ಮನೆ ಮೇಲೆ ಮದುವೆ ದಿಬ್ಬಣಕ್ಕೆ ಹೊರಟಿದ್ದ ಬಸ್ ಪಲ್ಟಿಯಾಗಿ ಬಸ್ ನಲ್ಲಿದ್ದ ಐವರು ಜನ ದುರ್ಮರಣ ಹೊಂದಿರುವ ಘಟನೆ ಕರ್ನಾಟಕ ಕೇರಳ ಗಡಿಭಾಗದ ಕಾಸರಗೋಡಿನ ಕಲ್ಲಪಳ್ಳಿ ಬಳಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಪುತ್ತೂರಿನಿಂದ ಕೊಡಗಿನ ಕರಿಕೆಯಲ್ಲಿದ್ದ ಮದುವೆ ಕಾರ್ಯಕ್ರಮಕ್ಕೆ ಕೇರಳದ ಪಾಣತ್ತೂರು ಮೂಲಕ ಹೊರಟಿದ್ದ ಖಾಸಗಿ ಬಸ್ ನಲ್ಲಿ ಒಟ್ಟು 63 ಜನ ಪ್ರಯಾಣಿಕರಿದ್ದರು.
ಬಸ್ ಪಲ್ಟಿಯಾಗಿರುವ ಪರಿಣಾಮದಿಂದಾಗಿ ಬಸ್ ನಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನೂತನ ಸದಸ್ಯನೊಬ್ಬ ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಾಗೂ ಓರ್ವ ಕಾನ್ಸ್ಟೇಬಲ್ಗೆ ಸನ್ಮಾನ ಮಾಡಿರುವ ಘಟನೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಜಿಲ್ಲೆಯ ತಾಳಿಕೋಟಿ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ಸದಸ್ಯನ ಸನ್ಮಾನಕ್ಕೆ ಪ್ರತಿಯಾಗಿ ಪಿಎಸ್‌ಐ ಸಹ ಸಿಹಿ ತಿನ್ನಿಸಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಚುನಾವಣೆಯಲ್ಲಿ ಸಹಕರಿಸಿದ್ದಕ್ಕೆ ಋಣ ತೀರಿಸಿದ್ದಾರೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಘಟನೆಯ ವಿವರಣೆಗೆ ಬರುವುದಾರೆ, ತಾಳಿಕೋಟ ತಾಲೂಕಿನ ಬಳವಾಟ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಸನಗೌಡ ಸಾಸನೂರ ಎಂಬುವರು ಗೆಲುವು ಸಾಧಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪಿಎಸ್‌ಐ ಗಂಗೂಬಾಯಿ ಬಿರಾದಾರಗೆ ಠಾಣೆಯಲ್ಲಿ ನೂತನ ಸದಸ್ಯ ತಮ್ಮ ಬೆಂಬಲಿಗರೊಂದಿಗೆ ಸನ್ಮಾನ ಮಾಡಿದರು. ಅಲ್ಲದೆ, ಠಾಣೆಯ ಎದುರು ಪೊಲೀಸ್ ಕಾನ್ಸಟೇಬಲ್ ಶಿವನಗೌಡ ಬಿರಾದಾರಗೂ ಸನ್ಮಾನ ಮಾಡಿದ್ದಾರೆ.
ಇದಾದ ಬಳಿಕ ಸನ್ಮಾನದ ಫೋಟೋಗಳನ್ನು ಬಸವರಾಜ ಭಜಂತ್ರಿ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಪಿಎಸ್‌ಐ ಜಿ. ಜಿ. ಬಿರಾದಾರ ಮೇಡಂ ಹಾಗೂ ನಮ್ಮೂರ ಹಿತೈಷಿ ಪೊಲೀಸ್ ಆರಕ್ಷಕ ಶಿವನಗೌಡ ಬಿರಾದಾರರನ್ನು ಭೇಟಿಯಾಗಿ ಚುನಾವಣೆ ಗೆಲುವಿಗೆ ಸಹಕರಿಸಿದ್ದಕ್ಕೆ ಗೌರವ ಸನ್ಮಾನ ಮಾಡಲಾಯಿತು ಎಂದು ಫೇಸ್ಬುಕ್ನಲ್ಲಿ ಬರೆದು, ಸಂತಸ ವ್ಯಕ್ತಪಡಿಸಲಾಗಿದೆ.
