Home Blog Page 3262

ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ; ಪೊಲೀಸರಿಂದ ಲಘು ಲಾಠಿ ಪ್ರಹಾರ…!

ಮಾತಿನ ಚಕಮಕಿ….. ವಾಗ್ವಾದ…. ತಡೆಯಲು ಮುಂದಾದ ಪೊಲೀಸರು…..

ವಿಜಯಸಾಕ್ಷಿ ಸುದ್ದಿ, ಗದಗ

ವೋಟ್ ಹಾಕಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ಹೋದ ಘಟನೆ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಜರುಗಿದೆ.

ಬಿಂಕದಕಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ 134ರ ಬಳಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಮತ ಹಾಕಲು ಬರುವವರೆಗೆ ವೋಟ್ ಹಾಕಲು ಹೇಳಿದಾಗ ಮಾತಿನ ಚಕಮಕಿ ನಡೆದಿದೆ.

ಮಾತಿನ ಚಕಮಕಿ, ವಾಗ್ವಾದ ತಡೆಯಲು ಹೋದ ಪೊಲೀಸರು ಲಾಠಿ ಏಟು ಕೊಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಒಬ್ಬರ ಶರ್ಟ್ ಹಿಡಿದಿದ್ದು, ಪೊಲೀಸರ ಪಿತ್ತ ನೆತ್ತಗೇರಿಸಿದೆ. ಕೂಡಿದ್ದ ಎರಡೂ ಕಡೆಯ ಕಾರ್ಯಕರ್ತರನ್ನು ಚದುರಿಸಿದ್ದಾರೆ.

ಸುದ್ದಿ ತಿಳಿದು ಎಸ್ಪಿ ಬಿ ಎಸ್ ನೇಮಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಘಟನೆಯಿಂದ ಬಿಂಕದಕಟ್ಟಿಯ ಸರಕಾರಿ ಶಾಲೆಯ ಬಳಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಸ್ಥಳದಲ್ಲಿ ಈಗ ಪೊಲೀಸರು ಮೂಕ್ಕಾಂ ಹೂಡಿದ್ದಾರೆ.

ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಅತಿ ಹೆಚ್ಚು ಮತದಾನ; ಶಿರಹಟ್ಟಿ ತಾಲೂಕಿನಲ್ಲಿ ಮತದಾನ ಬಹಿಷ್ಕಾರ

ಮಧ್ಯಾಹ್ನ ಒಂದು ಗಂಟೆಯವರೆಗೆ ಮತದಾನದ ವಿವರ…..

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಮತದಾನ ಚುರುಕು ಪಡೆದಿದ್ದು, ಮತದಾರರು ಸಾಲುಗಟ್ಟಿ ನಿಂತು ಮತ ಚಲಾಯಿಸುತ್ತಿದ್ದಾರೆ. ಮಧ್ಯಾಹ್ನ ಒಂದು ಗಂಟೆಯವರೆಗೆ ಶೇ-38.98 ರಷ್ಟು ಮತದಾನವಾಗಿದೆ.

ಅತಿ ಹೆಚ್ಚು ಮತದಾನ ನರಗುಂದ ತಾಲೂಕಿನಲ್ಲಿ ಆಗಿದ್ದು, 42.41 ರಷ್ಟು ಮತದಾನವಾಗಿದೆ.

ಉಳಿದಂತೆ ಗದಗ ತಾಲೂಕಿನಲ್ಲಿ ಶೇಕಡಾವಾರು 40.50, ರೋಣ ತಾಲೂಕಿನಲ್ಲಿ 40.46, ಶಿರಹಟ್ಟಿ ತಾಲೂಕಿನಲ್ಲಿ 33.16 ರಷ್ಟು ಮತದಾನವಾಗಿದೆ.

ಹಾಗೆಯೇ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದೊಡ್ಡೂರು ತಾಂಡಾದ‌ ನಿವಾಸಿಗಳು ಮತಗಟ್ಟೆ ಸ್ಥಾಪನೆ ಮಾಡದ ಕಾರಣಕ್ಕಾಗಿ ಮತದಾನ ಬಹಿಷ್ಕಾರ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಗ್ರಾಮಸ್ಥರು, ಇಲ್ಲಿಂದ ಮೂರು ಕಿಲೋಮೀಟರ್ ದೂರದಲ್ಲಿ ಮತಗಟ್ಟೆ ಇರುವುದರಿಂದ ನಾವು ಮತದಾನ ಮಾಡುವುದಿಲ್ಲ ಎಂದಿದ್ದಾರೆ. ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ‌ನೀಡಿದ್ದು, ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.

