Home Blog Page 49

60 ವರ್ಷದ “ಅಸ್ತಮಾ ಯಜ್ಞ”ಕ್ಕೆ ಭಾರೀ ಜನಸ್ತೋಮ: ಲಕ್ಷ್ಮೇಶ್ವರದಲ್ಲಿ ಆಯುರ್ವೇದದ ಮಹೋತ್ಸವ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಆರು ದಶಕಗಳಿಂದ ಅಸ್ತಮಾ ರೋಗಿಗಳಿಗೆ ಉಚಿತ ಆಯುರ್ವೇದ ಔಷಧಿ ವಿತರಿಸುತ್ತಿರುವ ಲಕ್ಷ್ಮೇಶ್ವರದ ಐತಿಹಾಸಿಕ “ಅಸ್ತಮಾ ಯಜ್ಞ” ಈ ವರ್ಷವೂ ಸಾವಿರಾರು ಜನರ ಸಮ್ಮುಖದಲ್ಲಿ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೋಗಿಗಳು ಹಾಗೂ ಸಾರ್ವಜನಿಕರ ಭಾರೀ ಜನಸ್ತೋಮ ಕಾರ್ಯಕ್ರಮದ ವಿಶೇಷತೆ ಆಗಿತ್ತು.

ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆ ನಂ.1ರ ಆವರಣದಲ್ಲಿ ಸೋಮವಾರ ನಡೆದ 60ನೇ ವರ್ಷದ ಅಸ್ತಮಾ ಯಜ್ಞ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕುಂದಗೋಳದ ಶ್ರೀ ಬಸವಣ್ಣಜ್ಜನವರು, ದಿವಂಗತ ವೈದ್ಯ ಬಾಬುರಾವ್ ಕುಲಕರ್ಣಿ ಅವರ ಸೇವಾ ಮನೋಭಾವವನ್ನು ಕೊಂಡಾಡಿದರು.

ಆಯುರ್ವೇದ ಔಷಧಿ ಪುರಾತನ ಕಾಲದಿಂದಲೂ ಜನಜೀವನದ ಭಾಗವಾಗಿದ್ದು, ಗಿಡಮೂಲಿಕೆಗಳಿಂದ ನೀಡುವ ಚಿಕಿತ್ಸೆ ಮೂಲಕ ಸಾವಿರಾರು ಜನರು ಗುಣಮುಖರಾಗಿದ್ದಾರೆ. ಇಂತಹ ಔಷಧಿಯ ಮೂಲಕ ಲಕ್ಷ್ಮೇಶ್ವರ ಪಟ್ಟಣದ ಕೀರ್ತಿಯನ್ನು ರಾಜ್ಯಾದ್ಯಂತ ಹರಡಿಸಿದ ದಿ. ವೈದ್ಯ ಬಾಬುರಾವ್ ಕುಲಕರ್ಣಿ ಅವರ ಸೇವೆ ಸದಾ ಸ್ಮರಣೀಯ ಎಂದು ಅವರು ಹೇಳಿದರು.

ಯಾವುದೇ ಫಲಾಪೇಕ್ಷೆಯಿಲ್ಲದೆ 60 ವರ್ಷಗಳಿಂದ ಅಸ್ತಮಾ ರೋಗಿಗಳಿಗೆ ಉಚಿತ ಔಷಧಿ ವಿತರಿಸುತ್ತಿರುವುದು ಈ ಭಾಗದ ಹೆಮ್ಮೆಯ ಸಂಗತಿ. ಕಾರ್ಯಕ್ರಮಕ್ಕೆ ಹರಿದು ಬಂದಿರುವ ಜನಸ್ತೋಮವೇ ಈ ಔಷಧಿಯ ಮೇಲಿನ ನಂಬಿಕೆ ಮತ್ತು ಮಹತ್ವವನ್ನು ತೋರಿಸುತ್ತದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಪಿಎಸ್‌ಐ ನಾಗರಾಜ ಗಡದ ಮಾತನಾಡಿ, ಮೃಗಶಿರಾ ಮಳೆಯ ನಕ್ಷತ್ರದ ಸಂದರ್ಭದಲ್ಲಿ ನೀಡಲಾಗುವ ಈ ಔಷಧಿಯಿಂದ ಲಕ್ಷಾಂತರ ಜನರು ಪರಿಹಾರ ಕಂಡುಕೊಂಡಿದ್ದಾರೆ ಎಂದರು.

ಮೃಗಶಿರಾ ನಕ್ಷತ್ರದ ಸಂದರ್ಭದಲ್ಲಿ ವಾತಾವರಣದಲ್ಲಿ ಉಂಟಾಗುವ ಬದಲಾವಣೆ ಹಾಗೂ ಆಯುರ್ವೇದ ಔಷಧಿಯ ಗುಣಗಳಿಂದ ಈ ಚಿಕಿತ್ಸೆಗೆ ವಿಶೇಷ ಮಹತ್ವ ಬಂದಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಸರ್ಪಭೂಷಣ ಮಹಾಸ್ವಾಮಿಗಳು, ಅಮೋಘಿಮಠದ ಶ್ರೀಗಳು ಉಪಸ್ಥಿತರಿದ್ದರು. ಹುಬ್ಬಳ್ಳಿ ಆಯುರ್ವೇದಿಕ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಬಿ. ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯರಾದ ಪಲ್ಲಣ್ಣನವರು ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ, ಡಾ. ಹರೀಶ ಕುಲಕರ್ಣಿ, ವ್ಹಿ.ಜಿ. ಪಡಗೇರಿ, ನಿಂಗಪ್ಪ ಬನ್ನಿ, ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ, ಗೋಪಾಲ ಪಡ್ನೀಸ್, ನಿಂಗಪ್ಪ ತಹಸೀಲ್ದಾರ, ಅನಿಲ ಕುಲಕರ್ಣಿ, ಎಂ.ಆರ್. ಪಾಟೀಲ, ಡಾ. ಮಂಗಸೂಳಿ, ಶಂಕ್ರಪ್ಪ ತಹಸೀಲ್ದಾರ ಹಾಗೂ ಮಂತ್ರಾಲಯ ಪಾದಯಾತ್ರಾ ಸಂಘದ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕೃಷ್ಣ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಡಿ.ಎಂ. ಪೂಜಾರ ವಂದಿಸಿದರು.

