Home Blog Page 330

ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರ ದಾಳಿ; 15 ಜನರ ಬಂಧನ, ಪುರಸಭೆ ಸದಸ್ಯ ಪರಾರಿ?

ವಿಜಯಸಾಕ್ಷಿ ಸುದ್ದಿ, ಗದಗ

ಎರಡು ಪ್ರತ್ಯೇಕ ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರು ದಾಳಿ ಮಾಡಿ 15 ಜನರನ್ನು ಬಂಧಿಸಿ 25 ಸಾವಿರಕ್ಕೂ ಹೆಚ್ಚು ಹಣವನ್ನು ವಶಪಡಿಸಿಕೊಂಡ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ಮುಕ್ತಿಮಂದಿರದ ಬಳಿ ಇರುವ ಸೂಫಿ ಸ್ಕೂಲ್ ಬಳಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್- ಬಾಹರ್ ಜೂಜಾಟದಲ್ಲಿ ತೊಡಗಿದ್ದ ಮಲ್ಲಿಕ್ ಖಾದರಸಾಬ್ ಛೋಪದಾರ, ದಾದಾಪೀರ ಹಜರೇಸಾಬ್ ನಾಲಬಂದಿ, ಸಲ್ಮಾನ್ ನೂರ ಅಹ್ಮದ್ ಮುನಕೇರಿ, ಅಬ್ದುಲ್ ಜಾಫರ್ ಸಾಬ್ ಹುಬ್ಬಳ್ಳಿ, ಶಫೀಯುಲ್ಲಾ ಅಲ್ಲಿಸಾಬ್ ಸಿದ್ದಿ, ಮೆಹಬೂಬ್ ಸಾಬ್ ರಾಜೇಸಾಬ್ ಗುತ್ತಲ್ಲ, ಮಾಬುಸಾಬ್ ಇಬ್ರಾಹಿಮಸಾಬ್ ತಾಡಪತ್ರಿ, ಶಿಕ್ಕೂರಹ್ಮದ್ ಯಾಸಿನಸಾಬ್ ನಾಲಬಂದಿ ಎಂಬ ಎಂಟು ಜನರ ತಂಡದ ಮೇಲೆ ಜಿಲ್ಲಾ ಅಪರಾಧ ದಳದ ಇನ್ಸ್‌ಪೆಕ್ಟರ್ ಟಿ ಮಹಾಂತೇಶ್ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ.

ಬಂಧಿತರಿಂದ 22780 ರೂಪಾಯಿ ಹಣ ವಶಪಡಿಸಿಕೊಳ್ಳಲಾಗಿದೆ. ದಾಳಿಯ ಕಾಲಕ್ಕೆ ಪುರಸಭೆ ಸದಸ್ಯನೊಬ್ಬ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಶಿಗ್ಲಿ ಬಳಿಯ ಅಣ್ಣಿಗೇರಿ ಅವರ ಕೆರೆ ಹತ್ತಿರ ಜೂಜಾಟದಲ್ಲಿ ತೊಡಗಿದ್ದ
ಶಿಗ್ಲಿಯ ಮಂಜುನಾಥ್ ಬಸಪ್ಪ ಯಲವಿಗೆ, ಮಹ್ಮದಸಾಬ್ ನದಾಫ್, ಆನಂದ ಈರಪ್ಪ ಮುದಗಲ್ಲ, ಆನಂದ ಯಲ್ಲಪ್ಪ ಮಹೇಂದ್ರಕರ್, ತುಳಚಪ್ಪ ಬಸಪ್ಪ ಮಡಿವಾಳರ, ಬಸಪ್ಪ ಮುರಿಗೆಪ್ಪ ಹೊನಕೇರಿ, ಬೆಳಗಾವಿ ಜಿಲ್ಲೆಯ ರಾಮದುರ್ಗದ ಗಂಗಾಧರ ಪಂಚಪ್ಪ ಯಲಗಂಟಿ ಎಂಬುವವರನ್ನು ಲಕ್ಷ್ಮೇಶ್ವರ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಬಂಧಿತರಿಂದ 2800 ರೂಪಾಯಿ ಹಣವನ್ನು ಜಪ್ತಿ ಮಾಡಿದ್ದು, ಈ ಕುರಿತಂತೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾಲಿಕೆ ಚುನಾವಣೆ ಮೂಲಕವೇ ಬಿಜೆಪಿಯ ಅವನತಿ ಆರಂಭ

  • ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿಕೆ

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಕಲಬುರಗಿ ಜನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಳಿತಕ್ಕೆ ಬೇಸತ್ತಿದ್ದಾರೆ.‌ ಪಾಲಿಕೆ ಚುನಾವಣೆ ಮೂಲಕವೇ ಬಿಜೆಪಿಯ ಅವನತಿ ಶುರುವಾಗಲಿದೆ‌ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎನ್‌ಡಿಎ ಸರ್ಕಾರ ಕಾರ್ಮಿಕರು ಮತ್ತು ಶೋಷಿತರ ಮೇಲೆ ಗದಾಪ್ರಹಾರ ಮಾಡುತ್ತಿದೆ.‌ ಸರ್ಕಾರದ ತಪ್ಪು ನೀತಿಗಳಿಂದ ಜನರು ತೀವ್ರ ಸಂಕಷ್ಟಕ್ಕಿಡಾಗಿದ್ದಾರೆ.

