Home Blog Page 3319

ಬೀದಿಗಳಲ್ಲಿ ಬೀಡಾಡಿ ಜಾನುವಾರುಗಳ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ

‘ಜಾನುವಾರುಗಳಿಗೆ ಕಾಲುಬಾಯಿ ಲಸಿಕಾಕರಣ ಯಶಸ್ವಿಗೊಳಿಸಿ’

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಬೀಡಾಡಿ ಜಾನುವಾರುಗಳ ಹಾವಳಿ ಅಧಿಕವಾಗಿದ್ದು ಇದರಿಂದ ಜನಸಾಮಾನ್ಯರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಬೀಡಾಡಿ ಜಾನುವಾರುಗಳ ಮೂಲಕ ಮಾಲೀಕರು ಅವುಗಳನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದಲ್ಲಿ ನಗರಸಭೆಯಿಂದ ಬೀಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಸ್ಥಳಾಂತರಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಪಶುಸಂಗೋಪನಾ ಇಲಾಖೆಯಿಂದ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಶು ಸಂಗೋಪನಾ ಇಲಾಖೆ ಹಾಗೂ ನಗರಸಭೆಯಿಂದ ಬೀಡಾಡಿ ದನಗಳ ನಿಯಂತ್ರಣಕ್ಕಾಗಿ ಸದ್ಯದಲ್ಲಿಯೇ ಜಾನುವಾರುಗಳನ್ನು ಹಿಡಿದು ಗೋಶಾಲೆಗೆ ಸ್ಥಳಾಂತರಿಸಲು ಸೂಚಿಸಿದ ಅವರು ಮೂಲ ಮಾಲೀಕರು ಜಾನುವಾರುಗಳನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಳ್ಳಬೇಕು. ನಂತರ ಜಾನುವಾರುಗಳು ತಮ್ಮದು ಎಂದು ಬಂದಲ್ಲಿ ದಂಡಸಹಿತ ಹಾಗೂ ಜಾನುವಾರು ನಿರ್ವಹಣಾ ವೆಚ್ಚವನ್ನು ಭರಿಸಬೇಕಾಗುತ್ತದೆ. ಪದೇ ಪದೇ ಬೀದಿಗಳಲ್ಲಿ ಮಾಲೀಕರು ಜಾನುವಾರುಗಳನ್ನು ಬಿಟ್ಟಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಚರ್ಮಗಂಟು ಕಾಯಿಲೆ ಕುರಿತಂತೆ ಜಾನುವಾರುಗಳ ಮಾಲೀಕರು ತಪ್ಪದೇ ಲಸಿಕೆ ಕೊಡಬೇಕು. ಲಸಿಕೆ ವಿಳಂಬವಾದಲ್ಲಿ ಜಾನುವಾರುಗಳ ಜೀವ ಹಾನಿ ಸಂಭವಿಸಬಹುದಾಗಿದ್ದು ರೈತ ಬಾಂಧವರು ಲಸಿಕೆ ಕೊಡಿಸುವಲ್ಲಿ ವಿಳಂಬ ಮಾಡಬಾರದು. ಹಾಗೂ ಲಸಿಕೆ ನೀಡಿಕೆ ಪ್ರಕ್ರಿಯೆಯನ್ನು ಇಲಾಖಾಧಿಕಾರಿಗಳು ತೀವ್ರಗೊಳಿಸುವ ಮೂಲಕ ಎಲ್ಲ ಜಾನುವಾರುಗಳಿಗೆ ಚರ್ಮಗಂಟು ಕಾಯಿಲೆ ವಿರುದ್ಧ ಲಸಿಕೆ ನೀಡಿಕೆ ಪೂರ್ಣಗೊಳಿಸಲು ಸೂಚಿಸಿದರು.

ಪಶುಪಾಲನಾ ಇಲಾಖೆಯ ಪಾಲಿಕ್ಲಿನಿಕ್‌ನ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಪ್ರಕಾಶ ಎಸ್ ಜೆಟ್ಟಣ್ಣವರ ಅವರು ಮಾತನಾಡಿ, ರಸ್ತೆಯಲ್ಲಿ ಸಂಚರಿಸುತ್ತಿರುವ ಬೀಡಾಡಿ ದನಗಳನ್ನು ಗುರುತಿಸಿ ಗೋಶಾಲೆಗಳಿಗೆ ವರ್ಗಾಯಿಸಲಾಗಿದೆ. ಜಾನುವಾರುಗಳ ಮಾಲೀಕರುಗಳಿಗೆ ತಮ್ಮ ಜಾನುವಾರುಗಳನ್ನು ತಮ್ಮ ಸುಪರ್ದಿಯಲ್ಲಿ ತೆಗೆದುಕೊಳ್ಳಲು ಎಚ್ಚರಿಕೆ ನೀಡಲಾಗಿದೆ.

ಪಶುಪಾಲನಾ ಕಾಲೇಜಿನ ವಿದ್ಯಾರ್ಥಿಗಳನ್ನು ಬಳಸಿಕೊಂಡು ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ನೀಡಲಾಗುತ್ತಿದೆ. ಅಪಘಾತಕ್ಕೊಳ್ಳಗಾಗಿರುವ ಹಾಗೂ ಗಾಯಗೊಂಡಿರುವ ಜಾನುವಾರುಗಳಿಗೆ ಪ್ರಥಮ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ನೀಡಿ ಗುಣಮುಖಗೊಳಿಸಿ ಗೋಶಾಲೆಗಳಿಗೆ ಹಾಗೂ ಪ್ರಾಣಿ ಸಂಗ್ರಹಾಲಯಗಳಿಗೆ ಬಿಡಲಾಗಿದೆ ಎಂದು ತಿಳಿಸಿದರು.

ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಎಚ್.ಬಿ. ಹುಲಗಣ್ಣವರ ಅವರು ಮಾತನಾಡಿ, ಜಿಲ್ಲೆಯಲ್ಲಿ 136311 ದನ, 55798 ಎಮ್ಮೆ, 14552 ಹಂದಿ ಸೇರಿದಂತೆ ಒಟ್ಟಾರೆ 2,06,661 ಜಾನುವಾರುಗಳಿಗೆ ೩ನೇ ಸುತ್ತಿನ ಕಾಲುಬಾಯಿ ರೋಗ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.

ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ ಧಾರವಾಡ ಇವರಿಂದ ಲಸಿಕೆಯನ್ನು ಸರಬರಾಜು ಮಾಡಲು ಶೀತಲೀಕರಣ ವಾಹನದ ಸೌಲಭ್ಯವನ್ನು ಪಡೆಯಲಾಗುವುದು ಎಂದು ಸಭೆಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಕೈಪಿಡಿ ಹಾಗೂ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಪಶು ಪಾಲನಾ ಇಲಾಖೆಯ ಉಪನಿರ್ದೇಶಕರಾದ ಡಾ. ಎಸ್.ಎಸ್.ಪಾಟೀಲ, ತಾಲೂಕಾ ಸಹಾಯಕ ನಿರ್ದೇಶಕರುಗಳಾದ ಡಿ.ಬಿ. ಹಕ್ಕಾಪಕ್ಕಿ, ಎನ್.ಎ. ಹವಳದ, ಬಾಬಾಜಾನ್ ಕುರಹಟ್ಟಿ, ವೆಂಕಟೇಶ, ಬಿ.ಎಸ್. ಅಂಗಡಿ ಪಶುಪಾಲನಾ ಮುಖ್ಯ ವೈದ್ಯಾಧಿಕಾರಿ ಡಾ. ತಿಪ್ಪಣ್ಣ ತಳಕಲ್ ಹಾಜರಿದ್ದರು.

ಜಾನುವಾರುಗಳಿಗೆ ೩ನೇ ಸುತ್ತಿನ ಕಾಲುಬಾಯಿ ರೋಗ ಲಸಿಕೆ ಕುರಿತು ವಲಯವಾರು ಜಾನುವಾರುಗಳ ಆಯ್ಕೆ ಮಾಡಿ ಲಸಿಕೆ ಕೊಡಬೇಕು. ಜಾನುವಾರುಗಳಿಗೆ ಲಸಿಕೆ ಹಾಕುವ ಕುರಿತು ರೈತರಲ್ಲಿ ಹಾಗೂ ಜಾನುವಾರುಗಳ ಮಾಲೀಕರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು.

-ವೈಶಾಲಿ ಎಂ.ಎಲ್., ಜಿಲ್ಲಾಧಿಕಾರಿ

೩ನೇ ಸುತ್ತಿನ ಕಾಲುಬಾಯಿ ರೋಗ ಲಸಿಕೆ ಅಭಿಯಾನವನ್ನು ನವೆಂಬರ್ ೭ ರಿಂದ ಒಂದು ತಿಂಗಳ ಅವಧಿಯಲ್ಲಿ ಅಭಿಯಾನ ಏರ್ಪಡಿಸಲಾಗಿದೆ. ಅಭಿಯಾನ ಯಶಸ್ಸಿಗೆ ಇಲಾಖಾಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಜೊತೆಗೆ ರೈತರು ತಮ್ಮ ಜಾನುವಾರುಗಳಿಗೆ ತಪ್ಪದೇ ಲಸಿಕಾಕರಣ ಮಾಡಿಸುವ ಮೂಲಕ ಕಾಲುಬಾಯಿ ರೋಗದಿಂದ ಜಾನುವಾರುಗಳನ್ನು ಸಂರಕ್ಷಿಸಿಕೊಳ್ಳಬೇಕು.

-ಡಾ.ಸುಶೀಲಾ ಬಿ., ಜಿಲ್ಲಾ ಪಂಚಾಯತ್ ಸಿಇಒ

ಸಂಗಮ್ಮ ಗುರಿಕಾರ ನಿಧನ

0

ಗದಗ: ಕನ್ನಡಪ್ರಭ ಛಾಯಾಗ್ರಾಹಕ ಶಂಕರ ಗುರಿಕಾರ ಅವರ ತಾಯಿ ಸಂಗಮ್ಮ ಯಮನಪ್ಪ ಗುರಿಕಾರ (76) ಗದಗ ನಗರದ ಅವರ ನಿವಾಸದಲ್ಲಿ ಮಂಗಳವಾರ ನಿಧನರಾದರು.

ಅಂತ್ಯ ಸಂಸ್ಕಾರ ಅವರ‌ ಸ್ವಂತ ಊರಾದ ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರ ಗ್ರಾಮದಲ್ಲಿ ದಿ.26-10-2022ರ ಬುಧವಾರ ಬೆಳಗ್ಗೆ ನೆರವೇರಲಿದೆ. ಮೃತರಿಗೆ 4 ಜನ ಹೆಣ್ಣು ಮಕ್ಕಳು, 5 ಜನ ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮೊಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಹೊಂದಿದ್ದರು.

ಸಂತಾಪ: ಸಂಗಮ್ಮ ಅವರ ನಿಧನಕ್ಕೆ ಕನ್ನಡಪ್ರಭ ಸಂಪಾದಕರು, ವರದಿಗಾರರು ಹಾಗೂ ಕರ್ನಾಟಕ ಕಾರ್ಯ‌ ನಿರತ ಪತ್ರಕರ್ತರ ಸಂಘದ ಗದಗ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.

ಪಡಿತರ ಅಕ್ಕಿ ಸಾಗಾಟ; ಓರ್ವನ ಬಂಧನ

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಾರ್ವಜನಿಕರ ಆರೋಪ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸಿ ವಾಹನ ಸಮೇತ ೨೨ ಕ್ವಿಂಟಲ್ ಅಕ್ಕಿ ವಶಪಡಿಸಿಕೊಂಡ ಘಟನೆ ಸೋಮವಾರ ನಡೆದಿದೆ. ಈ ಕುರಿತು ಆಹಾರ ಇಲಾಖೆ ಅಧಿಕಾರಿ ಜಗದೀಶ ಕುರುಬರ ಅವರು ಲಕ್ಷ್ಮೇಶ್ವರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ವಿವರ

ಪಟ್ಟಣದ ಪ್ರಕಾಶ ಎಂ ಕಡ್ಡಿಯವರ ಎಂಬ ಆರೋಪಿತ ಬೋಲೇರೋ ವಾಹನ(ಕೆಎ-26ಬಿ-4123)ದಲ್ಲಿ ಪಡಿತರ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ೨೪೦೯೦ ರೂ ಮೌಲ್ಯದ ೧೦೯೫ ಕೆಜಿ (೨೨ ಪ್ಲಾಸ್ಟಿಕ್ ಚೀಲ) ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ತಡೆಹಿಡಿದಿದ್ದಾರೆ. ಓರ್ವ ವ್ಯಕ್ತಿ, ವಾಹನ ಸಮೇತ ಅಕ್ಕಿಯನ್ನು ಪೊಲೀಸ್ ವಶಕ್ಕೆ ಒಪ್ಪಿಸಿ ಪ್ರಕರಣ ದಾಖಲಿಸಿದ್ದಾರೆ.

