Home Blog Page 33

ಕಸ ವಿಲೇವಾರಿಗೆ ಅಡ್ಡಿ ಮಾಡಿದರೆ ಜನರೇ ಉತ್ತರ ಕೊಡುತ್ತಾರೆ: ಡಿ.ಕೆ. ಶಿವಕುಮಾರ್

0

ಬೆಂಗಳೂರು: ಕಸ ವಿಲೇವಾರಿ ವಿಚಾರದಲ್ಲಿ ಬಿಜೆಪಿ ನಾಯಕರು ಅಡ್ಡಿಪಡಿಸಿದರೆ ಜನರೇ ಅವರಿಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಅಸ್ಸಾಂಗೆ ತೆರಳುವ ಮುನ್ನ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,

ಬಿಜೆಪಿ ನಾಯಕರು ಕಸ ವಿಲೇವಾರಿಗೆ ಬಿಡುವುದಿಲ್ಲ ಎಂದು ಹೇಳುತ್ತಾರೆ. ಕಸವನ್ನು ಎಲ್ಲಾದರೂ ಒಂದು ಕಡೆ ಹಾಕಲೇಬೇಕಲ್ಲವೇ? ಅದು ಜನರ ಕಸ. ಮೊದಲಿನಿಂದಲೂ ಹೇಗೆ ವ್ಯವಸ್ಥೆ ಇತ್ತೋ, ಅದೇ ರೀತಿ ಮುಂದುವರಿಸುತ್ತಿದ್ದೇವೆ. ಬಿಜೆಪಿ ಹಾಗೂ ನಮ್ಮ ಆಡಳಿತಾವಧಿಯಲ್ಲೂ ಇದೇ ರೀತಿಯ ತೀರ್ಮಾನ ಕೈಗೊಳ್ಳಲಾಗಿತ್ತು” ಎಂದು ಸ್ಪಷ್ಟಪಡಿಸಿದರು.

ಯಾರು ಕಸ ಬಿಡುವುದಿಲ್ಲವೋ, ಅಂಥವರ ಕ್ಷೇತ್ರದಲ್ಲಿ ಕಸವನ್ನು ತೆಗೆಯುವುದೇ ಇಲ್ಲ, ತೆಗೆಸುವುದೇ ಇಲ್ಲ. ಆಗ ಜನರೇ ಅವರಿಗೆ ಪ್ರಶ್ನೆ ಕೇಳುತ್ತಾರೆ. ಅಗತ್ಯವಿದ್ದರೆ ಮೈಕ್ ಹಾಕಿ ಪ್ರಚಾರ ಮಾಡಿಸುತ್ತೇನೆ. ಅಭಿವೃದ್ಧಿಗೆ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

20, 30 ಕೋಟಿ ಸೇರಿದಂತೆ 50 ರಿಂದ 100 ಕೋಟಿ ರೂಪಾಯಿವರೆಗೆ ಅಭಿವೃದ್ಧಿ ಕಾಮಗಾರಿಗಳಿಗೆ ನೀಡುತ್ತಿದ್ದೇವೆ. ನಾವು ನೀಡುತ್ತಿರುವ ಸಹಾಯವನ್ನು ಅವರು ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದರು. ಮಹದೇವಪುರದಲ್ಲಿ ಕಸ ವಿಲೇವಾರಿ ನಿಲ್ಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು,

ಅಲ್ಲಿ ಮೂರು ದಿನ ಕಸವನ್ನು ತೆಗೆಯದೇ ಇದ್ದರೆ ಪರಿಸ್ಥಿತಿ ಏನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಸ ವಿಲೇವಾರಿಗೆ ನಾಲ್ಕು ಕಡೆ ಜಾಗಗಳನ್ನು ಪರಿಶೀಲಿಸಿದ್ದೆವು. ಭೂಮಿ ಸಂಬಂಧಿತ ಸಮಸ್ಯೆಗಳ ಹಿನ್ನೆಲೆಯಲ್ಲಿ ಎರಡು ಕಡೆ ಅಂತಿಮಗೊಳಿಸಿದ್ದೇವೆ. ಟೆಂಡರ್ ಕೂಡ ಕರೆಯಲಾಗಿದೆ. ಸರ್ಕಾರ ತನ್ನ ಕೆಲಸವನ್ನು ಸಮರ್ಪಕವಾಗಿ ಮಾಡುತ್ತಿದೆ” ಎಂದು ತಿಳಿಸಿದರು.

