Home Blog Page 3263

ತಡರಾತ್ರಿ ಚಾಕು ಇರಿತ; ಮೆಕ್ಯಾನಿಕಲ್ ಗೆ ಆರು ಬಾರಿ ಚಾಕುವಿನಿಂದ ಇರಿದು ಹತ್ಯೆಗೆ ಯತ್ನ……..

ಚಿಂತಾಜನಕ ಸ್ಥಿತಿಯಲ್ಲಿ ಗಾಯಾಳು…ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ….

ವಿಜಯಸಾಕ್ಷಿ ಸುದ್ದಿ, ಗದಗ

ಆರೋಪಿಯೊಬ್ಬ ಎದುರು ಮನೆಯ ವ್ಯಕ್ತಿಯೊಬ್ಬನಿಗೆ ಹೊಟ್ಟೆಯ ಭಾಗಕ್ಕೆ ಆರು ಬಾರಿ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.

ಡಂಬಳ ನಾಕಾ ಬಳಿ ಇರುವ ಎಸ್ ಬಿ ಗಾರ್ಡನ್ ಹತ್ತಿರ ಇರುವ ಮನೆಯಲ್ಲಿ ಈ ಘಟನೆ ನಡೆದಿದ್ದು, ಇಮಾಮ್ ಹುಸೇನ್ ಕಾಗದಗಾರ ಎಂಬ ಮೆಕ್ಯಾನಿಕಲ್ ತೀವ್ರ ಗಾಯಗೊಂಡು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

76 ಪ್ಲಾಟ್ ನಿವಾಸಿ ಕೆಂಚಪ್ಪ ಎಂಬ ಆರೋಪಿ ಈ ದುಷ್ಕತ್ಯ ಎಸೆಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂದು ಸದ್ಯಕ್ಕೆ ತಿಳಿದು ಬಂದಿಲ್ಲ.

ಈ ಕುರಿತು ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಭಜರಂಗದಳ ಬ್ಯಾನ್ ಬಗ್ಗೆ ಮಾತಾಡಲ್ಲ; ಜಗದೀಶ್ ಶೆಟ್ಟರ್

ಅಷ್ಟಕ್ಕೂ ಬ್ಯಾನ್ ಮಾಡುವ ಅಧಿಕಾರ ರಾಜ್ಯ ಸರಕಾರಕ್ಕಿಲ್ಲ…..

ವಿಜಯಸಾಕ್ಷಿ ಸುದ್ದಿ, ನರಗುಂದ

ಭಜರಂಗದಳವನ್ನು ನಿಷೇಧಿಸುವ ಕುರಿತು ರಾಜ್ಯಾದ್ಯಂತ ಚರ್ಚೆಗಳಾಗುತ್ತಿವೆ. ಈ ಬಗ್ಗೆ ನರಗುಂದದಲ್ಲಿ ಪ್ರತಿಕ್ರಿಯಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್‌, ಪಕ್ಷದ ವೇದಿಕೆಯಲ್ಲಿಯೇ ಇದರ ಬಗ್ಗೆ ಚರ್ಚಿಸುತ್ತೇನೆ ಎಂದಿದ್ದಾರೆ.

ಭಜರಂಗದಳದ ನಿಷೇಧದ ಕುರಿತು ಚರ್ಚೆಗಳಾಗುತ್ತಿವೆ. ಬ್ಯಾನ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಪಕ್ಷದ ಹಿರಿಯರು, ಪ್ರಣಾಳಿಕೆ ರಚನಾ ಸಮಿತಿಯ ಸದಸ್ಯರೂ ಆದ ವೀರಪ್ಪ ಮೊಯ್ಲಿ ಸ್ಪಷ್ಟಪಡಿಸಿ ಹೇಳಿಕೆ ನೀಡಿದ್ದಾರೆ.

ಹೀಗಿರುವಾಗ, ಬ್ಯಾನ್ ವಿಚಾರವಾಗಿ ನಾನು ಹೆಚ್ಚು ಮಾತನಾಡುವುದಿಲ್ಲ. ಇಷ್ಟಕ್ಕೂ, ಬ್ಯಾನ್ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆಯೇ ಹೊರತು ರಾಜ್ಯ ಸರ್ಕಾರಕ್ಕಲ್ಲ. ನನ್ನ ಅಭಿಪ್ರಾಯ ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ ಆರ್ ಯಾವಗಲ್ ಸೇರಿದಂತೆ ಅನೇಕ ಮುಖಂಡರು ಇದ್ದರು.

ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದು ಬೈಕ್‌ ಸವಾರ ಸಾವು; ಗುತ್ತಿಗೆದಾರನ ವಿರುದ್ಧ ಕೇಸ್

ಟ್ರಾಕ್ಟರ್ ಮಾಲೀಕನ ವಿರುದ್ಧವೂ ಪ್ರಕರಣ…..

ವಿಜಯಸಾಕ್ಷಿ ಸುದ್ದಿ, ರೋಣ

ಸೇತುವೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಯಾವುದೇ ಸೂಚನಾಫಲಕಗಳನ್ನು ಅಳವಡಿಸದೇ, ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದು ಬೈಕ್‌ ಸವಾರನೊಬ್ಬ ಮೃತಪಟ್ಟಿರುವ ಘಟನೆ ಸಂಭವಿಸಿದ್ದು, ಸೇತುವೆ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರ ಹಾಗೂ ಟ್ರಾಕ್ಟರ್‌ ಮಾಲಕನ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ರೋಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ: ತಾಲೂಕಿನ ಹೊಳೆಆಲೂರ-ಹೊಳೆಮಣ್ಣೂರ ರಸ್ತೆಯ ನಡುವೆ ಗಾಡಗೋಳಿ ಸಮೀಪದಲ್ಲಿ ಹೊಸದಾಗಿ ಸೇತುವೆ ನಿರ್ಮಿಸಲಾಗುತ್ತಿತ್ತು. ಸೇತುವೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ ಮತ್ತು ಸೂಚನಾ ಫಲಕಗಳನ್ನೂ ಅಳವಡಿಸಿರಲಿಲ್ಲ.

