Home Blog Page 4

ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ: ದ್ವಿತೀಯ ಪಿಯುಸಿ ಪರೀಕ್ಷೆ-2 ದಿನಾಂಕ ಮರುನಿಗದಿ!

ಬೆಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ–2ಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಮಹತ್ವದ ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿರುವಂತೆ, ಪರೀಕ್ಷೆ–2ಕ್ಕೆ ನೋಂದಣಿ ಪ್ರಕ್ರಿಯೆ ಏಪ್ರಿಲ್ 9ರಿಂದ ಆರಂಭವಾಗಿ ಏಪ್ರಿಲ್ 17ರವರೆಗೆ ನಡೆಯಲಿದೆ.

2026ರಲ್ಲಿ ರೆಗ್ಯೂಲರ್ ಫ್ರೆಶ್ ವಿದ್ಯಾರ್ಥಿಗಳಾಗಿ ನೋಂದಾಯಿಸಿಕೊಂಡು ಮೊದಲ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳು ಯಾವುದೇ ಶುಲ್ಕವಿಲ್ಲದೆ ಪರೀಕ್ಷೆ–2ಕ್ಕೆ ನೋಂದಾಯಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಆನ್‌ಲೈನ್ ಲಿಂಕ್ ಮೂಲಕ ಅಥವಾ ತಮ್ಮ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಿ ಪಿಯುಸಿ ಪರೀಕ್ಷಾ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು.

ಮೊದಲ ಪರೀಕ್ಷೆಯಲ್ಲಿ ಗೈರುಹಾಜರಾಗಿದ್ದ ಅಥವಾ ಫಲಿತಾಂಶ ಅಪೂರ್ಣವಾಗಿರುವ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ತಮ್ಮ ಲಾಗಿನ್ ಮೂಲಕ ನೇರವಾಗಿ ನೋಂದಾಯಿಸಲು ಅವಕಾಶ ನೀಡಲಾಗಿದೆ. ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡುವಂತೆ ಮಂಡಳಿ ಸೂಚಿಸಿದೆ.

ಪರೀಕ್ಷೆ–2ಕ್ಕೆ ನೋಂದಾಯಿಸಿದ ವಿದ್ಯಾರ್ಥಿಗಳ ಪ್ರವೇಶಪತ್ರಗಳನ್ನು ನಿಗದಿತ ಸಮಯದಲ್ಲಿ ಸಂಬಂಧಿತ ಕಾಲೇಜುಗಳ ಲಾಗಿನ್ ಮೂಲಕ ಬಿಡುಗಡೆ ಮಾಡಲಾಗುತ್ತದೆ. ಮರುನಿಗದಿಗೊಂಡ ವೇಳಾಪಟ್ಟಿಯಂತೆ ಪರೀಕ್ಷೆಗಳು ಏಪ್ರಿಲ್ 30, 2026ರಿಂದ ಆರಂಭವಾಗಲಿವೆ.

ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ಜಾಲತಾಣದಲ್ಲಿರುವ ಪ್ರಶ್ನೆ ಬ್ಯಾಂಕ್ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಳಸಿಕೊಂಡು ಸಮರ್ಪಕವಾಗಿ ಸಿದ್ಧತೆ ಮಾಡಿಕೊಂಡು, ಆತ್ಮವಿಶ್ವಾಸದಿಂದ ಪರೀಕ್ಷೆಗೆ ಹಾಜರಾಗುವಂತೆ ಮನವಿ ಮಾಡಲಾಗಿದೆ.

ನವದೆಹಲಿ ರೋಹಿಣಿಯಲ್ಲಿ ಭೀಕರ ಅಗ್ನಿ ದುರಂತ – ಒಂದೇ ಕುಟುಂಬದ ಮೂವರು ಸಜೀವ ದಹನ

0

ನವದೆಹಲಿ: ದೆಹಲಿಯ ರೋಹಿಣಿ ಪ್ರದೇಶದಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಸಜೀವ ದಹನಗೊಂಡಿರುವ ದುರ್ಘಟನೆ ನಡೆದಿದೆ.

