ಇಲ್ಲಿನ ಹುಬ್ಬಳ್ಳಿ ರಸ್ತೆಗೆ ಹೊಂದಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಜು ಕಲಾಲ ಎಂಬುವರಿಗೆ ಸೇರಿದ ಸಂಜು ದಾಭಾದಲ್ಲಿ ಭಾರೀ ಗಾತ್ರದ ನಾಗರಹಾವೊಂದು ಪ್ರತ್ಯಕ್ಷವಾಗಿ ಕೆಲಕಾಲ ಆತಂಕ ಸೃಷ್ಟಿಸಿತು.
ಸುಮಾರು ಆರು ಅಡಿ ಉದ್ದವಿರುವ ಈ ನಾಗರಹಾವು ದಾಭಾದ ಆವರಣದಲ್ಲಿ ಸಂಗ್ರಹಿಸಿದ್ದ ಪಾಳು ಸರಕುಗಳ ಸಂದುಗಳಲ್ಲಿ ನುಗ್ಗಿ ಮರೆಯಾಗುತ್ತಿತ್ತು.
ಸದಾಕಾಲ ಉರಗಗಳ ರಕ್ಷಣೆಗೆಂದೇ ಸಿದ್ಧವಾಗಿದ್ದು, ಯಾವುದೇ ಭಾಗದಿಂದ ಕರೆಬಂದರೂ ತಕ್ಷಣ ರಕ್ಷಣಾ ಕಾರ್ಯಕ್ಕೆ ಧಾವಿಸುವ ಬುಡ್ಡೇಸಾಬ್ ಅಲಿಯಾಸ್ ಸ್ನೇಕ್ ಬುಡ್ಡಾರನ್ನು ಸ್ಥಳಕ್ಕೆ ಕರೆಯಿಸಿದಾಗ, ಅವರೂ ಕೂಡ ಈ ನಾಗರವನ್ನು ಸೆರೆಹಿಡಿಯುವಲ್ಲಿ ಹರಸಾಹಸ ಪಡಬೇಕಾಯಿತು.
ಮುಂಗುಸಿಗಳೊಂದಿಗೆ ಸೆಣಸಾಡಿ ಈಗಾಗಲೇ ತಲೆ, ಹೆಡೆಯ ಭಾಗದಲ್ಲಿ ಗಾಯಗೊಂಡಂತಿದ್ದ ನಾಗರಾಜನ ರೋಷಾವೇಷವೂ ಅಷ್ಟೇ ಇತ್ತು. ಸ್ಥಳೀಯರ ಸಹಕಾರದಲ್ಲಿ ಹಾವನ್ನು ಹಿಡಿದಾಗ ಸಿಟ್ಟಿನಿಂದ ಹೆಡೆಯೆತ್ತಿ ಭುಸ್ಸೆನ್ನುತ್ತ ಎರಡು-ಮೂರು ಅಡಿ ಎತ್ತರಕ್ಕೆ ಹೆಡೆಯೆತ್ತಿ ನಿಲ್ಲುತ್ತಿತ್ತು.
ಇದೇ ಕಾರ್ಯದಲ್ಲಿ ಪರಿಣಿತರಾಗಿರುವ ಸ್ನೇಕ್ ಬುಡ್ಡಾ ಉರಗವನ್ನು ಸುರಕ್ಷಿತವಾಗಿ ಹಿಡಿದು ಮುಚ್ಚಳವಿರುವ ಕ್ಯಾನ್‌ನಲ್ಲಿ ತುಂಬಿ ಸೂಕ್ತ ಸ್ಥಳದಲ್ಲಿ ಬಿಟ್ಟುಬಂದಾಗ ಸ್ಥಳೀಯರು ನಿಟ್ಟುಸಿರಾದರು.
ಜಿಲ್ಲಾಧಿಕಾರಿಗಳೆದುರು ಅಳಲು ತೋಡಿಕೊಂಡ ಕಾಲೇಜಿನ ಪ್ರಾಚಾರ್ಯರು
ವಿಜಯಸಾಕ್ಷಿ ಸುದ್ದಿ, ರೋಣ
‘ನೋಡಿ ಮೇಡಂ, ಇದು ಹಗಲಿನಲ್ಲಿ ಮಾತ್ರ ವಿದ್ಯಾ ಕೇಂದ್ರ. ಸಂಜೆಯ ಕತ್ತಲು ಕವಿಯುತ್ತಿದ್ದಂತೆಯೇ ಬಾರ್ ಹಾಗೂ ರೆಸ್ಟೋರೆಂಟ್ ಆಗಿ ಪರಿವರ್ತನೆಯಾಗುತ್ತದೆ. ಈ ಅಧ್ವಾನಗಳಿಂದ ನಾವು ರೋಸಿಹೋಗಿದ್ದೇವೆ. ಈ ವಿಷಯವಾಗಿ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವ ಪ್ರಯೋಜನವಾಗುತ್ತಿಲ್ಲ’ ಎಂದು ಪಟ್ಟಣದ ಸರಕಾರಿ ಪಿಯು ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಎಸ್. ಮಾನೇದರು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.ರ ಬಳಿ ಅಳಲು ತೋಡಿಕೊಂಡರು.