ಬದಲಾಗಿ, ರಸ್ತೆಗೆ ಅಡ್ಡಲಾಗಿ ಟ್ರಾಲಿ ಸಹಿತ ಟ್ರಾಕ್ಟರ್‌ ಒಂದನ್ನು ನಿಲ್ಲಿಸಲಾಗಿತ್ತು. ಏ.30ರಂದು ರಾತ್ರಿ 7 ಗಂಟೆಯ ಸುಮಾರಿಗೆ ದೂರುದಾರರ ಸಹೋದರ, ಮಾಳವಾಡದ ಠಕ್ಕಪ್ಪ ಭರಮಪ್ಪ ಚಲವಾದಿ(28) ಕೆಲಸ ಮುಗಿಸಿ ಬೈಕ್‌ನಲ್ಲಿ ಅದೇ ರಸ್ತೆಯಲ್ಲಿ ಹಿಂದಿರುಗಿ ಬರುತ್ತಿದ್ದರು.

ಈ ಸಮಯದಲ್ಲಿ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಸೇತುವೆ ನಿರ್ಮಾಣ ಕಾಮಗಾರಿಯ ಗುತ್ತಿಗೆದಾರ ಹಾಗೂ ಟ್ರಾಕ್ಟರ್‌ ಮಾಲಕನ ನಿರ್ಲಕ್ಷ್ಯತನವೇ ಕಾರಣವೆಂದು ಮೃತರ ಸಹೋದರ ದೂರು ದಾಖಲಿಸಿದ್ದಾರೆ.

ಅಪರಾಧ 0069/2023, indian motor vehicles act-1988 ರ ಕಲಂ 177, ಐಪಿಸಿ 1860ರ ಕಲಂ 279,283,304(ಎ)) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ರೋಣ ಪೊಲೀಸರು ತನಿಖೆ ನಡೆಸಿದ್ದಾರೆ.

ಉದ್ಯೋಗ ಕೊಡಿಸುತ್ತೇವೆಂದು ಹಣ ಪಡೆದು ಸಾಫ್ಟ್‌ವೇರ್ ಇಂಜಿನಿಯರ್ ಗೆ ಮೋಸ…….

ತ್ರಿಶಾ ಸೇರಿ ಹಲವರಿಂದ ಮೋಸ…….

ವಿಜಯಸಾಕ್ಷಿ ಸುದ್ದಿ, ಗದಗ

ಇತ್ತೀಚೆಗೆ ಉದ್ಯೋಗವರಸಿ ಮೋಸಕ್ಕೊಳಗಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಆನ್‌ಲೈನ್‌ ಮೂಲಕ ಲಕ್ಷಾಂತರ ರೂ. ಹಣ ಕಳೆದುಕೊಂಡ ಬಗ್ಗೆ ಪ್ರಕರಣಗಳು ನಡೆಯುತ್ತಲೇ ಇವೆ.
ಇಂಥದ್ದೇ ಪ್ರಕರಣವೊಂದು ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ನಡೆದಿದ್ದು, ಗದಗ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿರುವ ಸೋಮೇಶ್ವರ ನಗರದ ದೂರುದಾರ ಅಭಿಷೇಕ್ ಎಂಬುವರಿಗೆ ಏಪ್ರಿಲ್.28ರಂದು 9.30 ಗಂಟೆಗೆ ಅಪರಿಚಿತ ಮೊಬೈಲ್‌ ಸಂಖ್ಯೆಯೊಂದರಿಂದ ತ್ರಿಶಾ ಎಂಬುವರು ಕರೆ ಮಾಡಿ, ಜಾಬ್‌ ಆಫರ್‌ ನೀಡಿದ್ದರು.

ನಂತರ ಎಲಿನಾ, ಆಂಡ್ರಿವ್‌ ಎಂಬುವರು ವಿವಿಧ ಟಾಸ್ಕ್‌ಗಳನ್ನು ನೀಡಿ, ಹಂತ ಹಂತವಾಗಿ 3,81,704 ರೂ.ಗಳನ್ನು ಹಾಕಿಸಿಕೊಂಡಿದ್ದರು. ನಂತರ, ಜೋತಿ ಎನ್ನುವವರು ಅದಕ್ಕೆ 5,03,304 ರೂಗಳನ್ನು ಕೊಡುತ್ತೇವೆಂದು ಖಾತೆಗೆ ಹಾಕಿ ಆಸೆ ಹುಟ್ಟಿಸಿದ್ದರು.

ನಂತರ ಈ ಹಣವನ್ನು ಖಾತೆಯಿಂದ ವಿಥ್‌ಡ್ರಾ ಮಾಡಲು ಹೋದಾಗ, ಖಾತೆಯನ್ನೇ ಫ್ರೀಜ್‌ ಮಾಡಿ, ಇನ್ನೂ 3,75,600 ರೂಗಳನ್ನು ಹಾಕಬೇಕೆಂದು ಮೆಸೇಜ್‌ ಕಳಿಸಿ ಮೋಸ ಮಾಡಿದ್ದಾರೆಂದು ದೂರು ನೀಡಿದ್ದಾರೆ.
ಅಪರಾಧ: 0033/2023, Information Technology Act-2008ರ ಕಲಂ 66(ಡಿ), 66(ಸಿ) ಅನ್ವಯ ಪ್ರಕರಣ ದಾಖಲಾಗಿದೆ.