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ?

ಲಕ್ಷ್ಮೇಶ್ವರವನ್ನೇ ಕೇಂದ್ರವಾಗಿಸಿಕೊಂಡು ತಾಲೂಕಿನಲ್ಲಿ ಹಲವಾರು ವರ್ಷದಿಂದ ದೊಡ್ಡ ಪ್ರಮಾಣದಲ್ಲಿ ಪಡಿತರ ಅಕ್ಕಿ ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಕಳೆದ ಕೆಲ ದಿನಗಳಿಂದ ಅಕ್ಕಿ ಮಾರಾಟ ದಂಧೆಯ ಬಗ್ಗೆ ಪದೇ ಪದೇ ಆರೋಪ, ಆಕ್ಷೇಪಣೆಗಳು ಕೇಳಿ ಬರುತ್ತಿರುವ ಹಿನ್ನೆಲೆ ಎಚ್ಚೆತ್ತ ಅಧಿಕಾರಿಗಳು ಸಣ್ಣ ಪ್ರಮಾಣದ ಅಕ್ಕಿ ದಂಧೆ ವ್ಯಾಪಾರಿಯನ್ನು ಬಲೆಗೆ ಕೆಡವಿ ಉತ್ತರನ ಪೌರುಷ ಮೆರೆದಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಶಿಗ್ಲಿ ಗ್ರಾಮ ಪಂಚಾಯತಿಯಲ್ಲಿ ಅವ್ಯವಹಾರ ಆರೋಪ; ನ್ಯಾಯ ದೊರಕಿಸದಿದ್ದರೆ ತಾ.ಪಂ ಕಚೇರಿಗೆ ಬೀಗ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ತಾಲೂಕಿನ ಶಿಗ್ಲಿ ಗ್ರಾಮ ಪಂಚಾಯತಿಯಲ್ಲಿ ನಡೆದ ಅವ್ಯವಹಾರದಲ್ಲಿ ಪಾಲ್ಗೊಂಡ ಗ್ರಾಪಂ ಅಧ್ಯಕ್ಷ, ಪಿಡಿಓ ಮತ್ತು ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಲ್ಲಿನ ತಾಪಂ ಕಾರ್ಯಾಲಯದ ಮುಂದೆ ಹೂಡಿರುವ ಅಮರಣಾಂತ ಸತ್ಯಾಗ್ರಹಕ್ಕೆ ಗುರುವಾರ ತಾಲೂಕಿನ ಪ್ರವೀಣಶೆಟ್ಟಿ ಬಣದ ಕರವೇ ಕಾರ್ಯಕರ್ತರು ಬೆಂಬಲ ಸೂಚಿಸಿದ್ದಾರೆ.

ಕೂಡಲೇ ನ್ಯಾಯ ದೊರಕಿಸಬೇಕು, ಇಲ್ಲದಿದ್ದರೆ ಶುಕ್ರವಾರ ತಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿ ಗ್ರೇಡ್-೨ ತಹಸೀಲ್ದಾರ್ ಜೆ. ನಟರಾಜ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಪತ್ರದಲ್ಲಿ ಶಿಗ್ಲಿ ಗ್ರಾಪಂ ಕಾಮಗಾರಿಗಳಲ್ಲಿ ಅವ್ಯವಹಾರವಾಗಿರುವ ಬಗ್ಗೆ ಒಂಬುಡ್ಸ್ಮನ್ ನ್ಯಾಯಾಲಯ ಗದಗ ಇವರು ಕ್ರಮಕ್ಕೆ ಆದೇಶಿಸಿದ್ದಾರೆ. ನರೇಗಾ ಸೇರಿ ಅಭಿವೃದ್ಧಿ ಕಾಮಗಾರಿಗಳಲ್ಲಿ ಭ್ರಷ್ಟಾಚಾರವಾಗಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದಾಗ್ಯೂ ಹಿರಿಯ ಅಧಿಕಾರಿಗಳು ಮೀನಾಮೇಷ ಮಾಡುತ್ತಿದ್ದಾರೆ.

ಇದನ್ನೇ ಬಂಡವಾಳವಾಗಿಸಿಕೊಂಡಿರುವ ಆಪಾದಿತರು ರಾಜಾರೋಷವಾಗಿ ಅಧಿಕಾರದ ಮದದಲ್ಲಿ ಮೆರೆಯುತ್ತಿದ್ದಾರೆ. ಆದ್ದರಿಂದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಹೋರಾಟಗಾರರ ಬೇಡಿಕೆಗಳಿಗೆ ತಮ್ಮ ಸಂಘಟನೆಯ ಸಂಪೂರ್ಣ ಬೆಂಬಲವಿದೆ. ಹೋರಾಟಕ್ಕೆ ನೈತಿಕ ಬಲ ತುಂಬುವ ಉದ್ದೇಶದಿಂದ ಕರವೇ ಕಾರ್ಯಕರ್ತರು ಶುಕ್ರವಾರ ಅವರ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸುತ್ತೇವೆ.

