Home Blog Page 46

ಪೌರಕಾರ್ಮಿಕರಿಗೆ ಅವಮಾನ: ಕೃಷ್ಣ ಬೈರೇಗೌಡ ಕ್ಷಮೆ ಕೇಳಲಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕೆಲಸ ಖಾಯಂ ಸೇರಿದಂತೆ ತಮ್ಮ ಹಕ್ಕುಗಳಿಗಾಗಿ ಮನವಿ ಸಲ್ಲಿಸಲು ಬಂದ ಪೌರಕಾರ್ಮಿಕರನ್ನು ಸಚಿವ ಕೃಷ್ಣ ಬೈರೇಗೌಡ ಅವರು ನಡೆಸಿಕೊಂಡ ರೀತಿಯನ್ನು ಖಂಡಿಸಿರುವ ಪತ್ರಕರ್ತರು, ಲೇಖಕರು, ನ್ಯಾಯವಾದಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು, ಪೌರಕಾರ್ಮಿಕ ಸಮುದಾಯದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪತ್ರದಲ್ಲಿ, ಸರ್ಕಾರಿ ಕೆಲಸದಲ್ಲಿ ಲೋಪಗಳಿದ್ದರೆ ಜವಾಬ್ದಾರಿಯುತ ಸಚಿವರು ಪ್ರಶ್ನಿಸುವುದು ಸಹಜ. ಆದರೆ ಪೌರಕಾರ್ಮಿಕರನ್ನೇ ಗುರಿಯಾಗಿಸಿ ಪ್ರಶ್ನಿಸುವ ಧೋರಣೆ ಪೂರ್ವಗ್ರಹಪೀಡಿತವಾಗಿದ್ದರೆ ಅದು ಅಕ್ಷಮ್ಯ ಎಂದು ಹೇಳಿದ್ದಾರೆ.

ಪೌರಕಾರ್ಮಿಕರ ಕೆಲಸದ ಪರಿಸ್ಥಿತಿ, ಅವರಿಗೆ ಅಗತ್ಯ ಸುರಕ್ಷತಾ ಪರಿಕರಗಳ ಲಭ್ಯತೆ ಹಾಗೂ ಆರೋಗ್ಯ ತಪಾಸಣೆ ಕುರಿತು ಸರ್ಕಾರ ಗಂಭೀರವಾಗಿ ಗಮನಹರಿಸಬೇಕು. ಕಸ ವಿಲೇವಾರಿ ಸೇರಿದಂತೆ ಅಪಾಯಕಾರಿ ಸ್ವಚ್ಛತಾ ಕಾರ್ಯ ನಿರ್ವಹಿಸುವ ಕಾರ್ಮಿಕರ ಸಮಸ್ಯೆಗಳನ್ನು ಅರಿಯದೆ ಅವರನ್ನೇ ಪ್ರಶ್ನಿಸುವುದು ಸರಿಯಲ್ಲ ಎಂದು ಪತ್ರದಲ್ಲಿ ಆಕ್ಷೇಪಿಸಲಾಗಿದೆ.

ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಶೋಷಣೆಯಿಂದ ನಲುಗಿರುವ ಪೌರಕಾರ್ಮಿಕರು ತಮ್ಮ ಅಹವಾಲು ಹೇಳಿಕೊಳ್ಳಲು ಬಂದ ಸಂದರ್ಭದಲ್ಲಿ ಸಚಿವರು ಬಳಸಿದ ಭಾಷೆ ಮತ್ತು ಪ್ರಶ್ನಿಸಿದ ರೀತಿ ಸಂವೇದನಾ ರಹಿತವಾಗಿದ್ದು, ನಿರ್ದಯವಾಗಿದೆ. ಅಧಿಕಾರದಲ್ಲಿರುವವರು ಯಾವುದೇ ಸಂದರ್ಭದಲ್ಲೂ ಮಾನವೀಯ ಸಂವೇದನೆ ಕಳೆದುಕೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ.

ಪೌರಕಾರ್ಮಿಕರನ್ನು ಅವಮಾನಿಸುವ ರೀತಿಯಲ್ಲಿ ನಡೆದುಕೊಂಡಿರುವ ಸಚಿವ ಕೃಷ್ಣ ಬೈರೇಗೌಡ ಅವರು ಕೂಡಲೇ ಪೌರಕಾರ್ಮಿಕ ಸಮುದಾಯದ ಕ್ಷಮೆ ಕೇಳಬೇಕು. ಸಂವೇದನೆ ಕಳೆದುಕೊಂಡಿದ್ದರೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ, ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ ಪತ್ರಕ್ಕೆ ರುದ್ರಪ್ಪ ಸಿ., ಎನ್. ರವಿಕುಮಾರ್, ಕೆ.ಪಿ. ಶ್ರೀಪಾಲ್, ವೈ.ಜಿ. ಅಶೋಕ್ ಕುಮಾರ್, ಕೆ.ಎಲ್. ಅಶೋಕ್, ರಶ್ಮಿ ಎಸ್., ಬಸವರಾಜ ಸೂಳಿಭಾವಿ (ಬಸೂ), ಮೀನಾಕ್ಷಿ ಬಾಳಿ, ಡಾ. ಎಚ್.ಎಸ್. ಅನುಪಮಾ, ಸನತಕುಮಾರ ಬೆಳಗಲಿ ಸೇರಿದಂತೆ ವಿವಿಧ ಕ್ಷೇತ್ರಗಳ ಹಲವರು ಸಹಿ ಹಾಕಿದ್ದಾರೆ.

ಅಧಿಕಾರ ಹಂಚಿಕೆಯಲ್ಲಿ ಪ್ರಾದೇಶಿಕ ಸಮತೋಲನ ಇರಲಿ: ಮಹ್ಮದಶಫಿ ನಾಗರಕಟ್ಟಿ

0

ವಿಜಯಸಾಕ್ಷಿ ಸುದ್ದಿ, ಗದಗ: ಉತ್ತರ ಕರ್ನಾಟಕದ ರಾಜಕೀಯ ಹಾಗೂ ಅಧಿಕಾರ ಹಂಚಿಕೆಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಿಸಿ, ಈ ಭಾಗದ ಮುಸ್ಲಿಂ ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ (ರಿ.) ಆಗ್ರಹಿಸಿದೆ.