ಜಿಲ್ಲಾಧಿಕಾರಿಗಳು ಮತದಾರ ಪಟ್ಟಿ ಪರಿಷ್ಕರಣೆ ಹಾಗೂ ಜಾಗೃತಿ ವಿಷಯವಾಗಿ ಕಾಲೇಜಿಗೆ ಧಿಡೀರ್ ಭೇಟಿ ನೀಡಿದ ಸಂದರ್ಭದಲ್ಲಿ ಕಾಲೇಜಿನ ಅವ್ಯವಸ್ಥೆಗಳ ಕುರಿತು ಪ್ರಾಚಾರ್ಯರನ್ನು ಪ್ರಶ್ನಿಸಿದಾಗ, ಪ್ರಾಚಾರ್ಯರು ಮೇಲಿನಂತೆ ಉತ್ತರಿಸುವ ಮೂಲಕ ತಮ್ಮ ಅಳಲನ್ನು ತೋಡಿಕೊಂಡರು.
ಇಲ್ಲಿ ನಾವು ಏನೂ ಮಾತನಾಡುವ ಸ್ಥಿತಿಯಲ್ಲಿಲ್ಲ. ನಾವು ಬೇರೆ ಬೇರೆ ಸ್ಥಳಗಳಿಂದ ಇಲ್ಲಿ ಸೇವೆಗಾಗಿ ಬಂದಿದ್ದೇವೆ. ಆದರೂ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದೆವು. ಅವುಗಳನ್ನೂ ಒಡೆದು ಹಾಕಿ, ಕಾಲೇಜಿನ ಆವರಣ ಮತ್ತು ಕಟ್ಟಡದಲ್ಲಿ ಕುಳಿತು ಮದ್ಯ ಸೇವನೆ ಮಾಡಿ, ಹೀಗೆ ಗಬ್ಬೆಬ್ಬಿಸುತ್ತಿದ್ದಾರೆ ಎಂದರು.
ಪ್ರಾಚಾರ್ಯರ ಮಾತುಗಳಿಂದ ವಿಚಲಿತರಾದ ಜಿಲ್ಲಾಧಿಕಾರಿಗಳು, ಪೊಲೀಸರಿಗೆ ತಿಳಿಸಬೇಕು ಎಂದಾಗ, ಹಲವಾರು ಬಾರಿ ಪೊಲೀಸರಿಗೂ ತಿಳಿಸಿದ್ದೇವೆ. ಅವರು ನಮಗೆ ದೂರು ಸಲ್ಲಿಸಿದರೆ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದಾರೆ. ಹೀಗಾಗಿ ಸುಮ್ಮನಿದ್ದೇವೆ ಎಂದರು.
ಆಕ್ರೋಶಗೊಂಡ ಜಿಲ್ಲಾಧಿಕಾರಿಗಳು, ಇಂಥಹ ಗಂಭೀರ ಸಮಸ್ಯೆಯ ಕುರಿತು ಎಸ್ಪಿಯವರಿಗೆ ಕ್ರಮ ತೆಗೆದುಕೊಳ್ಳುವಂತೆ ತಿಳಿಸುತ್ತೇನೆ ಎಂದರು.
ಇನ್ನು ಪಟ್ಟಣದ ಗಾಂಧಿನಗರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಅಲ್ಲಿನ ನಾಗರಿಕರ ಸಮಸ್ಯೆ ಆಲಿಸಿದರು. ಈ ಸಂದರ್ಭದಲ್ಲಿ ರೋಣ ನಗರದಲ್ಲಿ ೧೫ ದಿನಗಳಿಗೊಮ್ಮೆ ನೀರು ಬಿಡುತ್ತಿದ್ದಾರಲ್ಲದೆ, ಚರಂಡಿಗಳನ್ನು ಸ್ವಚ್ಛಗೊಳಿಸುತ್ತಿಲ್ಲ. ಶೌಚಾಲಯವೂ ಸೇರಿದಂತೆ ಅನೇಕ ಸಮಸ್ಯೆಗಳಿದ್ದು, ಇಲ್ಲಿನ ಆಡಳಿತ ಮಂಡಳಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಸ್ಥಳದಲ್ಲಿದ್ದ ಮುಖ್ಯಾಧಿಕಾರಿ ಕೃಷ್ಣಾ ನಾಯಕರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು, ಮತ್ತೊಮ್ಮೆ ಸಮಸ್ಯೆಗಳು ನನ್ನ ಗಮನಕ್ಕೆ ಬಾರದಂತೆ ಕೆಲಸ ನಿರ್ವಹಿಸಿ ಎಂದು ತಾಕೀತು ಮಾಡಿದರು. ನಂತರ ವಿವಿಧ ಇಲಾಖೆಗಳಿಗೆ ಭೇಟಿ ನೀಡಿ, ಸಿಡಿಪಿಒ ಕಚೇರಿಯ ಸಿಬ್ಬಂದಿಗಳ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿ ತಹಸೀಲ್ದಾರ್ ವಾಣಿ ಉಂಕಿಯವರಿಂದ ಮಾಹಿತಿ ಪಡೆದುಕೊಂಡರು.
