Home Blog Page 39

ದಂಡ ಪಾವತಿಸದಿದ್ದರೂ ಜೈಲು ಶಿಕ್ಷೆಗೆ ಮಿತಿ ಇದೆ: ಚೆಕ್ ಬೌನ್ಸ್ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದ ಹೈಕೋರ್ಟ್

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣಗಳಲ್ಲಿ ವಿಧಿಸಲಾದ ದಂಡವನ್ನು ಪಾವತಿಸದ ಆರೋಪಿಯನ್ನು ಮೂಲ ಅಪರಾಧಕ್ಕೆ ನಿಗದಿಪಡಿಸಿರುವ ಗರಿಷ್ಠ ಶಿಕ್ಷೆಯ ಅವಧಿಯನ್ನು ಮೀರಿ ಜೈಲಿನಲ್ಲಿ ಇರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯ ಸೆಕ್ಷನ್ 138ರಡಿ ದಾಖಲಾಗಿದ್ದ ಮೂರು ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿದ್ದ ವ್ಯಕ್ತಿಯ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 65 ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 8(3)ರ ಪ್ರಕಾರ, ದಂಡ ಪಾವತಿಸದ ಹಿನ್ನೆಲೆಯಲ್ಲಿ ವಿಧಿಸುವ ಜೈಲು ಶಿಕ್ಷೆ ಮೂಲ ಅಪರಾಧಕ್ಕೆ ನಿಗದಿಪಡಿಸಿರುವ ಗರಿಷ್ಠ ಶಿಕ್ಷೆಯ ನಾಲ್ಕನೇ ಒಂದು ಭಾಗವನ್ನು ಮೀರಬಾರದು ಎಂದು ನ್ಯಾಯಪೀಠ ತಿಳಿಸಿದೆ. ಚೆಕ್ ಬೌನ್ಸ್ ಅಪರಾಧಕ್ಕೆ ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆ ನಿಗದಿಯಾಗಿರುವುದರಿಂದ, ದಂಡ ಪಾವತಿಸದಿದ್ದರೆ ಗರಿಷ್ಠ ಆರು ತಿಂಗಳವರೆಗೆ ಮಾತ್ರ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇದೇ ವೇಳೆ, ಜೈಲು ಶಿಕ್ಷೆಯನ್ನು ಅನುಭವಿಸಿದ ಬಳಿಕವೂ ದಂಡ ಪಾವತಿಸುವ ಹೊಣೆಗಾರಿಕೆ ಕೊನೆಗೊಳ್ಳುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ. ಕಾನೂನಿನ ಪ್ರಕಾರ ಸರ್ಕಾರ ಅಥವಾ ದೂರುದಾರರು ನಂತರವೂ ಆಸ್ತಿ ಜಪ್ತಿ ಸೇರಿದಂತೆ ವಿವಿಧ ಕಾನೂನು ಕ್ರಮಗಳ ಮೂಲಕ ದಂಡದ ಮೊತ್ತವನ್ನು ವಸೂಲಿ ಮಾಡಲು ಅವಕಾಶವಿದೆ ಎಂದು ತಿಳಿಸಿದೆ.

ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಾಲಯ, ದಂಡ ಪಾವತಿಸದ ಕಾರಣಕ್ಕೆ ವಿಧಿಸುವ ಜೈಲು ಶಿಕ್ಷೆಯನ್ನು ಹೆಚ್ಚುವರಿ ಶಿಕ್ಷೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಅದು ನ್ಯಾಯಾಲಯದ ಹಣಕಾಸು ಆದೇಶವನ್ನು ಜಾರಿಗೊಳಿಸುವ ಕ್ರಮ ಮಾತ್ರವಾಗಿದ್ದು, ದಂಡ ಪಾವತಿಸಲು ಅಸಮರ್ಥನಾದ ವ್ಯಕ್ತಿಯನ್ನು ದೀರ್ಘಾವಧಿ ಜೈಲಿನಲ್ಲಿ ಇರಿಸುವುದು ಸಂವಿಧಾನದಲ್ಲಿ ಪ್ರತಿಪಾದಿಸಿರುವ ವೈಯಕ್ತಿಕ ಸ್ವಾತಂತ್ರ್ಯದ ತತ್ವಗಳಿಗೆ ವಿರುದ್ಧವಾಗಲಿದೆ ಎಂದು ನ್ಯಾಯಪೀಠ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದ ವ್ಯಕ್ತಿಯನ್ನು ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:
ಅರ್ಜಿದಾರನ ವಿರುದ್ಧದ ಮೂರು ಚೆಕ್ ಬೌನ್ಸ್ ಪ್ರಕರಣಗಳಲ್ಲಿ ದೋಷಾರೋಪಣೆ ಸಾಬೀತಾಗಿದ್ದು, ಕೋಟ್ಯಂತರ ರೂಪಾಯಿ ದಂಡ ವಿಧಿಸಲಾಗಿತ್ತು. ದಂಡ ಪಾವತಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪ್ರತಿ ಪ್ರಕರಣದಲ್ಲೂ ಹೆಚ್ಚುವರಿಯಾಗಿ ಮೂರು ತಿಂಗಳ ಸರಳ ಜೈಲು ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್ ಮೊರೆ ಹೋಗಿದ್ದನು.

