Home Blog Page 36

ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಕರಾವಳಿಗೆ ಆರೆಂಜ್ ಅಲರ್ಟ್!

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಜೂನ್ 15ರವರೆಗೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯ ಸಾಧ್ಯತೆ ಹಿನ್ನೆಲೆ ಆರೆಂಜ್ ಅಲರ್ಟ್ ಜಾರಿಗೊಳಿಸಲಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಕರಾವಳಿ ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ನಿರೀಕ್ಷೆಯಿದ್ದು, ಕಡಲತೀರ ಪ್ರದೇಶಗಳಲ್ಲಿ ಗಂಟೆಗೆ 30–40 ಕಿ.ಮೀ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. ಈ ಹಿನ್ನೆಲೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮಲೆನಾಡು ಮತ್ತು ದಕ್ಷಿಣ ಒಳನಾಡಿನ ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯೊಂದಿಗೆ ನಿರಂತರ ಗಾಳಿ ಬೀಸುವ ಸಾಧ್ಯತೆ ಇದೆ. ಬಳ್ಳಾರಿ ಜಿಲ್ಲೆಯಲ್ಲಿ ಸಾಧಾರಣ ಮಳೆ ಹಾಗೂ ಗಾಳಿ ಮುಂದುವರಿಯುವ ನಿರೀಕ್ಷೆಯಿದೆ.

ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡಕವಿದ ವಾತಾವರಣ ಇರಲಿದ್ದು, ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ತಾಯಿಗೆ ಮಗಳ ಅಶ್ಲೀಲ ಫೋಟೋ ಕಳುಹಿಸಿ ಹಣಕ್ಕೆ ಬೇಡಿಕೆ: ಆರೋಪಿ ಬಂಧನ

ಚಿಕ್ಕಮಗಳೂರು: ಯುವತಿಯ ಅಶ್ಲೀಲ ಫೋಟೋಗಳನ್ನು ಆಕೆಯ ತಾಯಿಗೆ ಕಳುಹಿಸಿ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದ ಆರೋಪಿಯನ್ನು ಚಿಕ್ಕಮಗಳೂರು ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ (ಸಿಇಎನ್) ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಮೂಲದ ಯೋಗೀಶ್ ಬಂಧಿತ ಆರೋಪಿ. ಲಕ್ಕವಳ್ಳಿ ಮೂಲದ 25 ವರ್ಷದ ಯುವತಿಯ ಅಶ್ಲೀಲ ಫೋಟೋಗಳನ್ನು ಆಕೆಯ ತಾಯಿಗೆ ಕಳುಹಿಸಿದ್ದ ಆರೋಪಿ, ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಇದಲ್ಲದೆ ರಾತ್ರಿ ವೇಳೆ ನಿರಂತರವಾಗಿ ಕರೆ ಮಾಡಿ ಹಣ ನೀಡುವಂತೆ ಪೀಡಿಸುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಯ ಕಿರುಕುಳದಿಂದ ಬೇಸತ್ತ ಮಹಿಳೆ ಚಿಕ್ಕಮಗಳೂರು ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ.

ಜೈಲಿನಿಂದಲೇ ಪತ್ನಿ ಹತ್ಯೆಗೆ ಸುಪಾರಿ: ಬುರ್ಖಾ ಧರಿಸಿ ಬಂದು ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದ ದುಷ್ಕರ್ಮಿಗಳು

0

ಶಿವಮೊಗ್ಗ: ಬುರ್ಖಾ ಧರಿಸಿ ಮಹಿಳೆಯೊಬ್ಬಳ ಹತ್ಯೆಗೆ ಯತ್ನಿಸಿದ್ದ ಮೂವರು ಯುವಕರನ್ನು ಸಾರ್ವಜನಿಕರು ಬೆನ್ನಟ್ಟಿ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಶಿವಮೊಗ್ಗ ನಗರದ ಕೆ.ಆರ್.ಪುರಂ ರಸ್ತೆಯಲ್ಲಿ ನಡೆದಿದೆ.

ದರ್ಶನ್ (18), ಮಹೇಶ್ (20) ಹಾಗೂ ಅಸ್ಲಾಂ (25) ಬಂಧಿತ ಆರೋಪಿಗಳು. ಇವರು ರೌಡಿಶೀಟರ್ ಸಾತು ಎಂಬಾತನ ಪತ್ನಿ ತಬಸುಮ್ ಬಾನು ಅವರನ್ನು ಹತ್ಯೆ ಮಾಡಲು ಮನೆಗೆ ನುಗ್ಗಿದ್ದರು ಎನ್ನಲಾಗಿದೆ.