 

10 ದಿನದ ಬಾಣಂತಿ ಮತದಾನ, ಶಾಸಕ ಸಂಕನೂರ ಸಿಡಿಮಿಡಿ; ಒಂಬತ್ತು ಗಂಟೆಯವರೆಗೆ ಶೇ-7.25 ಮತದಾನ

ಗದಗ ಜಿಲ್ಲೆಯ ವಿಧಾನಸಭಾ ಚುನಾವಣೆ ಮತದಾನ ವಿವರ……

ಜಿಲ್ಲೆಯಲ್ಲಿ ಮತದಾನ ಮುಂಜಾನೆಯಿಂದ ಮಂದಗತಿಯಲ್ಲಿ ಸಾಗಿದ್ದು, ಬೆಳಿಗ್ಗೆ 9 ಗಂಟೆಯವರೆಗೆ 7.25 ಶೇಕಡಾವಾರು ಮತದಾನವಾಗಿದೆ. ಗದಗ ನಗರದ ಮತಗಟ್ಟೆ 85 ರಲ್ಲಿ ಹತ್ತು ದಿನದ ಬಾಣಂತಿಯೊಬ್ಬರು ಮತದಾನ ಮಾಡಿದ್ದು ವಿಶೇಷವಾಗಿತ್ತು. ವರ್ಷ ಪವಾರ ಎಂಬವರು ಮತದಾನ ಮಾಡಿ ತಮ್ಮ ಕರ್ತವ್ಯ ಮೆರೆದರು.

ಗದಗ ನಗರದ ಮತಗಟ್ಟೆ 56 ರಲ್ಲಿ ಆಗಿರುವ ಅವ್ಯವಸ್ಥೆಗೆ ಎಮ್ ಎಲ್ ಸಿ ಎಸ್ ವಿ. ಸಂಕನೂರ ಸಿಡಿಮಿಡಿಗೊಂಡರು.

ಗದಗ ನಗರದ ಮುನಿಸಿಪಲ್ ಕಾಲೇಜಿನ ಮತಗಟ್ಟೆಯಲ್ಲಿ ಮತಯಂತ್ರವನ್ನು ಕತ್ತಲಿನಲ್ಲಿಟ್ಟು ಚುನಾವಣಾ ಸಿಬ್ಬಂದಿಗಳು ನಿರ್ಲಕ್ಷ್ಯ ವಹಿಸಿದ್ದು, ಚಿಹ್ನೆ, ಗುರುತು ಸರಿಯಾಗಿ ಕಾಣುತ್ತಿಲ್ಲಾ ಎಂದು ಸಂಕನೂರು ಸಿಡಿಮಿಡಿಗೊಂಡರು. ನಂತರ ಚುನಾವಣಾ ಸಿಬ್ಬಂದಿಗಳು ಮತಯಂತ್ರದ ಜಾಗ ಬದಲಾವಣೆ ಮಾಡಿದರು.

65- ಶಿರಹಟ್ಟಿ- ಶೇ. 4.85, 66-ಗದಗ- ಶೇ. 9.82, 67-ರೋಣ- ಶೇ. 7.17, 68-ನರಗುಂದ -ಶೇ. 7.20 ರಷ್ಟು ಮತದಾನವಾಗಿದ್ದು, ಜಿಲ್ಲೆಯಲ್ಲಿ ಒಂಬತ್ತು ಗಂಟೆಯವರೆಗೆ 7.25 ರಷ್ಟು ಶೇಕಡಾವಾರು ಮತದಾನವಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

ಕರ್ತವ್ಯ ಲೋಪ: ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸಸ್ಪೆಂಡ್

ಆರ್ ಡಿ ಯಲಿಗಾರ ಅಮಾನತು……

ವಿಜಯಸಾಕ್ಷಿ ಸುದ್ದಿ, ಗದಗ

ಚುನಾವಣಾ ಕರ್ತವ್ಯ ಲೋಪದ ಆರೋಪದ ಮೇಲೆ ಲೋಕೋಪಯೋಗಿ ಇಲಾಖೆ, ರೋಣ ಉಪ ವಿಭಾಗದ ಸಹಾಯಕ ಅಭಿಯಂತರರೊಬ್ಬರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಆರ್ ಡಿ ಯಲಿಗಾರ್ ಎಂಬುವವರೇ ಅಮಾನತುಗೊಂಡ ಸಹಾಯಕ ಅಭಿಯಂತರರು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅವರು ತಾವು ನಿರ್ವಹಿಸಿದ ಬಗ್ಗೆ ಹಾಗೂ ತಮ್ಮ ವಾಹನದ ಬಗ್ಗೆ ಪ್ರತಿನಿತ್ಯ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಬೇಕಾಗಿತ್ತು.

ತಮ್ಮ ಕರ್ತವ್ಯ ನಿರ್ವಹಣೆ ಬಗ್ಗೆ ತಪ್ಪಾದ ಮಾಹಿತಿ ನೀಡಿದ್ದಲ್ಲದೆ ಅವರಿಗೆ ದೂರವಾಣಿ ಕರೆ ಮಾಡಿದರೂ ಫೋನ್ ರಿಸೀವ್ ಮಾಡದೇ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಕಲಂ 134ರ ಉಲ್ಲಂಘನೆ ಹಾಗೂ ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957ರ ನಿಯಮ 10(1ಡಿ) ಅನ್ವಯ ವಿಚಾರಣೆ ಬಾಕಿ ಇರಿಸಿ ಕೂಡಲೇ ಜಾರಿಗೆ ಬರುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಅಮಾನತು ಆದೇಶ ಹೊರಡಿಸಿದ್ದಾರೆ.

ಅಮಾನತು ಸಮಯದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರದೇ ಕೇಂದ್ರ ಸ್ಥಾನ ಬಿಟ್ಟು ಹೋಗದಿರಲು ಸೂಚಿಸಲಾಗಿದೆ.

ತಂಪು ಪಾನೀಯ ವ್ಯಾಪಾರಿಗೆ ಪರಿಹಾರ ನೀಡಿ, ಸ್ಕ್ರೀನ್‌ಶಾಟ್ ಟ್ವೀಟ್; ಸಂಸದ ಪ್ರತಾಪ್ ಸಿಂಹ ವಿರುದ್ಧ ಪ್ರಕರಣ

ವಿಜಯಸಾಕ್ಷಿ ಸುದ್ದಿ, ಗದಗ

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಮೇಲೆ ಲಕ್ಷ್ಮೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಹಿನ್ನೆಲೆ

ಏಪ್ರಿಲ್ 28ರಂದು ಲಕ್ಷ್ಮೇಶ್ವರದಲ್ಲಿ ಆಯೋಜಿಸಿದ್ದ ಅಮಿತ್ ಶಾ ಅವರ ಪ್ರಚಾರ ರ‍್ಯಾಲಿಯಲ್ಲಿ ತಂಪು ಪಾನೀಯ ವ್ಯಾಪಾರಿಯೊಬ್ಬರು ನಷ್ಟಕ್ಕೊಳಗಾಗಿದ್ದರು.

ಈ ಸಂಬಂಧ, ಏಪ್ರಿಲ್ 30ರಂದು ರಾತ್ರಿ 11.13 ಗಂಟೆಗೆ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಆ ನಷ್ಟಕ್ಕೆ ಪರಿಹಾರವಾಗಿ 35 ಸಾವಿರ ರೂ.ಗಳನ್ನು ತಂಪು ಪಾನೀಯ ಮಾರಾಟಗಾರನ ಖಾತೆಗೆ ಹಾಕಿ, ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದರು.

ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಚುನಾವಣಾಧಿಕಾರಿ ಶಂಕರ್ ಹುಲ್ಲಮ್ಮನವರ ಐಪಿಸಿ ಕಲಂ:171(ಬಿ)(ಎಚ್) ಅಡಿಯಲ್ಲಿ ಸರ್ಕಾರದ ಪರವಾಗಿ ದೂರು ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ, ಅಪರಾಧ: 0057/2023, ಐಪಿಸಿ ಕಲಂ:171(ಬಿ)(ಎಚ್) ನಂತೆ ಲಕ್ಷ್ಮೇಶ್ವರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫೇಸ್‌ಬುಕ್‌ ಖಾತೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವ ಪೋಸ್ಟ್‌; ಜೆಡಿಎಸ್‌ ಅಭ್ಯರ್ಥಿ ವಿರುದ್ಧ ಪ್ರಕರಣ

ʻಮಾನ್ಯ ಮತದಾರ ಬಾಂಧವರಲ್ಲಿ ವಿನಂತಿ……

ವಿಜಯಸಾಕ್ಷಿ ಸುದ್ದಿ, ನರಗುಂದ

ನರಗುಂದ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಆರ್ ಎನ್.‌ ಪಾಟೀಲ್‌ ಇವರು ತಮ್ಮ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಪೂರ್ವಾನುಮತಿಯಿಲ್ಲದೇ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವ ಪೋಸ್ಟ್‌ನ್ನು ಹಂಚಿಕೊಂಡ ಬಗ್ಗೆ ದೂರು ದಾಖಲಾಗಿದೆ.

ಮೇ.2ರ ಸಾಯಂಕಾಲ 6.45ಕ್ಕೆ ಆರ್.ಎನ್‌ ಪಾಟೀಲರು ʻಮಾನ್ಯ ಮತದಾರ ಬಾಂಧವರಲ್ಲಿ ವಿನಂತಿ. 10-5-2023, ಬುಧವಾರ ನಡೆಯಲಿರುವ ಚುನಾವಣೆಯಲ್ಲಿ ಜಾತ್ಯಾತೀತ ಜನತಾದಳ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ…ʼಎಂಬ ಸಂದೇಶವನ್ನು ಹಂಚಿಕೊಂಡಿದ್ದರು.

