ್ಲ. ಅದೇ ರೀತಿ ಇತರ ಧರ್ಮಗಳನ್ನು ಗೌರವಿಸುವುದು ಹಿಂದೂ ಸಂಸ್ಕೃತಿಯನ್ನು ಕೀಳಾಗಿ ಕಾಣುವುದೂ ಅಲ್ಲ ಎಂದು ತಿಳಿಸಿದರು. ಶ್ರೀ ಉಜ್ಜಯಿನಿ, ಶ್ರೀ ಕೇದಾರ, ಶ್ರೀಶೈಲ ಹಾಗೂ ಶ್ರೀ ಕಾಶಿ ಜಗದ್ಗುರುಗಳ ಪರವಾಗಿಯೂ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ತಿಳಿಸಿದ್ದಾರೆ.

ಧರ್ಮಗಳ ನಡುವೆ ಸಂಘರ್ಷವಲ್ಲ, ಸಂವಾದ ಬೇಕು. ಸಮುದಾಯಗಳ ನಡುವೆ ದ್ವೇಷವಲ್ಲ, ಪರಸ್ಪರ ಗೌರವ ಬೇಕು. ಸಚಿವರಿಂದ ವಿಭಜನೆಯ ಮಾತಲ್ಲ, ಸಮಾಜವನ್ನು ಒಗ್ಗೂಡಿಸುವ ಮಾತುಗಳನ್ನು ನಿರೀಕ್ಷಿಸುತ್ತೇವೆ.

— ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು

ಶಾಲೆಯ ಮೇಲ್ಛಾವಣಿ ಕುಸಿದು ನಾಲ್ವರು ವಿದ್ಯಾರ್ಥಿಗಳಿಗೆ ಗಾಯ!

0

ಬಾಗಲಕೋಟೆ: ತರಗತಿ ನಡೆಯುತ್ತಿದ್ದ ವೇಳೆ ಸರ್ಕಾರಿ ಶಾಲೆಯ ಮೇಲ್ಛಾವಣಿಯ ಕಾಂಕ್ರೀಟ್ ಕುಸಿದು ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ತಾಂಡಾದಲ್ಲಿ ನಡೆದಿದೆ.

ದಿನನಿತ್ಯದಂತೆ ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದ ವೇಳೆ ಮೇಲ್ಛಾವಣಿಯ ಪ್ಲಾಸ್ಟರಿಂಗ್ ಹಾಗೂ ಕಾಂಕ್ರೀಟ್ ಚೂರುಗಳು ಏಕಾಏಕಿ ಮಕ್ಕಳ ಮೇಲೆ ಬಿದ್ದಿವೆ. ಘಟನೆಯಲ್ಲಿ ನಾಲ್ವರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಗಾಯಗೊಂಡ ಮಕ್ಕಳನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಶಾಲಾ ಕಟ್ಟಡವು ಸಂಪೂರ್ಣ ಶಿಥಿಲಗೊಂಡಿದ್ದು, ಮೇಲ್ಛಾವಣಿಯ ಕಾಂಕ್ರೀಟ್ ಕಿತ್ತುಬಂದಿರುವ ಪರಿಣಾಮ ಒಳಭಾಗದ ಕಬ್ಬಿಣದ ಸರಳುಗಳು ಕಾಣಿಸುತ್ತಿವೆ. ಇಂತಹ ಅಪಾಯಕಾರಿ ಕಟ್ಟಡದಲ್ಲೇ ಮಕ್ಕಳು ಪ್ರತಿನಿತ್ಯ ತರಗತಿಗೆ ಹಾಜರಾಗಬೇಕಾದ ಪರಿಸ್ಥಿತಿ ಇದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಟ್ಟಡದ ದುಸ್ಥಿತಿ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ ದುರಸ್ತಿಗೆ ಕ್ರಮ ಕೈಗೊಂಡಿಲ್ಲ ಎಂದು ಪೋಷಕರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೊಡ್ಡ ಅನಾಹುತ ಸಂಭವಿಸುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಂಡು ಶಾಲಾ ಕಟ್ಟಡವನ್ನು ನವೀಕರಿಸಬೇಕು ಹಾಗೂ ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸಹಪಾಠಿಗಳ ಜೊತೆ ಬಿಸಿಯೂಟ ಮಾಡುತ್ತಿದ್ದಾಗಲೇ 14ರ ಬಾಲಕ ಕುಸಿದುಬಿದ್ದು ಸಾವು!

