Home Blog Page 33

ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗೆ ಸಿಎಂಗೆ ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಿ, ಬಹುಕಾಲದಿಂದ ಬಾಕಿ ಇರುವ ಬೇಡಿಕೆಗಳನ್ನು ಶೀಘ್ರವೇ ಈಡೇರಿಸುವಂತೆ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ. ಹನುಮಂತಗೌಡ ಆರ್. ಕಲ್ಮನಿ ನೇತೃತ್ವದ ನಿಯೋಗವು ಬೆಳಗಾವಿಯ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿತು.

ನಿಯೋಗವು ಅತಿಥಿ ಉಪನ್ಯಾಸಕರ ಪ್ರಸ್ತುತ ಸಮಸ್ಯೆಗಳು, ಸೇವಾ ಭದ್ರತೆ ಹಾಗೂ ಭವಿಷ್ಯದ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿತು. ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಸಮಸ್ಯೆಗಳ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿ, ಶೀಘ್ರದಲ್ಲೇ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಬೆಳಗಾವಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಎ.ಬಿ. ಇಟಗಿ, ಪ್ರಧಾನ ಕಾರ್ಯದರ್ಶಿ ನೀಲಕಂಠ ಬೊಮ್ಮಣ್ಣವರ, ಎಸ್.ಬಿ. ಕುರಿ, ಬಿ.ಎಸ್. ಹೊಸಮನಿ, ಇರ್ಫಾನ್ ಕಿಲ್ಲೇದಾರ, ಮುತ್ತು ಜಿ. ಗಾಣಿಗೇರ ಸೇರಿದಂತೆ ಸಂಘದ ಪ್ರಮುಖರು ಉಪಸ್ಥಿತರಿದ್ದರು.

ಮೀಟರ್ ಬಡ್ಡಿ ಕಿರುಕುಳ ಆರೋಪ? ವಿಷ ಸೇವಿಸಿ ಆಟೋ ಚಾಲಕ ಆತ್ಮಹತ್ಯೆ!

ಬೆಂಗಳೂರು: ಮೀಟರ್ ಬಡ್ಡಿ ಕಿರುಕುಳ ಹಾಗೂ ಸಾಲದ ಬಾಧೆಯಿಂದ ಬೇಸತ್ತು ಆಟೋ ಚಾಲಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಥಣಿಸಂದ್ರದಲ್ಲಿ ನಡೆದಿದೆ.

ಮೃತರನ್ನು ಜೀ ಯೌಸುಫ್ ಜಮಾಲ್‌ದ್ದಿನ್ ಎಂದು ಗುರುತಿಸಲಾಗಿದೆ. ಇಂದು ಸಂಜೆ ಸುಮಾರು 4 ಗಂಟೆ ವೇಳೆಗೆ ಈ ಘಟನೆ ನಡೆದಿದೆ.

ಆತ್ಮಹತ್ಯೆಗೂ ಮುನ್ನ ಯೌಸುಫ್ ಜಮಾಲ್‌ದ್ದಿನ್ ವಿಷ ಸೇವಿಸುವ ವಿಡಿಯೋ ಮಾಡಿ ಸ್ನೇಹಿತರಿಗೆ ಕಳುಹಿಸಿದ್ದಾನೆ. ವಿಡಿಯೋದಲ್ಲಿ ತಾನು ಮಾಡಿಕೊಂಡಿದ್ದ ಸಾಲ ಹಾಗೂ ಬಡ್ಡಿ ಹಣ ಪಾವತಿಸುವಂತೆ ನೀಡುತ್ತಿದ್ದ ಕಿರುಕುಳದ ಬಗ್ಗೆ ಉಲ್ಲೇಖಿಸಿದ್ದಾನೆ ಎನ್ನಲಾಗಿದೆ.

ಸಾಲದ ಒತ್ತಡದಿಂದಲೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಶಿವಯೋಗಿ ಶ್ರೀಗಳ ದರ್ಶನ ಪಡೆದ ವಿವೇಕ್ ಯಾವಗಲ್

0

ವಿಜಯಸಾಕ್ಷಿ ಸುದ್ದಿ, ಗದಗ: ಲೋಕಕಲ್ಯಾಣ ಹಾಗೂ ವಿಶ್ವಶಾಂತಿಯ ಸಂಕಲ್ಪದೊಂದಿಗೆ 33 ದಿನಗಳ ಕಠಿಣ ಶಿವಯೋಗ ಸಿದ್ಧಿ ಸಮಾಧಿ ಅನುಷ್ಠಾನ ಯಶಸ್ವಿಯಾಗಿ ಪೂರ್ಣಗೊಳಿಸಿದ ಗದಗ ತಾಲೂಕಿನ ಅಂತೂರು–ಬೆಂತೂರು ಗ್ರಾಮದ ಪೂಜ್ಯ ಡಾ. ರಾಚೋಟೇಶ್ವರ ಸ್ವಾಮೀಜಿ ಅವರನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ನರಗುಂದ ಕ್ಷೇತ್ರದ ಯುವ ನಾಯಕ ವಿವೇಕ್ ಯಾವಗಲ್ ಭೇಟಿ ಮಾಡಿ ಆಶೀರ್ವಾದ ಪಡೆದರು.