ಬೇಲ್ ಕೈತಪ್ಪಿದ ಬಳಿಕ ಮೌನಕ್ಕೆ ಶರಣಾದ ದರ್ಶನ್: ಜೈಲಿನಲ್ಲಿ ಆತ್ಮಚರಿತ್ರೆ ಬರೆಯುತ್ತಿರುವ ಪವಿತ್ರಾ ಗೌಡ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಜೈಲು ಜೀವನ ಇದೀಗ ಕುತೂಹಲದ ವಿಷಯವಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಸಿಗದ ಹಿನ್ನೆಲೆ ದರ್ಶನ್ ಸಂಪೂರ್ಣ ಮೌನವಾಗಿದ್ದರೆ, ಪವಿತ್ರಾ ಗೌಡ ತಮ್ಮ ಜೀವನ ಕಥೆಯನ್ನು ಬರೆಯುವ ಮೂಲಕ ಸಮಯ ಕಳೆಯುತ್ತಿದ್ದಾರೆ ಎನ್ನಲಾಗಿದೆ.

ಪ್ರಮುಖ ಸಾಕ್ಷಿಗಳ ವಿಚಾರಣೆ ವಿಳಂಬವಾಗುತ್ತಿರುವ ಕಾರಣ ಜಾಮೀನು ಕೋರಿ ದರ್ಶನ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಜಾಮೀನು ನಿರಾಕರಿಸಿ, ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದೆ. ಈ ಬೆಳವಣಿಗೆಯ ಬಳಿಕ ದರ್ಶನ್ ಜೈಲಿನಲ್ಲಿ ಹೆಚ್ಚು ಏಕಾಂತವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದರ್ಶನ್ ವಾರಕ್ಕೊಮ್ಮೆ ನೀಡಲಾಗುವ ಪುಸ್ತಕಗಳನ್ನು ಓದುತ್ತಾ ದಿನ ಕಳೆಯುತ್ತಿದ್ದಾರೆ. ಸಹ ಕೈದಿಗಳು ಹಾಗೂ ಇತರರೊಂದಿಗೆ ಹೆಚ್ಚು ಸಂಭಾಷಣೆ ನಡೆಸದೆ ತಮ್ಮಷ್ಟಕ್ಕೆ ತಾವು ಇರುವುದಾಗಿ ಮೂಲಗಳು ಹೇಳುತ್ತಿವೆ.

ಇನ್ನೊಂದೆಡೆ ಪವಿತ್ರಾ ಗೌಡ ಕಳೆದ ಕೆಲ ವಾರಗಳಿಂದ ಆತ್ಮಚರಿತ್ರೆ ಬರೆಯುವ ಕೆಲಸದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಜೈಲಾಡಳಿತದಿಂದ ಪಡೆದ ಬಿಳಿ ಹಾಳೆ ಮತ್ತು ಪೆನ್ಸಿಲ್ ಬಳಸಿ ತಮ್ಮ ಜೀವನದ ವಿವಿಧ ಹಂತಗಳನ್ನು ದಾಖಲಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಯೋಗ ಸೇರಿದಂತೆ ಜೈಲಿನ ಕೆಲವು ಚಟುವಟಿಕೆಗಳಿಂದಲೂ ದೂರ ಉಳಿದಿರುವ ಪವಿತ್ರಾ ಗೌಡ, ಹೆಚ್ಚಿನ ಸಮಯವನ್ನು ಬರವಣಿಗೆಯಲ್ಲೇ ಕಳೆಯುತ್ತಿದ್ದಾರೆ ಎನ್ನಲಾಗಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಮುಂದುವರಿದಿರುವ ನಡುವೆ ಇಬ್ಬರು ಆರೋಪಿಗಳ ಜೈಲು ದಿನಚರಿ ವಿಭಿನ್ನ ಸ್ವರೂಪ ಪಡೆದುಕೊಂಡಿದೆ.

