Home Blog Page 37

ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನದ ಬಾಂಬ್ ದಾಳಿ; 11 ಮಕ್ಕಳು ಸೇರಿ 13 ಮಂದಿ ಸಾವು..!

0

ಕಾಬೂಲ್: ಅಫ್ಘಾನಿಸ್ತಾನದ ಗಡಿಭಾಗದಲ್ಲಿ ಪಾಕಿಸ್ತಾನ ಸೇನೆ ಮತ್ತೆ ವಾಯುದಾಳಿ ನಡೆಸಿದೆ ಎಂದು ತಾಲಿಬಾನ್ ಸರ್ಕಾರ ಆರೋಪಿಸಿದ್ದು, ಈ ದಾಳಿಯಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದೆ. ಮೃತರಲ್ಲಿ ಹೆಚ್ಚಿನವರು ಮಕ್ಕಳು ಎನ್ನಲಾಗಿದ್ದು, ಘಟನೆ ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ತಾಲಿಬಾನ್ ಸರ್ಕಾರದ ವಕ್ತಾರ ಜಬೀಹುಲ್ಲಾ ಮುಜಾಹಿದ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಪಾಕಿಸ್ತಾನವು ಅಫ್ಘಾನಿಸ್ತಾನದ ವಾಯುಗಡಿಯನ್ನು ಉಲ್ಲಂಘಿಸಿ ಕುನಾರ್, ಖೋಸ್ಟ್ ಹಾಗೂ ಪಕ್ತಿಕಾ ಪ್ರಾಂತ್ಯಗಳಲ್ಲಿರುವ ನಾಗರಿಕರ ಮನೆಗಳ ಮೇಲೆ ಬಾಂಬ್ ದಾಳಿ ನಡೆಸಿದೆ ಎಂದು ಅವರು ಆರೋಪಿಸಿದ್ದಾರೆ.

ಈ ದಾಳಿಯನ್ನು ಖಂಡಿಸಿರುವ ತಾಲಿಬಾನ್ ಸರ್ಕಾರ, ಇದು ಅಮಾನವೀಯ ಮತ್ತು ಆಕ್ರಮಣಕಾರಿ ಕ್ರಮವಾಗಿದೆ ಎಂದು ಹೇಳಿದೆ. ದಾಳಿಯಲ್ಲಿ 11 ಮಕ್ಕಳು, ಒಬ್ಬ ಮಹಿಳೆ ಹಾಗೂ ಓರ್ವ ವೃದ್ಧ ಮೃತಪಟ್ಟಿದ್ದಾರೆ. ಗಾಯಗೊಂಡ 14 ಮಂದಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಕೂಡ ಸೇರಿದ್ದಾರೆ ಎಂದು ತಿಳಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಸರ್ಕಾರ ಅಥವಾ ಸೇನೆ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ದಾಳಿಯ ಕುರಿತು ಸ್ಪಷ್ಟ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ಇದೇ ವೇಳೆ ಪಾಕಿಸ್ತಾನದ ಕ್ರಮವನ್ನು ಭಾರತ ಖಂಡಿಸಿರುವುದಾಗಿ ವರದಿಯಾಗಿದೆ. ನಾಗರಿಕರ ಜೀವಹಾನಿಗೆ ಕಾರಣವಾದ ಈ ಘಟನೆಯನ್ನು ಕೇವಲ ಸೇನಾ ಕಾರ್ಯಾಚರಣೆಯಂತೆ ಬಿಂಬಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂದು ಟೀಕಿಸಲಾಗಿದೆ.