ಸದರಿ ಪೋಸ್ಟನ್ನು ಚುನಾವಣಾಧಿಕಾರಿಗಳಿಂದ ಯಾವುದೇ ಪೂರ್ವಾನುಮತಿ ಇಲ್ಲದೇ ಹಂಚಿಕೊಂಡ ಬಗ್ಗೆ ಜಿಲ್ಲಾಧಿಕಾರಿಗಳು, ಚುನಾವಣಾಧಿಕಾರಿಗಳು ಗದಗ ಹಾಗೂ ಮಾಧ್ಯಮ ಪ್ರಮಾಣಿಕರ ಮತ್ತು ಕಣ್ಗಾವಲು ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಮಾಹಿತಿ ನೀಡಿದ್ದರು.

ನರಗುಂದ ಮತಕ್ಷೇತ್ರದ ಚುನಾವಣಾಧಿಕಾರಿಗಳ ಉಲ್ಲೇಖಿತ ಪತ್ರದನ್ವಯ ಸದರಿ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿ ಎ.ಎಸ್.ಕಣವಿ ದೂರು ನೀಡಿದ್ದರು.

ನೀತಿ ಸಂಹಿತೆ ಉಲ್ಲಂಘನೆಯ ಕುರಿತು ಆರ್.ಎನ್‌ ಪಾಟೀಲರ ಮೇಲೆ ಅಪರಾಧ: 0079/2023, ಐಪಿಸಿ ಸೆಕ್ಷನ್‌ 1860, ಕಲಂ 171(ಎಚ್)‌ ರಂತೆ ನರಗುಂದ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಧಾನಿ ಮೋದಿ ಪ್ರಚಾರ ಸಂದರ್ಭದಲ್ಲಿಯೇ ಆತಂಕಕಾರಿ ಅಡಿಯೋ ಬಹಿರಂಗ: ತನಿಖೆಗೆ ಸಿಎಂ ಆದೇಶ!

ಅನಿಲ್ ಬಾಸೂರ್, ವಿಶೇಷ ಪ್ರತಿನಿಧಿ, ಬೆಂಗಳೂರು

ರಾಜ್ಯ ವಿಧಾನಸಭಾ ಚುನಾವಣೆಗೆ ನಾಲ್ಕು ದಿನಗಳು ಬಾಕಿಯಿದ್ದು, ದಿನದಿಂದ ದಿನಕ್ಕೆ ಎಲ್ಲ ರಾಜಕೀಯ ಪಕ್ಷಗಳ ಪ್ರಚಾರದ ಆರ್ಭಟ ಜೋರಾಗಿದೆ. ಚುನಾವಣೆ ಪ್ರಚಾರಾರ್ಥವಾಗಿ ಪ್ರಧಾನಿ ಮೋದಿ ಬೆಂಗಳೂರು ಸೇರಿದಂತೆ ಇವತ್ತು ರಾಜ್ಯದಲ್ಲಿ ರೋಡ್ ಶೋ, ಬಹಿರಂಗ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರದ್ದು ಎಂದು ಆರೋಪಿಸಲಾಗಿರುವ ಅಡಿಯೋ ಸಂಚಲನವನ್ನುಂಟು ಮಾಡಿದೆ.

ಅಷ್ಟಕ್ಕೂ ಅಡಿಯೋ ಯಾರದ್ದು? ಅಡಿಯೋದಲ್ಲಿ ಏನಿದೆ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತನಿಖೆಗೆ ಆದೇಶ ಮಾಡಿರುವುದು ಯಾಕೆ? ಮುಂದಿದೆ ಸಂಪೂರ್ಣ ಮಾಹಿತಿ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹತ್ಯೆಗೆ ಸಂಚು?:

“ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬೆಂಬಲ ತೋರುತ್ತಿರುವುದರಿಂದ ಕಂಗೆಟ್ಟಿರುವ ಬಿಜೆಪಿ ನಾಯಕರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅವರ ಪತ್ನಿ ಸೇರಿದಂತೆ ಇಡೀ ಕುಟುಂಬವನ್ನೇ ಹತ್ಯೆ ಮಾಡುವ ಸಂಚು ರೂಪಿಸಿದೆ” ಎಂಬ ಗಂಭೀರ ಆರೋಪವನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಅಡಿಯೋ ಬಿಡುಗಡೆ ಮಾಡಿ ಮಾತನಾಡಿದ ಅವರು, “ಮೋದಿ ಹಾಗೂ ಬೊಮ್ಮಾಯಿ ಅವರ ಆತ್ಮೀಯ ನೀಲಿ ಕಂಗಳ ಹುಡುಗ ಹಾಗೂ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಅವರ ಆಡಿಯೋದಲ್ಲಿ ಈ ಸಂಚು ಸ್ಪಷ್ಟವಾಗಿದೆ” ಎಂದು ರಣದೀಪ್ ಸಿಂಗ್ ಸುರ್ಜೆವಾಲ ಗಂಭೀರ ಆರೋಪ ಮಾಡಿದ್ದಾರೆ.