ಅವರ ನ್ಯಾಯಸಮ್ಮತವಾದ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ನೀಡಿ ಅವರ ಹೋರಾಟಕ್ಕೆ ನಾವು ಕೂಡಾ ಜೊತೆಯಾಗಲಿದ್ದೇವೆ. ಇಂದೇ ಅಧಿಕಾರಿಗಳು ಬಂದು ಭೇಟಿ ಕೊಡದಿದ್ದಲ್ಲಿ ಶುಕ್ರವಾರ ತಾಲೂಕ ಪಂಚಾಯತಗೆ ಬೀಗ ಹಾಕಿ ಪ್ರತಿಭಟನೆ ಮಾಡುಲಾಗುವುದು ಎಂದು ಕರವೇ ಪ್ರವೀಣ ಶೆಟ್ಟಿ ಬಣದ ತಾಲೂಕ ಅಧ್ಯಕ್ಷ ಮಹೇಶ ಕಲಘಟಗಿ ಹೇಳಿದರು.

ಗ್ರೇಡ್ ೨ ತಹಸೀಲ್ದಾರ ಜೆ ನಟರಾಜ ಅವರು ಮನವಿ ಸ್ವಿಕರಿಸಿದರು. ಈ ಸಂದರ್ಭದಲ್ಲಿ ಮಂಜುನಾಥ ಗಾಂಜಿ, ಚಂದ್ರು ಮುಳಗುಂದ, ತೇಜಗೌಡ ಉದ್ದನಗೌಡ್ರ, ಮಂಜುನಾಥ ಬೂದಿಹಾಳ, ಮಲ್ಲು ಅಳ್ಳಳ್ಳಿ, ಆಕಾಶ ದಾನಿ,ಪ್ರಕಾಶ ಮನ್ನಂಗಿ, ಕಾರ್ಯಕರ್ತರು ಉಪಸ್ಥಿತರಿದ್ದರು. ಗ್ರಾಪಂ ಸದಸ್ಯ ಸುರೇಶ ಸಾಧ್ವಿ ನೇತೃತ್ವದಲ್ಲಿ ಸಂತೋಷ ಮಾದನಹಳ್ಳಿ, ಪ್ರಶಾಂತ ಬಡೆಪ್ಪನವರ, ಅಮಾತೆಪ್ಪ ಹರವಿ, ಫಕ್ಕಿರೇಶ ಕುರಿ ಮುಂತಾದವರಿದ್ದರು.

ಹಲಾಲ್ ವಸ್ತುಗಳ ಮಾರಾಟ ಮಾಡದಿರಲು ಒತ್ತಾಯ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ದೇಶದ ಎಲ್ಲೆಡೆ ಹಿಂದೂ ಗ್ರಾಹಕರಿಗೆ ಒತ್ತಾಯದಿಂದ ಹಲಾಲ್ ವಸ್ತುಗಳನ್ನು ಮಾರಾಟ ಮಾಡುವಂತಾಗಬಾರದು ಮತ್ತು ಹಿಂದೂ ಸಮಾಜಕ್ಕಾಗಿ ಹಲಾಲ್ ರಹಿತ ವಸ್ತುಗಳನ್ನು ಒದಗಿಸಬೇಕು ಹಾಗೂ ಹಲಾಲ್ ಪ್ರಮಾಣಪತ್ರ ನಿಷೇಧಿಸುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಗುರುವಾರ ತಹಸೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ ಸದ್ಯ ಭಾರತೀಯ ಮುಸಲ್ಮಾನರಿಂದ ಪ್ರತಿಯೊಂದು ಪದಾರ್ಥ, ವಸ್ತು ಇಸ್ಲಾಂಗನುಸಾರ ಅರ್ಥಾತ್ ಹಲಾಲ್ ಇರಬೇಕೆಂದು ಬೇಡಿಕೆಯಾಗುತ್ತಿದೆ. ಈ ಬೇಡಿಕೆಯು ಕೇವಲ ಮಾಂಸಕ್ಕಾಗಿ ಸೀಮಿತವಾಗಿರದೇ ಧಾನ್ಯ, ಹಣ್ಣು, ಸೌಂದರ್ಯ ಪ್ರಸಾಧನಗಳು, ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂತರ್ಗತ ಆಹಾರ ಸುರಕ್ಷೆ ಮತ್ತು ಗುಣಮಟ್ಟದ ಪ್ರಾಧಿಕಾರ ಹಾಗೂ ಪ್ರತಿಯೊಂದು ರಾಜ್ಯದಲ್ಲಿ ಸ್ವತಂತ್ರವಾದಂತಹ ಆಹಾರ ಮತ್ತು ಔಷಧಿ ಆಡಳಿತ ವಿಭಾಗ ಅಸ್ತಿತ್ವದಲ್ಲಿರುವಾಗ ಇದನ್ನು ಮುಸಲ್ಮಾನ ಸಂಘಟನೆಗಳಿಂದ ನೀಡಲಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಜಾತ್ಯತೀತ ಭಾರತದಲ್ಲಿ ಧಾರ್ಮಿಕ ಆಧಾರದಲ್ಲಿ ಸರ್ಟಿಫಿಕೇಶನ್ ಇದು ಕಾನೂನುಬಾಹಿರವಾಗಿದೆ. ಒತ್ತಾಯಪೂರ್ವಕ ಹಲಾಲ್ ಪದಾರ್ಥಗಳನ್ನು ತಿನ್ನಿಸಿ ನೀವು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ್ದಲ್ಲದೆ ಹಿಂದೂ ವ್ಯಾಪಾರಿಗಳಿಗೂ ಕಡ್ಡಾಯ ಮಾಡಲಾಗುತ್ತಿದೆ.

ಹಲಾಲ್ ಪ್ರಮಾಣಪತ್ರದ ಹೆಸರಿನಲ್ಲಿ ದೇಶಾದ್ಯಂತ ಹಿಂದೂ ವ್ಯಾಪಾರಿಗಳಿಂದ ಸಾವಿರಾರು ಕೋಟಿ ರೂ. ಲೂಟಿ ಮಾಡಲಾಗುತ್ತಿದೆ. ಹೀಗಾಗಿ ಇದು ಕೇವಲ ಧರ್ಮಕ್ಕೆ ಸಂಬಂಧಿಸಿರದೇ ಇಸ್ಲಾಮಿ ಆರ್ಥಿಕ ವ್ಯವಸ್ಥೆಯಾಗುತ್ತಿದೆ. ಇದರ ಮೂಲಕ ಸಂಗ್ರಹವಾಗುತ್ತಿರುವ ಹಣ ಭಯೋತ್ಪಾದನಾ ಚಟುವಟಿಕೆಗಳಿಗೆ ಉಪಯೋಗ ಮಾಡಲಾಗುತ್ತಿದೆ. ಇದು ಹಿಂದೂಗಳ ಮೇಲೆ ಮಾಡಿದ ಜಿಜಿಯಾ ತಲೆದಂಡವಾಗಿದೆ.