ಮಹಿಳೆಯ ಮನೆಗೆ ನುಗ್ಗಿದ ಆರೋಪಿಗಳು ಹಲ್ಲೆಗೆ ಯತ್ನಿಸಿದ ವೇಳೆ ತಬಸುಮ್ ಬಾನು ಜೋರಾಗಿ ಕೂಗಿಕೊಂಡಿದ್ದಾರೆ. ಇದರಿಂದ ಸ್ಥಳೀಯರು ಎಚ್ಚೆತ್ತು ಆರೋಪಿಗಳನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಬಳಿಕ ಸಾರ್ವಜನಿಕರು ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿ ಹಾಗೂ ರೌಡಿಶೀಟರ್ ಸಾತು ಈ ಸಂಚಿನ ಸೂತ್ರಧಾರ ಎಂಬ ಮಾಹಿತಿ ಹೊರಬಿದ್ದಿದೆ. ಜೈಲಿನಲ್ಲಿ ತನ್ನನ್ನು ಭೇಟಿ ಮಾಡಲು ಪತ್ನಿ ಬರುತ್ತಿಲ್ಲ ಎಂಬ ಅಸಮಾಧಾನದಿಂದ ಆತ ಜೈಲಿನಲ್ಲೇ ಕುಳಿತು ಪತ್ನಿ ಹತ್ಯೆಗೆ ಸುಪಾರಿ ನೀಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

ಪ್ರಕರಣ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಗ್ಯಾಸ್ ಲಾರಿ ಬ್ರೇಕ್ ಫೇಲ್ ಆಗಿ ಕೆಟಿಎಂ ಬೈಕ್‌ಗೆ ಡಿಕ್ಕಿ; ಗೊರಗುಂಟೆಪಾಳ್ಯದಲ್ಲಿ ದಂಪತಿ ಧಾರುಣ ಸಾವು!

ಬೆಂಗಳೂರು: ನಗರದ ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗ್ಯಾಸ್ ಸಿಲಿಂಡರ್‌ಗಳಿಂದ ತುಂಬಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಕೆಟಿಎಂ ಡ್ಯೂಕ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪತಿ-ಪತ್ನಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಮೃತರನ್ನು ನಾಗರಬಾವಿ ನಿವಾಸಿಗಳಾದ ಶಬ್ರಾಜ್ (28) ಮತ್ತು ಅವರ ಪತ್ನಿ ಶಬ್ರೀನ್ (24) ಎಂದು ಗುರುತಿಸಲಾಗಿದೆ. ಇಬ್ಬರೂ ತಮ್ಮ ಕೆಟಿಎಂ ಬೈಕ್‌ನಲ್ಲಿ ನಾಗರಬಾವಿಯಿಂದ ಯಶವಂತಪುರ ಕಡೆಗೆ ತೆರಳುತ್ತಿದ್ದ ವೇಳೆ ಗೊರಗುಂಟೆಪಾಳ್ಯ ಸಿಗ್ನಲ್ ದಾಟಿದ ನಂತರ ಈ ದುರಂತ ಸಂಭವಿಸಿದೆ.