ಜಗದೀಶ್ ಶೆಟ್ಟರ್ ಸೋಲಿಸಲು‌ ಧರ್ಮಯುದ್ಧ; ಬಸನಗೌಡ ಪಾಟೀಲ್ ಯತ್ನಾಳ ಗುಡುಗು….

ಯುದ್ಧದಲ್ಲಿ ಅಣ್ಣ, ತಮ್ಮ, ಸಂಬಂಧಿಕರು ಅಂತ ಯಾವುದು ಬರಲ್ಲ……….

ವಿಜಯಸಾಕ್ಷಿ ಸುದ್ದಿ, ಗದಗ

ಯುದ್ಧದಲ್ಲಿ ಅಣ್ಣ, ತಮ್ಮ, ಸಂಬಂಧಿಕರು ಅಂತ ಯಾವುದು ಬರಲ್ಲ. ಮೊದಲು ಯುದ್ಧ ಮಾಡಿ ಗೆದ್ದು ಬಾ ಎಂದು ಕೃಷ್ಣ ಪರಮಾತ್ಮ ಹೇಳಿದ್ದಾನೆ. ಹೀಗಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ‌ವಿರುದ್ಧ ಧರ್ಮಯುದ್ಧ ಮಾಡುತ್ತಿದ್ದೇವೆ ಎಂದು ವಿಜಯಪುರ ಶಾಸಕ ಬಸನಗೌಡ‌‌ ಪಾಟೀಲ್ ಯತ್ನಾಳ ಹೇಳಿದ್ದಾರೆ.

ಗದಗನಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಪರವಾಗಿ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಪತ್ರಕರ್ತರ ಜೊತೆಗೆ ಮಾತನಾಡಿದರು.

ಮಹಾಭಾರತದಲ್ಲಿ ಭಗವಾನ್‌ ಕೃಷ್ಣ ಹೇಳಿದ್ದಾರೆ. ಯುದ್ಧದಲ್ಲಿ ನೀ ಹೋಗಿದ್ರೆ ನಿನ್ನ ಕುಟುಂಬದವರು ಅದಾರ್, ಗೆಳೆಯರು ಅದಾರ ಏನೂ ನೋಡಬ್ಯಾಡ ಎಂದಿದ್ದಾರೆ ಎಂದರು. ಹೀಗಾಗಿ ಶೆಟ್ಟರ್ ವಿರುದ್ಧ ಧರ್ಮ ಯುದ್ಧ ಮಾಡುತ್ತಿದ್ದೇವೆ ಎಂದರು.

ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ವಿರುದ್ಧ ಈ ಧರ್ಮಯುದ್ಧ ಅಲ್ಲ. ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು ಅಷ್ಟೇ ಎಂದರು.

ಸಿಎಂ ಆಗುವ ಆಶೆ ಇದೆ ಎಂದು ಇಂಗಿತ ವ್ಯಕ್ತಪಡಿಸಿದ ಯತ್ನಾಳ, ನಾನೇನೂ ಆಯೋಗ್ಯನಾ..? ನನಗೆ ಶಕ್ತಿ ಇಲ್ವಾ ಎಂದು ಪ್ರಶ್ನಿಸಿದರು. ನನ್ನ ಆಡಳಿತ ಬಂದರೆ ಉತ್ತರ ಪ್ರದೇಶ ಯೋಗಿ ರೀತಿಯಲ್ಲಿ ಆಡಳಿತ ಬರುತ್ತೆ. ಅವಕಾಶ ಕೊಟ್ರೆ ಸಿಎಂ ಆಗ್ತೀನಿ ಎಂದರು.

ಕೆಲವರು ನನ್ನನ್ನು ಪಂಜರದೊಳಗೆ ಇಟ್ಟಿದ್ರು. ಅವರೆಲ್ಲಾ ತಮ್ಮ ಕುಟುಂಬ ಬೆಳೆಬೇಕು, ನಾ ಆದ ನಂತರ ನನ್ನ ‌ಮಗ ಸಿಎಂ ಆಗಬೇಕು ಅಂತ ಅನಕೊಂಡಿದ್ದರು ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ವೈ ವಿರುದ್ಧ ಹರಿಹಾಯ್ದರು.

ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದು ಪಲ್ಲೇದ, ಮುಖಂಡರಾದ ರಾಜು ಕುರಡಗಿ, ಅಮರನಾಥ ಬೆಟಗೇರಿ, ಪರಮೇಶ್ ನಾಯಕ ಸೇರಿದಂತೆ ಅನೇಕ ಮುಖಂಡರು ಇದ್ದರು.

ಕುಟುಂಬವನ್ನೇ ರಕ್ಷಿಸಿಕೊಳ್ಳದವರು ಕ್ಷೇತ್ರವನ್ನು ಹೇಗೆ ರಕ್ಷಿಸಬಲ್ಲರು?