ಹೀಗಾಗಿ ಸಂವಿಧಾನ ವಿರೋಧಿಯಾಗಿರುವ ಹಲಾಲ್ ಪ್ರಮಾಣ ಪತ್ರವನ್ನು ಕೇಂದ್ರ ಸರ್ಕಾರ ಕೂಡಲೇ ನಿಷೇಧಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು. ಈ ವೇಳೆ ಅರುಣ ಮೆಕ್ಕಿ, ವೀರಣ್ಣ ಮೆಣಸಿನಕಾಯಿ, ವೀರೇಶ ಚಿಂಚಲಿ, ಅಮೀತ್ ಗುಡಗೇರಿ, ಬಸವನಗೌಡ ಪಾಟೀಲ್, ಶಂಕರ ಕುಂಬಾರ, ಪ್ರವೀಣ ಬನ್ನಿಕೊಪ್ಪ, ನಾಗಪ್ಪ ಓಂಕಾರಿ, ಯಲ್ಲಪ್ಪಗೌಡ ಪಾಟೀಲ್, ದುಂಡಪ್ಪ ಸವಣೂರ, ಸೇರಿದಂತೆ ಅನೇಕರು ಹಾಜರಿದ್ದರು.
.

ಎಮ್ಮೆಗೆ ಡಿಕ್ಕಿ ಹೊಡೆದ ಸಾರಿಗೆ ಬಸ್

ವಿಜಯಸಾಕ್ಷಿ ಸುದ್ದಿ, ನರಗುಂದ

ಸಾರಿಗೆ ಇಲಾಖೆಯ ಬಸ್ಸೊಂದು ಎಮ್ಮೆಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಎಮ್ಮೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನರಗುಂದ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

ಬಸ್ ಅಡಿಯಲ್ಲಿ ಸಿಲುಕಿದ ಎಮ್ಮೆಯನ್ನು ಸಾರ್ವಜನಿಕರು ಪ್ರಯಾಸದಿಂದ ರಕ್ಷಿಸಿದ್ದಾರೆ. ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ಸಾರಿಗೆ ಇಲಾಖೆಯ ಬಸ್ ಬಾಗಲಕೋಟದಿಂದ ಹುಬ್ಬಳ್ಳಿಗೆ ಹೊರಟಿತ್ತು.

ಈ ವೇಳೆ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಎಮ್ಮೆಗೆ ಬಸ್ ಡಿಕ್ಕಿ ಹೊಡೆದಿದೆ. ನರಗುಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಈ ಅಪಘಾತದಲ್ಲಿ ಗಾಯಗೊಂಡ ಎಮ್ಮೆಯನ್ನು ಬಸ್ಸಿನ ಅಡಿಯಿಂದ ಹೊರತೆಗೆದು ಸಾರ್ವಜನಿಕರು ಮಾನವೀಯತೆ ಮೆರೆದಿದ್ದಾರೆ.

ನೋಡ ನೋಡುತ್ತಲೇ ಧರೆಗುರುಳಿದ ಮನೆ

ವಿಜಯಸಾಕ್ಷಿ ಸುದ್ದಿ, ಗದಗ

ನಿರಂತರ ಮಳೆಯಿಂದಾಗಿ ಮನೆಯೊಂದು ಕಣ್ಣೆದುರೇ ಧರೆಗುರುಳಿರುವ ದಾರುಣ ಘಟನೆ ಗದಗ ತಾಲೂಕಿನ ಅಂತೂರ-ಬೆಂತೂರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರಾಮಪ್ಪ ಪೂಜಾರ ಎಂಬುವರಿಗೆ ಸೇರಿದ ಮನೆ ಕುಸಿತವಾಗಿದ್ದು, ಅಂತೂರ-ಬೆಂತೂರನ ಶಂಭುಲಿಂಗೇಶ್ವರ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.

ಮನೆ ಕುಸಿಯುವ ವೇಳೆ ಅಡುಗೆ ಮನೆಯಲ್ಲಿದ್ದ ಚನ್ನವ್ವ ಪೂಜಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಉಳಿದ ಭಾಗ ದಿಢೀರ್ ಕುಸಿತ ಕಂಡಿದೆ. ತಕ್ಷಣ ಮನೆಯಲ್ಲಿದ್ದ ನಾಲ್ಕೂ ಜನ ಕುಟುಂಬಸ್ಥರು ಹೊರಗೆ ಓಡಿ ಬಂದಿದ್ದಾರೆ. ಇನ್ನು, ಮನೆ ಕುಸಿತದಿಂದ ಭಯಗೊಂಡು ನಿತ್ರಾಣಳಾಗಿದ್ದ ಚನ್ನವ್ವಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮನೆಯಲ್ಲಿನ ಗೃಹೋಪಯೋಗಿ ವಸ್ತುಗಳು ಸಂಪೂರ್ಣ ನಾಶವಾಗಿವೆ. ನಿತ್ಯ ಬದುಕಿಗೆ ಆಸರೆಯಾಗಿದ್ದ ಮನೆಯನ್ನು ಕಳೆದುಕೊಂಡ ಬಡಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಮನೆ ಕುಸಿಯುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ ಜಾರಿ ಮಾಡಲು ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ

ಕರ್ನಾಟಕ ರಾಜ್ಯ ನಿವೃತ್ತ ಅಂಗನವಾಡಿ ನೌಕರರ ಸಂಘ ಸಿಐಟಿಯು ಗದಗ ಜಿಲ್ಲೆ ಎಲ್ಲಾ ತಾಲೂಕ ಸಮಿತಿಗಳ ವತಿಯಿಂದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನ್ವಯ ಅಂಗನವಾಡಿ ಕಾರ್ಯಕರ್ತರಿಗೆ, ಸಹಾಯಕಿಯರಿಗೆ ಗ್ರಾಚ್ಯುಟಿ ಜಾರಿ ಮಾಡಲು ಮಾನ್ಯ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗದಗ ಇವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮನವಿ ಸಲ್ಲಿಸಿ ಮಾತನಾಡಿದ ಸಿಐಟಿಯು ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸುಮಾರು 45ವರ್ಷಗಳಿಂದ ಅತಿ ಕನಿಷ್ಠ ಕೂಲಿಗೆ ಕೆಲಸ ಮಾಡುತ್ತ ಬಂದಿದ್ದಾರೆ. ಇವರಿಗೆ ಕನಿಷ್ಠ ವೇತನವಾಗಲಿ ಅಥವಾ ಸಾಮಾಜಿಕ ಭದ್ರತಾ ಯೋಜನೆ ಕಾಯಂ ಪಿಂಚಣಿಯನ್ನಾಗಲಿ ಇಲ್ಲಿಯವರೆಗೆ ಆಡಳಿತ ನಡೆಸಿರುವ ಯಾವ ಪಕ್ಷವೂ ಜಾರಿ ಮಾಡಿಲ್ಲ.

ಸಮಾಜದ ಅಭಿವೃದ್ಧಿಗೆ ಐಸಿಡಿಎಸ್ ಕೆಲಸ ಅಲ್ಲದೇ ಇತರೆ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತ ಬಂದಿದ್ದಾರೆ. ಕಳೆದ ಏಪ್ರಿಲ್ 25, 2022 ರಂದು ಸರ್ವೋಚ್ಚ ನ್ಯಾಯಾಲಯವು ಅಂಗನವಾಡಿ ಸಹಾಯಕಿಯರಿಗೆ ಗ್ರಾಚ್ಯುಟಿ ನೀಡಬೇಕು ಎಂದು ಐತಿಹಾಸಿಕ ತೀರ್ಪು ನೀಡಿದೆ.

ಈ ತೀರ್ಪಿನ ಅನ್ವಯ ರಾಜ್ಯ ಮತ್ತು ಕೇಂದ್ರ ಸರ್ಕಾರ ರೋಣ ತಾಲೂಕಿನ ಎಲ್ಲಾ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರಿಗೆ ಗ್ರಾಚ್ಯುಟಿ ಜಾರಿ ಮಾಡಲು ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಖಾಂತರ ನಮ್ಮ ಇಲಾಖೆಯ ನಿರ್ದೇಶಕರಿಗೆ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನಮ್ಮ ಬೇಡಿಕೆಯನ್ನು ಕಳಿಸಿಕೊಡಬೇಕೆಂದು ಕರ್ನಾಟಕ ರಾಜ್ಯ ನಿವೃತ್ತ ಅಂಗನವಾಡಿ ನೌಕರರ ಸಂಘ ಸಿಐಟಿಯು ತಾಲೂಕ ಸಮಿತಿ ಗದಗ ಹಾಗೂ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ಜಿಲ್ಲಾ ಸಮಿತಿಗಳು ಈ ಮೂಲಕ ಮನವಿ ಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಮಾರುತಿ ಚಿಟಗಿ, ಅಂಗನವಾಡಿ ನಿವೃತ್ತ ನೌಕರರ ಸಂಘದ ಗಿರಿಜಾ ಮಮ್ಮಿಗಟ್ಟಿ, ಗಿರಿಜಾ ಹೂಗಾರ, ಹನಮವ್ವ ದಾಸರ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಸಾವಿತ್ರಿ ಸಬನೀಸ, ಪ್ರಧಾನ ಕಾರ್ಯದರ್ಶಿ ವಿಜಯಾ ಪಾಟೀಲ, ಖಜಾಂಚಿ ಶಂಕ್ರಮ್ಮ ಕೋಳಿವಾಡ, ಅಂಗನವಾಡಿ ನೌಕರರಾದ ದುಂಡಮ್ಮ ಬಳಿಗಾರ, ಗಂಗಮ್ಮ ಹೂಗಾರ, ರೇಣುಕಾ ಕಳಕಣ್ಣವರ, ದೇವಕ್ಕ ಮಾಮುನಿ, ಸುಮಿತ್ರಾ ಹಕಾರಿ, ಶಕುಂತಲಾ ಮುಧೋಳ, ಕಾಳಮ್ಮ ಪಂಚಾಳ, ಗೀತಾ ಶಾನಭೋಗ, ಗಂಗಮ್ಮ ದ್ಯಾವರೆಡ್ಡಿ, ಚಂದ್ರಕಲಾ ಶಳಕೆ, ರೇಣುಕಾ ಹಡಪದ, ಸುಮಿತ್ರಾ ಕಮ್ಮಾರ, ಶಕೀನಾ ನದಾಫ್, ದೇವಕ್ಕ ರಾಠೋಡ, ಕಮಲಾ ಬಡಿಗೇರ, ಗಿರಿಜಾ ಮಾಚಕನೂರ, ಶಾರದಾ ರೋಣದ, ಲಕ್ಷ್ಮಿ ಗಾಯಕವಾಡ, ನೀಲಮ್ಮ ದಾಸರ, ಸುಶೀಲಾ ಚಲವಾದಿ, ಕಮಲಾಕ್ಷಿ ಬೀಳಗಿ, ನಾಗರತ್ನ ಲಕ್ಕ್ಕುಂಡಿ ಉಪಸ್ಥಿತರಿದ್ದರು.

ಹೆಸರು ಬೆಳೆ ಖರೀದಿ ಕೇಂದ್ರ ಬಂದ್; ರೈತರ ಆಕ್ರೋಶ

0

ವಿಜಯಸಾಕ್ಷಿ ಸುದ್ದಿ, ರೋಣ

ಪಟ್ಟಣದ ಎಪಿಎಂಸಿಯಲ್ಲಿ ಹೆಸರು ಬೆಳೆ ಖರೀದಿ ಕೇಂದ್ರ ಹಠಾತ್ ಬಂದಾಗಿದ್ದರಿಂದ ಆಕ್ರೋಶಗೊಂಡ ರೈತರು ಹತ್ತಾರು ಟ್ರ್ಯಾಕ್ಟರ್‌ಗಳೊಂದಿಗೆ ಮಂಗಳವಾರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದರು.