ಈ ವೇಳೆ ಸ್ವಾಮೀಜಿಗಳ ಆರೋಗ್ಯ ವಿಚಾರಿಸಿದ ಅವರು, ಲೋಕಕಲ್ಯಾಣಕ್ಕಾಗಿ ಕೈಗೊಂಡ ಅಪರೂಪದ ಶಿವಯೋಗ ಅನುಷ್ಠಾನವನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಈಶಣ್ಣ ಹುಣಸಿಕಟ್ಟಿ, ಮೂಗನೂರು ಡಾಕ್ಟರ್‌, ಶರಣಪ್ಪ ಗವಾರಿ, ನಿಂಗಪ್ಪ ಗುಂಜಳ, ಪ್ರವೀಣಗೌಡ ಪಾಟೀಲ, ರಾಜಾಹುಲಿ ಪೂಜಾರ, ಮಂಜುನಾಥ ಜಡಿ, ರಫೀಕ್, ಮೇಘರಾಜ, ಸುರೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಯುವನಿಧಿ ಯೋಜನೆ ಸದುಪಯೋಗಪಡಿಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಉದ್ಯೋಗಾಧಿಕಾರಿಗಳ ಕರೆ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದಾದ ಯುವನಿಧಿ ಯೋಜನೆ ಕುರಿತು ಜಾಗೃತಿ ಹಾಗೂ ವೃತ್ತಿಮಾರ್ಗದರ್ಶನ ಕಾರ್ಯಕ್ರಮವನ್ನು ನಗರದ ಶ್ರೀ ತೋಂಟದಾರ್ಯ ಸಿದ್ದಲಿಂಗೇಶ್ವರ ಕಲ್ಯಾಣ ಕೇಂದ್ರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆಯ ಅರ್ಹತೆ, ನೋಂದಣಿ ವಿಧಾನ ಹಾಗೂ ಯೋಜನೆಯ ಸೌಲಭ್ಯಗಳ ಕುರಿತು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಧಿಕಾರಿಗಳು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಯೋಜನೆಯ ಸದುಪಯೋಗ ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಸಲಹೆ ನೀಡಲಾಯಿತು.

ಗದಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ಹಾಗೂ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯ ಜಗದೀಶ ಶಿವನಗುತ್ತಿ, ಜಿಲ್ಲಾ ಉದ್ಯೋಗಾಧಿಕಾರಿ ಬಸವಂತ್ ಪಿ.ಎನ್., ಸಹಾಯಕ ಉದ್ಯೋಗಾಧಿಕಾರಿ ಎಚ್ಚರಪ್ಪ ಬಡಿಗೇರ ಹಾಗೂ ಆಪ್ತ ಸಮಾಲೋಚಕ ಆನಂದ ಹೊಂಬಳ ಉಪಸ್ಥಿತರಿದ್ದರು.

ಯುವನಿಧಿ ಯೋಜನೆಯಡಿ ಪದವೀಧರರಿಗೆ ತಿಂಗಳಿಗೆ ₹3,000 ಹಾಗೂ ಡಿಪ್ಲೊಮಾ ಪಡೆದವರಿಗೆ ₹1,500 ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. 2023ರ ನಂತರ ಪದವಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿ ಕನಿಷ್ಠ ಆರು ತಿಂಗಳು ನಿರುದ್ಯೋಗಿಯಾಗಿರುವವರು ಅರ್ಹರಾಗಿದ್ದು, ಗರಿಷ್ಠ ಎರಡು ವರ್ಷಗಳವರೆಗೆ ಭತ್ಯೆ ಪಡೆಯಬಹುದು. ಆಸಕ್ತರು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಮಳೆ ಕೊರತೆಯ ನಡುವೆ ಗ್ರಾಮೀಣರಿಗೆ ಉದ್ಯೋಗ ಭರವಸೆ: ವಿಬಿ-ಜಿ ರಾಮ್ (ಜಿ) ಯೋಜನೆ ಜಾರಿ

