Home Blog Page 35

ನೂತನ ಬಿಇಒ ದಯಾನಂದ ಯಾವಗಲ್ಲಗೆ ಸನ್ಮಾನ

ವಿಜಯಸಾಕ್ಷಿ ಸುದ್ದಿ, ರೋಣ: ರೋಣ ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ದಯಾನಂದ ಯಾವಗಲ್ಲ ಅವರನ್ನು ಅಖಿಲ ಕರ್ನಾಟಕ ಶಾಲಾ-ಕಾಲೇಜುಗಳ ಅನುದಾನಿತ ನೌಕರರ ಸಂಘದ ರೋಣ ತಾಲೂಕು ಘಟಕದ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಬಿ.ಬಿ. ಮೇಗಲಮನಿ, ಕಾರ್ಯದರ್ಶಿ ಎಸ್.ಕೆ. ಆಡಿನ, ಖಜಾಂಚಿ ಕೆ.ಎಸ್. ಹಳ್ಳಳ್ಳಿ ಸೇರಿದಂತೆ ಸದಸ್ಯರಾದ ಎಸ್.ಎನ್. ಭರಮಗೌಡ್ರ, ಎಸ್.ಟಿ. ವಾಲ್ಮೀಕಿ, ಎಂ.ಎಸ್. ವಾಲ್ಮೀಕಿ, ಪಿ.ಪಿ. ವಾಲ್ಮೀಕಿ, ಎಂ.ಎಸ್. ಹೊಸಮನಿ, ಎಂ.ಕೆ. ಬಂಡಗರ್ ಹಾಗೂ ಪಿ.ಎಂ. ಮುನವಳ್ಳಿ ಉಪಸ್ಥಿತರಿದ್ದು, ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶುಭ ಹಾರೈಸಿದರು.

ಬೆಳೆವಿಮೆ ಅಕ್ರಮಕ್ಕೆ ಶಾಸಕ ಡಾ. ಚಂದ್ರು ಲಮಾಣಿ ಗರಂ: ಖಾಸಗಿ ಪಿಆರ್‌ಒಗಳ ಬದಲಾವಣೆಗೆ ಸೂಚನೆ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಅಮಾಯಕ ರೈತರನ್ನು ದಾರಿ ತಪ್ಪಿಸಿ ಬೆಳೆ ವಿಮೆ ನೋಂದಣಿಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ಕೂಡಲೇ ಖಾಸಗಿ ಪಿಆರ್‌ಓಗಳನ್ನು (PRO) ಬದಲಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ರವಿವಾರ ಶಿರಹಟ್ಟಿ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶಿರಹಟ್ಟಿ, ಮುಂಡರಗಿ ಹಾಗೂ ಲಕ್ಷ್ಮೇಶ್ವರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಬರಗಾಲ ಹಾಗೂ ವಿಪತ್ತು ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಳೆ ವಿಮೆಯಲ್ಲಿ ಮಧ್ಯವರ್ತಿಗಳು ಹಾಗೂ ಕೆಲವು ಪಿಆರ್‌ಓಗಳು ಸೇರಿಕೊಂಡು ಒಂದು ಬೆಳೆ ಬದಲಿಗೆ ಮತ್ತೊಂದು ಬೆಳೆ ದಾಖಲಿಸುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ಕಾರಣದಿಂದ ರೈತರ ಮನೆ ಬಾಗಿಲಿಗೆ ಹೋಗಿ ಗಲಾಟೆ ಮಾಡುವ ಪ್ರಕರಣಗಳೂ ಹೆಚ್ಚುತ್ತಿವೆ. ಕೃಷಿ ಇಲಾಖೆ ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಬೆಳೆ ಸಮೀಕ್ಷೆಯನ್ನು ಅತ್ಯಂತ ನಿಖರವಾಗಿ ನಡೆಸಬೇಕು. ಗ್ರಾಮ ಪಂಚಾಯಿತಿ ಮಟ್ಟದ ಮಳೆಮಾಪನ ಕೇಂದ್ರಗಳಲ್ಲಿಯೂ ಕಾಟಾಚಾರದ ಮಾಹಿತಿ ದಾಖಲಿಸದೆ ವಾಸ್ತವ ಅಂಕಿ-ಅಂಶಗಳನ್ನು ದಾಖಲಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ಪಟ್ಟಣಗಳ ಸ್ವಚ್ಛತೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಲಕ್ಷ್ಮೇಶ್ವರದಲ್ಲಿ ಸ್ವತಃ ಭೇಟಿ ನೀಡಿದಾಗ ಸಿಬ್ಬಂದಿ ಗೈರುಹಾಜರಾಗಿದ್ದು, ಹಣಕಾಸು ಬಳಕೆ ಕುರಿತು ಸಮರ್ಪಕ ಮಾಹಿತಿ ನೀಡಿಲ್ಲ. ಶಿರಹಟ್ಟಿಯಲ್ಲಿಯೂ ಸ್ವಚ್ಛತೆ ಬಗ್ಗೆ ನಿರಂತರ ದೂರುಗಳು ಬರುತ್ತಿದ್ದು, ಪ್ರತಿ ವಾರ್ಡ್‌ನಲ್ಲಿ ತಿಂಗಳಿಗೆ ಕನಿಷ್ಠ ಎರಡು-ಮೂರು ಬಾರಿ ಸ್ವಚ್ಛತಾ ಕಾರ್ಯ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಶಿರಹಟ್ಟಿಯಲ್ಲಿ ನಿರ್ಮಾಣವಾಗುತ್ತಿರುವ 100 ಹಾಸಿಗೆಗಳ ಆಸ್ಪತ್ರೆಗೆ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಪೈಪ್‌ಲೈನ್ ಕಲ್ಪಿಸುವಂತೆ ಸೂಚಿಸಿದರು.

ಬೆಳ್ಳಟ್ಟಿ ಗ್ರಾಮದಲ್ಲಿ ಮೂರು ಕೋಟಿ ರೂಪಾಯಿ ವೆಚ್ಚದ ಬೂದು ನೀರು ನಿರ್ವಹಣಾ ಯೋಜನೆ ಕಾಮಗಾರಿ ತಮ್ಮ ಗಮನಕ್ಕೆ ತಾರದೆ ಆರಂಭಿಸಿರುವುದು ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿ ನಿರ್ವಹಣೆಯಲ್ಲಿ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಪಂ ಇಒ ಅವರಿಗೆ ಸೂಚಿಸಿದರು.