ರೈತರನ್ನು ಮದುವೆಯಾಗುವವರಿಗೆ ಭತ್ಯೆ ಘೋಷಣೆ ಮಾಡಲಿ — ಶಾಸಕ ರಂಗನಾಥ್ ಆಗ್ರಹ

0

ತುಮಕೂರು: ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ರೈತ ಕುಟುಂಬಗಳ ಯುವಕರಿಗೆ ಮದುವೆ ಸಾಧ್ಯವಾಗದ ಸ್ಥಿತಿ ಗಂಭೀರ ಸಾಮಾಜಿಕ ಸಮಸ್ಯೆಯಾಗಿ ಮೂಡಿದೆ. ಕುಣಿಗಲ್ ಶಾಸಕ ಡಾ. ಹೆಚ್.ಡಿ. ರಂಗನಾಥ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಈ ಸಂಕಷ್ಟವನ್ನು ಉಲ್ಲೇಖಿಸಿದ್ದಾರೆ.

ತಾಲ್ಲೂಕಿನ ಬಹುಪಾಲು ಯುವಕರು ಕೃಷಿ ಅವಲಂಬಿತ ಜೀವನ ನಡೆಸುತ್ತಿದ್ದರೂ, ಹೆಣ್ಣುಮಕ್ಕಳು ನಗರ ಪ್ರದೇಶದ ಸರ್ಕಾರಿ ನೌಕರರು ಅಥವಾ ಸ್ಥಿರ ಉದ್ಯೋಗ ಹೊಂದಿದವರನ್ನೇ ಆಯ್ಕೆ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ರೈತಾಪಿ ಕುಟುಂಬಗಳ ಯುವಕರ ವಿವಾಹ 30 ವರ್ಷ ದಾಟಿದರೂ ನಡೆಯದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಶಾಸಕರು, ಕೃಷಿಕರನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ ವಿಶೇಷ ಭತ್ಯೆ ಮತ್ತು ವಿಶೇಷ ಸ್ಥಾನಮಾನ ನೀಡುವ ಯೋಜನೆಯನ್ನು ಮುಂಬರುವ ಅಧಿವೇಶನದಲ್ಲಿ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.

ಹಿಂದೆ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಕೂಡ ಇದೇ ವಿಚಾರವನ್ನು ಎತ್ತಿ ಹಿಡಿದು, ರೈತ ಹಾಗೂ ಕೃಷಿ ಕಾರ್ಮಿಕರ ಮಕ್ಕಳನ್ನು ಮದುವೆಯಾಗುವವರಿಗೆ 10 ಲಕ್ಷ ಠೇವಣಿ ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದರು.

ಗ್ರಾಮೀಣ ಸಮಾಜದಲ್ಲಿ ಮೂಡುತ್ತಿರುವ ಈ ಹೊಸ ಮದುವೆ ಸಂಕಷ್ಟದ ಬಗ್ಗೆ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಈಗ ಗಮನಾರ್ಹ ವಿಷಯವಾಗಿದೆ.

ವಿಜಯಪುರದಲ್ಲಿ ಪತ್ನಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ಕೊಲೆ ಬಳಿಕ ನಾಪತ್ತೆಯಾಗಿರುವ ನಾಟಕವಾಡಿ ದೂರು ನೀಡಿದ್ದ ಹಂತಕ!

0

ವಿಜಯಪುರ: ಪತ್ನಿಯನ್ನು ಕೊಂದು ಮನೆಯ ಆವರಣದಲ್ಲೇ ಹೂತು ಹಾಕಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಕೊಲೆ ಮಾಡಿದ ಬಳಿಕ ಪತ್ನಿ ನಾಪತ್ತೆಯಾಗಿರುವಂತೆ ನಾಟಕವಾಡಿ ಪೊಲೀಸರಿಗೆ ದೂರು ನೀಡಿದ್ದ ಪತಿ ಅರೆಸ್ಟ್‌ ಆಗಿದ್ದಾನೆ. ಹಂತಕ ಪತಿಯನ್ನು ಪ್ರಭು ರತ್ನಾಕರ್ (46) ಹಾಗೂ ಮೃತ ಪತ್ನಿಯನ್ನು ಸರೋಜಿನಿ ರತ್ನಾಕರ್ (45) ಎಂದು ಗುರುತಿಸಲಾಗಿದೆ.