ವಿಜಯಸಾಕ್ಷಿ ಸುದ್ದಿ, ರೋಣ: ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಮಂದಗತಿಯಲ್ಲಿ ಸಾಗುತ್ತಿರುವ ನಡುವೆಯೇ ಗ್ರಾಮೀಣ ಕೂಲಿಕಾರರಿಗೆ ಆಸರೆಯಾಗುವ ವಿಬಿ-ಜಿ ರಾಮ್ (ಜಿ) ಯೋಜನೆ ಅನುಷ್ಠಾನಕ್ಕೆ ರೋಣ ಹಾಗೂ ಗಜೇಂದ್ರಗಡ ತಾಲೂಕುಗಳಲ್ಲಿ ಸಿದ್ಧತೆಗಳು ವೇಗ ಪಡೆದಿವೆ. ಗ್ರಾಮೀಣ ಕುಟುಂಬಗಳಿಗೆ ತಮ್ಮ ಗ್ರಾಮದಲ್ಲೇ ಉದ್ಯೋಗ ಒದಗಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಈ ಯೋಜನೆಯಡಿ ದಿನಕ್ಕೆ ₹382 ಕೂಲಿ ಹಾಗೂ ವರ್ಷಕ್ಕೆ 125 ದಿನಗಳ ಕೌಶಲರಹಿತ ಉದ್ಯೋಗ ಖಾತರಿ ನೀಡಲಾಗುತ್ತಿದೆ.

ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿಯದ ಕಾರಣ ಹಲವು ಗ್ರಾಮಗಳಲ್ಲಿ ಕೃಷಿ ಕೆಲಸಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಕೂಲಿಕಾರರಿಗೆ ಸ್ಥಳೀಯ ಮಟ್ಟದಲ್ಲೇ ಉದ್ಯೋಗ ದೊರೆಯುವ ನಿರೀಕ್ಷೆ ಮೂಡಿದ್ದು, ಯೋಜನೆ ಕುಟುಂಬಗಳ ಆದಾಯಕ್ಕೆ ಆಸರೆಯಾಗಲಿದೆ.

ಯೋಜನೆಯ ಮೊದಲ ಹಂತದಲ್ಲಿ ಈಗಾಗಲೇ ಇ-ಕೆವೈಸಿ ಪೂರ್ಣಗೊಳಿಸಿರುವ ಹಳೆಯ ನರೇಗಾ ಜಾಬ್ ಕಾರ್ಡ್‌ಗಳನ್ನೇ ಮಾನ್ಯಗೊಳಿಸಿ ಉದ್ಯೋಗ ನೀಡಲಾಗುತ್ತದೆ. ನಂತರ ಹಂತ ಹಂತವಾಗಿ ಅರ್ಹ ಕುಟುಂಬಗಳಿಗೆ ಹೊಸ ಗ್ರಾಮೀಣ ರೋಜ್‌ಗಾರ್ ಗ್ಯಾರಂಟಿ ಕಾರ್ಡ್ ವಿತರಿಸಲಾಗುತ್ತದೆ. ಈವರೆಗೆ ಯಾವುದೇ ಯೋಜನೆಯಲ್ಲಿ ನೋಂದಣಿಯಾಗದ ಕುಟುಂಬಗಳಿಗೂ ಹೊಸದಾಗಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ರೋಣ ಹಾಗೂ ಗಜೇಂದ್ರಗಡ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆ ಜಾರಿಗೆ ಅಗತ್ಯ ಪೂರ್ವಸಿದ್ಧತೆ ಪೂರ್ಣಗೊಂಡಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಗ್ರಾಮಸಭೆಗಳ ಮೂಲಕ ಕಾಮಗಾರಿಗಳ ಕ್ರಿಯಾ ಯೋಜನೆ ರೂಪಿಸುವ ಕಾರ್ಯ ನಡೆಯುತ್ತಿದೆ. ಜಲ ಸಂರಕ್ಷಣೆ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ, ಜೀವನೋಪಾಯ ವೃದ್ಧಿ ಹಾಗೂ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ.

ಯೋಜನೆಯಲ್ಲಿ ಪಾರದರ್ಶಕತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಕೆಲಸದ ಸ್ಥಳಗಳಲ್ಲಿ ಫೇಸ್ ಆಥೆಂಟಿಕೇಶನ್ ಮೂಲಕ ಹಾಜರಾತಿ, ಕಾರ್ಮಿಕರಿಗೆ ಸುರಕ್ಷಿತ ಕುಡಿಯುವ ನೀರು, ನೆರಳು, ವಿಶ್ರಾಂತಿ ಸೌಲಭ್ಯ ಹಾಗೂ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಒದಗಿಸುವ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ.

ಕೃಷಿ ಹಂಗಾಮಿನಲ್ಲಿ ರೈತರಿಗೆ ಕಾರ್ಮಿಕರ ಕೊರತೆ ಉಂಟಾಗದಂತೆ ಬಿತ್ತನೆ ಹಾಗೂ ಕೊಯ್ಲಿನ ಅವಧಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದೆ, ಉಳಿದ ಅವಧಿಯಲ್ಲಿ ಹೆಚ್ಚಿನ ಕಾಮಗಾರಿಗಳನ್ನು ಆರಂಭಿಸಿ ಗ್ರಾಮೀಣ ಕುಟುಂಬಗಳಿಗೆ ನಿರಂತರ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ.

