Home Blog Page 46

ಆಗುಂಬೆ ಘಾಟ್‌ನಲ್ಲಿ ಭೂಕುಸಿತ ಭೀತಿ: ಭಾರಿ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿಷೇಧ

ಉಡುಪಿ: ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾದ ಆಗುಂಬೆ ಘಾಟ್‌ನಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಭೂಕುಸಿತದ ಆತಂಕ ಹೆಚ್ಚಾಗಿದೆ.

ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಭಾರಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 169ಎ (ತೀರ್ಥಹಳ್ಳಿ–ಮಲ್ಪೆ ರಸ್ತೆ) ವ್ಯಾಪ್ತಿಯ ಆಗುಂಬೆ ಘಾಟ್ ಭಾಗದಲ್ಲಿ ಮಣ್ಣು ತೇವಗೊಂಡಿರುವುದರಿಂದ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆ ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಜಿಲ್ಲಾಡಳಿತದ ಆದೇಶದ ಪ್ರಕಾರ ಸೆಪ್ಟೆಂಬರ್ 30ರವರೆಗೆ ಘಾಟ್ ರಸ್ತೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಭಾರಿ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿಗಳು ವಾಹನಗಳನ್ನು ಪರಿಶೀಲನೆ ನಡೆಸುತ್ತಿದ್ದು, ನಿಗದಿತ ಮಾನದಂಡಗಳನ್ನು ಪೂರೈಸುವ ವಾಹನಗಳಿಗೆ ಮಾತ್ರ ಮುಂದಿನ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ.

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗೆ ದುರ್ಗಮ್ಮ ಬಿಜವಾಡ ಮಹಾಪೌರ, ನಾಝರೆ ರತ್ನಾಬಾಯಿ ಉಪಮಹಾಪೌರರಾಗಿ ಆಯ್ಕೆ

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ 25ನೇ ಅವಧಿಯ ಮಹಾಪೌರರಾಗಿ 69ನೇ ವಾರ್ಡ್ ಸದಸ್ಯೆ ದುರ್ಗಮ್ಮ ಶಶಿಕಾಂತ ಬಿಜವಾಡ ಹಾಗೂ ಉಪಮಹಾಪೌರರಾಗಿ 9ನೇ ವಾರ್ಡ್ ಸದಸ್ಯೆ ನಾಝರೆ ರತ್ನಾಬಾಯಿ ಏಕನಾಥ ಆಯ್ಕೆಯಾಗಿದ್ದಾರೆ.

ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಚುನಾವಣಾ ಅಧ್ಯಕ್ಷಾಧಿಕಾರಿಯಾಗಿದ್ದ ಕೆ.ಎಂ. ಜಾನಕಿ ಅವರು ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಿದರು.

ಮಹಾಪೌರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ದುರ್ಗಮ್ಮ ಬಿಜವಾಡ ಅವರು 50 ಮತಗಳನ್ನು ಪಡೆದು ವಿಜಯಶಾಲಿಯಾದರೆ, ಪ್ರತಿಸ್ಪರ್ಧಿ 20ನೇ ವಾರ್ಡ್ ಸದಸ್ಯೆ ಕವಿತಾ ದಾನಪ್ಪ ಕಬ್ಬೇರ ಅವರು 35 ಮತಗಳನ್ನು ಪಡೆದರು.

ಉಪಮಹಾಪೌರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾಝರೆ ರತ್ನಾಬಾಯಿ ಏಕನಾಥ ಅವರು 50 ಮತಗಳನ್ನು ಪಡೆದು ಆಯ್ಕೆಯಾದರು. ಅವರ ವಿರುದ್ಧ ಸ್ಪರ್ಧಿಸಿದ್ದ 6ನೇ ವಾರ್ಡ್ ಸದಸ್ಯೆ ದಿಲಷಾದ್ ಬೇಗಂ ನದಾಫ್ 35 ಮತಗಳನ್ನು ಹಾಗೂ 76ನೇ ವಾರ್ಡ್ ಸದಸ್ಯೆ ವಹೀದಾ ಖಾನಂ ಅಲಾಭಕ್ಷ ಕಿತ್ತೂರು 3 ಮತಗಳನ್ನು ಪಡೆದರು.

ಮಹಾಪೌರ ಹಾಗೂ ಉಪಮಹಾಪೌರ ಚುನಾವಣೆಯಲ್ಲಿ ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ಚುನಾವಣೆಗೆ ಮಹಾನಗರ ಪಾಲಿಕೆ ಸದಸ್ಯರು, ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸೇರಿ ಒಟ್ಟು 92 ಮತದಾರರು ಇದ್ದು, ಅವರಲ್ಲಿ 88 ಮಂದಿ ಮತದಾನದಲ್ಲಿ ಪಾಲ್ಗೊಂಡರು. ನಾಲ್ವರು ಸದಸ್ಯರು ಗೈರುಹಾಜರಾಗಿದ್ದರು.

ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಎಸ್.ಎಸ್. ಬಿರಾದಾರ ಹಾಗೂ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಗಾಳಿ ಉಪಸ್ಥಿತರಿದ್ದರು.

