Home Blog Page 3226

ಶಿಕ್ಷಕಿ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು: ನಗರಸಭೆ ಬಿಜೆಪಿ ಸದಸ್ಯೆ ಸೇರಿ ನಾಲ್ವರ ಬಂಧನ

ವಿಜಯಸಾಕ್ಷಿ ಸುದ್ದಿ, ಮೈಸೂರು

ಐದು ತಿಂಗಳ ಹಿಂದೆ ನಂಜನಗೂಡಿನಲ್ಲಿ ನಡೆದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ನಂಜನಗೂಡು ನಗರಸಭೆಯ ಬಿಜೆಪಿ ಸದಸ್ಯೆ ಗಾಯಿತ್ರಿ ಮುರುಗೇಶ್ ಹಾಗೂ ಕೃತ್ಯಕ್ಕೆ ಸಹಕರಿಸಿದ ಆರೋಪದಡಿ ಇತರ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ: ಮಾರ್ಚ್ 9ರಂದು ನಂಜನಗೂಡಿನ ಮೊರಾರ್ಜಿ ದೇಸಾಯಿ ಶಾಲೆಯ ಹಿಂದಿ ಶಿಕ್ಷಕಿ ಸುಲೋಚನಾ(45 ವರ್ಷ) ಮಹದೇಶ್ವರ ಬಡಾವಣೆಯ ಬಾಡಿಗೆ ಮನೆಯಲ್ಲಿ ನಿಗೂಢ ರೀತಿಯಲ್ಲಿ ಕೊಲೆಯಾಗಿದ್ದರು. ಏಳು ವರ್ಷಗಳ ಹಿಂದೆ ಪತಿ ಡಿ.ಕೆ.ಸುರೇಶ್ರನ್ನು ಕಳೆದುಕೊಂಡಿದ್ದ ಸುಲೋಚನಾ ಇಬ್ಬರು ಮಕ್ಕಳನ್ನೂ ಹೊಂದಿದ್ದರು. ಮಗಳಿಗೆ ಮದುವೆಯಾಗಿದ್ದು, ಮಗ ದಯಾನಂದ ಬೆಂಗಳೂರಿನಲ್ಲಿದ್ದರು. ಹೀಗಾಗಿ ಸುಲೋಚನಾ ನಂಜನಗೂಡಿನಲ್ಲಿ ಒಬ್ಬರೇ ಇದ್ದು, ಕೆಲಸ ಮಾಡುತ್ತಿದ್ದರು.

ಇನ್ನು ಇತ್ತ, ಆರೋಪಿ ಗಾಯಿತ್ರಿ ಅವರ ಪತಿ ಮುರುಗೇಶ್ ಸ್ಥಳೀಯ ದೇವಸ್ಥಾನವೊಂದರಲ್ಲಿ `ಡಿ’ ದರ್ಜೆಯ ನೌಕರರಾಗಿದ್ದು, ರಾಜಕೀಯ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದರು. ತನ್ನ ಪತಿಯ ಜೊತೆ ಶಿಕ್ಷಕಿ ಸುಲೋಚನಾ ಸಲುಗೆಯಿಂದಿದ್ದು, ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಗಾಯಿತ್ರಿ ಬಲವಾದ ಸಂಶಯ ಹೊಂದಿದ್ದರು ಎನ್ನಲಾಗಿದೆ.

ಈ ವಿಷಯಕ್ಕಾಗಿ ಸಾಕಷ್ಟು ಬಾರಿ ಮನೆಯಲ್ಲಿ ಗಲಾಟೆಗಳೂ ನಡೆದಿದ್ದವು. ತನ್ನ ಕುಟುಂಬದ ನೆಮ್ಮದಿಗೆ ಅಡ್ಡಿಯಾಗುತ್ತಿರುವ ಕಾರಣಕ್ಕಾಗಿ ಸುಪಾರಿ ಕೊಟ್ಟು ಸುಲೋಚನಾರನ್ನು ಕೊಲೆ ಮಾಡಿಸಿರುವ ಬಗ್ಗೆ ಆರೋಪಗಳು ಕೇಳಿಬಂದಿದ್ದು, ನಗರಸಭೆ ಸದಸ್ಯೆ ಗಾಯಿತ್ರಿ ಮುರುಗೇಶ್ ಹಾಗೂ ಈ ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ಸಂಬಂಧಿಕರಾದ ಭಾಗ್ಯ, ನಾಗಮ್ಮ ಮತ್ತು ಕುಮಾರ್ ಎಂಬ ಮೂವರು ಸಂಬಂಧಿಕರನ್ನೂ ಮೈಸೂರು ಜಿಲ್ಲಾ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.

ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಸರಕಾರಿ ನೌಕರಿ; ಮಹಿಳೆ, ತಹಶೀಲ್ದಾರ, ಆರ್ ಐ ವಿರುದ್ಧ ಪ್ರಕರಣ

ವಿಜಯಸಾಕ್ಷಿ ಸುದ್ದಿ, ಗದಗ

ತಹಶೀಲ್ದಾರ ಎದುರು ಸುಳ್ಳು ಮಾಹಿತಿ ನೀಡಿ, ಅರ್ಹತೆ ಇಲ್ಲದಿದ್ದರೂ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದು ಸರಕಾರದ ಆರೋಗ್ಯ ಇಲಾಖೆಯಲ್ಲಿ ಕಿರಿಯ ಆರೋಗ್ಯ ಸಹಾಯಕಿ ಹುದ್ದೆಯ ಕೆಲಸ ಪಡೆದುಕೊಂಡ ಮಹಿಳೆ ಹಾಗೂ ಅಂದಿನ ತಹಶೀಲ್ದಾರ, ಕಂದಾಯ‌ ನಿರೀಕ್ಷಕ ಹಾಗೂ ತಲಾಠಿ ವಿರುದ್ಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ ಇಂಜಿನಿಯರ್ ಮನೆಯ ಬೀಗ ಮುರಿದು 9.42 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನ

ಪ್ರಕರಣದ ಆರೋಪಿ ಮುಂಡರಗಿ ತಾಲೂಕಿನ ಬಿದರಳ್ಳಿಯ ರೇಣುಕಾ ಸತ್ಯಪ್ಪ ಕುರಗೋಡಿ ಎಂಬುವವರು ಮಡ್ಡರ ಜಾತಿಗೆ ಸೇರಿದ್ದರೂ ಕೂಡ ದಿ. 14.01.2015ರಂದು ಮುಂಡರಗಿಯ ತಹಶೀಲ್ದಾರ ಎದುರು ಸುಳ್ಳು ಮಾಹಿತಿ ಹಾಗೂ ಸುಳ್ಳು ಘೋಷಣೆಗಳನ್ನು ಮಾಡಿ, ಅವರಿಂದ ಹಿಂದೂ ಭೋವಿ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆದು ಅದರ ಆಧಾರದ ಮೇಲೆ ಕಿರಿಯ ಆರೋಗ್ಯ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಿ, ನೇಮಕಾತಿ ಪಡೆದು ದಿ. 31.01.2015 ರಂದು ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸಕ್ಕೆ ಹಾಜರಾಗಿದ್ದರು.

ಇದನ್ನೂ ಓದಿ ಶಿಕ್ಷಕಿ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು: ನಗರಸಭೆ ಬಿಜೆಪಿ ಸದಸ್ಯೆ ಸೇರಿ ನಾಲ್ವರ ಬಂಧನ 

ಈ ಮೂಲಕ ಸರ್ಕಾರಕ್ಕೆ ಮತ್ತು ನಿಜವಾದ ಪರಿಶಿಷ್ಟ ಜಾತಿಯ ಜನರಿಗೆ ಮೋಸ ಮಾಡಿ ಅಪರಾಧವೆಸಗಿರುವ ಬಗ್ಗೆ ರೇಣುಕಾ, ಸದರಿ ಜಾತಿ ಪ್ರಮಾಣಪತ್ರ ವಿತರಿಸಿದ ಅಂದಿನ ತಹಶೀಲ್ದಾರ, ಅಂದು ಕರ್ತವ್ಯದಲ್ಲಿದ್ದ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ

ಕಲಂ: 177,182,198,199,420,109
ಐಪಿಸಿ ಮತ್ತು U/S 3[1][q] sc/st[PA] amendment act-2015 ಮತ್ತು ಕಲಂ: 5(ಎ), 5(ಬಿ), 6(ಎ) ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ ಅಧಿನಿಯಮ 2011ರ ಅನ್ವಯ ಮೊಕದ್ದಮೆ ದಾಖಲಿಸುವಂತೆ ಎಸ್ಸಿ, ಎಸ್ಟಿ ರಕ್ಷಣಾ ಕೋಶದ
Directorate of civil rights enforcement ನ ಬಾಗಲಕೋಟೆಯ ಪೊಲೀಸ್ ಅಧಿಕಾರಿಗಳಾದ ವೆಂಕಟೇಶ ಎಸ್ ಮುರ್ನಾಳ ಎಂಬುವರು ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇಂಜಿನಿಯರ್ ಮನೆಯ ಬೀಗ ಮುರಿದು 9.42 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನ

ವಿಜಯಸಾಕ್ಷಿ ಸುದ್ದಿ, ಗದಗ

ಮನೆಯ ಬೀಗ ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು ಒಳಗಿದ್ದ ಲಕ್ಷಾಂತರ ರೂ. ಮೌಲ್ಯದ ಆಭರಣಗಳನ್ನು ದೋಚಿರುವ ಬಗ್ಗೆ ಗದಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜುಲೈ 22ರಿಂದ ಜು.31ರೊಳಗಿನ ನಡುವಿನ ಅವಧಿಯಲ್ಲಿ ಹುಬ್ಬಳ್ಳಿ ರಸ್ತೆಯ ಕೇಶವ ನಗರದ ನಾಲ್ಕನೇ ಕ್ರಾಸ್ ನಲ್ಲಿ ಇರುವ ಇಂಜಿನಿಯರ್ ಸಮೀವುಲ್ಲಾ ಮಹಮ್ಮದಾಸ್ ಅಂಖನ್ ಲೋಹಾನಿ ಅವರ ವಾಸದ ಮನೆಯ ಗ್ರಿಲ್ಗೇಟಿಗೆ ಅಳವಡಿಸಿದ್ದ ಕೀಲಿಯನ್ನು ಹಾಗೂ ಬಾಗಿಲಿಗೆ ಹಾಕಿದ್ದ ಇಂಟರ್ಲಾಕನ್ನು ಮುರಿದ ಕಳ್ಳರು ಮನೆಯೊಳಗೆ ಹೋಗಿ ಬೆಡ್ರೂಮಿನ ಟ್ರೆಝರಿಯ ಬಾಗಿಲನ್ನು ಮೀಟಿ ತೆಗೆದು,

ಟ್ರೆಝರಿಯೊಳಗಿದ್ದ 6 ಲಕ್ಷ ರೂ. ಬೆಲೆಬಾಳುವ 200 ಗ್ರಾಂ. ತೂಕದ ನಾಲ್ಕು ಬಂಗಾರದ ನೆಕ್ಲೆಸ್, 2.7 ಲಕ್ಷ ರೂ. ಬೆಲೆಬಾಳುವ ಸುಮಾರು 90 ಗ್ರಾಂ. ತೂಕದ ನಾಲ್ಕು ಬಂಗಾರದ ಬಳೆಗಳು, 12 ಸಾವಿರ ರೂ. ಬೆಲೆಬಾಳುವ 4 ಗ್ರಾಂ. ತೂಕದ ಬಂಗಾರದ ಉಂಗುರ, 60 ಸಾವಿರ ರೂ. ಬೆಲೆಯ 20 ಗ್ರಾಂ. ತೂಕದ ಬಂಗಾರದ ಕಿವಿಯೋಲೆ ಸೇರಿದಂತೆ ಒಟ್ಟೂ 9,42,000 ರೂ. ಬೆಲೆಬಾಳುವ 314 ಗ್ರಾಂ. ತೂಕವಿರುವ ಬಂಗಾರದ ಆಭರಣಗಳು ಕಳ್ಳತನವಾಗಿದೆ.

ಈ ಕುರಿತು ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಗದಗದಲ್ಲಿ ಹೀಗೊಂದು ಸಗಣಿ ಫೈಟ್!!

0

ವಿಜಯಸಾಕ್ಷಿ ಸುದ್ದಿ, ಗದಗ

ರಸ್ತೆಯಲ್ಲಿ ಫೈಟ್ ನಡಿತಿದ್ರೆ ಯಾರು ತಾನೇ ಮೋಜು ನೋಡಲ್ಲ ಹೇಳಿ? ಸುಮ್ಮನೆ ನಿಂತು ನೋಡುವವರು, ನಗುವವರು, ಮೊಬೈಲ್‌ನಲ್ಲಿ ಫೋಟೋ, ವಿಡಿಯೊ ತೆಗೆಯುವವರು… ಹೀಗೇ ಥರಾವರಿಯಾಗಿ ಜಗಳವನ್ನ ರಂಜನೀಯವಾಗಿ ಕಾಣುತ್ತಾರೆ.