ಸ್ವರ್ಗವನ್ನೇ ಧರೆಗೆ ತರ್ತಿವಿ ಎಂದು ಹೇಳಿದ್ದ ಬಿಜೆಪಿ ಇದೀಗ ನರಕ ಸೃಷ್ಟಿಸಿದೆ ಎಂದು ಆರೋಪಿಸಿದ ಅವರು, ಬಿಜೆಪಿಯ ಅವನತಿ ಕಲ್ಯಾಣ ಕರ್ನಾಟಕ ಭಾಗದಿಂದಲೇ ಆರಂಭವಾಗಲಿದೆ ಎಂದರು.

ಮಲ್ಲಿಕಾರ್ಜುನ ‌ಖರ್ಗೆ ಮತ್ತು ದಿ. ಎನ್. ಧರ್ಮಸಿಂಗ್ ಈ ಭಾಗಕ್ಕೆ ಅನೇಕ ಕೊಡುಗೆ ನೀಡಿದ್ದಾರೆ.‌ ‌ಪಾಲಿಕೆ ಚುನಾವಣೆಯಲ್ಲಿ
ಮತ ಕೇಳುವ ನೈತಿಕ ಹಕ್ಕನ್ನು ಬಿಜೆಪಿ‌ ಸಂಪೂರ್ಣ ಕಳೆದುಕೊಂಡಿದೆ. ಜಾತ್ಯತೀತತೆ ಬಗ್ಗೆ ಮಾತನಾಡುವ ಜೆಡಿಎಸ್ ಜಾತಿ ರಾಜಕಾರಣದ ಮೊರೆ ಹೋಗಿದೆ. ಅಧಿಕಾರಕ್ಕಾಗಿ ಜೆಡಿಎಸ್ ಯಾರ ಜೊತೆಯಾದರೂ ಹೋಗಲು ಸಿದ್ಧವಿದೆ ಎಂದು ಟೀಕಿಸಿದರು.

ಕಲಬುರಗಿ ಪಾಲಿಕೆಯಲ್ಲಿ ಕಾಂಗ್ರೆಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ‌‌ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಸವಕಲ್ಯಾಣದ ಅನುಭವ ಮಂಟಪ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದು ಕಾಂಗ್ರೆಸ್, ಬಿಜೆಪಿ ಸರ್ಕಾರ ತನ್ನ ಸಾಧನೆ ಎಂದು ಚುನಾವಣೆ ಪ್ರಣಾಳಿಕೆಯಲ್ಲಿ ಹಾಕಿಕೊಂಡಿದೆ‌ ಎಂದು ಈಶ್ವರ ಖಂಡ್ರೆ ಆರೋಪಿಸಿದರು.

ಅರುಣ್‌ ಸಿಂಗ್ ಬಂದಿರೋದು ದುಡ್ಡು ವಸೂಲಿಗೆ, ಆತನಿಗೇನು ಗೊತ್ತು ಸ್ಥಳೀಯ ರಾಜಕೀಯ

  • ಜೆಡಿಎಸ್ ಮುಳುಗುತ್ತಿರುವ ಹಡಗು ಹೇಳಿಕೆಗೆ ಮಾಜಿ ಸಿಎಂ ಎಚ್ಡಿಕೆ ಕೆಂಡಾಮಂಡಲ

ವಿಜಯಸಾಕ್ಷಿ ಸುದ್ದಿ, ಮೈಸೂರು

ಜೆಡಿಎಸ್ ಮುಳುಗುತ್ತಿರುವ ಹಡಗು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರಣ್‌ಸಿಂಗ್ ಹೇಳಿಕೆಗೆ ಕೆಂಡಮಂಡಲಾರದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಪಾಪ ಅವನಿಗೆ ಏನ್ ಗೊತ್ತು. ಕರ್ನಾಟಕ ಹಾಗೂ ಇಲ್ಲಿನ ಸ್ಥಳೀಯ ಪಕ್ಷದ ಬಗ್ಗೆ ಆತನಿಗೆ ಮಾಹಿತಿ ಇಲ್ಲ. ಆತ ಬಂದಿರೋದು ದುಡ್ಡ ವಸೂಲಿ ಮಾಡುವುದಕ್ಕೆ. ನಾವೇನು ಬೆಂಬಲ ಕೋರಿ ಅವರ ಮನೆ ಬಾಗಿಲಿಗೆ ಹೋಗಿದ್ವಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಮೇಯರ್ ಚುನಾವಣೆಯಲ್ಲಿ ಬೆಂಬಲ ಕೋರಿ ಶಾಸಕ ಸಾ.ರಾ. ಮಹೇಶ್ ಕಚೇರಿಗೆ ಬಿಜೆಪಿ ನಾಯಕರು ಏಕೆ ಬಂದಿದ್ರು? ನಾವೇನು ಬೆಂಬಲ ಕೋರಿ ಅವರ ಬಳಿಗೆ ಹೋಗಿಲ್ಲ. ಅರುಣ್ ಸಿಂಗ್ ರಾಜ್ಯದ ವಾಸ್ತವ ಪರಿಸ್ಥಿತಿ ಗೊತ್ತಿಲ್ಲ. ಇಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ವಸೂಲಿಗಾಗಿ ಆಗಾಗ್ಗೆ ಭೇಟಿ ನೀಡುತ್ತಾರೆ. ಜೆಡಿಎಸ್ ಬಗ್ಗೆ ಯಾರೂ ಕೂಡ ಹಗುರವಾಗಿ ಮಾತನಾಡಬಾರದು ಎಂದು ಎಚ್ಚರಿಕೆ ನೀಡಿದರು.