ಜಿಲ್ಲೆಯ ಹುಣಸಗಿ ತಾಲೂಕಿನ ಕಾಮನಟಗಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಅಭ್ಯರ್ಥಿ ಬಸವರಾಜ ಕಟ್ಟಿಮನಿ ಅವರಿಗೆ ಹುಣಸಗಿ ಪಟ್ಟಣದಲ್ಲಿ ಪಿಂಜಾರ ಯುವಕರಿಂದ ಸನ್ಮಾನಿಸಲಾಯಿತು.
ನೂತನ ಸದಸ್ಯ ಬಸವರಾಜ್ ಮಾತನಾಡಿ, ನೀವು ನನಗೆ ಸನ್ಮಾನ ಮಾಡಿದ್ದು ಯಾವ ಕಾಲಕ್ಕೂ ಮರೆಯುವಂತಿಲ್ಲ ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದರು.
ಗ್ರಾಮದ ಅಭಿವೃದ್ಧಿಯೇ ನನ್ನ ಮುಂದಿನ ಯೋಜನೆಯಾಗಿದ್ದು ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಗ್ರಾಮದಲ್ಲಿನ ಹಲವಾರು ಸಮಸ್ಯೆಗಳು ಹಾಗೂ ಕುಂದು ಕೊರತೆಗಳಿಗೆ ಮೊದಲು ಸ್ಪಂದಿಸುತ್ತೆನೆ ಕುಡಿಯುವ ನೀರು, ಚರಂಡಿಯ ವ್ಯವಸ್ಥೆ, ಹೊಸದಾಗಿ ಶೌಚಾಲಯಗಳ ನಿರ್ಮಾಣ, ಗ್ರಾಮದಲ್ಲಿನ ಸಿಸಿ ರಸ್ತೆಗಳ ನಿರ್ಮಾಣ, ಗ್ರಾಮೀಣ ಅಡಿಯಲ್ಲಿ ಬರುವ ನರೇಗ ದಿಂದ ( ಉದ್ಯೋಗ ಖಾತ್ರಿ ) ಅನುದಾನ ಪಡೆದು, ಬೀದಿದೀಪ ಸೇರಿದಂತೆ ಇನ್ನಿತರ ಮೂಲಸೌಲಭ್ಯಗಳ ಕಡೆಗೆ ಹೆಚ್ಚು ಗಮನ ಹರಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಯುವ ನಾಯಕ ಸೋಪಿಸಾಬ ಡಿ ಸುರಪುರ, ಯುವ ಮುಖಂಡ ಹುಸೇನಸಾಬ ಗಾದಿ, ಸೈಯದ್ ದಾವಲಸಾಬ ಡಿ ಬೆಣ್ಣೂರ, ನಾಗಪ್ಪ ಬೋವಿ, ಸಾಬಣ್ಣ ಮಲಗಲದಿನ್ನಿ ಇತರರು ಉಪಸ್ಥಿತರಿದ್ದರು.
ಕಾಲ ಚಕ್ರ ಉರುಳುತ್ತಾ ಇರುತ್ತೆ, ಆ ಸಮಯಕ್ಕೆ ಏನಾಗಬೇಕೋ ಅದು ಆಗುತ್ತೆ ಎಂದು ಜೆಡಿಎಸ್ ಕಾಲಕಾಲಕ್ಕೆ ಬದಲಾವಣೆ ಆಗುತ್ತದೆ ಎಂದು ಪರೋಕ್ಷವಾಗಿ ಶಾಸಕ ಜಿ.ಟಿ.ದೇವೇಗೌಡ ಜೆಡಿಎಸ್ ಪಕ್ಷವನ್ನು ಪರೋಕ್ಷವಾಗಿ ಟೀಕಿಸಿದರು.