ಹುಬ್ಬಳ್ಳಿಯಲ್ಲಿ ನಡೆದ ಮಹಾಸಭಾದ ಸಭೆಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಮಹ್ಮದಶಫಿ ನಾಗರಕಟ್ಟಿ, ಸಚಿವ ಸಂಪುಟದಲ್ಲಿ ದಕ್ಷಿಣ ಕರ್ನಾಟಕದ ಶಾಸಕರಿಗೆ ಹೆಚ್ಚಿನ ಅವಕಾಶ ದೊರೆತಿದ್ದು, ಉತ್ತರ ಕರ್ನಾಟಕದ ಶಾಸಕರಿಗೆ ಸೂಕ್ತ ಪ್ರಾತಿನಿಧ್ಯ ಸಿಗದಿರುವುದು ಈ ಭಾಗದ ಜನರಲ್ಲಿ ನಿರಾಸೆ ಮೂಡಿಸಿದೆ ಎಂದರು.

ಉತ್ತರ ಕರ್ನಾಟಕದ ಮುಸ್ಲಿಂ ಸಮುದಾಯವು ಕಾಂಗ್ರೆಸ್ ಪಕ್ಷದ ಕಷ್ಟದ ದಿನಗಳಲ್ಲೂ ನಿಷ್ಠೆಯಿಂದ ಬೆಂಬಲಿಸಿ, ಪಕ್ಷದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದೆ. ಚುನಾವಣಾ ಸಂದರ್ಭದಲ್ಲಿ ಸಮುದಾಯದ ಬೆಂಬಲವನ್ನು ಪಡೆಯುವ ಪಕ್ಷ, ಅಧಿಕಾರ ಮತ್ತು ಅವಕಾಶಗಳ ಹಂಚಿಕೆಯಲ್ಲೂ ಸಮುದಾಯದ ಕೊಡುಗೆಯನ್ನು ಪರಿಗಣಿಸಬೇಕು ಎಂದು ಮಹಾಸಭಾ ಒತ್ತಾಯಿಸಿದೆ.

ಕಿತ್ತೂರು ಕರ್ನಾಟಕ ಭಾಗದಲ್ಲಿ ಹಲವು ವರ್ಷಗಳಿಂದ ಮುಸ್ಲಿಂ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ದೊರೆಯದಿರುವುದು ಹಾಗೂ ರಾಜ್ಯಮಟ್ಟದ ನಿಗಮ-ಮಂಡಳಿಗಳಲ್ಲೂ ಸಮರ್ಪಕ ಪ್ರಾತಿನಿಧ್ಯ ಸಿಗದಿರುವುದು ಸಮುದಾಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಾರಿ ಅರ್ಹತೆ, ಸೇವೆ ಹಾಗೂ ಜನಪ್ರತಿನಿಧಿತ್ವದ ಆಧಾರದಲ್ಲಿ ಸಮರ್ಥ ಮುಸ್ಲಿಂ ನಾಯಕರಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಲಾಗಿದೆ.

ಮುಖ್ಯಮಂತ್ರಿ, ಎಐಸಿಸಿ ಅಧ್ಯಕ್ಷರು ಹಾಗೂ ಕೆಪಿಸಿಸಿ ಅಧ್ಯಕ್ಷರು ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಉತ್ತರ ಕರ್ನಾಟಕದ ಅರ್ಹ ಮುಸ್ಲಿಂ ನಾಯಕರಿಗೆ ವಿಧಾನ ಪರಿಷತ್ (ಎಂಎಲ್‌ಸಿ) ಸ್ಥಾನ ಹಾಗೂ ರಾಜ್ಯಮಟ್ಟದ ನಿಗಮ-ಮಂಡಳಿಗಳಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವ ಮೂಲಕ ನ್ಯಾಯ ಒದಗಿಸಬೇಕು ಎಂದು ಮಹಾಸಭಾ ಮನವಿ ಮಾಡಿದೆ.

ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಉತ್ತರ ಕರ್ನಾಟಕದ ಶಾಸಕರು ಹಾಗೂ ಜನಪ್ರತಿನಿಧಿಗಳು ಪಕ್ಷದ ವರಿಷ್ಠರ ಮುಂದೆ ಈ ಭಾಗದ ಮುಸ್ಲಿಂ ಸಮುದಾಯದ ರಾಜಕೀಯ ಪ್ರಾತಿನಿಧ್ಯದ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಬೇಕು ಎಂದು ಸಭೆಯಲ್ಲಿ ಕರೆ ನೀಡಲಾಯಿತು.

ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಆಬೀದ್ ಜೋಡಗೇರಿ, ರಾಜ್ಯ ಸಹ ಕಾರ್ಯದರ್ಶಿ ಎಸ್.ಎಂ. ರೋಣ, ಎಂ.ಡಿ. ರಫೀಕ್ ಜಮಾದಾರ್, ಇಸ್ಮಾಯಿಲ್ ಸಾಬ್ ಆಗಸನಕಟ್ಟಿ, ಎ.ಎಫ್. ರಶ್ಮಿ, ಅಬ್ದುಲ್ ಮುನಾಫ್ ಖಾಜಿ, ಅಸ್ಲಂ ನಾಲಬಂದ, ಮಜೀದ್ ಮನಿಕನಗರ ಸೇರಿದಂತೆ ಮಹಾಸಭಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಾವು ಯಾರ ಹಕ್ಕನ್ನೂ ಕಸಿದುಕೊಳ್ಳಲು ಬಯಸುವುದಿಲ್ಲ, ನಮ್ಮ ಪಾಲಿನ ನ್ಯಾಯವನ್ನು ಕೇಳುತ್ತಿದ್ದೇವೆ. ಅಧಿಕಾರ ಹಂಚಿಕೆಯಲ್ಲಿ ಪ್ರಾದೇಶಿಕ ಸಮತೋಲನ ಇರಬೇಕು. ಉತ್ತರ ಕರ್ನಾಟಕದ ಧ್ವನಿಗೂ ಅಧಿಕಾರದ ಬಾಗಿಲು ತೆರೆಯಬೇಕು.