ಮುದೇನಗುಡಿ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಮತದಾರ ಪಟ್ಟಿ ಕುರಿತು ಜಾಗೃತಿ ಮೂಡಿಸಿದರು. ಇದೇ ಸಂದರ್ಭದಲ್ಲಿ, ಸಾಮಾಜಿಕ ಭದ್ರತೆ ಯೋಜನೆಯ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಸಿದರು.
ಈ ಬಾರಿ 17 ವರ್ಷದವರು ಸಹ ಮತದಾರ ಪಟ್ಟಿಗೆ ಹೆಸರನ್ನು ಸೇರಿಸಲು ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕಾಲೇಜಿನ ಹಾಗೂ 17 ವರ್ಷ ಪೂರೈಸಿದವರು ಈ ಲಾಭವನ್ನು ಪಡೆದುಕೊಳ್ಳಬೇಕು.
ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ವಿಧಿವಶರಾಗಿದ್ದಾರೆ. ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ಕೆಪಿಸಿಸಿ ಆಯೋಜಿಸಿದ್ದ ಟಿಕೆಟ್ ಆಕಾಂಕ್ಷೆಗಳ ಸಭೆಯಲ್ಲಿ ಈ ದುರ್ಘಟನೆ ನಡೆದಿದೆ. ಸಭೆ ಆರಂಭವಾಗುತ್ತಿದ್ದಂತೆಯೇ ಶ್ರೀಶೈಲಪ್ಪ ಕುಸಿದು ಬಿದ್ದಿದ್ದಾರೆ.
1994ರಲ್ಲಿ ಗದಗ ಜಿಲ್ಲೆಯ ರೋಣ ವಿಧಾನ ಸಭಾ ಕ್ಷೇತ್ರದಿಂದ ಜನತಾದಳದಿಂದ ಗೆದ್ದಿದ್ದರು. 1999ರಲ್ಲಿ ನಡೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದರು.
ಸೂಡಿಯ ಮಂಡಲ ಪಂಚಾಯತಿಯಿಂದ ರಾಜಕೀಯ ಆರಂಭಿಸಿದ್ದ ಶ್ರೀಶೈಲಪ್ಪ ಬಿದರೂರು, (ಟಿಡಿಬಿ) ತಾಲೂಕು ಡೆವೆಲಪ್ಮೆಂಟ್ ಬೋರ್ಡ್ ಗೂ ಆಯ್ಕೆಯಾಗಿದ್ದರು. ಮೂಲತಃ ಜನತಾ ಪರಿವಾರದಿಂದ ಬಂದವರಾಗಿದ್ದರು. ಅವರೊಬ್ಬ ರಾಜಕೀಯ ಮುತ್ಸದ್ದಿಯಾಗಿದ್ದರು.
2008 ರಲ್ಲಿ ಗದಗ ಕ್ಷೇತ್ರದಿಂದ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. ಇದಕ್ಕೂ ಮೊದಲು ರೋಣ ಕ್ಷೇತ್ರದಿಂದ ಜನತಾದಳದಿಂದ ಗೆದ್ದಿದ್ದರು.
2018ರ ಚುನಾವಣೆಯಲ್ಲಿ ಗದಗ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ಪಡೆಯಲು ಪ್ರಯತ್ನ ನಡೆಸಿದ್ದ ಶ್ರೀಶೈಲಪ್ಪ ಬಿದರೂರಗೆ ಬಿಜೆಪಿ ಪಕ್ಷ ಟಿಕೆಟ್ ನೀಡಿರಲಿಲ್ಲ. ನಂತರದ ಬೆಳವಣಿಗೆಯಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
ಮೊನ್ನೆ ಅಷ್ಟೇ ರೋಣ ಹಾಗೂ ಗದಗ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಟಿಕೆಟ್ ಬಯಸಿ ಕೆಪಿಸಿಸಿ ಗೆ ಅರ್ಜಿ ಸಲ್ಲಿಸಿದ್ದರು. ಇಂದು ನಡೆಯಲಿದ್ದ ಟಿಕೆಟ್ ಆಕಾಂಕ್ಷೆಗಳ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದರು.