ಪತ್ನಿ ಸರೋಜಿನಿ ಹೆಸರಲ್ಲಿ ಪ್ರಭು ಹೆಚ್ಚಿನ ಸಾಲ ಮಾಡಿದ್ದ ಎನ್ನಲಾಗಿದ್ದು, ಈ ವಿಷಯವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಜನವರಿ 23ರಂದು ರಾತ್ರಿ ಕೂಡ ಸಾಲದ ವಿಚಾರವಾಗಿ ಗಲಾಟೆ ನಡೆದಿದೆ. ಜನವರಿ 24ರಂದು ಪತ್ನಿಯ ತಲೆಗೆ ಹಾರಿಯಿಂದ ಹೊಡೆದು ಕೊಲೆ ಮಾಡಿದ ಪ್ರಭು, ಬಳಿಕ ಶವವನ್ನು ಮನೆಯ ಆವರಣದಲ್ಲಿ ಗಿಡ ನೆಡುವ ಜಾಗದಲ್ಲಿ ಹೂತು ಹಾಕಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಕೊಲೆ ಬಳಿಕ ಮಾರುಕಟ್ಟೆಗೆ ಹೋದ ನನ್ನ ಹೆಂಡತಿ ಮನೆಗೆ ಮರಳಿ ಬಂದಿಲ್ಲ ಎಂದು ಹೇಳಿ, ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದ. ಜೊತೆಗೆ ಪತ್ನಿಯ ಕುಟುಂಬಸ್ಥರೊಂದಿಗೆ ಸೇರಿ ಹುಡುಕಾಟ ನಡೆಸುವ ನಾಟಕವಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಾರು 24 ದಿನಗಳ ತನಿಖೆಯ ಬಳಿಕ ಆರೋಪಿಯ ನಾಟಕ ಬಯಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕಾನೂನು ಪ್ರಕಾರ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತದೆ. ಘಟನೆ ಸಂಬಂಧ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

 

ಚಿನ್ನದ ಅಂಗಡಿ ದರೋಡೆ ಪ್ರಕರಣ: ಆರೋಪಿಗಳ ಹೆಡೆಮುರಿ ಕಟ್ಟಿದ ವಿಜಯಪುರ ಪೊಲೀಸರು!

0

ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ನಡೆದಿದ್ದ ಚಿನ್ನದ ಅಂಗಡಿ ದರೋಡೆ ಪ್ರಕರಣವನ್ನು ವಿಜಯಪುರ ಜಿಲ್ಲಾ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಜನವರಿ 26ರಂದು ಮಧ್ಯಾಹ್ನ ಸುಮಾರು 3.30 ಗಂಟೆ ವೇಳೆಗೆ ಹಲಸಂಗಿ ಗ್ರಾಮದ ಭೂಮಿಕಾ ಜ್ಯುವೆಲರ್ಸ್ ಅಂಗಡಿಗೆ ಮುಸುಕುಧಾರಿಗಳಾದ ಇಬ್ಬರು ಖದೀಮರು ನುಗ್ಗಿ ಗನ್ ತೋರಿಸಿ ಹಾಡು ಹಗಲೇ ದರೋಡೆ ನಡೆಸಿದ್ದರು. ಅಂಗಡಿ ಮಾಲೀಕ ಮಹಾರುದ್ರ ಕಂಚಗಾರ ಅವರಿಗೆ ಸೇರಿದ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದರು.

ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರ ರಾಜ್ಯದ ಸಂಖ ಗ್ರಾಮದ ಹಣಮಂತ ವಾಘೋಲಿ (28) ಹಾಗೂ ಇಂಡಿ ತಾಲೂಕಿನ ಲಾಳಸಂಗಿ ಗ್ರಾಮದ ಶಿವರಾಜ್ ನಾವಿ (28) ಎಂದು ಗುರುತಿಸಲಾಗಿದೆ. ಬಂಧಿತರಿಂದ 3 ಕಂಟ್ರೀ ಪಿಸ್ತೂಲ್, 26 ಜೀವಂತ ಗುಂಡುಗಳು, 1 ಏರ್ ಗನ್ ಹಾಗೂ ಕೃತ್ಯಕ್ಕೆ ಬಳಸಿದ ಹೋಂಡಾ ಕಂಪನಿಯ ಯುನಿಕಾರ್ನ್ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದಲ್ಲದೆ, ಆರೋಪಿಗಳಿಂದ ಒಟ್ಟು 205 ಗ್ರಾಂ ಬಂಗಾರ ಹಾಗೂ 1 ಕೆಜಿ ಬೆಳ್ಳಿ ಸೇರಿದಂತೆ ಅಂದಾಜು ₹24 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿಯನ್ನು ಜಪ್ತಿ ಮಾಡಲಾಗಿದೆ. ಈ ದರೋಡೆ ಪ್ರಕರಣ ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ವಿಜಯಪುರ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ₹23.88 ಕೋಟಿ ಮೌಲ್ಯದ ಕೊಕೇನ್ ವಶಕ್ಕೆ..!

0

ಬೆಂ. ಗ್ರಾಮಾಂತರ: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬನ ಬ್ಯಾಗ್‌ಗಳಲ್ಲಿ ₹23.88 ಕೋಟಿ ಮೌಲ್ಯದ 4.776 ಕೆ.ಜಿ. ಕೊಕೇನ್ ಪತ್ತೆಯಾಗಿದೆ. ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ವಿಭಾಗ (ಎನ್ಸಿಬಿ) ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಫೆಬ್ರುವರಿ 17ರಂದು ಕತಾರ್‌ನ ದೋಹಾದಿಂದ ಬಂದ ಪ್ರಯಾಣಿಕನ ಬಳಿ ಇದ್ದ ಬ್ಯಾಗ್‌ಗಳನ್ನು ತಪಾಸಣೆ ನಡೆಸಿದ ವೇಳೆ ಈ ಭಾರೀ ಪ್ರಮಾಣದ ಮಾದಕ ವಸ್ತು ಪತ್ತೆಯಾಗಿದೆ. ಮಹಿಳೆಯರು ಬಳಸುವ ಬ್ಯಾಗ್‌ನಲ್ಲಿ ಕೊಕೇನ್ ಮರೆಮಾಚಿ ಸಾಗಿಸಲಾಗುತ್ತಿತ್ತು. ಬ್ಯಾಗ್‌ನ ಕೆಳಭಾಗದಲ್ಲಿ ರಾಸಾಯನಿಕ ಪದರಗಳೊಳಗೆ ಕೊಕೇನ್ ಅಡಗಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೆಕ್-ಇನ್ ಪ್ರಕ್ರಿಯೆ ವೇಳೆ ಅನುಮಾನಾಸ್ಪದ ವರ್ತನೆ ಗಮನಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಮಾದಕ ವಸ್ತು ಪತ್ತೆಯಾಗಿದೆ. ಬಂಧಿತ ಪ್ರಯಾಣಿಕ ಬ್ರೆಜಿಲ್ ಮೂಲದವನಾಗಿದ್ದು, ಆತನ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವ ಎನ್ಸಿಬಿ ಅಧಿಕಾರಿಗಳು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಯಶ್‌ ಅಭಿಮಾನಿಗಳಿಗೆ ಬಿಗ್‌ ಸರ್ಪ್ರೈಸ್:‌ ನಾಳೆಯೇ ‘ಟಾಕ್ಸಿಕ್’ ಟ್ರೇಲರ್ ರಿಲೀಸ್

ಯಶ್‌ ನಾಯಕನಾಗಿರುವ ‘ಟಾಕ್ಸಿಕ್’ ಚಿತ್ರ ಪ್ರಚಾರದಲ್ಲಿ ಹೊಸ ಹಂತ ತಲುಪಿದೆ. ಫೆಬ್ರವರಿ 20 ರಂದು ಬೆಳಿಗ್ಗೆ 9:35ಕ್ಕೆ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.

