Home Blog Page 3261

ಮಹಿಳೆಯ ವ್ಯಾನಿಟಿ ಬ್ಯಾಗ್‌ನಿಂದ ಲಕ್ಷಾಂತರ ರೂ,ಮೌಲ್ಯದ ಚಿನ್ನಾಭರಣ ಎಗರಿಸಿದ ಕಳ್ಳರು…….

ಬಸ್ ನಿಲ್ದಾಣದಲ್ಲಿ ಘಟನೆ……

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಮಹಿಳೆಯೊಬ್ಬರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿದ್ದಾಗ ಯಾರೋ ಕಳ್ಳರು ಆಕೆಯ ವ್ಯಾನಿಟಿ ಬ್ಯಾಗ್‌ನಲ್ಲಿ ಇರಿಸಿಕೊಂಡಿದ್ದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.

ಮುಂಡರಗಿಯ ಉಸ್ತಾದ್‌ ಪ್ಲಾಟ್‌ ನಿವಾಸಿ ರುಬೀನಾಬಾನು ಸಯ್ಯದಜರುದ್ದಿನ್‌ ಮಕಾನದಾರ ಎಂಬುವರು ತನ್ನ ಪತಿಯೊಂದಿಗೆ ಲಕ್ಷ್ಮೇಶ್ವರದಿಂದ ಹಾವೇರಿಗೆ ಹೋಗುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿದ್ದರು.

ಈ ಸಮಯದಲ್ಲಿ ಅವರ ವ್ಯಾನಿಟಿ ಬ್ಯಾಗ್‌ನಲ್ಲಿ ಒಟ್ಟೂ 2,46,800 ರೂ ಬೆಲೆಬಾಳುವ ಬಂಗಾರ ಹಾಗೂ ಬೆಳ್ಳಿಯ ಆಭರಣಗಳಿದ್ದ ಪರ್ಸನ್ನು ಯಾರೋ ಕಳ್ಳರು ಬ್ಯಾಗಿನ ಜಿಪ್‌ ತೆಗೆದು ಕಳ್ಳತನ ಮಾಡಿದ್ದಾರೆಂದು ದೂರು ಸಲ್ಲಿಸಿದ್ದಾರೆ.

ಈ ಬಗ್ಗೆ ಅಪರಾಧ 0061/2023, ಐಪಿಸಿ ಕಾಯ್ದೆ 1860ರ ಕಲಂ 379ರಂತೆ ಲಕ್ಷ್ಮೇಶ್ವರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಡು ಪ್ರಾಣಿಗಳ ಕಾಟ; ಗ್ರಾಮಸ್ಥರ ಆತಂಕ…!

ವಿಜಯಸಾಕ್ಷಿ ಸುದ್ದಿ, ಗದಗ

ತಾಲೂಕಿನ ಅಸುಂಡಿ, ಬಿಂಕದಕಟ್ಟಿ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಕಾಟ ಜೋರಾಗಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಮೇ 23ರಂದು ರಾತ್ರಿಯ ಸಮಯದಲ್ಲಿ ಅಸುಂಡಿ ಗ್ರಾಮದ ಬಳಿ ಕಾಣಿಸಿಕೊಂಡಿದ್ದ ಹೈನಾವೊಂದು ಕೊಟ್ಟಿಗೆಯಲ್ಲಿದ್ದ ಜಾನುವಾರುಗಳ ಮೇಲೆ ದಾಳಿ ನಡೆಸಿತ್ತು. ಶುಕ್ರವಾರ ಬೆಳಿಗ್ಗೆ ಹೈನಾ ಇಲ್ಲಿನ ಸಿದ್ದಯ್ಯ ಮಠಪತಿ ಎಂಬುವರು ತೋಟದ ಬಳಿ ಮತ್ತೆ ಪ್ರತ್ಯಕ್ಷವಾಗಿದ್ದು ಆತಂಕ ಮೂಡಿಸಿದೆ.