ಸಭೆ ಆರಂಭವಾಗುತ್ತಿದ್ದಂತೆ ಕುಸಿದು ಬಿದ್ದಿದ್ದರು. ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದಿದ್ದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು
ಸುದ್ದಿ ತಿಳಿದ ಕಾಂಗ್ರೆಸ್ ಹಿರಿಯ ನಾಯಕರೂ ಆದ ಶಾಸಕ ಎಚ್ ಕೆ ಪಾಟೀಲ್ ಹಾಗೂ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿದರು. ಕೆಪಿಸಿಸಿ ಕಚೇರಿಯಲ್ಲಿನ ಸಭೆ ಮೊಟಕುಗೊಳಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂತಾಪ; ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಅವರ ನಿಧನಕ್ಕೆ ಅನೇಕ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ. ಶಾಸಕ ಎಚ್ ಕೆ ಪಾಟೀಲ್,ಸಚಿವ ಸಿ ಸಿ ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ ಎಸ್ ಪಾಟೀಲ್, ಬಿ ಆರ್ ಯಾವಗಲ್, ರಾಮಕೃಷ್ಣ ದೊಡ್ಡಮನಿ, ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಸೇರಿದಂತೆ ಅನೇಕ ಧುರೀಣರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಚುಮು ಚುಮು ಛಳಿ ಎಲ್ಲರನ್ನೂ ಥರಗೆಟ್ಟಿಸುತ್ತಿದೆ. ಸೂರ್ಯ ನೆತ್ತಿಯ ಮೇಲೆ ಬಂದರೂ ಮೈಮೇಲಿರುವ ಬೆಚ್ಚನೆಯ ಸ್ವೆಟರ್, ತಲೆಗೆ ಸಿಕ್ಕಿಸಿದ ಟೋಪಿ, ಸುತ್ತಿದ ಟವೆಲ್ಲನ್ನು ತೆಗೆದಿಡಬೇಕೆನಿಸುತ್ತಿಲ್ಲ. ಆದರೆ, ಇಂಥ ಛಳಿಯಲ್ಲಿಯೂ ಬಡವರ ಪಾಲಿನ ಸಂಜೀವಿನಿಯೆಂದು ಕರೆಸಿಕೊಳ್ಳುವ ಗದುಗಿನ ಜಿಮ್ಸ್ ಆಸ್ಪತ್ರೆಯಲ್ಲಿಯ ಅವ್ಯವಸ್ಥೆಯ ಮುಂದುವರಿದ ಭಾಗವಾಗಿ, ಬಾಣಂತಿಯರಿಗೆ ಸ್ನಾನಕ್ಕೆ ಬಿಸಿನೀರಿನ ಕೊರತೆಯುಂಟಾಗಿದ್ದು, ಸ್ನಾನದ ಬಿಸಿ ನೀರಿಗಾಗಿ ಅವರ ಸಂಬಂಧಿಕರು ನಿತ್ಯ ನೀರಿನ ಬಕೆಟ್, ಬಾಟಲಿ ಹಿಡಿದು ಅಲ್ಲಿಲ್ಲಿ ಸುತ್ತಾಡಿ, ಕಾಡಿ-ಬೇಡಿ ಬಿಸಿನೀರು ಸಂಗ್ರಹಿಸಿ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬಡವರು ಹಾಗೂ ಮಧ್ಯಮ ವರ್ಗದ ಜನರು ಹೆಚ್ಚಾಗಿ ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಆದರೆ, ಇಲ್ಲಿನ ಅವ್ಯವಸ್ಥೆಗೆ ಬಾಣಂತಿಯರು ಅಕ್ಷರಶಃ ಕುಗ್ಗಿಹೋಗುವಂತಾಗಿದೆ. ಹೆರಿಗೆಯಾಗಿ ನವಜಾತ ಶಿಶುವಿನೊಂದಿಗೆ ಆರೈಕೆಯಲ್ಲಿರುವ ಬಾಣಂತಿಯರಿಗೆ ಬಿಸಿ ನೀರು ಮಾತ್ರ ಸಿಗುತ್ತಿಲ್ಲ. ಹೀಗಾಗಿ ಬಾಣಂತಿಯರ ಸಂಬಂಧಿಕರು ನೀರಿನ ಬಾಟಲ್ ಹಾಗೂ ಬಕೆಟ್ ಹಿಡಿದುಕೊಂಡು, ಬಿಸಿ ನೀರಿಗಾಗಿ ನಿತ್ಯ ಅಲೆದಾಡುವ ದೃಶ್ಯ ಸಾಮಾನ್ಯವಾಗಿದೆ.
ಇದೆಂಥಾ ಅವ್ಯವಸ್ಥೆ ಎಂದು ಜನರು ಕಿಡಿ ಕಾರುವಂತಾಗಿದೆ. ಸರ್ಕಾರ ಬಡ ಜನರಿಗೆ ಒಳ್ಳೆಯ ಚಿಕಿತ್ಸೆ ಸಿಗಲಿ ಎಂಬ ಆಶಯದಿಂದ ಕೋಟ್ಯಾಂತರ ರೂಪಾಯಿ ಅನುದಾನ ನೀಡಿದೆ. ಆದ್ರೆ, ಜಿಮ್ಸ್ ಆಡಳಿತ ಮಾತ್ರ ರೋಗಿಗಳಿಗೆ ಕನಿಷ್ಠ ಮೂಲ ಸೌಕರ್ಯವನ್ನೂ ನೀಡುತ್ತಿಲ್ಲ. ಬೆಳ್ಳಂಬೆಳ್ಳಗ್ಗೆ ನೀರಿನ ಬಾಟಲ್ ಹಾಗೂ ಬಕೆಟ್ ಹಿಡಿದುಕೊಂಡು ಬಾಣಂತಿಯರ ಸಂಬಂಧಿಕರು ಹೋಟೆಲ್‌ಗಳಿಗೆ ಅಲೆದಾಡುತ್ತ, `ಅಣ್ಣಾ, ಆಸ್ಪತ್ರೆಯಲ್ಲಿ ಬಾಣಂತಿಯಿದ್ದಾಳೆ. ತಣ್ಣೀರು ಸ್ನಾನ ಆಗವಲ್ದು. ತ್ರಾಸ ಆಕ್ಯದ. ಸ್ವಲ್ಪ ಬಿಸಿನೀರು ಕೊಡ್ರೀ ಅಣ್ಣಾ, ಹ್ಯಾಂಗೂ ಮನೀ ಮಖ ಕಾಣತೇವಿ…’ ಎಂಬರ್ಥದ ಮಾತುಗಳು ಕೇಳಿಬರುತ್ತಿವೆ.