0

ಮಂಡ್ಯ: ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದ ವೇಳೆ 9ನೇ ತರಗತಿ ವಿದ್ಯಾರ್ಥಿಯೊಬ್ಬ ಏಕಾಏಕಿ ಕುಸಿದುಬಿದ್ದು, ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಸೋಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ 14 ವರ್ಷದ ವೀರಮಣಿ ಎಂದು ಗುರುತಿಸಲಾಗಿದೆ. ಎಂದಿನಂತೆ ಮಧ್ಯಾಹ್ನ ಇತರ ಸಹಪಾಠಿಗಳೊಂದಿಗೆ ಶಾಲೆಯಲ್ಲಿ ಬಿಸಿಯೂಟ ಸೇವಿಸುತ್ತಿದ್ದ ವೇಳೆ ವೀರಮಣಿ ಏಕಾಏಕಿ ಮೂರ್ಛೆಹೋಗಿ ಕೆಳಗೆ ಬಿದ್ದಿದ್ದಾನೆ.

ತಕ್ಷಣ ಶಿಕ್ಷಕರು ಬಾಲಕನನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಬಾಲಕನ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ವೀರಮಣಿ ಮೃತಪಟ್ಟಿದ್ದಾನೆ. ವೈದ್ಯರು ತಪಾಸಣೆ ನಡೆಸಿದ ಬಳಿಕ ಬಾಲಕ ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ಶಾಲಾ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿಯಾಗಿರುವುದು ಸೋಮನಹಳ್ಳಿ ಗ್ರಾಮದಲ್ಲಿ ಆಘಾತ ಮೂಡಿಸಿದೆ. ಬಾಲಕನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.

ಕೋಲಾರ: ಚಲಿಸುತ್ತಿದ್ದ ಟಿಪ್ಪರ್‌ನಲ್ಲಿ ಏಕಾಏಕಿ ಬೆಂಕಿ; ಚಾಲಕ ಪ್ರಾಣಾಪಾಯದಿಂದ ಪಾರು!

0

ಕೋಲಾರ: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯಲ್ಲಿ ಚಲಿಸುತ್ತಿದ್ದ ಟಿಪ್ಪರ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ವಾಹನ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಡಿ.ಕೆ.ಹಳ್ಳಿ ಪ್ಲಾಂಟೇಶನ್ ಬಳಿ ನಡೆದಿದೆ.

ಬೆಂಗಳೂರಿನಿಂದ ವಿ.ಕೋಟಗೆ ತೆರಳುತ್ತಿದ್ದ ವೇಳೆ ಟಿಪ್ಪರ್‌ನ ಇಂಜಿನ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಚಾಲಕ ಸಂತೋಷ್ ಟಿಪ್ಪರ್ ನಿಲ್ಲಿಸಿ ಕೆಳಗಿಳಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಂಜಿನ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿಯ ತೀವ್ರತೆಗೆ ಟಿಪ್ಪರ್ ಸಂಪೂರ್ಣವಾಗಿ ಸುಟ್ಟುಹೋಗಿದೆ.

ನಂಗಲಿ ಮೂಲದ ಸುರೇಶ್ ಅವರಿಗೆ ಸೇರಿದ ಟಿಪ್ಪರ್ ಇದಾಗಿದೆ ಎಂದು ತಿಳಿದುಬಂದಿದೆ. ಘಟನೆ ಬೆಮೆಲ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದಾರೆ.