ಶಾಸಕ ಬಂಡಿ ವಿರುದ್ಧ ಲಕ್ಷ್ಮಣ ಸವದಿ ವಾಗ್ದಾಳಿ……

ವಿಜಯಸಾಕ್ಷಿ ಸುದ್ದಿ, ರೋಣ

ತನ್ನ ಕುಟುಂಬವನ್ನೇ ರಕ್ಷಿಸಿಕೊಳ್ಳದವರು ಇನ್ನು ಇಡೀ ಕ್ಷೇತ್ರವನ್ನು ಹೇಗೆ ರಕ್ಷಿಸುತ್ತಾರೆ ಎಂಬುದನ್ನು ಮತಕ್ಷೇತ್ರದ ಮತದಾರರು ಅರಿಯಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಅವರು ಸೋಮವಾರ ರೋಣ ಪಟ್ಟಣದ ವಿ.ಎಫ್.ಪಾಟೀಲ ಹೈಸ್ಕೂಲ್ ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಪಾಟೀಲರವರ ಪರವಾಗಿ ಮತಯಾಚನೆ ಮಾಡುವ ಮೂಲಕ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಶಾಸಕ ಕಳಕಪ್ಪ ಬಂಡಿಯವರ ವರ್ತನೆಯಿಂದ ಬೇಸತ್ತು ಕುಟುಂಬದ ಸದಸ್ಯರೇ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. ಅಂದರೆ ಕಳಕಪ್ಪ ಬಂಡಿ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವೇ ಎಂದು ತೀವ್ರ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಬಿಜೆಪಿ 65 ಸ್ಥಾನಗಳನ್ನು ಮೀರುವುದಿಲ್ಲ. ಈಗಾಗಲೇ ನಡೆದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 127 ರಿಂದ 137 ಸ್ಥಾನಗಳನ್ನು ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಜಗದೀಶ ಶೆಟ್ಟರ ಹಾಗೂ ನಾನು ಬಿಜೆಪಿ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಾಗಿ ಪಕ್ಷದ ಬೆಳವಣಿಗೆಯಲ್ಲಿ ಮುಖ್ಯಪಾತ್ರವನ್ನು ವಹಿಸಿದ್ದೇವೆ. ಆದರೆ ಬಿಜೆಪಿಯಲ್ಲಿ ಕೆಲವರಿಂದ ಹಿಡನ್ ಅಜೆಂಡಾ ರೂಪಿತವಾಗಿದ್ದು, ಈ ಹಿಡನ್ ಅಜೆಂಡಾವನ್ನು ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಬಿಜೆಪಿ ನಮಗೆ ಅನ್ಯಾಯ ಮಾಡಿದೆ.

ಯಡಿಯೂರಪ್ಪನವರು ನಮ್ಮ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಅವರಿಗೂ ಬಿಜೆಪಿ ಎಲ್ಲವನ್ನೂ ನೀಡಿತ್ತು. ಹಾಗಾದರೆ ಕೆಜಿಪಿ ಪಕ್ಷವನ್ನು ಯಾಕೆ ಕಟ್ಟಿದರು ಎಂದು ಪ್ರಶ್ನಿಸಿದರು.

ಮಾಜಿ ಸಂಸದ ಆರ್.ಎಸ್.ಪಾಟೀಲ, ವಿಧಾನ ಪರಿಷತ್ತ ಸದಸ್ಯ ಶರಣಗೌಡ ಪಾಟೀಲ, ಐ.ಎಸ್.ಪಾಟೀಲ, ವಿ.ಆರ್.ಗುಡಿಸಾಗರ, ಹುಚ್ಚಪ್ಪ ನವಲಗುಂದ, ಪರಶುರಾಮ ಅಳಗವಾಡಿ, ದಶರಥ ಗಾಣಿಗೇರ, ಪ್ರಭು ಮೇಟಿ, ಅಂದಪ್ಪ ಬಿಚ್ಚೂರ, ರೂಪಾ ಅಂಗಡಿ, ಮಂಜುಳಾ ಹುಲ್ಲಣ್ಣವರ, ನಾಜಬೇಗಂ ಯಲಿಗಾರ, ಮಂಜುಳಾ ರೇವಡಿ, ವಿ.ಬಿ.ಸೋಮನಕಟ್ಟಿಮಠ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಬಿಜೆಪಿ ಪಕ್ಷದಲ್ಲಿದ್ದಾಗ ಉಸ್ತುವಾರಿಯಾಗಿ ಗದಗಿಗೆ ಬಂದಿದ್ದೆ. ಸಿದ್ದಣ್ಣ ಬಂಡಿ ಪರವಾಗಿ ಹೆಚ್ಚಿನ ಒತ್ತಡ ಇತ್ತು. ವಿಪರ್ಯಾಸ ಅಂದರೆ ಶಾಸಕರ ಪತ್ನಿ ಸ್ವತಃ ನನ್ನ ಗಂಡನಿಗೆ ಟಿಕೆಟ್ ಬೇಡ ನನಗೆ ಕೊಡಿ ಎಂದು ಕೇಳಿದ್ದರು. ಜಿಲ್ಲೆಗೆ ಆಗಮಿಸುವ ಮೊದಲೇ ಕ್ಷೇತ್ರಗಳ ಬಗ್ಗೆ ತಿಳಿದುಕೊಂಡಾಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ.ಎಸ್.ಪಾಟೀಲರ ಗೆಲುವು ಖಚಿತವಾಗಿತ್ತು.

ಲಕ್ಷ್ಮಣ ಸವದಿ, ಮಾಜಿ ಉಪ ಮುಖ್ಯಮಂತ್ರಿಗಳು

ಧಾಬಾ ಮೇಲೆ ಲೋಕಾಯುಕ್ತರ ದಾಳಿ; ಪಿಎಸ್ಐ, ಇಬ್ಬರು ಪೊಲೀಸರು ಲೋಕಾಯುಕ್ತ ಬಲೆಗೆ

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಟಗಾರರ ಸಂಬಂಧಿಕರ ಜೊತೆಗೆ ಹಣ ಪಡೆಯುತ್ತಿದ್ದಾಗ ಧಾಬಾ ಮೇಲೆ ಲೋಕಾಯುಕ್ತರ ದಾಳಿ………

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ

ಐಪಿಎಲ್ ಕ್ರಿಕೆಟ್ ಫಲಿತಾಂಶದ ಮೇಲೆ ಬೆಟ್ಟಿಂಗ್ ಅಡಿ ಸಿಕ್ಕಿಬಿದ್ದ ಆರೋಪಿಗಳ ಸಂಬಂಧಿಕರ ಜೊತೆಗೆ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ, ಪಿಎಸ್ಐ, ಇಬ್ಬರು ಪೊಲೀಸರನ್ನು ವಶಕ್ಕೆ ಪಡೆದ ಘಟನೆ ಜರುಗಿದೆ.