— ಮಹ್ಮದಶಫಿ ನಾಗರಕಟ್ಟಿ, ರಾಜ್ಯಾಧ್ಯಕ್ಷ

ಬಾಲ ವಿನಾಯಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಬಾಲ ವಿನಾಯಕ ವಿದ್ಯಾನಿಕೇತನ ಶಾಲೆಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಮುಖ್ಯ ಅತಿಥಿ ಶಿಕ್ಷಕ ಅಬ್ದುಲ್ ರೆಹಮಾನ್ ನಮಾಜಿ ಮಾತನಾಡಿ, ವಿದ್ಯಾರ್ಥಿಗಳು ಪಾಲಕರು ಒದಗಿಸುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸತತ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ಜ್ಞಾನ ಸಂಪಾದಿಸಬೇಕು. ಗುರುಗಳು ವಿದ್ಯಾರ್ಥಿಗಳಿಂದ ಬಯಸುವ ಅತ್ಯುತ್ತಮ ಉಡುಗೊರೆ ಎಂದರೆ ಉತ್ತಮ ಫಲಿತಾಂಶದೊಂದಿಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದು ಎಂದರು.

ಶಾಲೆಯ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರ ಪಾತ್ರವನ್ನು ವಹಿಸಿಕೊಂಡು ಅರ್ಧ ದಿನದ ತರಗತಿಗಳನ್ನು ನಡೆಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ನೃತ್ಯ, ಶಿಕ್ಷಕರ ಕುರಿತ ಹಾಡು, ಕಿರು ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಜೀಯಾ ನಮಾಜಿ ಅತಿಥಿಗಳ ಪರಿಚಯ ಮಾಡಿದರು. ನವಿಶಾರದೆ ಗಣಾಚಾರಿ ಶಿಕ್ಷಕರ ದಿನಾಚರಣೆ ಕುರಿತು ಮಾತನಾಡಿದರು.

10ನೇ ತರಗತಿಯ ಯಾಹ್ವಿ ಪೇರೆರಾ ಹಾಗೂ ಸಂಗಡಿಗರು ನೃತ್ಯ ಪ್ರದರ್ಶಿಸಿದರು. ರಾಕೇಶ ಆನೆಗುಂದಿ ಹಾಗೂ ಸಂಗಡಿಗರು ಶಿಕ್ಷಕರ ಕುರಿತು ಹಾಡು ಹಾಡಿದರು. ಅರ್ಪಿತಾ ಕುಲಕರ್ಣಿ ಹಾಗೂ ಸಂಗಡಿಗರು ಕಿರು ನಾಟಕ ಪ್ರದರ್ಶಿಸಿದರು. ಶಾಲೆಯ ಪುಟ್ಟರಾಜ ಗವಾಯಿ ತಂಡದ ದೀಪಾ ಬೆಂತೂರ ಹಾಗೂ ಸಂಗಡಿಗರು ಪ್ರಾರ್ಥಿಸಿದರು.

ಗುರುಮಾತೆ ಸವಿತಾ ತುಕೋಳ ಉಡುಗೊರೆ ವಿತರಣೆ ನೆರವೇರಿಸಿದರು. ಮಾಹೀನ್ ನೀಲಿ ಸ್ವಾಗತಿಸಿದರು. ಶ್ರೇಯಾ ಬಳ್ಳಾರಿ ವಂದಿಸಿದರು. ವೆಂಕಟೇಶ ಕಲ್ಮನಿ ಹಾಗೂ ಪ್ರತೀಕ್ಷಾ ರಂಗಾರೆಡ್ಡಿ ನಿರೂಪಿಸಿದರು. ಪಾರ್ಥ ದಬಾಲಿ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು.

ಶಾಲೆಯ ನಿರ್ದೇಶಕ ವಿನಾಯಕ ಆರ್., ಉಪನಿರ್ದೇಶಕಿ ಗಾಯತ್ರಿ ವಿ., ಪ್ಲೇಹೋಮ್ ಮುಖ್ಯಸ್ಥೆ ಗಂಗಾ, ಇ.ಎಲ್.ಸಿ. ಮುಖ್ಯಸ್ಥೆ ಮಲ್ಲಿಕಾ ಆರ್., ಪ್ರಾಚಾರ್ಯ ವಿ.ಎಂ. ಅಡ್ನೂರ್, ಉಪಪ್ರಾಚಾರ್ಯ ಪಿ.ಜಿ. ಬ್ಯಾಳಿ ಸೇರಿದಂತೆ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ.ಜಾ.-ಪ.ಪ. ನೌಕರರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಇಲಾಖಾ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ನೌಕರರ ಕೇಂದ್ರ ಸಂಘ (ರಿ.), ಬೆಂಗಳೂರು, ಇದರ ಗದಗ ಜಿಲ್ಲಾ ಘಟಕದ ಪುನರ್ ರಚನೆ ಕಾರ್ಯಕ್ರಮ ನಗರದ ಅಂಬೇಡ್ಕರ್ ಭವನದಲ್ಲಿ ಸೆ.6ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಗದಗದ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ ಗೌರವಾಧ್ಯಕ್ಷರಾಗಿ ಪಾಲ್ಗೊಂಡು, ನೂತನ ಪದಾಧಿಕಾರಿಗಳಿಗೆ ಸಂಘಟನೆಯ ಜವಾಬ್ದಾರಿ ಹಾಗೂ ಕರ್ತವ್ಯಗಳ ಕುರಿತು ಮಾರ್ಗದರ್ಶನ ನೀಡಿದರು.

ವಿಶೇಷ ಆಹ್ವಾನಿತರಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರೆಡ್ಡಿ ಹಾಗೂ ಬೆಳಗಾವಿ ವಿಭಾಗದ ಕಾರ್ಯಾಧ್ಯಕ್ಷ, ಸಹಾಯಕ ನಿರ್ದೇಶಕ ಬಸವರಾಜ ಚನ್ನಯ್ಯ ಪಾಲ್ಗೊಂಡು, ಸಂಘಟನೆಯ ಉದ್ದೇಶ, ಕಾರ್ಯವೈಖರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಸಾರ್ವಜನಿಕರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ತಲುಪಿಸುವಲ್ಲಿ ಸಂಘದ ಪಾತ್ರದ ಕುರಿತು ಮಾತನಾಡಿದರು.