“ಸಮಾಜ ಸೇವೆಯ ಮನೋಭಾವ ಎಲ್ಲರಲ್ಲೂ ಬರೋದಿಲ್ಲ. ದಿ. ವೈದ್ಯ ಬಾಬುರಾವ್ ಕುಲಕರ್ಣಿ ಅವರು 60 ವರ್ಷಗಳಿಂದ ಯಾವುದೇ ಫಲಾಪೇಕ್ಷೆಯಿಲ್ಲದೆ ಅಸ್ತಮಾ ರೋಗಿಗಳಿಗೆ ಔಷಧಿ ನೀಡುತ್ತಿರುವುದು ನಿಜಕ್ಕೂ ಮಾದರಿಯ ಸೇವೆ”

ಕುಂದಗೋಳದ ಶ್ರೀ ಬಸವಣ್ಣಜ್ಜನವರು

“ಮೃಗಶಿರಾ ನಕ್ಷತ್ರದಲ್ಲಿ ನೀಡುವ ಈ ಔಷಧಿಯಿಂದ ಲಕ್ಷಾಂತರ ಜನರು ಗುಣಮುಖರಾಗಿದ್ದಾರೆ. ಇಲ್ಲಿನ ಜನಸ್ತೋಮವೇ ಅದರ ಮಹತ್ವಕ್ಕೆ ಸಾಕ್ಷಿ”

ಪಿಎಸ್‌ಐ ನಾಗರಾಜ ಗಡದ

ಸಚಿವ ಸ್ಥಾನಕ್ಕೆ ಜಿಎಸ್ ಪಾಟೀಲ್ ಪಟ್ಟು: ಗದಗದಲ್ಲಿ ಭರ್ಜರಿ ಶಕ್ತಿ ಪ್ರದರ್ಶನ!

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತ ಚರ್ಚೆ ತೀವ್ರವಾಗಿರುವ ಹೊತ್ತಲ್ಲೇ, ರೋಣ ಕ್ಷೇತ್ರದ ಶಾಸಕ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂಬ ಆಗ್ರಹ ಗದಗ ಜಿಲ್ಲೆಯಲ್ಲಿ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸೋಮವಾರ ನಗರದಲ್ಲಿ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉರುಳು ಸೇವೆ, ದೀಡ್ ನಮಸ್ಕಾರ ಹಾಕುವ ಮೂಲಕ ಭಾರೀ ಶಕ್ತಿ ಪ್ರದರ್ಶನ ನಡೆಸಿ ಪಕ್ಷದ ಹೈಕಮಾಂಡ್‌ಗೆ ಸ್ಪಷ್ಟ ಸಂದೇಶ ರವಾನಿಸಿದರು.

ನಗರದ ಭೂಮರೆಡ್ಡಿ ವೃತ್ತದಲ್ಲಿರುವ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಆರಂಭವಾದ ಈ ವಿಶೇಷ ಹರಕೆ ಕಾರ್ಯಕ್ರಮ, ವೆಂಕಟೇಶ ಚಿತ್ರಮಂದಿರ, ಎಪಿಎಂಸಿ ಮಹಾದ್ವಾರ ಮಾರ್ಗವಾಗಿ ವೀರೇಶ್ವರ ಪುಣ್ಯಾಶ್ರಮದವರೆಗೆ ಸಾಗಿತು. ಸುಮಾರು ಒಂದು ಕಿಲೋಮೀಟರ್‌ಗೂ ಅಧಿಕ ದೂರ ನಡೆದ ಉರುಳು ಸೇವೆ ಹಾಗೂ ದೀಡ್ ನಮಸ್ಕಾರ ರಾಜಕೀಯ ವಲಯದಲ್ಲಿ ಗಮನ ಸೆಳೆಯಿತು.

ಸುಡುವ ಬಿಸಿಲಿನಲ್ಲೇ ಯುವ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯುದ್ದಕ್ಕೂ ಉರುಳು ಸೇವೆ ಸಲ್ಲಿಸಿದರೆ, ವೀರೇಶ್ವರ ಪುಣ್ಯಾಶ್ರಮದ ಮಹಾದ್ವಾರದಿಂದ ನೂರಾರು ಮಹಿಳಾ ಕಾರ್ಯಕರ್ತೆಯರು ಭಕ್ತಿಯಿಂದ ದೀಡ್ ನಮಸ್ಕಾರ ಹಾಕಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ಸಿಗಲೆಂದು ಪ್ರಾರ್ಥಿಸಿದರು.