ಚುನಾವಣಾ ಆಯೋಗ ಕತ್ತೆ ಕಾಯ್ತಾ ಇದೆಯಾ?: SIR ಪ್ರಕ್ರಿಯೆ ಕುರಿತು ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಕುರಿತ ವಿವಾದಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪಗಳಾಗಿದ್ದರೆ ಕ್ರಮ ಕೈಗೊಳ್ಳುವುದು ಚುನಾವಣಾ ಆಯೋಗದ ಜವಾಬ್ದಾರಿಯೇ ಹೊರತು ರಾಜ್ಯ ಸರ್ಕಾರದ್ದಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, “ಚುನಾವಣಾ ಆಯೋಗ ಕತ್ತೆ ಕಾಯ್ತಿದೆಯಾ? ಅವರದ್ದೇ ತಾನೆ ಜವಾಬ್ದಾರಿ. ಕಾನೂನು ಮೀರಿ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಚುನಾವಣಾ ಆಯೋಗದ ವೀಕ್ಷಕರು ಇದ್ದಾರೆ. ಎಲ್ಲಿಯಾದರೂ ಲೋಪ ಕಂಡುಬಂದರೆ ಆಯೋಗವೇ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದರು.

ರಾಜ್ಯ ಸರ್ಕಾರ ಯಾರಿಗೂ ಒತ್ತಾಯಪೂರ್ವಕವಾಗಿ ಎಸ್‌ಐಆರ್ ಪ್ರಕ್ರಿಯೆ ನಡೆಸುವಂತೆ ಸೂಚಿಸಿಲ್ಲ ಎಂದು ಸ್ಪಷ್ಟಪಡಿಸಿದ ಅವರು, “ಸಮುದಾಯ ಭವನಗಳಲ್ಲಿ ಅಥವಾ ಸರ್ಕಾರಿ ಕಚೇರಿಗಳಲ್ಲಿ ಎಸ್‌ಐಆರ್ ನಡೆಸಬೇಕು ಎಂದು ನಾವು ನಿರ್ದೇಶನ ನೀಡಿಲ್ಲ. ಆದರೆ ಈ ಪ್ರಕ್ರಿಯೆ ಬಗ್ಗೆ ಜನರಲ್ಲಿ ಆತಂಕ ಮತ್ತು ಗೊಂದಲ ಇರುವುದಂತೂ ನಿಜ” ಎಂದರು.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ 12 ಪ್ರಶ್ನೆಗಳನ್ನು ಕೇಳಿದ್ದರೂ ಇದುವರೆಗೆ ಯಾವುದೇ ಉತ್ತರ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, “ಜನರಲ್ಲಿ ಅನುಮಾನ ಮತ್ತು ಆತಂಕ ಮೂಡಿದರೆ ಅದಕ್ಕೆ ಉತ್ತರಿಸಬೇಕಾದವರು ಚುನಾವಣಾ ಆಯೋಗವೇ. ನಿಯಮ ರೂಪಿಸುವುದು ರಾಜ್ಯ ಸರ್ಕಾರವಲ್ಲ” ಎಂದು ಹೇಳಿದರು.

ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಆಡಳಿತಾತ್ಮಕವಾಗಿ ರಾಜ್ಯ ಸರ್ಕಾರದ ಅಧೀನದಲ್ಲಿದ್ದರೂ, ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ನಿರ್ದೇಶನಗಳನ್ನು ನೀಡುವುದು ಚುನಾವಣಾ ಆಯೋಗವೇ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು. “ಎಸ್‌ಐಆರ್ ಸರಿಯಾಗಿ ನಡೆಯುತ್ತಿಲ್ಲವೆಂದರೆ ಕ್ರಮ ಕೈಗೊಳ್ಳಬೇಕಾದ ಹೊಣೆಗಾರಿಕೆಯೂ ಆಯೋಗದ್ದೇ” ಎಂದರು.

ಬಿಎಲ್‌ಒಗಳ ಫೋಟೋ ಬಳಕೆಯ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, “ಎಲ್ಲಾ ರಾಜಕೀಯ ಪಕ್ಷಗಳ ಬಿಎಲ್‌ಒಗಳು ಮತದಾರರ ನೋಂದಣಿಗಾಗಿ ಕೆಲಸ ಮಾಡುತ್ತಿದ್ದಾರೆ. ಫೋಟೋ ಬಳಕೆಗೆ ಸಂಬಂಧಿಸಿದಂತೆ ಕೆಲವು ಮಾನದಂಡಗಳಿವೆ. ಅವುಗಳನ್ನು ಪಾಲಿಸಬೇಕು” ಎಂದು ಹೇಳಿದರು.

ಎಸ್‌ಐಆರ್ ಪ್ರಕ್ರಿಯೆ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಲ್ಲ ಎಂದು ಸ್ಪಷ್ಟಪಡಿಸಿದ ಅವರು, “ಈಗ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದ ಜನರಲ್ಲಿ ಆತಂಕ ಹೆಚ್ಚಾಗಿದೆ. ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಪಟ್ಟಿ ಇದ್ದರೆ ಮಾತ್ರ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳು ಸಿಗುತ್ತವೆ ಎಂಬ ಗೊಂದಲವೂ ಸೃಷ್ಟಿಯಾಗಿದೆ. ಈ ರೀತಿಯ ಅನುಮಾನಗಳನ್ನು ನಿವಾರಿಸುವ ಹೊಣೆಗಾರಿಕೆ ಚುನಾವಣಾ ಆಯೋಗದ್ದಾಗಿದೆ” ಎಂದು ಹೇಳಿದರು.