ಗಜೇಂದ್ರಗಡ ಪಟ್ಟಣದ ಕುಷ್ಟಗಿ ರಸ್ತೆಯಲ್ಲಿ ಇರುವ ಸುಖಸಾಗರ ಧಾಬಾವೊಂದರಲ್ಲಿ ಸೋಮವಾರ ಸಂಜೆ ಪೇದೆಯೊಬ್ಬರು ಒಂದು ಲಕ್ಷ ರೂ. ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.

ಶರಣಪ್ಪ ಭಜಂತ್ರಿ ಎಂಬ ಪೊಲೀಸನನ್ನು, ವಿನಾಯಕ ಜರತಾರಿ ಎಂಬುವರಿಂದ ಒಂದು ಲಕ್ಷ ಹಣ ಪಡೆಯುವಾಗ ಲೋಕಾಯುಕ್ತರು ರೆಡ್ ಹ್ಯಾಂಡ್ ಹಿಡಿದಿದ್ದಾರೆ.

ಏಪ್ರಿಲ್ 23 ರಂದು ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡೆದ ಐಪಿಎಲ್ ಪಂದ್ಯದಲ್ಲಿ ಒಂದು ಸಾವಿರಕ್ಕೆ ಎರಡು ಸಾವಿರ ಹಣ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಚೀಟಿಯಲ್ಲಿ ಬರೆದುಕೊಟ್ಟ ಹಾಗೂ ತಮ್ಮ ಮೊಬೈಲ್ ನಲ್ಲಿ ಆನ್ ಲೈನ್ ಆ್ಯಪ್ ನಲ್ಲಿ ಬೆಟ್ಟಿಂಗ್ ಆಡುತ್ತಿದ್ದಾಗ ಹರೀಶ್ ಪರಶುರಾಮ ದಲಬಂಜನ್ ಹಾಗೂ ಸಂತೋಷ ತಂದೆ ವಿರುಪಾಕ್ಷಸಾ ಜರತಾರಿ ಎಂಬಿಬ್ಬರನ್ನು ಗಜೇಂದ್ರಗಡ ಪೊಲೀಸರು ಬಂಧಿಸಿದ್ದರು.

ಬಂಧಿತರಿಂದ ನಗದು 2500ರೂ.ಹಣ ಹಾಗೂ ಮೊಬೈಲ್ ಜಪ್ತಿ ಮಾಡಿದ್ದರು.
ಆ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ 0054/2023 ಕಲಂ-78[1][ಎ][4][6]ಕೆ.ಪಿ ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇಷನ್ ಬೇಲ್ ಮೇಲೆ ಆರೋಪಿಗಳನ್ನು ಬಿಡುಗಡೆ ಮಾಡುವಾಗ ಪಿಎಸ್ಐ ರಾಘವೇಂದ್ರ, ಪೇದೆಗಳಾದ ಶರಣಪ್ಪ ಭಜಂತ್ರಿ ಹಾಗೂ ಕುರಿ ಎಂಬುವರು
ಎರಡು ಲಕ್ಷ ರೂ. ಹಣ ಡೀಮ್ಯಾಂಡ್ ಮಾಡಿದ ಬಗ್ಗೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ವಿನಾಯಕ ಜರತಾರಿ ಎಂಬುವರು ದೂರು ನೀಡಿದ್ದರು.

ದೂರು ಆಧರಿಸಿ ಸೋಮವಾರ ಸಂಜೆ ಗಜೇಂದ್ರಗಡ ರಸ್ತೆಯ ಸುಖಸಾಗರ ಧಾಬಾದ ಮೇಲೆ ದಾಳಿ ಮಾಡಿ ಒಂದು ಲಕ್ಷ ರೂ. ಹಣ ಪಡೆಯುತ್ತಿದ್ದ ಶರಣಪ್ಪ ಭಜಂತ್ರಿ ಎಂಬ ಪೇದೆಯನ್ನು ಹಿಡಿದಿದ್ದಾರೆ. ನಂತರ ಕುರಿ ಹಾಗೂ ಪಿಎಸ್ಐ ರಾಘವೇಂದ್ರ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಲೋಕಾಯುಕ್ತ ಎಸ್ಪಿ ಸತೀಶ್ ಚಿಟಗುಪ್ಪಿ, ಡಿವೈಎಸ್ಪಿ ಶಂಕರ ಎಮ್ ರಾಗಿ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರಗಳಾದ ರವಿ ಪುರುಷೋತ್ತಮ್, ಅಜೀಜ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.

ಸಿಬ್ಬಂದಿಗಳಾದ ಎಸ್ ಎಸ್ ಅಮರಶೆಟ್ಟಿ, ಮಂಜುನಾಥ್ ಗಾರ್ಗಿ, ಲಕ್ಕನಗೌಡರ್, ಮುತ್ತುರೆಡ್ಡಿ ಬಾರಡ್ಡಿ, ಗುಬ್ಬಿ, ಅಯ್ಯನಗೌಡರ, ವಿರೂಪಾಕ್ಷ ಅರಿಷಿಣದ ಹಾಗೂ
ವಾಹನ ಚಾಲಕರಾದ ನೈನಾಪೂರ ಹಾಗೂ ಹೆಬ್ಬಳ್ಳಿ ಈ ಕಾರ್ಯಾಚರಣೆಯಲ್ಲಿ ಇದ್ದರು.