ಮೂಕಾಂಬಿಕೆಯ ಮೊರೆ ಹೋದ ಸಿಎಂ ವಿಜಯ್: ಶುಕ್ರವಾರ ಕೊಲ್ಲೂರಿನಲ್ಲಿ ವಿಶೇಷ ಪೂಜೆ

0

ಉಡುಪಿ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಶುಕ್ರವಾರ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆಯಲಿದ್ದಾರೆ. ಮುಖ್ಯಮಂತ್ರಿ ಹುದ್ದೆ ವಹಿಸಿಕೊಂಡ ಬಳಿಕ ಅವರು ಮೊದಲ ಬಾರಿಗೆ ಪ್ರಸಿದ್ಧ ಶಕ್ತಿಪೀಠಕ್ಕೆ ಆಗಮಿಸುತ್ತಿರುವುದು ಗಮನ ಸೆಳೆದಿದೆ.

ಶುಕ್ರವಾರ ಮಧ್ಯಾಹ್ನ ಕೊಲ್ಲೂರಿಗೆ ಆಗಮಿಸಲಿರುವ ವಿಜಯ್, ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೂಕಾಂಬಿಕೆ ದೇವಿಯ ದರ್ಶನ ಪಡೆಯಲಿದ್ದಾರೆ. ಬಳಿಕ ಸಂಜೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಚೆನ್ನೈಗೆ ತೆರಳಲಿದ್ದಾರೆ.

ಕೊಲ್ಲೂರು ಕ್ಷೇತ್ರವು ದಕ್ಷಿಣ ಭಾರತದ ರಾಜಕೀಯ ನಾಯಕರಿಗೆ ವಿಶೇಷ ಭಕ್ತಿ ಕೇಂದ್ರವಾಗಿದೆ. ಎಂಜಿಆರ್‌ನಿಂದ ಹಿಡಿದು ಜಯಲಲಿತಾ ತನಕ ಹಲವು ತಮಿಳುನಾಡು ನಾಯಕರು ಇಲ್ಲಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. 2004ರಲ್ಲಿ ಜಯಲಲಿತಾ ಚಂಡಿಕಾಯಾಗ ನಡೆಸಿ ಅನ್ನಸಂತರ್ಪಣೆಗೆ ದೇಣಿಗೆಯನ್ನೂ ನೀಡಿದ್ದರು.

ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರು ಕ್ಷೇತ್ರವು ಪರಶುರಾಮ ಸೃಷ್ಟಿಯ ಏಳು ಮುಕ್ತಿ ಕ್ಷೇತ್ರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಆದಿ ಶಂಕರಾಚಾರ್ಯರು ಪ್ರತಿಷ್ಠಾಪನೆ ಮಾಡಿದ ಈ ಶಕ್ತಿಪೀಠದಲ್ಲಿ ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿಯ ಐಕ್ಯಸ್ವರೂಪವಾಗಿ ಮೂಕಾಂಬಿಕೆಯನ್ನು ಆರಾಧಿಸಲಾಗುತ್ತದೆ. ದೇವಿಯ ದರ್ಶನದಿಂದ ಯಶಸ್ಸು ಮತ್ತು ಏಳಿಗೆ ದೊರೆಯುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಇದೆ.

ಮನೆಯಲ್ಲಿ ಒಂಟಿಯಾಗಿದ್ದ ಗೃಹಿಣಿಗೆ ಗುಂಡೇಟು: ಡೆತ್‌ನೋಟ್‌ನಿಂದ ಹೊಸ ತಿರುವು

ಚಿಕ್ಕಮಗಳೂರು: ಜಿಲ್ಲೆಯ ಹಾಲೇನಹಳ್ಳಿಯಲ್ಲಿ 55 ವರ್ಷದ ಗೃಹಿಣಿಯೊಬ್ಬರು ಗುಂಡೇಟಿನಿಂದ ಮೃತಪಟ್ಟಿರುವ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಘಟನೆ ನಡೆದಿದ್ದು, ಪ್ರಕರಣದ ಸುತ್ತ ನಿಗೂಢತೆ ಆವರಿಸಿದೆ.