ಗದಗನ ಗಂಗಾಪೂರಪೇಟೆಯಲ್ಲೂ ಮಂಗಳವಾರ ಸಂಜೆ ಇಂಥದ್ದೇ ರೋಚಕ ಕಾಳಗ ನಡೆಯಿತು. ಎರಡು ಗುಂಪುಗಳ ಸುಮಾರು 20 ಜನ, ಅದರಲ್ಲಿ ಅರ್ಧಕ್ಕರ್ಧ ಜನರಿಗೆ ಹೆಣ್ಣಿನ ವೇಷ, ಕೊರಳಲ್ಲಿ ತರಕಾರಿ ಸರ.. ದುರ್ಗಾದೇವಿ ಪೂಜೆ ಮುಗಿದಿದ್ದೇ ತಡ ಶುರುವಾಯ್ತು ನೋಡಿ ಫೈಟ್..?

ಫೈಟ್ ಆರಂಭವಾಗಿ ಅರ್ಧ, ಮುಕ್ಕಾಲು ಗಂಟೆಯಾದರೂ ಪೊಲೀಸರು ಬರಲೇ ಇಲ್ಲ. ನೆರೆದಿದ್ದ ಜನ ಮಾತ್ರ ನಗನಗ್ತಾ ಜಗಳ ಎಂಜಾಯ್ ಮಾಡುತ್ತಿದ್ದರು. ವ್ಯತ್ಯಾಸ ಇಷ್ಟೇ; ಸಾಮಾನ್ಯವಾಗಿ ನಡೆಯುವ ಕದನಗಳಲ್ಲಿ ಮಾರಕಾಸ್ತ್ರಗಳಿರುತ್ತವೆ. ಇಲ್ಲಿನ ಕದನದಲ್ಲಿ ಇದ್ದಿದ್ದು ಒಂದೇ ಅಸ್ತ್ರ, ಅದು “ಸಗಣಿ”!!

ಕೆರೆ ಕಟಾಂಬ್ಲಿ ಶ್ರಾವಣದ ಹಬ್ಬ

ಇಡೀ ರಾಜ್ಯದಲ್ಲಿ ಪರಸ್ಪರ ಸಗಣಿ ಎರಚಾಟ ನಡೆಯುವುದು ಗದಗನ ಗಂಗಾಪೂರಪೇಟೆಯಲ್ಲಿ ಮಾತ್ರ. ಶ್ರಾವಣದ ವೇಳೆ ನಾಗರ ಪಂಚಮಿ ಮರುದಿನ ನಡೆಯುವ ಈ ಹಬ್ಬಕ್ಕೆ ಕೆರೆ ಕಟಾಂಬ್ಲಿ ಎನ್ನುವ ಹೆಸರು ರೂಢಿಗತವಾಗಿ ಬಂದಿದೆ.

ಸ್ಥಳೀಯರ ಪ್ರಕಾರ ಸಗಣಿ ಕದನದ ಹಿನ್ನೆಲೆ ಇಷ್ಟೇ; ಸಗಣಿಗೆ ಔಷಧೀಯ ಗುಣವಿದ್ದು ಚರ್ಮರೋಗ ಸೇರಿದಂತೆ ಹಲವು ಕಾಯಿಲೆಗಳು ವಾಸಿಯಾಗುತ್ತವೆ. ವರ್ಷಕ್ಕೊಮ್ಮೆಯಾದರೂ ಸೆಗಣಿಯೋಕುಳಿ ಆಡಿ ದೇಹ, ಮನಸು ಆರೋಗ್ಯವಾಗಿರಬೇಕು. ಜೊತೆಗೆ ಸಗಣಿ ಎಂದರೆ ತಾತ್ಸಾರವಲ್ಲ, ಅದೊಂದು ಔಷಧಿ ಎಂಬುದನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸುವ ಉದ್ದೇಶ ಈ ಹಬ್ಬಕ್ಕಿದೆ.

ಸಗಣಿ ಫೈಟ್ ಗಂಭೀರವಾಗಿ ನಡೆದು ಮನಸು ಕೆಡಿಸುವಂಥದ್ದಲ್ಲ, ಆರೋಗ್ಯ ಜಾಗೃತಿ, ಮನರಂಜನೆಯ ಜೊತೆಗೆ ಮನಸುಗಳನ್ನು ಬೆಸೆಯುವ ಹಬ್ಬ.