ಪಕ್ಷೇತರ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ ಬಿಜೆಪಿ ಏಜೆಂಟ್, ಸೋಲಿಸಿ ಇಡಗಂಟು ಜಪ್ತ ಮಾಡಿ; ಸಿದ್ದರಾಮಯ್ಯ ಕರೆ…..

ಶಿರಹಟ್ಟಿ ಮೀಸಲು ಕ್ಷೇತ್ರ…….ಬಿಜೆಪಿ ದುಡ್ಡು ಕೊಟ್ಟು ನಿಲ್ಲಿಸಿದೆ….ಸಿದ್ದರಾಮಯ್ಯ ಗಂಭೀರ ಆರೋಪ…..

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ನನ್ನ ಹೆಸರು ಬಳಸುವ ಕೆಲಸ ಬಿಡಬೇಕು. ಸುಜಾತ ದೊಡ್ಡಮನಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದು, ಬೆಂಬಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಏರ್ಪಡಿಸಿದ್ದ ಶಿರಹಟ್ಟಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುಜಾತ ದೊಡ್ಡಮನಿ ಪರವಾಗಿ ಕೈಗೊಂಡಿದ್ದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾರೇ ಬಂಡಾಯ ನಿಂತರೂ ನಾನು ಖಂಡಿಸಿತ್ತೇನೆ ಎಂದ ಸಿದ್ದರಾಮಯ್ಯ, ಶಿಸ್ತು ಉಲ್ಲಂಘನೆ ಮಾಡಿದ್ರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಕೈಗೊಂಡಿದ್ದ ಸರ್ವೇಯಲ್ಲಿ ರಾಮಕೃಷ್ಣ ದೊಡ್ಡಮನಿ ಅವರ ಹೆಸರು ಇರಲಿಲ್ಲ, ಹೀಗಾಗಿ ಸುಜಾತ ದೊಡ್ಡಮನಿ ಅವರಿಗೆ ಟಿಕೆಟ್ ನೀಡಲಾಗಿದೆ ಎಂದರು.

ರಾಮಕೃಷ್ಣ ದೊಡ್ಡಮನಿಗೆ ಸಲಹೆ ಕೊಟ್ಟರೂ ನನ್ನ ಮಾತನ್ನು ದಿಕ್ಕಿರಿಸಿ ಬಂಡಾಯ ಅಭ್ಯರ್ಥಿಯಾಗಿ ನಿಂತಿದ್ದಾರೆ. ಬಿಜೆಪಿ ಪಕ್ಷದವರೇ ದುಡ್ಡು ಕೊಟ್ಟು ನಿಲ್ಲಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಆರೋಪ ಮಾಡಿದರು.

ಆ ಕಾರಣಕ್ಕಾಗಿ ರಾಮಕೃಷ್ಣ ದೊಡ್ಡಮನಿ ಅವರನ್ನು ಸೋಲಿಸಿ. ಇಡಗಂಟು ಜಪ್ತ ಮಾಡಬೇಕು ಎಂದು ನೆರೆದ ಕಾರ್ಯಕರ್ತರಿಗೆ ಕರೆ ನೀಡಿದರು.

ಹೆಣ್ಣು ಮಗಳಿಗೆ ಟಿಕೆಟ್ ಕೊಟ್ಟಿದ್ದು ತಪ್ಪಾ ಎಂದು ಪ್ರಶ್ನಿಸಿದ ಅವರು, ದುಡ್ಡಿನ ಅಹಂಕಾರದಿಂದ ಚುನಾವಣೆಗೆ ನಿಂತ ರಾಮಕೃಷ್ಣ ದೊಡ್ಡಮನಿಗೆ ಮತ ಹಾಕಬೇಡಿ ಕರೆ ನೀಡಿದರು.

ಇದಕ್ಕೂ ಮೊದಲು ಮಾಜಿ ಸಚಿವ, ಶಾಸಕ ಎಚ್ ಕೆ ಪಾಟೀಲ್ ಮಾತನಾಡಿ, ಬಿಜೆಪಿ ಸರಕಾರ ಶೇ.10 ರಷ್ಟು ಭರವಸೆ ಈಡೇರಿಸಿಲ್ಲ. ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ 165 ಭರವಸೆಗಳಲ್ಲಿ 158 ಈಡೇರಿಸಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಹಸಿವು ಮುಕ್ತ ರಾಜ್ಯವನ್ನಾಗಿಸುವದಕ್ಕಾಗಿ ಪ್ರತಿ ಒಬ್ಬರಿಗೆ ತಲಾ 10 ಕೆ.ಜಿ ಅಕ್ಕಿ ನೀಡಲು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿ. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ಕೈ ಬಲಪಡಿಸಲು ಶಿರಹಟ್ಟಿ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಸುಜಾತ ದೊಡ್ಡಮನಿ ಅವರಿಗೆ ಮತ ನೀಡಿ ಎಂದು ಕರೆ ನೀಡಿದರು.

ಸಮಾವೇಶದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮುಖಂಡರಾದ ಕೆ.ಬಿ ಕೋಳಿವಾಡ, ಮಾಜಿ ಸಂಸದ ಐ.ಜಿ ಸನದಿ, ಮಾಜಿ ಶಾಸಕ ಜಿ ಎಸ್ ಗಡ್ಡದ್ದೇವರಮಠ, ಶಿರಹಟ್ಟಿ ಬ್ಲಾಕ್ ಅಧ್ಯಕ್ಷ ಹುಮಾಯೂನ್‌ ಮಾಗಡಿ, ಮುಖಂಡರಾದ ವಾಸಣ್ಣ ಕುರಡಗಿ, ಅಭ್ಯರ್ಥಿ ಸುಜಾತ ದೊಡ್ಡಮನಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಇದ್ದರು.