ಬೆಳ್ಳಟ್ಟಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಸ್ಪೀಟ್ ಮತ್ತು ಓಸಿ ಜೂಜಾಟ ನಡೆಯುತ್ತಿರುವ ಕುರಿತು ಮಾಹಿತಿ ಹಾಗೂ ವಿಡಿಯೊಗಳು ತಮ್ಮ ಬಳಿ ಇರುವುದಾಗಿ ತಿಳಿಸಿದ ಶಾಸಕರು, ಹೊರ ಜಿಲ್ಲೆಗಳಿಂದಲೂ ಜನರು ಬಂದು ಜೂಜಾಟದಲ್ಲಿ ತೊಡಗುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಿರಹಟ್ಟಿ ಪಿಎಸ್‌ಐ ಈರಪ್ಪ ರಿತ್ತಿ ಅವರಿಗೆ ಸೂಚಿಸಿದರು.

ಗದಗ–ಹೊನ್ನಾಳಿ ರಸ್ತೆಯಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯಲು ಶೀಘ್ರದಲ್ಲೇ ನಡೆಯಲಿರುವ ಸಭೆಯಲ್ಲಿ ಪೊಲೀಸ್ ಇಲಾಖೆ ಅಗತ್ಯ ಸುರಕ್ಷತಾ ಕ್ರಮಗಳ ಕುರಿತು ಪ್ರಸ್ತಾವನೆ ಸಲ್ಲಿಸಬೇಕು ಎಂದರು.

ಸಭೆಯಲ್ಲಿ ಶಿರಹಟ್ಟಿ ತಹಸೀಲ್ದಾರ್ ಕೆ. ರಾಘವೇಂದ್ರರಾವ್, ಶಿರಹಟ್ಟಿ ತಾಪಂ ಇಒ ಆರ್.ವಿ. ದೊಡ್ಡಮನಿ, ಲಕ್ಷ್ಮೇಶ್ವರ ತಾಪಂ ಇಒ ಮಂಜುಳಾ ಹಕಾರಿ, ಮುಂಡರಗಿ ತಾಪಂ ಇಒ ಬೆಣ್ಣಿ ಹಾಗೂ ಮೂರು ತಾಲೂಕುಗಳ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

“ಬೆಳೆ ವಿಮೆಯಲ್ಲಿ ರೈತರಿಗೆ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ. ಪಿಆರ್‌ಓಗಳ ಪಾತ್ರವನ್ನು ಪರಿಶೀಲಿಸಿ, ಅಗತ್ಯವಿದ್ದರೆ ತಕ್ಷಣವೇ ಬದಲಾವಣೆ ಮಾಡಬೇಕು. ಬೆಳೆ ಸಮೀಕ್ಷೆ ಮತ್ತು ಮಳೆ ದಾಖಲೆಗಳು ಸಂಪೂರ್ಣ ನಿಖರವಾಗಿರಬೇಕು.”

 ಡಾ. ಚಂದ್ರು ಲಮಾಣಿ, ಶಾಸಕ

ವೈದ್ಯರು ಡಬಲ್ ಡಾಕ್ಟರ್ ಆಗಬೇಕು:  ಬ್ರಹ್ಮಕುಮಾರಿ ಜಯಂತಿ

ವಿಜಯಸಾಕ್ಷಿ ಸುದ್ದಿ, ಗದಗ: ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಗದುಗಿನ ಸಿದ್ಧರಾಮೇಶ್ವರ ನಗರದ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅವರು, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ಖ್ಯಾತ ವೈದ್ಯ ಡಾ. ಬಿ.ಸಿ. ರಾಯ್ ಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ, ವೈದ್ಯಕೀಯ ಸೇವೆ ಎಂದರೆ ಕೇವಲ ವೃತ್ತಿಯಲ್ಲ, ಅದು ಮಾನವೀಯ ಸೇವೆಯಾಗಿದೆ ಎಂದು ಹೇಳಿದರು.

ರೋಗಿಗಳಿಗೆ ಔಷಧೋಪಚಾರ ನೀಡುವ ವೈದ್ಯರು ದೇಹದ ಕಾಯಿಲೆಗಳನ್ನು ಗುಣಪಡಿಸುತ್ತಾರೆ. ಆದರೆ ಇಂದಿನ ಬಹುತೇಕ ಕಾಯಿಲೆಗಳ ಮೂಲ ಮನಸ್ಸಿನ ಒತ್ತಡ, ಭಯ, ಆತಂಕ ಹಾಗೂ ಅಶಾಂತಿಯಾಗಿರುವುದರಿಂದ ವೈದ್ಯರು ದೈಹಿಕ ಚಿಕಿತ್ಸೆಯ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡಬೇಕು. ರಾಜಯೋಗ ಧ್ಯಾನದಂತಹ ಆಧ್ಯಾತ್ಮಿಕ ವಿಧಾನಗಳು ರೋಗಿಗಳ ಮನಸ್ಸಿಗೆ ನೆಮ್ಮದಿ ನೀಡುವಲ್ಲಿ ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಈಶ್ವರೀಯ ವಿಶ್ವ ವಿದ್ಯಾಲಯ ಆತ್ಮದಲ್ಲಿರುವ ಕ್ರೋಧ, ಲೋಭ, ಅಹಂಕಾರ, ಈರ್ಷೆ, ದ್ವೇಷದಂತಹ ನಕಾರಾತ್ಮಕ ಗುಣಗಳನ್ನು ದೂರ ಮಾಡುವ ಮೂಲಕ ಆಂತರಿಕ ಆರೋಗ್ಯವನ್ನು ಬೆಳೆಸುವ ಕಾರ್ಯ ಮಾಡುತ್ತಿದೆ. ವೈದ್ಯರು ಈ ಜ್ಞಾನವನ್ನು ಅಳವಡಿಸಿಕೊಂಡರೆ ಸಮಾಜಕ್ಕೆ ಇನ್ನಷ್ಟು ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಾ. ಜಯಕುಮಾರ್ ಬ್ಯಾಳಿ, ಡಾ. ತುಕಾರಾಂ ಸೋರಿ, ಡಾ. ಸಿ.ಬಿ. ಹಿರೇಗೌಡರ್, ಡಾ. ವೆಂಕಟೇಶ್ ಪೂಜಾರ್, ಡಾ. ಈರಣ್ಣ ಹಳೇಮನಿ, ಡಾ. ರಶ್ಮಿ ವಾದೋನಿ, ಡಾ. ಬಸವರಾಜ್ ಚನ್ನಪ್ಪಗೌಡ್ರ, ಡಾ. ಜಿ. ನಾಗರಾಳ, ಡಾ. ಅಶೋಕ್ ಮತ್ತಿಗಟ್ಟಿ, ಡಾ. ಉಮೇಶ್ ಹಾದಿ, ಡಾ. ಸವಿತಾ ನಿಡಗುಂದಿ, ಡಾ. ಸಾಯಿಪ್ರಕಾಶ್ ಮಡಿವಾಳರ್, ಡಾ. ರೋಹಿತ್ ಹಾಗೂ ಡಾ. ಮೇಘಾ ಕೊಪ್ಪಳಕರ್ ಸೇರಿದಂತೆ ಅನೇಕ ವೈದ್ಯರು ಸನ್ಮಾನ ಸ್ವೀಕರಿಸಿದರು.