ಮಲ್ಲಿಕಾರ್ಜುನ್ ಖರ್ಗೆ ಅವರು ದಲಿತ, ಕಾರ್ಮಿಕ ಕುಟುಂಬದಲ್ಲಿ ಜನಿಸಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದವರೆಗೆ ಬೆಳೆದು ಬಂದಿರುವುದನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ಈ ಸಂಚು ರೂಪಿಸುತ್ತಿದೆ” ಎಂದು ಸುರ್ಜೆವಾಲಾ ಗಂಭೀರ ಆರೋಪ ಮಾಡಿದ್ದಾರೆ.

ಅಡಿಯೋದಲ್ಲಿ ಕಲಬುರಗಿ ಜಿಲ್ಲೆ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಬಿಜೆಪಿ ಕಾರ್ಯಕರ್ತ ರವಿ ಎಂಬುವರೊಂದಿಗೆ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಕಾರ್ಯಕರ್ತ ರವಿ ಎಂಬುವರೊಂದಿಗೆ ಮಣಿಕಂಠ ರಾಠೋಡ್, “ನಾನು ಅವರ ಹೆಂಡ್ರು, ಮಕ್ಕಳನ್ನ ಸಾಫ್ (ಕೊಲ್ಲುತ್ತೇನೆ ಎಂಬರ್ಥದಲ್ಲಿ) ಮಾಡ್ತೇನ್ಲೆ. ಅವರ ಫೋನ್ ನಂಬರ್ ಇಲ್ಲಲೇ ನನ್ನತ್ರ. ಖರ್ಗೆ ನಂಬರ್ ನನ್ನತ್ರ ಇದ್ದಿದ್ರೆ ನಾನು ಬಾಯಿಗೆ ಬಂದಂಗ ಮೊಬೈಲದಾಗ ಬೈತೇನ್ಲೇ” ಎಂದಿರುವುದು ಇದೆ.

ತನಿಖೆಗೆ ಸಿಎಂ ಬೊಮ್ಮಾಯಿ ಆದೇಶ..

ಇನ್ನು ಅಡಿಯೊ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ಕೊಟ್ಟಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಇದನ್ನು ಗಂಭೀರವಾಗಿ ತೆಗೆದುಕೊಳ್ಳೂತ್ತೇವೆ. ಆಡಿಯೋ ತಿರುಚಲಾಗಿದೆಯೇ ಎಂದು ನೋಡಬೇಕು. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಮಾಡಿಸುತ್ತೇವೆ” ಎಂದಿದ್ದಾರೆ.

ಸೌಹಾರ್ಧ ರಾಜಕೀಯದ ನಮ್ಮ ನಾಡು ಎತ್ತ ಸಾಗುತ್ತಿದೆ?

ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ರಾಜಕೀಯ ಹತ್ಯೆ ಅಥವಾ ಮರ್ಡರಸ್ ಪೊಲಿಟಿಕ್ಸ್ ತುಂಬಾ ಕಡಿಮೆ. ಚುನಾವಣೆ ಸಂದರ್ಭದಲ್ಲಿ ನಮ್ಮ ರಾಜಕಾರಣಿಗಳು ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಾರಾದರೂ, ನಂತರ ಅತ್ಯಂತ ಸುಮಧುರ ರಾಜಕೀಯ ಬಾಂಧವ್ಯ ಹೊಂದಿರುವುದು ಹಲವು ಬಾರಿ ಕಂಡು ಬಂದಿದೆ.

ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ, ಮಾಜಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದು, ಸಿದ್ದರಾಮಯ್ಯನವರ ಪುತ್ರ ಅಕಾಲಿಕ ಮರಣಕ್ಕೀಡಾದಾಗ ಎಲ್ಲ ಪಕ್ಷಗಳ ರಾಜಕೀಯ ನಾಯಕರು ಅವರಿಗೆ ಸಮಾಧಾನ ಹೇಳಿ ನೋವಿನಲ್ಲಿ ಭಾಗಿಯಾಗಿದ್ದರು.