ಒಂದು ಬಾಟಲ್ ನೀರಿಗೆ 20 ರೂ. ಹಣ ನೀಡಬೇಕು. ಒಂದು ಬಕೆಟ್‌ಗೆ 50-60 ರೂ. ಹಣ ನೀಡಬೇಕು. ಆ ಬಾಟಲ್ ಹಾಗೂ ಬಕೆಟ್ ನೀರಿನಲ್ಲಿಯೇ ಬಾಣಂತಿಯರು ಹಾಗೂ ನವಜಾತ ಶಿಶುಗಳ ಆರೈಕೆ ಮಾಡಬೇಕಾದ ಸಂಕಟ ಎದುರಾಗಿದ್ದು, ಬಡವರು ಸರ್ಕಾರಿ ಆಸ್ಪತ್ರೆ ಎಂದು ಬಂದರೆ, ಉಳಿದ ಖರ್ಚುಗಳೆಲ್ಲಾ ಇಲ್ಲಿ ನೀರಿಗಾಗಿ ಮಾಡುತ್ತಿರುವ ಖರ್ಚಿಗೇ ಸರಿಹೋಗುವಂತಿದೆ.
ಕಳೆದ ಒಂದು ತಿಂಗಳಿಂದ ಬಾಣಂತಿಯ ಸಂಬಂಧಿಕರು, ಹಣ ಕೊಟ್ಟು ನೀರು ತೆಗೆದುಕೊಂಡು ಬಂದು ಆರೈಕೆ ಮಾಡುತ್ತಿದ್ದಾರೆ. ಇಷ್ಟೊಂದು ನೀರಿನ ಸಮಸ್ಯೆಯಿದ್ದರೂ ಕೂಡ ಜಿಮ್ಸ್ ಆಸ್ಪತ್ರೆಯ ನಿರ್ದೇಶಕರು ಈ ಕಡೆ ತಿರುಗೆ ನೋಡಿಲ್ಲ ಅನ್ನೂ ಆರೋಪ ಕೇಳಿ ಬಂದಿದೆ. ಕನಿಷ್ಠ ಚಳಿಗಾಲದಲ್ಲಿಯಾದರೂ ರೋಗಿಗಳಿಗೆ, ಬಾಣಂತಿಯರಿಗೆ ಬಿಸಿ ನೀರಿನ ವ್ಯವಸ್ಥೆ ಮಾಡುವಂತೆ ಚಿಕಿತ್ಸೆಗಾಗಿ ಬಂದಿದ್ದ ಬಾಣಂತಿಯರ ಸಂಬಂಧಿಕರಾದ ಜನ್ನತ್ ಬೀ, ಮಾಲತೇಶ ಮುಂತಾದವರು ಒತ್ತಾಯಿಸಿದ್ದಾರೆ.
ಜಿಮ್ಸ್ ಆಸ್ಪತ್ರೆಗೆ ಗದಗ ಜಿಲ್ಲೆ ಸೇರಿದಂತೆ, ಪಕ್ಕದ ಹಾವೇರಿ, ಕೊಪ್ಪಳ, ಹಾಗೂ ಬಳ್ಳಾರಿ ಜಿಲ್ಲೆಯಿಂದ ನೂರಾರು ಸಂಖ್ಯೆಯಲ್ಲಿ ಹೆರಿಗೆಗೆಂದು ಆಸ್ಪತ್ರೆ ಬರುತ್ತಾರೆ. ನುರಿತ ವೈದ್ಯರಿದ್ದರೂ ಮೂಲ ಸೌಕರ್ಯದ ಕೊರತೆ ನೀಗುತ್ತಿಲ್ಲ. ಬಿಸಿ ನೀರಿನ ಜೊತೆಗೆ ಕುಡಿಯುವ ನೀರು ಹಾಗೂ ಆಸ್ಪತ್ರೆಯಲ್ಲಿ ಬಳಕೆ ಮಾಡುವ ನೀರಿಗೂ ಸಾಕಷ್ಟು ಸಮಸ್ಯೆ ಉಂಟಾಗಿದೆ. ಅದರಲ್ಲೂ ಬಾಣಂತಿಯರು ಹಾಗೂ ನವಜಾತ ಶಿಶುಗಳಿಗೆ ಬಿಸಿ ನೀರು ಬಹಳ ಅಗತ್ಯ. ಈ ಆಸ್ಪತ್ರೆಯಲ್ಲಿ ಬಿಸಿ ನೀರಿಗಾಗಿ ಯಾವುದೇ ವ್ಯವಸ್ಥೆಯಿಲ್ಲವೆಂದರೆ, ಎಂತಹ ವಿಪರ್ಯಾಸ ಅಲ್ಲವಾ?!