ಮಳಿ ಹಳ್ಳದ ಸರುವಿನಲ್ಲಿ ಹೈನಾ ಠಿಕಾಣಿ ಹೂಡಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ, ಸ್ಥಳಕ್ಕೆ ಬಂದು ಸೂಕ್ತ ಕ್ರಮ ಕೈಗೊಳ್ಳದಿರುವ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ತೋಟದ ಮನೆ ಹಾಗೂ ಜಮೀನಿನಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರ ಮೇಲೆ ದಾಳಿ ಮಾಡುವ ಆತಂಕ ಗ್ರಾಮಸ್ಥರನ್ನು ಕಾಡತೊಡಗಿದೆ. ಒಂದು ತಿಂಗಳ ಹಿಂದಷ್ಟೇ ಬಿಂಕದಕಟ್ಟಿ ಗ್ರಾಮದ ಬಳಿ ಚಿರತೆಯೂ ಕಾಣಿಸಿಕೊಂಡಿದ್ದು, ಸಾರ್ವಜನಿಕರು ಆತಂಕದಿಂದಲೇ ಓಡಾಡುವಂತಾಗಿದೆ.

ಕಾರಿನಲ್ಲಿ ಸೇರಿದ್ದ ವಿಷಕಾರಿ ಹಾವು; ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದ ಸ್ನೇಕ್ ಬುಡ್ಡಾ……..

ಸರ್ವಿಸ್ ಗೆ ಬಂದಿದ್ದ ಕಾರಿನಲ್ಲಿ ಇಂಡಿಯನ್ ಕಾಮನ್ ಕ್ರೈಟ್ ಹಾವು.. …..

ವಿಜಯಸಾಕ್ಷಿ ಸುದ್ದಿ, ನರಗುಂದ

ಸರ್ವಿಸ್ ಗೆ ಬಂದಿದ್ದ ಕಾರಿನಲ್ಲಿ ವಿಷಕಾರಿ ಹಾವು ಸೇರಿಕೊಂಡು ಕೆಲಕಾಲ ಆತಂಕ ಮೂಡಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.

ಇಲ್ಲಿನ ಹುಬ್ಬಳ್ಳಿ ರಸ್ತೆಯಲ್ಲಿ ಇರುವ ಹುಸೇನ್ ಅತ್ತಾರ್ ಎಂಬುವವರಿಗೆ ಸೇರಿದ ನ್ಯಾಷನಲ್ ಕಾರ್ ಮೋಟಾರ್ಸ್ ಗ್ಯಾರೇಜ್ ಗೆ ಇಂಡಿಕಾ ಕಾರೊಂದು ಸರ್ವಿಸ್ ಗೆ ಬಂದಿತ್ತು. ಅದರ ಬಾನೆಟ್ ನ ಕೆಳಗೆ ಕಟ್ಟಾವು ಅಂತ ಕರೆಯುವ ವಿಷಕಾರಿ ಹಾವು ಸೇರಿಕೊಂಡಿತ್ತು.

ಇದರಿಂದಾಗಿ ಗಾಬರಿಬಿದ್ದ ಮೆಕ್ಯಾನಿಕ್ ಉರಗ ತಜ್ಞ ಬುಡ್ನೆಸಾಬ ಸುರೇಬಾನ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಬುಡ್ನೆಸಾಬ, ಬಾನೆಟ್ ನಲ್ಲಿ ಇದ್ದ ಹಾವನ್ನು ಹೊರ ತೆಗೆದು ರಕ್ಷಣೆ ಮಾಡಿದರು.