ಇಂತಹ ಹಲವು ಪ್ರಸಂಗಗಳಲ್ಲಿ ನಮ್ಮ ನಾಡಿನ ರಾಜಕಾರಣಿಗಳ ಪ್ರಬುದ್ಧತೆ ಮತ್ತು ಒಳ್ಳೆಯತನ ಕಾಣಲು ಸಿಕ್ಕಿದೆ. ಆದರೆ ಇದೀಗ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಯುವ ಅಭ್ಯರ್ಥಿಯೊಬ್ಬರದ್ದು ಎನ್ನಲಾಗಿರುವ ದೂರವಾಣಿ ಸಂಭಾಷಣೆ ಈ ಪರಂಪರೆಗೆ ಇತೀಶ್ರೀ ಹಾಡುವ ಆತಂಕ ನಾಡಿನ ಜನರಿಗೆ ಎದುರಾಗಿದೆ. ಈ ಕುರಿತು ಸಂಪೂರ್ಣ ತನಿಖೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಮಾಡಿರುವುದು ಗಂಭೀರತೆಗೆ ಸಾಕ್ಷಿಯಾಗಿದೆ.

ಅಭ್ಯರ್ಥಿ ಬಗ್ಗೆ ಬಿಜೆಪಿಯಲ್ಲಿ ಅಪಸ್ವರ ಕೇಳಿ ಬಂದಿತ್ತು…..

ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪುತ್ರ, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ವಿರುದ್ಧ ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಣಿಕಂಠ್ ರಾಠೋಡ್ ಅವ್ರನ್ನ ಕಣಕ್ಕಿಳಿಸಲು ಆ ಪಕ್ಷದಲ್ಲಿಯೇ ವಿರೋಧ ವ್ಯಕ್ತವಾಗಿತ್ತು.

ಜೊತೆಗೆ ಕೇಂದ್ರ ಸಚಿವ ಅಮಿತ್ ಶಾ ಅವರು ಮಣಿಕಂಠ್ ಪರವಾಗಿ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದಕ್ಕೂ ವಿರೋಧ ವ್ಯಕ್ತವಾಗಿತ್ತು. ಬಿಜೆಪಿ ಅಭ್ಯರ್ಥಿ ಮಣಿಕಂಠ್ ರಾಠೋಡ್ ವಯಸ್ಸು 26 ಆಗಿದ್ದರೂ ಅವರ ಮೇಲೆ 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ ಎಂಬುದು ಈ ವಿರೋಧಕ್ಕೆ ಕಾರಣವಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ್ ಖರ್ಗೆ ಅವರ ಮೇಲೆ ಮಣಿಕಂಠ ರಾಠೋಡ್ ಕಿಡಿ ಕಾರಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷ ಇಂಥದ್ದೆ ವಿಚಾರಕ್ಕೆ ಬಂಧನಕ್ಕೊಳಗಾಗಿದ್ದ ಮಣಿಕಂಠ

ಈಗ ಬಿಜೆಪಿ ಅಭ್ಯರ್ಥಿ ಆಗಿರುವ ಮಣಿಕಂಠ ರಾಠೋಡ್ ಕಳೆದ ವರ್ಷ ಇಂಥದ್ದೆ ವಿಚಾರಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಬೇಲ್ ಮೇಲೆ ಬಿಡುಗಡೆ ಆಗಿದ್ದರು. ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ. ಅವರನ್ನು ಹುಡುಕಿ ಕೊಡಬೇಕು ಎಂಬ ಅಭಿಯಾನವನ್ನು ಬಿಜೆಪಿ ಕಾರ್ಯಕರ್ತರು ಮಾಡಿದ್ದರು.

ಆಗ ಹೇಳಿಕೆ ಕೊಟ್ಟಿದ್ದ ಮಣಿಕಂಠ ರಾಠೋಡ್, “”ನೀವು (ಪ್ರಿಯಾಂಕ್ ಖರ್ಗೆ) ಎಕೆ-47 ಗನ್‌ನಿಂದ ನಮ್ಮನ್ನು ಹೊಡೆದರೆ ನಾವು ಸಾಯಲು ಸಿದ್ಧರಿದ್ದೇವೆ. ಜೊತೆಗೆ ನಿಮ್ಮನ್ನು ಹೊಡೆದುರುಳಿಸಲು ಸಿದ್ಧರಿದ್ದೇವೆ” ಎಂದು ಅವಾಜ್ ಹಾಕಿದ್ದರು. ಈ ಕುರಿತು ಜೀವ ಬೆದರಿಕೆ ಹಾಕಿದ್ದಕ್ಕಾಗಿ ಐಪಿಸಿ ಸೆಕ್ಷನ್ 506ರ ಅಡಿಯಲ್ಲಿ ಕಲಬುರಗಿಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿ ಮಣಿಕಂಠ ರಾಠೋಡ್ ಬಂಧನವಾಗಿತ್ತು. ನಂತರ ಬೇಲ್ ಮೇಲೆ ಅವರು ಹೊರಗೆ ಬಂದಿದ್ದರು.