ನೇಪಾಳದಲ್ಲಿ ವಿನಾಶಕಾರಿ ಪ್ರವಾಹ: ಸಾವಿನ ಸಂಖ್ಯೆ 1,127ಕ್ಕೆ ಏರಿಕೆ!

0

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಾಗೂ ಸರಣಿ ಭೂಕುಸಿತಗಳಿಂದ ಸಾವನ್ನಪ್ಪಿದವರ ಸಂಖ್ಯೆ 1127ಕ್ಕೆ ಏರಿಕೆಯಾಗಿದೆ.

ಇನ್ನೂ 4 ಸಾವಿರಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ಅವರಲ್ಲಿ 580ಕ್ಕೂ ಹೆಚ್ಚು ವಿದೇಶಿಗರು ಸೇರಿದ್ದಾರೆ ಎಂದು ವರದಿಯಾಗಿದೆ.

ಪ್ರವಾಹ ಹಾಗೂ ಭೂಕುಸಿತದಿಂದ ಸಂಪರ್ಕ ಕಡಿತಗೊಂಡಿದ್ದ ದುರ್ಗಮ ಪ್ರದೇಶಗಳಿಗೆ ರಕ್ಷಣಾ ಪಡೆಗಳು ಮತ್ತು ಹೆಲಿಕಾಪ್ಟರ್‌ಗಳ ಮೂಲಕ ತಲುಪಲಾಗುತ್ತಿದೆ. ಸಂತ್ರಸ್ತರ ರಕ್ಷಣೆ ಹಾಗೂ ಪರಿಹಾರ ಸಾಮಗ್ರಿಗಳನ್ನು ತಲುಪಿಸುವ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾಹಿತಿ ಪ್ರಕಾರ, ಪ್ರವಾಹ ಪೀಡಿತ ಪ್ರದೇಶಗಳಿಂದ ಒಟ್ಟು 163 ಭಾರತೀಯರನ್ನು ರಕ್ಷಿಸಲಾಗಿದೆ. ಚೀನಾದಲ್ಲಿದ್ದ 151 ಭಾರತೀಯರನ್ನು ಕೂಡ ರಕ್ಷಿಸಲಾಗಿದ್ದು, ಅವರನ್ನು ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ.

ರಕ್ಷಣಾ ಕಾರ್ಯಾಚರಣೆ ಹಾಗೂ ತಾಂತ್ರಿಕ ನೆರವಿಗಾಗಿ ಭಾರತವು ತಜ್ಞರ ತಂಡಗಳನ್ನು ನೇಪಾಳಕ್ಕೆ ಕಳುಹಿಸಿದೆ. ಪ್ರವಾಹದಲ್ಲಿ ಮೃತಪಟ್ಟವರ ಗುರುತು ಪತ್ತೆಗಾಗಿ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸುವುದು ಸೇರಿದಂತೆ ವಿವಿಧ ರೀತಿಯ ತಾಂತ್ರಿಕ ಸಹಕಾರವನ್ನು ಭಾರತೀಯ ತಂಡಗಳು ನೀಡುತ್ತಿವೆ.

ಭೂಕುಸಿತದಿಂದ ಹಲವು ಹೆದ್ದಾರಿಗಳು ಹಾಗೂ ಸೇತುವೆಗಳು ಕೊಚ್ಚಿಹೋಗಿರುವ ಹಿನ್ನೆಲೆಯಲ್ಲಿ ಅನೇಕ ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ನೇಪಾಳಿ ಸೇನೆ, ಸಶಸ್ತ್ರ ಪೊಲೀಸ್ ಪಡೆ ಹಾಗೂ ಭಾರತ ಸೇರಿದಂತೆ ವಿವಿಧ ದೇಶಗಳ ರಕ್ಷಣಾ ತಂಡಗಳು ಹೆಲಿಕಾಪ್ಟರ್‌ಗಳ ಮೂಲಕ ದುರ್ಗಮ ಪ್ರದೇಶಗಳಿಗೆ ತೆರಳಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.