” ಸಗಣಿ ಎಂದರೆ ಮೂಗು ಮುಚ್ಚಿಕೊಳ್ಳುವವರೇ ಜಾಸ್ತಿ ಇರುವ ಕಾಲವಿದು. ಉತ್ತರ ಕರ್ನಾಟಕದಲ್ಲಿ ಗೋಮಾತೆ ಬಗ್ಗೆ ಪೂಜ್ಯಭಾವ ಇರುವಂತೆ ಗೋಮಾತೆಯ ಸಗಣಿಗೂ ಬೇಡಿಕೆ, ಪೂಜ್ಯತಾ ಭಾವ ಇದೆ. ಸಗಣಿಯಿಂದ ಕುಳ್ಳು, ಕುಳ್ಳಿನಿಂದ ಕೂಳು ಎನ್ನುತ್ತಿದ್ದ ಕಾಲವಿತ್ತು. ಆಧುನಿಕತೆಯ ಭರಾಟೆಯಲ್ಲಿ ಮರೆಯಾದ ಸಗಣಿಯ ಮಹತ್ವವನ್ನು ಸಾರುವ ಹಬ್ಬವಿದು.”

ಅನ್ನಪೂರ್ಣ, ಸ್ಥಳೀಯರು

ಗ್ರಾಮಸ್ಥರ ಕಣ್ಣಿಗೆ ಬಿದ್ದ ನೀರಿನ ಪೈಪ್ ಕಳ್ಳರು! ಬೆನ್ನಟ್ಟಿದಾಗ ಟ್ರ್ಯಾಕ್ಟರ್ ಬಿಟ್ಟು ಪರಾರಿ

ವಿಜಯಸಾಕ್ಷಿ ಸುದ್ದಿ, ಗದಗ

ಕಳೆದ ಹಲವು ದಿನಗಳಿಂದ ಹನಿ ನೀರಾವರಿಯ ಪೈಪ್‌ಗಳು ಕಳ್ಳತನವಾಗುತ್ತಿದ್ದವು. ಮಂಗಳವಾರ ರಾತ್ರಿ ಜಿಲ್ಲೆಯ ಮುಂಡರಗಿ ತಾಲೂಕಿ‌ನ ಜಂತ್ಲಿ ಶಿರೂರು ಗ್ರಾಮದಲ್ಲಿ ಹನಿ ನೀರಾವರಿಯ ಲಕ್ಷಾಂತರ ರೂಪಾಯಿ ಮೌಲ್ಯದ ಪೈಪ್‌ಗಳನ್ನು ಕಳ್ಳತನ ಮಾಡಿದ ಖದೀಮರು, ಟ್ರ್ಯಾಕ್ಟರ್‌ನಲ್ಲಿ ತುಂಬುವಾಗ ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದಾರೆ.

ಗ್ರಾಮಸ್ಥರು ಕಳ್ಳರನ್ನು ಬೆನ್ನಟ್ಟುತ್ತಿದ್ದಂತೆ ನೀರಿನ ಪೈಪ್ ಕಳ್ಳರು, ಪೈಪ್‌ಗಳನ್ನು ತುಂಬಿದ್ದ ಟ್ರ್ಯಾಕ್ಟರ್‌ನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ನಾಲ್ಕೈದು ಜನ ಇದ್ದರು ಎಂದು ಹೇಳಲಾಗುತ್ತಿದ್ದು, ನೀರಿನ ಪೈಪ್ ಕಳ್ಳರ ಹಾವಳಿಯಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದು, ಅವರನ್ನು ಹೇಗಾದರೂ ಮಾಡಿ ರೆಡ್ ಹ್ಯಾಂಡ್ ಆಗಿ ಹಿಡಿಯಲು ರೈತರು ನಡೆಸಿದ ಪ್ರಯತ್ನ ವಿಫಲವಾಗಿದ್ದು, ಆರೋಪಿಗಳ ಬಂಧನಕ್ಕೆ ರೈತರು ಒತ್ತಾಯಿಸಿದ್ದಾರೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಗಂಡನ ಮನೆಯವರ ಕಿರುಕುಳಕ್ಕೆ ನೊಂದು ಗೃಹಿಣಿ ಆತ್ಮಹತ್ಯೆ; ಸರಕಾರಿ ನೌಕರ ಸೇರಿ ಮೂವರ ಬಂಧನ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಪತಿ ಹಾಗೂ ಅತ್ತೆ, ಮಾವನ ಕಿರುಕುಳಕ್ಕೆ ಮನನೊಂದು ಗೃಹಿಣಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಜರುಗಿದೆ. ಸುನೀತಾ ಪ್ರಮೋದ ಕಮ್ಮಾರ(30) ಎಂಬ ಗೃಹಿಣಿಯೇ ಆತ್ಮಹತ್ಯೆಗೆ ಶರಣಾದ ದುರ್ದೈವಿ.