ನಮ್ಮ ನಾಯಕರಿಗೆ ಸಚಿವ ಸ್ಥಾನ ಸಿಗುವವರೆಗೂ ನಾವು ವಿಶ್ರಮಿಸುವುದಿಲ್ಲ. ಅವರ ಹಿರಿಯತನ ಹಾಗೂ ಅನುಭವಕ್ಕೆ ಹೈಕಮಾಂಡ್ ಸೂಕ್ತ ಗೌರವ ನೀಡಬೇಕು ಎಂದು ಅಭಿಮಾನಿಗಳ ಹರಕೆ ಹೊತ್ತುಕೊಂಡರು.

ಪುಟ್ಟರಾಜರ ಗದ್ದುಗೆಗೆ ವಿಶೇಷ ಪೂಜೆ

ಉರುಳು ಸೇವೆ ಹಾಗೂ ದೀಡ್ ನಮಸ್ಕಾರದ ಬಳಿಕ ವೀರೇಶ್ವರ ಪುಣ್ಯಾಶ್ರಮದ ಸಭಾಂಗಣದಲ್ಲಿ ಡಾ. ಪುಟ್ಟರಾಜ ಗವಾಯಿಗಳ ಪವಿತ್ರ ಗದ್ದುಗೆಗೆ ವಿಶೇಷ ಅಭಿಷೇಕ ಹಾಗೂ ಮಹಾಪೂಜೆ ನೆರವೇರಿಸಲಾಯಿತು. ತಮ್ಮ ನಾಯಕನಿಗೆ ಸಚಿವ ಸ್ಥಾನ ದೊರಕುವವರೆಗೆ ಹೋರಾಟ ಮುಂದುವರಿಸುವ ಸಂಕಲ್ಪವನ್ನು ಕಾರ್ಯಕರ್ತರು ವ್ಯಕ್ತಪಡಿಸಿದರು.

ಈ ವಿಶೇಷ ಹರಕೆ ಕಾರ್ಯಕ್ರಮದಲ್ಲಿ ರೋಣ ವಿಧಾನಸಭಾ ಕ್ಷೇತ್ರದ ರೋಣ, ನರೇಗಲ್ಲ, ಗಜೇಂದ್ರಗಡ ಹಾಗೂ ಮುಂಡರಗಿ ಮಂಡಳಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಹಿರಿಯ ಮುಖಂಡರಾದ ವೀರಣ್ಣ ಶೆಟ್ಟರ, ಶರಣಪ್ಪ ಬೆಟಗೇರಿ, ಡಿ.ಡಿ. ಮೋರನಾಳ, ಸಿದ್ದಣ್ಣ ಬಂಡಿ, ಪ್ರಭು ಮೇಟಿ, ಪರಶುರಾಮ ಅಳಗವಾಡಿ, ಗೋಣಿ ಬಸಪ್ಪ ಕೊರ್ಲಹಳ್ಳಿ, ಎಚ್.ಎಸ್. ಸೋಂಪುರ ಸೇರಿದಂತೆ ಸಾವಿರಾರು ಅಭಿಮಾನಿಗಳು ಉಪಸ್ಥಿತರಿದ್ದರು.

“ಜಿ.ಎಸ್. ಪಾಟೀಲರು ಕೇವಲ ರೋಣ ಕ್ಷೇತ್ರದ ನಾಯಕ ಅಲ್ಲ. ಇಡೀ ಜಿಲ್ಲೆಯ ಜನಸಾಮಾನ್ಯರ ಧ್ವನಿಯಾಗಿದ್ದಾರೆ. ತಳಮಟ್ಟದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ ಸೌಮ್ಯ ಸ್ವಭಾವದ ಹಿರಿಯ ನಾಯಕರಿಗೆ ಸಚಿವ ಸ್ಥಾನ ನೀಡಬೇಕು”

ಅಪ್ಪು ಗಿರಡ್ಡಿ

ಶರಣಗೌಡ ಪಾಟೀಲ ಸರ್ಜಾಪೂರ

ಜಿಲ್ಲೆಯ ಏಕೈಕ ಲಿಂಗಾಯತ ಶಾಸಕ

ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ಸಿಕ್ಕರೆ ಗದಗ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ವೀರಶೈವ ಲಿಂಗಾಯತ ಸಮುದಾಯಕ್ಕೆ ರಾಜಕೀಯವಾಗಿ ದೊಡ್ಡ ಬಲ ಸಿಗಲಿದೆ ಎಂದು ಕಾರ್ಯಕರ್ತರು ಅಭಿಪ್ರಾಯಪಟ್ಟರು. ಜಿಲ್ಲೆಯ ವೀರಶೈವ ಲಿಂಗಾಯತ ಸಮುದಾಯದಿಂದ ಆಯ್ಕೆಯಾಗಿರುವ ಏಕೈಕ ಕಾಂಗ್ರೆಸ್ ಶಾಸಕರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯ ಕೇಳಿ ಬಂತು.