ಆದರೆ ಪ್ರಧಾನಿ ಮೋದಿ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮಿಂಚಿನ ಪ್ರಚಾರ ಮಾಡುತ್ತಿರುವಾಗಲೇ ಇಂಥಹ ಬೆಳವಣಿಗೆ ಆಗಿರುವುದು ವಿಪರ್ಯಾಸ. ಒಟ್ಟಾರೆ ಪ್ರಕರಣದ ಈ ಬಗ್ಗೆ ಸಂಪೂರ್ಣ ತನಿಖೆ ನಡೆದು ತಪ್ಪಿತಸ್ಥರು ಯಾರೇ ಇದ್ದರೂ ಅವರಿಗೆ ಶಿಕ್ಷೆತಾಗಲಿ ಎಂಬುದು ನಾಡಿದ ಪ್ರಜ್ಞಾವಂತ ಮತದಾರರ ಒತ್ತಾಯ.

ಹೈದರ್ ನದಾಫ್ ಹತ್ಯೆ ಖಂಡನೀಯ; ತಕ್ಷಣ ಕೊಲೆಗಡುಕರನ್ನು ಬಂಧನಕ್ಕೆ ರಾಜ್ಯಾಧ್ಯಕ್ಷ ಅಬ್ದುಲ್ ರಜಾಕ್ ನದಾಫ್ ಅಗ್ರಹ

ವಿಜಯಸಾಕ್ಷಿ ಸುದ್ದಿ, ನವಲಗುಂದ

ವಿಜಯಪುರ ಜಿಲ್ಲೆಯ ಪಿಂಜಾರ ನದಾಫ್ ಸಮುದಾಯದ ಮುಖಂಡ ಹೈದರ್ ನದಾಫ್ ಹತ್ಯೆ ಖಂಡನೀಯವಾಗಿದ್ದು, ತಕ್ಷಣ ಕೊಲೆಗಡುಕರನ್ನು ಬಂಧಿಸಿ ಎಂದು ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳ ರಾಜ್ಯಾಧ್ಯಕ್ಷರಾದ ಡಾ. ಅಬ್ದುಲ್ ರಜಾಕ್ ನದಾಫ್ ಆಗ್ರಹಿಸಿದ್ದಾರೆ.

ಈ ಕುರಿತಾಗಿ ನವಲಗುಂದದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜಯಪುರ ನಗರಸಭೆ ಪಕ್ಷೇತರ ಸದಸ್ಯೆ ನಿಶತ್ ನದಾಫ್ ಅವರ ಪತಿ ಹೈದರ್ ನದಾಫ್ ಹತ್ಯೆ ಖಂಡನೀಯ. ಪೊಲೀಸರು ತಕ್ಷಣ ಕೊಲೆಗಡುಕರನ್ನು ಬಂಧಿಸಿ ಊಹಾಪೋಹಗಳಿಂದ ಶಾಂತಿ-ಸುವ್ಯವಸ್ಥೆ ಕದಡುವುದನ್ನು ತಪ್ಪಿಸಬೇಕು.

ಕೊಲೆಗಡುಕರ ಪಕ್ಷ, ಜಾತಿ, ಧರ್ಮವನ್ನು ಲೆಕ್ಕಿಸದೆ ಪೊಲೀಸರು ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕು ಇದು ಅಲೆಮಾರಿ ಸಮುದಾಯವನ್ನು ಕುಗ್ಗಿಸುವ ಹುನ್ನಾರವಾಗಿದ್ದು, ಕೂಡಲೇ ಇವರನ್ನು ಬಂಧಿಸಬೇಕೆಂದು ರಾಜ್ಯಾಧ್ಯಕ್ಷ ಅಬ್ದುಲ್ ರಜಾಕ್ ನದಾಫ್ ಒತ್ತಾಯಿಸಿದ್ದಾರೆ.

ನೀರಿನ ಪಂಪ್‌ಹೌಸ್‌ ಕೀ ಮನೆಯಲ್ಲಿಟ್ಟುಕೊಂಡು ಬಿಜೆಪಿ ಪರ ಪ್ರಭಾವ ಬೀರುವ ಉದ್ದೇಶ; ನಗರಸಭೆ ಸದಸ್ಯನ ವಿರುದ್ಧ ಪ್ರಕರಣ

ವಿಜಯಸಾಕ್ಷಿ ಸುದ್ದಿ, ಬೆಟಗೇರಿ

ವಾರ್ಡ್‌ನ ಜನರೆಲ್ಲರೂ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದರೆ ಮಾತ್ರ ತಮ್ಮ ವಾರ್ಡ್‌ನಲ್ಲಿ ಸರಿಯಾಗಿ ನೀರು ಸರಬರಾಜು ಆಗುತ್ತದೆ ಎಂಡು ಆಮಿಷ ಒಡ್ಡುವ ಉದ್ದೇಶದಿಂದ ನೀರಿನ ಪಂಪ್‌ಹೌಸ್‌ ಕೀಯನ್ನು ಕೊಡದೇ ತೊಂದರೆ ನೀಡಿ, ನೀತಿ ಸಂಹಿತೆ ಉಲ್ಲಂಘಿಸಿದ ಬಿಜೆಪಿ ಬೆಂಬಲಿತ ನಗರಸಭೆ ಸದಸ್ಯನ ವಿರುದ್ಧ ಪ್ರಕರಣ ದಾಖಲಾಗಿದೆ.