ಚುನಾವಣಾ ಆಯೋಗದೊಂದಿಗೆ ಚರ್ಚಿಸಲು ಸಮಯ ಕೋರಿದ್ದರೂ ಅವಕಾಶ ಸಿಗುತ್ತಿಲ್ಲ ಎಂದು ಆರೋಪಿಸಿದ ಪ್ರಿಯಾಂಕ್ ಖರ್ಗೆ, ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲ ಗೊಂದಲಗಳಿಗೆ ಆಯೋಗವೇ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

‘ನೀರಿಲ್ಲ, ಬೆಳೆ ಬೆಳೆಯಬೇಡಿ ಅಂದರೆ ರೈತರು ಬದುಕೋದು ಹೇಗೆ?’ ಸರ್ಕಾರಕ್ಕೆ ಆರ್. ಅಶೋಕ್ ಪ್ರಶ್ನೆ

0

ಮಂಡ್ಯ: ರಾಜ್ಯದಲ್ಲಿ ಮಳೆ ಕೊರತೆಯಿಂದ ತೀವ್ರ ನೀರಿನ ಬಿಕ್ಕಟ್ಟು ಎದುರಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಕೆಆರ್‌ಎಸ್ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರೈತರ ಸಂಕಷ್ಟದ ಬಗ್ಗೆ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ 80 ಅಡಿಗೆ ಇಳಿದಿದ್ದು, ಸದ್ಯ ಕೇವಲ 6 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಿಜೆಪಿ ನಿಯೋಗ, ಜಲಾಶಯದ ಪ್ರಸ್ತುತ ಸ್ಥಿತಿಗತಿ ಕುರಿತು ಮಾಹಿತಿ ಪಡೆದುಕೊಂಡಿತು.

ಬಳಿಕ ಮಾತನಾಡಿದ ಆರ್. ಅಶೋಕ್, “ರಾಜ್ಯದ ಎಲ್ಲಾ ಜಲಾಶಯಗಳಲ್ಲೂ ನೀರಿನ ಮಟ್ಟ ಕುಸಿದಿದೆ. ಕುಡಿಯುವ ನೀರಿಗೇ ಸಂಕಷ್ಟ ಎದುರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ಬೆಳೆ ಬೆಳೆಯಬೇಡಿ ಎಂದು ಹೇಳುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಬೆಳೆ ಬೆಳೆಯಲು ಸಾಧ್ಯವಾಗದ ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ಘೋಷಿಸಬೇಕು” ಎಂದು ಒತ್ತಾಯಿಸಿದರು.

ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸುತ್ತಿಲ್ಲ. ಮಳೆ ಕೊರತೆಯಂತಹ ಗಂಭೀರ ಪರಿಸ್ಥಿತಿಯಲ್ಲಿ ಸರ್ವಪಕ್ಷ ಸಭೆ ಕರೆಯದೆ, ಸರ್ಕಾರ ಬೇರೆ ವಿಚಾರಗಳಲ್ಲಿ ತೊಡಗಿದೆ ಎಂದು ಆರೋಪಿಸಿದರು. ಕೃಷಿ ಸಚಿವರ ನೇಮಕವೂ ಆಗಿಲ್ಲ, ಸಂಪುಟ ಪೂರ್ಣಗೊಂಡಿಲ್ಲ ಎಂದು ಸರ್ಕಾರದ ಆಡಳಿತ ವೈಫಲ್ಯವನ್ನು ಆರ್. ಅಶೋಕ್ ಕಟುವಾಗಿ ಟೀಕಿಸಿದರು.

‘ರೋಲೆಕ್ಸ್’ನಿಂದ ಕೋಮಲ್‌ಗೆ ಬರ್ತ್‌ಡೇ ಗಿಫ್ಟ್! ಹೊಸ ಗ್ಲಿಂಪ್ಸ್, ಪೋಸ್ಟರ್ ರಿಲೀಸ್

ಬೆಂಗಳೂರು: ನಟ ಕೋಮಲ್ ಕುಮಾರ್ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವಂತೆ ‘ರೋಲೆಕ್ಸ್’ ಚಿತ್ರದ ತಂಡ ಹೊಸ ಗ್ಲಿಂಪ್ಸ್ ಹಾಗೂ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದೆ.

ಅಂಬಟಿ ಮಧು ಮೋಹನ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಶ್ರೀನಿವಾಸ್ ಮಂಡ್ಯ ನಿರ್ದೇಶಿಸುತ್ತಿದ್ದು, ಪೋಸ್ಟರ್‌ನಲ್ಲಿ ಕೋಮಲ್ ಹೊಸ ಸ್ಟೈಲಿಷ್ ಲುಕ್‌ನಲ್ಲಿ ಮಿಂಚಿದ್ದಾರೆ. ಈ ಮೂಲಕ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸಿರುವ ಚಿತ್ರತಂಡ, ಕೋಮಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನೂ ತಿಳಿಸಿದೆ.

ಸಂಪೂರ್ಣ ಕೌಟುಂಬಿಕ ಕಾಮಿಡಿ ಕಥಾಹಂದರ ಹೊಂದಿರುವ ‘ರೋಲೆಕ್ಸ್’ ಚಿತ್ರದಲ್ಲಿ ಕೋಮಲ್ ಅವರ ವೃತ್ತಿಜೀವನದಲ್ಲೇ ವಿಭಿನ್ನ ಪಾತ್ರ ಮತ್ತು ವಿಶೇಷ ಗೆಟಪ್ ಇರಲಿದೆ ಎಂದು ಚಿತ್ರತಂಡ ತಿಳಿಸಿದೆ.

ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದು, ರಾಕೇಶ್ ತಿಲಕ್ ಕ್ಯಾಮೆರಾ ಹಿಡಿದಿದ್ದಾರೆ. ಅರವಿಂದ್ ರಾಜ್ ಸಂಕಲನ ಮಾಡಿದ್ದು, ಮುರಳಿಕೃಷ್ಣ ಕಾರ್ಯಕಾರಿ ನಿರ್ಮಾಪಕರಾಗಿ ಹಾಗೂ ರಾಜೇಶ್ ವರ್ಮ ಕ್ರಿಯೇಟಿವ್ ಹೆಡ್ ಆಗಿ ಚಿತ್ರಕ್ಕೆ ಕೈಜೋಡಿಸಿದ್ದಾರೆ.

ಸನ್ನಡತೆ ಆಧಾರದ ಮೇಲೆ ರಾಜ್ಯದ ವಿವಿಧ ಜೈಲುಗಳಿಂದ 24 ಕೈದಿಗಳ ಬಿಡುಗಡೆ

ಬೆಂಗಳೂರು: ಸನ್ನಡತೆ ಆಧಾರದ ಮೇಲೆ ಪರಪ್ಪನ ಅಗ್ರಹಾರ ಸೇರಿದಂತೆ ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದ 24 ಜೀವಾವಧಿ ಕೈದಿಗಳನ್ನು ಅವಧಿಪೂರ್ವ ಬಿಡುಗಡೆ ಮಾಡಲಾಗಿದೆ. ರಾಜ್ಯಪಾಲರ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರುದಲ್ಲಿ ನಡೆದ ಬಿಡುಗಡೆ ಕಾರ್ಯಕ್ರಮದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಭಾಗವಹಿಸಿ, ಬಿಡುಗಡೆಯಾದ ಕೈದಿಗಳಿಗೆ ಹೊಸ ಜೀವನ ಆರಂಭಿಸುವಂತೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಎಡಿಜಿಪಿ ಅಲೋಕ್ ಕುಮಾರ್, ಜೈಲು ಮುಖ್ಯ ಅಧೀಕ್ಷಕ ಅಂಶು ಕುಮಾರ್ ಸೇರಿದಂತೆ ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುವ ಅವಧಿಯಲ್ಲಿ ಉತ್ತಮ ನಡವಳಿಕೆ, ಶಿಸ್ತು ಹಾಗೂ ಸನ್ನಡತೆ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಈ 24 ಜೀವಾವಧಿ ಕೈದಿಗಳಿಗೆ ಅವಧಿಪೂರ್ವ ಬಿಡುಗಡೆ ಸೌಲಭ್ಯ ಕಲ್ಪಿಸಲಾಗಿದೆ. ರಾಜ್ಯಪಾಲರ ಅನುಮೋದನೆಯ ಬಳಿಕ ಅವರನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.

ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿದ್ದ ಕೈದಿಗಳು, ಕಾರಾಗೃಹದಲ್ಲಿ ಮನಃಪರಿವರ್ತನೆ ಹೊಂದಿ ಉತ್ತಮ ನಡವಳಿಕೆ ಪ್ರದರ್ಶಿಸಿರುವುದನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರಾಗೃಹ ಶಿಕ್ಷೆಯ ಉದ್ದೇಶ ಕೇವಲ ದಂಡನೆ ಮಾತ್ರವಲ್ಲ, ಕೈದಿಗಳಲ್ಲಿ ಸುಧಾರಣೆ ತಂದು ಅವರನ್ನು ಸಮಾಜದ ಮುಖ್ಯವಾಹಿನಿಗೆ ಮರಳಿಸುವುದೂ ಆಗಿದೆ. ಇದೇ ಉದ್ದೇಶದ ಭಾಗವಾಗಿ ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕಾರಾಗೃಹ ಇಲಾಖೆ ತಿಳಿಸಿದೆ.

ರಾಜಧಾನಿ ಬೆಂಗಳೂರಿನಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್ʼಗೆ ಯತ್ನ: ಐವರು ಅರೆಸ್ಟ್

ಬೆಂಗಳೂರು: ನಗರದ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಾರುತಿನಗರದಲ್ಲಿ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಡಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬಂಧಿತರಲ್ಲಿ ಸೋಮಶೇಖರ್ ಹಾಗೂ ಅಂಬರೀಶ್ ಸೇರಿದಂತೆ ಐವರು ಇದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಸಂತ್ರಸ್ತೆಗೆ ಆರೋಪಿಗಳ ಪೈಕಿ ಇಬ್ಬರ ಪರಿಚಯವಿತ್ತು ಎಂದು ತಿಳಿದುಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಸೆಕ್ಯೂರಿಟಿ ಸೇವೆ ಒದಗಿಸುವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸೋಮಶೇಖರ್, ಕಲಬುರಗಿ ಭಾಗದಿಂದ ಸ್ನೇಹಿತರು ಬಂದಿದ್ದಾರೆ, ಅವರನ್ನು ಭೇಟಿ ಮಾಡೋಣ ಎಂದು ಹೇಳಿ ದೇವನಹಳ್ಳಿ ಭಾಗದಲ್ಲಿ ವಾಸವಿದ್ದ ಯುವತಿಯನ್ನು ಮಾರುತಿನಗರಕ್ಕೆ ಕರೆಸಿಕೊಂಡಿದ್ದಾನೆ.