ಆರ್. ಅಶೋಕ್ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ: ಮಾಫಿಯಾ ವಕ್ತಾರರಾಗಿದ್ದಾರೆ ಎಂದ ಸಿಎಂ

ನವದೆಹಲಿ: ಬೆಂಗಳೂರು ಕಸದ ಟೆಂಡರ್ ಹಾಗೂ ಮಾಫಿಯಾ ಸಂಬಂಧಿಸಿದ ಆರೋಪಗಳಿಗೆ ಸಂಬಂಧಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಕಸದ ಮಾಫಿಯಾ ಬಗ್ಗೆ ಮಾತನಾಡುತ್ತಿರುವ ಅಶೋಕ್ ಅವರು ಮಾಫಿಯಾದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಈ ಹಿಂದೆ ಕಸದ ಸಮಸ್ಯೆ ಕುರಿತು ಅವರೊಂದಿಗೆ ಚರ್ಚೆ ನಡೆಸಿದ್ದರೂ, ಈಗ ಅವರು ಮಾಫಿಯಾದ ವಕ್ತಾರರಂತೆ ಮಾತನಾಡುತ್ತಿರುವುದು ಆಶ್ಚರ್ಯಕರವಾಗಿದೆ ಎಂದು ಹೇಳಿದರು.

ಕಸದ ಟೆಂಡರ್‌ನಲ್ಲಿ 10 ಸಾವಿರ ಕೋಟಿ ರೂಪಾಯಿ ಕಿಕ್‌ಬ್ಯಾಕ್ ನಡೆದಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ ಸಿಎಂ, “ಯಾವ ತನಿಖೆಯಾದರೂ ಮಾಡಲಿ, ಎಲ್ಲವನ್ನೂ ಎದುರಿಸಲು ನಾನು ಸಿದ್ಧ” ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು ನಗರದಲ್ಲಿ ಕಸದ ನಿರ್ವಹಣೆಗೆ 6 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲಾಗುತ್ತಿದ್ದು, ದೊಡ್ಡಬಳ್ಳಾಪುರ ಸೇರಿದಂತೆ ಹಲವು ಸ್ಥಳಗಳಲ್ಲಿ ಯೋಜನೆಗಳಿಗೆ ಜಾಗ ಗುರುತಿಸಲಾಗಿದೆ. ಕಸದಿಂದ ಗ್ಯಾಸ್ ಹಾಗೂ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಗಳನ್ನೂ ಸರ್ಕಾರ ಮುಂದುವರೆಸುತ್ತಿದೆ ಎಂದು ಹೇಳಿದರು.

ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರನ್ನು ಭೇಟಿ ಮಾಡಿದ ಬಗ್ಗೆ ಮಾತನಾಡಿದ ಅವರು, ಪಕ್ಷದ ಸಂಘಟನೆ ಹಾಗೂ ಆಡಳಿತ ಸಂಬಂಧಿತ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿಸಿದರು. ನೀತಿ ಆಯೋಗದ ಸಭೆ ಹಿನ್ನೆಲೆಯಲ್ಲಿ ದೆಹಲಿಗೆ ಬಂದಿರುವುದಾಗಿ ಅವರು ಹೇಳಿದರು.

ರಾಜ್ಯಸಭೆ ಚುನಾವಣೆ ನಾಮಪತ್ರ ತಿರಸ್ಕಾರ ಪ್ರಕರಣವನ್ನು ಉಲ್ಲೇಖಿಸಿ, ಇದು ಪ್ರಜಾಪ್ರಭುತ್ವಕ್ಕೆ ಆಘಾತಕಾರಿ ಘಟನೆ ಎಂದು ಹೇಳಿದ ಸಿಎಂ, ಇದು ರಾಜಕೀಯ ಪಿತೂರಿಯ ಭಾಗವಾಗಿರಬಹುದು ಎಂದು ಆರೋಪಿಸಿದರು.

ಒಟ್ಟಿನಲ್ಲಿ ದೆಹಲಿಯಲ್ಲಿ ನಡೆದ ಈ ಬೆಳವಣಿಗೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.