ಧಾರವಾಡದ ಭಾರತಿ ಬಸವರಾಜ ಪತ್ತಾರ ಎಂಬುವವರ ಮಗಳಾದ ಸುನಿತಾಳನ್ನು ಶಿಗ್ಲಿಯ ಪ್ರಮೋದ ನಿಂಬಣ್ಣ ಕಮ್ಮಾರ ಎಂಬ ಕೆಪಿಟಿಸಿಎಲ್ ಉದ್ಯೋಗಿಗೆ ೨೦೦೮ ರಲ್ಲಿಯೇ ಮದುವೆ ಮಾಡಿಕೊಟ್ಟಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಮದುವೆಯ ಕೆಲ ವರ್ಷಗಳ ನಂತರ ಗಂಡ ಪ್ರಮೋದ, ಅತ್ತೆ ಶಕುಂತಲಾ, ಮಾವ ನಿಂಬಣ್ಣ ಕಮ್ಮಾರ ಅವರು ನಿತ್ಯ ಅವಳೊಂದಿಗೆ ವಿನಾಕಾರಣ ಜಗಳ ತೆಗೆಯುವುದು, ನೀನು ನಮ್ಮ ಮನೆಗೆ ಲಾಯಕ್ಕಿಲ್ಲ, ಏನಾದರೂ ಮಾಡಿಕೊಂಡು ಸಾಯಿ. ನಾವು ನನ್ನ ಮಗನಿಗೆ ಬೇರೆ ಮದುವೆ ಮಾಡುತ್ತೇವೆ ಎಂದು ಆಕೆಗೆ ನಿತ್ಯ ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿದ್ದರೆಂದು ಆರೋಪಿಸಲಾಗಿದೆ. ಇದರಿಂದ ಮನನೊಂದ ಗೃಹಿಣಿ ಆ.1 ರ ಸೋಮವಾರ ಸಂಜೆ ಮನೆಯ ಕೋಣೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಅವರ ಸಾವಿಗೆ ಗಂಡ, ಅತ್ತೆ ಮಾವನೇ ನೇರ ಕಾರಣ ಎಂದು ಮೃತಳ ತಾಯಿ ಭಾರತಿ ಪತ್ತಾರ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ನಂತರ ಪ್ರಕರಣವನ್ನು ಮುಚ್ಚಿಹಾಕುವ ನಿಟ್ಟಿನಲ್ಲಿ ಮಂಗಳವಾರ ಇಡೀ ದಿನ ಹೈಡ್ರಾಮಾ ನಡೆಯಿತು. ಆದರೆ ಮೃತಳ ಸಹೋದರ ಸೈನಿಕನಾಗಿದ್ದು ಅವರ ದಿಟ್ಟ ನಿಲುವಿನಿಂದ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಮೂರು ಜನರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಳೆದುಹೋದ ಮೊಬೈಲ್ ಮರಳಿ ವಾರಸುದಾರರಿಗೆ ಕೊಟ್ಟ ಪೊಲೀಸರು

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಸಾರ್ವಜನಿಕ ಸ್ಥಳಗಳಲ್ಲಿ, ಸಂತೆ, ಜಾತ್ರೆಯಂಥಹ ಜನನಿಬಿಡ ಪ್ರದೇಶಗಳಲ್ಲಿ ಮೊಬೈಲ್ ಕಳೆದುಕೊಂಡವರ ಗೋಳು ಹೇಳತೀರದು. ಸಾವಿರಾರು ರೂ. ಬೆಲೆಬಾಳುವ ಮೊಬೈಲ್ ಕಳೆದುಕೊಂಡ ನೋವು ಒಂದೆಡೆಯಾದರೆ, ತಮ್ಮದೇ ವಿಳಾಸ ಪುರಾವೆಗಳ ಮೂಲಕ ಪಡೆದುಕೊಂಡ ಸಿಮ್ ಕಾರ್ಡ್ ಯಾರ್ಯಾರದೋ ಕೈಗೆ ಸಿಕ್ಕು ದುರ್ಬಳಕೆಯಾಗುವ ಸಾಧ್ಯತೆಗಳ ಬಗೆಗಿನ ಭಯ ಇನ್ನೊಂದೆಡೆ. ಮೊಬೈಲ್ ಮರಳಿ ಸಿಗುವ ನಂಬಿಕೆ ಇಲ್ಲದಿದ್ದರೂ, ದುರ್ಬಳಕೆಯ ಪ್ರಕರಣಗಳಿಂದ ರಕ್ಷಿಸಿಕೊಳ್ಳುವ ಉದ್ದೇಶಕ್ಕಾಗಿಯಾದರೂ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದಿರುವ ಬಗ್ಗೆ ಪ್ರಕರಣ ದಾಖಲಿಸುವರೇ ಅಧಿಕ.