ಪುನರ್ ರಚನೆಯಾದ ಗದಗ ಜಿಲ್ಲಾ ಘಟಕಕ್ಕೆ ಬಾಲಚಂದ್ರ ಸಂಗನಾಳ ಅಧ್ಯಕ್ಷರಾಗಿ, ಗೋಪಾಲ ಲಮಾಣಿ, ಚಂದ್ರಕಾಂತ ವಡ್ಡರಕಲ್ಲ ಹಾಗೂ ವಸಂತ ಲಮಾಣಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವಿಶಾಲ ಅಶೋಕ ಹಾದಿಮನಿ ಪ್ರಧಾನ ಕಾರ್ಯದರ್ಶಿಯಾಗಿ, ವೆಂಕಟೇಶ ದ್ವಾಸಲಕೇರಿ ಕಾರ್ಯಾಧ್ಯಕ್ಷರಾಗಿ, ರಾಘವೇಂದ್ರ ಗೋಕಾಕ ಖಜಾಂಚಿಯಾಗಿ ಹಾಗೂ ಸವಿತಾ ಮೇತ್ರಿ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಕುಬೇರ ಲಮಾಣಿ ಹಾಗೂ ಎಲ್.ಎಂ. ಗಚ್ಚಿಮನಿ ಸಹ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದು, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಈಶ್ವರ ಲೋಕಾಪುರ, ನವೀನಕುಮಾರ್ ಹರಿಜನ, ವೆಂಕಟೇಶ ಪೂಜಾರ, ವೈ.ಡಿ. ದೊಡ್ಡಮನಿ, ಮಂಜುಳಾ ಅರಳಿಗಿಡದ, ಹೇಮಾವತಿ ಗೂಗಲೋತ್ರ ಹಾಗೂ ರೇಣುಕರಾಜ ಹರಿಜನ ಆಯ್ಕೆಯಾಗಿದ್ದಾರೆ ಎಂದು ಅಧ್ಯಕ್ಷ ಬಾಲಚಂದ್ರ ಸಂಗನಾಳ ತಿಳಿಸಿದ್ದಾರೆ.

‘ನಮ್ಮದು ಏನೂ ಪಾತ್ರ ಇಲ್ಲ’: ಇ.ಡಿ ವಿಚಾರಣೆ ಬಳಿಕ ನಾಗೇಂದ್ರ ಸ್ಫೋಟಕ ಹೇಳಿಕೆ!

0

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರು ಜಾರಿ ನಿರ್ದೇಶನಾಲಯ ಅಧಿಕಾರಿಗಳ ಮುಂದೆ ಹಾಜರಾಗಿ ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ಎದುರಿಸಿದರು.

ಪ್ರಕರಣದ ಚಾರ್ಜ್‌ಶೀಟ್ ಸಲ್ಲಿಕೆಯಾದ ಬಳಿಕ ಹೆಚ್ಚಿನ ಮಾಹಿತಿ ಹಾಗೂ ಕೆಲವು ಸ್ಪಷ್ಟನೆಗಳನ್ನು ಪಡೆಯುವ ಉದ್ದೇಶದಿಂದ ಇ.ಡಿ ಅಧಿಕಾರಿಗಳು ನಾಗೇಂದ್ರ ಅವರಿಗೆ ಸಮನ್ಸ್ ನೀಡಿದ್ದರು. ಅದರಂತೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಚಾರಣೆಗೆ ಹಾಜರಾದ ಅವರು, ವಿಚಾರಣೆ ಮುಗಿದ ಬಳಿಕ ಅಧಿಕಾರಿಗಳಿಗೆ ಅಗತ್ಯ ಸ್ಪಷ್ಟನೆಗಳನ್ನು ನೀಡಿರುವುದಾಗಿ ತಿಳಿಸಿದರು.

ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಗೇಂದ್ರ, “ಕಳೆದ ಬಾರಿ ಸಮನ್ಸ್ ನೀಡಲಾಗಿತ್ತು. ಆದರೆ ಬರಲು ಸಾಧ್ಯವಾಗಿರಲಿಲ್ಲ. ಕೆಲವು ಸ್ಪಷ್ಟನೆಗಳನ್ನು ನೀಡಬೇಕಿತ್ತು. ಇದೀಗ ಬಂದು ಉತ್ತರಿಸಿದ್ದೇನೆ. ಮತ್ತೊಮ್ಮೆ ಕರೆದರೂ ಹಾಜರಾಗುತ್ತೇನೆ” ಎಂದು ಹೇಳಿದರು.

ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, “ನಮ್ಮದು ಏನೂ ಪಾತ್ರ ಇಲ್ಲ. ಇದು ಬ್ಯಾಂಕ್ ಫ್ರಾಡ್. ಯೂನಿಯನ್ ಬ್ಯಾಂಕ್‌ನವರಿಂದ ಆಗಿರುವ ಕೆಲಸ. ರಾಜಕೀಯ ಕಾರಣಕ್ಕಾಗಿ ನನ್ನ ಮೇಲೆ ಆರೋಪ ಮಾಡಲಾಗಿದೆ” ಎಂದು ಆರೋಪಿಸಿದರು. ಪ್ರಕರಣ ಕೋರ್ಟ್‌ನಲ್ಲಿ ನಡೆಯುತ್ತಿರುವುದಾಗಿ ತಿಳಿಸಿದರು.

ತಮ್ಮ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ನಾಗೇಂದ್ರ, ಪಕ್ಷದ ಹಿತದೃಷ್ಟಿಯಿಂದ ತಾವೇ ಸ್ವಯಂಪ್ರೇರಿತವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಹೇಳಿದರು.

ಇದೇ ವೇಳೆ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅವರು, ಪಾದಯಾತ್ರೆಯಿಂದ ಕಾಂಗ್ರೆಸ್ ಮತ್ತಷ್ಟು ಒಗ್ಗಟ್ಟಾಗಿದೆ ಎಂದು ಹೇಳಿದರು. ಬಳ್ಳಾರಿಯಲ್ಲಿ ಕಾಂಗ್ರೆಸ್ ಗಟ್ಟಿಯಾಗಿದ್ದು, ಬಿಜೆಪಿಯ ಪಾದಯಾತ್ರೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಟೀಕಿಸಿದರು.

ಜನಾರ್ದನ ರೆಡ್ಡಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ನಾಗೇಂದ್ರ, “ಅವರು ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ನನಗೆ ಸಚಿವ ಸ್ಥಾನ ನೀಡಿದ್ದನ್ನು ಅವರಿಗೆ ತಡೆಯಲಾಗಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಧಾ-ಕೃಷ್ಣ ವೇಷದಲ್ಲಿ ಮಕ್ಕಳ ಕಲರವ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಕಲ್ಪ ಶಿಕ್ಷಣ ಸಂಸ್ಥೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳಿಗೆ ರಾಧಾ-ಕೃಷ್ಣರ ವೇಷಭೂಷಣ ಸ್ಪರ್ಧೆ ಹಾಗೂ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮಕ್ಕಳಿಗೆ ಬಾಲಕೃಷ್ಣ ಹಾಗೂ ರಾಧೆಯ ವೇಷ ಧರಿಸುವ ಮೂಲಕ ನಮ್ಮ ಧಾರ್ಮಿಕ, ಸಾಂಸ್ಕೃತಿಕ ಪರಂಪರೆಯ ಪರಿಚಯ ಮಾಡಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ಭಕ್ತಿ ಮತ್ತು ಗೌರವದಿಂದ ಆಚರಿಸುವ ಇಂತಹ ಸಂಪ್ರದಾಯಗಳು ಮಕ್ಕಳಲ್ಲಿ ಧರ್ಮ, ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಗೌರವ ಬೆಳೆಸುತ್ತವೆ ಎಂದು ಸಂಸ್ಥೆ ತಿಳಿಸಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಎಸ್.ವಿ. ಹುಬ್ಬಳ್ಳಿ ವಹಿಸಿದ್ದರು. ಮಾರ್ಗದರ್ಶಕಿ ಎಸ್.ಎನ್. ಹುಬ್ಬಳ್ಳಿ, ಕಾರ್ಯದರ್ಶಿ ಪಿ.ಎಸ್. ಹುಬ್ಬಳ್ಳಿ ಸೇರಿದಂತೆ ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಸಹ ಶಿಕ್ಷಕಿ ಪುಷ್ಪ ಪಿ. ಮೇಗೇರಿ ನಿರೂಪಿಸಿದರು.

ಧರ್ಮದ ನಂಬಿಕೆಗೆ ಧಕ್ಕೆ ತರುವ ಹೇಳಿಕೆ ಖಂಡನೀಯ: ಮಾರುತಿ ಪವಾರ

0

ವಿಜಯಸಾಕ್ಷಿ ಸುದ್ದಿ, ಗದಗ: ಹಿಂದೂ ಧರ್ಮ ಹಾಗೂ ಅದರ ಆಚರಣೆಗಳ ಕುರಿತು ಅವಹೇಳನಕಾರಿ ಅಥವಾ ಅಪಮಾನಕರ ಹೇಳಿಕೆ ನೀಡುವುದು ಜವಾಬ್ದಾರಿಯುತ ಸ್ಥಾನದಲ್ಲಿರುವ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿಯವರಿಗೆ ಶೋಭೆ ತರುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಮಾರುತಿ ಪವಾರ ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ. ಆದರೆ ಯಾವುದೇ ಧರ್ಮದ ನಂಬಿಕೆ, ಆಚರಣೆ ಹಾಗೂ ಭಾವನೆಗಳಿಗೆ ನೋವುಂಟು ಮಾಡುವ ಹೇಳಿಕೆಗಳು ಸಮಾಜದಲ್ಲಿ ಅನಗತ್ಯ ಅಸಮಾಧಾನ ಮತ್ತು ಸಂಘರ್ಷಕ್ಕೆ ಕಾರಣವಾಗಬಹುದು. ಆದ್ದರಿಂದ ಸಚಿವರು ಧಾರ್ಮಿಕ ವಿಚಾರಗಳಲ್ಲಿ ಮಾತನಾಡುವಾಗ ಸಂಯಮ, ಜವಾಬ್ದಾರಿ ಹಾಗೂ ಪರಸ್ಪರ ಗೌರವ ಕಾಪಾಡಬೇಕು ಎಂದರು.

ಹಿಂದೂ ಧರ್ಮವನ್ನು ಸಚಿವರ ಟೀಕಿಸುವ ಹೆಸರಿನಲ್ಲಿ ಕೋಟ್ಯಂತರ ಜನರ ನಂಬಿಕೆಗೆ ನೋವುಂಟು ಮಾಡುವ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದ್ದರೆ ಸಚಿವರು ತಮ್ಮ ಹೇಳಿಕೆಯನ್ನು ಸ್ಪಷ್ಟಪಡಿಸಿ ವಿಷಾದ ವ್ಯಕ್ತಪಡಿಸುವುದು ಸೂಕ್ತ ಎಂದು ಒತ್ತಾಯಿಸಿದರು.

ಸಚಿವರು ಎಲ್ಲ ಧರ್ಮಗಳಿಗೂ ಸಮಾನ ಗೌರವ ನೀಡುವುದರೊಂದಿಗೆ, ತಮಗೆ ವಹಿಸಿರುವ ಖಾತೆಯ ಜವಾಬ್ದಾರಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕು. ಜನರ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಮೆಚ್ಚುಗೆ ಗಳಿಸಬೇಕೇ ಹೊರತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳಿಂದಲ್ಲ ಎಂದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಮೂರು ಹೊತ್ತಿನ ಬುತ್ತಿ ಕಟ್ಟಿ ಅನಿಲ್ ಮೆಣಸಿನಕಾಯಿ ಗೆಲ್ಲಿಸೋಣ: ಶ್ರೀರಾಮುಲು

0

ವಿಜಯಸಾಕ್ಷಿ ಸುದ್ದಿ, ಬಳ್ಳಾರಿ/ಗದಗ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅನಿಲ್ ಮೆಣಸಿನಕಾಯಿ ಅವರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಬೇಕು. ಅವರ ಗೆಲುವಿಗಾಗಿ ಮೂರು ಹೊತ್ತಿನ ಬುತ್ತಿ ಕಟ್ಟಿಕೊಂಡು ಕಾರ್ಯಕರ್ತರು ಶ್ರಮಿಸೋಣ ಎಂದು ಮಾಜಿ ಸಚಿವ ಶ್ರೀರಾಮುಲು ಕರೆ ನೀಡಿದರು.

ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಭಾನುವಾರ ಶ್ರೀರಾಮುಲು ಹಾಗೂ ಅನಿಲ್ ಮೆಣಸಿನಕಾಯಿ ನೇತೃತ್ವದಲ್ಲಿ ನಡೆದ ಬಿಜೆಪಿ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಅನಿಲ್ ಮೆಣಸಿನಕಾಯಿ ಜನನಾಯಕರಾಗಿದ್ದು, ಗದಗದಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಇತರೆ ಎಲ್ಲರಿಗಿಂತಲೂ ಅನಿಲ್ ಮೆಣಸಿನಕಾಯಿ ಅವರ ಮೇಲೆ ತಮ್ಮ ಪ್ರೀತಿ ಹೆಚ್ಚಿದೆ. ಈ ಬಾರಿ ಸರಿಯಾದ ಸಮಯದಲ್ಲಿ ಗದಗಕ್ಕೆ ಆಗಮಿಸಿ ಪ್ರಚಾರ ನಡೆಸುತ್ತೇನೆ. ಅವರನ್ನು ವಿಧಾನಸೌಧದಲ್ಲಿ ಶಾಸಕನಾಗಿ ನೋಡಬೇಕು ಎಂಬ ಆಸೆ ನನಗಿದೆ ಎಂದರು.

ಜೆನ್‌ಜಿ ಪೀಳಿಗೆ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುವ ಶಕ್ತಿಯಾಗಿದ್ದು, ಅವರನ್ನು ಕಡೆಗಣಿಸಲು ಸಾಧ್ಯವಿಲ್ಲ. ಗದಗ ನಗರದಲ್ಲಿ ನೀರು ಹಾಗೂ ಕೈಗಾರಿಕೆಗಾಗಿ ಜೆನ್‌ಜಿ ಯುವಕರು ನಡೆಸಿದ ಪ್ರತಿಭಟನೆ ಕಾಂಗ್ರೆಸ್‌ಗೆ ಎಚ್ಚರಿಕೆ ಗಂಟೆಯಾಗಿದೆ ಎಂದರು.

ಸಕಾರಾತ್ಮಕ ಬೇಡಿಕೆಗಳಿಗಾಗಿ ಜೆನ್‌ಜಿ ಯುವಕರು ನಡೆಸುವ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಲಿದೆ. ಗದಗದ ಜೆನ್‌ಜಿ ಹೋರಾಟದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ನೋಟಿಸ್ ನೀಡಿರುವ ವಿಷಯ ತಮ್ಮ ಗಮನಕ್ಕೆ ಬಂದಿದ್ದು, ಜಿಲ್ಲಾ ನಾಯಕರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಶ್ರೀರಾಮುಲು ಹೇಳಿದರು.

ಈ ಸಂದರ್ಭದಲ್ಲಿ ರವಿಕಾಂತ ಅಂಗಡಿ, ವಸಂತ ಪಡಗದ, ಪರಮೇಶ ಲಮಾಣಿ, ಶರಣು ಚಿಂಚಲಿ, ವೀರೇಶ ಕಲ್ಮಠ, ಮಂಜುನಾಥ ಹಳ್ಳೂರುಮಠ, ಬಸಯ್ಯ ಸಾಸೊಳ್ಳಿಮಠ, ಸುಭಾಸ ಸುಂಕದ, ಕುಮಾರ ಮಾರನಬಸರಿ, ಚೆನ್ನಮ್ಮ ಹುಳಕನ್ನವರ, ಆಶಾ ಜೂಲಗುಡ್ಡ, ಟಿ.ಡಿ. ಪೂಜಾರ, ಕಾಳು ತೋಟದ, ಶಶಿಕುಮಾರ್ ಕಳಸಾಪೂರಶೆಟ್ರ, ಫಕೀರೇಶ ಮುಳಗುಂದ, ರಾಮು ವಾಲ್ಮೀಕಿ, ದೇವಾನಂದ ತೋಟದ, ಗೋಪಾಲ ನಾಯಕ, ಸಂತೋಷ ಪವಾರ, ಪ್ರಭುಗೌಡ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನನಗೆ ಅಧಿಕಾರ ಇಲ್ಲ. ಆದರೆ ಜನರ ಮನಸ್ಸಿನಲ್ಲಿ ನನಗೆ ಜಾಗ ಕೊಟ್ಟಿದ್ದೀರಿ. ನಾವು ಈ ಹಿಂದೆ ಹೊಸ ಪಕ್ಷ ಕಟ್ಟಿದಾಗ ಅನಿಲ್ ಮೆಣಸಿನಕಾಯಿ ಅವರು ಜೋಡೆತ್ತಿನಂತೆ ನನಗೆ ಸಹಕಾರ ನೀಡಿದ್ದರು. ಈ ಬಾರಿ ಮೂರು ಹೊತ್ತಿನ ಬುತ್ತಿ ಕಟ್ಟಿಕೊಂಡು ಅವರ ಗೆಲುವಿಗಾಗಿ ಶ್ರಮಿಸೋಣ.

— ಶ್ರೀರಾಮುಲು, ಮಾಜಿ ಸಚಿವ

ಭಾಗಪತ್‌ನಲ್ಲಿ ಭೀಕರ ರಸ್ತೆ ಅಪಘಾತ: ಪಿಕ್‌ಅಪ್ ವಾಹನ ಪಲ್ಟಿಯಾಗಿ 12 ಮಂದಿ ಸಾವು!

0

ಭಾಗಪತ್: ಉತ್ತರ ಪ್ರದೇಶದ ಭಾಗಪತ್ ಜಿಲ್ಲೆಯಲ್ಲಿ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 12 ಮಂದಿ ಮೃತಪಟ್ಟಿದ್ದು, 22 ಮಂದಿ ಗಾಯಗೊಂಡಿದ್ದಾರೆ.

ರಾಜಸ್ಥಾನದಿಂದ ಬುಡೌನ್‌ಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಪಿಕ್‌ಅಪ್ ವಾಹನವೊಂದು ಖೇಕ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಸುಮಾರು 32 ಪ್ರಯಾಣಿಕರಿದ್ದ ವಾಹನದಲ್ಲಿ ಬಹುತೇಕರು ನಿದ್ರೆಯಲ್ಲಿದ್ದ ವೇಳೆ ಅಪಘಾತ ಸಂಭವಿಸಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಆ್ಯಂಬುಲೆನ್ಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ಖೇಕ್ರಾ ಹಾಗೂ ಭಾಗಪತ್‌ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ವೈದ್ಯಕೀಯ ಕೇಂದ್ರಗಳಿಗೆ ರವಾನಿಸಲಾಗಿದೆ.

ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ. ಗಾಯಗೊಂಡ ಪ್ರಯಾಣಿಕ ಕುಂವರ್ ಪಾಲ್, “ದಿಢೀರನೆ ಭಾರಿ ಸದ್ದು ಕೇಳಿಸಿತು. ವಾಹನ ಪಲ್ಟಿಯಾದ ಬಳಿಕ ಎಲ್ಲೆಡೆ ಚೀರಾಟ ಕೇಳಿಸಿತು” ಎಂದು ಘಟನೆಯ ಭೀಕರತೆಯನ್ನು ವಿವರಿಸಿದ್ದಾರೆ.

ಅವಲಕ್ಕಿಯ ಆರೋಗ್ಯ ಪ್ರಯೋಜನಗಳೇನು? ತಿನ್ನುವ ಮುನ್ನ ಈ ವಿಚಾರ ತಿಳಿಯಿರಿ

0

ಮನೆಗಳಲ್ಲಿ ಸಾಮಾನ್ಯವಾಗಿ ಉಪಹಾರ ಅಥವಾ ತಿಂಡಿಯಾಗಿ ಬಳಸುವ ಅವಲಕ್ಕಿ ಸರಳ ಹಾಗೂ ಸುಲಭವಾಗಿ ತಯಾರಿಸಬಹುದಾದ ಆಹಾರವಾಗಿದೆ.

ಭತ್ತದಿಂದ ತಯಾರಿಸುವ ಅವಲಕ್ಕಿಯಲ್ಲಿ ಮುಖ್ಯವಾಗಿ ಕಾರ್ಬೋಹೈಡ್ರೇಟ್‌ ಇದ್ದು, ದೇಹಕ್ಕೆ ಶಕ್ತಿ ನೀಡಲು ಸಹಾಯ ಮಾಡುತ್ತದೆ. ಸರಿಯಾದ ಪದಾರ್ಥಗಳೊಂದಿಗೆ ಸೇರಿಸಿ ಸೇವಿಸಿದರೆ ಇದನ್ನು ಸಮತೋಲಿತ ಉಪಹಾರದ ಭಾಗವನ್ನಾಗಿ ಮಾಡಬಹುದು.

ಆದರೆ ಪ್ರತಿದಿನ ಒಂದು ಕಪ್ ಅವಲಕ್ಕಿ ತಿನ್ನುವುದರಿಂದಲೇ ತೂಕ ಕಡಿಮೆಯಾಗುತ್ತದೆ ಅಥವಾ ಎಲ್ಲಾ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಎನ್ನುವುದು ಸರಿಯಲ್ಲ. ಅವಲಕ್ಕಿಯ ಆರೋಗ್ಯ ಪ್ರಯೋಜನ ಪಡೆಯಲು ಅದರ ಪ್ರಮಾಣ, ತಯಾರಿಸುವ ವಿಧಾನ ಹಾಗೂ ಸೇರಿಸುವ ಪದಾರ್ಥಗಳ ಬಗ್ಗೆ ಗಮನ ಹರಿಸುವುದು ಮುಖ್ಯ.

ಅವಲಕ್ಕಿಯಲ್ಲಿ ಏನೆಲ್ಲಾ ಪೋಷಕಾಂಶಗಳಿವೆ?

ಅವಲಕ್ಕಿಯ ಪೌಷ್ಟಿಕ ಮೌಲ್ಯ ಅದರ ತಯಾರಿಕಾ ವಿಧಾನ ಹಾಗೂ ಬಳಸುವ ಅಕ್ಕಿಯ ವಿಧವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಇದರಲ್ಲಿ ಕಾರ್ಬೋಹೈಡ್ರೇಟ್‌ ಮುಖ್ಯವಾಗಿದ್ದು, ಸ್ವಲ್ಪ ಪ್ರಮಾಣದ ಪ್ರೋಟೀನ್ ಮತ್ತು ನಾರಿನಂಶವೂ ಇರುತ್ತದೆ. ಕೆಲವು ವಿಧದ ಅವಲಕ್ಕಿಯಲ್ಲಿ ಕಬ್ಬಿಣ ಸೇರಿದಂತೆ ಖನಿಜಾಂಶಗಳು ದೊರೆಯುತ್ತವೆ.

ಹೆಚ್ಚು ಪೌಷ್ಟಿಕವಾಗಿಸಲು ಅವಲಕ್ಕಿಗೆ ತರಕಾರಿ, ಬೇಳೆ, ಶೇಂಗಾ ಅಥವಾ ಮೊಳಕೆ ಕಾಳುಗಳನ್ನು ಸೇರಿಸಬಹುದು.

ಬೇಗ ಶಕ್ತಿ ನೀಡಲು ಸಹಕಾರಿ:

ಅವಲಕ್ಕಿಯಲ್ಲಿರುವ ಕಾರ್ಬೋಹೈಡ್ರೇಟ್‌ ದೇಹಕ್ಕೆ ಶಕ್ತಿಯ ಮೂಲವಾಗಿದೆ. ಹೀಗಾಗಿ ಬೆಳಗಿನ ಉಪಹಾರಕ್ಕೆ ತರಕಾರಿ ಅವಲಕ್ಕಿ, ಅವಲಕ್ಕಿ ಉಪ್ಪಿಟ್ಟು ಅಥವಾ ಮೊಸರು-ಅವಲಕ್ಕಿಯಂತಹ ಆಯ್ಕೆಗಳನ್ನು ಮಾಡಬಹುದು.

ಆದರೆ ಕೇವಲ ಅವಲಕ್ಕಿಯನ್ನು ಮಾತ್ರ ಸೇವಿಸುವ ಬದಲು ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನ ಮೂಲಗಳನ್ನು ಸೇರಿಸಿದರೆ ಉಪಹಾರ ಹೆಚ್ಚು ಸಮತೋಲಿತವಾಗುತ್ತದೆ.

ತೂಕ ಇಳಿಸಿಕೊಳ್ಳಲು ಅವಲಕ್ಕಿ ಒಳ್ಳೆಯದೇ?

ತೂಕ ನಿರ್ವಹಣೆಯ ಆಹಾರದಲ್ಲಿ ಅವಲಕ್ಕಿಯನ್ನು ಸೇರಿಸಬಹುದು. ಆದರೆ ಅವಲಕ್ಕಿ ತಿಂದ ಮಾತ್ರಕ್ಕೆ ತೂಕ ಕಡಿಮೆಯಾಗುವುದಿಲ್ಲ. ಸೇವಿಸುವ ಪ್ರಮಾಣ, ತಯಾರಿಸುವ ವಿಧಾನ ಹಾಗೂ ಅದಕ್ಕೆ ಸೇರಿಸುವ ಪದಾರ್ಥಗಳು ಮುಖ್ಯವಾಗುತ್ತವೆ.