ಮಂಗೇರಾಮ್ ಪಾರ್ಕ್‌ನಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣಾ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು, ಅದರ ಪಕ್ಕದಲ್ಲಿದ್ದ ತಾತ್ಕಾಲಿಕ ಗುಡಿಸಲುಗಳಿಗೆ ಕ್ಷಣಾರ್ಧದಲ್ಲಿ ವ್ಯಾಪಿಸಿದೆ. ಬುದ್ಧ ವಿಹಾರ್ ಬಳಿಯ ಸುಮಾರು 400 ಚದರ ಗಜ ಪ್ರದೇಶದಲ್ಲಿ ಈ ಅನಾಹುತ ಸಂಭವಿಸಿದೆ.

ಮಾಹಿತಿಯ ಪ್ರಕಾರ, ಬೆಳಗಿನ ಜಾವ ಸುಮಾರು 1.25ರ ವೇಳೆಗೆ ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಪ್ಲಾಸ್ಟಿಕ್ ವಸ್ತುಗಳಿದ್ದ ಕಾರಣ ಬೆಂಕಿ ವೇಗವಾಗಿ ವ್ಯಾಪಿಸಿ ಇಡೀ ಪ್ರದೇಶವನ್ನು ಆವರಿಸಿತು.

ಘಟನೆಯ ಮಾಹಿತಿ ತಿಳಿದ ಕೂಡಲೇ ಆರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಆದರೆ ಕಿರಿದಾದ ರಸ್ತೆಗಳ ಕಾರಣದಿಂದಾಗಿ ಅಗ್ನಿಶಾಮಕ ದಳಕ್ಕೆ ಸ್ಥಳ ತಲುಪಲು ಅಡಚಣೆ ಉಂಟಾಯಿತು. ಅಗ್ನಿಶಾಮಕ ಅಧಿಕಾರಿ ಅಜಯ್ ಶರ್ಮಾ ನೇತೃತ್ವದಲ್ಲಿ ದೀರ್ಘಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತರಲಾಯಿತು.

ಆದರೆ, ಅಗ್ನಿಶಾಮಕ ದಳದವರು ಸ್ಥಳಕ್ಕೆ ತಲುಪುವಷ್ಟರಲ್ಲಿ ಮೂವರು ಮೃತಪಟ್ಟಿದ್ದರು. ಮೃತರು ಒಂದೇ ಕುಟುಂಬದವರಾಗಿದ್ದು, ಅವಶೇಷಗಳಡಿಯಿಂದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಸ್ಥಳೀಯ ಪೊಲೀಸರು ಹಾಗೂ ವಿಪತ್ತು ನಿರ್ವಹಣಾ ತಂಡಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಘಟನೆಯ ಕುರಿತು ತನಿಖೆ ಮುಂದುವರಿದಿದೆ. ಬೆಂಕಿ ಅವಘಡದ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

2026ರ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ: CSK ವಿರುದ್ಧ ಸೋತ ಕೆಕೆಆರ್‌ಗೆ ಮತ್ತೊಂದು ಆಘಾತ- ನಾಯಕನಿಗೆ ಬಿತ್ತು ಭಾರೀ ದಂಡ

0

ಚೆನ್ನೈ: ಐಪಿಎಲ್ 2026ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಕಳಪೆ ಪ್ರದರ್ಶನ ತೋರುತ್ತಿದ್ದು, ಆಡಿದ ಎಲ್ಲಾ ಪಂದ್ಯಗಳಲ್ಲೂ ಸೋಲು ಕಂಡಿದೆ.

ಅದರಂತೆ ಮಂಗಳವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧವೂ ಹೀನಾಯವಾಗಿ ಸೋತಿದೆ. ಈ ಬೆನ್ನಲ್ಲೇ KKR ತಂಡದ ನಾಯಕ ಅಜಿಂಕ್ಯ ರಹಾನೆ ಅವರಿಗೆ ₹12 ಲಕ್ಷ ದಂಡ ವಿಧಿಸಲಾಗಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿರುವ ಕಾರಣಕ್ಕೆ ಬಿಸಿಸಿಐ ಈ ದಂಡ ವಿಧಿಸಿದೆ.

ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22ರ ಅಡಿಯಲ್ಲಿ ಕನಿಷ್ಠ ಓವರ್ ರೇಟ್ ನಿಯಮ ಉಲ್ಲಂಘನೆಗೆ ಇದು ಮೊದಲ ತಪ್ಪಾಗಿರುವುದರಿಂದ ₹12 ಲಕ್ಷ ದಂಡ ವಿಧಿಸಲಾಗಿದೆ ಎಂದು ತಿಳಿಸಿದೆ.

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಕೆಕೆಆರ್ ತಂಡ ಅಗತ್ಯ ಓವರ್ ವೇಗವನ್ನು ಕಾಯ್ದುಕೊಳ್ಳಲು ವಿಫಲವಾಯಿತು. ಇದೇ ವೇಳೆ ತಂಡದ ಸೋಲಿನ ಸರಪಳಿ ಮುಂದುವರಿದಿದ್ದು, ಐದು ಪಂದ್ಯಗಳಲ್ಲಿ ಒಂದೂ ಗೆಲುವು ಸಾಧಿಸದ ಸ್ಥಿತಿಯಲ್ಲಿದೆ.

ಪಂದ್ಯದ ವಿವರ ನೋಡಿದರೆ, ಆರಂಭದಲ್ಲೇ ಕೆಕೆಆರ್ ಬ್ಯಾಟಿಂಗ್ ಹಿನ್ನಡೆ ಅನುಭವಿಸಿತು. ಫಿನ್ ಅಲೆನ್ ಅಲ್ಪ ಮೊತ್ತಕ್ಕೆ ಔಟಾದರೆ, ಸುನಿಲ್ ನರೈನ್ 24 ರನ್ ಗಳಿಸಿ ಔಟಾದರು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ತಂಡ 7 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ ಸೋಲಿಗೆ ತುತ್ತಾಯಿತು.

ಇದರಿಂದ ಕೆಕೆಆರ್ ತಂಡದ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಮುಂದಿನ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಕಣಕ್ಕಿಳಿಯಲಿರುವ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ.

ವಿಜಯಪುರದಲ್ಲಿ ಹಾಡಹಗಲೇ ಶೂಟೌಟ್: ಗುಂಡಿನ ದಾಳಿಗೆ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ!

0

ವಿಜಯಪುರ: ಸಿನಿಮೀಯ ಶೈಲಿಯಲ್ಲಿ ಹಾಡಹಗಲೇ ರಿಯಲ್ ಎಸ್ಟೇಟ್ ಉದ್ಯಮಿಯೋರ್ವರನ್ನು ಶೂಟೌಟ್ ಮಾಡಿರುವ ಘಟನೆ ಜಿಲ್ಲೆಯ ಹೊರವಲಯದ ಅಲಿಯಾಬಾದ್ ಬಳಿ ಜರುಗಿದೆ.

ರಿಯಲ್ ಎಸ್ಟೇಟ್ ಉದ್ಯಮಿ ಜೊತೆಗೆ ಕೃಷಿಕನಾಗಿದ್ದ ರಾಜು ಕಡೆ ಮೃತ ವ್ಯಕ್ತಿ. ಇವರು ಥಾರ್ ಕಾರ್ ತಗೆದುಕೊಂಡು ವಿಜಯಪುರದತ್ತ ಬರುತ್ತಿರುವಾಗ ಹಂತಕರು ಟಿಪ್ಪರ್‌ನಿಂದ ಮುಖಾಮುಖಿ ಗುದ್ದಿದ್ದಾರೆ. ನಂತರ ಕಾರಿನ ಡೋರ್ ಓಪನ್ ಆಗದೇ ಇರೋದಕ್ಕೆ ಕಲ್ಲುಗಳನ್ನ ಎತ್ತಿ ಹಾಕಿದ್ದಾರೆ. ಇಷ್ಟಕ್ಕೆ ತೃಪ್ತರಾಗದ ಹಂತಕರು ಕಾರಿನ ಮೇಲೆ ಗುಂಡಿನ ಸುರಿಮಳೆ ನಡೆಸಿದ್ದಾರೆ. ಈ ಹತ್ಯೆಗೆ ಬಹಳ ದಿನಗಳಿಂದ ಸ್ಕೆಚ್ ಹಾಕಲಾಗಿದ್ದು, ರಾಜು ದಿನನಿತ್ಯದ ಚಲನವಲನಗಳ ಮೇಲೆ ಹಂತಕರು ನಿಗಾ ಇಟ್ಟಿದ್ದರು. ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ರಾಜು ಏಕಾಂಗಿಯಾಗಿ ಬರೋದನ್ನ ಅರಿತು ದಾಳಿ ಮಾಡಲಾಗಿದೆ. ಇನ್ನು ಈ ಕೃತ್ಯಕ್ಕೆ ಆಸ್ತಿಯ ವೈಷಮ್ಯವೇ ಕಾರಣ ಎನ್ನಲಾಗಿದೆ.