ಸಂಜೆ ಸುಮಾರು 5 ಗಂಟೆ ವೇಳೆಗೆ ಸೋಮಶೇಖರ್ ಯುವತಿಗೆ ಕರೆ ಮಾಡಿದ್ದು, ಬಳಿಕ ಸಂಜೆ 7 ಗಂಟೆ ಸುಮಾರಿಗೆ ಯುವತಿ ರ್ಯಾಪಿಡೋ ಮೂಲಕ ಮಾರುತಿನಗರಕ್ಕೆ ಆಗಮಿಸಿದ್ದಳು. ಬಳಿಕ ಆರೋಪಿಗಳು ಹಾಗೂ ಯುವತಿ ಒಟ್ಟಿಗೆ ಪಾರ್ಟಿ ನಡೆಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಅಂಬರೀಶ್ ಎಂಬಾತ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಪರಿಸ್ಥಿತಿಯನ್ನು ಅರಿತ ಯುವತಿ ಆರೋಪಿಗಳಿಂದ ತಪ್ಪಿಸಿಕೊಂಡು ತಕ್ಷಣವೇ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಮಾಹಿತಿ ಪಡೆದ ತಲಘಟ್ಟಪುರ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಐವರು ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಘಟನೆಯ ಎಲ್ಲಾ ಆಯಾಮಗಳ ಕುರಿತು ತನಿಖೆ ನಡೆಸಲಾಗುತ್ತಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರೊಂದಿಗೆ ಹೆಚ್‌.ಡಿ. ಕುಮಾರಸ್ವಾಮಿ ಮಹತ್ವದ ಸಭೆ

ಬೆಂಗಳೂರು: ದೇಶಿಯವಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನೋದ್ಯಮಕ್ಕೆ ಉತ್ತೇಜನ ನೀಡುವ ಹಾಗೂ ಅದಕ್ಕೆ ಅತ್ಯಗತ್ಯವಾಗಿ ಬೇಕಿರುವ ಪೂರಕ ವ್ಯವಸ್ಥೆಯ ಭಾಗವಾಗಿರುವ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಉದ್ಯಮದ ಪ್ರಮುಖರ ಜತೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ವಿಸ್ತೃತ ಸಮಾಲೋಚನೆ ನಡೆಸಲಾಯಿತು.

ಎಲೆಕ್ಟ್ರಿಕ್ ವಾಹನಗಳ ದೇಶಿಯ ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ದೇಶದಲ್ಲಿ ದೃಢವಾದ, ನಾವೀನ್ಯತೆಯಿಂದ ಕೂಡಿದ ಜಾಗತಿಕವಾಗಿ ಸ್ಪರ್ಧಾತ್ಮಕವಾದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಪೂರಕ ವ್ಯವಸ್ಥೆಯನ್ನು ನಿರ್ಮಿಸುವ ಕುರಿತು ಸಚಿವರು ಮಹತ್ವಪೂರ್ಣವಾಗಿ ಚರ್ಚಿಸಿದರು.

ಸಭೆಯಲ್ಲಿ ಭಾಗಿಯಾಗಿದ್ದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರು, ದೇಶೀಯ ಚಾರ್ಜಿಂಗ್ ಕೇಂದ್ರಗಳ ನಿರ್ಮಾತೃಗಳು ಮತ್ತು ತಂತ್ರಜ್ಞಾನ ಅಭಿವೃದ್ಧಿಪಡಿಸುವ ಪಾಲುದಾರರು ತಮ್ಮ ಕಾರ್ಯಚಟುವಟಿಕೆಗಳು ಹಾಗೂ ಕೇಂದ್ರದಿಂದ ಆಗಬೇಕಿರುವ ಕೆಲಸಗಳ ಬಗ್ಗೆ ಸಚಿವರ ಗಮನ ಸೆಳೆದರು.

ಸ್ಥಳೀಯ ತಂತ್ರಜ್ಞಾನ, ಉತ್ಪನ್ನ ಅಭಿವೃದ್ಧಿ ಮತ್ತು ದೇಶೀಯ ಉತ್ಪಾದನಾ ಸಾಮರ್ಥ್ಯಗಳ ಮೇಲಿನ ತಮ್ಮ ದೃಢವಾದ ನಿಲುವನ್ನು ಒತ್ತಿ ಹೇಳಿದರು, ಜತೆಗೆ ಭಾರತವನ್ನು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಪ್ರಮುಖ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಭಾರತವನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಂದಿರುವ ದೃಷ್ಟಿಕೋನದ ಬಗ್ಗೆ ಸಚಿವರು ಉದ್ಯಮದ ಪ್ರಮುಖರಿಗೆ ತಿಳಿಸಿದರು.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉದ್ಯಮ ಬೆಳೆಯುತ್ತಿರುವ ರೀತಿ, ಆ ಕ್ಷೇತ್ರದ ವಿಕಾಸ, ಅದರ ಆದ್ಯತೆ ಮತ್ತು ಅಗತ್ಯಗಳ ಕುರಿತು ಸಚಿವರು ಆಳವಾದ ಚರ್ಚೆ ನಡೆಸಿದರಲ್ಲದೆ, ದೇಶೀಯವಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಜಾಗತಿಕ ಮಾರುಕಟ್ಟೆಗೆ ಅನುಗುಣವಾಗಿ ಉತ್ಪಾದಿಸುವುದು ಇವತ್ತಿನ ಅಗತ್ಯವಾಗಿದೆ. ಆರಂಭಿಕ ಮಟ್ಟದಲ್ಲಿಯೇ ಇಂಗಾಲ ಹೊರಸೂವಿಕೆಯನ್ನು ಶೂನ್ಯಕ್ಕೆ ತರಬೇಕು ಎಂದು ಸಚಿವರು ಹೇಳಿದರು.