“ವಿಬಿ-ಜಿ ರಾಮ್ (ಜಿ) ಯೋಜನೆ ಅನುಷ್ಠಾನಕ್ಕೆ ತಾಲೂಕು ಮಟ್ಟದಲ್ಲಿ ಅಗತ್ಯ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿಗಳಿಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡಲಾಗಿದ್ದು, ಅರ್ಹ ಗ್ರಾಮೀಣ ಕುಟುಂಬಗಳಿಗೆ ಸ್ಥಳೀಯ ಮಟ್ಟದಲ್ಲೇ ಉದ್ಯೋಗ ಕಲ್ಪಿಸಲು ಕ್ರಮವಹಿಸಲಾಗಿದೆ. ಎಲ್ಲ ಅರ್ಹ ಕಾರ್ಮಿಕರು ಯೋಜನೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು.”

– ಚಂದ್ರಶೇಖರ ಬಿ. ಕಂದಕೂರ

ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯಿತಿ ರೋಣ ಹಾಗೂ ಗಜೇಂದ್ರಗಡ

ನಾಲ್ಕು ವಿಧಗಳಲ್ಲಿ ಕಸ ವಿಂಗಡಿಸಿ ಪರಿಸರ ಕಾಪಾಡಿ: ವಿದ್ಯಾರ್ಥಿಗಳಿಗೆ ಜಾಗೃತಿ ಕರೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮನೆಯ ಕಸವನ್ನು ಒಟ್ಟಾಗಿ ವಿಲೇವಾರಿ ಮಾಡುವ ಬದಲು ಹಸಿ, ಒಣ, ವಿಷತ್ಯಾಜ್ಯ ಹಾಗೂ ವಿಶೇಷ ತ್ಯಾಜ್ಯ ಎಂದು ಪ್ರತ್ಯೇಕವಾಗಿ ವಿಂಗಡಿಸಿ ನೀಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಈ ಕುರಿತು ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಪಾಲಕರಿಗೆ ಜಾಗೃತಿ ಮೂಡಿಸಬೇಕು ಎಂದು ಕಮ್ಯೂನಿಟಿ ಮೊಬಿಲೈಜರ್ ಪೂರ್ಣಿಮಾ ಹೊಸಮನಿ ಹೇಳಿದರು.

ಪಟ್ಟಣದ ಡಾ. ಕೆ.ಬಿ. ಧನ್ನೂರ ಪಿಎಸ್‌ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಕಸ ವಿಂಗಡಣೆ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

ಫೆಬ್ರವರಿ 1, 2026ರಿಂದ ಘನತ್ಯಾಜ್ಯ ನಿರ್ವಹಣೆಯ ನಿಯಮಗಳಲ್ಲಿ ಮಹತ್ವದ ಬದಲಾವಣೆ ಜಾರಿಯಾಗಿದ್ದು, ಪ್ರತಿಯೊಬ್ಬರೂ ಅದನ್ನು ಪಾಲಿಸಬೇಕಾಗಿದೆ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಹೊಸ ನಿಯಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.

ರೇಣುಕಾ ಕಳಕಣ್ಣವರ ಮಾತನಾಡಿ, ಈ ಹಿಂದೆ ಹಸಿ ಮತ್ತು ಒಣ ಕಸ ಎಂದು ಎರಡು ವಿಭಾಗಗಳಲ್ಲಿ ಮಾತ್ರ ವಿಂಗಡಿಸಲಾಗುತ್ತಿತ್ತು. ಆದರೆ ಈಗ ಹಸಿ ಕಸ, ಒಣ ಕಸ, ವಿಷತ್ಯಾಜ್ಯ ಕಸ ಹಾಗೂ ವಿಶೇಷ ತ್ಯಾಜ್ಯ ಕಸ ಎಂದು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿ ಮನೆಯ ಬಾಗಿಲಿಗೆ ಬರುವ ಕಸದ ವಾಹನಕ್ಕೆ ನೀಡಬೇಕು. ಇದರಿಂದ ತ್ಯಾಜ್ಯ ನಿರ್ವಹಣೆ ಸುಲಭವಾಗುವುದರ ಜೊತೆಗೆ ಪರಿಸರವೂ ಸ್ವಚ್ಛವಾಗಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ಗ್ರಾಮಪುರೋಹಿತ, ವಿದ್ಯಾರ್ಥಿಗಳು ಈ ಮಾಹಿತಿಯನ್ನು ತಮ್ಮ ಮನೆ ಹಾಗೂ ನೆರೆಹೊರೆಯವರಿಗೆ ತಲುಪಿಸಿ ಸ್ವಚ್ಛತಾ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕರು ಸುರೇಶ ಮಲ್ಲನಗೌಡ್ರ, ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಉಡುಪಿಯಲ್ಲಿ ಸುಂಟರಗಾಳಿ ಅಬ್ಬರ; 150ಕ್ಕೂ ಹೆಚ್ಚು ಅಡಿಕೆ ಮರಗಳು ಧರೆಗೆ, ರೈತರಿಗೆ ಭಾರೀ ನಷ್ಟ!