ಅಷ್ಟೇ ಅಲ್ಲ ಈ ಹಿಂದೆ ಕೂಡ ಆಸ್ತಿಗಾಗಿ ಗಲಾಟೆ ನಡೆದಿತ್ತು. ಹತ್ಯೆಯ ಆರೋಪಿಗಳನ್ನ ಈ ಕೂಡಲೇ ಬಂಧಿಸಬೇಕು ಅಂತಾ ಮೃತ ರಾಜು ಪತ್ನಿ ಇಟಾಬಾಯಿ ಆಗ್ರಹಿಸಿದ್ದಾರೆ. ವಿಜಯಪುರ ಗ್ರಾಮೀಣ ಹಾಗೂ ಎಪಿಎಂಸಿ ಠಾಣೆಯ ಪೊಲೀಸರು ಸದ್ಯ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಪರಿಶೀಲನೆ ನಡೆಸಿದ್ದಾರೆ. ಹಂತಕರ ಸೆರೆಗೆ ಕೂಡ ಪೊಲೀಸರು ಜಾಲ ಬೀಸಿದ್ದಾರೆ.

IPL 2026: ಕೆಕೆಆರ್‌ಗೆ ಹೀನಾಯ ಆರಂಭ; ಗೆಲುವಿಲ್ಲದೆ ದಾಖಲೆ ಬರೆದ ನೈಟ್ ರೈಡರ್ಸ್!

0

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಕೋಲ್ಕತ್ತಾ ನೈಟ್ ರೈಡರ್ಸ್ (KKR), 2026ರ ಸೀಸನ್‌ನಲ್ಲಿ ಅಚ್ಚರಿಯ ರೀತಿಯಲ್ಲಿ ಹೀನಾಯ ಪ್ರದರ್ಶನ ನೀಡಿದೆ.

ಸೀಸನ್ ಆರಂಭವಾಗಿ 5 ಪಂದ್ಯಗಳು ಕಳೆದರೂ ತಂಡ ಒಂದೂ ಗೆಲುವು ದಾಖಲಿಸಿಲ್ಲ.

ಇದು ಕೆಕೆಆರ್ ಇತಿಹಾಸದಲ್ಲೇ ಅತ್ಯಂತ ಕಳಪೆ ಆರಂಭವಾಗಿದ್ದು, ಹಿಂದಿನ ವರ್ಷಗಳಲ್ಲಿ ಕಂಡ ಸತತ ಸೋಲುಗಳಿಗಿಂತಲೂ ವಿಭಿನ್ನವಾಗಿ ಈ ಬಾರಿ ಮೊದಲ ಐದು ಪಂದ್ಯಗಳಲ್ಲೇ ಗೆಲುವು ಕಾಣದಿರುವುದು ಗಮನ ಸೆಳೆಯುತ್ತಿದೆ.