ಉದ್ಯಮದ ಪ್ರಮುಖರು ಪಿಎಂ ಇ ಡ್ರೈವ್ ಯೋಜನೆ (PM E-DRIVE) ಕುರಿತು ತಮ್ಮ ಅಭಿಪ್ರಾಯಗಳನ್ನು ಸಚಿವರೊಂದಿಗೆ ಹಂಚಿಕೊಂಡರಲ್ಲದೆ ಅದರ ವ್ಯಾಪ್ತಿಯನ್ನು ಮತ್ತಷ್ಟು ಹಿಗ್ಗಿಸಬೇಕು. ಜತೆಗೆ ಉದ್ಯಮದ ಬೆಳೆಯುತ್ತಿರುವ ಅಗತ್ಯತೆಗಳಿಗೆ ಅನುಗುಣವಾಗಿ PLI ಆಟೋ ಯೋಜನೆಯನ್ನು ಪರಿಷ್ಕರಿಸುವ ಅಗತ್ಯತೆಯ ಬಗ್ಗೆಯೂ ಚರ್ಚಿಸಿದರು.

ಸ್ಥಳೀಯವಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆಯನ್ನು ವೇಗಗೊಳಿಸಲು, ದೇಶೀಯ ಮೌಲ್ಯವರ್ಧನೆಯನ್ನು ಬಲಪಡಿಸಲು ಮತ್ತು ಭಾರತದ ಎಲೆಕ್ಟ್ರಿಕ್ ವಾಹನ ರಫ್ತು ಸಾಮರ್ಥ್ಯವನ್ನು ದೊಡ್ಡ ಪ್ರಮಾಣದಲ್ಲಿ ವೃದ್ಧಿಸುವ ಅವಕಾಶಗಳ ಕುರಿತು ಉದ್ಯಮದ ನಿಯೋಗವು ಸಚಿವರಿಗೆ ವಿವರಿಸಿತು.

ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತ 2047 ದೃಷ್ಟಿಕೋನಕ್ಕೆ ಕೊಡುಗೆ ನೀಡುತ್ತಾ, ಭಾರತೀಯ ತಯಾರಕರು ಜಾಗತಿಕವಾಗಿ ಆವಿಷ್ಕಾರ, ನಾವೀನ್ಯತೆ ಮತ್ತು ಸ್ಪರ್ಧೆಗೆ ಅನುವು ಮಾಡಿಕೊಡುವ ಪೂರಕ ವ್ಯವಸ್ಥೆಯನ್ನು ನಿರ್ಮಿಸಲು ನರೇಂದ್ರ ಮೋದಿ ಅವರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.

ನಿಯೋಗದಲ್ಲಿ ಎಥೆರ್ ಎನರ್ಜಿಯ ಸಹ ಸಂಸ್ಥಾಪಕ ಮತ್ತು ಸಿಇಒ ತರುಣ್ ಮೆಹ್ತಾ, ಮ್ಯಾಟರ್‌ನ ಸ್ಥಾಪಕ ಮತ್ತು ಸಿಇಒ ಮೋಹಲ್ ಲಾಲ್‌ಭಾಯ್, ರಿವರ್‌ನ ಸಹ ಸಂಸ್ಥಾಪಕ ಮತ್ತು ಸಿಇಒ ಅರವಿಂದ್ ಮಣಿ, ಯೂಲರ್ ಮೋಟಾರ್ಸ್‌ನ ಸಂಸ್ಥಾಪಕ ಮತ್ತು ಸಿಇಒ ಸೌರವ್ ಕುಮಾರ್, ರಾಪ್ಟೀ ಎಚ್‌ವಿಯ ಸಹ ಸಂಸ್ಥಾಪಕ ಮತ್ತು ಸಿಇಒ ದಿನೇಶ್ ಅರ್ಜುನ್ ಅವರು ಸಭೆಯಲ್ಲಿ ಭಾಗಿಯಾಗಿದ್ದರು.

ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ ಮೂವರು ನೇಣುಬಿಗಿದುಕೊಂಡು ಆತ್ಮಹತ್ಯೆ!

ಕೊಪ್ಪಳ: ಜಿಲ್ಲೆಯ ಗಂಗಾವತಿ ನಗರದ ಪ್ರಶಾಂತನಗರದಲ್ಲಿ ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ. ಘಟನೆಯಲ್ಲಿ ಪತಿ ಪ್ರಕಾಶ್ (54), ಪತ್ನಿ ಪ್ರಭಾ (46) ಹಾಗೂ ಪುತ್ರ ಶಶಾಂಕ್ (21) ಮೃತಪಟ್ಟಿದ್ದಾರೆ.

ಮೃತ ಪ್ರಕಾಶ್ ರಾಯ್ಕರ್ ಗಂಗಾವತಿಯಲ್ಲಿ ಜ್ಯುವೆಲರಿ ಅಂಗಡಿ ನಡೆಸುತ್ತಿದ್ದರು. ಸಾಲದ ಒತ್ತಡದಿಂದಾಗಿ ಕುಟುಂಬ ತೀವ್ರ ಮಾನಸಿಕ ಸಂಕಷ್ಟಕ್ಕೆ ಒಳಗಾಗಿದ್ದು, ಇದೇ ಕಾರಣಕ್ಕೆ ಈ ದುರ್ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಕುಟುಂಬದ ಮೂವರು ಮನೆಯೊಳಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಾಹಿತಿ ತಿಳಿದ ಕೂಡಲೇ ಗಂಗಾವತಿ ಟೌನ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ. ಸಾಲಬಾಧೆಯೇ ಈ ದುರ್ಘಟನೆಗೆ ಪ್ರಮುಖ ಕಾರಣವೇ ಅಥವಾ ಬೇರೆ ಯಾವುದೇ ಕಾರಣಗಳಿವೆಯೇ ಎಂಬ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ.