ಸರಕಾರದ ಆದೇಶದಂತೆ ಬೆಂಬಲ ಬೆಲೆ ಅಡಿಯಲ್ಲಿ ಹೆಸರು ಬೆಳೆ ಖರೀದಿಸಲು ಪಟ್ಟಣದ ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರವನ್ನು ತೆರೆಯಲಾಗಿದ್ದು ರೈತರಿಗೆ ಮುನ್ಸೂಚನೆ ನೀಡದೆ ಬಂದ್ ಮಾಡಿದ್ದರಿಂದ ನಾನಾ ಗ್ರಾಮಗಳಿಂದ ಬಂದ ನೂರಾರು ರೈತರು ತೊಂದರೆ ಅನುಭವಿಸುವಂತಾಯಿತು.

ಅಲ್ಲದೆ ರಾತ್ರಿ ಪೂರಾ ಖರೀದಿ ಕೇಂದ್ರದಲ್ಲಿ ಕಳೆದರೂ ಏನನ್ನೂ ಹೇಳದೆ ಇದ್ದಕ್ಕಿದ್ದಂತೆ ಖರೀದಿ ಕೇಂದ್ರವನ್ನು ಬಂದ್ ಮಾಡಿದ್ದು ಯಾಕೆ ಎಂಬುದು ರೈತರ ಪ್ರಶ್ನೆಯಾಗಿದೆ. ಈ ಸಂದರ್ಭದಲ್ಲಿ ಮಹಾಂತಯ್ಯ ಭಿಕ್ಷಾವತಿಮಠ ಮಾತನಾಡಿ, ತಾಲೂಕಿನ ಯಾಸ ಹಡಗಲಿ, ಮಾಡಲಗೇರಿ, ಹಿರೇಹಾಳ, ಗುಳಗುಳಿ ಸೇರಿದಂತೆ ಹತ್ತಾರು ಗ್ರಾಮಗಳ ರೈತರು ಖರೀದಿ ಕೇಂದ್ರಕ್ಕೆ ಹೆಸರು ಬೆಳೆಯನ್ನು ತಂದಿದ್ದಾರೆ. ಅಲ್ಲದೆ ಸೋಮವಾರವೇ ಖರೀದಿ ಕೇಂದ್ರಕ್ಕೆ ರೈತರು ಬಂದಿದ್ದು, ಇಲ್ಲಿಯವರೆಗೆ ಖರೀದಿ ಕೇಂದ್ರದವರು ಸುಮ್ಮನಿದ್ದು ಈಗ ಕೇಂದ್ರ ಬಂದಾಗಿದೆ ವಾಪಸ್ಸು ಹೋಗಿ ಎಂದರೆ ರೈತರು ಏನು ಮಾಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೀರನಗೌಡ ಭೀಮನಗೌಡರ ಮಾತನಾಡಿ, ಸತತ ಮಳೆಯಿಂದ ರೈತರು ಕಂಗೆಟ್ಟು ಹೋಗಿದ್ದಾರೆ. ಅಳಿದು ಉಳಿದ ಬೆಳೆಯನ್ನು ಬೆಂಬಲ ಬೆಲೆ ಯೋಜನೆಯಲ್ಲಿ ಮಾರಾಟ ಮಾಡಲು ಬಂದರೆ ಖರೀದಿ ಕೇಂದ್ರದವರು ಇಲ್ಲ ಸಲ್ಲದ ನೆಪಗಳನ್ನು ಹೇಳುವ ಮೂಲಕ ರೈತರಿಗೆ ತೊಂದರೆ ಕೊಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಹೆಸರು ಬೆಳೆಯನ್ನು ಖರೀದಿ ಮಾಡುವವರೆಗೂ ನಾವು ತಹಸೀಲ್ದಾರ್ ಕಚೇರಿ ಬಿಟ್ಟು ತೆರಳುವುದಿಲ್ಲ ಎಂದು ಪಟ್ಟು ಹಿಡಿದರು.

ಹತ್ತಾರು ಟ್ರ್ಯಾಕ್ಟರ್‌ಗಳೊಂದಿಗೆ ಕಚೇರಿಗೆ ಮುತ್ತಿಗೆ ಹಾಕಿದ ರೈತರನ್ನು ಪೊಲೀಸರು ಮನವೊಲಿಸುವ ಪ್ರಯತ್ನ ಮಾಡಿದರಾದರೂ ಅದು ಯಶಸ್ವಿಯಾಗಲಿಲ್ಲ. ಅಲ್ಲದೆ ಕಚೇರಿಯ ಬಾಗಿಲಿಗೆ ಹೊಂದಿಕೊಂಡು ನಿಲ್ಲಿಸಲಾಗಿರುವ ಟ್ರ್ಯಾಕ್ಟರ್‌ಗಳನ್ನು ಬೇರೆ ಕಡೆಗೆ ನಿಲ್ಲಿಸಿ ಎಂದು ರೈತರ ಬಳಿ ನಿವೇದಿಸಿಕೊಂಡರು. ರೈತರು ನಾವು ಇಡೀ ರಾತ್ರಿ ಸೊಳ್ಳೆ ಕಡಿಸಿಕೊಂಡು ನಿದ್ದೆಯಿಲ್ಲದೆ ಆವರಣದಲ್ಲಿ ಕುಳಿತಿದ್ದೇವೆ. ನಮ್ಮ ಸ್ಥಿತಿಯನ್ನು ಸ್ವಲ್ಪ ನೋಡಿ ಎಂದು ರೈತರು ಪೊಲೀಸರ ಎದುರು ತಮ್ಮ ಅಳಲನ್ನು ತೋಡಿಕೊಂಡರು.


ಶಂಕ್ರಪ್ಪ ಹುಗ್ಗಿ, ಶಶಿಕಲಾ ದೋಣಿ, ಬಸನಗೌಡ ಬಾಲನಗೌಡ, ಸಂಗಪ್ಪ ಗಾಣಿಗೇರ, ಕಾಳವ್ವ ಖ್ಯಾತನಗೌಡ್ರ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಅತಿಯಾದ ಮಳೆಯಿಂದ ಬೆಳೆ ಹಾಳು; ರೈತರ ಗೋಳು ಕೇಳುವರ‍್ಯಾರು?