ಕೆಕೆಆರ್ ಪಂದ್ಯ ಫಲಿತಾಂಶಗಳು:

  • ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್‌ಗಳ ಸೋಲು
  • ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 65 ರನ್‌ಗಳ ಭಾರೀ ಸೋಲು
  • ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯ ಮಳೆಯಿಂದ ರದ್ದು
  • ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 3 ವಿಕೆಟ್‌ಗಳ ಸೋಲು
  • ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 32 ರನ್‌ಗಳ ಸೋಲು
  • ಹಿನ್ನಡೆಯ ಪ್ರಮುಖ ಕಾರಣಗಳು:

ಕೆಕೆಆರ್ ತಂಡದ ಬ್ಯಾಟಿಂಗ್ ವಿಭಾಗ ಸಂಪೂರ್ಣವಾಗಿ ವಿಫಲವಾಗಿದ್ದು, ಪವರ್‌ಪ್ಲೇ ಅವಧಿಯಲ್ಲೇ ವಿಕೆಟ್ ಕಳೆದುಕೊಳ್ಳುತ್ತಿರುವುದು ತಂಡಕ್ಕೆ ದೊಡ್ಡ ಹೊಡೆತ ನೀಡುತ್ತಿದೆ. ಜೊತೆಗೆ ಡೆತ್ ಓವರ್‌ಗಳಲ್ಲಿ ಬೌಲಿಂಗ್ ನಿಯಂತ್ರಣ ಕಳೆದುಕೊಳ್ಳುತ್ತಿರುವುದು ಸೋಲಿಗೆ ಕಾರಣವಾಗಿದೆ.

ನಾಯಕ ಅಜಿಂಕ್ಯ ರಹಾನೆ ತಂಡವನ್ನು ಸಮತೋಲನಗೊಳಿಸಲು ಪ್ರಯತ್ನಿಸುತ್ತಿದ್ದರೂ ಮೈದಾನದಲ್ಲಿ ಫಲಿತಾಂಶ ಕಾಣಿಸುತ್ತಿಲ್ಲ. ಸ್ಟಾರ್ ಆಟಗಾರರಾದ ಕ್ಯಾಮರೋನ್ ಗ್ರೀನ್, ಸುನಿಲ್ ನರೈನ್ ಹಾಗೂ ಫಿನ್ ಅಲೆನ್ ಸೇರಿದಂತೆ ಪ್ರಮುಖ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರದಿರುವುದು ತಂಡದ ಸಂಕಷ್ಟವನ್ನು ಹೆಚ್ಚಿಸಿದೆ.

ಮುಂದಿನ ಸವಾಲು:

ಸದ್ಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಕೆಕೆಆರ್, ಪ್ಲೇ-ಆಫ್ ಹೋರಾಟದಲ್ಲಿ ಉಳಿಯಬೇಕಾದರೆ ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಏಪ್ರಿಲ್ 17ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯ ತಂಡಕ್ಕೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.

ಆದರೂ, ಹಿಂದಿನ ಸೀಸನ್‌ಗಳಲ್ಲಿ ಕಳಪೆ ಆರಂಭದ ನಂತರವೂ ಟ್ರೋಫಿ ಗೆದ್ದ ಇತಿಹಾಸವನ್ನು ನೆನಪಿಸಿಕೊಂಡು, ಈ ಬಾರಿಯೂ ಕೆಕೆಆರ್ ಫೀನಿಕ್ಸ್‌ನಂತೆ ಪುನರುತ್ಥಾನಗೊಳ್ಳಲಿದೆ ಎಂಬ ಆಶಾಭಾವನೆ ಅಭಿಮಾನಿಗಳಲ್ಲಿ ಮುಂದುವರಿದಿದೆ.

ಚಿಕ್ಕಮಗಳೂರಿನಲ್ಲಿ ಅಂಬೇಡ್ಕರ್ ಜಯಂತಿ ಮೆರವಣಿಗೆಯಲ್ಲಿ ದುರಂತ: ಮೆರವಣಿಗೆ ಮೇಲೆ ಹರಿದ ಕಾರು; 7 ವರ್ಷದ ಬಾಲಕಿ ಸಾವು!

ಚಿಕ್ಕಮಗಳೂರು: ಜಿಲ್ಲೆಯ ಬಿಳೆಕಲ್ಲು ಗ್ರಾಮದಲ್ಲಿ ನಡೆಯುತ್ತಿದ್ದ ಅಂಬೇಡ್ಕರ್ ಜಯಂತಿ ಮೆರವಣಿಗೆಯ ಸಂಭ್ರಮ ದುರಂತಕ್ಕೆ ತಿರುಗಿದೆ.