ಮೃತ ಸುಮ ಅವರು ಲೈಸೆನ್ಸ್ ಹೊಂದಿದ್ದ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಮೃತರ ಪತಿ ರಾಜೇಶ್ ಉದ್ಯಮಿಯಾಗಿದ್ದು, ಘಟನೆ ವೇಳೆ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಡೆತ್‌ನೋಟ್‌ನಲ್ಲಿರುವ ಅಂಶಗಳು ಹಾಗೂ ಇತರೆ ಸಾಕ್ಷ್ಯಾಧಾರಗಳ ಆಧಾರದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬಸವನಹಳ್ಳಿ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಇದು ಆತ್ಮಹತ್ಯೆಯೋ ಅಥವಾ ಬೇರೆ ಯಾವುದೇ ಕಾರಣವೋ ಎಂಬ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಳಿಕ ಸಾವಿನ ನಿಖರ ಕಾರಣ ಸ್ಪಷ್ಟವಾಗುವ ಸಾಧ್ಯತೆ ಇದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಐವರು ಆರೋಪಿಗಳಿಗೆ ಬಿಗ್‌ ರಿಲೀಫ್: ಜಾಮೀನು ರದ್ದುಪಡಿಸಲು ನಿರಾಕರಣೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳ ಜಾಮೀನು ರದ್ದುಪಡಿಸುವಂತೆ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿ ಎಸ್. ರಾಚಯ್ಯ ಅವರ ಪೀಠ ಈ ಮಹತ್ವದ ಆದೇಶ ಪ್ರಕಟಿಸಿದೆ.

ನಟ ದರ್ಶನ್ ಸೇರಿದಂತೆ ಕೆಲ ಆರೋಪಿಗಳ ಜಾಮೀನು ಈ ಹಿಂದೆ ಸುಪ್ರೀಂಕೋರ್ಟ್‌ನಲ್ಲಿ ರದ್ದಾಗಿದ್ದ ಹಿನ್ನೆಲೆಯಲ್ಲಿ, ಆರೋಪಿಗಳಾದ ವಿನಯ್, ನಂದೀಶ್, ಧನರಾಜು, ಪವನ್ ಮತ್ತು ರಾಘವೇಂದ್ರ ಅವರ ಜಾಮೀನನ್ನೂ ರದ್ದುಪಡಿಸಬೇಕೆಂದು ಪ್ರಾಸಿಕ್ಯೂಷನ್ ಹೈಕೋರ್ಟ್ ಮೆಟ್ಟಿಲೇರಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ವಾದ-ಪ್ರತಿವಾದ ಆಲಿಸಿದ್ದ ಹೈಕೋರ್ಟ್, ಅಂತಿಮವಾಗಿ ಜಾಮೀನು ರದ್ದು ಅರ್ಜಿಯನ್ನು ವಜಾಗೊಳಿಸಿದೆ. ಇದರಿಂದ ಐವರು ಆರೋಪಿಗಳಿಗೆ ಸದ್ಯದ ಮಟ್ಟಿಗೆ ಜೈಲು ಭೀತಿ ತಪ್ಪಿದಂತಾಗಿದೆ.

ಆರೋಪಿ ನಂದೀಶ್ ಪರ ಹಿರಿಯ ವಕೀಲ ರಾಮ್ ಸಿಂಗ್ ವಾದ ಮಂಡಿಸಿದ್ದರು. ಹೈಕೋರ್ಟ್ ಆದೇಶದೊಂದಿಗೆ ಪ್ರಕರಣ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದು, ಸದ್ಯ ಈ ಬಹುಚರ್ಚಿತ ಕೊಲೆ ಪ್ರಕರಣದ ಟ್ರಯಲ್ ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯದಲ್ಲಿ ಮುಂದುವರಿಯುತ್ತಿದೆ.

ಜೂಮ್ ಆ್ಯಪ್ʼನಲ್ಲಿ ಕಾರು ಬುಕ್ ಮಾಡಿ ಕಳ್ಳತನ: ಅಂತಾರಾಜ್ಯ ಖದೀಮ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಅರೆಸ್ಟ್.!