ಹುಬ್ಬಳ್ಳಿ ಬಳಿ ಭೀಕರ ಅಪಘಾತ; ಸ್ಥಳದಲ್ಲಿಯೇ ಪಿಎಸ್ಐ ಸಾವು

ಹೆಸ್ಕಾಂನ ಪಿಎಸ್ಐ ಮಲ್ಲಿಕಾರ್ಜುನ ಕುಲಕರ್ಣಿ ಸಾವು…..

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ನಿಯಂತ್ರಣ ತಪ್ಪಿದ ಕಾರು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಹೆಸ್ಕಾಂನ ಜಾಗೃತದಳದ ಪಿಎಸ್ಐ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜರುಗಿದೆ.

ಹುಬ್ಬಳ್ಳಿ ತಾಲೂಕಿನ ಕಿರೇಸೂರು ಗ್ರಾಮದ ಬಳಿ ನಡೆದ ಈ ಭೀಕರ ಅಪಘಾತದಲ್ಲಿ, ಹೆಸ್ಕಾಂನ ಜಾಗೃತದಳದ ಪಿಎಸ್ಐ ಮಲ್ಲಿಕಾರ್ಜುನ ಕುಲಕರ್ಣಿ(40) ಸ್ಥಳದಲ್ಲಿಯೇ ಮೃತಪಟ್ಟ ದುರ್ಧೈವಿಯಾಗಿದ್ದಾರೆ.

ಬಾಗಲಕೋಟ ಜಿಲ್ಲೆಯ ಅಮೀನಗಡ ಪಿಎಸ್ಐ ಆಗಿದ್ದ ಮೃತರು, ಸದ್ಯ ಚುನಾವಣಾ ಹಿನ್ನೆಲೆಯಲ್ಲಿ ಹೆಸ್ಕಾಂನ ಜಾಗೃತದಳಕ್ಕೆ‌ ವರ್ಗಾವಣೆ ಆಗಿದ್ದರು.

ಮೃತ ಪಿಎಸ್ಐ ಮಲ್ಲಿಕಾರ್ಜುನ ಕುಲಕರ್ಣಿ ಅವರು, ಮೂಲತಃ ನವಲಗುಂದ ತಾಲೂಕಿನ ಕುಮಾರಗೊಪ್ಪ ಗ್ರಾಮದ ‌ನಿವಾಸಿಯಾಗಿದ್ದರು.

ಈ ಹಿಂದೆ ಗದಗ ಜಿಲ್ಲೆಯಲ್ಲೂ ಹಲವು ವರ್ಷಗಳ ಕಾಲ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸಿದ್ದ ಮಲ್ಲಿಕಾರ್ಜುನ ಕುಲಕರ್ಣಿ ಅವರು, ಗದಗ ಗ್ರಾಮೀಣ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ದಕ್ಷತೆ ಮೆರದಿದ್ದರು.

ಅವರ ಅಕಾಲಿಕ ಸಾವಿನಿಂದ ಕುಟುಂಬ ವರ್ಗದವರ ಆಕ್ರಂಧನ ಮುಗಿಲ ಮುಟ್ಟಿದ್ದು, ಗದಗ ಜಿಲ್ಲೆಯ ಸಿಬ್ಬಂದಿಗಳನ್ನು ಶೋಕ ಸಾಗರದಲ್ಲಿ ಮುಳಗಿಸಿದೆ.

ಶಿರಹಟ್ಟಿ ಮೀಸಲು ‌ವಿಧಾನಸಭಾ ಕ್ಷೇತ್ರ; ಬಲಗೊಳ್ಳುತ್ತಿರುವ ಪಕ್ಷೇತರರ ಒಕ್ಕೂಟ

ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿ, ನಾಯಕರಲ್ಲಿ ಆತಂಕ……

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ

ಬಿಜೆಪಿ, ಕಾಂಗ್ರೆಸ್ ಪಕ್ಷದ ಟಿಕೆಟ್ ವಂಚಿತರು, ಅತೃಪ್ತ ಮುಖಂಡರು, ಕಾರ್ಯಕರ್ತರು, ಪಕ್ಷೇತರ ಅಭ್ಯರ್ಥಿ ಪರ ಬೆಂಬಲಕ್ಕೆ ನಿಲ್ಲುವವರ ಸಂಖ್ಯೆ ಕ್ಷೇತ್ರದಲ್ಲಿ ದಿನೇ ದಿನೇ ಹೆಚ್ಚುತ್ತಿರುವುದು ಮತ್ತು ಪಕ್ಷೇತರ ಒಕ್ಕೂಟ ಬಲಗೊಳ್ಳುತ್ತಿರುವುದು ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಮತ್ತು ನಾಯಕರಲ್ಲಿ ಕೊಂಚ ಚಿಂತೆ, ಆತಂಕವನ್ನು ಸೃಷ್ಟಿಸುತ್ತಿದೆ ಎನ್ನಲಾಗಿದೆ.