ನಂತರ ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿರುವ ಸ್ನೇಕ್ ಬುಡ್ನೆಸಾಬ, ಈ ವಿಷಕಾರಿ ಹಾವಿನ ಬಗ್ಗೆ ಮಾಹಿತಿ ನೀಡಿದ್ದು, ನಾಗರಹಾವುಗಿಂತಲೂ ಐದು ಪಟ್ಟು ಹೆಚ್ಚು ವಿಷಕಾರಿ ಹಾವು ಇದಾಗಿದ್ದು, ಯಾರಿಗಾದರೂ ಈ ಹಾವು ಕಚ್ಚಿದರೆ, ಕಚ್ಚಿದ ತಕ್ಷಣವೇ ಚಿಕಿತ್ಸೆ ಪಡೆಯದಿದ್ದರೆ ಸಾವು ಸಂಭವಿಸಬಹುದು ಎಂದು ಹೇಳಿದ್ದಾರೆ.

ನರಗುಂದ ಪೊಲೀಸರ ಭರ್ಜರಿ ಕಾರ್ಯಾಚರಣೆ; ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.70 ಕೋಟಿ ರೂ. ವಶಕ್ಕೆ

ವ್ಯಾಪಾರಿ, ಕಾರ್ ಚಾಲಕ ವಶಕ್ಕೆ…….

ವಿಜಯಸಾಕ್ಷಿ ಸುದ್ದಿ, ನರಗುಂದ

ಯಾವುದೇ ದಾಖಲೆ ಇಲ್ಲದೆ ಕೋಟ್ಯಾಂತರ ರೂ. ಹಣವನ್ನು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಾಗಲಕೋಟದಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಕಾರಿನಲ್ಲಿ ಕೋಟ್ಯಂತರ ರೂ. ಹಣ ಪತ್ತೆಯಾಗಿದೆ.

ಹುಬ್ಬಳ್ಳಿ ಮೂಲದ ವ್ಯಾಪಾರಿ ವಿಕ್ರಮ್ ಸಿಂಗ್ ಎಂಬುವವರಿಗೆ ಸೇರಿದ 1ಕೋಟಿ 70 ಲಕ್ಷ ರೂ ಹಣ ವಶಕ್ಕೆ ಪಡೆದಿರುವ ನರಗುಂದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ನಿನ್ನೆ ಮಧ್ಯರಾತ್ರಿ ಕಾರಿನಲ್ಲಿ ಹಣ ಸಾಗಾಟದ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಪೊಲೀಸರು ಕಾರು ತಪಾಸಣೆ ಮಾಡಿದಾಗ ಈ ಹಣ ಪತ್ತೆಯಾಗಿದೆ.

ಕಾರ ಚಾಲಕ ಶಿವಬಸಯ್ಯ ಹಾಗೂ ವ್ಯಾಪಾರಿ ವಿಕ್ರಮ್ ಸಿಂಗ್ ಅವರನ್ನು ಇನ್ಸ್‌ಪೆಕ್ಟರ್ ಮಲ್ಲಯ್ಯ ಮಠಪತಿ ಅವರು ಹಣದ ಮೂಲ ಹಾಗೂ ದಾಖಲೆಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ರೋಣ ಶಾಸಕ ಜಿ.ಎಸ್ ಪಾಟೀಲರಿಗೆ ಸಚಿವ ಸ್ಥಾನ ನೀಡಲು ಮುಖಂಡರ ಒತ್ತಾಯ; ಸಚಿವ ಸ್ಥಾನ ತಪ್ಪಿದರೆ ಉಗ್ರ ಹೋರಾಟದ ಎಚ್ಚರಿಕೆ……

ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜಿ.ಎಸ್ ಪಾಟೀಲ್……..