ಮೂರು ಬಿಸಿ ನೀರಿನ ಗೀಜರ್‌ಗಳಿದ್ದು, ಎರಡು ಕೆಟ್ಟಿವೆ, ಒಂದು ಸುಸ್ಥಿತಿಯಲ್ಲಿದೆ. ಇನ್ನು ನಾಲ್ಕೈದು ದಿನದಲ್ಲಿ ಬಿಸಿ ನೀರಿನ ಸಮಸ್ಯೆಯಾಗದೆಯಂತೆ ಕ್ರಮ ಕೈಗೊಳ್ಳಲಾಗುವುದು.
-ಡಾ. ಬಸವರಾಜ್ ಬೊಮ್ಮನಹಳ್ಳಿ, ಜಿಮ್ಸ್ ನಿರ್ದೇಶಕ
ಸರ್ಕಾರ ಆಸ್ಪತ್ರೆಯ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ. ಅನುದಾನ ಒದಗಿಸುತ್ತದೆ. ಆದರೆ, ಜಿಮ್ಸ್ ಆಸ್ಪತ್ರೆಯಲ್ಲಿ ಮಾತ್ರ ಮೂಲ ಸೌಕರ್ಯಗಳು ಕೂಡಾ ಸಿಗುತ್ತಿಲ್ಲ. ಇಲ್ಲಿನ ಆಡಳಿತ ಮಂಡಳಿಯ ಬೇಜವಾಬ್ದಾರಿತನದಿಂದ ಬಡ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಆರೋಗ್ಯ ಸಚಿವರು ಜಿಮ್ಸ್ ಆಡಳಿತ ಮಂಡಳಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ತುರ್ತಾಗಿ ಮಾಡಬೇಕಿದೆ.
ಕರಾಳ ಅಮಾವಾಸ್ಯೆ ತನ್ನ ಪ್ರಭಾವ ತೋರಿಸಿದೆ. ಜಿಲ್ಲೆಯ ನರಗುಂದ ತಾಲೂಕು ವ್ಯಾಪ್ತಿಯ ಭೈರನಹಟ್ಟಿ ಗ್ರಾಮದ ಹೊರ ವಲಯದಲ್ಲಿ ಬುಧವಾರ ಕಾರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವಿಗೀಡಾಗಿದ್ದು, ಓರ್ವ ಮಹಿಳೆ ಗಂಭೀರ ಗಾಯಗೊಂಡು ಜೀವನ್ಮರಣದ ಮಧ್ಯೆ ಹೋರಾಡುತ್ತಿರುವ ಬಗ್ಗೆ ವರದಿಯಾಗಿದೆ.
ಈ ರಸ್ತೆ ಅಪಘಾತದಲ್ಲಿ ಕಾರ್ ಮತ್ತು ಬೈಕ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಬೈಕ್ ಹುಬ್ಬಳ್ಳಿಯಿಂದ ಕೊಣ್ಣೂರ ಕಡೆಗೆ ಹಾಗೂ ಕಾರು ಬಾಗಲಕೋಟೆ ಕಡೆಯಿಂದ ಹುಬ್ಬಳ್ಳಿಗೆ ಹೊರಟಿತ್ತು ಎನ್ನಲಾಗಿದ್ದು, ಕಾರಿನಲ್ಲಿದ್ದವರು ಅಪಘಾತ ಸಂಭವಿಸುತ್ತಿದ್ದಂತೆಯೇ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳದಲ್ಲಿ ಭಾರೀ ಗಾಯಗೊಂಡು ಒದ್ದಾಡುತ್ತಿದ್ದ ಮಹಿಳೆಯನ್ನು ಸ್ಥಳೀಯರು ಕೂಡಲೇ ಅಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತ ವ್ಯಕ್ತಿ ಹಾಗೂ ಗಾಯಾಳುಗಳ ಹೆಸರು ತಿಳಿದು ಬಂದಿಲ್ಲ.
ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ದಳದವರು ಹೊತ್ತಿ ಉರಿಯುತ್ತಿದ್ದ ಬೈಕ್ ಮತ್ತು ಕಾರುಗಳ ಬೆಂಕಿಯನ್ನಾರಿಸುವಲ್ಲಿ ಶ್ರಮಿಸಿದರು. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಪಟ್ಟಣದ ಆರೂಢಜ್ಯೋತಿ ಕಲ್ಯಾಣ ಮಂಟಪದಲ್ಲಿ ನೀರು ಹಾವೊಂದು ಕಾಣಿಸಿಕೊಂಡು ಅಲ್ಲಿಯ ಕೆಲಸಕ್ಕೆಂದು ತೆರಳಿದ್ದ ಸಿದ್ದರಾಮೇಶ್ವರ ನಗರದ ಮಹಿಳೆಯೊಬ್ಬಳಿಗೆ ಕಡಿದ ಪರಿಣಾಮ, ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
ಮದುವೆ ಸಮಾರಂಭಗಳೆಲ್ಲ ಮುಗಿದ ಮೇಲೆ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾಗ, ಪಾತ್ರೆ ತೊಳೆಯುವ ಕಟ್ಟೆಯ ನಳದ ಬಳಿಯಲ್ಲಿಯೇ ಇದ್ದ ಹಾವನ್ನು ಗಮನಿಸದೇ ತುಳಿದಿದ್ದು, ಹಾವು ಮಹಿಳೆಗೆ ಕಡಿದು ಪರಾರಿಯಾಗಿತ್ತು.