ಆದರೆ, ಮುಂಡರಗಿ ಪೊಲೀಸರು ಇಂಥ ಪ್ರಕರಣಗಳನ್ನೂ ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸಿ, ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳುವಾದ ಮತ್ತು ತಮ್ಮ ಅಜಾಗರೂಕತೆಯಿಂದ ಬೇರೆ ಬೇರೆ ಸ್ಥಳಗಳಲ್ಲಿ ಮೊಬೈಲ್ ಕಳೆದುಕೊಂಡ ಬಗ್ಗೆ ದಾಖಲಿಸಿಕೊಂಡ ಪ್ರಕರಣಗಳನ್ನು ಭೇದಿಸಿ ವಿವಿಧ ಕಂಪನಿಗಳ 8.9 ಲಕ್ಷ.ರೂ ಬೆಲೆಬಾಳುವ 68 ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಪತ್ತೆಮಾಡಿ, ವಶಪಡಿಸಿಕೊಂಡು ಮಾಲಕರಿಗೆ ಮರಳಿ ನೀಡಿದ್ದಾರೆ.

ಐಎಂಇಐ ಸಂಖ್ಯೆಯ ಆಧಾರದ ಮೇಲೆ ಈ ಎಲ್ಲ ಕಳೆದುಹೋದ ಮೊಬೈಲ್ ಗಳನ್ನು ಪತ್ತೆಹಚ್ಚಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರ ಠಾಣಾ ಪರಿವೀಕ್ಷಣೆಯ ಸಂದರ್ಭದಲ್ಲಿ ವಾರಸುದಾರರಿಗೆ ಹಿಂದಿರುಗಿಸಿದರು.

ಪತ್ತೆ ಕಾರ್ಯದಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿಗಳಾದ ಜೆ.ಆಯ್. ಬಚೇರಿ, ಅವಿನಾಶ ಸಿಂಗ್ ಬ್ಯಾಳಿ, ಶರಣಪ್ಪ ನಾಗೇಂದ್ರಗಡ, ಮಂಜುನಾಥ ಮಾದರ ಇವರು ನೆರವು ನೀಡಿದ್ದು, ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ದೂರುದಾರರೂ ಕೂಡ, ಕಳೆದುಹೋದ ತಮ್ಮ ಮೊಬೈಲ್ ಮರಳಿ ಸಿಕ್ಕಿರುವ ಕುರಿತು ಸಂತಸ ವ್ಯಕ್ತಪಡಿಸಿದ್ದು, ಪೊಲೀಸ್ ಇಲಾಖೆಯ ಜನಪರ ಕಾರ್ಯದ ಬಗ್ಗೆ ಶ್ಲಾಘಿಸಿದ್ದಾರೆ. ತನ್ಮೂಲಕ, ಪೊಲೀಸ್ ಇಲಾಖೆ ಸದಾ ಸಾರ್ವಜನಿಕ ಸೇವೆಗೆ ಸನ್ನದ್ಧವಾಗಿದೆ ಎಂಬ ಅಂಶ ಸಾಬೀತಾದಂತಾಗಿದೆ.

ಗದಗ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

0

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲಾದ್ಯಂತ ಇಂದು ಬೆಳಗಿನಿಂದ ವ್ಯಾಪಕ ಮಳೆ ಸುರಿಯುತ್ತಿದೆ. ಇಂಥ ಮಳೆಯಲ್ಲೂ ಅಂಗನವಾಡಿ, ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಶಾಲಾ-ಕಾಲೇಜು ತಲುಪಲಾಗದೇ, ಪರದಾಡುತ್ತಿದ್ದನ್ನು ಗಣನೆಗೆ ತೆಗೆದುಕೊಂಡು ಗದಗ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಗದಗ ಜಿಪಂ ಸಿಇಓ ಸುಶೀಲಾ ಅವರು ತಿಳಿಸಿದ್ದಾರೆ.