ಮೇಕೆದಾಟು ಯೋಜನೆ ಆರಂಭಿಸಲಿ

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಯ ಆದೇಶ ಕುರಿತಂತೆ ಪ್ರತಿಕ್ರಿಯಿಸಿದ ಎಚ್ಡಿಕೆ, ಇದೇ ಕಾರಣಕ್ಕೆ ನಾವು ಮೇಕೆದಾಟು ಯೋಜನೆ ಆರಂಭಿಸಬೇಕು ಅನ್ನುತ್ತಿರೋದು.

ಸಮುದ್ರಕ್ಕೆ ಹರಿದುಹೋಗುವ ಹೆಚ್ಚುವರಿ ನೀರನ್ನು ಸಂಗ್ರಹಿಸಬಹುದು. ಇದನ್ನು ಕೇಂದ್ರ ಮತ್ತು ತಮಿಳುನಾಡು ಅರ್ಥ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರ ಕೂಡಲೇ ಮಧ್ಯಸ್ಥಿಕೆ ವಹಿಸಿ ಪ್ರಾಧಿಕಾರದ ಮನವೊಲಿಸಬೇಕು.

ಎಲ್ಲಾ ರಾಜ್ಯಗಳನ್ನು ಸರಿಸಮಾನಾಗಿ ನೋಡಬೇಕು. ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಕರ್ನಾಟಕದ ಸಂಸದರಿಗೆ ಮೂಳೆ, ಎಲುಬು ಎರಡೂ ಇಲ್ಲ. ಅರುಣ್ ಸಿಂಗ್ ಸೂಟ್‌ಕೇಸ್ ತಗೊಂಡು ಹೋದ್ರೆ ಸಾಲದು. ಇಂತಹ ಸಮಸ್ಯೆಯನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಬಾಗಿಲು ದೊಡ್ಡದಿದೆ

ಜಿ.ಟಿ.ದೇವೇಗೌಡ ಪಕ್ಷ ತೊರೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಜೆಡಿಎಸ್ ಬಾಗಿಲು ದೊಡ್ಡದಾಗಿ ತೆರೆದಿದೆ. ಬರುವವರು ಬರಬಹುದು, ಹೋಗೋರು ಹೋಗಬಹುದು. ಎರಡು ವರ್ಷದ ಹಿಂದೆಯೇ ಪಕ್ಷದಿಂದ ದೂರ ಸರಿದಿದ್ದೇನೆ ಎಂದು ಅವರೇ ಹೇಳಿದ್ದಾರೆ. ಈಗ ಒಂದು ನೆಪ ಹೇಳಿ ಹೋಗೋಕೆ ಮುಂದಾಗಿದ್ದಾರೆ.

ದ್ರಾಕ್ಷಿ ಕೈಗೆಟುಕದಿದ್ದಾಗ ನರಿ ಹೇಳುವ ಕತೆಯಂತಾಗಿದೆ. ಈಗ ಹೊರಹೋಗುವುದಾದರೆ 2008ರಲ್ಲಿ ಯಾವ ಕಾರಣಕ್ಕಾಗಿ ಬಿಜೆಪಿಗೆ ಹೋದರು ಎಂದು ಶಾಸಕ ಜಿಟಿ ದೇವೇಗೌಡರಿಗೆ ಕುಮಾರಸ್ವಾಮಿ ಟಾಂಗ್ ನೀಡಿದರು.

ಮಾದರಿ ಕ್ಷೇತ್ರವಾಗಿಸುವ ಕನಸು ನನಸು ಮಾಡುವೆ: ಸಿಎಂ ಬಸವರಾಜ ಬೊಮ್ಮಾಯಿ

ವಿಜಯಸಾಕ್ಷಿ ಸುದ್ದಿ, ಹಾವೇರಿ

ನಿಮ್ಮೆಲ್ಲರ ಸಹಕಾರ, ಆಶೀರ್ವಾದದಿಂದ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಈ ಸ್ಥಾನ ಪಡೆಯಲು ನಿಮ್ಮ ಪಾತ್ರ ಪ್ರಮುಖವಿದೆ. ಈಡಿ ರಾಜ್ಯದ ಜವಾಬ್ದಾರಿ ನನಗಿದೆ. ಆದರೆ ಎಂದೂ ನನ್ನ ತವರು ಮನೆಯನ್ನು ಮರೆಯೋದಿಲ್ಲ.

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧನಾಗಿದ್ದೇನೆ. ಕ್ಷೇತ್ರದ ಬಗೆಗಿನ ಕಂಡ ಕನಸುಗಳು ನನಸಾಗುವ ಕಾಲ ಬಂದಿದೆ. ಮಾದರಿ ಕ್ಷೇತ್ರವಾಗಿಸುವ ಕನಸು ನನಸು ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದಲ್ಲಿ ಮಾತನಾಡಿದ ಅವರು, ಬರುವ ಶೈಕ್ಷಣಿಕ ವರ್ಷಕ್ಕೆ ಸರಕಾರಿ ಪದವಿ ಕಾಲೇಜು ಆರಂಭಿಸಲಾಗುವುದು. ಇಲ್ಲಿ ಅತಿದೊಡ್ಡ ಗ್ರಾಮ ಪಂಚಾಯತಿ ಇದೆ. ವಿಶೇಷ ಅನುದಾನ ಕೊಟ್ಟು ಅಭಿವೃದ್ಧಿ ಮಾಡುತ್ತೇನೆ. ಜಾತಿ ಬೇಧವಿಲ್ಲದೆ ಎಲ್ಲರ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.