ಈ ಮೊದಲು ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಪರಿಚಯಿಸಿರುವ ತಂಡ, ಈಗ ಟೀಸರ್ ಮೂಲಕ ಅಭಿಮಾನಿಗಳಿಗೆ ಹೆಚ್ಚು ಸರ್ಪ್ರೈಸ್ ನೀಡಲು ಯೋಜನೆ ಮಾಡಿದ್ದಾರೆ. ಮೊದಲು ಬಿಡುಗಡೆಯಾದ ರಾಯ್ ಪಾತ್ರ ಪರಿಚಯ ಟೀಸರ್‌ನಲ್ಲಿ ಬೋಲ್ಡ್ ದೃಶ್ಯಗಳು ಸಂವೇದನೆ ಮೂಡಿಸಿತ್ತು. ಹೊಸ ಟೀಸರ್ ಕೂಡ ಆ ರೀತಿಯ ದೃಶ್ಯಗಳೆ ಇರಬಹುದೇ ಎಂಬುದು ಈಗ ಚರ್ಚೆಯ ವಿಷಯವಾಗಿದೆ.

ಗೀತು ಮೋಹನ್ದಾಸ್ ನಿರ್ಮಿಸಿರುವ ‘ಟಾಕ್ಸಿಕ್’ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಶಿ ಸೇರಿದಂತೆ ಅನೇಕರಿದ್ದಾರೆ. ಚಿತ್ರವು ರೆಟ್ರೋ ಶೈಲಿಯಲ್ಲಿ ಮೂಡಲಿದೆ. ಟೀಸರ್ ಬಿಡುಗಡೆ ನಂತರ ಅಭಿಮಾನಿಗಳು ಚಿತ್ರದ ಕಥಾನಾಯಕನ ಪಾತ್ರ ಮತ್ತು ಬೋಲ್ಡ್ ದೃಶ್ಯಗಳ ಬಗ್ಗೆ ಹೆಚ್ಚಿನ ಕುತೂಹಲಕ್ಕೆ ಒಳಗಾಗಿದ್ದಾರೆ.

ಅಂತಿಮವಾಗಿ, ಸಿನಿಮಾ ಮಾರ್ಚ್ 19 ರಂದು ತೆರೆಗೆ ಬರುವುದಾಗಿ ಪೋಸ್ಟರ್‌ನಲ್ಲಿ ದೃಢಪಡಿಸಲಾಗಿದೆ. ಟೀಸರ್ ಬಿಡುಗಡೆ ಅಭಿಮಾನಿಗಳ ಹಠಗಾರಿಕೆ ಹೆಚ್ಚಿಸಲು ಮತ್ತು ‘ಟಾಕ್ಸಿಕ್’ ಚಿತ್ರದ ಹೈಪ್ನ್ನು ಮತ್ತೆ ಉತ್ತಮ ಮಟ್ಟಕ್ಕೆ ತಲುಪಿಸಲು ನಿರೀಕ್ಷಿಸಲಾಗಿದೆ.

PM Modi: ಭಾರತ್ AI ಇಂಪ್ಯಾಕ್ಟ್ ಶೃಂಗಸಭೆ 2026ಕ್ಕೆ ಪ್ರಧಾನಿ ಮೋದಿ ಚಾಲನೆ!

0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿಯ ಭಾರತ್ ಮಂಟಪಂನಲ್ಲಿ ಭಾರತ್ ಎಐ ಇಂಪ್ಯಾಕ್ಟ್ ಶೃಂಗಸಭೆ 2026 ಅನ್ನು ಉದ್ಘಾಟಿಸಿದರು. ಈ ಮೂಲಕ ಕೃತಕ ಬುದ್ಧಿಮತ್ತೆ (AI) ಕೇಂದ್ರಿತ ಜಾಗತಿಕ ಸಮಾವೇಶಕ್ಕೆ ಔಪಚಾರಿಕ ಚಾಲನೆ ದೊರಕಿತು.

ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿದರು. ಇದೇ ವೇದಿಕೆಯಲ್ಲಿ ಎಮ್ಯಾನುಯೆಲ್ ಮ್ಯಾಕ್ರೋನ್ ಹಾಗೂ ಆಂಟೋನಿಯೊ ಗುಟೆರೆಸ್ ಸೇರಿದಂತೆ ಜಾಗತಿಕ ತಂತ್ರಜ್ಞಾನ ಕ್ಷೇತ್ರದ ಹಲವು ಪ್ರಮುಖರು ಮಾತನಾಡಲಿದ್ದಾರೆ.

ಸಮಾರಂಭಕ್ಕೂ ಮುನ್ನ ಪ್ರಧಾನಿ ಮೋದಿ ಬೆಳಿಗ್ಗೆ ವಿಶ್ವ ನಾಯಕರನ್ನು ಸ್ವಾಗತಿಸಿದರು. ಔಪಚಾರಿಕ ಉದ್ಘಾಟನೆಯ ಬಳಿಕ ಅವರು ಬೆಳಿಗ್ಗೆ 11 ಗಂಟೆಗೆ ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅಂತರರಾಷ್ಟ್ರೀಯ ನಾಯಕರು ಸಹ ಭಾಗಿಯಾಗಿದ್ದರು. ಎಕ್ಸ್‌ಪೋದಲ್ಲಿ ಜಗತ್ತಿನಾದ್ಯಂತದ ಸುಧಾರಿತ ಎಐ ಆಧಾರಿತ ನವೀನತೆಗಳು ಮತ್ತು ಉದಯೋನ್ಮುಖ ತಾಂತ್ರಿಕ ಪರಿಹಾರಗಳನ್ನು ಪ್ರದರ್ಶಿಸಲಾಗಿದೆ.

ಮಧ್ಯಾಹ್ನ ಪ್ರಧಾನ ಮಂತ್ರಿಗಳು ನಾಯಕರ ಸಮಗ್ರ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. ದೇಶಗಳ ಮುಖ್ಯಸ್ಥರು, ಮಂತ್ರಿಗಳು ಹಾಗೂ ಬಹುಪಕ್ಷೀಯ ಸಂಸ್ಥೆಗಳ ಹಿರಿಯ ಪ್ರತಿನಿಧಿಗಳು ಭಾಗವಹಿಸುವ ಈ ಸಭೆಯಲ್ಲಿ, ಆಡಳಿತ ವ್ಯವಸ್ಥೆಗಳು, ಮೂಲಸೌಕರ್ಯ ವಿಸ್ತರಣೆ ಮತ್ತು ಜಾಗತಿಕ ಸಹಕಾರದ ಚೌಕಟ್ಟುಗಳ ಕುರಿತು ಚರ್ಚೆ ನಡೆಯಲಿದೆ. ಕೃತಕ ಬುದ್ಧಿಮತ್ತೆಯಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಆದ್ಯತೆಗಳ ಮೇಲೆ ಗಮನ ಕೇಂದ್ರೀಕರಿಸಲಾಗುವ ನಿರೀಕ್ಷೆಯಿದೆ.

ಕದ್ದ ಚಿನ್ನವನ್ನು ಗೋಲ್ಡ್ ಲೋನ್ ಕಂಪನಿಗೆ ಮಾರಲು ಯತ್ನ: ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಮಹಿಳೆ!

0

ರಾಣೇಬೆನ್ನೂರು: ಹುಬ್ಬಳ್ಳಿಯಲ್ಲಿ ಕಳ್ಳತನ ಮಾಡಿದ್ದ ಬಂಗಾರವನ್ನು ಮಾರಾಟ ಮಾಡಲು ನಗರದ ಗೋಲ್ಡ್ ಲೋನ್ ಕಂಪನಿಗೆ ಬಂದಿದ್ದ ಮಹಿಳೆಯನ್ನು ರಾಣೇಬೆನ್ನೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತೆಯನ್ನು ಹುಬ್ಬಳ್ಳಿ ಮೂಲದ ಶ್ರೀದೇವಿ ಸಂಜೀವ ಕಟ್ಟೇಕಾರ ಎಂದು ಗುರುತಿಸಲಾಗಿದೆ.