ಮಳೆಯ ಹಿನ್ನಲೆಯಲ್ಲಿ ಯಲ್ಲೋ ಅಲರ್ಟ್‌ನಲ್ಲಿ 19 ಜಿಲ್ಲೆಗಳ ಪೈಕಿ ಕೊಪ್ಪಳ-ಗದಗ ಸೇರಿದಂತೆ ವಿವಿಧ ಜಿಲ್ಲಾಡಳಿತಗಳು ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿವೆ.

ಜಿಲ್ಲಾ ಉಪಾಧ್ಯಕ್ಷರಾಗಿ ಲಲಿತಾ ಗೊಳಗೊಳಕಿ ನೇಮಕ

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲಾ ಮಹಿಳಾ‌ ಕಾಂಗ್ರೆಸ್ ಘಟಕದ ಉಪಾಧ್ಯಕ್ಷರನ್ನಾಗಿ 11ನೇ ವಾರ್ಡ್‌ನ ಹಮಾಲರ ಕಾಲೋನಿಯ ಲಲಿತಾ ಶರಣಪ್ಪ ಗೊಳಗೊಳಕಿ ಇವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಪುಷ್ಪಾ ಅಮರನಾಥ ಇವರು ಆದೇಶದ ಮೇರೆಗೆ ಗದಗ ಜಿಲ್ಲಾ ಮಹಿಳಾ ಕಾಂಗ್ರೆಸ ಅಧ್ಯಕ್ಷರಾದ ಶ್ರೀಮತಿ ನೀಲಮ್ಮ ಬೋಳನವರ ನೇಮಿಸಿ ಆದೇಶ ಹೊರಡಿಸಿದ್ದಾರೆ.

ಲಕ್ಷ್ಮೇಶ್ವರದಲ್ಲಿ ಜೋಕಾಲಿ ಆಡಿದ ಕೋತಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ತಾಲೂಕಿನಾದ್ಯಂತ ಸೋಮವಾರ ನಾಗರ ಪಂಚಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ನಾಗರಪಂಚಮಿಯಲ್ಲಿ ಜೋಕಾಲಿ ಆಡುವದು ಸಂಪ್ರದಾಯವಾಗಿದ್ದು, ಪಟ್ಟಣದ ಎಪಿಎಂಸಿ ಆವರಣ ಮರವೊಂದಕ್ಕೆ ಕಟ್ಟಿದ ಜೋಕಾಲಿಯಲ್ಲಿ ಮಂಗವೊಂದು ಕುಳಿತುಕೊಂಡು ತಾನೇನು ಕಡಿಮೆ ಎನ್ನುವಂತೆ ಜೋಕಾಲಿ ಆಡಿದ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಹಬ್ಬದ ವಿಶೇಷವಾಗಿತ್ತು.

ನಾಗರ ಪಂಚಮಿಯ ನಿಮಿತ್ತ ಮಕ್ಕಳು, ಮಹಿಳೆಯರು ಜೋಕಾಲಿ ಆಡಲು ಹಗ್ಗವನ್ನು ಕಟ್ಟಲಾಗಿತ್ತು. ನಾಗರ ಹಾವಿಗೆ ಹಾಲು ಎರೆಯಲು ಜನರು ಹೋಗಿದ್ದರಿಂದ ಯಾರೂ ಇಲ್ಲದ ಸಮಯ ನೋಡಿದ ಕೋತಿಯೊಂದು ಜೋಕಾಲಿಯ ಮೇಲೆ ಕುಳಿತುಕೊಂಡು ಬಿಂದಾಸ್ ಆಗಿ ಜೋಕಾಲಿ ಆಡಿದ ವಿಡಿಯೋ ಪಟ್ಟಣದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು.

ಜೋಕಾಲಿ ಆಡುತ್ತಿರುವ ಕೋತಿ ನೋಡಲು ಜನ ಸ್ವಲ್ಪ ಹೊತ್ತು ಮುಗಿ ಬಿದ್ದಿದ್ದರು. ಇದಾವುದರ ಪರಿವೆ ಇಲ್ಲದಂತೆ ಕೋತಿ ಜೋಕಾಲಿಯಲ್ಲಿ ಕುಳಿತು ಆಟವಾಡಿ ಬೇಸರವಾದಂತೆ ಜೋಕಾಲಿಯಿಂದ ಇಳಿದು ಹೋಗಿದ್ದು ಕಂಡು ಬಂದಿತು.

error: Content is protected !!