ನಿಯಂತ್ರಣ ತಪ್ಪಿದ ಕಾರೊಂದು ಮೆರವಣಿಗೆಯಲ್ಲಿದ್ದ ಜನರ ಗುಂಪಿಗೆ ನುಗ್ಗಿ ಪಲ್ಟಿಯಾದ ಪರಿಣಾಮ 7 ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಾಹಿತಿಯ ಪ್ರಕಾರ, ಇಂದಾವರ ಗ್ರಾಮದಿಂದ ಬಿಳೆಕಲ್ಲು ಗ್ರಾಮಕ್ಕೆ ತನ್ನ ತಂಗಿ ಮನೆಗೆ ಬಂದಿದ್ದ ಸಾನ್ವಿ (7) ಎಂಬ ಬಾಲಕಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವೇಳೆ ಈ ಘಟನೆ ನಡೆದಿದೆ. ವೇಗವಾಗಿ ಬಂದ ಕಾರು ಏಕಾಏಕಿ ಜನರ ಮೇಲೆ ಹರಿದು ಪಲ್ಟಿಯಾದ ಪರಿಣಾಮ ಭೀಕರ ದುರಂತ ಸಂಭವಿಸಿದೆ.

ಈ ಘಟನೆ ಹಾಸನದಲ್ಲಿ ಗಣಪತಿ ಮೆರವಣಿಗೆಯ ವೇಳೆ ನಡೆದಿದ್ದ ದುರಂತವನ್ನು ನೆನಪಿಸುವಂತಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಘಟನೆಯ ನಂತರ ರೊಚ್ಚಿಗೆದ್ದ ನೂರಾರು ಗ್ರಾಮಸ್ಥರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆ ಮುಂಭಾಗ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಯಾಳು ಹಾಗೂ ಕಾರು ಚಾಲಕನನ್ನು ಹಾಸನಕ್ಕೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಅನ್ನು ತಡೆದ ಘಟನೆ ಕೂಡ ನಡೆದಿದೆ. ಇದರಿಂದ ಆಸ್ಪತ್ರೆ ಆವರಣದಲ್ಲಿ ತೀವ್ರ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕ್ರೂಷರ್ ವಾಹನದಲ್ಲಿ ಮಲಗಿದ್ದ ಬಾಲಕ ಸಜೀವ ದಹನ- ಸೊಳ್ಳೆ ಬತ್ತಿ ಹಚ್ಚಿಕೊಂಡು ಮಲಗಿದ್ದಾಗ ದುರಂತ

0

ಗದಗ: ತಾಲೂಕಿನ ಹೊಂಬಳ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ಸಂಭವಿಸಿದ್ದು, ಕ್ರೂಷರ್ ವಾಹನದಲ್ಲಿ ಮಲಗಿದ್ದ ಬಾಲಕ ಬೆಂಕಿಗೆ ಆಹುತಿಯಾದ ದುರ್ಘಟನೆ ನಡೆದಿದೆ.

ಸೊಳ್ಳೆ ಬತ್ತಿ ಹಚ್ಚಿಕೊಂಡು ವಾಹನದ ಒಳಗೆ ಮಲಗಿದ್ದ ವೇಳೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲಿ ವಾಹನವೇ ಸುಟ್ಟು ಕರಕಲಾಗಿದೆ. ಈ ದುರ್ಘಟನೆಯಲ್ಲಿ ವಾಹನದೊಳಗೆ ಮಲಗಿದ್ದ ಸದಾನಂದ ಉಪ್ಪಾರ್ (14) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ವಾಹನದ ಮೇಲ್ಭಾಗದಲ್ಲಿ ಮಲಗಿದ್ದ ಅಣ್ಣ ಮೈಲಾರಿ ಉಪ್ಪಾರ್ (16) ಬೆಂಕಿ ಕಾಣುತ್ತಿದ್ದಂತೆಯೇ ಎಚ್ಚೆತ್ತುಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇವರು ಮೂಲತಃ ಹುಬ್ಬಳ್ಳಿ ತಾಲೂಕಿನ ತಾರಿಹಾಳ ಗ್ರಾಮದ ನಿವಾಸಿಗಳಾಗಿದ್ದು, ಹೊಂಬಳ ಗ್ರಾಮದಲ್ಲಿರುವ ಅಜ್ಜ-ಅಜ್ಜಿ ಮನೆಗೆ ಬಂದಿದ್ದರು ಎಂದು ತಿಳಿದು ಬಂದಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ವೈಟ್‌ಫೀಲ್ಡ್‌ನಲ್ಲಿ ದಾರುಣ ಘಟನೆ: 17 ಮಗಳನ್ನು ಕೊಂದು ತಾಯಿ ಆತ್ಮಹತ್ಯೆ