ನನ್ನ ಜೊತೆಗೆ ಹಿರಿಯರಾದ ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ, ಬೈರತಿ ಬಸವರಾಜ್ ಬಂದಿದ್ದಾರೆ. ಕ್ಯಾಬಿನೆಟ್‌ನಲ್ಲಿ ಪ್ರತಿಭಾವಂತರಿದ್ದಾರೆ. ನಮ್ಮದು ಒಳ್ಳೆಯ ಟೀಂ ಇದೆ. ಅವರೆಲ್ಲರ ಕಾರ್ಯಕ್ಷಮತೆ ಬಳಸಿಕೊಂಡು ರಾಜ್ಯದ ಅಭಿವೃದ್ಧಿ ಮಾಡುತ್ತೇನೆ. ಹೊರಗಡೆ ನಾನು ಮುಖ್ಯಮಂತ್ರಿ ಆಗಿರಬಹುದು, ಇಲ್ಲಿಗೆ ಬಂದಾಗ ನಿಮ್ಮ ಬಸವರಾಜ ಬೊಮ್ಮಾಯಿ ಎಂದು ಹೇಳಿದರು.

ರೈತರ ಆದಾಯ ದುಪ್ಪಟ್ಟುಗೊಳಿಸಲು ಯೋಜನೆ

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ರಾಜೀವ ಗ್ರಾಮದ ಬಳಿ 39 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರೈತರ ಆದಾಯ ದುಪ್ಪಟ್ಟುಗೊಳಿಸುವ ಕೆಲಸ ಮಾಡುತ್ತಿದ್ದೇನೆ.

ಭೂಮಿಯ ಪ್ರಮಾಣ ಕಡಿಮೆ ಆಗುತ್ತಿದೆ. ರೈತರ ಮಕ್ಕಳು ಬೇರೆಯವರಂತೆ ಮುಂದೆ ಬರಬೇಕು. ನಾನು ಸಿಎಂ ಆಗುತ್ತಿದ್ದಂತೆ ರೈತರ ಮಕ್ಕಳಿಗೆ ಶಿಷ್ಯವೇತನ ಕೊಡುವ ನಿರ್ಧಾರ ಮಾಡಿದೆ. ಇಡೀ ದೇಶದಲ್ಲಿ ಇಂಥ ಯೋಜನೆ ಇರುವುದು ಕರ್ನಾಟಕದಲ್ಲಿ ಮಾತ್ರ.

ರೈತರಿಗೆ ಬೇರೆ ಬೇರೆ ರೀತಿಯ ತರಬೇತಿ ಕೊಟ್ಟು ಅವರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ನೌಕರಿ ಮಾಡೋರಿಗೆ ಮಾತ್ರ ಆರ್‌ಸಿಸಿ ಮನೆಗಳು ಇವೆ. ಹೀಗಾಗಿ ರೈತರ ಮಕ್ಕಳಿಗಾಗಿ ಯೋಜನೆ ರೂಪಿಸಿದ್ದೇನೆ. ಸಂಧ್ಯಾ ಸುರಕ್ಷಾ, ವಿಧವಾ ವೇತನ, ವಿಕಲಚೇತನರ ವೇತನ ಹೆಚ್ಚಳ ಮಾಡಿದ್ದೇನೆ.

ಅಧಿಕಾರಿಗಳು ಬಹಳ ದುಡ್ಡು ಆಗುತ್ತದೆ ಎಂದರು. ಅದು ಬಡವರ ದುಡ್ಡು, ಅವರಿಗೆ ಕೊಡಲು ನಿಮಗೇನು ಕಷ್ಟ ಎಂದು ಕೇಳಿದೆ. ಒಬ್ಬ ಆಡಳಿತಗಾರನಿಗೆ ಜನರ ನಾಡಿಮಿಡಿತ ಗೊತ್ತಿರಬೇಕು.

ದುಡಿಮೆ ಇದ್ದ ನಾಡು ಶ್ರೀಮಂತ ಆಗಿರಬೇಕು. ನಾಡಿನ ಜನತೆ ಶ್ರೀಮಂತರಾದರೆ ಸರಕಾರಗಳು ಶ್ರೀಮಂತ ಆಗುತ್ತವೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಇನ್ನಷ್ಟು ಕಲ್ಪನೆಗಳನ್ನು ಇಟ್ಟುಕೊಂಡಿದ್ದೆ. ಅವೆಲ್ಲವನ್ನೂ ಮುಂಬರುವ ದಿನಗಳಲ್ಲಿ ಮಾಡಿಕೊಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಪೆಟ್ರೋಲ್ ಕಳ್ಳತನ; ಮರ್ಯಾದೆಗೆ ಅಂಜಿ ಯುವಕನ ಕೊಲೆ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಪೆಟ್ರೋಲ್ ಕಳ್ಳತನ ಮಾಡುವುದನ್ನು ನೋಡಿದ ಯುವಕನನ್ನು ಕೊಲೆಗೈದು ತಿಪ್ಪೆಗುಂಡಿಯಲ್ಲಿ ಹೂತಿಟ್ಟ ಘಟನೆ ಗೋಕಾಕನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ಬಳೋಬಾಳ ಗ್ರಾಮದ ನಿವಾಸಿ ಮಹಾದೇವ ಕಿಚಡಿ(28) ಕೊಲೆಯಾದ ಯುವಕ.
ಗೋಕಾಕ ಬಳೋಬಾಳ ಗ್ರಾಮದ‌ ನಿವಾಸಿಯಾಗಿರುವ ಕೊಲೆ ಆರೋಪಿ ಪ್ರವೀಣ ಸುಣದೋಳಿ ಕೆಲವು ದಿನಗಳ ಹಿಂದೆ‌ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನದಿಂದ ಪೆಟ್ರೋಲ್‌ ಕಳ್ಳತನ ಮಾಡಲು ಯತ್ನಿಸುತ್ತಿರುವುದನ್ನು ಮಹಾದೇವ ನೋಡಿದ್ದಾನೆ.