ಸೋನಂ, ಸಿಯಾ ಬಳಿಕ ಇದೀಗ ರೂಬಿ ಪ್ರಕರಣ: ಪತಿಯನ್ನು ಕೊಂದು ಬಾತ್ ರೂಮ್ʼನಲ್ಲೇ ಶವ ಹೂತಿಟ್ಟ ಪತ್ನಿ

ಲಕ್ನೋ: ಉತ್ತರ ಪ್ರದೇಶದ ಆಗ್ರಾದಲ್ಲಿ ಬೆಚ್ಚಿಬೀಳಿಸುವ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತ್ನಿಯೊಬ್ಬಳು ತನ್ನ ಪತಿಯನ್ನು ಕೊಲೆ ಮಾಡಿ, ಶವವನ್ನು ಮನೆಯ ಬಾತ್‌ರೂಂ ನೆಲದಡಿ ಹೂತು, ಬಳಿಕ ಪತಿ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿ ನಾಟಕವಾಡಿದ್ದ ಘಟನೆ ತನಿಖೆಯಲ್ಲಿ ಬಯಲಾಗಿದೆ.

ಆರೋಪಿ ರೂಬಿ ಶರ್ಮಾ ತನ್ನ ಪತಿ ಸುರೇಂದ್ರ ಶರ್ಮಾ ಸುಮಾರು ಒಂದೂವರೆ ತಿಂಗಳಿನಿಂದ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದರು. ಆದರೆ, 45 ದಿನಗಳ ಬಳಿಕ ನಡೆದ ವಿಚಾರಣೆಯಲ್ಲಿ ರೂಬಿ ಸತ್ಯ ಒಪ್ಪಿಕೊಂಡಿದ್ದು, ಆಕೆಯನ್ನು ಬಂಧಿಸಲಾಗಿದೆ.

ತನಿಖೆಯ ಅವಧಿಯಲ್ಲಿ ರೂಬಿ, ಪೊಲೀಸರೊಂದಿಗೆ ಪತಿಗಾಗಿ ಹುಡುಕಾಟ ನಡೆಸುವಂತೆ ನಟಿಸಿದ್ದಳು. ನೆರೆಹೊರೆಯವರ ಮುಂದೆ ಕಣ್ಣೀರು ಹಾಕುತ್ತಾ, ಪತಿ ಕಾಣೆಯಾಗಿರುವ ನೋವಿನಲ್ಲಿ ಇದ್ದಂತೆ ವರ್ತಿಸಿ ಎಲ್ಲರ ಸಹಾನುಭೂತಿ ಪಡೆಯಲು ಪ್ರಯತ್ನಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ, ಸುರೇಂದ್ರ ಶರ್ಮಾ ಅವರ ಸಹೋದರರಿಗೆ ರೂಬಿ ನೀಡುತ್ತಿದ್ದ ಮಾಹಿತಿಯಲ್ಲಿ ಹಲವು ವ್ಯತ್ಯಾಸಗಳು ಕಂಡುಬಂದಿದ್ದವು. ಪತಿ ನಾಪತ್ತೆಯಾದ ದಿನದ ಕುರಿತು ಆಕೆ ಪದೇಪದೆ ಬದಲಾಗುವ ಹೇಳಿಕೆ ನೀಡುತ್ತಿದ್ದ ಕಾರಣ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪೊಲೀಸರು ಮನೆಯಲ್ಲೇ ಮರುಶೋಧ ನಡೆಸಿದಾಗ, ಬಾತ್‌ರೂಂನಲ್ಲಿ ಹೊಸದಾಗಿ ಅಳವಡಿಸಲಾಗಿದ್ದ ಟೈಲ್ಸ್ ಅನುಮಾನಕ್ಕೆ ಕಾರಣವಾಯಿತು. ನೆಲವನ್ನು ಒಡೆದು ಪರಿಶೀಲಿಸಿದಾಗ ಕಾಂಕ್ರೀಟ್ ಅಡಿಯಲ್ಲಿ ಹೂತಿದ್ದ ಅಸ್ಥಿಪಂಜರ ಪತ್ತೆಯಾಯಿತು. ಬಳಿಕ ಶವವನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸಾವಿನ ನಿಖರ ಕಾರಣ ವರದಿ ಬಂದ ಬಳಿಕವೇ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಮೃತ ಸುರೇಂದ್ರ ಶರ್ಮಾ ಕಳೆದ ಕೆಲವು ವರ್ಷಗಳಿಂದ ನಿರುದ್ಯೋಗಿಯಾಗಿದ್ದು, ಮದ್ಯದ ಚಟಕ್ಕೆ ಬಿದ್ದಿದ್ದರು. ಮದ್ಯ ಖರೀದಿಸಲು ಪತ್ನಿಯಿಂದ ಆಗಾಗ ಹಣ ಕೇಳುತ್ತಿದ್ದರು. ಹಣ ನೀಡಲು ನಿರಾಕರಿಸಿದರೆ ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದರು ಎನ್ನಲಾಗಿದೆ. ಈ ಕಾರಣದಿಂದ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸುಮಾರು 16 ವರ್ಷಗಳ ಹಿಂದೆ ವಿವಾಹವಾಗಿದ್ದ ಸುರೇಂದ್ರ ಮತ್ತು ರೂಬಿ ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ. ಕುಟುಂಬದ ಪ್ರಮುಖ ಆದಾಯ ಮೂಲ ಸುರೇಂದ್ರ ಅವರ ತಂದೆಯ ಪಿಂಚಣಿಯಾಗಿದ್ದು, ಅದನ್ನು ಸುರೇಂದ್ರ ಹಾಗೂ ಅವರ ಸಹೋದರ ಅನಿಲ್ ಶರ್ಮಾ ಹಂಚಿಕೊಂಡು ಬಳಸುತ್ತಿದ್ದರು.