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಗ್ಯಾಸ್ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಲಾರಿಯ ಬ್ರೇಕ್ ಫೇಲ್ ಆಗಿದ್ದು, ಸಿಗ್ನಲ್ ಬಳಿ ಚಾಲಕನ ನಿಯಂತ್ರಣ ತಪ್ಪಿದೆ. ವೇಗವಾಗಿ ಮುಂದಕ್ಕೆ ನುಗ್ಗಿದ ಲಾರಿ ಯಶವಂತಪುರ ರಸ್ತೆಯ ಟಿಎಂಟಿ ಜಂಕ್ಷನ್ ಬಳಿ ಬೈಕ್‌ಗೆ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದಂಪತಿ ರಸ್ತೆಗೆ ಬಿದ್ದಿದ್ದು, ಆ ಕ್ಷಣದಲ್ಲೇ ಲಾರಿಯ ಹಿಂಭಾಗದ ಚಕ್ರಗಳು ಅವರ ಮೇಲೆ ಹರಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲಿ ಭೀಕರ ದೃಶ್ಯ ನಿರ್ಮಾಣವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸುದ್ದಿ ತಿಳಿದ ತಕ್ಷಣ ಯಶವಂತಪುರ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಪೀಕ್ ಅವರ್ ವೇಳೆಯಲ್ಲೇ ನಡೆದ ಈ ಅಪಘಾತದಿಂದ ತುಮಕೂರು ರಸ್ತೆ ಮತ್ತು ಯಶವಂತಪುರ ಮಾರ್ಗದಲ್ಲಿ ಗಂಟೆಗಳ ಕಾಲ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕ್ರೇನ್ ಸಹಾಯದಿಂದ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಪುನಃಸ್ಥಾಪಿಸಲಾಗಿದೆ. ಈ ಕುರಿತು ಯಶವಂತಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ನಾಗರ ಹಾವು ತಪ್ಪಿಸಲು ಯತ್ನ: ಬಸ್-ಬೈಕ್ ಸರಣಿ ಅಪಘಾತ, ತೋಟಕ್ಕೆ ನುಗ್ಗಿದ ಬಸ್!

ಚಿಕ್ಕಮಗಳೂರು: ರಸ್ತೆಗೆ ಏಕಾಏಕಿ ಅಡ್ಡ ಬಂದ ನಾಗರ ಹಾವನ್ನು ತಪ್ಪಿಸಲು ಯತ್ನಿಸಿದ ಬೈಕ್ ಸವಾರನ ಎಡವಟ್ಟಿನಿಂದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ.

ಅಪಘಾತದ ಪರಿಣಾಮ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ತೋಟಕ್ಕೆ ನುಗ್ಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ನಾರಾಯಣಪುರ ಗೇಟ್ ರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ಸವಾರರ ಮುಂದೆ ಬೃಹತ್ ಗಾತ್ರದ ನಾಗರ ಹಾವೊಂದು ಏಕಾಏಕಿ ರಸ್ತೆ ದಾಟಲು ಮುಂದಾಗಿದೆ. ಹಾವನ್ನು ಕಂಡು ಆತಂಕಗೊಂಡ ಬೈಕ್ ಚಾಲಕ ತಕ್ಷಣವೇ ರಸ್ತೆ ಮಧ್ಯದಲ್ಲೇ ಬ್ರೇಕ್ ಹಾಕಿದ್ದಾನೆ. ಈ ವೇಳೆ ಬೈಕ್‌ನ ಹಿಂಬದಿಯಲ್ಲೇ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೆ ವಾಹನ ನಿಯಂತ್ರಿಸಲು ಸಾಧ್ಯವಾಗದೆ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ.

ಬೈಕ್‌ಗೆ ಗುದ್ದಿದ ಬಳಿಕ ಬಸ್ ಚಾಲಕ ಬ್ರೇಕ್ ಹಾಕಿ ವಾಹನವನ್ನು ನಿಯಂತ್ರಿಸಲು ಪ್ರಯತ್ನಿಸಿದರೂ, ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟದ ಬೇಲಿಯನ್ನು ಮುರಿದು ಒಳನುಗ್ಗಿದೆ. ಅಪಘಾತದ ವೇಳೆ ಬಸ್‌ನಲ್ಲಿ ಹಲವಾರು ಪ್ರಯಾಣಿಕರಿದ್ದರೂ, ಚಾಲಕನ ಸಮಯಪ್ರಜ್ಞೆಯಿಂದ ಭಾರಿ ದುರಂತ ತಪ್ಪಿದೆ. ಬಸ್ ತೋಟಕ್ಕೆ ನುಗ್ಗುತ್ತಿದ್ದಂತೆಯೇ ಪ್ರಯಾಣಿಕರು ಆತಂಕಗೊಂಡು ಕಿರುಚಾಡಿದ ಘಟನೆ ನಡೆದಿದೆ.

ಅಪಘಾತದಲ್ಲಿ ಬೈಕ್‌ನಲ್ಲಿದ್ದ ಇಬ್ಬರು ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮಾಹಿತಿ ತಿಳಿದ ಅಜ್ಜಂಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ನಾಗರ ಹಾವನ್ನು ತಪ್ಪಿಸಲು ಮಾಡಿದ ಯತ್ನವೇ ಈ ಅಪಘಾತಕ್ಕೆ ಕಾರಣವಾಗಿರುವುದು ಸ್ಥಳೀಯರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಚಹಾ ಪ್ರಿಯರೇ ಗಮನಿಸಿ: ಈ ತಪ್ಪುಗಳು ಗ್ಯಾಸ್‌ ಸಮಸ್ಯೆ ಹೆಚ್ಚಿಸಬಹುದು!