ಹುಬ್ಬಳ್ಳಿ-ಧಾರವಾಡ ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರದ ಗುಣಮಟ್ಟ ಕುಸಿತ: ಸಾರ್ವಜನಿಕ ಆಕ್ರೋಶ

ಹುಬ್ಬಳ್ಳಿ: ಬಡವರು, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಊಟ ನೀಡುವ ಉದ್ದೇಶದಿಂದ ಆರಂಭಿಸಲಾದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಇತ್ತೀಚೆಗೆ ಆಹಾರದ ಗುಣಮಟ್ಟ ಕುಸಿದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಹುಬ್ಬಳ್ಳಿ-ಧಾರವಾಡ ಭಾಗದ ಹಲವು ಇಂದಿರಾ ಕ್ಯಾಂಟೀನ್‌ಗಳಲ್ಲಿ ನೀಡಲಾಗುತ್ತಿರುವ ಆಹಾರ ಸರಿಯಾಗಿ ಬೇಯದಿರುವುದು, ಸಾರು ನೀರಿನಂತಿರುವುದು ಹಾಗೂ ಚಪಾತಿ ಮತ್ತು ರೊಟ್ಟಿ ತಿನ್ನಲು ಯೋಗ್ಯವಾಗಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ವ್ಯಕ್ತವಾಗಿವೆ.

ಈ ಮೊದಲು ಉತ್ತಮ ಗುಣಮಟ್ಟದ ಆಹಾರ ದೊರಕುತ್ತಿದ್ದ ಹಿನ್ನೆಲೆಯಲ್ಲಿ ಕಾರ್ಮಿಕರು, ಆಟೋ ಚಾಲಕರು ಹಾಗೂ ವಿದ್ಯಾರ್ಥಿಗಳು ಕ್ಯಾಂಟೀನ್‌ಗಳನ್ನು ಹೆಚ್ಚು ಅವಲಂಬಿಸುತ್ತಿದ್ದರು. ಆದರೆ ಇತ್ತೀಚೆಗೆ ಗುಣಮಟ್ಟ ಹಾಗೂ ಪ್ರಮಾಣ ಎರಡೂ ಕಡಿಮೆಯಾಗಿದೆ ಎಂಬ ಆರೋಪಗಳು ಹೆಚ್ಚುತ್ತಿವೆ.

ಮಧ್ಯಾಹ್ನ ಮತ್ತು ರಾತ್ರಿ ಊಟದಲ್ಲಿ ನೀಡಲಾಗುವ ಅನ್ನದ ಪ್ರಮಾಣ ಕೂಡ ನಿಯಮಿತ ಮಟ್ಟಕ್ಕಿಂತ ಕಡಿಮೆಯಾಗಿದೆ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಬ್ಬಂದಿಯಿಂದ ಸರಿಯಾದ ಪ್ರತಿಕ್ರಿಯೆ ದೊರಕುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಇದರಿಂದಾಗಿ ಸಂಬಂಧಪಟ್ಟ ಅಧಿಕಾರಿಗಳು ಇಂದಿರಾ ಕ್ಯಾಂಟೀನ್‌ಗಳ ಆಹಾರದ ಗುಣಮಟ್ಟ ಮತ್ತು ಸೇವೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಮೇಲುಕೋಟೆ ದೇವಸ್ಥಾನದಲ್ಲಿ ಭಾರಿ ಕಳ್ಳತನ ಶಂಕೆ: ಅರ್ಚಕರು ಸೇರಿ ಐದು ಮಂದಿ ವಿರುದ್ಧ ಎಫ್‌ಐಆರ್

ಮಂಡ್ಯ: ಐತಿಹಾಸಿಕ ಹಾಗೂ ಪ್ರಸಿದ್ಧ ಪುಣ್ಯಕ್ಷೇತ್ರವಾದ ಮೇಲುಕೋಟೆಯ ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಾರಿ ಕಳ್ಳತನ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ಸಂಬಂಧ ದೇವಸ್ಥಾನದ ಅರ್ಚಕರು ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ದೇವಸ್ಥಾನದ ಹುಂಡಿಯಲ್ಲಿದ್ದ ಚಿನ್ನ, ಬೆಳ್ಳಿ ಹಾಗೂ ನಗದು ಹಣ ಕಳ್ಳತನವಾಗಿದೆ ಎಂದು ಆರೋಪಿಸಿ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಅವರು ಮೇಲುಕೋಟೆ ಪೊಲೀಸ್ ಠಾಣೆಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.

