ಮಂಡ್ಯ: ಗಣೇಶೋತ್ಸವ ಸ್ವಾಗತ ಕಾರ್ಯಕ್ರಮದ ವೇಳೆ ಕಾಂಗ್ರೆಸ್ ಶಾಸಕ ಗಣಿಗ ಪಿ.ರವಿಕುಮಾರ್ ಅವರ ತಲೆಗೆ ಕಬ್ಬಿಣದ ರಾಡ್ ಬಿದ್ದು ಗಾಯವಾಗಿರುವ ಘಟನೆ ಮಂಡ್ಯ ನಗರದ ಮರಿಗೌಡ ಬಡಾವಣೆಯಲ್ಲಿ ನಡೆದಿದೆ.
ಗಣೇಶೋತ್ಸವದ ವೇಳೆ ಕಾರ್ಯಕ್ರಮದ ಸ್ಕ್ರೀನ್ ಎಳೆಯುತ್ತಿದ್ದ ಸಂದರ್ಭದಲ್ಲಿ ಕಬ್ಬಿಣದ ರಾಡ್ ಆಕಸ್ಮಿಕವಾಗಿ ಶಾಸಕರ ತಲೆಯ ಮೇಲೆ ಬಿದ್ದಿದೆ. ಪರಿಣಾಮ ತಲೆಗೆ ಗಾಯವಾಗಿದ್ದು, ತಕ್ಷಣ ಅವರನ್ನು ಮಂಡ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತುರ್ತು ಚಿಕಿತ್ಸಾ ಘಟಕದಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಪರಿಶೀಲನೆಗಾಗಿ ಸಿಟಿ ಸ್ಕ್ಯಾನ್ ನಡೆಸಿದ್ದರು. ಗಾಯಕ್ಕೆ ಹೊಲಿಗೆ ಹಾಕಲಾಗಿದ್ದು, ಚಿಕಿತ್ಸೆ ಬಳಿಕ ಶಾಸಕ ಗಣಿಗ ರವಿಕುಮಾರ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಘಟನೆ ವಿಷಯ ತಿಳಿಯುತ್ತಿದ್ದಂತೆ ಮಂಡ್ಯ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಆಸ್ಪತ್ರೆಗೆ ಆಗಮಿಸಿ, ಶಾಸಕರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಇನ್ನು ಶಾಸಕರಿಗೆ ಗಾಯವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು, ಮತದಾರರು, ವಿವಿಧ ಪಕ್ಷಗಳ ನಾಯಕರು ಹಾಗೂ ಮುಖಂಡರು ಆಸ್ಪತ್ರೆಗೆ ಆಗಮಿಸಿದ್ದರು.
ಈ ನಡುವೆ, ಘಟನೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಗಣಿಗ ರವಿಕುಮಾರ್, ತಮ್ಮ ಮೇಲೆ ಯಾವುದೇ ಷಡ್ಯಂತ್ರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಗಣೇಶೋತ್ಸವದ ವೇಳೆ ಸ್ಕ್ರೀನ್ ಎಳೆಯುತ್ತಿದ್ದಾಗ ಕಬ್ಬಿಣದ ರಾಡ್ ತಲೆಯ ಮೇಲೆ ಬಿದ್ದಿದೆ. ಇದರಿಂದ ಸಣ್ಣ ಪ್ರಮಾಣದ ಗಾಯವಾಗಿದೆ. ವೈದ್ಯರು ಸ್ಟೀಚ್ ಹಾಕಿದ್ದು, ಸುಮಾರು 10 ದಿನಗಳ ಕಾಲ ರೆಸ್ಟ್ ಮಾಡಲು ಹೇಳಿದ್ದಾರೆ. ತಾವು ಸುಮಾರು 6 ದಿನ ವಿಶ್ರಾಂತಿ ಪಡೆಯುವುದಾಗಿ ಗಣಿಗ ರವಿಕುಮಾರ್ ಹೇಳಿದ್ದಾರೆ.
‘ನಾನು ಆರೋಗ್ಯವಾಗಿದ್ದೇನೆ. ಯಾವುದೇ ತೊಂದರೆ ಇಲ್ಲ. ಯಾರೂ ಆತಂಕ ಪಡಬೇಡಿ, ಗಾಬರಿ ಆಗಬೇಡಿ. ನನ್ನ ಮೇಲೆ ಯಾವುದೇ ಷಡ್ಯಂತ್ರ ಇಲ್ಲ, ರಾಡ್ ಆಕಸ್ಮಿಕವಾಗಿ ತಲೆಯ ಮೇಲೆ ಬಿದ್ದಿದೆ’ ಎಂದು ಶಾಸಕ ಗಣಿಗ ರವಿಕುಮಾರ್ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕಾರ್ಯಕ್ರಮದ ಆಯೋಜನೆ ಹಾಗೂ ನಿರ್ವಹಣೆಯಲ್ಲಿ ಯಾವುದೇ ನಿರ್ಲಕ್ಷ್ಯವಾಗಿದೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಯಬೇಕಿದೆ.
ಇನ್ನು ಶಾಸಕ ಗಣಿಗ ರವಿಕುಮಾರ್ ಈ ಹಿಂದೆ ಕೆರಗೋಡು ಹನುಮಧ್ವಜ ವಿವಾದದ ಸಂದರ್ಭದಲ್ಲೂ ಸುದ್ದಿಯಾಗಿದ್ದರು. ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದ ಶಾಸಕರಿಗೆ ಇದೀಗ ಗಣೇಶೋತ್ಸವ ಕಾರ್ಯಕ್ರಮದ ವೇಳೆ ಗಾಯವಾಗಿರುವುದು ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.
ಸದ್ಯ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಶಾಸಕ ಗಣಿಗ ರವಿಕುಮಾರ್ ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯಲಿದ್ದಾರೆ.