0

ಬೆಂಗಳೂರು: ಬಾಡಿಗೆ ಆಧಾರಿತ ವಾಹನ ಸೇವೆ ನೀಡುವ ಜೂಮ್ ಆ್ಯಪ್ ಮೂಲಕ ಕಾರು ಬುಕ್ ಮಾಡಿ ಕಳ್ಳತನ ಮಾಡಿದ್ದ ಆರೋಪದಡಿ ಮಲ್ಲೇಶ್ವರಂ ಪೊಲೀಸರು ಅಂತಾರಾಜ್ಯ ಖದೀಮನನ್ನು ಬಂಧಿಸಿದ್ದಾರೆ.

ಕೇರಳದ ಕಣ್ಣೂರು ಮೂಲದ ಮಿಶೆಲ್ ಶಫೀಕ್ ಬಂಧಿತ ಆರೋಪಿ. ಪಾದರಾಯನಪುರ ನಿವಾಸಿ ಸೈಯದ್ ಕದೀರ್ ಪಾಷಾ ಅವರಿಗೆ ಸೇರಿದ ಸ್ವಿಫ್ಟ್ ಕಾರನ್ನು ಬಾಡಿಗೆ ಹೆಸರಿನಲ್ಲಿ ಪಡೆದು ವಾಪಸ್ ನೀಡದೆ ಪರಾರಿಯಾಗಿದ್ದ ಆರೋಪ ಈತನ ಮೇಲಿದೆ.

ಸೈಯದ್ ಕದೀರ್ ಪಾಷಾ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, 2023ರಲ್ಲಿ ಸ್ವಿಫ್ಟ್ ಕಾರು ಖರೀದಿಸಿದ್ದರು. ಮನೆ ಸಮೀಪ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಮಲ್ಲೇಶ್ವರಂನ ಎಂಇಎಸ್ ಕಾಲೇಜು ಸಮೀಪದ ರಸ್ತೆಯಲ್ಲಿ ಕಾರು ನಿಲ್ಲಿಸುತ್ತಿದ್ದರು. ಈ ವಾಹನವನ್ನು ತಮ್ಮ ಸಹೋದರ ಫೈಸಲ್ ಖಾನ್ ಹೆಸರಿನಲ್ಲಿ ಜೂಮ್ ಕಾರ್ ಆ್ಯಪ್‌ನಲ್ಲಿ ನೋಂದಾಯಿಸಲಾಗಿತ್ತು.

ಏಪ್ರಿಲ್ 22ರಂದು ಆರೋಪಿ ಮಿಶೆಲ್ ಶಫೀಕ್ ಜೂಮ್ ಆ್ಯಪ್ ಮೂಲಕ ಕಾರು ಬುಕ್ ಮಾಡಿದ್ದ. ಅಗತ್ಯ ದಾಖಲೆಗಳಾದ ಚಾಲನಾ ಪರವಾನಗಿ ಹಾಗೂ ಆಧಾರ್ ಕಾರ್ಡ್ ಪರಿಶೀಲಿಸಿದ ಬಳಿಕ ಕಾರು ಹಸ್ತಾಂತರಿಸಲಾಗಿತ್ತು. ಆದರೆ ಒಂದು ದಿನಕ್ಕೆ ಬುಕ್ ಮಾಡಿದ್ದ ವಾಹನವನ್ನು ಆರೋಪಿ ನಿಗದಿತ ಅವಧಿಯಲ್ಲಿ ಹಿಂತಿರುಗಿಸದೇ ಪರಾರಿಯಾಗಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ.