ಮೂಲಗಳ ಪ್ರಕಾರ, ದೇವಸ್ಥಾನದಲ್ಲಿ ಈ ಹಿಂದೆ ಸಿಸಿ ಕ್ಯಾಮೆರಾಗಳಿಗೆ ಹಾನಿ ಮಾಡುತ್ತಿದ್ದ ಘಟನೆಗಳು ನಡೆದಿದ್ದರಿಂದ ಆಡಳಿತ ಮಂಡಳಿ ರಹಸ್ಯವಾಗಿ ಹೆಚ್ಚುವರಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿತ್ತು. ಆದರೆ 2026ರ ಜನವರಿ 12ರಂದು ಈ ರಹಸ್ಯ ಕ್ಯಾಮೆರಾಗಳಿಗೂ ಹಾನಿ ಮಾಡಿರುವುದು ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ದೇವಸ್ಥಾನದ ಒಳಗಿನ ಸಿಬ್ಬಂದಿಯೇ ಕಳ್ಳತನದಲ್ಲಿ ಭಾಗಿಯಾಗಿರಬಹುದು ಎಂಬ ಗಂಭೀರ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಈ ಸಂಬಂಧ ಶ್ರೀಧರ್ ಪಾರುಪತ್ತೆಗಾರ, ನಾರಾಯಣ ಭಟ್ಟ ಅರ್ಚಕ, ತಿರುವೆಂಗಡಚಾರ್ ಪರಿಚಾರಕ, ಗಂಗಾಧರ್ ಹಾಗೂ ಬಸವರಾಜ್ ಕಾವಲುಗಾರರು ಸೇರಿದಂತೆ ಐದು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಇಒ ಶೀಲಾ ಅವರು ಈ ಹಿಂದೆ ಸಂಬಂಧಿತ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿದ್ದರೂ ಸೂಕ್ತ ಉತ್ತರ ದೊರಕದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.

ಸದ್ಯ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೇವಾಲಯದ ಒಳಗಿನವರೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರಾ ಅಥವಾ ಇದರ ಹಿಂದೆ ಬೇರೆ ಜಾಲವಿದೆಯಾ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ: ಬೆಂಗಳೂರಿನ ಈ ರಸ್ತೆಗಳಲ್ಲಿಂದು ಸಂಚಾರ ಬದಲಾವಣೆ!

ಬೆಂಗಳೂರು: ನಗರದ ಫ್ರೀಡಂ ಪಾರ್ಕ್‌ನಲ್ಲಿ ಇಂದು ಕರ್ನಾಟಕ ದಲಿತ ಸಂಘಟನೆಗಳ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯುತ್ತಿದ್ದು, ಇದರಿಂದಾಗಿ ಬೆಂಗಳೂರಿನ ಹಲವು ಭಾಗಗಳಲ್ಲಿ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.

ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರತಿಭಟನೆ ನಡೆಯಲಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸುವವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿಟಿ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ಕಡೆಗೆ ಕಾಲ್ನಡಿಗೆಯ ಮೆರವಣಿಗೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಫ್ರೀಡಂ ಪಾರ್ಕ್ ಜಂಕ್ಷನ್‌ನಿಂದ ಕನಕದಾಸ ವೃತ್ತದ ನಡುವಿನ ರಸ್ತೆ ಭಾಗವನ್ನು ಎರಡೂ ದಿಕ್ಕಿನಿಂದ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.

ಖೋಡೆ ಜಂಕ್ಷನ್‌ನಿಂದ ಕೆಆರ್ ಸರ್ಕಲ್ ಕಡೆಗೆ ಸಂಚರಿಸುವ ವಾಹನಗಳಿಗೆ ಹಳೇ ಜೆಡಿಎಸ್ ಕಚೇರಿ ರಸ್ತೆಯನ್ನು ಪರ್ಯಾಯ ಮಾರ್ಗವಾಗಿ ಬಳಸುವಂತೆ ಸೂಚಿಸಲಾಗಿದೆ. ಮೈಸೂರು ಬ್ಯಾಂಕ್ ವೃತ್ತದಿಂದ ಕೆಜಿ ರಸ್ತೆ ಮೂಲಕ ಫ್ರೀಡಂ ಪಾರ್ಕ್ ಕಡೆಗೆ ಬರುವ ವಾಹನಗಳು ಮಹಾರಾಣಿ ಅಂಡರ್‌ಪಾಸ್ ಹಾಗೂ ಪ್ಯಾಲೇಸ್ ಕ್ರಾಸ್ ರಸ್ತೆಯ ಮೂಲಕ ಸಾಗುವಂತೆ ಸೂಚನೆ ನೀಡಲಾಗಿದೆ.