ಆರೋಪಿಯು ಹುಬ್ಬಳ್ಳಿಯಲ್ಲಿ ಕಳ್ಳತನ ಮಾಡಿದ್ದ ಸುಮಾರು 236 ಗ್ರಾಂ ಚಿನ್ನಾಭರಣಗಳನ್ನು (ಅಂದಾಜು ₹16 ಲಕ್ಷ ಮೌಲ್ಯ) ಮಾರಾಟ ಮಾಡಲು ರಾಣೇಬೆನ್ನೂರಿನ ಖಾಸಗಿ ಗೋಲ್ಡ್ ಕಂಪನಿಗೆ ಬಂದಿದ್ದಳು ಎಂದು ತಿಳಿದುಬಂದಿದೆ.

ಚಿನ್ನ ಮಾರಾಟ ಮಾಡಲು ಬಂದ ಮಹಿಳೆಯ ನಡವಳಿಕೆ ಹಾಗೂ ಆಕೆಯ ಬಳಿಯಿದ್ದ ಚಿನ್ನದ ದಾಖಲೆಗಳ ಬಗ್ಗೆ ಗೋಲ್ಡ್ ಕಂಪನಿಯ ಸಿಬ್ಬಂದಿಗೆ ಅನುಮಾನ ಮೂಡಿದೆ. ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಬಂದ ರಾಣೇಬೆನ್ನೂರು ನಗರ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಾಥಮಿಕ ತನಿಖೆಯಲ್ಲಿ ಮಹಿಳೆಯ ಬಳಿ ಒಟ್ಟು 236 ಗ್ರಾಂ ಚಿನ್ನ ಇರುವುದು ಪತ್ತೆಯಾಗಿದೆ. ಅದರಲ್ಲಿ 40 ಗ್ರಾಂ ಚಿನ್ನವನ್ನು (ಸುಮಾರು ₹6 ಲಕ್ಷ ಮೌಲ್ಯ) ಮಾರಾಟ ಮಾಡಲು ಮುಂದಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಚಿನ್ನವನ್ನು ವಶಪಡಿಸಿಕೊಂಡಿದ್ದು, ಆರೋಪಿಯ ಹಿಂದೆ ಬೇರೆ ಜಿಲ್ಲೆಯ ಕಳ್ಳರ ಗ್ಯಾಂಗ್ ಸಂಪರ್ಕವಿದೆಯೇ ಎಂಬ ಬಗ್ಗೆ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಕಾರವಾರ: ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಸರಣಿ ಅಪಘಾತ – ವಿದೇಶಿ ಪ್ರಜೆಗಳು ಸೇರಿ 24 ಮಂದಿ ಗಾಯ

0

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 52ರ ಸುಂಕಸಾಳ ಬಳಿ ಎರಡು ಖಾಸಗಿ ಬಸ್ ಹಾಗೂ ಲಾರಿ ನಡುವೆ ಸರಣಿ ಅಪಘಾತ ಸಂಭವಿಸಿ, ವಿದೇಶಿ ಪ್ರಜೆಗಳು ಸೇರಿದಂತೆ ಒಟ್ಟು 24 ಮಂದಿ ಗಾಯಗೊಂಡಿದ್ದಾರೆ.

ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಸಾಗುತ್ತಿದ್ದ ಲಾರಿ, ಬೆಂಗಳೂರಿನಿಂದ ಗೋವಾ ಕಡೆ ತೆರಳುತ್ತಿದ್ದ ಎರಡು ಖಾಸಗಿ ಬಸ್‌ಗಳಿಗೆ ಡಿಕ್ಕಿಯಾಗಿದೆ. ಲಾರಿ ಮತ್ತು ಸಿಬರ್ಡ್ ಬಸ್ ಮುಖಾಮುಖಿಯಾಗಿ ಡಿಕ್ಕಿಯಾದ ನಂತರ, ಹಿಂಬದಿಯಿಂದ ಬರುತ್ತಿದ್ದ ಗಣೇಶ್ ಟ್ರಾವೆಲ್ಸ್ ಬಸ್ ಸಿಬರ್ಡ್ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಲಾರಿ ಪಲ್ಟಿಯಾಗಿದ್ದು, ಲಾರಿ ಚಾಲಕನ ಕಾಲಿಗೆ ಗಂಭೀರ ಗಾಯಗಳಾಗಿವೆ.

ಹಂಪಿಯಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದ 12 ವಿದೇಶಿ ಪ್ರಯಾಣಿಕರು ಸೇರಿದಂತೆ ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಅಂಕೋಲ ಮತ್ತು ಕಾರವಾರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದ ಪರಿಣಾಮ ಕೆಲಕಾಲ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ನಂತರ ಪೊಲೀಸರು ಮತ್ತು ಸ್ಥಳೀಯರು ಸೇರಿ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಪುನಃ ಆರಂಭಿಸಿದ್ದಾರೆ. ಘಟನೆ ಸಂಬಂಧ ಅಂಕೋಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Gold Rate Rise: ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ: ಇಂದು ಬಂಗಾರದ ದರ ಎಷ್ಟು?

0

ಬೆಂಗಳೂರು: ಕಳೆದ ಮೂರು–ನಾಲ್ಕು ದಿನಗಳಿಂದ ಇಳಿಕೆಯಾಗುತ್ತಿದ್ದ ಚಿನ್ನದ ಬೆಲೆಯಲ್ಲಿ ಇಂದು ದಿಢೀರ ಏರಿಕೆ ಕಂಡುಬಂದಿದೆ. ಫೆಬ್ರವರಿ 19, 2026 ಗುರುವಾರ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ದರದಲ್ಲಿ ಭಾರೀ ಹೆಚ್ಚಳ ದಾಖಲಾಗಿದೆ.

24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆಯಲ್ಲಿ ₹229 ಏರಿಕೆಯಾಗಿದ್ದು, 10 ಗ್ರಾಂಗೆ ₹2,290 ಹೆಚ್ಚಳವಾಗಿದೆ. ಇದರಿಂದ 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹15,649 ಆಗಿದ್ದು, 10 ಗ್ರಾಂ ಬೆಲೆ ₹1,56,490ಕ್ಕೆ ಏರಿಕೆಯಾಗಿದೆ. ಇದೇ ವೇಳೆ 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆಯಲ್ಲಿ ₹210 ಏರಿಕೆ ಕಂಡು ₹14,345 ಆಗಿದೆ. 10 ಗ್ರಾಂ ಬೆಲೆ ₹1,43,450ಕ್ಕೆ ತಲುಪಿದೆ.

ಬೆಳ್ಳಿ ಬೆಲೆಯಲ್ಲೂ ಜಿಗಿತ
ಬೆಳ್ಳಿ ದರದಲ್ಲಿಯೂ ಭಾರೀ ಏರಿಕೆ ಕಂಡುಬಂದಿದೆ. ಪ್ರತಿ ಗ್ರಾಂಗೆ ₹15 ಹೆಚ್ಚಳವಾಗಿದ್ದು, ಕೆಜಿಗೆ ₹15,000 ಏರಿಕೆ ಕಂಡಿದೆ. ಇದರೊಂದಿಗೆ ಬೆಳ್ಳಿ ಬೆಲೆ ಪ್ರತಿ ಕೆಜಿಗೆ ₹2,70,000 ದಾಖಲಾಗಿದೆ.

ಫೆಬ್ರವರಿ 1ರಂದು 24 ಕ್ಯಾರೆಟ್ ಚಿನ್ನದ ಬೆಲೆ ₹16,058 ಆಗಿತ್ತು. ಫೆಬ್ರವರಿ 2ರಂದು ಕನಿಷ್ಠ ₹15,317ಕ್ಕೆ ಇಳಿದಿತ್ತು. ಫೆಬ್ರವರಿ 9ರಂದು ₹15,884 ಆಗಿದ್ದು, ಫೆಬ್ರವರಿ 18ರಂದು ₹15,420ಕ್ಕೆ ಇಳಿಕೆಯಾಗಿತ್ತು. ಆದರೆ ಫೆಬ್ರವರಿ 19ರಂದು ಮತ್ತೆ ₹15,649ಕ್ಕೆ ಏರಿಕೆಯಾಗಿದೆ. ಈ ತಿಂಗಳಲ್ಲಿ ಗರಿಷ್ಠ ಬೆಲೆ ₹16,058 ಮತ್ತು ಕನಿಷ್ಠ ಬೆಲೆ ₹15,317 ದಾಖಲಾಗಿದೆ.

error: Content is protected !!