ಇದರಿಂದ ಆತಂಕಕ್ಕೆ ಒಳಗಾದ ಪ್ರವೀಣ್ ಕಳ್ಳತನದ ವಿಷಯ ಗ್ರಾಮದ ಜನರಿಗೆ ಗೊತ್ತಾಗಿ ತನ್ನ ಮರ್ಯಾದೆ ಹೋಗುತ್ತದೆಂಬ ಭಯದಿಂದ ಅಲ್ಲಿಯೇ ಇದ್ದ ಕಬ್ಬಿಣದ ರಾಡ್‌ನಿಂದ ಮಹಾದೇವನಿಗೆ ಹೊಡೆದು ಕೊಲೆ ಮಾಡಿದ್ದಾನೆ.

ಬಳಿಕ ಮೃತದೇಹವನ್ನು ತಿಪ್ಪೆಯೊಂದರಲ್ಲಿ ತೆಗ್ಗು ತೆಗೆದು ಮುಚ್ಚಿದ್ದಾನೆ. ನಾಲ್ಕು ದಿನಗಳ ಬಳಿಕ ಶವ ಕೊಳೆತು ವಾಸನೆ ಬರತೊಡಗಿದ್ದು, ಅನುಮಾನಗೊಂಡ ಗ್ರಾಮಸ್ಥರು ತಿಪ್ಪೆಯಲ್ಲಿ ಅಗೆದು ನೋಡಿದಾಗ ಮೃತದೇಹ ಕಂಡಿದೆ.

ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ಘಟಪ್ರಭಾ ಪೊಲೀಸರು ಪರಿಶೀಲನೆ ನಡೆಸಿ ಆರೋಪಿ ಪ್ರವೀಣ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಡೆದ ಘಟನೆ ವಿವರಿಸಿದ್ದಾನೆ. ಘಟಪ್ರಭಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಪ್ಟೆಂಬರ್ 13 ರವರೆಗೆ ಗದಗ ಜಿಲ್ಲೆಯಲ್ಲಿ ನಿಷೇಧಾಜ್ಞೆ, ನೈಟ್ ಕರ್ಫ್ಯೂ

0

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯ ಸರ್ಕಾರ ಪ್ರಸ್ತುತ ರಾಜ್ಯದಲ್ಲಿನ ಕೋವಿಡ್-19 ಪರಿಸ್ಥಿತಿಯನ್ನು ಅವಲೋಕಿಸಿ ವೈದ್ಯಕೀಯ ಪರಿಣಿತರು ನೀಡಿರುವ ಸಲಹೆ ಮೇರೆಗೆ ಕಣ್ಗಾವಲು ನಿಯಂತ್ರಣ ಮತ್ತು ಜಾಗೃತಿ ಮಾರ್ಗಸೂಚಿಗಳನ್ನು ಸೆ.13 ಬೆಳಿಗ್ಗೆ 6 ಗಂಟೆಯವರೆಗೆ ಮುಂದುವರೆಸಲಾಗಿದೆ.

ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕ ಆರೋಗ್ಯ, ಕಾನೂನು ಸುವ್ಯವಸ್ಥೆ ಕಾಪಾಡಲು ಕೋವಿಡ್-19 ಮಾರ್ಗಸೂಚಿಗಳನ್ವಯ ಜು.13 ರಿಂದ ಆ.30 ವರೆಗೆ ಇದ್ದ ಪ್ರತಿಬಂಧಕಾಜ್ಞೆಯನ್ನು ಸೆ.13 ಬೆಳಿಗ್ಗೆ 6 ಗಂಟೆಯವರೆಗೆ ಮುಂದುವರೆಸಿ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಅವರು ಆದೇಶ ಹೊರಡಿಸಿದ್ದಾರೆ.

ಆ.31 ರಿಂದ ಸೆ.13 ವರೆಗೆ ಪ್ರತಿ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿದ್ದು, ಜಿಲ್ಲೆಯಲ್ಲಿ ಸಾರ್ವಜನಿಕರು ಮುಖಗವಸು ಧರಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.

ಸಾರ್ವಜನಿಕರು ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸದೇ ಇದ್ದಲ್ಲಿ ಸಾಂಕ್ರಾಮಿಕ ರೋಗ ಕಾಯ್ದೆ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ ನಗರ ಪಾಲಿಕೆ ಪ್ರದೇಶಗಳಲ್ಲಿ 250.ರೂ ಮತ್ತು ಇನ್ನಿತರ ಪ್ರದೇಶಗಳಲ್ಲಿ 100.ರೂ ದಂಡವನ್ನು ವಿಧಿಸುವುದರ ಜೊತೆಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಸಿಎಂ ಬೊಮ್ಮಾಯಿ ಬಾಯಿಗುಣ ಚೆನ್ನಾಗಿದೆ