ಸಸ್ಯಕಾಶಿ ನಿರ್ಮಾಣಕ್ಕೆ ನರೇಗಲ್ಲ ಪೊಲೀಸರ ಹೆಜ್ಜೆ

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಐಶ್ವರ್ಯ ನಾಗರಾಳ ಅವರ ನೇತೃತ್ವದಲ್ಲಿ ಸಿಬ್ಬಂದಿಯವರು ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪಿಎಸ್‌ಐ ಐಶ್ವರ್ಯ ನಾಗರಾಳ, ಸಾರ್ವಜನಿಕ ಸೇವೆಯಲ್ಲಿ ದಿನದ 24 ಗಂಟೆಯೂ ತೊಡಗಿರುವ ಪೊಲೀಸ್ ಸಿಬ್ಬಂದಿಗೆ ಉತ್ತಮ ಆರೋಗ್ಯ ಅತ್ಯಗತ್ಯ. ಶುದ್ಧ ಗಾಳಿ ಮತ್ತು ಆಮ್ಲಜನಕಕ್ಕಾಗಿ ಪರಿಸರ ಸಂರಕ್ಷಣೆ ಅವಶ್ಯವಾಗಿದ್ದು, ಠಾಣಾ ಆವರಣದಲ್ಲಿ ಸಸ್ಯಕಾಶಿ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು.
ನಮ್ಮ ಆರೋಗ್ಯ ಚೆನ್ನಾಗಿರಬೇಕೆಂದರೆ ನಮ್ಮ ಸುತ್ತಲಿನ ಪರಿಸರವೂ ಸ್ವಚ್ಛವಾಗಿರಬೇಕು ಎಂದು ಪಿಎಸ್‌ಐ ಐಶ್ವರ್ಯ ನಾಗರಾಳ ಹೇಳಿದರು.
ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ ಮಾತನಾಡಿ, ಪೊಲೀಸ್ ಇಲಾಖೆಯವರು ಸಸ್ಯೋದ್ಯಾನ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಎಸ್‌ಐ ಎಂ.ಆರ್. ಬಾರಕೇರ, ಆರ್.ಎಸ್. ಕಪ್ಪತ್ತನವರ, ಪಿ.ಕೆ. ದಾಸರ, ವಿ.ಎಸ್. ಗೋದಿಗನೂರ, ಬಿ.ಎಸ್. ಮಾಯಮ್ಮನವರ, ಯು.ಎಂ. ಬಂಗಾರಿ, ಮಂಜುನಾಥ ಮಾದರ, ರೋಷನ್ ಜಮೀರ, ಶಾಂತಕುಮಾರ ವಡ್ಡರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸರ್ಕಾರಿ ಶಾಲೆಗೆ ಸೇರಿಸಿ, ಮಕ್ಕಳ ಭವಿಷ್ಯ ಬೆಳಗಿಸಿ: ಡಿ.ಎನ್. ದೊಡ್ಡಮನಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿರುವ ಹಿನ್ನೆಲೆಯಲ್ಲಿ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಿ ಅವರ ಶೈಕ್ಷಣಿಕ ಪ್ರಗತಿಗೆ ಸಹಕರಿಸಬೇಕು ಎಂದು ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ನಂ.1ರ ಮುಖ್ಯೋಪಾಧ್ಯಾಯ ಡಿ.ಎನ್. ದೊಡ್ಡಮನಿ ಹೇಳಿದರು.

ಶನಿವಾರ ಎಸ್‌ಡಿಎಂಸಿ ಸಹಯೋಗದಲ್ಲಿ ಆಯೋಜಿಸಿದ್ದ ದಾಖಲಾತಿ ಆಂದೋಲನದ ಅಂಗವಾಗಿ ಮಕ್ಕಳೊಂದಿಗೆ ಪ್ರಭಾತ ಫೇರಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ, ಸಮವಸ್ತ್ರ, ಕ್ಷೀರಭಾಗ್ಯ, ಪಠ್ಯಪುಸ್ತಕ ಸೇರಿದಂತೆ ಎಲ್ಲ ಸೌಲಭ್ಯಗಳು ಉಚಿತವಾಗಿ ದೊರೆಯುತ್ತಿವೆ. ಕಳೆದ ವರ್ಷದಿಂದ ಇಂಗ್ಲಿಷ್ ಮಾಧ್ಯಮ ಶಿಕ್ಷಣವೂ ಆರಂಭವಾಗಿದೆ ಎಂದು ಡಿ.ಎನ್. ದೊಡ್ಡಮನಿ ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಶಿರಬಡಗಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಕಲಿತ ಮಕ್ಕಳು ಇಂದು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಪಾಲಕರು ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಶಿಕ್ಷಕರಾದ ಎಸ್.ಎನ್. ಲಮಾಣಿ, ರಾಜೇಶ್ವರಿ ಅಡರಕಟ್ಟಿ, ಇ.ಎಚ್. ಪೀಟರ್, ಎಸ್.ಎಸ್. ಮಹಾಲಿಂಗಶೆಟ್ಟರ, ಸವಿತಾ ಬೋಮಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಎಚ್‌.ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡಿ: ಶಂಭು ಕಾಳೆ ಆಗ್ರಹ

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಹಿರಿಯ ರಾಜಕಾರಣಿ, ಸ್ವಚ್ಛ ಹಾಗೂ ಪಾರದರ್ಶಕ ಆಡಳಿತಗಾರರಾಗಿ ಗುರುತಿಸಿಕೊಂಡಿರುವ ಎಚ್‌.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಮುಖಂಡ ಶಂಭು ಕಾಳೆ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಎಚ್‌.ಕೆ. ಪಾಟೀಲ ಅವರು ಜನಪರ ಆಡಳಿತದ ಮೂಲಕ ರಾಜ್ಯ ರಾಜಕಾರಣದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದಾರೆ. ಅವರ ಅನುಭವ ಮತ್ತು ಹಿರಿತನ ಪರಿಗಣಿಸಿ ಮೊದಲ ಹಂತದಲ್ಲಿಯೇ ಸಚಿವ ಸ್ಥಾನ ನೀಡಬೇಕಿತ್ತು. ಆದರೆ ಅವಕಾಶ ನೀಡದಿರುವುದು ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ” ಎಂದು ಹೇಳಿದರು.