ಉಡುಪಿ: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆ ಹಾಗೂ ಗಾಳಿಯಿಂದಾಗಿ ಹಲವು ಕಡೆಗಳಲ್ಲಿ ಅನಾಹುತಗಳು ಸಂಭವಿಸುತ್ತಿವೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಬೀಸಿದ ಸುಂಟರಗಾಳಿಗೆ 150ಕ್ಕೂ ಹೆಚ್ಚು ಅಡಿಕೆ ಮರಗಳು ನೆಲಸಮವಾಗಿವೆ.

ಬೈಂದೂರು ತಾಲೂಕಿನ ಎಡಮಳ್ಳಿ ಮಕ್ಕಿನ ಮನೆ, ಹಕ್ಕಲುಮನೆ ಹಾಗೂ ಮಕ್ಕಿಮನೆ ಪ್ರದೇಶಗಳಲ್ಲಿ ಈ ಘಟನೆ ನಡೆದಿದೆ. ಬೆಳಗಿನ ಜಾವ ಬೀಸಿದ ಸುಂಟರಗಾಳಿಯ ರಭಸಕ್ಕೆ 15 ರಿಂದ 20 ವರ್ಷಗಳ ಕಾಲ ಬೆಳೆದು ಫಲ ನೀಡುತ್ತಿದ್ದ ಅಡಿಕೆ ಮರಗಳು ಬೇರುಸಹಿತ ಕಿತ್ತುಬಿದ್ದಿವೆ.

ಗಾಳಿಯ ಹೊಡೆತಕ್ಕೆ ಅಡಿಕೆ ಮರಗಳು ಮುರಿದು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು, ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಹಲವು ವರ್ಷಗಳ ಶ್ರಮದಿಂದ ಬೆಳೆಸಿದ ಅಡಿಕೆ ತೋಟಗಳು ಹಾನಿಗೊಳಗಾಗಿರುವುದರಿಂದ ಬೆಳೆಗಾರರು ಆತಂಕಕ್ಕೊಳಗಾಗಿದ್ದಾರೆ.

ಒಂದು ಅಡಿಕೆ ಮರ ಬೆಳೆದು ಫಲ ನೀಡಲು ಸುಮಾರು 5 ರಿಂದ 10 ವರ್ಷಗಳ ಸಮಯ ಬೇಕಾಗುತ್ತದೆ. ಇದೀಗ ಒಂದೇ ದಿನದಲ್ಲಿ ತೋಟ ನಾಶವಾಗಿರುವುದರಿಂದ ರೈತರು ಸರ್ಕಾರದಿಂದ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

ಇದಲ್ಲದೆ, ಸುಂಟರಗಾಳಿಯ ರಭಸಕ್ಕೆ ಹಲವು ವಿದ್ಯುತ್ ಕಂಬಗಳು ಕೂಡ ಧರೆಗುರುಳಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಸೇವೆಯೇ ಲಯನ್ಸ್ ಕ್ಲಬ್‌ನ ನಿಜವಾದ ಗುರುತು: ಗವಿಸಿದ್ದಪ್ಪ ಮುದ್ಗಲ್

0

ವಿಜಯಸಾಕ್ಷಿ ಸುದ್ದಿ, ಗದಗ: ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳು ಸ್ನೇಹ, ಸೇವೆ ಮತ್ತು ಸಮರ್ಪಣೆಯ ಮನೋಭಾವದಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಲಯನ್ಸ್ ಜಿಲ್ಲೆ–317ರ ದ್ವಿತೀಯ ಉಪ ಜಿಲ್ಲಾ ಗವರ್ನರ್ ಗವಿಸಿದ್ದಪ್ಪ ಮುದ್ಗಲ್ ಹೇಳಿದರು.