0
  • ಹಾವೇರಿಯಲ್ಲಿ ಬೊಮ್ಮಾಯಿಯವರನ್ನು ಹಾಡಿಹೊಗಳಿದ ಪಶುಸಂಗೋಪನಾ ಸಚಿವ ಚವ್ಹಾಣ

ವಿಜಯಸಾಕ್ಷಿ ಸುದ್ದಿ, ಹಾವೇರಿ

ನಮ್ಮ ಸರಕಾರ ಬಂದಾಗಲೆಲ್ಲ ಪ್ರವಾಹ, ಕೋವಿಡ್ ಸಂಕಷ್ಟ ಎದುರಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಕೋವಿಡ್ ಕಡಿಮೆ ಆಗುತ್ತಿದೆ. ರಾಜ್ಯಕ್ಕೆ ಒಳ್ಳೆಯ ದಿನಗಳು ಬರಲಿದ್ದು, ರಾಜ್ಯ ಕೊರೊನಾ ಮುಕ್ತವಾಗಲಿದೆ
ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌವಾಣ ಸಿಎಂ ರನ್ನು ಹಾಡಿಹೊಗಳಿದರು.

ಜಿಲ್ಲಾ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಬೊಮ್ಮಾಯಿ ಅವರ ಬಾಯಿಗುಣ ಚೆನ್ನಾಗಿದೆ. ಅವರು ತುಂಬ ಜಾಣರಿದ್ದಾರೆ, ಪ್ರತಿಯೊಂದಿ ವಿಷಯದ ಬಗ್ಗೆ ಅಧ್ಯಯನ ಮಾಡುತ್ತಾರೆ ಎಂದು ಹೇಳಿದರು.

ಪ್ರತಿ ಜಿಲ್ಲೆಗೆ ಅಂಬುಲೆನ್ಸ್

ನಾನು ಪಶುಸಂಗೋಪನಾ ಸಚಿವನಾದ ಬಳಿಕ ಪ್ರಾಣಿ ಕಲ್ಯಾಣ ಮಂಡಳಿ ರಚನೆ ಮಾಡಿದ್ದೇನೆ. ಪ್ರಾಣಿಗಳ ರಕ್ಷಣೆ ಬಗ್ಗೆ ಕಲ್ಯಾಣ ಮಂಡಳಿಯವರು ಕೆಲಸ ಮಾಡುತ್ತಿದ್ದಾರೆ.

ಪಶು ಸಂಜೀವಿನಿ ಅಂಬುಲೆನ್ಸ್ ವ್ಯವಸ್ಥೆ ಜಾರಿಯಾಗಿದ್ದು, ಜಾನುವಾರು ಖಾಯಿಲೆ ಬಂದರೆ
ರೈತರ ಮನೆ ಬಾಗಿಲಿಗೆ ಆಂಬುಲೆನ್ಸ್ ಬರಲಿದೆ. ಶೀಘ್ರದಲ್ಲಿ ಪ್ರತಿ ಜಿಲ್ಲೆಗೆ ಅಂಬುಲೆನ್ಸ್ ಕೊಡುತ್ತೇವೆ ಎಂದು ಹೇಳಿದರು.

ಪ್ರತಿ ಜಿಲ್ಲೆಗೊಂದು ಮಾದರಿ ಗೋಶಾಲೆ:
ಪ್ರತಿ ಜಿಲ್ಲೆಗೊಂದು ಗೋಶಾಲೆ ತೆರೆಯುವ ಆಲೋಚನೆ ಇದೆ.

ಪ್ರತಿ ಜಿಲ್ಲೆಗೆ 50-100 ಎಕರೆ ಜಾಗದಲ್ಲಿ ಮಾದರಿ ಗೋಶಾಲೆಗಳ ನಿರ್ಮಾಣ ಮಾಡಲಾಗುವುದು. ಸಿಎಂ ಜಿಲ್ಲೆಯಲ್ಲಿ ಮೊದಲ ಗೋಶಾಲೆ ಆರಂಭವಾಗಲಿದೆ ಎಂದು ಸಚಿವ ಚವ್ಹಾಣ ತಿಳಿಸಿದರು.

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಾದಾಗಿನಿಂದ ಗೋಹತ್ಯೆ ನಿಷೇಧದ ಬಗ್ಗೆ ಇಲಾಖೆ ಅಧಿಕಾರಿಗಳು ಗ್ರಾಮ ಸಭೆಗಳನ್ನು ಮಾಡಲು ಸೂಚಿಸಿದ್ದೆನೆ.

ಗೋಹತ್ಯೆ ನಿಷೇಧ ಕಾನೂನು ಬಿಗಿಯಾಗಿದೆ. ಕಸಾಯಿ ಖಾನೆ ಬಂದ್ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.

ಬಕ್ರೀದ್ ಸಮಯದಲ್ಲಿ ಎಲ್ಲ ಜಿಲ್ಲೆಗಳ ಎಸ್ಪಿಗಳ ಜೊತೆ ಚರ್ಚೆ ಮಾಡಿ 6-7 ಸಾವಿರ ಜಾನುವಾರುಗಳ ರಕ್ಷಣೆ ಮಾಡಲಾಗಿದೆ. ಪೊಲೀಸರ ಜೊತೆಗೆ ಗಡಿಗಳಲ್ಲಿ ವೈದ್ಯರನ್ನು ನಿಯೋಜನೆ ಮಾಡಲಾಗಿತ್ತು ಎಂದು ಹೇಳಿದರು.

ಪ್ರಾಣಿ ಸಹಾಯವಾಣಿ ಕೇಂದ್ರ

ದೇಶದ ಇತಿಹಾಸದಲ್ಲಿಯೇ ನಮ್ಮ ರಾಜ್ಯದಲ್ಲಿ ಮೊದಲು ಪ್ರಾಣಿ ಸಹಾಯವಾಣಿ ಕೇಂದ್ರ ಆರಂಭ ಮಾಡಿದ್ದೇವೆ.