ವಿಜಯಸಾಕ್ಷಿ ಸುದ್ದಿ, ಗದಗ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಪ್ರತಿ ಬಾರಿಯೂ ರೋಣ ಕ್ಷೇತ್ರಕ್ಕೆ ಅನ್ಯಾಯವಾಗುತ್ತಿದೆ. ಜಿ.ಎಸ್ ಪಾಟೀಲರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಅಧಿಕಾರ ಇಲ್ಲದ ಸಮಯದಲ್ಲಿಯೂ ಧೃತಿಗೆಡದೇ ಪಕ್ಷದ ಬಲವರ್ಧನೆಯಲ್ಲಿ ಶ್ರಮಿಸಿದ್ದಾರೆ. ಹೀಗಿರುವಾಗ, ರೋಣ ಕ್ಷೇತ್ರದ ಶಾಸಕರಿಗೆ ಈ ಬಾರಿಯೂ ಸಚಿವ ಸ್ಥಾನದ ಅವಕಾಶ ಕೈತಪ್ಪಿದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಐಸಿಸಿ, ಕೆಪಿಸಿಸಿ ವರಿಷ್ಠರಿಗೆ ರೋಣ ಕಾಂಗ್ರೆಸ್ ಮುಖಂಡರು ಎಚ್ಚರಿಕೆ ನೀಡಿದರು.

ಭಾನುವಾರ ನಗರದ ಜಿ.ಎಸ್. ಪಾಟೀಲರ ನಿವಾಸದಲ್ಲಿ ಸಭೆ ಸೇರಿದ್ದ ಪಕ್ಷದ ಮುಖಂಡರು, ವೀರಶೈವ ಲಿಂಗಾಯತ, ಕುರುಬ ಸಮಾಜದ ಮುಖಂಡರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು, ಕ್ಷೇತ್ರದ ಶಾಸಕರಾದ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು. ರೋಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾದ ಪ್ರತೀ ಚುನಾವಣೆಯ ಸಂದರ್ಭದಲ್ಲಿಯೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ.

ಆದರೆ, ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿಯೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರೋಣ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಿಲ್ಲ.

ಹೀಗಿದ್ದರೂ ನಾಲ್ಕು ದಶಕಗಳಿಂದ ರೋಣ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಿಲ್ಲ. ಒಂದು ವೇಳೆ ಜಿ.ಎಸ್ ಪಾಟೀಲರಿಗೆ ಸಚಿವ ಸ್ಥಾನ ನೀಡದಿದ್ದರೆ ಮುಂಬರುವ ಲೋಕಸಭೆ, ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ರೋಣ ಮತಕ್ಷೇತ್ರದಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಕಟು ಎಚ್ಚರಿಕೆ ನೀಡಿದರು.

ಶಾಸಕ ಜಿ.ಎಸ್. ಪಾಟೀಲರಿಗೆ ಈ ಬಾರಿ ಸಚಿವ ಸ್ಥಾನ ನೀಡದಿದ್ದರೆ, ರೋಣ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದರು. ನಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಶೀಘ್ರವೇ ಸ್ಪಂದಿಸದಿದ್ದರೆ, ನಾಳೆ, ಮೇ.೨೩ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಿ, ಕಚೇರಿಯ ಎದುರು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಈ ಹಿನ್ನೆಲೆಯಲ್ಲಿ ಇಂದು ಸಂಜೆಯೇ ರೋಣ ಕ್ಷೇತ್ರದಿಂದ ಬೆಂಬಲಿಗರು, ಕಾರ್ಯಕರ್ತರು ಬೆಂಗಳೂರಿಗೆ ತೆರಳಲು ಸಭೆಯಲ್ಲಿ ನಿರ್ಧಾರ ಕೈಗೊಂಡರು.

ಪ್ರಿಯಾಂಕ ಹಾವೇರಿಗೆ ‘ಕರುನಾಡ ಚೇತನ’ ಪ್ರಶಸ್ತಿ

ಲಕ್ಷ್ಮೇಶ್ವರ: ಹುಬ್ಬಳ್ಳಿಯ ಚೇತನ ಫೌಂಡೇಶನ್ ಸಹಯೋಗದಲ್ಲಿ ಧಾರವಾಡದ ಸುವರ್ಣ ಸಮುಚ್ಛಯ ಭವನದಲ್ಲಿ ಶುಕ್ರವಾರ ಚಿಣ್ಣರ ಮೇಳ ಬೇಸಿಗೆ ಶಿಬಿರದ ಚೇತನ ಸಂಭ್ರಮ ಸಮಾರೋಪ ಸಮಾರಂಭ ನಡೆಯಿತು.