ಪರಿಶಿಷ್ಟ ಜಾತಿ ಸಮುದಾಯದವರು ಸದಾ ಎಚ್‌.ಕೆ. ಪಾಟೀಲ ಅವರ ಪರ ನಿಂತಿದ್ದು, ಅವರಿಗೆ ನ್ಯಾಯ ಸಿಗಲೇಬೇಕು ಎಂದು ಒತ್ತಾಯಿಸಿದರು.

ಹೊನ್ನಪ್ಪ ಮಾತನಾಡಿ, “ಮೊದಲ ಸಚಿವ ಸಂಪುಟ ರಚನೆಯಲ್ಲಿಯೇ ಎಚ್‌.ಕೆ. ಪಾಟೀಲ ಅವರ ಅನುಭವಕ್ಕೆ ತಕ್ಕ ಗೌರವ ಸಿಗಬೇಕಿತ್ತು. ಅವರು ಮುಖ್ಯಮಂತ್ರಿ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ನಾಯಕರು” ಎಂದು ಹೇಳಿದರು.

ಗುರುರಾಜ ಸಂಕಣ್ಣವರ ಮಾತನಾಡಿ, ಜೂನ್ 16ರಂದು ನಗರದ ಕಾಟನ್ ಸೇಲ್ಸ್ ಸೊಸೈಟಿಯಲ್ಲಿ ಶಾಂತಿಯುತ ಹೋರಾಟ ಹಮ್ಮಿಕೊಳ್ಳಲಾಗಿದೆ. ಸರ್ಕಾರ ತಕ್ಷಣ ಎಚ್‌.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಜೂನ್ 19ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಜುನಾಥ ಸಿಂಗಾಡಿ, ಮಲ್ಲಿಕಾರ್ಜುನ ಸಂಗಾಪುರ, ಯಲ್ಲಪ್ಪ ಒಂಟೆತ್ತಿನ, ಗಂಗಾಧರ ವಾಲಿಕಾರ ಹಾಗೂ ಗಣೇಶ ಕಟಿಗಿ ಉಪಸ್ಥಿತರಿದ್ದರು.

ಸಮ ಸಮಾಜಕ್ಕಾಗಿ ಸಿಂಹಾಸನವೇ ತೊರೆದ ಬೊಂತಾದೇವಿ: ರಾಜೇಶ್ವರಿ ಬಡ್ನಿ

ವಿಜಯಸಾಕ್ಷಿ ಸುದ್ದಿ, ಮುಳಗುಂದ: 12ನೇ ಶತಮಾನದಲ್ಲಿ ಆಗಿ ಹೋದ ಶಿವಶರಣೆಯರಲ್ಲಿ ಬೊಂತಾದೇವಿ ಪ್ರಮುಖರಾಗಿದ್ದು, ಸಮ ಸಮಾಜ ನಿರ್ಮಾಣಕ್ಕಾಗಿ ರಾಜ್ಯವನ್ನೇ ತೊರೆದು ದೀನದಲಿತರ, ಮಹಿಳೆಯರು ಹಾಗೂ ಬಡವರ ಸೇವೆಗೆ ತಮ್ಮ ಬದುಕನ್ನು ಸಮರ್ಪಿಸಿಕೊಂಡ ಮಹಾನ್ ಶರಣೆಯಾಗಿದ್ದಾರೆ ಎಂದು ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ರಾಜೇಶ್ವರಿ ಬಡ್ನಿ ಹೇಳಿದರು.

ಪಟ್ಟಣದ ಎಸ್.ಸಿ. ಬಡ್ನಿ ಅವರ ಮನೆಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ಆಯೋಜಿಸಿದ್ದ “ಮನೆಮನದಲ್ಲಿ ಶರಣ ಸಂಸ್ಕೃತಿ” ಕಾರ್ಯಕ್ರಮ ಹಾಗೂ ಅಧಿಕ ಮಾಸದ ಅಂಗವಾಗಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಶಿವಶರಣೆ ಬೊಂತಾದೇವಿ ಅವರ ವಚನ ನಿರೂಪಣೆ ಮಾಡಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರಮ್ಮ ಬಡ್ನಿ ವಹಿಸಿದ್ದರು. ಎಸ್.ಸಿ. ಬಡ್ನಿ, ಮಂಜುನಾಥ ಮಟ್ಟಿ, ಶೋಭಾ ಪಾಟೀಲ, ಪ್ರೇಮಾ ಬಡ್ನಿ, ಸುಮನ ಚವಡಿ, ಈರಣ್ಣ ದೊಟಿಕಲ್, ಮಹಾಂತೇಶ ನಪೂರಿಮಠ, ಶಿವಾನಂದ ಆಪ್ತಗೇರಿ ಸೇರಿದಂತೆ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.