ಗಾಬರಿಗೊಂಡ ಕಲ್ಯಾಣ ಮಂಟಪದಲ್ಲಿದ್ದವರು ಉರಗ ತಜ್ಞ ಸ್ನೇಕ್ ಬುಡ್ಡಾರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿದರು. ಅತ್ತಿತ ಸರಿದಾಡುತ್ತ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದ್ದ ಹಾವನ್ನು ಹಿಡಿದು, ಗಮನಿಸಿದ ಸ್ನೇಕ್ ಬುಡ್ಡಾ, ಇದೇನೂ ವಿಷಕಾರಿ ಹಾವಲ್ಲ, ಪ್ರಾಣಾಪಾಯವೇನೂ ಇಲ್ಲ ಎಂದು ತಿಳಿಸಿದರು.
ಪ್ರಾಥಮಿಕ ಚಿಕಿತ್ಸೆಗಾಗಿ ತಾಲೂಕಾ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಕರೆದೊಯ್ಯುವಂತೆ ತಿಳಿಸಿದ ಸ್ನೆಕ್ ಬುಡ್ಡಾ, ಹಾವಿನ ಜೊತೆಗೂಡಿಯೇ ತಾವೂ ಆಸ್ಪತ್ರೆಗೆ ತೆರಳಿದರು. ಹಾವನ್ನು ಗಮನಿಸಿದ ವೈದ್ಯರು, ನೀರು ಹಾವು ಕೇವಲ ನಂಜೇ ಹೊರತೂ ವಿಷಕಾರಿಯಲ್ಲವೆಂದು ತಿಳಿಸಿ, ಪ್ರಾಥಮಿಕ ಉಪಚಾರ ನೀಡಿ ಕಳುಹಿಸಿಕೊಟ್ಟಿದ್ದಾರೆ.
ಹಾವನ್ನು ಸುರಕ್ಷಿತವಾಗಿ ಹಿಡಿದ ಬುಡ್ಡೇಸಾಬ್ ನಿರ್ಜನ ಪ್ರದೇಶದಲ್ಲಿ ಬಿಟ್ಟುಬಂದಿದ್ದಾರೆ.
ಅನಧಿಕೃತ ಸಾರಾಯಿ ಮಾರಾಟವನ್ನು ಅಧಿಕೃತಗೊಳಿಸಲು ಆಗ್ರಹ * ಮೂರು ಬಾರ್‌ಗಳಿಗೆ ಮಂಜೂರಾತಿ ನೀಡಲು ಕುರಹಟ್ಟಿ ಗ್ರಾಮಸ್ಥರ ಒತ್ತಾಯ
ವಿಜಯಸಾಕ್ಷಿ ಸುದ್ದಿ, ರೋಣ
ಗ್ರಾಮದಲ್ಲಿ ಇರುವ ಸಾರಾಯಿ ಮಾರಾಟ ಕೇಂದ್ರಗಳನ್ನು ಅಧಿಕೃತಗೊಳಿಸುವ ಮೂಲಕ ಗ್ರಾಮಕ್ಕೆ ಮೂರು ಸಾರಾಯಿ ಮಾರಾಟ ಬಾರ್‌ಗಳಿಗೆ ಮಂಜೂರಾತಿ ನೀಡಬೇಕು ಹಾಗೂ ಅಕ್ರಮ ಸಾರಾಯಿ ಸೇವನೆಯಿಂದ ಐದು ಜನರು ಮೃತಪಟ್ಟಿದ್ದು ಅವರ ಪತ್ನಿಯರಿಗೆ ಪ್ರತಿ ತಿಂಗಳು ಐದು ಸಾವಿರ ರೂ.ಗಳ ಮಾಶಾಸನ ನೀಡಬೇಕು ಎಂದು ತಹಸೀಲ್ದಾರ ವಾಣಿ ಉಂಕಿ ಹಾಗೂ ಅಬಕಾರಿ ನಿರೀಕ್ಷಕ ಜಗದೀಶ ಬಡಿಗೇರರವರಿಗೆ ಕುರಹಟ್ಟಿ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಶನಿವಾರ ತಾಲೂಕಿನ ಕುರಹಟ್ಟಿ ಗ್ರಾಮದಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಈ ಮನವಿ ಸಲ್ಲಿಸಲಾಯಿತು.
ಗ್ರಾಮಸ್ಥರ ಮನವಿ ಆಲಿಸಿ ಗಲಿಬಿಲಿಗೊಂಡ ತಹಸೀಲ್ದಾರ್ ವಾಣಿ ಉಂಕಿ ಹಾಗೂ ಅಬಕಾರಿ ನಿರೀಕ್ಷಕ ಜಗದೀಶ ಬಡಿಗೇರ ಗ್ರಾಮದಲ್ಲಿ ಅಬಕಾರಿ ಇಲಾಖೆಯಿಂದ ಓರ್ವ ಸಿಬ್ಬಂದಿಯನ್ನು ನೇಮಿಸಿ ಅಕ್ರಮ ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕಲಾಗುವುದು ಎಂದರು.