ಬೆಂಗಳೂರು: ನಗರದ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾಯಿ ತನ್ನ 17 ವರ್ಷದ ಮಗಳನ್ನು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

40 ವರ್ಷದ ಸುವರ್ಣ ಎಂಬ ಮಹಿಳೆ ತನ್ನ ಮಗಳು ಕಾರುಣ್ಯಳನ್ನು ಹತ್ಯೆ ಮಾಡಿ ನಂತರ ಆತ್ಮಹತ್ಯೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ. ಈ ದಾರುಣ ಘಟನೆಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಘಟನೆ ಕುರಿತು ಮಾಹಿತಿ ತಿಳಿದ ವೈಟ್‌ಫೀಲ್ಡ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಈ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.

ಬಿಹಾರದ ನೂತನ ಸಿಎಂ ಆಗಿ ಬಿಜೆಪಿಯ ಸಾಮ್ರಾಟ್ ಚೌಧರಿ ಆಯ್ಕೆ

ಪಾಟ್ನಾ: ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಅವರನ್ನು ಭಾರತೀಯ ಜನತಾ ಪಕ್ಷ ಆಯ್ಕೆ ಮಾಡಿದೆ. ಅವರು ನಾಳೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

57 ವರ್ಷದ ಸಾಮ್ರಾಟ್ ಚೌಧರಿ ರಾಜ್ಯದ ಪ್ರಮುಖ ಒಬಿಸಿ ಸಮುದಾಯವಾದ ಕೊಯೇರಿ ಅಥವಾ ಕುಶ್ವಾಹ ಜಾತಿಗೆ ಸೇರಿದವರಾಗಿದ್ದು, ಈ ಸಮುದಾಯವು ಹಿಂದುಳಿದ ವರ್ಗಗಳಲ್ಲಿ ಮಹತ್ವದ ಸ್ಥಾನ ಹೊಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.

ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ತನ್ನದೇ ನಾಯಕನನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸುತ್ತಿರುವುದು ವಿಶೇಷವಾಗಿದ್ದು, ಇದುವರೆಗೆ ಮೈತ್ರಿ ಸರ್ಕಾರದಲ್ಲೇ ಭಾಗಿಯಾಗಿದ್ದ ಬಿಜೆಪಿ ಈಗ ಸ್ವತಂತ್ರ ನಾಯಕತ್ವದತ್ತ ಹೆಜ್ಜೆ ಇಟ್ಟಿದೆ.

ನಿತೀಶ್ ಕುಮಾರ್ ನೇತೃತ್ವದ ಜನತಾ ದಳ (ಯುನೈಟೆಡ್) ಈ ಬಾರಿ ಸಿಎಂ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಟ್ಟಿದೆ ಎನ್ನಲಾಗಿದೆ. ಜೆಡಿಯು ಪಕ್ಷವು ಇದೇ ಸಮುದಾಯದಿಂದ ನಾಯಕನನ್ನು ಆಯ್ಕೆ ಮಾಡುವಂತೆ ಸೂಚನೆ ನೀಡಿದ್ದುದೂ ತಿಳಿದುಬಂದಿದೆ.

243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಜೆಡಿಯು 85 ಶಾಸಕರನ್ನು ಹೊಂದಿದ್ದು, ಬಿಜೆಪಿಗಿಂತ ಕೇವಲ ನಾಲ್ಕು ಸ್ಥಾನಗಳು ಕಡಿಮೆ ಇವೆ. 2005ರಿಂದ ಮೈತ್ರಿಯಲ್ಲಿ ಕಿರಿಯ ಪಾಲುದಾರನಾಗಿದ್ದ ಬಿಜೆಪಿ, ಈಗ ಮೊದಲ ಬಾರಿಗೆ ರಾಜ್ಯದ ಉನ್ನತ ಹುದ್ದೆಯನ್ನು ತನ್ನದಾಗಿಸಿಕೊಂಡಿದೆ.