ಬಡವರ ಬದುಕಿಗೆ ಬೆಳಕಾದ ಕಾಳಿದಾಸ ಸಂಸ್ಥೆ

ವಿಜಯಸಾಕ್ಷಿ ಸುದ್ದಿ, ಗದಗ: “ನಾವು ಹುಟ್ಟುಹಬ್ಬ ಆಚರಿಸುವಾಗ ಕೇಕ್ ಮೇಲಿನ ದೀಪವನ್ನು ಆರಿಸುತ್ತೇವೆ. ಆದರೆ ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯು ದೀಪವೇ ಇಲ್ಲದ ಗುಡಿಸಲಿನ ಮಕ್ಕಳ ಎದೆಯಲ್ಲಿ ಅಕ್ಷರದ ದೀಪ ಹಚ್ಚುವ ಮೂಲಕ ತನ್ನ 25ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ” ಎಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.

ನಗರದ ಕಳಸಾಪೂರ ರಸ್ತೆಯ ಬಯಲು ಆಂಜನೇಯ ದೇವಸ್ಥಾನ ಆವರಣದಲ್ಲಿ ಭಾನುವಾರ ನಡೆದ ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯ ರಜತ ಮಹೋತ್ಸವ ಅಂಗವಾಗಿ ವರ್ಷಪೂರ್ತಿ ನಡೆಯಲಿರುವ ಕಾರ್ಯಕ್ರಮಗಳಿಗೆ ಲ್ಯಾಪ್‌ಟಾಪ್‌ನಲ್ಲಿ ಗುಂಡಿಯನ್ನು ಒತ್ತುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಶಿಕ್ಷಣವೆಂದರೆ ಕೇವಲ ಶಾಲೆಯ ನಾಲ್ಕು ಗೋಡೆಗಳೊಳಗಿನ ಪಾಠವಲ್ಲ. ಈ ಜಗತ್ತೇ ದೊಡ್ಡ ಪಾಠಶಾಲೆ. ಅಮ್ಮನ ಜೋಗುಳ, ಅಪ್ಪನ ಬೈಗುಳ ಮನುಷ್ಯನ ಜೀವನವನ್ನು ಪರಿಪೂರ್ಣಗೊಳಿಸುತ್ತವೆ ಎಂದು ಶ್ರೀಗಳು ತಿಳಿಸಿದರು.

ಇಂದಿನ ಸಮಾಜದ ಮೌಲ್ಯಗಳ ಕುಸಿತದ ಕುರಿತು ಮಾತನಾಡಿದ ಅವರು, “ಸೂರ್ಯ, ಗಾಳಿ, ನೀರು, ಭೂಮಿ ಯಾವುದೂ ಕೆಟ್ಟಿಲ್ಲ. ಕೆಟ್ಟಿರುವುದು ಮನುಷ್ಯನ ಮನಸ್ಸು ಮಾತ್ರ” ಎಂದು ಅರ್ಥಪೂರ್ಣ ಸಂದೇಶ ನೀಡಿದರು.

ಹಿತ್ತಲಿನಲ್ಲಿರುವ ಒಂದು ಹೂವು ಬೆಳಿಗ್ಗೆ ಅರಳಿ ಸಂಜೆ ಬಾಡಿದರೂ ದೇವರ ಪಾದ ಸೇರಿ ತನ್ನ ಬದುಕು ಸಾರ್ಥಕ ಮಾಡಿಕೊಳ್ಳುತ್ತದೆ. ಅದೇ ರೀತಿ ಮನುಷ್ಯನ ಬದುಕಿಗೂ ಅರ್ಥಪೂರ್ಣ ಗುರಿ ಇರಬೇಕು ಎಂದು ಶ್ರೀಗಳು ಹೇಳಿದರು.

ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಮಾತನಾಡಿ, ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯು ರಜತ ಮಹೋತ್ಸವವನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೇ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ವಿಶಿಷ್ಟ ಸಂದೇಶ ನೀಡಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಡಾ. ಜಿ.ಬಿ. ಪಾಟೀಲ ನಿರೂಪಣೆ ಮಾಡಿದರು. ಎಸ್.ಜಿ. ಪಲ್ಲೇದ, ಬಿ.ಬಿ. ಬಾವಿಕಟ್ಟಿ, ಫಕೀರಪ್ಪ ಹೆಬಸೂರ, ಶಶಿಧರ ರೊಳ್ಳಿ, ಆರ್.ಡಿ. ಕಡ್ಲಿಕೊಪ್ಪ, ನೀಲಕಂಠ ಮರಡಿ, ವೈ.ಬಿ. ಬಾನಾಪೂರ, ಆರ್.ಎಂ. ನಿಂಬನಾಯ್ಕರ, ಎಸ್.ಡಿ. ಸಿಂಗಟಾಲಕೇರಿ, ಎಸ್.ಎಸ್. ಕರಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ದೇವರಾಜ ಅರಸು ಹಾಸ್ಟೆಲ್ ಆವರಣದಲ್ಲಿ ಶಶಿಧರ ರೊಳ್ಳಿ ಕುಟುಂಬದವರಿಂದ ಗವಿಸಿದ್ದೇಶ್ವರ ಶ್ರೀಗಳಿಗೆ ಪಾದಪೂಜೆ ಕಾರ್ಯಕ್ರಮ ನಡೆಯಿತು.

ಶಿವಮೊಗ್ಗದಲ್ಲಿ ಶಾಲಾ ವಾಹನಗಳ ದಿಢೀರ್ ತಪಾಸಣೆ; ಕುಡಿದು ಚಾಲನೆ ಮಾಡಿದ 7 ಚಾಲಕರ ವಿರುದ್ಧ ಪ್ರಕರಣ ದಾಖಲು

ಶಿವಮೊಗ್ಗ: ಜಿಲ್ಲೆಯಾದ್ಯಂತ ಸಂಚಾರಿ ಪೊಲೀಸರು ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಕರೆದೊಯ್ಯುವ ವಾಹನಗಳ ಮೇಲೆ ದಿಢೀರ್ ತಪಾಸಣೆ ನಡೆಸಿದ್ದಾರೆ.