ವಾಹನ ಪತ್ತೆಗಾಗಿ ಕಂಪನಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಕಾರಿನಲ್ಲಿ ಅಳವಡಿಸಿದ್ದ ಜಿಪಿಎಸ್ ಸಾಧನವನ್ನು ಕತ್ತರಿಸಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಆಧಾರ್ ಕಾರ್ಡ್‌ನಲ್ಲಿ ನೀಡಿದ್ದ ವಿಳಾಸವನ್ನು ಪರಿಶೀಲಿಸಿದಾಗ ಆರೋಪಿ ಹಲವು ವರ್ಷಗಳಿಂದ ಅಲ್ಲಿ ವಾಸಿಸುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಕಾರನ್ನು ಕೇರಳಕ್ಕೆ ಕೊಂಡೊಯ್ದು, ಜಿಪಿಎಸ್ ಹಾಗೂ ಫಾಸ್ಟ್‌ಟ್ಯಾಗ್ ಸಾಧನಗಳನ್ನು ತೆಗೆದುಹಾಕಿದ್ದಾನೆ. ಕಂಪನಿ ಸಂಪರ್ಕಿಸಿದಾಗ ಶೀಘ್ರದಲ್ಲೇ ವಾಹನವನ್ನು ಹಿಂತಿರುಗಿಸುವುದಾಗಿ ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಬಳಿಕ ಕಾರನ್ನು ಮತ್ತೊಬ್ಬರಿಗೆ ನೀಡಿ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ.

ತಾಂತ್ರಿಕ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಎಲೆಕ್ಟ್ರಾನಿಕ್ ಸಿಟಿ ಪ್ರದೇಶದಲ್ಲಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಕಾರನ್ನು ಸ್ನೇಹಿತರಿಗೆ ನೀಡಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಕೇರಳದ ಕಣ್ಣೂರು ಹಾಗೂ ತ್ರಿಶೂರ್ ಭಾಗಗಳಲ್ಲಿ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಿನ್ನೆಲೆ ಆರೋಪಿಗೆ ಇರುವುದಾಗಿ ತಿಳಿದುಬಂದಿದೆ. ಸದ್ಯ ಪೊಲೀಸರು ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಿದ್ದು, ಕಳುವಾಗಿರುವ ಕಾರು ಪತ್ತೆಗಾಗಿ ವಿಶೇಷ ತಂಡವನ್ನು ಕೇರಳಕ್ಕೆ ಕಳುಹಿಸಿದ್ದಾರೆ.

ರಾಜ್ಯಸಭೆ ಟಿಕೆಟ್ ತಪ್ಪಿದರೂ ಮೋದಿ ಜೊತೆಗಿನ ಸಂಬಂಧಕ್ಕೆ ಧಕ್ಕೆಯಿಲ್ಲ: ದೇವೇಗೌಡ ಸ್ಪಷ್ಟನೆ

ಬೆಂಗಳೂರು: ರಾಜ್ಯಸಭಾ ಸದಸ್ಯತ್ವದ ಟಿಕೆಟ್ ಕೈತಪ್ಪಿದ ವಿಚಾರವನ್ನು ಮುಂದಿಟ್ಟು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತಮ್ಮ ಸಂಬಂಧವನ್ನು ಪ್ರಶ್ನಿಸುವ ಅಗತ್ಯವಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ನಗರದ ಜೆ.ಪಿ. ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಲವು ದಶಕಗಳಿಂದ ಉತ್ತಮ ಸಂಬಂಧ ಹೊಂದಿದ್ದೇನೆ. ರಾಜ್ಯಸಭಾ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಆ ಸಂಬಂಧದಲ್ಲಿ ಯಾವುದೇ ಬಿರುಕು ಮೂಡುವುದಿಲ್ಲ ಎಂದು ಹೇಳಿದರು.

ಜೆಡಿಎಸ್ ಪಕ್ಷವು ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದು, ಮುಂದೆಯೂ ಅದೇ ಮೈತ್ರಿಯಲ್ಲಿ ಕಾರ್ಯನಿರ್ವಹಿಸಲಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವ ಸಂಪುಟದಲ್ಲಿ ಮುಂದುವರಿದು ದೇಶದ ಸೇವೆ ಸಲ್ಲಿಸಲಿದ್ದಾರೆ ಎಂದು ದೇವೇಗೌಡ ತಿಳಿಸಿದರು.