ಒಂದೇ ತಿಂಗಳಲ್ಲಿ ಹತ್ತು ಸಾವಿರ ಕರೆಗಳು ಬಂದಿವೆ ಎಂದು ಸಚಿವ ಚವ್ಹಾಣ ಮಾಹಿತಿ ನೀಡಿದರು.
ಬಳಿಕ ಬಂಕಾಪೂರ ಗೋ ಶಾಲೆಗೆ ಭೇಟಿ ನೀಡಿ, ಅಲ್ಲಿನ ಕಾರ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.

ಟ್ರ್ಯಾಕ್ಟರ್-ಬೈಕ್ ಡಿಕ್ಕಿ: ಇಬ್ಬರ ಸಾವು

ವಿಜಯಸಾಕ್ಷಿ ಸುದ್ದಿ, ಮೈಸೂರು

ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಹುಣಸೂರು ತಾಲೂಕಿನ ಹೊನ್ನೇನಹಳ್ಳಿ ಗೇಟ್ ಬಳಿ ಇಂದು ಮುಂಜಾನೆ ಜರುಗಿದೆ.

ಮೈಲಾಂಬೂರಿನ ಮಲ್ಲೇಗೌಡರ ಪುತ್ರ ರಾಜೇಗೌಡ (55), ಕೆ.ಆರ್.ನಗರ ತಾಲೂಕು ಮಾದಹಳ್ಳಿಯ ದೊಡ್ಡಸ್ವಾಮಿ ಗೌಡರ ಪುತ್ರ ರವಿ (35) ಮೃತರು.

ಹುಣಸೂರು ಕಡೆಯಿಂದ ದ್ವಿಚಕ್ರವಾಹನದಲ್ಲಿ ಗ್ರಾಮಕ್ಕೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಜಿಎಫ್ ಗೆ ಕೊರೊನಾ ಸೋಂಕು ತಂದ ಕೇರಳ ವಿದ್ಯಾರ್ಥಿನಿಯರು!

0

ವಿಜಯಸಾಕ್ಷಿ ಸುದ್ದಿ, ಕೋಲಾರ

ಕೇರಳದಿಂದ ಬಂದಿದ್ದ 28 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತ ವಿದ್ಯಾರ್ಥಿನಿಯರನ್ನು ಕೊರೊನಾ ಕೇರ್ ಸೆಂಟರ್ ಗೆ ಶಿಫ್ಟ್ ಮಾಡಲಾಗಿದೆ.

ಕೋಲಾರ ಜಿಲ್ಲೆ ಕೆಜಿಎಫ್ ನ ಅಂಡರಸನ್ ಪೇಟೆ ಬಳಿ ಇರುವ ನೂರ್ ಅನೀಸ್ ನರ್ಸಿಂಗ್ ಕಾಲೇಜಿನಲ್ಲಿ ಸುಮಾರು 380ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಕಾಲೇಜು ಆರಂಭವಾದ ಕಾರಣ ಮೂರು ದಿನಗಳ ಹಿಂದೆ‌ ಕೇರಳದಿಂದ ಬಂದಿದ್ದ 300 ವಿದ್ಯಾರ್ಥಿನಿಯರನ್ನು ಆರ್ ಟಿಪಿಎಸ್ ಟೆಸ್ಟ್ ಗೆ ಒಳಪಡಿಸಿದಾಗ 28 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಸದ್ಯ ನೂರ್ ಅನೀಸ್ ನರ್ಸಿಂಗ್ ಕಾಲೇಜು ಮತ್ತು ಹಾಸ್ಟೆಲ್ ಸೀಲ್ ಡೌನ್ ಮಾಡಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಸುನಿಲ್ ಮಾಹಿತಿ ನೀಡಿದ್ದಾರೆ.