ಈ ವೇಳೆ 7 ಚಾಲಕರು ಮದ್ಯ ಸೇವಿಸಿ ವಾಹನ ಚಾಲನೆ ಮಾಡಿರುವುದು ಪತ್ತೆಯಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ತಪಾಸಣೆಯ ವೇಳೆ ಒಟ್ಟು 457 ಶಾಲಾ ವಾಹನಗಳನ್ನು ಸಂಚಾರಿ ಠಾಣೆ ಪೊಲೀಸರು ತಡೆದು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕೆಲವು ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂಬಂಧಿತ ಚಾಲಕರ ವಿರುದ್ಧ ‘ಡ್ರಂಕ್ & ಡ್ರೈವ್’ ಪ್ರಕರಣ ದಾಖಲಿಸಲಾಗಿದ್ದು, ಅವರ ಚಾಲನಾ ಪರವಾನಗಿ (DL) ರದ್ದುಪಡಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸಂಚಾರಿ ಪೊಲೀಸರು ಪತ್ರ ಬರೆದಿದ್ದಾರೆ.

ಇದೇ ವೇಳೆ ವಾಹನಗಳ ಸುರಕ್ಷತೆಗೂ ವಿಶೇಷ ಗಮನ ನೀಡಿದ ಪೊಲೀಸರು, ವಿಮೆ, ಎಮಿಷನ್ ಹಾಗೂ ಫಿಟ್‌ನೆಸ್ ಸರ್ಟಿಫಿಕೇಟ್‌ಗಳನ್ನು ಕಡ್ಡಾಯವಾಗಿ ಚಾಲ್ತಿಯಲ್ಲಿ ಇಟ್ಟುಕೊಳ್ಳುವಂತೆ ವಾಹನ ಮಾಲೀಕರಿಗೆ ಸೂಚನೆ ನೀಡಿದ್ದಾರೆ.

ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಇಂತಹ ತಪಾಸಣೆಗಳನ್ನು ಮುಂದುವರಿಸುವುದಾಗಿ ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ರಾಜಕೀಯ ಜಿದ್ದಾಜಿದ್ದಿಗೆ ರಸ್ತೆಯೇ ಬಲಿಯಾಯಿತಾ?

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಸೂರಣಗಿ-ಬಾಲೆಹೊಸೂರ ಸಂಪರ್ಕಿಸುವ ಪಿಡಬ್ಲ್ಯೂಡಿ ಜಿಲ್ಲಾ ಮುಖ್ಯ ರಸ್ತೆ ಕಳೆದ ಎರಡು ದಶಕಗಳಿಂದ ಅಭಿವೃದ್ಧಿ ಕಾಣದೇ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ರಸ್ತೆ ದುಸ್ಥಿತಿಯಿಂದ ಬೇಸತ್ತ ಜನರು ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಕ್ಷ್ಮೇಶ್ವರದಿಂದ ಬಾಲೆಹೊಸೂರ ಮಾರ್ಗವಾಗಿ ಗುತ್ತಲ ಹಾಗೂ ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಡಾಂಬರ್‌ನ ಗುರುತುಗಳೇ ಕಾಣದಂತಾಗಿದೆ. ಮೊಣಕಾಲು ಆಳದ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ನಿತ್ಯ ಎದ್ದು-ಬಿದ್ದು ಸಾಗುವ ದುಸ್ಥಿತಿ ನಿರ್ಮಾಣವಾಗಿದೆ.

ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಕೆಸರುಮಯವಾಗುತ್ತಿದ್ದು, ವಾಹನಗಳು ಪಂಕ್ಚರ್ ಆಗುವುದು, ಜಾರಿ ಬಿದ್ದು ಆಸ್ಪತ್ರೆಗೆ ಸೇರುವುದು ಸಾಮಾನ್ಯ ಸಂಗತಿಯಾಗಿ ಬಿಟ್ಟಿದೆ. ಕೆಎಸ್‌ಆರ್‌ಟಿಸಿ ಚಾಲಕರು ಸಹ ಈ ಮಾರ್ಗದಲ್ಲಿ ಬಸ್ ಓಡಿಸಲು ಹಿಂದೇಟು ಹಾಕುತ್ತಿರುವುದರಿಂದ ಕೆಲ ದಿನ ಬಸ್ ಸಂಚಾರವೇ ಸ್ಥಗಿತಗೊಳ್ಳುವ ಪರಿಸ್ಥಿತಿ ಉಂಟಾಗಿದೆ.

ಈ ಭಾಗದಲ್ಲಿರುವ ಬಾಲೆಹೊಸೂರ ಮಠ, ಪ್ರಸಿದ್ಧ ಆಂಜನೇಯ ದೇವಸ್ಥಾನ, ಸರ್ಕಾರಿ ಆಸ್ಪತ್ರೆ, ಶಾಲೆ, ಬ್ಯಾಂಕ್ ಸೇರಿದಂತೆ ವಿವಿಧ ಸೇವೆಗಳಿಗೆ ಆಗಮಿಸುವ ಜನರು ರಸ್ತೆ ಸಮಸ್ಯೆಯಿಂದ ಪರದಾಡುತ್ತಿದ್ದಾರೆ.