ರಾಜ್ಯಸಭಾ ಸ್ಥಾನ ಕುರಿತು ಮಾತನಾಡಿದ ಅವರು, ತಮಗೆ ನಿಜವಾಗಿಯೂ ರಾಜ್ಯಸಭಾ ಸದಸ್ಯತ್ವದ ಆಸಕ್ತಿ ಇದ್ದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅಥವಾ ಕೇಂದ್ರ ಗೃಹ ಸಚಿವರೊಂದಿಗೆ ಈ ಬಗ್ಗೆ ಚರ್ಚಿಸಬಹುದಾಗಿತ್ತು. ಆದರೆ ತಾವು ಅಂತಹ ಯಾವುದೇ ಪ್ರಯತ್ನ ಮಾಡಿಲ್ಲ. ರಾಜ್ಯಸಭೆಗೆ ಹೋಗುವ ಆಸಕ್ತಿ ನನಗಿರಲಿಲ್ಲ. ಆದ್ದರಿಂದ ಈ ವಿಚಾರವಾಗಿ ಯಾರನ್ನೂ ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

41 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: 10 ಮಂದಿ ಆರೋಪಿಗಳ ಬಂಧನ

0

ದಾವಣಗೆರೆ: ಪತಿಯೊಂದಿಗೆ ಉಂಟಾದ ಜಗಳದ ಬಳಿಕ ತವರಿಗೆ ತೆರಳುತ್ತಿದ್ದ 41 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಮಾಹಿತಿಯ ಪ್ರಕಾರ, ಜೂನ್ 3ರಂದು ಘಟನೆ ನಡೆದಿದ್ದು, ಮಹಿಳೆ ನಂತರ ತಡವಾಗಿ ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಹಿಳೆ ಪ್ರಯಾಣಿಸುತ್ತಿದ್ದ ವೇಳೆ ಹಂದಿ ಬೇಟೆಗೆ ತೆರಳಿದ್ದ ಆರೋಪಿಗಳ ಗುಂಪು ಆಕೆಯನ್ನು ಸಂಪರ್ಕಿಸಿ ಕುಡಿಯಲು ಕೂಲ್‌ಡ್ರಿಂಕ್ಸ್ ನೀಡಿದ ನಂತರ ತೋಟ ಪ್ರದೇಶಕ್ಕೆ ಕರೆದೊಯ್ದು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ಬಳಿಕ ಆರೋಪಿಗಳು ಮಹಿಳೆಯ ಖಾಸಗಿ ದೃಶ್ಯಗಳನ್ನು ದಾಖಲಿಸಿದ್ದು, ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎನ್ನಲಾಗಿದೆ. ನಂತರ ಪ್ರಕರಣ ಗಂಭೀರವಾಗುತ್ತಿದ್ದಂತೆ ಆ ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ದೂರು ದಾಖಲಾದ ಬೆನ್ನಲ್ಲೇ ಪೊಲೀಸರು 10 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಯಲೋದಹಳ್ಳಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

ಪಿಜಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ

0

ಬಳ್ಳಾರಿ: ಬಳ್ಳಾರಿ ನಗರದ ಪಿಜಿ ಕೊಠಡಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತೀವ್ರ ಅನುಮಾನಕ್ಕೆ ಕಾರಣವಾಗಿದೆ.

ಮೃತನನ್ನು ಸಿರಗುಪ್ಪ ತಾಲೂಕಿನ ಟಿ.ರಾಂಪುರ ಗ್ರಾಮದ ನಿವಾಸಿ ವಿಶ್ವನಾಥ್ (24) ಎಂದು ಗುರುತಿಸಲಾಗಿದೆ. ಆತ ಬಳ್ಳಾರಿಯ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಅಶೋಕ್ ನಗರದ ಪಿಜಿಯಲ್ಲಿ ವಾಸಿಸುತ್ತಿದ್ದನು.