ಕೆಎಸ್‌ಆರ್‌ಟಿಸಿಯಲ್ಲಿ ನೌಕರಿ ಕೊಡಿಸುವುದಾಗಿ ಲಕ್ಷಾಂತರೂ ರೂ. ಪಂಗನಾಮ

ಹಿರೇನಂದಿಹಾಳ ಗ್ರಾಮದ ಈರಪ್ಪ ಹಣಮಪ್ಪ ಕಲಗುಡಿ ವಿರುದ್ಧ ಗಜೇಂದ್ರಗಡ ಠಾಣೆಯಲ್ಲಿ ದೂರು ದಾಖಲು

ವಿಜಯಸಾಕ್ಷಿ ಸುದ್ದಿ, ಗದಗ

ಕೆಎಸ್‌ಆರ್‌ಟಿಸಿಯಲ್ಲಿ ಅಸಿಸ್ಟಂಟ್ ಟ್ರಾಫಿಕ್ ಇನ್‌ಸ್ಪೆಕ್ಟರ್ ಕೆಲಸ ಕೊಡಿಸುವುದಾಗಿ ನಂಬಿಸಿ ಹಲವು ಜನರಿಂದ ಲಕ್ಷಾಂತರ ರೂಪಾಯಿ ಪಡೆದು ನೇಮಕಾತಿಯ ನಕಲಿ ಪ್ರಮಾಣ ಪತ್ರ ನೀಡಿ ವಂಚನೆ ಮಾಡಿದ ಕುರಿತು ಗಜೇಂದ್ರಗಡ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇನಂದಿಹಾಳ ಗ್ರಾಮದ ಈರಪ್ಪ ಉರ್ಫ್ ವೀರೇಶ ಹಣಮಪ್ಪ ಕಲಗುಡಿ ಆರೋಪಿಯಾಗಿದ್ದು, 7 ಜನರಿಂದ 30 ಲಕ್ಷ ರೂಪಾಯಿಗೂ ಅಧಿಕ ಹಣ ಪಡೆದು ವಂಚಿಸಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಗಜೇಂದ್ರಗಡ ತಾಲೂಕಿನ ಜಿಗೇರಿ ಗ್ರಾಮದ ಕಳಕಪ್ಪ ಈಶಪ್ಪ ಅಂಗಡಿ ಕೆಎಸ್‌ಆರ್‌ಟಿಸಿಯಲ್ಲಿ ಅಸಿಸ್ಟೆಂಟ್ ಟ್ರಾಫಿಕ್ ಇನ್‌ಸ್ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಇಲಾಖೆಯಲ್ಲಿ ನನಗೆ ಪರಿಚಿತರಿದ್ದು, ನೌಕರಿ ಮಾಡಿಸಿಕೊಡುವುದಾಗಿ ನಂಬಿಸಿ ಆರೋಪಿ ವೀರೇಶ 2019ರ ಡಿಸೆಂಬರ್ 15ರಂದು ಅಡ್ವಾನ್ಸ್ ಎಂದು 2 ಲಕ್ಷ ರೂ., 2020ರಲ್ಲಿ 6 ಲಕ್ಷ ರೂ. ಸೇರಿ ಒಟ್ಟು 8 ಲಕ್ಷ ರೂಪಾಯಿ ನಗದು ಪಡೆದುಕೊಂಡಿದ್ದಾನೆ.

ನೌಕರಿ ಬಗ್ಗೆ ಕೇಳಿದಾಗ ಲಾಕ್ಡೌನ್ ಇದ್ದು, ಇನ್ನಷ್ಟು ದಿನ ಕಾಯುವಂತೆ ತಿಳಿಸಿದ್ದಾನೆ. ಸುಮಾರು ನಾಲ್ಕು ತಿಂಗಳು ಕಳೆದ ಬಳಿಕ ಆರೋಪಿಯ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಆಗಿದೆ. ಬಳಿಕ ಗ್ರಾಮ ಹಿರೇನಂದಿಹಾಳ ಗ್ರಾಮಕ್ಕ ತೆರಳಿ ಆರೋಪಿಯ ಮನೆಗೆ ಹೋಗಿ ವಿಚಾರಿಸಿದಾಗ ಆತ ಬೆಂಗಳೂರಿಗೆ ತೆರಳಿದ್ದಾನೆ ಎಂದು ತಿಳಿಸಿದ್ದಾರೆ.

ವಂಚನೆ ಆಗಿರುವುದು ಗೊತ್ತಾಗಿ ಕಲ್ಲಪ್ಪ ಅಂಗಡಿ ಗಜೇಂದ್ರಗಡ ಠಾಣೆಗೆ ತೆರೆಳಿ ವಂಚನೆ ದೂರು ನೀಡಿದ್ದಾರೆ. ಈ ವೇಳೆ ಆರೋಪಿ ಇದೇ ರೀತಿ ಇನ್ನೂ ಆರು ಜನರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ಗಜೇಂದ್ರಗಡ ತಾಲೂಕಿನ ಕಲ್ಲಿಗನೂರು ಗ್ರಾಮದ ಪರಶುರಾಮ ಕಲ್ಲಪ್ಪ ಹೊಸೂರು ಇವರಿಂದ 2019-20ನೇ ಸಾಲಿನಲ್ಲಿ ೬ ಲಕ್ಷ ರೂ., ರೋಣ ತಾಲೂಕಿನ ಇಟಗಿ ಗ್ರಾಮದ ಸಚಿನ ಧರ್ಮಪ್ಪ ಜಡೆದಲಿ ಎಂಬುವವರಿಂದ 6 ಲಕ್ಷ ರೂ., ಇದೇ ಗ್ರಾಮದ ಶಿವಕುಮಾರ ಭೀಮಪ್ಪ ಜಡೆದಲಿ ಎಂಬುವವರಿಂದ 1 ಲಕ್ಷ ರೂ., ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗಾಣದಾಳ ಗ್ರಾಮದ ಈರಯ್ಯ ವಿರೂಪಾಕ್ಷಯ್ಯ ಅವತಾರಿ 2 ಲಕ್ಷ ರೂ. ನಗದು, 4 ಲಕ್ಷ ರೂ. ಫೋನ್ ಪೇ ಮೂಲಕ , ಗಜೇಂದ್ರಗಡ ತಾಲೂಕಿನ ದಿಂಡೂರ ಗ್ರಾಮದ ಭರಮಪ್ಪ ಹುಚ್ಚಪ್ಪ ಚೌಧರಿ ಎಂಬುವವರಿಂದ 1 ಲಕ್ಷ ರೂ.ಗಳನ್ನು ಪಡೆದುಕೊಂಡು ಬಳಿಕ ನಕಲಿ ನೇಮಕಾತಿ ಪತ್ರ ನೀಡಿ ವಂಚಿಸಿರುವುದು ಬೆಳಕಿಗೆ ಬಂದಿದೆ.

ಇವರೂ ವೀರೇಶ ಹಾಗೂ ಸಂಗಡಿಗರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

error: Content is protected !!