0

ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್‌ ಬಿಸಿ ಬಿಸಿ ಚಹಾ ಕುಡಿಯುವುದು ಅನೇಕ ಜನರ ದಿನಚರಿಯ ಭಾಗವಾಗಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಹಾಲು ಹಾಕಿದ ಚಹಾ ಸೇವನೆಯ ಬಳಿಕ ಗ್ಯಾಸ್‌, ಹೊಟ್ಟೆ ಉಬ್ಬರ, ಎದೆ ಉರಿ, ಹುಳಿ ತೇಗು ಹಾಗೂ ಅಜೀರ್ಣದಂತಹ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಕೆಲವರು ಚಹಾ ಕುಡಿದ ಕೆಲವೇ ನಿಮಿಷಗಳಲ್ಲಿ ಅಸ್ವಸ್ಥತೆಯನ್ನು ಅನುಭವಿಸುತ್ತಿದ್ದು, ಇದರ ಹಿಂದಿರುವ ಕಾರಣಗಳ ಬಗ್ಗೆ ಆರೋಗ್ಯ ತಜ್ಞರು ಮಹತ್ವದ ಮಾಹಿತಿ ನೀಡಿದ್ದಾರೆ.

ತಜ್ಞರ ಪ್ರಕಾರ, ಹಾಲಿನಲ್ಲಿರುವ ಲ್ಯಾಕ್ಟೋಸ್‌ ಎಂಬ ಸಕ್ಕರೆ ಅಂಶವನ್ನು ಜೀರ್ಣಿಸಿಕೊಳ್ಳಲು ದೇಹದಲ್ಲಿ ಲ್ಯಾಕ್ಟೇಸ್‌ ಎಂಬ ಎನ್ಜೈಮ್‌ ಅಗತ್ಯವಿರುತ್ತದೆ. ಕೆಲವರಲ್ಲಿ ಈ ಎನ್ಜೈಮ್‌ ಪ್ರಮಾಣ ಕಡಿಮೆ ಇರುವುದರಿಂದ ಹಾಲು ಸರಿಯಾಗಿ ಜೀರ್ಣವಾಗುವುದಿಲ್ಲ. ಇದನ್ನು ಲ್ಯಾಕ್ಟೋಸ್‌ ಇಂಟಾಲರೆನ್ಸ್‌ ಎಂದು ಕರೆಯಲಾಗುತ್ತದೆ. ಇಂತಹವರಲ್ಲಿ ಹಾಲು ಸೇರಿಸಿದ ಚಹಾ ಸೇವಿಸಿದ ನಂತರ ಹೊಟ್ಟೆ ಉಬ್ಬರ, ಗ್ಯಾಸ್‌, ಹೊಟ್ಟೆ ನೋವು, ಅಜೀರ್ಣ ಹಾಗೂ ಕೆಲವೊಮ್ಮೆ ಅತಿಸಾರದಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಇದರ ಜೊತೆಗೆ ಚಹಾದಲ್ಲಿರುವ ಕ್ಯಾಫಿನ್‌ ಅಂಶವೂ ಅಸಿಡಿಟಿಗೆ ಪ್ರಮುಖ ಕಾರಣವಾಗಬಹುದು. ವಿಶೇಷವಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಅಭ್ಯಾಸವಿರುವವರಲ್ಲಿ ಹೊಟ್ಟೆಯೊಳಗಿನ ಆಮ್ಲದ ಉತ್ಪತ್ತಿ ಹೆಚ್ಚಾಗುತ್ತದೆ. ಇದರಿಂದ ಎದೆ ಉರಿ, ಹುಳಿ ತೇಗು, ಆಸಿಡ್‌ ರಿಫ್ಲಕ್ಸ್‌ ಹಾಗೂ ಹೊಟ್ಟೆಯಲ್ಲಿ ಅಸ್ವಸ್ಥತೆ ಉಂಟಾಗಬಹುದು. ದಿನವಿಡೀ ಹಲವು ಬಾರಿ ಚಹಾ ಸೇವಿಸುವವರಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಚಹಾ ಕುಡಿಯುವ ಸಮಯವೂ ಮುಖ್ಯ