ನಗರದ ಲಯನ್ಸ್ ಶಾಲೆಯ ಸಭಾಂಗಣದಲ್ಲಿ ಗುರುವಾರ ನಡೆದ ಗದಗ–ಬೆಟಗೇರಿ ಲಯನ್ಸ್ ಕ್ಲಬ್ ಹಾಗೂ ಲೇಡೀಸ್ ವಿಂಗ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪದಗ್ರಹಣ ನೆರವೇರಿಸಿ ಮಾತನಾಡಿದ ಅವರು, ಜನರಿಗೆ ನೇರವಾಗಿ ಉಪಯುಕ್ತವಾಗುವ ಸೇವಾ ಯೋಜನೆಗಳನ್ನು ರೂಪಿಸಿ ಎಲ್ಲ ಸದಸ್ಯರ ಸಹಕಾರದಿಂದ ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಲಯನ್ಸ್ ಕ್ಲಬ್‌ನ ಸೇವಾ ಪರಂಪರೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಕರೆ ನೀಡಿದರು.

ಲಯನ್ಸ್ ಕ್ಲಬ್ ಜಾತಿ, ಧರ್ಮ ಹಾಗೂ ರಾಜಕೀಯ ಭೇದವಿಲ್ಲದೆ ಸಮಾಜಸೇವೆಯನ್ನು ಧ್ಯೇಯವಾಗಿಟ್ಟುಕೊಂಡಿರುವ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು, ನಾಯಕತ್ವ ಹಾಗೂ ಸಾಮಾಜಿಕ ಬದ್ಧತೆಯನ್ನು ಬೆಳೆಸುವ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರವೀಣ ವಾರಕರ ಅಧ್ಯಕ್ಷರಾಗಿ, ಡಾ. ನವೀನ ಹಿರೇಗೌಡರ ಹಾಗೂ ರಾಜಣ್ಣ ಮಲ್ಲಾಡದ ಉಪಾಧ್ಯಕ್ಷರಾಗಿ, ಲಿಂಗರಾಜ ತೋಟದ ಕಾರ್ಯದರ್ಶಿಯಾಗಿ, ರೇಣುಕಪ್ರಸಾದ ಹಿರೇಮಠ ಸಹ ಕಾರ್ಯದರ್ಶಿಯಾಗಿ ಹಾಗೂ ರೇಣುಕಪ್ರಸಾದ ಶಿಗ್ಲಿಮಠ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿದರು.

ಲೇಡೀಸ್ ವಿಂಗ್‌ನ ಅಧ್ಯಕ್ಷೆಯಾಗಿ ಅಮೃತಾ ವಾರಕರ, ಕಾರ್ಯದರ್ಶಿಯಾಗಿ ಅರ್ಣಾ ತೋಟದ ಹಾಗೂ ಖಜಾಂಚಿಯಾಗಿ ಪ್ರಿಯಾ ಶಿಗ್ಲಿಮಠ ಪದಗ್ರಹಣ ಮಾಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ನಿಕಟಪೂರ್ವ ಜಿಲ್ಲಾ ಗವರ್ನರ್ ಆನಂದ ಪೋತ್ನೀಸ್, ಕಳೆದ ಸಾಲಿನ ತಂಡ ಕ್ಲಬ್‌ಗೆ ಆರು ಪ್ರಶಸ್ತಿಗಳನ್ನು ತಂದು ಗೌರವ ಹೆಚ್ಚಿಸಿದ್ದು, ಅದೇ ಉತ್ಸಾಹ ಮತ್ತು ಬದ್ಧತೆಯಿಂದ ನೂತನ ತಂಡವೂ ಕಾರ್ಯನಿರ್ವಹಿಸಬೇಕು ಎಂದು ಹಾರೈಸಿದರು.

ನೂತನ ಅಧ್ಯಕ್ಷ ಪ್ರವೀಣ ವಾರಕರ ಹಾಗೂ ಲೇಡೀಸ್ ವಿಂಗ್ ಅಧ್ಯಕ್ಷೆ ಅಮೃತಾ ವಾರಕರ ತಮ್ಮ ಅಧಿಕಾರಾವಧಿಯ ಸಮಾಜಮುಖಿ ಸೇವಾ ಯೋಜನೆಗಳನ್ನು ವಿವರಿಸಿ ಸದಸ್ಯರ ಸಹಕಾರ ಕೋರಿದರು.

ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ಗಳ ವಿತರಣೆ ಹಾಗೂ ಹಿರಿಯ ನಾಗರಿಕರಿಗೆ ವಾಕರ್‌ಗಳನ್ನು ವಿತರಿಸಲಾಯಿತು.