ಸಂಚಾರ ಪೊಲೀಸರ ಪ್ರಕಾರ, ಗಾಂಧಿನಗರ ಭಾಗದಲ್ಲಿ ಒನ್‌ವೇ ರಸ್ತೆಯಾಗಿದ್ದ ಸುಬ್ಬಣ್ಣ ಜಂಕ್ಷನ್–ಎಂಟಿಆರ್ ಜಂಕ್ಷನ್ ಮಾರ್ಗವನ್ನು ಇಂದು ತಾತ್ಕಾಲಿಕವಾಗಿ ಟೂ-ವೇ ಸಂಚಾರಕ್ಕೆ ಪರಿವರ್ತಿಸಲಾಗಿದೆ.

ಇದಲ್ಲದೆ, ಫ್ರೀಡಂ ಪಾರ್ಕ್ ಸುತ್ತಮುತ್ತ ಪ್ರಮುಖ ರಸ್ತೆಗಳಾದ ವಿ. ರಾಮಚಂದ್ರ ರಸ್ತೆ, ಕಾಳಿದಾಸ ರಸ್ತೆ, ಪ್ಯಾಲೇಸ್ ರಸ್ತೆ ಹಾಗೂ ಕೆಜಿ ರಸ್ತೆಯಲ್ಲಿ ವಾಹನ ಪಾರ್ಕಿಂಗ್‌ಗೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ನಗರದ ಪ್ರಮುಖ ಭಾಗಗಳಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಮೀಟರ್ ಬಡ್ಡಿ ಬಕಾಸೂರರ ಅಟ್ಟಹಾಸಕ್ಕೆ ಕುಟುಂಬ ಕಂಗಾಲು! ಬಡ್ಡಿ ನೀಡದಿದ್ದಕ್ಕೆ ಮನೆ ಕಂಪೌಂಡ್ ಧ್ವಂಸ, ಜೀವ ಬೆದರಿಕೆ ಆರೋಪ

0

ಗದಗ: ನಗರದಲ್ಲಿ ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸ ಮಿತಿಮೀರಿದ್ದು, ಸಾಲದ ಹಣಕ್ಕಾಗಿ ಮನೆಗೆ ನುಗ್ಗಿ ಕಂಪೌಂಡ್ ಗೋಡೆ ಧ್ವಂಸಗೊಳಿಸಿ, ಸಿಸಿ ಕ್ಯಾಮೆರಾಗಳನ್ನು ಒಡೆದು ಹಾಕಿ, ಕುಟುಂಬ ಸದಸ್ಯರಿಗೆ ಜೀವ ಬೆದರಿಕೆ ಹಾಕಿರುವ ಗಂಭೀರ ಆರೋಪ ಕೇಳಿ ಬಂದಿದೆ.

ಗದಗ ನಗರದ ಕಳಸಾಪೂರ ರಿಂಗ್‌ರೋಡ್‌ನ ಅಭಿನವ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಬಡ್ಡಿ ಸಾಲದ ಕಾಟದಿಂದ ಇಡೀ ಕುಟುಂಬವೇ ಊರು ತೊರೆದು ಅಲೆದಾಡುವಂತಾಗಿದೆ ಎಂದು ಆರೋಪಿಸಲಾಗಿದೆ.

ಕೋಟೇಶ್ ಬಾಗಲಿ ಎಂಬಾತ ವಿವಿಧ ವ್ಯಕ್ತಿಗಳಿಂದ ಹೆಚ್ಚಿನ ಬಡ್ಡಿದರದಲ್ಲಿ ಹಣ ಪಡೆದಿದ್ದಾನೆ ಎನ್ನಲಾಗಿದ್ದು, ದರ್ಶನ್ ಎಂಬಾತನಿಂದ 8 ಲಕ್ಷ ರೂ., ಶ್ರೀಕಾಂತ ಎಂಬಾತನಿಂದ 12.80 ಲಕ್ಷ ರೂ. ಹಾಗೂ ಜೀವನ ಎಂಬಾತನಿಂದ 3 ಲಕ್ಷ ರೂ. ಸಾಲ ಪಡೆದಿದ್ದಾನೆ ಎಂದು ತಿಳಿದು ಬಂದಿದೆ. ವಾರಕ್ಕೆ ಶೇ.10 ಹಾಗೂ ತಿಂಗಳಿಗೆ ಶೇ.20ರಷ್ಟು ಬಡ್ಡಿ ವಸೂಲಿ ಮಾಡಲಾಗುತ್ತಿತ್ತು ಎಂಬ ಆರೋಪವೂ ಕೇಳಿ ಬಂದಿದೆ.