ಚಹಾ ಸೇವನೆಯ ಸಮಯ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಬೆಳಿಗ್ಗೆ ಆಹಾರ ಸೇವಿಸದೇ ಗಟ್ಟಿಯಾದ ಹಾಲಿನ ಚಹಾ ಕುಡಿಯುವುದು ಜೀರ್ಣಾಂಗದ ಮೇಲೆ ಒತ್ತಡ ಉಂಟುಮಾಡಬಹುದು. ಅದೇ ರೀತಿ ಸಂಜೆ ಅಥವಾ ರಾತ್ರಿ ತಡವಾಗಿ ಚಹಾ ಕುಡಿಯುವುದರಿಂದ ಅಜೀರ್ಣದ ಜೊತೆಗೆ ನಿದ್ರೆಯ ಮೇಲೆಯೂ ಪರಿಣಾಮ ಬೀಳಬಹುದು. ಆದ್ದರಿಂದ ಚಹಾವನ್ನು ಮಿತ ಪ್ರಮಾಣದಲ್ಲಿ ಹಾಗೂ ಸರಿಯಾದ ಸಮಯದಲ್ಲಿ ಸೇವಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇತರ ಕಾರಣಗಳೂ ಅಸಿಡಿಟಿಗೆ ಕಾರಣ

ಅಸಿಡಿಟಿ ಮತ್ತು ಗ್ಯಾಸ್‌ ಸಮಸ್ಯೆಗೆ ಕೇವಲ ಚಹಾ ಮಾತ್ರ ಕಾರಣವಲ್ಲ. ಅತಿಯಾದ ಎಣ್ಣೆಯುಕ್ತ ಆಹಾರ, ಜಂಕ್‌ ಫುಡ್‌, ಮೈದಾ ಪದಾರ್ಥಗಳ ಸೇವನೆ, ಅಸಮರ್ಪಕ ಆಹಾರ ಪದ್ಧತಿ ಹಾಗೂ ದೈಹಿಕ ಚಟುವಟಿಕೆಯ ಕೊರತೆ ಕೂಡ ಪ್ರಮುಖ ಕಾರಣಗಳಾಗಿವೆ. ವ್ಯಾಯಾಮವಿಲ್ಲದ ಜೀವನಶೈಲಿಯಿಂದ ಮೆಟಾಬಾಲಿಸಂ ನಿಧಾನಗೊಳ್ಳುವುದರಿಂದ ಜೀರ್ಣಕ್ರಿಯೆ ದುರ್ಬಲವಾಗಿ ಅಸಿಡಿಟಿ ಸಮಸ್ಯೆ ಹೆಚ್ಚಾಗಬಹುದು.

ಸಮಸ್ಯೆ ತಪ್ಪಿಸಲು ಏನು ಮಾಡಬೇಕು?

ಆರೋಗ್ಯ ತಜ್ಞರ ಸಲಹೆಯಂತೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದನ್ನು ತಪ್ಪಿಸಬೇಕು. ದಿನಕ್ಕೆ ಎರಡು ಅಥವಾ ಮೂರು ಕಪ್‌ಗಿಂತ ಹೆಚ್ಚು ಚಹಾ ಸೇವಿಸಬಾರದು. ಚಹಾ ಕುಡಿಯುವಾಗ ಬಿಸ್ಕತ್‌, ಹಣ್ಣು ಅಥವಾ ಹಗುರವಾದ ಆಹಾರವನ್ನು ಜೊತೆಯಲ್ಲಿ ಸೇವಿಸುವುದು ಉತ್ತಮ. ದಿನವಿಡೀ ಸಾಕಷ್ಟು ನೀರು ಕುಡಿಯುವುದು, ಜಂಕ್‌ ಫುಡ್‌ ಹಾಗೂ ಎಣ್ಣೆ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡುವುದು, ನಿಯಮಿತವಾಗಿ ಕನಿಷ್ಠ 30 ನಿಮಿಷಗಳ ಕಾಲ ವಾಕಿಂಗ್‌ ಅಥವಾ ವ್ಯಾಯಾಮ ಮಾಡುವುದು ಮತ್ತು ಸಮರ್ಪಕ ನಿದ್ರೆ ಪಡೆಯುವುದು ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿಯಾಗುತ್ತದೆ.