ಬಿ.ಕೆ. ರೇಖಾ ಸ್ವಾಗತಿಸಿದರು. ಬಿ.ಕೆ. ಸಾವಿತ್ರಿ ವಂದಿಸಿದರು.

“ವೈದ್ಯರು ಕೇವಲ ದೇಹದ ಕಾಯಿಲೆ ಗುಣಪಡಿಸುವ ‘ಡಾಕ್ಟರ್’ ಆಗಿರಬಾರದು. ರೋಗಿಯ ಮನಸ್ಸಿನ ನೋವು, ಆತಂಕ, ಒತ್ತಡವನ್ನೂ ದೂರ ಮಾಡುವ ‘ಡಬಲ್ ಡಾಕ್ಟರ್’ ಆದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ.”

 ಬ್ರಹ್ಮಕುಮಾರಿ ಜಯಂತಿ, ಈಶ್ವರೀಯ ವಿಶ್ವ ವಿದ್ಯಾಲಯ

ಮಧುಮೇಹ ನಿಯಂತ್ರಣಕ್ಕೆ ನರ್ಸ್‌ಗಳ ಪಾತ್ರ ಮಹತ್ವದ್ದು: ಡಾ. ಅನ್ವರ್ ಹುಸೇನ್

ವಿಜಯಸಾಕ್ಷಿ ಸುದ್ದಿ, ಗದಗ: ಮಧುಮೇಹವನ್ನು ಕೇವಲ ಔಷಧಗಳಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಆಹಾರ ಪದ್ಧತಿ, ನಿಯಮಿತ ವ್ಯಾಯಾಮ, ಪಾದದ ಆರೈಕೆ ಹಾಗೂ ಮಾನಸಿಕ ಬೆಂಬಲದಂತಹ ಅಂಶಗಳು ಸಮಾನವಾಗಿ ಮಹತ್ವದ್ದಾಗಿದ್ದು, ರೋಗಿಯ ಆರೈಕೆಯಲ್ಲಿ ನರ್ಸ್‌ಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಸಿಎಂಸಿ ವೆಲ್ಲೂರಿನ ಹಿರಿಯ ಎಂಡೋಕ್ರೈನಾಲಜಿಸ್ಟ್ ಡಾ. ಅನ್ವರ್ ಹುಸೇನ್ ಹೇಳಿದರು.

ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು (ಸಿಎಂಸಿ), ವೆಲ್ಲೂರು ಹಾಗೂ ಬಾಸೆಲ್ ಮಿಷನ್ ಸಿಎಸ್‌ಐ ಆಸ್ಪತ್ರೆ, ಗದಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕ್ಲಾರ್ಕ್ಸ್ ಇನ್ ಹೋಟೆಲ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಮಧುಮೇಹ ನಿರ್ವಹಣೆ’ ಕುರಿತ ಒಂದು ದಿನದ ನಿರಂತರ ನರ್ಸಿಂಗ್ ಶಿಕ್ಷಣ (ಸಿಎನ್‌ಇ) ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಮಧುಮೇಹ ಚಿಕಿತ್ಸೆಯಲ್ಲಿನ ಹೊಸ ವಿಧಾನಗಳು, ಇನ್ಸುಲಿನ್ ನಿರೋಧಕತೆ ಹಾಗೂ ಗರ್ಭಾವಸ್ಥೆಯ ಮಧುಮೇಹ ನಿರ್ವಹಣೆ ಕುರಿತು ಸವಿಸ್ತಾರವಾಗಿ ವಿವರಿಸಿದ ಅವರು, ರೋಗಿಗೆ ಸಮಗ್ರ ಆರೈಕೆ ದೊರೆತಾಗ ಮಾತ್ರ ಉತ್ತಮ ಫಲಿತಾಂಶ ಸಾಧ್ಯವಾಗುತ್ತದೆ ಎಂದರು.

ಡಯಾಬಿಟಿಸ್ ನರ್ಸ್ ಎಜುಕೇಟರ್ ವಿಜಯಲಕ್ಷ್ಮಿ ಅವರು ಸುರಕ್ಷಿತ ಇನ್ಸುಲಿನ್ ಚುಚ್ಚುಮದ್ದು ತಂತ್ರ, ಇನ್ಸುಲಿನ್ ಪೆನ್ ಬಳಕೆ, ಹೈಪೋಗ್ಲೈಸೆಮಿಯಾ ತುರ್ತು ನಿರ್ವಹಣೆ ಹಾಗೂ ಸ್ವಯಂ ರಕ್ತದ ಗ್ಲೂಕೋಸ್ ಪರೀಕ್ಷೆ ಮಾಡುವ ವಿಧಾನಗಳ ಕುರಿತು ಪ್ರಾಯೋಗಿಕ ಪ್ರದರ್ಶನ ನೀಡಿದರು.