ಈ ಕಾರ್ಯಕ್ರಮದಲ್ಲಿ ಲಕ್ಷ್ಮೇಶ್ವರದ ಅಗಡಿ ಇಂಜಿನಿಯರಿಂಗ್ ಕಾಲೇಜಿನ ಯುವ ಪ್ರತಿಭೆ, ಸಂಗೀತ ಕಲಾವಿದೆ ಕು.ಪ್ರಿಯಾಂಕ ಹಾವೇರಿಗೆ “ಕರುನಾಡ ಚೇತನ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ವೇಳೆ ಡಾ. ಚಂದ್ರಶೇಖರ ಮಾಡಲಗೇರಿ, ಡಾ. ಜ್ಯೋತಿ ಕೆ.ಸಿ, ಡಾ. ಮೈತ್ರೇಯಿಣಿ ಜಿ, ಡಾ. ಭಾರತಿ ಜಿ ಸೇರಿ ಫೌಂಡೇಶನದ ಪದಾಧಿಕಾರಿಗಳು ಇದ್ದರು.

ಮರಕ್ಕೆ ಬೈಕ್ ಡಿಕ್ಕಿ; ಸ್ಥಳದಲ್ಲೇ ಇಬ್ಬರು ಬಾಲಕರು ಸಾವು,‌ ಮತ್ತೊಬ್ಬ ಬಾಲಕ ಗಂಭೀರ

ಈಜುಕೊಳಕ್ಕೆ ಹೋಗಿ ವಾಪಸು ಬರುವಾಗ ನಡೆದ ಘಟನೆ…….

ವಿಜಯಸಾಕ್ಷಿ ಸುದ್ದಿ, ಗದಗ

ನಿಯಂತ್ರಣ ತಪ್ಪಿದ ಬೈಕ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಬಾಲಕರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ಜರುಗಿದೆ.

ಗದಗ ಜಿಲ್ಲೆಯ ರೋಣ ಪಟ್ಟಣದ ಬಸ್ ಡಿಪೋ‌ ಬಳಿ ಈ ದುರ್ಘಟನೆ ಜರುಗಿದೆ.

ಅನೂಪ ಇಟಗಿ (15) ಶ್ರೀಶಾಂತ ಗಡಗಿ (15 ) ಮೃತಪಟ್ಟ ದುರ್ಧೈವಿಗಳು ಎಂದು ಗುರುತಿಸಲಾಗಿದೆ.

ಅಬ್ಬಿಗೇರಿ ಗ್ರಾಮದ ಬಳಿ ಇರುವ ಕಲಾಕಾಶಿ ಈಜು ಕೊಳಕ್ಕೆ ಹೋಗಿ ವಾಪಸು ಬರುವಾಗ ಬೈಕ್ ನಿಯಂತ್ರಣ ಕಳೆದುಕೊಂಡು ಈ ಘಟನೆ ಜರುಗಿದೆ. ಮತ್ತೊಬ್ಬ ಬಾಲಕ ಮೌನೇಶ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಇಬ್ಬರೂ ಬಾಲಕರು ರೋಣ ಪಟ್ಟಣದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ರೋಣ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಭೀಕರ ಅಪಘಾತ; ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದು ಕಾರು ಪಲ್ಟಿ, ಮೂವರು ಸಾವು

ಸ್ಥಳಕ್ಕೆ ಪೊಲೀಸರ ಭೇಟಿ…….