ಒಟ್ಟಾರೆಯಾಗಿ, ಹಾಲಿನ ಚಹಾ ಎಲ್ಲರಿಗೂ ಸಮಸ್ಯೆ ಉಂಟುಮಾಡುವುದಿಲ್ಲ. ಆದರೆ ಚಹಾ ಸೇವಿಸಿದ ಬಳಿಕ ಪದೇಪದೇ ಗ್ಯಾಸ್‌, ಅಸಿಡಿಟಿ ಅಥವಾ ಅಜೀರ್ಣ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದರೆ ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡುವುದು ಅಗತ್ಯ. ಸಮಸ್ಯೆ ನಿರಂತರವಾಗಿ ಮುಂದುವರಿದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ ಎಂದು ತಜ್ಞರು ಸೂಚಿಸಿದ್ದಾರೆ.

ನಾನು ಜನರ ಏಜೆಂಟ್, ಮಾಫಿಯಾದ ಕಮಿಷನ್ ಏಜೆಂಟ್ ಅಲ್ಲ: ಡಿ.ಕೆ. ಶಿವಕುಮಾರ್ʼಗೆ ಅಶೋಕ್ ತಿರುಗೇಟು

ಬೆಂಗಳೂರು: ತಮ್ಮನ್ನು ‘ಕಸದ ಮಾಫಿಯಾ ಏಜೆಂಟ್’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಟೀಕಿಸಿರುವುದಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ತಾವು ಜನರ ಪರವಾಗಿ ಧ್ವನಿಯೆತ್ತುವ ಏಜೆಂಟ್ ಹೊರತು ಯಾವುದೇ ಮಾಫಿಯಾದ ಕಮಿಷನ್ ಏಜೆಂಟ್ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಶೋಕ್, “ಕರ್ನಾಟಕದ ಏಳೂವರೆ ಕೋಟಿ ಕನ್ನಡಿಗರ ಹಕ್ಕುಗಳಿಗಾಗಿ ಮತ್ತು ಬೆಂಗಳೂರಿನ ಒಂದೂವರೆ ಕೋಟಿ ನಾಗರಿಕರ ಪರವಾಗಿ ಧ್ವನಿಯಾಗಿರುವ ಜನತಾ ಏಜೆಂಟ್ ನಾನು. ವಿಪಕ್ಷ ನಾಯಕನಾಗಿ ಸರ್ಕಾರದ ಕಾರ್ಯವೈಖರಿ ಮತ್ತು ಅಕ್ರಮಗಳನ್ನು ಪ್ರಶ್ನಿಸುವುದು ನನ್ನ ಸಂವಿಧಾನಬದ್ಧ ಕರ್ತವ್ಯ. ಅದಕ್ಕೆ ಯಾರ ಅನುಮತಿಯೂ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಯವರ ಹೇಳಿಕೆಯನ್ನು ಟೀಕಿಸಿರುವ ಅವರು, ಮುಖ್ಯಮಂತ್ರಿ ಸ್ಥಾನ ಪಡೆಯಲು ನಡೆಸಿದ ರಾಜಕೀಯ ಪ್ರಯತ್ನಗಳನ್ನು ಉಲ್ಲೇಖಿಸಿ ವ್ಯಂಗ್ಯವಾಡಿದ್ದಾರೆ. ಜೊತೆಗೆ, ವಿಪಕ್ಷಗಳು ಸರ್ಕಾರಕ್ಕೆ ಯಾವುದೇ ‘ಹನಿಮೂನ್ ಪೀರಿಯಡ್’ ನೀಡುತ್ತಿಲ್ಲ ಎಂಬ ಅಸಮಾಧಾನ ಆಡಳಿತ ಪಕ್ಷದಲ್ಲಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷದೊಳಗಿನ ಅಸಮಾಧಾನವನ್ನೂ ಪ್ರಸ್ತಾಪಿಸಿದ ಅಶೋಕ್, “ನಿಮ್ಮದೇ ಪಕ್ಷದ ಶಾಸಕರು ನಿರಂತರವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ದೆಹಲಿಗೆ ತೆರಳಿ ನಾಯಕತ್ವದ ವಿರುದ್ಧ ದೂರುಗಳನ್ನು ನೀಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಿಮ್ಮ ರಾಜಕೀಯ ಸಮಸ್ಯೆಗಳನ್ನು ಮರೆಮಾಚಲು ನನ್ನ ಮೇಲೆ ಆರೋಪ ಮಾಡಬೇಡಿ” ಎಂದು ಕಿಡಿಕಾರಿದ್ದಾರೆ.