ಪೊಲೀಸರ ಶಂಕೆಯಂತೆ ಮೇ 18ರಂದು ಸುರೇಂದ್ರ ಶರ್ಮಾ ಅವರನ್ನು ಕೊಲೆ ಮಾಡಲಾಗಿದೆ. ತನಿಖೆಯಲ್ಲಿ ಮತ್ತೊಂದು ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದ್ದು, ರೂಬಿ ಮೊದಲು ಪಾಯಸದಲ್ಲಿ ಹೆಚ್ಚಿನ ಪ್ರಮಾಣದ ನಿದ್ರೆ ಮಾತ್ರೆಗಳನ್ನು ಬೆರೆಸಿ ಪತಿಗೆ ನೀಡಿದ್ದಾಳೆ ಎನ್ನಲಾಗಿದೆ. ಪ್ರಜ್ಞಾಹೀನರಾದ ಬಳಿಕ ಅವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ನಿಖರ ಸಾವಿನ ಕಾರಣ ಮರಣೋತ್ತರ ಪರೀಕ್ಷೆಯ ವರದಿಯಿಂದ ತಿಳಿಯಲಿದೆ.

ಮದ್ಯ ಸೇವಿಸಿದ ಬಳಿಕ ಸುರೇಂದ್ರ ಗಂಟೆಗಟ್ಟಲೆ ನಿದ್ರಿಸುವುದು ಕುಟುಂಬಕ್ಕೆ ಸಾಮಾನ್ಯವಾಗಿದ್ದ ಕಾರಣ, ಅವರು ಚಲನೆಯಿಲ್ಲದೆ ಮಲಗಿದ್ದರೂ ಇಬ್ಬರು ಪುತ್ರಿಯರಿಗೆ ಯಾವುದೇ ಅನುಮಾನ ಬಂದಿರಲಿಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಕೊಲೆ ನಡೆದ ಮರುದಿನ ರೂಬಿ ತನ್ನ ಇಬ್ಬರು ಪುತ್ರಿಯರನ್ನು ಸುರೇಂದ್ರ ಅವರ ಸಹೋದರ ಅನಿಲ್ ಶರ್ಮಾ ಅವರ ಮನೆಗೆ ಬಿಟ್ಟು ತಾನೊಬ್ಬಳೇ ಮನೆಗೆ ಹಿಂದಿರುಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಮಹತ್ವದ ತಿರುವು ನೀಡಿದ್ದು ಬ್ಯಾಂಕ್ ಖಾತೆಯ ಎಟಿಎಂ ವಹಿವಾಟು. ಪಿಂಚಣಿ ಹಣ ಜಮೆಯಾಗುತ್ತಿದ್ದ ಖಾತೆಯ ಎಟಿಎಂ ಕಾರ್ಡ್ ಸುರೇಂದ್ರ ಅವರ ಬಳಿಯೇ ಇತ್ತು. ಅವರು ನಾಪತ್ತೆಯಾದ ಬಳಿಕವೂ ಖಾತೆಯಿಂದ ಹಣ ಡ್ರಾ ಆಗುತ್ತಿರುವುದನ್ನು ಸಹೋದರ ಅನಿಲ್ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಿಂದ ತನಿಖೆಯ ದಿಕ್ಕೇ ಬದಲಾಗಿದ್ದು, ಕೊಲೆ ರಹಸ್ಯ ಬಯಲಾಗಿದೆ.

ಪ್ರಸ್ತುತ ರೂಬಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದಾರೆ. ಕೊಲೆಯ ಹಿಂದೆ ಇನ್ನಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಅನುಮಾನವೂ ವ್ಯಕ್ತವಾಗಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ.

ಉಪ ಪೊಲೀಸ್ ಆಯುಕ್ತ ಸಯ್ಯದ್ ಅಲಿ ಅಬ್ಬಾಸ್ ಮಾತನಾಡಿ, “ಒಬ್ಬ ಮಹಿಳೆ ಮಾತ್ರವೇ ವ್ಯಕ್ತಿಯನ್ನು ಕೊಲೆ ಮಾಡಿ, ಮನೆಯೊಳಗೆ ಗುಂಡಿ ತೋಡಿ ಶವವನ್ನು ಹೂಳುವುದು ಸುಲಭದ ಕೆಲಸವಲ್ಲ. ಹೀಗಾಗಿ ಈ ಕೃತ್ಯದಲ್ಲಿ ಮತ್ತಾರಾದರೂ ಭಾಗಿಯಾಗಿರುವ ಸಾಧ್ಯತೆಯನ್ನು ಗಂಭೀರವಾಗಿ ಪರಿಶೀಲಿಸುತ್ತಿದ್ದೇವೆ. ರೂಬಿ ಹೊರತುಪಡಿಸಿ ಇತರರ ಪಾತ್ರವಿದೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.