ಎರಡು ತಿಂಗಳಿಂದ ಬಡ್ಡಿ ಪಾವತಿ ನಿಲ್ಲಿಸಿದ್ದ ಹಿನ್ನೆಲೆಯಲ್ಲಿ ಸಾಲದ ಮೊತ್ತದ ದುಪ್ಪಟ್ಟು ಹಣ ನೀಡುವಂತೆ ಒತ್ತಡ ಹೇರಲಾಗಿತ್ತು ಎನ್ನಲಾಗಿದೆ. ಈ ನಡುವೆ ಕೋಟೇಶ್ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಕೆಲವರು ಮನೆಗೆ ನುಗ್ಗಿ ಪತ್ನಿ ಸುಧಾ ಬಾಗಲಿ, ತಂದೆ ನಿಂಗಪ್ಪ ಬಾಗಲಿ ಹಾಗೂ ತಾಯಿ ಹುಲಿಗೆಮ್ಮ ಬಾಗಲಿ ಅವರಿಗೆ ಮಾರಕಾಸ್ತ್ರ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಕುಟುಂಬದವರು ದೂರಿದ್ದಾರೆ.

ಅಷ್ಟೇ ಅಲ್ಲದೆ, ಜೆಸಿಬಿ ಯಂತ್ರದ ಮೂಲಕ ಮನೆ ಕಂಪೌಂಡ್ ಗೋಡೆಯನ್ನು ಧ್ವಂಸಗೊಳಿಸಿ, ಸಿಸಿ ಕ್ಯಾಮೆರಾಗಳನ್ನು ಒಡೆದು ಹಾಕಿರುವ ಆರೋಪವೂ ಕೇಳಿ ಬಂದಿದೆ. ದರ್ಶನ್ ಎಂಬಾತ 14.50 ಲಕ್ಷ ರೂ. ಮೊತ್ತದ ಖಾಲಿ ಚೆಕ್‌ಗೆ ಸಹಿ ಹಾಕಿಸಿಕೊಂಡಿದ್ದಾನೆ ಹಾಗೂ ಜೀವನ ಎಂಬಾತ ಎರಡು ಖಾಲಿ ಚೆಕ್‌ಗಳನ್ನು ಪಡೆದುಕೊಂಡಿದ್ದಾನೆ ಎಂದು ಕೋಟೇಶ್ ಬಾಗಲಿ ಆರೋಪಿಸಿದ್ದಾನೆ.

ಕ್ಯಾಸಿನೋ ಚಟದಿಂದ ಸಾಲದ ಸುಳಿಯಲ್ಲಿ ಸಿಲುಕಿದ ಕೋಟೇಶ್ ಒಂದು ವರ್ಷದಿಂದ ಗೋವಾ ಕ್ಯಾಸಿನೋ ಚಟಕ್ಕೆ ಬಿದ್ದಿದ್ದ ಕೋಟೇಶ್ ಬಾಗಲಿ, ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದಾನೆ ಎನ್ನಲಾಗಿದೆ. ಸಾಲದ ಹೊರೆ ತಾಳಲಾರದೆ ತಂದೆಯ ನಾಲ್ಕು ಎಕರೆ ಜಮೀನನ್ನು ಮಾರಾಟ ಮಾಡಲಾಗಿದ್ದು, ಮನೆಯ ಮೇಲೆಯೇ ಸುಮಾರು 50 ಲಕ್ಷ ರೂ. ಸಾಲವಿದೆ ಎಂದು ಮೂಲಗಳು ತಿಳಿಸಿವೆ.

ಕ್ಯಾಸಿನೋ ವ್ಯಸನ, ಖಾಸಗಿ ಸಾಲಗಾರರು ಹಾಗೂ ಮೀಟರ್ ಬಡ್ಡಿ ದಂಧೆಕೋರರ ಕಾಟದಿಂದ ಕೋಟ್ಯಂತರ ರೂಪಾಯಿ ಸಾಲದ ಸುಳಿಯಲ್ಲಿ ಸಿಲುಕಿರುವ ಕುಟುಂಬ ಇದೀಗ ಸಂಕಷ್ಟದ ಪರಿಸ್ಥಿತಿಯಲ್ಲಿ ದಿನ ಕಳೆಯುತ್ತಿದೆ.