ಎನ್‌ಡಿಎ ಜೊತೆ ಜೆಡಿಎಸ್ ಕೈ ಜೋಡಿಸುವ ವಿಚಾರವಾಗಿ ಮೈಸೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಲ ಚಕ್ರ ಉರುಳಿದಂತೆ ರಾಜಕೀಯ ಬದಲಾವಣೆ ಆಗುತ್ತೆ. ಹಿಂದೆ ಧರಂಸಿಂಗ್ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಡಿಸಿಎಂ ಆಗಿದ್ರು. ಕುಮಾರಸ್ವಾಮಿ ಸಿಎಂ ಆದಾಗ ಯಡಿಯೂರಪ್ಪ ಡಿಸಿಎಂ ಆಗಿದ್ರು. 2018 ರಲ್ಲಿ ಕುಮಾರಸ್ವಾಮಿ ಸಿಎಂ ಆದಾಗ ಡಾ.ಜಿ.ಪರಮೇಶ್ವರ್ ಡಿಸಿಎಂ ಆಗಿರುವುದನ್ನು ನೆನಪಿಸಿದರು.
ಹೊಸ ವರ್ಷದಲ್ಲಿ ನನ್ನ ರಾಜಕೀಯ ಜೀವನದಲ್ಲಿ ಏನು ಬದಲಾವಣೆ ಇಲ್ಲ. ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. 2023ಕ್ಕೆ ಬದಲಾವಣೆ ಆಗಬಹುದು ಎಂದರು.
ಮೈಸೂರು ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ನನ್ನನ್ನು ಕೇಳಿಲ್ಲ. ಈಗ ನಾನು ಉಸ್ತುವಾರಿ ಸಚಿವನಲ್ಲ. ನನ್ನ ಕೇಳ್ತಾರಾ? ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಪ್ರಶ್ನಿಸಿದರು.
ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ರಾಮಬಾಣ ಸಿಕ್ಕಿದ್ದು, ಸ್ವದೇಶಿ ಮೂಲದ ಕೊವ್ಯಾಕ್ಸಿನ್ ಮತ್ತು ಕೋವಿಶಿಲ್ಡ್ ಎಂಬ ಎರಡು ಕೊರೊನಾ ಲಸಿಕೆಗಳ ಷರತ್ತು ಬದ್ಧ ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮತಿ ನೀಡಿದೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಹತ್ವದ ಘೋಷಣೆ ನೀಡಿದ DCGI ಅಧ್ಯಕ್ಷ ವಿ.ಜಿ.ಸೋಮಾನಿ ಅವರು, ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ತುರ್ತು ಸಂದರ್ಭದಲ್ಲಿ ಬಳಕೆ ಮಾಡಬಹುದು.ರೂಪಾಂತರಿ ಕೊರೊನಾ ವೈರಸ್ ಗೂ ಈ ಲಸಿಕೆಗಳು ಪರಿಣಾಮಕಾರಿ ಆಗಿದ್ದು,18 ವರ್ಷ ಮೇಲ್ಪಟ್ಟವರಿಗೆ ಲಸಿಕೆಗಳು ಸುರಕ್ಷಿತವಾಗಿವೆ ಎಂದು ತಿಳಿಸಿದರು.
ಇವೆರಡೂ ಲಸಿಕೆಗಳನ್ನು ಸುಮಾರು 28,000 ಜನರ ಮೇಲೆ ಪ್ರಾಯೋಗಿಕ ಪರೀಕ್ಷೆ ಮಾಡಲಾಗಿದೆ. ಲಸಿಕೆಯ ಎರಡು ಡೋಸ್ ವಿತರಿಸಲು ಸಲಹೆ ನೀಡಿದೆ. ಹಾಗಾಗಿ ಕೇಂದ್ರ ಆರೋಗ್ಯ ಇಲಾಖೆಯು ಇದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಿ ಜ.15 ರೊಳಗಾಗಿ ಲಸಿಕೆ ವಿತರಿಸುವ ಸಾಧ್ಯತೆಗಳಿವೆ.
ಬ್ರಿಟನ್ನಿನ ಆಕ್ಸಪರ್ಡ್ ವಿಶ್ವವಿದ್ಯಾಲಯ ಹಾಗೂ ಫಾರ್ಮಾ ದೈತ್ಯ ಸಂಸ್ಥೆಯಾದ ಆಸ್ಟ್ರಾಜೆನಿಕಾ ವಿಜ್ಞಾನಿಗಳ ಸಹಯೋಗದೊಂದಿಗೆ ಭಾರತದ ಸೆರಮ್ ಇನ್ಸ್ಟಿಟ್ಯೂಟ್ ಸಂಸ್ಥೆ ಲಸಿಕೆಗಳನ್ನು ಅಭಿವೃದ್ಧಿ ಪಡಿಸಿವೆ. ಭಾರತ್ ಬಯೋಟೆಕ್ ಸಂಸ್ಥೆ ಕೋವ್ಯಾಕ್ಸಿನ್ ಲಸಿಕೆ ಉತ್ಪಾದಿಸಿದ್ದು, ಸಂಪೂರ್ಣ ಸ್ವದೇಶಿ ಲಸಿಕೆಯಾಗಿದೆ ಕೋವಿಶಿಲ್ಡ್ ಲಸಿಕೆಯನ್ನು ಆಕ್ಷಪರ್ಡ್ ವಿವಿಯ ಸಹಭಾಗಿತ್ವದಲ್ಲಿ ತಯಾರಿಸಲಾಗಿದೆ.