ನಿಕಟಪೂರ್ವ ಕಾರ್ಯದರ್ಶಿ ರಾಜಣ್ಣ ಮಲ್ಲಾಡದ ಕಳೆದ ಸಾಲಿನ ಕಾರ್ಯಚಟುವಟಿಕೆಗಳ ವರದಿಯನ್ನು ಪವರ್‌ಪಾಯಿಂಟ್‌ ಮೂಲಕ ಮಂಡಿಸಿದರು. ರಾಜಣ್ಣ ವೇರ್ಣೆಕರ ಸ್ವಾಗತಿಸಿದರು. ಪ್ರಭು ನೀಲಗುಂದ ಕಾರ್ಯಕ್ರಮ ಪರಿಚಯಿಸಿದರು. ಜೆ.ಡಿ. ಉತ್ತರಕರ ನಿರೂಪಿಸಿ, ಲಿಂಗರಾಜ ತೋಟದ ವಂದಿಸಿದರು. ಸಮಾರಂಭದಲ್ಲಿ ಕ್ಲಬ್‌ನ ಹಿರಿಯ ಹಾಗೂ ಕಿರಿಯ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು.

ವಿಜಯಪುರದಲ್ಲಿ ಮತ್ತೆ ಸಕ್ರಿಯವಾಗಿದ್ದ ರೌಡಿಶೀಟರ್ ತುಳಸಿರಾಮನಿಗೆ ಗಡಿಪಾರು ಶಿಕ್ಷೆ!

ವಿಜಯಪುರ: ಭೀಮಾತೀರದ ರೌಡಿಶೀಟರ್ ತುಳಸಿರಾಮನನ್ನು ಗಡಿಪಾರು ಮಾಡಿ ಚಾಮರಾಜನಗರ ಜಿಲ್ಲಾ ಕಾರಾಗೃಹದಲ್ಲಿ ಬಂಧನದಲ್ಲಿಡುವಂತೆ ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ್ ಕೆ ಆದೇಶ ಹೊರಡಿಸಿದ್ದಾರೆ.

ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅರ್ಜನಾಳ ಗ್ರಾಮದವನಾಗಿರುವ ತುಳಸಿರಾಮ, ಪ್ರಸ್ತುತ ವಿಜಯಪುರದ ಗಣೇಶ್ ನಗರದಲ್ಲಿ ವಾಸವಾಗಿದ್ದ. ಭೀಮಾತೀರದ ಹಂತಕ ಬಾಗಪ್ಪ ಹರಿಜನನ ಆಪ್ತ ಶಿಷ್ಯನಾಗಿದ್ದ ತುಳಸಿರಾಮ, ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸ್ ದಾಖಲೆಗಳು ತಿಳಿಸಿವೆ.

ತುಳಸಿರಾಮ ಸಮಾಜದ ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದ ಹಿನ್ನೆಲೆಯಲ್ಲಿ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ.

ಅಕ್ರಮ ಸಾರಾಯಿ, ಮಾದಕ ವಸ್ತು, ಜೂಜು ಹಾಗೂ ಇತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪಗಳು ಆತನ ಮೇಲಿವೆ. ಅಲ್ಲದೆ, ಭಾರತೀಯ ದಂಡ ಸಂಹಿತೆ ಹಾಗೂ ಭಾರತೀಯ ನ್ಯಾಯ ಸಂಹಿತೆಯಡಿ ಹಲವು ಪ್ರಕರಣಗಳು ದಾಖಲಾಗಿವೆ.

ತುಳಸಿ ನಗರದಲ್ಲಿ ನಡೆದ ರವಿ ಮೇಲಿನಕೇರಿ ಹಾಗೂ ಸುಶೀಲ್ ಕಾಳೆ ಹತ್ಯೆ ಪ್ರಕರಣದಲ್ಲಿ ತುಳಸಿರಾಮ ಪ್ರಮುಖ ಆರೋಪಿಯಾಗಿದ್ದ. ಇತ್ತೀಚೆಗೆ ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಇದೀಗ ತುಳಸಿರಾಮನನ್ನು ವಿಜಯಪುರ ಜಿಲ್ಲೆಯಿಂದ ಹೊರಹಾಕಿ, ಚಾಮರಾಜನಗರ ಜಿಲ್ಲಾ ಕಾರಾಗೃಹದಲ್ಲಿ ಇರಿಸಲು ಆದೇಶಿಸಲಾಗಿದೆ.

ಮೂರು ವರ್ಷಗಳ ಬಳಿಕ ದೆಹಲಿಯಲ್ಲಿ ಶುದ್ಧ ಗಾಳಿ; ಸತತ ಮಳೆಯಿಂದ AQI ‘ಉತ್ತಮ’ ಮಟ್ಟಕ್ಕೆ!

0

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸತತ ಎರಡು ದಿನ ಸುರಿದ ಮಳೆಯ ಪರಿಣಾಮ ವಾಯು ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ.