7 ಕೋಟಿ ಮಂಜೂರು… ಟೆಂಡರ್ ಪೂರ್ಣ… ಕಾಮಗಾರಿ ಮಾತ್ರ ಶೂನ್ಯ!

ಗ್ರಾಮಸ್ಥರ ಹೋರಾಟ ಹಾಗೂ ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ಒಂದೂವರೆ ವರ್ಷದ ಹಿಂದೆಯೇ ರಸ್ತೆ ಅಭಿವೃದ್ಧಿಗೆ 7 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದ್ದರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ.

ರಾಜಕೀಯ ವೈಮನಸ್ಸು, ವೈಯಕ್ತಿಕ ಪ್ರತಿಷ್ಠೆ ಹಾಗೂ ಪ್ರಭಾವಿಗಳ ಒತ್ತಡದಿಂದ ಗುತ್ತಿಗೆದಾರ ಹಿಂದೆ ಸರಿದಿದ್ದಾನೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಬಳಿಕ ಮರು ಟೆಂಡರ್ ಪ್ರಕ್ರಿಯೆ ನಡೆದರೂ ಕಾಮಗಾರಿ ಆರಂಭದ ಸ್ಥಳ ಬದಲಾವಣೆ ಸೇರಿದಂತೆ ಹಲವು ತಾಂತ್ರಿಕ ಕಾರಣಗಳಿಂದ ವಿಳಂಬ ಮುಂದುವರಿದಿದೆ.

ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ರಸ್ತೆ ಸಮಸ್ಯೆ ಮತ್ತಷ್ಟು ಗಂಭೀರವಾಗಿದ್ದು, ಜನರ ನಿರೀಕ್ಷೆಯಂತೆ ಕಾಮಗಾರಿ ಆರಂಭವಾಗುತ್ತದೆಯೇ ಎಂಬ ಪ್ರಶ್ನೆ ಈಗ ಗ್ರಾಮೀಣ ಭಾಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮಳೆ ಬಂದರೆ ಕೆಸರು, ಬಿಸಿಲಾದರೆ ಧೂಳು..! ಲಕ್ಷ್ಮೇಶ್ವರ ನಿವಾಸಿಗಳ ಗೋಳು

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಹೊಸ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಕಲಾಂ ನಗರ, ಇಂದಿರಾ ನಗರ ಹಾಗೂ ಬಸವೇಶ್ವರ ನಗರ ಪ್ರದೇಶಗಳು ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ರಸ್ತೆ ಮತ್ತು ಚರಂಡಿಗಳಿಲ್ಲದೇ ನಿವಾಸಿಗಳು ಸಂಕಷ್ಟದ ಬದುಕು ನಡೆಸುವಂತಾಗಿದೆ.

ಮಳೆಯಾದರೆ ರಸ್ತೆಗಳು ಸಂಪೂರ್ಣ ಕೆಸರಿನ ಕೆರೆಯಾಗುತ್ತಿದ್ದು, ಸಂಚಾರ ದುಸ್ತರವಾಗುತ್ತಿದೆ. ಜೀವಭಯದಲ್ಲೇ ಜನರು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಾರು 25 ವರ್ಷಗಳಾದರೂ ಈ ಭಾಗದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಪರಿಣಾಮ, ಮಳೆ ನೀರು ರಸ್ತೆಗಳಲ್ಲಿ ನಿಂತು ಕೊಳಚೆ ವಾತಾವರಣ ಸೃಷ್ಟಿಯಾಗಿದ್ದು, ನಿವಾಸಿಗಳ ಆರೋಗ್ಯಕ್ಕೂ ಅಪಾಯ ಎದುರಾಗಿದೆ.

ಈ ಪ್ರದೇಶದಲ್ಲೇ ಶ್ರವಣ ನ್ಯೂನತೆಯುಳ್ಳ ಮಕ್ಕಳ ಶಾಲೆ, ಮಹಿಳಾ ವಸತಿ ನಿಲಯ ಹಾಗೂ ಕಲಾಂ ಶಾಲೆ ಇರುವುದರಿಂದ ವಿದ್ಯಾರ್ಥಿಗಳು ಪ್ರತಿದಿನ ಪರದಾಡುತ್ತ ಸಂಚರಿಸುವಂತಾಗಿದೆ. ಪೇಪರ್, ಹಾಲು ಹಾಗೂ ತರಕಾರಿ ವಿತರಕರು ಸಹ ಕೆಸರು ರಸ್ತೆಯಲ್ಲಿ ಜಾರಿ ಬೀಳುವ ಭೀತಿಯಲ್ಲೇ ಕೆಲಸ ನಿರ್ವಹಿಸುತ್ತಿದ್ದಾರೆ.

ರಸ್ತೆ ದುರಸ್ತಿ ಹಾಗೂ ಮೂಲ ಸೌಲಭ್ಯ ಕಲ್ಪಿಸುವಂತೆ ಹಲವು ಬಾರಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಸದ್ಯ ಕಲಾಂ ನಗರದ ರಸ್ತೆ ಪರಿಸ್ಥಿತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ಕನ್ನಡಿಯಂತಿದ್ದು, ಸ್ಥಳೀಯರು ತ್ವರಿತ ಅಭಿವೃದ್ಧಿ ಕಾಮಗಾರಿಗೆ ಆಗ್ರಹಿಸಿದ್ದಾರೆ.

error: Content is protected !!