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಈ ಬಾರಿಯ ಮಳೆಯು ರೈತರ ಸಂಪೂರ್ಣ ಬೆಳೆಯನ್ನು ಹಾಳುಮಾಡಿದ್ದು, ಪ್ರತಿವರ್ಷ ಒಂದಿಲ್ಲೊಂದು ಸಂಕಷ್ಟಗಳಿಂದ ಬಳಲುತ್ತಿರುವ ರೈತರಿಗೆ ಈ ಬಾರಿ ಮೇಲೇಳಲಾರದ ಹೊಡೆತ ಕೊಟ್ಟಿದ್ದು ರೈತರು ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ.

ಬಿಟ್ಟುಬಿಡದೇ ಸುರಿಯುತ್ತಿರುವ ಈ ಭಾರಿ ಮಳೆಗೆ ಕೈಗೆ ಬಂದ ಬೆಳೆಯು ನೀರು ಪಾಲಾಗುತ್ತಿರುವುದನ್ನು ಕಂಡ ರೈತ ಅಸಹಾಯಕನಾಗಿ ತಲೆ ಮೇಲೆ ಕೈಹೊತ್ತು ಕೂಡುವಂತಾಗಿದೆ. ಜಮೀನುಗಳು ಕೆಸರು ಗದ್ದೆಗಳಾಗಿ ಮಾರ್ಪಟ್ಟಿವೆ.

ಈ ಬಾರಿ ಕಡಿಮೆ ಪ್ರಮಾಣದ ಇಳುವರಿ ಬಂದಿರುವ ಶೇಂಗಾದಲ್ಲಿ ಬರೀ ಮಣ್ಣು ಬೆರೆತು ಹೋಗಿದ್ದು, ಮಾರುಕಟ್ಟೆಯಲ್ಲಿ ಅದನ್ನು ಕೊಳ್ಳುವವರು ಇಲ್ಲದಂತಾಗಿದೆ. ಇದರಿಂದಾಗಿ ಹೊಲದಲ್ಲಿಯೇ ಕಿತ್ತು ಹಾಕಿರುವ ಶೇಂಗಾ ಬೆಳೆಯನ್ನು ರೈತರು ರಸ್ತೆಯ ಪಕ್ಕದಲ್ಲಿ ನಿಂತ ನೀರಿನಲ್ಲಿ ತೊಳೆಯುತ್ತಿದ್ದಾರೆ. ಅಳಿದು ಉಳಿದ ಸ್ವಲ್ಪ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.

ಹಿಂಗಾರು ಬಿತ್ತನೆ ಮುಗಿಯುತ್ತಾ ಬಂದರೂ ಮಳೆ ಮಾತ್ರ ತನ್ನ ಆರ್ಭಟ ನಿಲ್ಲಿಸುತ್ತಿಲ್ಲ. ಮುಂಗಾರು ಹಂಗಾಮಿನಲ್ಲಿ ಶೇಂಗಾ ಬಿತ್ತನೆಯಿಂದ ಕಟಾವು ಹಂತದವರೆಗೂ ಪ್ರತಿ ಎಕರೆಗೆ ಸುಮಾರು 20 ಸಾವಿರ ರೂ. ಖರ್ಚು ಮಾಡಿದ್ದು, ಬೆಳೆ ಕಟಾವು ಸಮಯದಲ್ಲಿ ಮಳೆ ಆಗಿದ್ದರಿಂದ ಹೊಲಗಳಲ್ಲಿ ಬೆಳೆ ಕೊಳೆತು ಹೋಗಿದೆ.

ಸತತವಾಗಿ ಸುರಿಯುತ್ತಿರುವ ಮಳೆಗೆ ರೈತ ಯಾವ ಬೆಳೆಗಳಿಂದ ಲಾಭ ಸಿಗದೇ ತೀವ್ರ ಸಂಕಷ್ಟದಲ್ಲಿ ಸಿಲುಕುವಂತಾಗಿದೆ. ಪ್ರತಿವರ್ಷ ಬೆಳೆ ಹಾಳಾಗುತ್ತಿರುವುದರಿಂದ ರೈತರು ಸಾಲದ ಸುಳಿಯಿಂದ ಹೊರಬರಲಾರದ ಪರಿಸ್ಥಿತಿ ತಲುಪಿದ್ದಾರೆ. ಇನ್ನೊಂದೆಡೆ ಮೇವು ಕೂಡ ಕೊಳೆತು ಹೋಗಿದ್ದು ಮೇವು ಸಂಗ್ರಹವಿಲ್ಲದೇ ಜಾನುವಾರು ಸಂರಕ್ಷಣೆ ಕೂಡ ಚಿಂತೆಯಾಗಿದೆ.

ಆರು ಎಕರೆ ಶೇಂಗಾ ಬಿತ್ತನೆ ಮಾಡಿದ್ದೆ. ಮಳೆಯಿಂದಾಗಿ ಶೇಂಗಾ ಬೆಳೆ ಭೂಮಿಯಲ್ಲಿ ಸಿಕ್ಕಿಕೊಂಡು ಎಲ್ಲಾ ನಾಶವಾಗಿದೆ. ಉಳಿದ ಬೆಳೆಯನ್ನು ನೀರಿನಲ್ಲಿ ತೊಳೆದು ರಸ್ತೆಯಲ್ಲಿ ಒಣಗಿ ಹಾಕಿದ್ದೇನೆ. ಇದು ಒಬ್ಬರ ಕಥೆಯಲ್ಲ. ಬಹುತೇಕ ರೈತರ ಪರಿಸ್ಥಿತಿ ಇದೇ ಆಗಿದೆ. ಸರಕಾರ ಕೊಡುವ ಅಲ್ಪ ಸ್ವಲ್ಪ ಪರಿಹಾರ ಧನ ಯಾವುದಕ್ಕೂ ಸಾಲದು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ ರೈತರ ಜೀವ ಉಳಿಸುವ ಕಾರ್ಯವನ್ನು ಸರಕಾರ ಮಾಡಲಿ.

ನೀಲಪ್ಪ, ಬಾಲೆಹೊಸೂರ ಗ್ರಾಮದ ರೈತ