ಗದಗ-ಬೆಟಗೇರಿ ನಗರಸಭೆಯ, ಗದಗ-66 ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ವಾರ್ಡ್‌ ನಂ.13ಕ್ಕೆ ಬಿಜೆಪಿ ಪಕ್ಷದಿಂದ ಆಯ್ಕೆಯಾದ ಸದಸ್ಯ ಮುತ್ತು ಮುಶಿಗೇರಿ ಮೇ.1ರಂದು ಮುಂಜಾನೆ 9.30ರ ಸುಮಾರಿಗೆ ವಾರ್ಡ್‌ನ ಕೆಲವರು ಕಾಂಗ್ರೆಸ್‌ ಪಕ್ಷ ಸೇರಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡದಿದ್ದುದರಿಂದ ಪ್ರಭಾವ ಬೀರುವ ಉದ್ದೇಶ ಹೊಂದಿದ್ದರು.

ಈ ಕಾರಣಕ್ಕಾಗಿ ತಮ್ಮ ವಾರ್ಡ್‌ನ ನೀರಿನ ಪಂಪ್‌ಹೌಸ್‌ ಕೀಯನ್ನು ತಮ್ಮ ಮನೆಯಲ್ಲಿಟ್ಟುಕೊಂಡು ಪಕ್ಷದ ಪರವಾಗಿ ಪ್ರಭಾವ ಬೀರಲು ಮುಂದಾಗಿದ್ದು, ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಆರ್.‌ ನದಾಫ್‌ ಈ ಬಗ್ಗೆ ಕ್ರಮ ಜರುಗಿಸುವಂತೆ ದೂರು ಸಲ್ಲಿಸಿದ್ದರು.

ಈ ಕುರಿತು ಅಪರಾಧ: 0030/2023, REPRESENTATION OF PEOPLE ACT, 1951 & 1988ರ ಕಲಂ 123(2), ಐಪಿಸಿ ಸೆಕ್ಷನ್‌ 171(ಇ) ಕಲಂ123(2) ಅಡಿಯಲ್ಲಿ ನ್ಯಾಯಾಲಯದ ಅನುಮತಿಯಂತೆ ಬೆಟಗೇರಿ ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನೀತಿ ಸಂಹಿತೆ ಉಲ್ಲಂಘಿಸುವ ಪೋಸ್ಟ್:‌ ಚಂದ್ರು ಲಮಾಣಿ ವಿರುದ್ಧ ಪ್ರಕರಣ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಚುನಾವಣಾ ಅಧಿಕಾರಿಗಳಿಂದ ಯಾವುದೇ ಅನುಮತಿ ಪಡೆಯದೇ, ನೀತಿ ಸಂಹಿತೆ ಉಲ್ಲಂಘಿಸಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡ ಅಪರಾಧದ ಬಗ್ಗೆ ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದ್ರು ಲಮಾಣಿ ವಿರುದ್ಧ ಪ್ರಕರಣ ದಾಖಲಾಗಿದೆ.

ಮೇ.1ರಂದು ಸಂಜೆ 6.33ರ ವೇಳೆಗೆ ʻಮೇ.1, ವಿಶ್ವ ಕಾರ್ಮಿಕ ದಿನ. ಶ್ರಮಜೀವಿಗಳಿಗೆ ವಿಶ್ವಕಾರ್ಮಿಕ ದಿನಾಚರಣೆಯ ಶುಭಾಶಯಗಳುʼ ಎಂಬ ಜಾಹಿರಾತು ಹಂಚಿಕೊಂಡು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದರು.

ಈ ಬಗ್ಗೆ ಶಿರಹಟ್ಟಿಯ ಚುನಾವಣಾಧಿಕಾರಿ ಎಲ್.ಗೋಪಾಲ ನಾಯಕ್‌ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ದೂರು ಸಲ್ಲಿಸಿದ್ದು, ಅಪರಾಧ: 0056/2023, ಐಪಿಸಿ ಕಲಂ: 171(ಎಚ್)‌ ಅಡಿಯಲ್ಲಿ ನ್ಯಾಯಾಲಯದ ಅನುಮತಿಯೊಂದಿಗೆ ಲಕ್ಷ್ಮೇಶ್ವರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!