ಬಾಸೆಲ್ ಮಿಷನ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಬ್ಯೂಲಾ ಪ್ರಿಯದರ್ಶಿನಿ ಮಾತನಾಡಿ, ಭಾರತೀಯ ನರ್ಸಿಂಗ್ ಪರಿಷತ್ತಿನ ಮಾರ್ಗಸೂಚಿಯಂತೆ ಉತ್ತರ ಕರ್ನಾಟಕದಲ್ಲಿ ಇಂತಹ ವಿಶೇಷ ತರಬೇತಿ ಕಾರ್ಯಕ್ರಮಗಳ ಅಗತ್ಯ ಹೆಚ್ಚಿದ್ದು, ನರ್ಸ್‌ಗಳ ಕೌಶಲ್ಯ ವೃದ್ಧಿಗೆ ಇದು ಸಹಕಾರಿಯಾಗಿದೆ ಎಂದರು.

ಬಾಸೆಲ್ ಮಿಷನ್ ಸಿಎಸ್‌ಐ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅಜಯ್ ರಾಜು ಮಾತನಾಡಿ, ಐಸಿಎಂಆರ್–ಇಂಡಿಯಾಬ್ ಅಧ್ಯಯನದ ಪ್ರಕಾರ ಕರ್ನಾಟಕದಲ್ಲಿ 18 ವರ್ಷ ಮೇಲ್ಪಟ್ಟವರಲ್ಲಿ ಶೇ.11.2ರಷ್ಟು ಜನ ಮಧುಮೇಹದಿಂದ ಬಳಲುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ರೋಗ ತಡವಾಗಿ ಪತ್ತೆಯಾಗುತ್ತಿರುವುದರಿಂದ ಪ್ರಾಥಮಿಕ ಹಂತದಲ್ಲೇ ನರ್ಸ್‌ಗಳು ತಪಾಸಣೆ, ಮಾರ್ಗದರ್ಶನ ಹಾಗೂ ಆರೋಗ್ಯ ಶಿಕ್ಷಣ ನೀಡುವುದು ಅತ್ಯಂತ ಅಗತ್ಯ ಎಂದು ಹೇಳಿದರು.

ಗದಗ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ನರ್ಸಿಂಗ್ ಕಾಲೇಜುಗಳಿಂದ 125ಕ್ಕೂ ಹೆಚ್ಚು ನರ್ಸ್‌ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ತಜ್ಞರಿಂದ ಪ್ರಾಯೋಗಿಕ ಹಾಗೂ ಸಾಕ್ಷ್ಯಾಧಾರಿತ ತರಬೇತಿ ಪಡೆದರು.

ಕಾರ್ಯಕ್ರಮದಲ್ಲಿ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ. ಸ್ಟೀಫನ್, ಹಿರಿಯ ಶುಶ್ರೂಷಾಧಿಕಾರಿಗಳು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

“ಮಧುಮೇಹ ಚಿಕಿತ್ಸೆಯಲ್ಲಿ ಔಷಧ ಮಾತ್ರ ಸಾಕಾಗುವುದಿಲ್ಲ. ಆಹಾರ, ವ್ಯಾಯಾಮ, ಪಾದದ ಆರೈಕೆ ಮತ್ತು ಮಾನಸಿಕ ಬೆಂಬಲವನ್ನು ಸಮನ್ವಯಗೊಳಿಸಿದಾಗಲೇ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯ.”

– ಡಾ. ಅನ್ವರ್ ಹುಸೇನ್, ಹಿರಿಯ ಎಂಡೋಕ್ರೈನಾಲಜಿಸ್ಟ್, ಸಿಎಂಸಿ ವೆಲ್ಲೂರು

ಕೊಟ್ಟೂರೇಶ್ವರ ಮಠದ ಸೇವೆಗೆ ಬೊಮ್ಮಾಯಿ ಮೆಚ್ಚುಗೆ

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆಯ ರಕ್ಷಣೆಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹರ್ಲಾಪೂರದ ಕೊಟ್ಟೂರೇಶ್ವರ ಮಠ ಮುಂಚೂಣಿಯಲ್ಲಿದ್ದು, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮೌಲಿಕ ಸೇವೆ ಸಲ್ಲಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಲಕ್ಕುಂಡಿ ಸಮೀಪದ ಹರ್ಲಾಪೂರ ಕೊಟ್ಟೂರೇಶ್ವರ ಮಠದ 138ನೇ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಹಠಯೋಗಿ ಕೊಟ್ಟೂರೇಶ್ವರರ 16ನೇ ದಿನದ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶರಣ-ಶರಣಿಯರ ಆದರ್ಶ ಜೀವನ, ಸಂಸ್ಕೃತಿ, ಸಂಪ್ರದಾಯ ಹಾಗೂ ಮೌಲ್ಯಗಳನ್ನು ಪುರಾಣ ಪ್ರವಚನಗಳ ಮೂಲಕ ಜನರಿಗೆ ತಲುಪಿಸುವ ಕಾರ್ಯವನ್ನು ಮಠ ನಿರಂತರವಾಗಿ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಮಠದ ಪೀಠಾಧಿಪತಿಗಳಾದ ಡಾ. ಕೊಟ್ಟೂರೇಶ್ವರ ಶ್ರೀಗಳು ಕೃಷಿ ಕಾಯಕದಲ್ಲೂ ತೊಡಗಿಕೊಂಡಿರುವುದು ಮಾದರಿಯಾಗಿದೆ. ಮಠವು ಶಿಕ್ಷಣ ದಾಸೋಹದ ಯೋಜನೆ ಕೈಗೊಂಡರೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಅಗತ್ಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಡಾ. ಕೊಟ್ಟೂರೇಶ್ವರ ಶ್ರೀಗಳು ಮಾತನಾಡಿ, ಬಸವರಾಜ ಬೊಮ್ಮಾಯಿ ಅವರು ಮಠ-ಮಾನ್ಯಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು, ಮಠದ ಆಹ್ವಾನಕ್ಕೆ ಸ್ಪಂದಿಸಿ ಆಗಮಿಸಿರುವುದು ಸಂತಸದ ವಿಷಯವಾಗಿದೆ. ಕೊಟ್ಟೂರೇಶ್ವರರ ಆಶೀರ್ವಾದ ಸದಾ ಅವರ ಮೇಲಿರಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಜು ಕುರುಡಗಿ, ರೋಣ ಬಿಜೆಪಿ ಮಂಡಲ ಅಧ್ಯಕ್ಷ ಉಮೇಶ ಮಲ್ಲಾಪೂರ, ಡಂಬಳ ಬಿಜೆಪಿ ಮಂಡಲ ಅಧ್ಯಕ್ಷ ಅಂದಪ್ಪ ಹಾರೋಗೇರಿ ಉಪಸ್ಥಿತರಿದ್ದರು.