ಈ ಸಂಬಂಧ ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿತ ಬಡ್ಡಿ ದಂಧೆಕೋರರ ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ. ಪ್ರಕರಣ ನಗರದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ತನಿಖೆ ಮುಂದುವರಿದಿದೆ.

ಹೆಬ್ಬಗೋಡಿಯಲ್ಲಿ ಪೊಲೀಸರ ಕಾರ್ಯಾಚರಣೆ: ರೌಡಿಶೀಟರ್ ಕಾಲಿಗೆ ಗುಂಡೇಟು!

ಬೆಂಗಳೂರು: ನಗರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿಬಂದಿದ್ದು, ರೌಡಿಶೀಟರ್ ಒಬ್ಬನಿಗೆ ಪೊಲೀಸರು ಕಾಲಿಗೆ ಗುಂಡೇಟು ಹಾರಿಸಿರುವ ಘಟನೆ ನಡೆದಿದೆ.

ಜೀವ (19) ಎಂಬ ರೌಡಿಶೀಟರ್‌ಗೆ ಹೆಬ್ಬಗೋಡಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಸಿಂಗೇನಾ ಅಗ್ರಹಾರದ ತೋಪು ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಗಾಯಗೊಂಡ ಆರೋಪಿಯನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹೆಬ್ಬಗೋಡಿಯ ತಿರುಪಾಳ್ಯದಲ್ಲಿ ವಾಸವಾಗಿದ್ದ ಜೀವ, ಕೊಲೆ, ಸುಲಿಗೆ ಮತ್ತು ದರೋಡೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವಾರ ಹೆಬ್ಬಗೋಡಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ನಡೆದ ದರೋಡೆ ಪ್ರಕರಣಗಳಲ್ಲೂ ಈತನ ಪಾತ್ರವಿದೆ ಎಂದು ಶಂಕಿಸಲಾಗಿದೆ.

ಖಚಿತ ಮಾಹಿತಿ ಆಧಾರದಲ್ಲಿ ಪೊಲೀಸರು ದಾಳಿ ನಡೆಸಿದ ವೇಳೆ, ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದನೆಂದು ತಿಳಿದು ಬಂದಿದೆ. ಈ ವೇಳೆ ಪೊಲೀಸ್ ಸಿಬ್ಬಂದಿ ನಾಗೇಶ್ ಮೇಲೆ ದಾಳಿ ಯತ್ನ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಸಬ್ ಇನ್‌ಸ್ಪೆಕ್ಟರ್ ಅಯ್ಯಪ್ಪ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಅಪ್ರಾಪ್ತೆಗೆ ಬೆದರಿಕೆ ಹಾಕಿ ಸಾಮೂಹಿಕ ಅತ್ಯಾಚಾರ; ಚಿಕ್ಕಮಗಳೂರಿನಲ್ಲಿ ಐವರು ಅರೆಸ್ಟ್

ಚಿಕ್ಕಮಗಳೂರು: ಅಪ್ರಾಪ್ತ ಬಾಲಕಿಗೆ ಬ್ಲ್ಯಾಕ್‌ಮೇಲ್ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿದ ಗಂಭೀರ ಆರೋಪದ ಮೇಲೆ ಐವರು ಆರೋಪಿಗಳನ್ನು ಚಿಕ್ಕಮಗಳೂರಿನ ಗೋಣಿಬೀಡು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಸಂತ್ರಸ್ತೆಯ ಫೋಟೋವನ್ನು ತೋರಿಸಿ ಬೆದರಿಕೆ ಹಾಕಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ನ್ಯಾಯಾಲಯಕ್ಕೆ ಶರಣಾಗಿದ್ದಾನೆ ಎಂದು ತಿಳಿದುಬಂದಿದ್ದು, ಈತ ಈ ಹಿಂದೆ ಕೂಡ ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದ ಎನ್ನಲಾಗಿದೆ.

ಘಟನೆ ಬಳಿಕ ಸಂತ್ರಸ್ತೆ ಗಂಡು ಮಗುವಿಗೆ ಜನ್ಮ ನೀಡಿರುವುದಾಗಿ ತಿಳಿದುಬಂದಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಿಪಿಐ ರಾಜಶೇಖರ್ ಹಾಗೂ ಪಿಎಸ್‌ಐ ಶ್ರೀನಾಥ್ ರೆಡ್ಡಿ ನೇತೃತ್ವದಲ್ಲಿ ಪ್ರಕರಣದ ತನಿಖೆ ಮುಂದುವರಿದಿದೆ.

error: Content is protected !!