ವಿಜಯಸಾಕ್ಷಿ ಸುದ್ದಿ, ಗದಗ

ಎರಡು ಬೈಕ್ ಗಳಿಗೆ ಕಾರು ಡಿಕ್ಕಿ ಹೊಡೆದು ಪರಿಣಾಮವಾಗಿ ಮೂವರು ಬೈಕ್ ಸವಾರರು ಮೃತಪಟ್ಟ ದುರ್ಘಟನೆ ಜರುಗಿದೆ.

ಗದಗ ತಾಲೂಕಿನ ಅಡವಿಸೋಮಾಪೂರ ಬಳಿ ನಡೆದ ಅಪಘಾತದಲ್ಲಿ ಎರಡೂ ಬೈಕ್ ನ ಸವಾರರು ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿದ್ದು, ಕಾರಿನಲ್ಲಿ ಇದ್ದವರು ಪರಾರಿಯಾಗಿದ್ದಾರೆ.

ಮುಂಡರಗಿ ತಾಲೂಕಿನ ಸಿಂಗಟರಾಯನಕೇರಿ ತಾಂಡಾದ ಶಿವಪ್ಪ(50) ಛಬ್ಬಿ ತಾಂಡಾದ ಶಿವಾನಂದ(33) ಹಾಗೂ ಡೋಣಿ ತಾಂಡಾದ ಕೃಷ್ಣಪ್ಪ (31) ಎಂಬುವರು ಸ್ಥಳದಲ್ಲಿಯೇ ಮೃತಪಟ್ಟ ದುರ್ಧೈವಿಗಳು ಎನ್ನಲಾಗಿದೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತಯೇ ಸ್ಥಳಕ್ಕೆ ಬಂದ ಕುಟುಂಬಸ್ಥರ ಆಕ್ರಂಧನ ಮುಗಿಲ ಮುಟ್ಟಿದೆ. ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗದಗ ಜಿಲ್ಲೆಯಲ್ಲಿ ಪಾಟೀಲರ ಪಾರುಪತ್ಯ; ಹಾವು-ಏಣಿ ಆಟದಲ್ಲಿ ಗೆದ್ದು ಬೀಗಿದ ಸಚಿವ ಪಾಟೀಲ್…! ಕ್ಷೇತ್ರವಾರು ಅಭ್ಯರ್ಥಿಗಳು ಪಡೆದ ಮತಗಳ ಸಂಪೂರ್ಣ ಅಪ್ಡೇಟ್

1767 ನೋಟಾ ಮತಗಳು ಮಾಡಿದ ಯಡವಟ್ಟು…..

ಶಾಸಕ ಎಚ್ ಕೆ ಪಾಟೀಲ್ ಹ್ಯಾಟ್ರಿಕ್ ಗೆಲುವು…..

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಎರಡು ಸ್ಥಾನದಲ್ಲಿ ಬಿಜೆಪಿ, ಎರಡು ಸ್ಥಾನದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಗದಗ ಹಾಗೂ ರೋಣದಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ.

ಗದಗನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್ ಕೆ ಪಾಟೀಲ್ ಅವರು ಬಿಜೆಪಿಯ ಅನಿಲ ಮೆಣಸಿನಕಾಯಿ ಅವರನ್ನು 15130 ಮತಗಳ ಅಂತರದಿಂದ ಸೋಲಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.

ಗದಗ ವಿಧಾನಸಭಾ ಕ್ಷೇತ್ರದ 16 ಸುತ್ತುಗಳಲ್ಲಿ ನಡೆದ ಮತ ಎಣಿಕೆಯಲ್ಲಿ ಒಂಬತ್ತನೇ ಸುತ್ತಿನಲ್ಲಿ ಅನಿಲ ಮೆಣಸಿನಕಾಯಿ 493 ಮತಗಳ ಮುನ್ನಡೆ ಸಾಧಿಸಿದ್ದರು. ಮುಂದಿನ ಸುತ್ತುಗಳಲ್ಲಿ ಕಾಂಗ್ರೆಸ್ ತನ್ನ ಮುನ್ನಡೆ ಬಿಟ್ಟು ಕೊಡಲಿಲ್ಲ.