2026-27 ಶೈಕ್ಷಣಿಕ ವರ್ಷ ವೇಳಾಪಟ್ಟಿ ಪ್ರಕಟ: ಮೇ 29ರಿಂದ ಶಾಲೆ ಆರಂಭ

ಬೆಂಗಳೂರು: ರಾಜ್ಯದ 2026-27ನೇ ಸಾಲಿನ ಶಾಲಾ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಮೇ 29ರಿಂದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ತರಗತಿಗಳು ಆರಂಭಗೊಳ್ಳಲಿವೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ವಾರ್ಷಿಕ ಶೈಕ್ಷಣಿಕ ಕ್ರಿಯಾಯೋಜನೆಯಡಿ ಈ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಈ ಬಾರಿ ಒಟ್ಟು 245 ಕೆಲಸದ ದಿನಗಳನ್ನು ನಿಗದಿಪಡಿಸಲಾಗಿದೆ. ಅಕ್ಟೋಬರ್ 3ರಿಂದ 21ರವರೆಗೆ ದಸರಾ ರಜೆ ಹಾಗೂ 2027ರ ಏಪ್ರಿಲ್ 11ರಿಂದ ಬೇಸಿಗೆ ರಜೆ ಘೋಷಿಸಲಾಗಿದೆ.

ಶೈಕ್ಷಣಿಕ ಅವಧಿಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಮೊದಲ ಅವಧಿ ಮೇ 29ರಿಂದ ಅಕ್ಟೋಬರ್ 2ರವರೆಗೆ ಮತ್ತು ಎರಡನೇ ಅವಧಿ ಅಕ್ಟೋಬರ್ 22ರಿಂದ 2027ರ ಏಪ್ರಿಲ್ 10ರವರೆಗೆ ನಡೆಯಲಿದೆ.

ಒಟ್ಟು 365 ದಿನಗಳಲ್ಲಿ 119 ರಜಾ ದಿನಗಳನ್ನು ನಿಗದಿಪಡಿಸಲಾಗಿದ್ದು, 245 ದಿನಗಳನ್ನು ಕರ್ತವ್ಯದ ದಿನಗಳಾಗಿ ಪರಿಗಣಿಸಲಾಗಿದೆ. ಇದರಲ್ಲಿ ಪರೀಕ್ಷೆ ಮತ್ತು ಮೌಲ್ಯಾಂಕನ ಕಾರ್ಯಗಳಿಗೆ 26 ದಿನಗಳು, ಪಠ್ಯೇತರ ಚಟುವಟಿಕೆಗಳಿಗೆ 24 ದಿನಗಳು, ಮೌಲ್ಯಮಾಪನ ಹಾಗೂ ಫಲಿತಾಂಶ ವಿಶ್ಲೇಷಣೆಗೆ 10 ದಿನಗಳು ಮೀಸಲಾಗಿದೆ. ಸ್ಥಳೀಯ ರಜೆಗಳಿಗೆ 4 ದಿನಗಳನ್ನು ನಿಗದಿ ಮಾಡಲಾಗಿದೆ.

ಇದಲ್ಲದೆ, ಜೂನ್ ಮೊದಲ ವಾರದಲ್ಲೇ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಣೆ ಮಾಡಲು ಸೂಚನೆ ನೀಡಲಾಗಿದೆ. ಜೂನ್ 30ರೊಳಗೆ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದ್ದು, 6ರಿಂದ 18 ವರ್ಷದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ತರಲು ವಿಶೇಷ ದಾಖಲಾತಿ ಅಭಿಯಾನ ನಡೆಸಲು ಇಲಾಖೆಯು ಸೂಚಿಸಿದೆ.

ರಾಜ್ಯದ ಎಲ್ಲಾ ಶಾಲೆಗಳಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಈ ಕಾರ್ಯಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

error: Content is protected !!