ತರಕಾರಿ ಮತ್ತು ಬೇಳೆ ಸೇರಿಸಿ ತಯಾರಿಸಿದ ಅವಲಕ್ಕಿ ಹೆಚ್ಚು ಪೌಷ್ಟಿಕವಾಗಬಹುದು. ಆದರೆ ಅತಿಯಾಗಿ ಎಣ್ಣೆ, ಆಲೂಗಡ್ಡೆ ಅಥವಾ ಸಿಹಿ ಪದಾರ್ಥಗಳನ್ನು ಸೇರಿಸಿದರೆ ಕ್ಯಾಲೊರಿ ಪ್ರಮಾಣ ಹೆಚ್ಚಾಗಬಹುದು.

ಜೀರ್ಣಕ್ರಿಯೆಗೆ ಹೇಗೆ ಸಹಕಾರಿ?

ಅವಲಕ್ಕಿಯಲ್ಲಿರುವ ನಾರಿನಂಶ ಅದರ ವಿಧವನ್ನು ಅವಲಂಬಿಸಿ ಬದಲಾಗುತ್ತದೆ. ತರಕಾರಿ, ಬೇಳೆ ಮತ್ತು ಮೊಳಕೆ ಕಾಳುಗಳೊಂದಿಗೆ ಸೇವಿಸಿದಾಗ ಒಟ್ಟಾರೆ ಆಹಾರದ ನಾರಿನಂಶ ಹೆಚ್ಚಬಹುದು. ಇದು ಆರೋಗ್ಯಕರ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಮಲಬದ್ಧತೆ ಇರುವವರು ಅವಲಕ್ಕಿಯೊಂದನ್ನೇ ಅವಲಂಬಿಸುವ ಬದಲು ದಿನನಿತ್ಯದ ಆಹಾರದಲ್ಲಿ ವಿವಿಧ ನಾರಿನಂಶಯುಕ್ತ ಆಹಾರಗಳನ್ನು ಸೇರಿಸುವುದು ಮುಖ್ಯ.

ಮಧುಮೇಹ ಇರುವವರು ಎಚ್ಚರಿಕೆ ವಹಿಸಿ:

ಅವಲಕ್ಕಿಯಲ್ಲಿ ಕಾರ್ಬೋಹೈಡ್ರೇಟ್‌ ಇರುವುದರಿಂದ ಮಧುಮೇಹ ಇರುವವರು ಸೇವಿಸುವ ಪ್ರಮಾಣದ ಬಗ್ಗೆ ಗಮನ ಹರಿಸಬೇಕು. ಅವಲಕ್ಕಿ ತಿಂದರೆ ರಕ್ತದಲ್ಲಿನ ಸಕ್ಕರೆ ಖಂಡಿತ ನಿಯಂತ್ರಣದಲ್ಲಿರುತ್ತದೆ ಎನ್ನುವುದು ಸರಿಯಲ್ಲ.

ತರಕಾರಿ ಮತ್ತು ಪ್ರೋಟೀನ್‌ಯುಕ್ತ ಪದಾರ್ಥಗಳೊಂದಿಗೆ ಸೂಕ್ತ ಪ್ರಮಾಣದಲ್ಲಿ ಸೇವಿಸುವುದು ಉತ್ತಮ. ಆಹಾರಕ್ಕೆ ದೇಹದ ಪ್ರತಿಕ್ರಿಯೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು.

ಮಕ್ಕಳಿಗೆ, ಗರ್ಭಿಣಿಯರಿಗೆ ಅವಲಕ್ಕಿ ತಿನ್ನಬಹುದಾ?

ಮಕ್ಕಳ ಆಹಾರದಲ್ಲೂ ಅವಲಕ್ಕಿಯನ್ನು ಸೂಕ್ತವಾಗಿ ಸೇರಿಸಬಹುದು. ತರಕಾರಿ, ಬೇಳೆ ಅಥವಾ ಮೊಟ್ಟೆಯಂತಹ ಪ್ರೋಟೀನ್‌ ಮೂಲಗಳೊಂದಿಗೆ ನೀಡಿದರೆ ಹೆಚ್ಚು ಸಮತೋಲಿತ ಆಹಾರವಾಗುತ್ತದೆ.

ಗರ್ಭಿಣಿಯರೂ ಸಾಮಾನ್ಯವಾಗಿ ಅವಲಕ್ಕಿಯನ್ನು ಆಹಾರದ ಭಾಗವಾಗಿ ಸೇವಿಸಬಹುದು. ಆದರೆ ಕಬ್ಬಿಣದ ಕೊರತೆಯನ್ನು ನಿವಾರಿಸಲು ಅವಲಕ್ಕಿಯೊಂದನ್ನೇ ಅವಲಂಬಿಸಬಾರದು. ವೈದ್ಯರು ಸೂಚಿಸುವ ಕಬ್ಬಿಣಯುಕ್ತ ಆಹಾರ ಅಥವಾ ಪೂರಕಗಳನ್ನು ಮುಂದುವರಿಸುವುದು ಮುಖ್ಯ.

ಅವಲಕ್ಕಿ ‘ಸೂಪರ್‌ಫುಡ್’ ಅಲ್ಲ:

ಅವಲಕ್ಕಿ ಸರಳ, ಸುಲಭವಾಗಿ ತಯಾರಿಸಬಹುದಾದ ಆಹಾರ. ಆದರೆ ಇದನ್ನು ‘ಸೂಪರ್‌ಫುಡ್’ ಅಥವಾ ಯಾವುದೇ ಕಾಯಿಲೆಗೆ ಔಷಧಿ ಎಂದು ಪರಿಗಣಿಸುವುದು ಸರಿಯಲ್ಲ.

ತರಕಾರಿ, ಬೇಳೆ, ಮೊಳಕೆ ಕಾಳು, ಮೊಸರು ಅಥವಾ ಇತರ ಪ್ರೋಟೀನ್‌ ಮೂಲಗಳೊಂದಿಗೆ ಸಮತೋಲಿತವಾಗಿ ಸೇವಿಸಿದರೆ ಅವಲಕ್ಕಿ ಆರೋಗ್ಯಕರ ಆಹಾರದ ಒಂದು ಭಾಗವಾಗಬಹುದು.