ಆತ್ಮ ನಿರ್ಭರ ಭಾರತದ ಕನಸು ನನಸಾಗಿದೆ. ಲಸಿಕೆ ಸಂಶೋಧನೆಗೆ ಶ್ರಮಿಸಿದ ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಶನಿವಾರ(ಜ.೨) ರಂದು ದೇಶದ ಎಲ್ಲಾ ರಾಜ್ಯಗಳ ಎರಡೆರಡು ನಗರಗಳಲ್ಲಿ ಲಸಿಕೆಗಳ ಡ್ರೈರನ್ ನಡೆಸಲಾಗಿತ್ತು.
ಆಕ್ಸ್‌ಫರ್ಡ್ ಇನ್ಸ್ಟಿಟ್ಯೂಟ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕೋವಿಶಿಲ್ಡ್ ಲಸಿಕೆಯ ಅಧ್ಯಯನ ಇನ್ನೂ ಪೂರ್ಣಗೊಂಡಿಲ್ಲವಾದರೂ ಕೋವಿಡ್ ಸಂಕಷ್ಟವಿರುವ ಹಿನ್ನೆಲೆಯಲ್ಲಿ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಬೆಳ್ತಂಗಡಿ ತಾಲ್ಲೂಕಿನ ಉಜಿರೆಯಲ್ಲಿ ಮೊನ್ನೆ ನಡೆದ ಗ್ರಾಮ ಪಂಚಾಯತಿ ವಿಜಯೋತ್ಸವದಲ್ಲಿ SDPI ಕಾರ್ಯಕರ್ತರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆಂದು ಬಿಜೆಪಿ ಆರೋಪಿಸಿ ರಾದ್ಧಾಂತ ಮಾಡಿತ್ತು. ಆದರೆ ಘೋಷಣೆ ಕೂಗಿದ್ದು ನಾವಲ್ಲ ಬಿಜೆಪಿ ಕಾರ್ಯಕರ್ತ ಎಂದು ಎಸ್ ಡಿಪಿ ಐ ಆರೋಪ ಮಾಡಿದೆ.
ಎಸ್ ಡಿಪಿಐ ಪ್ರಕಾರ ಬಿಜೆಪಿ ಕಾರ್ಯಕರ್ತ ಪಾಕ್ ಪರ ಘೋಷಣೆ ಕೂಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ವೀಡಿಯೋದಲ್ಲಿರುವ ಯುವಕನನ್ನು ಎಸ್ ಡಿಪಿಐ ನಾಯಕರು ಗುರುತಿಸಿದ್ದಾರೆ.
ಅಲ್ಲದೇ, ಘೋಷಣೆ ಕೂಗಿದ್ದಾನೆ ಎಂದು ಹೇಳಲಾಗುತ್ತಿರುವ ಬಿಜೆಪಿ ಕಾರ್ಯಕರ್ತನನ್ನು ಬಂಧಿಸುವಂತೆ ಎಸ್ ಡಿ ಪಿ ಐ ಜಿಲ್ಲಾ, ರಾಷ್ಟ್ರೀಯ ಸಮಿತಿ ನಾಯಕರು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ. ಇದರಿಂದ ಎಸ್ ಡಿ ಪಿಐ ಮತ್ತು ಬಿಜೆಪಿ ನಡುವೆ ಸ್ಲೋಗನ್ ಸಮರ ಏರ್ಪಟ್ಟಿದೆ.
ಬಿಜೆಪಿ ಕಾರ್ಯಕರ್ತರು ಪಾಕಿಸ್ತಾನ ಮುರ್ದಾಬಾದ್ ಘೋಷಣೆ ಕೂಗಿದ್ದರು ಈ ನಡುವೆ ಜಿಂದಾಬಾದ್ ಘೋಷಣೆ ತೇಲಿ ಬಂತೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿತ್ತು.