ಶಿಕ್ಷಕ ಕೆ.ಬಿ. ಕೊಣ್ಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಂ. ಮಜ್ಜಿಗುಡ್ಡ ಸ್ವಾಗತಿಸಿದರು. ವೆಂಕಟೇಶ ಜುಂಜಣಿ ನಿರೂಪಿಸಿದರು. ರಾಮಣ್ಣ ಬೆಳಧಡಿ ವಂದಿಸಿದರು.

“ಸಂಸ್ಕೃತಿ, ಸಂಪ್ರದಾಯ ಮತ್ತು ಮೌಲ್ಯಗಳನ್ನು ಉಳಿಸುವಲ್ಲಿ ಹರ್ಲಾಪೂರ ಕೊಟ್ಟೂರೇಶ್ವರ ಮಠದ ಸೇವೆ ಶ್ಲಾಘನೀಯ. ಶಿಕ್ಷಣ ದಾಸೋಹಕ್ಕೆ ಸಂಸದರ ನಿಧಿಯಿಂದ ನೆರವು ನೀಡಲು ಸಿದ್ಧನಿದ್ದೇನೆ.”

– ಬಸವರಾಜ ಬೊಮ್ಮಾಯಿ

‘ಜೀವನ ಧಾರಾ’ ಮೂಲಕ ಮಾನವೀಯ ನೆರವು

ವಿಜಯಸಾಕ್ಷಿ ಸುದ್ದಿ, ಗದಗ: ಇನ್ನರ್ ವೀಲ್ ಕ್ಲಬ್ ಗದಗ-ಬೆಟಗೇರಿ ವತಿಯಿಂದ “ಜೀವನ ಧಾರಾ” ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ, ಅಂಧತ್ವ ಹಾಗೂ ಅಂಗವಿಕಲತೆಯಿಂದ ಬಳಲುತ್ತಿರುವ ವೀರೇಶ ಅಬ್ಬಿಗೇರಿ ಅವರಿಗೆ ಎರಡು ಸಿಟ್ಟಿಂಗ್‌ಗಳ ಡಯಾಲಿಸಿಸ್ ಚಿಕಿತ್ಸೆಗೆ ಅಗತ್ಯವಾದ ಆರ್ಥಿಕ ನೆರವು ನೀಡಲಾಯಿತು.

ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷೆ ಮಂಜುಳಾ ಅಕ್ಕಿ ಮಾತನಾಡಿ, ಸಂಕಷ್ಟದಲ್ಲಿರುವವರಿಗೆ ಸಮಯೋಚಿತ ನೆರವು ನೀಡುವುದು ಸಂಸ್ಥೆಯ ಧ್ಯೇಯವಾಗಿದೆ. ಸಮಾಜದ ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ಇಂತಹ ಸೇವಾ ಚಟುವಟಿಕೆಗಳನ್ನು ಮುಂದೆಯೂ ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ವೀರೇಶ ಅಬ್ಬಿಗೇರಿ ಹಾಗೂ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಪದಾಧಿಕಾರಿಗಳು ಧೈರ್ಯ ತುಂಬಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.

ಕ್ಲಬ್ ಸದಸ್ಯೆ ಡಾ. ಶಿಲ್ಪಾ ಧಡೂತಿ ಅವರು ಈ ಸೇವಾ ಕಾರ್ಯಕ್ಕೆ ಕೈಜೋಡಿಸಿ, ನೆರವು ನಿಜವಾದ ಫಲಾನುಭವಿಗೆ ತಲುಪುವಂತೆ ಸಹಕರಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಪೂಜಾ ಭೂಮಾ, ಜಂಟಿ ಕಾರ್ಯದರ್ಶಿ ಪುಷ್ಪಾ ಭಂಡಾರಿ, ಖಜಾಂಚಿ ವೀಣಾ ಕಾವೇರಿ, ಐಎಸ್‌ಒ ವಿದ್ಯಾ ಶಿವನಗುತ್ತಿ, ಸಂಪಾದಕಿ ಮೀನಾಕ್ಷಿ ಕೊರವನವರ, ಕೋಸಿಪಿಸಿಸಿ ಶಾರದಾ ಸಜ್ಜನ ಸೇರಿದಂತೆ ಕ್ಲಬ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

“ಸಂಕಷ್ಟದಲ್ಲಿರುವ ವ್ಯಕ್ತಿಗೆ ಸಮಯಕ್ಕೆ ಸಿಗುವ ನೆರವಿಗಿಂತ ದೊಡ್ಡ ಸೇವೆ ಮತ್ತೊಂದಿಲ್ಲ. ಸಮಾಜದ ದುರ್ಬಲ ವರ್ಗಗಳ ಬದುಕಿಗೆ ಆಸರೆಯಾಗುವ ಕೆಲಸಗಳನ್ನು ಇನ್ನರ್ ವೀಲ್ ಕ್ಲಬ್ ಮುಂದೆಯೂ ನಿರಂತರವಾಗಿ ಕೈಗೊಳ್ಳಲಿದೆ.”