ತಹಸೀಲ್ದಾರ್ ವಾಣಿ ಉಂಕಿ ಸಹ ಈ ಗಂಭೀರ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಜೊತೆಗೆ ಸಾರಾಯಿ ಮಾರಾಟಗಾರರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿದರು. ತಪ್ಪಿದಲ್ಲಿ ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ರಾಮದಲ್ಲಿ ಪ್ರೌಢಶಾಲಾ ಮಕ್ಕಳಿಗೆ ಕಟ್ಟಡವಿಲ್ಲ. ಹತ್ತು ವರ್ಷಗಳ ಹಿಂದೆ ಕಟ್ಟಡ ನಿರ್ಮಿಸಲು ಗ್ರಾಮದಲ್ಲಿ ಎರಡು ಎಕರೆ ಜಮೀನು ನೀಡಲಾಗಿದ್ದು, ಇಲ್ಲಿಯವರೆಗೆ ಕಟ್ಟಡ ನಿರ್ಮಿಸಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು. ಇದಕ್ಕೆ ಉತ್ತರಿಸಿದ ಬಸವರಾಜ ಅಂಗಡಿ ಈಗಾಗಲೇ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ದೊರಕಿದ್ದು ವಾರದಲ್ಲಿ ಚಾಲನೆ ನೀಡಲಾಗುವುದು. ಮುಖ್ಯವಾಗಿ ಸೈಕಲ್ ವಿತರಣೆ ಹಾಗೂ 9 ಮತ್ತು 10 ನೇ ತರಗತಿಗಳ ಮಕ್ಕಳಿಗೆ ಮೊಟ್ಟೆ ವಿತರಣೆ ಕುರಿತು ಸರಕಾರ ಆದೇಶ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ರತ್ನವ್ವ ಹಕಾರಿ ಎಂಬ ಮಹಿಳೆ ಅಂಗವಿಕಲ ಪ್ರಮಾಣ ಪತ್ರ ನೀಡುವುದಾಗಿ 7 ಸಾವಿರ ರೂ.ಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿದರು. ತಹಸೀಲ್ದಾರ್ ವಾಣಿ ಉಂಕಿಯವರು ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. ಗ್ರಾಮ ವಾಸ್ತವ್ಯದಲ್ಲಿ ಒಟ್ಟು 38 ಅರ್ಜಿಗಳು ಸಲ್ಲಿಕೆಯಾದವು.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷರು, ಉಪಾದ್ಯಕ್ಷರು, ಸದಸ್ಯರು, ವಿವಿದ ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.
10 ಅಡಿ ಉದ್ದದ ಭಾರೀ ಗಾತ್ರದ ಹೆಬ್ಬಾವೊಂದು ಅನಾಮತ್ತಾಗಿ ಕುರಿಯೊಂದನ್ನು ನುಂಗಿರುವ ಘಟನೆ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಘಾಟಹಿಪ್ಪರ್ಗಾ ಗ್ರಾಮದಲ್ಲಿ ನಡೆದಿದೆ.
ಘಾಟಹಿಪ್ಪರ್ಗಾ ಗ್ರಾಮದ ಗುಡ್ಡದಲ್ಲಿ ಕುರಿಗಳನ್ನು ಮೇಯಿಸುತ್ತಿರುವಾಗ ಪ್ರತ್ಯಕ್ಷವಾದ ಬೃಹತ್ ಗಾತ್ರದ ಹೆಬ್ಬಾವು ಕುರಿಗಾಹಿ ರಾಜಕುಮಾರ ರೊಡ್ಡೆ ಎಂಬುವರಿಗೆ ಸೇರಿದ ಕುರಿಯನ್ನು ನುಂಗಿ ಜೀರ್ಣಸಿಕೊಳ್ಳಲು ಹೆಣಗಾಡುತ್ತಿತ್ತು. ಈ ದೃಶ್ಯ ಕಣ್ಣಿಗೆ ಬೀಳುತ್ತಿದ್ದಂತೆಯೇ ಸ್ಥಳದಲ್ಲಿದ್ದವರು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.
ಉರಗ ತಜ್ಞ ಅಶೋಕ ಶೆಟ್ಟಿಯವರೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದಾಗ ಹೆಬ್ಬಾವು ಅದೇ ಸ್ಥಿತಿಯಲ್ಲಿ ಬಿದ್ದುಕೊಂಡಿತ್ತು. ಮಣಭಾರದ ಹೆಬ್ಬಾವನ್ನು ಹಿಡಿದು, ಹರಸಾಹಸದಿಂದ ಹಾವಿನ ಹೊಟ್ಟೆಯಲ್ಲಿದ್ದ ಕುರಿಯನ್ನು ಹೊರಕ್ಕೆ ತೆಗೆದ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಹೆಬ್ಬಾವನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ.
ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಮುರ್ತುಜಾ ಖಾದ್ರಿ, ಸಂತೋಷ, ನಿಸಾರ ಅಹಮದ್ ಸೇರಿದಂತೆ ಗ್ರಾಮಸ್ಥರು ಭಾಗಿಯಾಗಿದ್ದರು.