ಮೂರು ವರ್ಷಗಳ ಬಳಿಕ ಮೊದಲ ಬಾರಿಗೆ ಏರ್ ಕ್ವಾಲಿಟಿ ಇಂಡೆಕ್ಸ್ (AQI) ‘ಉತ್ತಮ’ ವರ್ಗಕ್ಕೆ ಇಳಿದಿದ್ದು, ದೆಹಲಿಯ ನಿವಾಸಿಗಳಿಗೆ ನೆಮ್ಮದಿಯ ವಾತಾವರಣ ನಿರ್ಮಾಣವಾಗಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ದೆಹಲಿಯ AQI 48ಕ್ಕೆ ದಾಖಲಾಗಿದೆ. 0ರಿಂದ 50ರ ನಡುವಿನ AQI ಅನ್ನು ‘ಉತ್ತಮ’ ವರ್ಗ ಎಂದು ಪರಿಗಣಿಸಲಾಗುತ್ತದೆ. ಇದಕ್ಕೂ ಮುನ್ನ ನಿನ್ನೆ AQI 59 ದಾಖಲಾಗಿತ್ತು. ನಿರಂತರ ಮಳೆಯ ಪರಿಣಾಮ ಅದು ಮತ್ತಷ್ಟು ಇಳಿಕೆಯಾಗಿ 48ಕ್ಕೆ ತಲುಪಿದೆ.

ತಜ್ಞರ ಪ್ರಕಾರ, ಸತತ ಮಳೆಯಿಂದ ವಾತಾವರಣದಲ್ಲಿದ್ದ PM2.5, PM10 ಸೇರಿದಂತೆ ಧೂಳು ಮತ್ತು ಇತರ ಮಾಲಿನ್ಯಕಾರಿ ಕಣಗಳು ಕೊಚ್ಚಿಹೋಗಿವೆ. ಈ ಪ್ರಕ್ರಿಯೆಯನ್ನು ‘ವೆಟ್ ಡಿಪಾಸಿಷನ್’ ಅಥವಾ ‘ವಾಷ್‌ಔಟ್ ಎಫೆಕ್ಟ್’ ಎಂದು ಕರೆಯಲಾಗುತ್ತದೆ.  2015ರಲ್ಲಿ AQI ವ್ಯವಸ್ಥೆ ಜಾರಿಯಾದ ಬಳಿಕ ದೆಹಲಿಯಲ್ಲಿ ಕೇವಲ 15 ದಿನಗಳು ಮಾತ್ರ ‘ಉತ್ತಮ’ ಗಾಳಿ ಗುಣಮಟ್ಟ ದಾಖಲಾಗಿದೆ. ಸಾಮಾನ್ಯವಾಗಿ ವರ್ಷಕ್ಕೆ ಒಂದು ಅಥವಾ ಎರಡು ದಿನಗಳಷ್ಟೇ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಈ ಹಿಂದೆ 2023ರ ಸೆಪ್ಟೆಂಬರ್ 10ರಂದು ಜಿ-20 ಶೃಂಗಸಭೆಯ ಹಿನ್ನೆಲೆಯಲ್ಲಿ ಜಾರಿಗೊಂಡ ನಿರ್ಬಂಧಗಳು ಹಾಗೂ ಮಳೆಯ ಪರಿಣಾಮ ಉತ್ತಮ ಗಾಳಿ ಗುಣಮಟ್ಟ ದಾಖಲಾಗಿತ್ತು. 2020ರ ಕೋವಿಡ್ ಲಾಕ್‌ಡೌನ್ ಅವಧಿಯಲ್ಲೂ ಮುಂಗಾರು ಸಮಯದಲ್ಲಿ ಐದು ದಿನಗಳ ಕಾಲ ಇದೇ ರೀತಿಯ ಪರಿಸ್ಥಿತಿ ಕಂಡುಬಂದಿತ್ತು.

ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್‌ಮೆಂಟ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಅನುಮಿತಾ ರಾಯ್‌ಚೌಧುರಿ ಮಾತನಾಡಿ, ಮುಂಗಾರು ಮಳೆಯು ವಾಯುಮಾಲಿನ್ಯವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುವ ಪರಿಣಾಮಕಾರಿ ನೈಸರ್ಗಿಕ ಪ್ರಕ್ರಿಯೆಯಾಗಿದೆ. ಆದರೆ ಇದು ಶಾಶ್ವತ ಪರಿಹಾರವಲ್ಲ. ವಾಹನಗಳು, ಕೈಗಾರಿಕೆಗಳು, ನಿರ್ಮಾಣ ಚಟುವಟಿಕೆಗಳು ಹಾಗೂ ತ್ಯಾಜ್ಯ ಸುಡುವಿಕೆಯಿಂದ ಉಂಟಾಗುವ ಮಾಲಿನ್ಯವನ್ನು ನಿಯಂತ್ರಿಸಿದಾಗ ಮಾತ್ರ ದೀರ್ಘಕಾಲಿಕವಾಗಿ ಗಾಳಿ ಗುಣಮಟ್ಟ ಸುಧಾರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.