ರೋಣದಲ್ಲೂ ಕೂಡ ಮತ ಎಣಿಕೆಯ ಆರಂಭದಲ್ಲಿ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಜಿ ಎಸ್ ಪಾಟೀಲ್, ಕೊನೆಯವರೆಗೂ ಮುನ್ನಡೆ ಬಿಟ್ಟು ಕೊಡದೆ ಭರ್ಜರಿ ಗೆಲುವಿನ ಕೇಕೆ ಹಾಕಿದರು.

ಕಾಂಗ್ರೆಸ್‌ನ ಜಿ ಎಸ್ ಪಾಟೀಲ್ 94865 ಮತಗಳನ್ನು ಪಡೆದು ಬಿಜೆಪಿಯ ಕಳಕಪ್ಪ ಬಂಡಿ ಅವರನ್ನು 24688 ಮತಗಳ ಅಂತರದಿಂದ ಪರಾಭವಗೊಳಿಸಿದರು.

ಆನೇಕಲ್ ದೊಡ್ಡಯ್ಯ 8839 ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಡಾ. ಚಂದ್ರು ಲಮಾಣಿ ಮತ ಎಣಿಕೆಯ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು 27963 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ 45637 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದುಕೊಂಡರು.

ಕಾಂಗ್ರೆಸ್ ಅಭ್ಯರ್ಥಿ ಸುಜಾತ ದೊಡ್ಡಮನಿ 34550 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ನರಗುಂದ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯ ಆರಂಭದಲ್ಲಿ ಸ್ವಲ್ಪವೇ ಮತಗಳ ಅಂತರ ಕಾಯ್ದುಕೊಂಡು ಭಾರಿ ಕುತೂಹಲ ಮೂಡಿಸಿದ್ದ ಕಾಂಗ್ರೆಸ್ ಪಕ್ಷ ಕೊನೆಗಳಿಗೆಯಲ್ಲಿ ಕೇವಲ 1791 ಮತಗಳಿಂದ ತನ್ನ ಸೋಲು ಒಪ್ಪಿಕೊಂಡಿತು.

ಬಿಜೆಪಿಯ ಸಿ ಸಿ ಪಾಟೀಲ್ 72835 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಬಿ ಆರ್ ಯಾವಗಲ್ ಅವರು 71044 ಮತಗಳನ್ನು ಪಡೆದಿದ್ದಾರೆ.

ಇಲ್ಲಿ ಬರೋಬ್ಬರಿ ಇವಿಎಮ್ ಮಷೀನ್ ಮೂಲಕ 1759 ಮತಗಳನ್ನು, 8 ಮತಗಳನ್ನು ಪೋಸ್ಟಲ್ ಮೂಲಕ ಒಟ್ಟು 1767 ನೋಟಾಕ್ಕೆ ಚಲಾಯಿಸಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆಯೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು.

ಪರಸ್ಪರ ಗುಲಾಲ್ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಗದಗ ನಗರಸಭೆ ಮೇಲೆ ಲೋಕಾಯುಕ್ತರ ದಾಳಿ; ಒಂದೂವರೆ ಲಕ್ಷ ರೂ. ಹಣ ಪಡೆದ ಅಸಿಸ್ಟೆಂಟ್ ಇಂಜಿನಿಯರ್ ಬಲೆಗೆ

ಗುತ್ತಿಗೆದಾರನಿಂದ ಒಂದೂವರೆ ಲಕ್ಷ ಹಣ ಪಡೆದಿದ್ದ…….