ಸ್ಥಳೀಯ ಮಾಹಿತಿಯ ಪ್ರಕಾರ, ಸೋಮವಾರ ವಿಶ್ವನಾಥ್ ಹಾಗೂ ಪಿಜಿಯ ಸಹಪಾಠಿಗಳ ನಡುವೆ ಜಗಳ ನಡೆದಿತ್ತು. ಅದರ ನಂತರ ಮಂಗಳವಾರ ಕೊಠಡಿಯಲ್ಲಿ ಶವ ಪತ್ತೆಯಾಗಿದೆ.

ಆದರೆ ಮೃತದೇಹದ ತಲೆ ಮತ್ತು ಎದೆ ಭಾಗದಲ್ಲಿ ಗಾಯಗಳಿರುವುದು ಕಂಡುಬಂದಿರುವುದರಿಂದ ಪ್ರಕರಣವನ್ನು ಸಾಮಾನ್ಯ ಆತ್ಮಹತ್ಯೆ ಎಂದು ಪರಿಗಣಿಸುವುದಕ್ಕೆ ಸಾಧ್ಯವಿಲ್ಲ ಎಂದು ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಘಟನೆಯ ನಂತರ ಕೌಲ್ ಬಜಾರ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಾವಿನ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ; ಐವರು ಆರೋಪಿಗಳ ಜಾಮೀನು ಭವಿಷ್ಯ ಇಂದು ನಿರ್ಧಾರ

0

ಬೆಂಗಳೂರು: ಬಹುಚರ್ಚಿತ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಐವರು ಆರೋಪಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಆರೋಪಿಗಳ ಜಾಮೀನು ರದ್ದುಪಡಿಸುವಂತೆ ಪ್ರಾಸಿಕ್ಯೂಷನ್ ಸಲ್ಲಿಸಿರುವ ಅರ್ಜಿಯ ಕುರಿತು ಕರ್ನಾಟಕ ಹೈಕೋರ್ಟ್ ಇಂದು ಮಧ್ಯಾಹ್ನ 2.30ಕ್ಕೆ ಆದೇಶ ಪ್ರಕಟಿಸಲಿದೆ.

ಈ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್ ಸೇರಿದಂತೆ ಏಳು ಆರೋಪಿಗಳ ಜಾಮೀನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್, ಅವರನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಆದೇಶ ನೀಡಿತ್ತು. ಇದರ ಬೆನ್ನಲ್ಲೇ ಉಳಿದ ಐವರು ಆರೋಪಿಗಳ ಜಾಮೀನನ್ನೂ ರದ್ದುಪಡಿಸಬೇಕು ಎಂದು ಪ್ರಾಸಿಕ್ಯೂಷನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ವಿನಯ್, ನಂದೀಶ್, ಧನರಾಜು, ಪವನ್ ಹಾಗೂ ರಾಘವೇಂದ್ರ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಸ್. ರಾಚಯ್ಯ ಅವರ ಪೀಠ ನಡೆಸಿದೆ. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಉಳಿದ ಆರೋಪಿಗಳಿಗೂ ಅದೇ ಮಾನದಂಡ ಅನ್ವಯಿಸಬೇಕು ಎಂದು ಪ್ರಾಸಿಕ್ಯೂಷನ್ ವಾದ ಮಂಡಿಸಿತ್ತು.

ದರ್ಶನ್ ಹಾಗೂ ಇತರ ಆರೋಪಿಗಳು ಜೈಲು ಸೇರಿದ ಬಳಿಕವೇ ಪ್ರಾಸಿಕ್ಯೂಷನ್ ಈ ಅರ್ಜಿಯನ್ನು ಸಲ್ಲಿಸಿತ್ತು. ಪ್ರಕರಣದ ಎಲ್ಲಾ ಅಂಶಗಳನ್ನು ಪರಿಶೀಲಿಸಿ, ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಸುದೀರ್ಘವಾಗಿ ಆಲಿಸಿರುವ ಹೈಕೋರ್ಟ್ ಇಂದು ಮಧ್ಯಾಹ್ನ 2.30ಕ್ಕೆ ತನ್ನ ಆದೇಶ ಪ್ರಕಟಿಸಲಿದೆ.