ಇದಕ್ಕೆ ಪೂರಕವೆಂಬಂತೆ ಶನಿವಾರ ಲಕ್ಷ್ಮೇಶ್ವರದಲ್ಲಿ ಬಿಜೆಪಿ ಟಿಕೆಟ್ ವಂಚಿತ ಮುಖಂಡ ರಾಜ್ಯ ಬಿಜೆಪಿ ಎಸ್‌ಟಿ ಮೋರ್ಚಾ ಉಪಾಧ್ಯಕ್ಷ ಸಣ್ಣೀರಪ್ಪ ಹಳ್ಳೆಪ್ಪನವರ, ಗದಗ ಜಿಲ್ಲಾ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ಪೂರ್ಣಾಜಿ ಖರಾಟೆ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ, ರೈತ ಮುಖಂಡ ಮಹೇಶ ಹೊಗೆಸೊಪ್ಪಿನ, ತಾಲೂಕಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ ಮಾಗಡಿ, ಕರವೇ ಜಿಲ್ಲಾಧ್ಯಕ್ಷ ಶರಣು ಗೋಡಿ ಸೇರಿ ವಿವಿಧ ಪಕ್ಷ, ಸಂಘಟನೆಗಳ ಮುಖಂಡರು ಶನಿವಾರ ಪಕ್ಷೇತರ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ ಅವರ ಬೆಂಬಲಕ್ಕೆ ನಿಂತು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸುವ ಸಂಕಲ್ಪ ಕೈಗೊಂಡರು.

ಗದಗ ಜಿಲ್ಲಾ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ಪೂರ್ಣಾಜಿ ಖರಾಟೆ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರೈತ ಮುಖಂಡ ಮಹೇಶ ಹೊಗೆಸೊಪ್ಪಿನ. ಪಂಚಮಸಾಲಿ ತಾಲೂಕಾ ಅಧ್ಯಕ್ಷ ಮಂಜುನಾಥ ಮಾಗಡಿ ಮಾತನಾಡಿ, ಎರಡು ಪಕ್ಷಗಳ ನಾಯಕರು ಸ್ಥಳೀಯರನ್ನು ನಿರ್ಲಕ್ಷಿಸಿ ತಮ್ಮ ಅಣತಿಯಂತೆ ನಡೆಯುವ ಕ್ಷೇತ್ರದ ಹೊರಗಿನವರಿಗೆ ಟಿಕೆಟ್ ಕೊಡಿಸಿ ಪಕ್ಷದ ನಿಷ್ಠಾವಂತ ಮುಖಂಡರು, ಕಾರ್ಯಕರ್ತರನ್ನು ನಿರ್ಲಕ್ಷಿಸಿದ್ದಾರೆ. ಕ್ಷೇತ್ರದಲ್ಲಿ ಪಕ್ಷೇತರರಾಗಿ ಜಯಬೇರಿ ಭಾರಿಸಿದ ದಿ.ಗೂಳಪ್ಪ ಉಪನಾಳ ಅವರಂತೆ ಈ ಬಾರಿ ಜನಪರ ವ್ಯಕ್ತಿ ರಾಮಕೃಷ್ಣ ದೊಡ್ಡಮನಿ ಅವರ ಗೆಲುವಿಗೆ ಎಲ್ಲರೂ ಕೈ ಜೋಡಿಸೋಣ. ಆ ಮೂಲಕ ಟಿಕೆಟ್ ಮಾರುವ ರಾಷ್ಟ್ರೀಯ ಪಕ್ಷ ಮತ್ತು ನಾಯಕರಿಗೆ ಬುದ್ಧಿ ಕಲಿಸೋಣ ಎಂದರು.


ಈ ವೇಳೆ ಪಕ್ಷೇತರ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ ಅವರಿಗೆ ಬಿಜೆಪಿ/ಕಾಂಗ್ರೆಸ್ ಪಕ್ಷದ ಮುಖಂಡರಾದ ಮಾಂತೇಶ ಹಳ್ಳೆಪ್ಪನವರ, ನಾಗೇಶ ಅಮರಾಪುರ, ನಾಗರಾಜ ಚಿಂಚಲಿ, ಮಾಬುಸಾಬ ಮುಳಗುಂದ, ಬಸವರಾಜ ವಡವಿ, ಇಸ್ಮಾಯಿಲ್ ಆಡೂರ, ರಮೇಶ ಗೊಜಗೊಜಿ, ಮಂಜು ಮುಶಪ್ಪನವರ, ಮಹೇಶ ಲಮಾಣಿ, ದ್ಯಾಮನಗೌಡ್ರ ಪಾಟೀಲ, ಸಿದ್ದು ಹವಳದ ಸೇರಿದಂತೆ ಶಿರಹಟ್ಟಿ, ಲಕ್ಷ್ಮೇಶ್ವರ ಹಾಗೂ ಮುಂಡರಗಿ ತಾಲೂಕಗಳ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದರು.

ಮುಖಂಡರಾದ ಶಿವಪ್ರಕಾಶ ಮಹಾಜನಶೆಟ್ಟರ, ಲಕ್ಷ್ಮಣಗೌಡ ಪಾಟೀಲ, ಎಂ.ಎಸ್.ದೊಡ್ಡಗೌಡ್ರ, ವಿರುಪಾಕ್ಷಪ್ಪ ಪಡಗೇರಿ, ಸೋಮಣ್ಣ ಬೆಟಗೇರಿ, ಕೊಟೆಪ್ಪ ವರ್ದಿ, ಯಲ್ಲಪ್ಪ ಸೂರಣಗಿ, ಮಹೇಂದ್ರ ಉಡಚಣ್ಣವರ, ಶಿವನಗೌಡ್ರ ಪಾಟೀಲ, ಮಂಜುನಾಥ ಘಂಟಿ, ಅಬ್ಜಲ್ ರಿತ್ತಿ, ಎಸ್.ವಿ ಬೆಟಗೇರಿ ಸೇರಿ ದೂರದರ್ಶನ ಗುರುತಿನ ಸ್ವಾಭಿಮಾನಿ ಪಕ್ಷೇತರ ಬೆಂಬಲಿತ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

error: Content is protected !!