ವಿಜಯಸಾಕ್ಷಿ ಸುದ್ದಿ, ಗದಗ

ರಸ್ತೆ ಕಾಮಗಾರಿ ಬಿಲ್ ಪಾಸ್ ಮಾಡಲು ಲಂಚ ಪಡೆದಿದ್ದ, ನಗರಸಭೆ ಸಹಾಯಕ ಅಭಿಯಂತರ ಒಬ್ಬರು ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಗುರುವಾರ ಮಧ್ಯಾಹ್ನ ನಗರಸಭೆಯಲ್ಲಿ ನಡೆದಿದೆ.

ಗದಗ-ಬೆಟಗೇರಿ ನಗರಸಭೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುವ ಕಾಟೇವಾಲ ಎಂಬುವವರೇ ಲೋಕಾಯುಕ್ತರ ಬಲೆಗೆ ಬಿದ್ದವರು.

ಗುತ್ತಿಗೆದಾರ ಅಬ್ದುಲ್ ಮನಿಯಾರ್ ಎಂಬುವರ ಒಂಬತ್ತು ಲಕ್ಷ ರೂ ಮೊತ್ತದ ಒಂದು, ಐದು ಲಕ್ಷ ರೂ ಕಾಮಗಾರಿಯ ಎರಡು ಬಿಲ್ ಪಾಸ್ ಮಾಡಲು ಒಂದೂವರೆ ಲಕ್ಷ ಹಣ ಕೇಳಿದ್ದರು ಎಂಬ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತರ ತಂಡ ದಾಳಿ ಮಾಡಿ ಹಣ ಸಮೇತ ಕಾಟೇವಾಲ ಅವರನ್ನು ವಶಕ್ಕೆ ಪಡೆದಿದ್ದಾರೆ.

ಲಂಚ ಪಡೆದ ಇಂಜಿನಿಯರ್ ಕಾಟೇವಾಲ ಅವರು, ಹಣವನ್ನು ಬೈಕಿನಲ್ಲಿ ಇಟ್ಟಿದ್ದರು. ನಂತರ ಲೋಕಾಯುಕ್ತರಿಗೆ ಹಣ ಹಸ್ತಾಂತರ ಮಾಡಿದ್ದಾರೆ.

ಬಿಲ್ ಪಾಸ್ ಮಾಡಲು ಒಂದೂವರೆ ಲಕ್ಷ ಹಣ ಕೇವಲ ಕಾಟೇವಾಲ ಇಂಜಿನಿಯರ್ ಮಾತ್ರ ಕೇಳಿದ್ರಾ ಅಥವಾ ಬೇರೆ ಯಾರಾದರೂ ಇದರಲ್ಲಿ ಇದ್ದರಾ ಎಂಬುದು ಲೋಕಾಯುಕ್ತರ ತನಿಖೆಯಿಂದ ಹೊರಬಿಳಲಿದೆ.

ಲೋಕಾಯುಕ್ತ ಎಸ್ಪಿ ಸತೀಶ್ ಚಿಟಗುಪ್ಪಿ, ಡಿವೈಎಸ್ಪಿ ಶಂಕರ ಎಮ್ ರಾಗಿ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರಗಳಾದ ರವಿ ಪುರುಷೋತ್ತಮ್, ಅಜೀಜ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.

ಸಿಬ್ಬಂದಿಗಳಾದ ಎಸ್ ಎಸ್ ಅಮರಶೆಟ್ಟಿ, ಮಂಜುನಾಥ್ ಗಾರ್ಗಿ, ಲಕ್ಕನಗೌಡರ್, ಮುತ್ತುರೆಡ್ಡಿ ಬಾರಡ್ಡಿ, ಗುಬ್ಬಿ, ಅಯ್ಯನಗೌಡರ, ವಿರೂಪಾಕ್ಷ ಅರಿಷಿಣದ ಹಾಗೂ
ವಾಹನ ಚಾಲಕರಾದ ನೈನಾಪೂರ ಹಾಗೂ ಹೆಬ್ಬಳ್ಳಿ ಈ ಕಾರ್ಯಾಚರಣೆಯಲ್ಲಿ ಇದ್ದರು.

error: Content is protected !!