– ಮಂಜುಳಾ ಅಕ್ಕಿ, ಅಧ್ಯಕ್ಷೆ, ಇನ್ನರ್ ವೀಲ್ ಕ್ಲಬ್ ಗದಗ-ಬೆಟಗೇರಿ

ಕನಕ–ಷರೀಫ್ ಕಾವ್ಯ ಪುರಸ್ಕಾರಕ್ಕೆ ಸಾಹಿತಿ ಎ.ಎಸ್. ಮಕಾನದಾರ ಆಯ್ಕೆ

ವಿಜಯಸಾಕ್ಷಿ ಸುದ್ದಿ, ಗದಗ: ಹಿರಿಯ ಸಾಹಿತಿ, ಮಕಾನದಾರ ಸಾಹಿತ್ಯ ಪ್ರತಿಷ್ಠಾನ ಹಾಗೂ ನಿರಂತರ ಪ್ರಕಾಶನದ ಸಂಚಾಲಕರಾದ ಎ.ಎಸ್. ಮಕಾನದಾರ ಅವರು 2024ನೇ ಸಾಲಿನ ರಾಜ್ಯ ಮಟ್ಟದ ಕನಕ–ಷರೀಫ್ ಕಾವ್ಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಈ ಕುರಿತು ಆಯ್ಕೆ ಸಮಿತಿಯ ಅಧ್ಯಕ್ಷರಾದ ಹಿರಿಯ ಬಂಡಾಯ ಸಾಹಿತಿ ಡಾ. ಸತೀಶ ಕುಲಕರ್ಣಿ ಹಾಗೂ ಕಾರ್ಯಕ್ರಮದ ಸಂಚಾಲಕರಾದ ಪ್ರೊ. ರಂಜಾನ್ ಹೆಬಸೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿರಿಯ ರಂಗಕರ್ಮಿ, ಉತ್ಸವ ರಾಕ್ ಗಾರ್ಡನ್ ಸಂಸ್ಥಾಪಕರಾದ ಕಲಾ ಗುರು ಡಾ. ಟಿ.ಬಿ. ಸೊಲಬಕ್ಕನವರ ಅವರ 79ನೇ ಜನ್ಮದಿನದ ಅಂಗವಾಗಿ, ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಉತ್ಸವ ರಾಕ್ ಗಾರ್ಡನ್‌ನಲ್ಲಿ ಧಾರವಾಡ ಜಿಲ್ಲೆಯ ಹೆಬಸೂರಿನ ಉತ್ತರ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕವಿಗೋಷ್ಠಿ, ಗಜಲ್ ಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ.

2022ನೇ ಸಾಲಿನ ಕನಕ–ಷರೀಫ್ ಕಾವ್ಯ ಪುರಸ್ಕಾರಕ್ಕೆ ಹಿರಿಯ ಕವಿ ಡಾ. ಚನ್ನಪ್ಪ ಅಂಗಡಿ, 2023ನೇ ಸಾಲಿಗೆ ಹಿರಿಯ ವಿಮರ್ಶಕ ಡಾ. ಜಾಜಿ ದೇವೇಂದ್ರಪ್ಪ, 2024ನೇ ಸಾಲಿಗೆ ಹಿರಿಯ ಸಾಹಿತಿ ಎ.ಎಸ್. ಮಕಾನದಾರ, 2025ನೇ ಸಾಲಿಗೆ ಹಿರಿಯ ಅನುವಾದಕಿ ಹಾಗೂ ಪತ್ರಕರ್ತೆ ಮಂಜುಳಾ ಕಿರುಗಾವಲು ಆಯ್ಕೆಯಾಗಿದ್ದಾರೆ.

ಆಯ್ಕೆ ಸಮಿತಿಯಲ್ಲಿ ಅಬ್ದುಲ್ ಹೈ ತೋರಣಗಲ್ಲು, ಶ್ರೀಶೈಲ ಮಾದಣ್ಣವರ, ಪ್ರೊ. ರಂಜಾನ್ ಹೆಬಸೂರ, ದೀಪಾ ಗೋನಾಳ ಹಾಗೂ ಡಾ. ವೇದಾರಾಣಿ ದಾಸನೂರ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.

ಈ ಹಿಂದೆ ಹಾವೇರಿ ಜಿಲ್ಲೆಯ ವಿಜಯಕಾಂತ್ ಪಾಟೀಲ, ಕೊಪ್ಪಳ ಜಿಲ್ಲೆಯ ಗಜಲ್ ಕವಿ ಅಲ್ಲಾ ಗಿರಿರಾಜ್, ದಾವಣಗೆರೆಯ ಬಿ. ಶ್ರೀನಿವಾಸ್ ಹಾಗೂ ಆಕಾಶವಾಣಿ ಧಾರವಾಡದ ಮಾಜಿ ನಿರ್ದೇಶಕ, ಕಥೆಗಾರ ಡಾ. ಬಸು ಬೇವಿನಗಿಡದ ಅವರು ಈ ಪ್ರತಿಷ್ಠಿತ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಬರದ ಬೆನ್ನಲ್ಲೇ ಮೋಡ ಬಿತ್ತನೆಗೆ ಚಾಲನೆ

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ತೀವ್ರ ಮಳೆ ಕೊರತೆಯಿಂದ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಹಾವೇರಿ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಮೋಡ ಬಿತ್ತನೆ ಕಾರ್ಯಾಚರಣೆಗೆ ಭಾನುವಾರ ಚಾಲನೆ ನೀಡಲಾಯಿತು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮೋಡ ಬಿತ್ತನೆಗೆ ಚಾಲನೆ ನೀಡಿ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಹಾವೇರಿ ಜಿಲ್ಲೆಯ ಎಲ್ಲ ಶಾಸಕರ ಒಮ್ಮತದೊಂದಿಗೆ ಈ ಕಾರ್ಯ ಆರಂಭಿಸಲಾಗಿದ್ದು, ಉತ್ತರ ಕರ್ನಾಟಕದ ಇತರೆ ಜಿಲ್ಲೆಗಳಲ್ಲಿಯೂ ಮೋಡ ಬಿತ್ತನೆ ನಡೆಸಲು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಉತ್ತರ ಕರ್ನಾಟಕ ಭಾಗದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ರೈತರ ಬೆಳೆಗಳು ಹಾನಿಗೊಳಗಾಗಿವೆ. ಬೆಳೆ ಹಾನಿ ಕುರಿತು ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಮೋಡ ಬಿತ್ತನೆಗೆ ಮುಂದಾಗಿರುವ ಎಲ್ಲ ಶಾಸಕರನ್ನು ಅಭಿನಂದಿಸುವುದಾಗಿ ಹೇಳಿದರು.

ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಹಾವೇರಿ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದರಿಂದ ಮೂರು ದಿನಗಳ ಕಾಲ ಮೋಡ ಬಿತ್ತನೆ ನಡೆಸಲಾಗುತ್ತಿದೆ. ಜುಲೈ ತಿಂಗಳ ಪೂರ್ತಿ ಮೋಡ ಬಿತ್ತನೆ ವಿಮಾನ ಹುಬ್ಬಳ್ಳಿಯಲ್ಲೇ ಇರಲಿದ್ದು, ವಿಜ್ಞಾನಿಗಳ ಸಲಹೆಯಂತೆ ಮುಂದಿನ ಕಾರ್ಯಾಚರಣೆ ಕೈಗೊಳ್ಳಲಾಗುವುದು. ಒಂದು ಗಂಟೆ ಮೋಡ ಬಿತ್ತನೆಗೆ ಸುಮಾರು ₹15 ಲಕ್ಷ ವೆಚ್ಚವಾಗಲಿದ್ದು, ಇದರಿಂದ ರೈತರ ಬೆಳೆಗಳಿಗೆ ಅನುಕೂಲವಾಗಲಿದೆ ಎಂದರು.

ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, ಬರ ಪರಿಸ್ಥಿತಿಯಿಂದ ರೈತರು ಸಂಕಷ್ಟದಲ್ಲಿರುವುದನ್ನು ಮನಗಂಡು ವೈಜ್ಞಾನಿಕ ತಂತ್ರಜ್ಞಾನದ ಮೂಲಕ ಮೋಡ ಬಿತ್ತನೆಗೆ ಚಾಲನೆ ನೀಡಲಾಗಿದೆ. ಈ ಪ್ರಯತ್ನ ಯಶಸ್ವಿಯಾಗಿ ರೈತರ ಸಂಕಷ್ಟ ನಿವಾರಣೆಯಾಗುವ ವಿಶ್ವಾಸವಿದೆ. 2001 ಹಾಗೂ 2017ರಲ್ಲೂ ಮೋಡ ಬಿತ್ತನೆ ಯಶಸ್ವಿಯಾಗಿತ್ತು ಎಂದು ನೆನಪಿಸಿದರು.

ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಹಾವೇರಿಯಲ್ಲಿ ಮೋಡ ಬಿತ್ತನೆ ಮಾಡಿದ ಪರಿಣಾಮ ಧಾರವಾಡ ಜಿಲ್ಲೆಗೂ ಮಳೆಯಾಗುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಧಾರವಾಡ ಜಿಲ್ಲೆಯಲ್ಲೂ ಮೋಡ ಬಿತ್ತನೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಹೆಸರು ಬೆಳೆ ಈಗಾಗಲೇ ಹಾನಿಗೊಳಗಾಗಿದ್ದು, ಮೋಡ ಬಿತ್ತನೆಯಿಂದ ಹತ್ತಿ, ಶೇಂಗಾ ಹಾಗೂ ಕಬ್ಬು ಬೆಳೆಗಳಿಗೆ ಅನುಕೂಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ರುದ್ರಪ್ಪ ಲಮಾಣಿ, ಯಾಸೀರ್ ಖಾನ್ ಪಠಾಣ, ಎಫ್.ಎಚ್. ಜಕ್ಕಪ್ಪನವರ, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಹಾವೇರಿಯಲ್ಲಿ ಆರಂಭವಾದ ಮೋಡ ಬಿತ್ತನೆ ಯಶಸ್ವಿಯಾದರೆ ಉತ್ತರ ಕರ್ನಾಟಕದ ಇತರೆ ಜಿಲ್ಲೆಗಳಿಗೂ ವಿಸ್ತರಿಸಲು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಲಾಗುವುದು.”

– ಸತೀಶ ಜಾರಕಿಹೊಳಿ

25 ವರ್ಷಗಳ ಸೇವೆಗೆ ಬೆಳ್ಳಿ ಪದಕ; ಪರಶುರಾಮ ಲಮಾಣಿಗೆ ಸನ್ಮಾನ

ವಿಜಯಸಾಕ್ಷಿ ಸುದ್ದಿ, ಗದಗ: ಕೆಎಸ್‌ಆರ್‌ಟಿಸಿ ಗದಗ ಡಿಪೋದಲ್ಲಿ 25 ವರ್ಷಗಳ ಕಾಲ ಚಾಲಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ಬೆಳ್ಳಿ ಪದಕ ಪ್ರಶಸ್ತಿ ಪಡೆದಿರುವ ಪರಶುರಾಮ ಚಂದಪ್ಪ ಲಮಾಣಿ ಅವರು ಜೂನ್ 30ರಂದು ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ನರಸಾಪೂರ ಗ್ರಾಮದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಆತ್ಮೀಯ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಳಸಾಪೂರ ಗ್ರಾಮದ ಎಸಿಎಂ ಗಾರ್ಮೆಂಟ್ಸ್ ಮಾಲೀಕರಾದ ಅಶೋಕ ರಾಠೋಡ, ಸಂಗೀತಾ ರಾಠೋಡ ಹಾಗೂ ಶಾಂತಾ ರಾಠೋಡ ಅವರ ನೇತೃತ್ವದಲ್ಲಿ ಪರಶುರಾಮ ಲಮಾಣಿ ಹಾಗೂ ಅವರ ಪತ್ನಿಯನ್ನು ಸನ್ಮಾನಿಸಿ, ಅವರ ದೀರ್ಘಕಾಲದ ಸೇವೆ, ಕರ್ತವ್ಯನಿಷ್ಠೆ ಮತ್ತು ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಸುರೇಶ ಚಂದಪ್ಪ ಲಮಾಣಿ, ಲಕ್ಷ್ಮಣ ರಾಠೋಡ, ಶಂಕರಪ್ಪ ರಾಠೋಡ, ರಮೇಶ ಚವ್ಹಾಣ ಸೇರಿದಂತೆ ಎಸಿಎಂ ಗಾರ್ಮೆಂಟ್ಸ್‌ನ ಸಿಬ್ಬಂದಿ ಹಾಗೂ ಕಾರ್ಮಿಕರು ಉಪಸ್ಥಿತರಿದ್ದು, ಸೇವಾ ನಿವೃತ್ತ ಜೀವನ ಸುಖ-ಶಾಂತಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದ್ದಾರೆ ಎಂದು ಮಹಾಂತೇಶ ರಾಠೋಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳೆವಿಮೆ ಪರಿಹಾರ ವಿಳಂಬ ಖಂಡನೆ: ರೈತರಿಗೆ ₹28 ಕೋಟಿ ಬಾಕಿ ಬಿಡುಗಡೆಗೆ ಆಗ್ರಹ

ವಿಜಯಸಾಕ್ಷಿ ಸುದ್ದಿ, ಡಂಬಳ: ಗದಗ ಜಿಲ್ಲೆಯಲ್ಲಿ 2025ರ ಖಾರಿಫ್ ಹಂಗಾಮಿನ ಬೆಳೆವಿಮೆ ಪರಿಹಾರ ಹಾಗೂ ಸಿಸಿಇ (ಕ್ರಾಪ್ ಕಟಿಂಗ್ ಎಕ್ಸ್‌ಪೆರಿಮೆಂಟ್) ಪಾವತಿ ವಿಚಾರದಲ್ಲಿ ರೈತರಿಗೆ ತೀವ್ರ ಅನ್ಯಾಯವಾಗುತ್ತಿದ್ದು, ಓರಿಯಂಟಲ್ ಇನ್ಶುರೆನ್ಸ್ ಕಂಪನಿ ಹಾಗೂ ಸಂಬಂಧಿಸಿದ ಅಧಿಕಾರಿಗಳು ರೈತರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ ಎಂದು ಅಖಿಲ ಕರ್ನಾಟಕ ರಾಜ್ಯ ಕಿಸಾನ ಜಾಗೃತಿ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪಗೌಡ ಕರಮುಡಿ ಆರೋಪಿಸಿದರು.

ಡಂಬಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಓರಿಯಂಟಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಬೆಂಗಳೂರು ವತಿಯಿಂದ ಜಂಟಿ ಕೃಷಿ ನಿರ್ದೇಶಕರಿಗೆ ಕಳುಹಿಸಿರುವ ಪತ್ರದಲ್ಲಿ 2025ರ ಖಾರಿಫ್ ಹಂಗಾಮಿನ ವಿವಿಧ ಬೆಳೆಗಳಿಗೆ ಒಟ್ಟು ₹89.71 ಕೋಟಿ ಸಿಸಿಇ ಕ್ಲೈಮ್ ಪ್ರಾರಂಭಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಆದರೆ 80-110 (ಕಪ್ ಮತ್ತು ಕ್ಯಾಪ್) ಮಾದರಿಯ ಪ್ರಕಾರ ಕಂಪನಿಯ ಹೊಣೆಗಾರಿಕೆ ₹45 ಕೋಟಿ ಮಾತ್ರವಾಗಿದೆ. ಇದರಲ್ಲಿ ಈಗಾಗಲೇ ₹16.17 ಕೋಟಿ ಎಲ್‌ಸಿ ಪಾವತಿ ಹಾಗೂ ₹60.50 ಲಕ್ಷ ಆರಂಭಿಕ ಸಿಸಿಇ ಪಾವತಿಗೆ ಬಳಸಲಾಗಿದೆ ಎಂದು ತಿಳಿಸಲಾಗಿದೆ ಎಂದರು.

ರಾಜ್ಯ ಕೃಷಿ ಇಲಾಖೆಯಿಂದ ಬಾಕಿ ಮೊತ್ತ ಬಿಡುಗಡೆಯಾಗದ ಕಾರಣ ಸಂಪೂರ್ಣ ಸಿಸಿಇ ಪರಿಹಾರವನ್ನು ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಂಪನಿ ತನ್ನ ಪತ್ರದಲ್ಲಿ ಸ್ಪಷ್ಟಪಡಿಸಿರುವುದನ್ನೂ ಅವರು ಉಲ್ಲೇಖಿಸಿದರು.

ಜೂನ್ 25, 2026ರಂದು ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ರೈತ ಸಂಘಗಳೊಂದಿಗೆ ನಡೆದ ಸಭೆಯಲ್ಲಿ ಕೆಂಪು ಮೆಣಸಿನಕಾಯಿ ಬೆಳೆಗಾರರಿಗೆ ಪರಿಹಾರ ನೀಡುವ ಕುರಿತು ಚರ್ಚೆ ನಡೆದಿತ್ತು. ಸಭೆಯ ಬಳಿಕ ಕಂಪನಿ ನೀಡಿದ ಪ್ರತಿಕ್ರಿಯೆಯಲ್ಲಿ, ರೈತ ಸಂಘಗಳ ಮನವಿ ಹಾಗೂ ಬೆಳೆ ಸಮೀಕ್ಷೆ ವರದಿಯ ಆಧಾರದ ಮೇಲೆ ರಾಜ್ಯ ಸರ್ಕಾರದಿಂದ ಅಗತ್ಯ ಅನುದಾನ ದೊರೆತಲ್ಲಿ ಸರ್ಕಾರದ ಆದೇಶದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು ಎಂದು ಹೇಳಿದರು.

ಜಿಲ್ಲೆಯ ಸಾವಿರಾರು ರೈತರು ಬೆಳೆ ನಷ್ಟದಿಂದ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಬಾಕಿ ಉಳಿದಿರುವ ಬೆಳೆವಿಮೆ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು. ಜೊತೆಗೆ ರೈತರಿಗೆ ಅನ್ಯಾಯ ಎಸಗಿರುವ ಅಧಿಕಾರಿಗಳು ಹಾಗೂ ಓರಿಯಂಟಲ್ ಇನ್ಶುರೆನ್ಸ್ ಕಂಪನಿ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಯಲ್ಲಪ್ಪಗೌಡ ಕರಮುಡಿ ಆಗ್ರಹಿಸಿದರು.

“ರೈತರಿಗೆ ನೀಡಬೇಕಿರುವ ಸುಮಾರು ₹28 ಕೋಟಿ ಬೆಳೆವಿಮೆ ಪರಿಹಾರವನ್ನು ವಿನಾಕಾರಣ ವಿಳಂಬ ಮಾಡಲಾಗುತ್ತಿದೆ. ಸರ್ಕಾರ ಮತ್ತು ವಿಮಾ ಕಂಪನಿ ಪರಸ್ಪರ ಹೊಣೆಗಾರಿಕೆಯನ್ನು ತಳ್ಳಿಹಾಕುತ್ತಿದ್ದು, ಅದರ ಹೊರೆ ರೈತರ ಮೇಲೆ ಬೀಳುತ್ತಿದೆ. ತಕ್ಷಣವೇ ಬಾಕಿ ಹಣ ಬಿಡುಗಡೆ ಮಾಡಿ ರೈತರಿಗೆ ನ್ಯಾಯ ಒದಗಿಸಬೇಕು.”

– ಯಲ್ಲಪ್ಪಗೌಡ ಕರಮುಡಿ, ಜಿಲ್ಲಾಧ್ಯಕ್ಷರು, ಅಖಿಲ ಕರ್ನಾಟಕ ರಾಜ್ಯ ಕಿಸಾನ ಜಾಗೃತಿ ಸಂಘ