ಎಸ್ ಡಿ ಪಿ ಐ ಕಾರ್ಯಕರ್ತರು ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈಗಾಗಲೇ ಮೂವರನ್ನು ಬಂಧಿಸಲಾಗಿದೆ.
ವ್ಯಕ್ತಿಯೋರ್ವನನ್ನು ಬರ್ಬರ ಹತ್ಯೆಗೈದು ನೀರಿನಲ್ಲಿ ಮುಳುಗಿಸಿ ಮೃತ ದೇಹದ ಮೇಲೆ ಚಪ್ಪಡಿ ಕಲ್ಲು ಹಾಕಿ ಹೋಗಿರುವ ಘಟನೆ ಮದ್ದೂರು ತಾಲ್ಲೂಕಿನ ನವಿಲೆ ಗ್ರಾಮದ ಶಿಂಷಾ ನದಿಯಲ್ಲಿ ನಡೆದಿದೆ.
ಕೊಲೆಯಾಗಿರುವ ವ್ಯಕ್ತಿ ನವಿಲೆ ಗ್ರಾಮದ ವಕೀಲ ರವೀಂದ್ರ (45) ಎಂದು ಗುರುತಿಸಲಾಗಿದೆ.
ಬೆಳಿಗ್ಗೆ ಮನೆಯಿಂದ ಜಮೀನಿಗೆ ಹೋಗುವುದಾಗಿ ಹೇಳಿ ಹೋಗಿದ್ದ ರವೀಂದ್ರ, ಸಂಜೆಯಾದರೂ ಮನೆಗೆ ಬರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಜಮೀನಿನ ಬಳಿ ಹುಡುಕಾಟ ನಡೆಸಿದ್ದಾರೆ.
ಈ ವೇಳೆ ಜಮೀನಿನ ಸಮೀಪದ ಶಿಂಷಾ ನದಿಯಲ್ಲಿ ಮುಳುಗಿದ ರೀತಿಯಲ್ಲಿ ಶವ ಪತ್ತೆಯಾಗಿರುವುದು ಕಂಡು ಬಂದಿದೆ. ಶಿಂಷಾ ನದಿಯಲ್ಲಿ ಮರಳು ಗಣಿಗಾರಿಕೆ ನಡೆಸುತ್ತಿರುವ ಅಕ್ರಮ ಮರಳು ದಂಧೆಕೋರರೇ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗುತ್ತಿದೆ.
ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಹಲವು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದೇಶದಲ್ಲಿ ರೈತರ ಪರವಾಗಿರುವ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದ್ದರೂ, ವಿರೋಧಿಗಳು ರೈತರನ್ನು ಉಯಿಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ರೈತರ ಮುಖವಾಡ ಹಾಕಿಕೊಂಡು ಕಾರ್ಯಾಚರಣೆ ಮಾಡುತ್ತಿರುವುದು ರೈತ ವಿರೋಧಿಯಾಗಿದೆ. ಪಂಜಾಬ್‌ನಲ್ಲಿರುವ ಕಾಂಗ್ರೆಸ್ ಸರ್ಕಾರ ರೈತರನ್ನು ಬೆಂಬಲಿಸಿ ಕಣಕ್ಕಿಳಿಸುತ್ತಿದೆ ಎಂದು ದೂರಿದರು.
ಸಚಿವ ಸಂಪುಟದ ಕುರಿತು ಪ್ರಕ್ರಿಯಿಸಿದ ಅವರು, ಸಂಪುಟ ರಚನೆ ಅಧಿಕಾರ ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು. ಬೇರೆ ಪಕ್ಷದಿಂದ ಕೆಲವರು ರಾಜೀನಾಮೆ ನೀಡಿ ಬಂದಿದ್ದಾರೆ. ಅವರಿಗೆ ಆದ್ಯತೆ ನೀಡಿದ್ದರಿಂದ ಪಕ್ಷದ ಕೆಲವರಿಗೆ ತೊಂದರೆಯಾಗಿದೆ.
ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ನಿತ್ಯವೂ ಮಾತನಾಡುವ ಚಾಳಿ ಇದೆ. ಇವ್ರೇ ಎಲ್ಲಾ ಮಾಡುತ್ತಿದ್ದರೆ, ಏಕೋಪಾದ್ಯಯ ಶಾಲೆಯ ಮುಖ್ಯೋಪಾದ್ಯಾಯರು ಆಗುತ್ತಿದ್ದರು ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ಬಿಜೆಪಿ ಜೊತೆ ಕೈಜೋಡಿಸುತ್ತದೆ ಎಂಬುವುದು ಗೊತ್ತಿಲ್ಲ. ಆದರೆ, ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬಂದವರನ್ನು ಸೇರಿಸಿಕೊಳ್ಳುತ್ತೇವೆ. ಮೇಲ್ಮನೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಕಡಿಮೆ ಇರುವುದರಿಂದ ನಮ್ಮ ಜೊತೆ ಬರುತ್ತೇನೆ ಎಂದು ಹೇಳಿದ್ದು, ಜೆಡಿಎಸ್‌ಗೆ ಉಪ ಸಭಾಪತಿ, ಬಿಜೆಪಿಗೆ ಸಭಾಪತಿಯಾಗುವ ಒಪ್ಪಂದ ಆಗಬಹದು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಹೇಳಿದರು.
-ಸುಮಾರು 8 ಗಂಟೆಗಳ ಕಾಲದ ಪ್ರತಿಭಟನೆಯಿಂದ ಸಂಚಾರ ಅಸ್ತವ್ಯಸ್ತ–ಮೃತ ಯುವಕನ ಕುಟುಂಬಸ್ಥರಿಗೆ ಸಚಿವರ ಸಾಂತ್ವನ
ವಿಜಯಸಾಕ್ಷಿ ಸುದ್ದಿ, ಗಂಗಾವತಿ: ಕುರಿ ಮೇಯಿಸಲು ತೆರಳಿದ್ದ ಕುರಿಗಾಹಿ ಮೇಲೆ ದಾಳಿ ನಡೆಸಿ ಕೊಂದಿದ್ದ ಚಿರತೆ ಸೆರೆಗೆ ಆಗ್ರಹಿಸಿ ಶುಕ್ರವಾರ ರಾತ್ರಿಯಿಂದಲೂ ಕರಿಯಮ್ಮನಗಡ್ಡಿಯಲ್ಲಿ ತೀವ್ರ ಪ್ರತಿಭಟನೆ ನಡೆಯಿತು. ಜನರ ಆಕ್ರೋಶದಿಂದ ಬೆಚ್ಚಿ ಬಿದ್ದ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿತು. ಸುಮಾರು 8 ಗಂಟೆಗಳ ಕಾಲ ನಡೆದ ಪ್ರತಿಭಟನೆಯಿಂದ ಸಂಚಾರ ಅಸ್ತವ್ಯಸ್ತಗೊಂಡಿತು.
ಜಿಲ್ಲೆಯಲ್ಲಿ ಚಿರತೆ ದಾಳಿ ತಲ್ಲಣ ಮೂಡಿಸಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಇಬ್ಬರು ಜೀವ ತೊರೆದಿದ್ದಾರೆ. ಇಷ್ಟೆಲ್ಲ ಅವಘಡ ಸಂಭವಿಸಿದರೂ ಕೂಗಳತೆ ದೂರದಲ್ಲಿರುವ ಅರಣ್ಯ ಸಚಿವ ಆನಂದ್ ಸಿಂಗ್ ಭೇಟಿ ನೀಡಿರಲಿಲ್ಲ. ಹಾಗಾಗಿ ಸಚಿವರು ಸ್ಥಳಕ್ಕೆ ಬರಲೇಬೇಕೆಂದು ಬಿಗಿಪಟ್ಟು ಹಿಡಿದು ಸುತ್ತಮುತ್ತಲಿನ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಸಚಿವರು ಬೆಳಗ್ಗೆ ಬರುವುದಾಗಿ ಭರವಸೆ ನೀಡಿದರೂ ಮಧ್ಯಾಹ್ನವಾದರೂ ಬರಲಿಲ್ಲ. ಸಚಿವರು ಸ್ಥಳಕ್ಕೆ ಬರುವವರೆಗೆ ಶವಸಂಸ್ಕಾರ ಮಾಡದಿರಲು ಕುಟುಂಬಸ್ಥರು ನಿರ್ಧರಿಸಿದರು.
ಕೊನೆಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಆಗಮಿಸಿದ ಅರಣ್ಯ ಸಚಿವ ಆನಂದಸಿಂಗ್ ಅವರಿಗೆ ಕರಿಯಮ್ಮಗಡ್ಡಿ, ವಿರೂಪಾಪೂರಗಡ್ಡಿ, ಸಾಣಾಪೂರ ಸುತ್ತಲಿನ ಗ್ರಾಮಸ್ಥರು ಮಹಿಳೆಯರು ಮುತ್ತಿಗೆ ಹಾಕಿ ಪ್ರತಿಭಟಿಸಿದ ಪ್ರಸಂಗ ಜರುಗಿತು.
ಕಳೆದ ಮೂರ್ನಾಲ್ಕು ತಿಂಗಳಿಂದ ಆನೆಗೊಂದಿ ಭಾಗದಲ್ಲಿ ಚಿರತೆಗಳು ಕರಡಿಗಳ ಹಾವಳಿ ಹೆಚ್ಚಾಗಿದೆ. ಈಗಾಗಲೇ ಚಿರತೆ ದಾಳಿಯಲ್ಲಿ ಇಬ್ಬರು ಯುವಕರು ಮೃತರಾಗಿದ್ದು ಹಲವರಿಗೆ ಗಾಯಗಳಾಗಿವೆ. ಕುರಿ ಆಡು ದನಗಳ ಮೇಲೆ ಚಿರತೆಗಳು ನಿರಂತರ ದಾಳಿ ನಡೆಸುತ್ತಿದ್ದು ಪಕ್ಕದಲ್ಲಿದ್ದರೂ ಅರಣ್ಯ ಸಚಿವರು ಆನೆಗೊಂದಿ ಭಾಗಕ್ಕೆ ಭೇಟಿ ನೀಡದೇ ನಿರ್ಲಕ್ಷ್ಯ ಮಾಡಲಾಗಿದೆ. ಆನೆಗೊಂದಿ ಸುತ್ತಲಿನ ಗುಡ್ಡಪ್ರದೇಶದಲ್ಲಿ ಜನರಿಗೆ ಅರಣ್ಯ ಇಲಾಖೆಯವರು ನಿರಂತರ ಕಿರುಕುಳ ನೀಡುತ್ತಿದ್ದಾರೆ. ಒಂದು ಕಡೆ ಪ್ರಾಣಿಗಳ ಕಾಟ ಇನ್ನೊಂದು ಕಡೆ ಅರಣ್ಯ ಇಲಾಖೆಯವರ ಕಾಟ ನಿರಂತರವಾಗಿದೆ ಎಂದು ಪ್ರತಿಭಟನಾನಿರತರು ಸಚಿವರಿಗೆ ದೂರಿದರು.
ಚಿರತೆ ಕರಡಿಗಳ ಬಗ್ಗೆ ಅರಣ್ಯ ಇಲಾಖೆಯವರಿಗೆ ಮೊಬೈಲ್ ಕರೆ ಮಾಡಿ ಮಾಹಿತಿ ನೀಡಿದರೂ ನಿರ್ಲಕ್ಷ್ಯ ಮಾಡುತ್ತಾರೆ. ಅಕ್ರಮ ಮರಳು ಗಣಿಗಾರಿಕೆ ಮಾಹಿತಿ ನೀಡಿದರೆ ಕ್ಷಣದಲ್ಲಿ ದಾಳಿ ಮಾಡುತ್ತಾರೆ. ಹಣಕ್ಕಾಗಿ ಜನರನ್ನು ಅರಣ್ಯ ಇಲಾಖೆಯವರು ಪೀಡಿಸುತ್ತಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಎಂಎಲ್ಸಿ ಎಚ್.ಶ್ರೀನಾಥ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ ಕಿಶೋರ ಪ್ರತಿಭಟನಾ ನಿರತರನ್ನು ಸಮಾಧಾನ ಮಾಡಿದರು. ನಂತರ ಸಚಿವ ಆನಂದ್ ಸಿಂಗ್ ಮೃತದೇಹವಿದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಕುಟುಂಬಸ್ಥರ ಅಹವಾಲನ್ನು ಆಲಿಸಿದರು.
ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ ಕಿಶೋರ, ಎಸ್ಪಿ ಟಿ.ಶ್ರೀಧರ, ಡಿಎಫ್‍ಐ ಹರ್ಷಾಭಾನು, ಎಸಿ ನಾರಾಯಣರೆಡ್ಡಿ ಕನಕರೆಡ್ಡಿ, ತಹಸೀಲ್ದಾರ್ ಎಂ.ರೇಣುಕಾ, ಡಿಎಸ್‍ಪಿ ರುದ್ರೇಶ ಉಜ್ಜನಕೊಪ್ಪ,ತಾ.ಪಂ.ಸದಸ್ಯ ವೈ.ರಮೇಶ, ಗ್ರಾ.ಪಂ.ಸದಸ್ಯರಾದ ಕೆ.ನಾಗೇಶ, ರಘುವರ್ಮಾ, ಅಶೋಕ ಸೇರಿ ಗ್ರಾಮಸ್ಥರಿದ್ದರು.
ಆನೆಗೊಂದಿ ಭಾಗದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಳವಾಗಿದ್ದು ರಾಜ್ಯದ ವಿವಿಧೆಡೆ ಇತ್ತೀಚೆಗೆ ಜನ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ ಆನೆಗೊಂದಿ ಸುತ್ತಲಿನ ಪ್ರದೇಶದಲ್ಲಿ ಇಬ್ಬರು ಯುವಕರು ಚಿರತೆ ದಾಳಿಯಲ್ಲಿ ಮೃತರಾಗಿದ್ದಾರೆ. ಇವರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 7.5 ಲಕ್ಷ ಹಾಗೂ ತಾವು ವೈಯಕ್ತಿಕವಾಗಿ 2.5 ಲಕ್ಷ ರೂ.ಒಟ್ಟು 10 ಲಕ್ಷ ರೂ.ಗಳನ್ನು ವಿತರಿಸಲಾಗುತ್ತದೆ ಎಂದು ಸಚಿವ ಆನಂದ್ ಸಿಂಗ್ ಘೋಷಿಸಿದರು.
ಈಗಾಗಲೇ ಚಿರತೆಯನ್ನು ಶೂಟೌಟ್ ಮಾಡಲು ಸರಕಾರ ಕಾನೂನು ತಜ್ಞರು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರ ಜತೆ ಚರ್ಚೆ ನಡೆಸಿದ್ದು ಸೋಮವಾರ ಸಂಜೆಯೊಳಗೆ ಶೂಟೌಟ್ ಮಾಡಲು ಆದೇಶ ನೀಡುವ ಸಂದರ್ಭವಿದ್ದು ಜನರ ಜೀವ ಸಂರಕ್ಷಣೆ ಮಾಡಲು ಅಗತ್ಯ ಕ್ರಮ ಜರುಗಿಸಲಾಗುತ್ತದೆ. ಈಗಾಗಲೇ ಶಾಸಕ ಪರಣ್ಣ ಮುನವಳ್ಳಿ ಜತೆ ಚರ್ಚೆ ಮಾಡಿದ್ದು ಮೃತ ರಾಘವೇಂದ್ರ ಕುಟುಂಬದವರಿಗೆ ಸ್ಥಳೀಯವಾಗಿ ನೌಕರಿ ಕೊಡಿಸುವ ಕುರಿತು ಚಿಂತನೆ ಮಾಡಲಾಗಿದೆ ಎಂದು ಸಚಿವ ಆನಂದ್ ಸಿಂಗ್ ತಿಳಿಸಿದರು.
ಚಿರತೆಧಾಮ ಮಾಡುವ ಉದ್ದೇಶ ಇಲ್ಲ
ಆನೆಗೊಂದಿ ಭಾಗದಲ್ಲಿ ಚಿರತೆ ಧಾಮ ಮಾಡುವ ಯಾವುದೇ ಉದ್ದೇಶ ಸರಕಾರದ ಮುಂದೆ ಇಲ್ಲ. ಏಳುಗುಡ್ಡ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಕಾರಿಕೆ ಸ್ಪೋಟದಿಂದ ಚಿರತೆಗಳು, ಕರಡಿಗಳು ಅಂಜನಾದ್ರಿ ಬೆಟ್ಟದ ಸುತ್ತ ವಲಸೆ ಬಂದಿರಬಹುದು. ಆದ್ದರಿಂದ ಕೂಡಲೇ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.