ಸದ್ಯ ಪ್ರಕರಣದ ವಿಚಾರಣೆ 59ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಹೈಕೋರ್ಟ್‌ನ ತೀರ್ಪು ಪ್ರಕರಣದ ಮುಂದಿನ ಹಂತದ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.

ಮುಖ್ಯ ಶಿಕ್ಷಕರ ಕಿರುಕುಳ ಆರೋಪ: 4ನೇ ಮಹಡಿಯಿಂದ ಹಾರಿ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ!

0

ಬೀದರ್: ನಗರದ ಪ್ರತಾಪ್ ನಗರ ಪ್ರದೇಶದಲ್ಲಿ ಖಾಸಗಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲಾ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಘಟನೆ ಸಂಬಂಧ ವಿದ್ಯಾರ್ಥಿಯ ಪೋಷಕರು ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ಕಿರುಕುಳದ ಆರೋಪ ಮಾಡಿದ್ದು,

ಮೃತ ವಿದ್ಯಾರ್ಥಿಯನ್ನು 16 ವರ್ಷದ ಸಮೀರ್ ಎಂದು ಗುರುತಿಸಲಾಗಿದೆ. ನಗರದ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.

ಮಾಹಿತಿಯ ಪ್ರಕಾರ, ಸಮೀರ್ ಇಂದು ಬೆಳಿಗ್ಗೆ ಎಂದಿನಂತೆ ಶಾಲೆಗೆ ತೆರಳಿದ್ದ. ಬಳಿಕ ಶಾಲಾ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ. ಘಟನೆಯ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ಘಟನೆ ಬಳಿಕ ವಿದ್ಯಾರ್ಥಿಯ ಮೃತದೇಹವನ್ನು ಶಾಲಾ ಆಡಳಿತ ಮಂಡಳಿ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದೆ ಎನ್ನಲಾಗಿದೆ. ಈ ವಿಚಾರವನ್ನು ಕುಟುಂಬದವರಿಗೆ ತಕ್ಷಣ ಮಾಹಿತಿ ನೀಡದೇ ಆಸ್ಪತ್ರೆಗೆ ರವಾನಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಶವಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮಗನ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಮೃತ ವಿದ್ಯಾರ್ಥಿಯ ಪೋಷಕರ ಆರೋಪದ ಪ್ರಕಾರ, ಸಮೀರ್ 1ನೇ ತರಗತಿಯಿಂದಲೂ ಇದೇ ಶಾಲೆಯಲ್ಲಿ ಓದುತ್ತಿದ್ದ. ಹೆಚ್ಚಿನ ಅಂಕಗಳನ್ನು ಪಡೆಯುವಂತೆ ನಿರಂತರ ಒತ್ತಡ ಹೇರುವುದು ಹಾಗೂ ಶಾಲೆಯಲ್ಲಿ ವಿವಿಧ ಕೆಲಸಗಳನ್ನು ಮಾಡಿಸುವ ಮೂಲಕ ಮುಖ್ಯ ಶಿಕ್ಷಕರು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.

ಈ ಕಿರುಕುಳದಿಂದ ಮನನೊಂದ ವಿದ್ಯಾರ್ಥಿ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಮುಂದಾಗಿರಬಹುದು ಎಂದು ಪೋಷಕರು ಶಂಕೆ ವ್ಯಕ್ತಪಡಿಸಿದ್ದು,. ಆದರೆ ಈ ಆರೋಪಗಳ ಸತ್ಯಾಸತ್ಯತೆ ಪೊಲೀಸ್ ತನಿಖೆಯ ಬಳಿಕವೇ ಸ್ಪಷ್ಟವಾಗಬೇಕಿದೆ.

ಘಟನೆ ಸಂಬಂಧ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿಯ ಸಾವಿನ ಕಾರಣ ಮತ್ತು ಪೋಷಕರು ಮಾಡಿರುವ ಆರೋಪಗಳ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

error: Content is protected !!