ಕೊಲ್ಲೂರುಗೆ ಸಿಎಂ ವಿಜಯ್ ಆಗಮನ: 5 ಗಂಟೆಗಳ ಕಾಲ ಭಕ್ತರಿಗೆ ದರ್ಶನ ಬಂದ್

ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ ಭೇಟಿ ಹಿನ್ನೆಲೆಯಲ್ಲಿ ಶುಕ್ರವಾರ ದೇವಸ್ಥಾನದಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಭಕ್ತರ ದರ್ಶನಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.

ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನ ಅವಕಾಶ ಇರುವುದಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ. ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತ ಹಾಗೂ ಸಂಚಾರ ಮಾರ್ಗಗಳಲ್ಲಿ ಬಿಗಿ ಬಂದೋಬಸ್ತು ಕೈಗೊಳ್ಳಲಾಗಿದೆ.

ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಮತ್ತು ಭಕ್ತರಿಗೆ ಎಚ್ಚರಿಕೆ ನೀಡಿದ್ದು, ಕಾನ್ವಾಯ್ ಸಾಗುವ ಮಾರ್ಗಗಳಲ್ಲಿ ಅಥವಾ ದೇವಸ್ಥಾನದ ಪ್ರವೇಶ ದ್ವಾರ ಹಾಗೂ ಆವರಣದಲ್ಲಿ ಗುಂಪು ಸೇರದಂತೆ ಸೂಚಿಸಿದೆ. ಭದ್ರತಾ ಕಾರಣಗಳಿಂದ ಈ ಅವಧಿಯಲ್ಲಿ ಜನಸಂದಣಿ ತಪ್ಪಿಸುವುದು ಸೂಕ್ತ ಎಂದು ಮನವಿ ಮಾಡಿದೆ.

ವಿಜಯ್ ಅವರು ದೇವಿಯ ದರ್ಶನ ಪಡೆದು ನಿಗದಿತ ಕಾರ್ಯಕ್ರಮ ಮುಗಿಸಿದ ಬಳಿಕ ಹಿಂತಿರುಗಲಿದ್ದು, ಯಾವುದೇ ಸಾರ್ವಜನಿಕ ಭೇಟಿ ಅಥವಾ ಸಭೆ ಕಾರ್ಯಕ್ರಮ ಇರುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದಿಂದ ರಾಜ್ಯಸಭೆಗೆ ನಾಲ್ವರು ಅವಿರೋಧ ಆಯ್ಕೆ: ಕಾಂಗ್ರೆಸ್ʼಗೆ ಮೂರು, ಬಿಜೆಪಿಗೆ ಒಂದು ಸ್ಥಾನ

ಬೆಂಗಳೂರು: ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಕಣದಲ್ಲಿ ಯಾವುದೇ ಪ್ರತಿಸ್ಪರ್ಧಿಗಳು ಇಲ್ಲದ ಕಾರಣ ಎಲ್ಲಾ ನಾಲ್ಕು ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಮಲ್ಲಿಕಾರ್ಜುನ ಖರ್ಗೆ, ಮನ್ಸೂರ್ ಅಲಿ ಖಾನ್ ಹಾಗೂ ಪವನ್ ಖೇರಾ ಮತ್ತು ಬಿಜೆಪಿ ಅಭ್ಯರ್ಥಿ ಎಂ. ನಾಗರಾಜು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಕುರಿತು ವಿಧಾನಸಭೆ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಕೆ.ಎಂ. ವಿಶಾಲಾಕ್ಷಿ ಅಧಿಕೃತ ಘೋಷಣೆ ಮಾಡಿದ್ದಾರೆ.

ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಬಳಿಕ ಪ್ರತಿಕ್ರಿಯಿಸಿದ ಬಿಜೆಪಿ ಅಭ್ಯರ್ಥಿ ಎಂ. ನಾಗರಾಜು, ತಮ್ಮ ಆಯ್ಕೆಗೆ ಪಕ್ಷದ ಕೇಂದ್ರ ನಾಯಕತ್ವಕ್ಕೆ ಕೃತಜ್ಞತೆ ಸಲ್ಲಿಸಿದರು.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ವರಿಷ್ಠರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಾನು ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಸಂಘಟನೆಯಲ್ಲಿ ಕೆಲಸ ಮಾಡಿದ್ದೇನೆ. ನನಗೆ ನೀಡಿರುವ ಈ ಜವಾಬ್ದಾರಿಯನ್ನು ನಿರೀಕ್ಷೆಗಳಿಗೆ ತಕ್ಕಂತೆ ನಿರ್ವಹಿಸುತ್ತೇನೆ ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿ ಪವನ್ ಖೇರಾ ಕೂಡ ಸಂತಸ ವ್ಯಕ್ತಪಡಿಸಿದರು. ಕರ್ನಾಟಕದಿಂದ ರಾಜ್ಯಸಭೆ ಸದಸ್ಯನಾಗಿ ಆಯ್ಕೆಯಾಗಿರುವುದು ನನಗೆ ಹೆಮ್ಮೆಯ ವಿಷಯ. ಮುಂದಿನ ಬಾರಿ ಕರ್ನಾಟಕಕ್ಕೆ ಬಂದಾಗ ಕನ್ನಡ ಕಲಿತುಕೊಂಡು ಬರುತ್ತೇನೆ ಎಂದು ಹೇಳಿದರು.

ಸಾಲದ ಹಣ ವಾಪಸ್ ಕೊಡುವುದಾಗಿ ಕರೆಸಿಕೊಂಡು ವೃದ್ಧೆಯ ಹತ್ಯೆ! 25 ದಿನಗಳ ಬಳಿಕ ಆರೋಪಿಗಳು ಅರೆಸ್ಟ್

0

ಕೋಲಾರ: ಸಾಲವಾಗಿ ಪಡೆದಿದ್ದ ಹಣವನ್ನು ಹಿಂತಿರುಗಿಸುವುದಾಗಿ ಹೇಳಿ ಕರೆಸಿಕೊಂಡು ವೃದ್ಧೆಯೊಬ್ಬರನ್ನು ಹತ್ಯೆಗೈದಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಘಟನೆ ನಡೆದ 25 ದಿನಗಳ ಬಳಿಕ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದ ರೆಡ್ಡಮ್ಮ (70) ಹತ್ಯೆಗೀಡಾದ ವೃದ್ಧೆ. ಇದೇ ಗ್ರಾಮದ ನಿವಾಸಿಗಳಾದ ತಿಮ್ಮರಾಜು ಹಾಗೂ ಮುನಿರಾಜು ಎಂಬುವರನ್ನು ಪ್ರಕರಣ ಸಂಬಂಧ ಪೊಲೀಸರು ಬಂಧಿಸಿದ್ದಾರೆ.

ಮೇ 17ರಂದು ರೆಡ್ಡಮ್ಮ ನಾಪತ್ತೆಯಾಗಿದ್ದರು. ಈ ಕುರಿತು ಕುಟುಂಬಸ್ಥರು ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಬಳಿಕ ಜೂನ್ 1ರಂದು ನಾಪತ್ತೆ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ರೆಡ್ಡಮ್ಮ ಅವರ ಮಗನಿಗೆ ಸಾಲ ನೀಡಿದ್ದ ತಿಮ್ಮರಾಜು ಮತ್ತು ಮುನಿರಾಜು ಅವರ ಮೇಲೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ, ಸಾಲದ ಹಣ ನೀಡುವುದಾಗಿ ಹೇಳಿ ರೆಡ್ಡಮ್ಮರನ್ನು ಕರೆಸಿಕೊಂಡು ಹತ್ಯೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಹತ್ಯೆಯ ಬಳಿಕ ಮೃತದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಕೆಂಚಾರ್ಲಹಳ್ಳಿ ಅರಣ್ಯ ಪ್ರದೇಶದಲ್ಲಿ ಬಿಸಾಡಿರುವುದಾಗಿ ಮಾಹಿತಿ ನೀಡಿದ್ದಾರೆ.

ಆರೋಪಿಗಳ ಮಾಹಿತಿ ಆಧರಿಸಿ ಪೊಲೀಸರು ಅರಣ್ಯ ಪ್ರದೇಶದಲ್ಲಿ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಸದ್ಯ ರಾಯಲಪಾಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

error: Content is protected !!