Home Blog Page 57

ಶಬರಿಮಲೆ ಚಿನ್ನ ಕಳವು ಪ್ರಕರಣ: ನಟ ಜಯರಾಮ್ʼಗೆ ಇ.ಡಿ ನೋಟಿಸ್

0

ಕೇರಳ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ವಿಶೇಷ ತನಿಖಾ ದಳ (ಎಸ್ಐಟಿ) ವಿಚಾರಣೆಗೆ ಒಳಗಾಗಿರುವ ಹಿರಿಯ ನಟ ಹಾಗೂ ‘ಕಾಂತಾರ’ ಸಿನಿಮಾದಲ್ಲಿ ನಟಿಸಿರುವ ಜಯರಾಮ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ನೋಟಿಸ್ ಜಾರಿ ಮಾಡಿದೆ. ಮುಂದಿನ ಮಂಗಳವಾರ ಕೊಚ್ಚಿಯಲ್ಲಿರುವ ಇ.ಡಿ ವಲಯ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ಜತೆ ಜಯರಾಮ್ ಅವರ ಸಂಬಂಧದ ಕುರಿತು ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಇ.ಡಿ ಈ ನೋಟಿಸ್ ಜಾರಿ ಮಾಡಿದೆ. ಈಗಾಗಲೇ ಉನ್ನಿಕೃಷ್ಣನ್ ಪೊಟ್ಟಿಯನ್ನು ವಿಚಾರಣೆ ನಡೆಸುತ್ತಿರುವ ತನಿಖಾ ಸಂಸ್ಥೆ, ಈ ಹಿನ್ನೆಲೆಯಲ್ಲಿ ಜಯರಾಮ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಮುಂದಾಗಿದೆ.

ಈ ಹಿಂದೆ ಎಸ್ಐಟಿ ನಡೆಸಿದ ವಿಚಾರಣೆಯಲ್ಲಿ, ಉನ್ನಿಕೃಷ್ಣನ್ ಪೊಟ್ಟಿ ಜತೆ ಯಾವುದೇ ಹಣಕಾಸಿನ ವ್ಯವಹಾರ ಹೊಂದಿಲ್ಲ ಎಂದು ಜಯರಾಮ್ ಸ್ಪಷ್ಟಪಡಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿ ಜಯರಾಮ್ ಅವರನ್ನು ಅವರ ಚೆನ್ನೈ ನಿವಾಸದಲ್ಲಿ ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.

ವಿಚಾರಣೆಯ ವೇಳೆ, ಉನ್ನಿಕೃಷ್ಣನ್ ಪೊಟ್ಟಿ ಅವರೊಂದಿಗೆ ಶಬರಿಮಲೆ ದೇಗುಲದಲ್ಲಿ ಹಾಗೂ ಅವರ ಮನೆಯಲ್ಲಿ ನಡೆದ ಹಲವು ಪೂಜಾಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಕುರಿತು ಪ್ರಶ್ನಿಸಲಾಗಿತ್ತು. ಜೊತೆಗೆ, ಕೊಟ್ಟಾಯಂ ಜಿಲ್ಲೆಯ ಎಳಂಪಲ್ಲಿ ದೇವಸ್ಥಾನದಲ್ಲಿ ಬಾಗಿಲಿನ ಚೌಕಟ್ಟು (ಕಟ್ಟಿಲಪ್ಪಲಿ) ಪ್ರತಿಷ್ಠಾಪನೆ ಹಾಗೂ ಬಾಗಿಲಿನ ಫಲಕಗಳ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗಿ ಜಯರಾಮ್ ತಿಳಿಸಿದ್ದರು.

ಆದರೆ, ಪೊಟ್ಟಿ ಜತೆ ಯಾವುದೇ ರೀತಿಯ ಹಣಕಾಸು ವ್ಯವಹಾರ ನಡೆಸಿಲ್ಲ ಎಂದು ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಆಧಾರದ ಮೇಲೆ ಎಸ್ಐಟಿ ತನಿಖಾ ತಂಡ ಜಯರಾಮ್ ಅವರನ್ನು ಪ್ರಕರಣದಲ್ಲಿ ಸಾಕ್ಷಿಯಾಗಿ ಪರಿಗಣಿಸಿತ್ತು.

ಸಿದ್ದರಾಮಯ್ಯರೊಂದಿಗೆ ನಡೆದ ಮಾತುಕತೆ ಬಗ್ಗೆ ನನಗೆ ಸ್ಪಷ್ಟತೆ ಇದೆ: ಡಿಸಿಎಂ ಡಿಕೆ ಶಿವಕುಮಾರ್

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ತಾವು ಏನು ಮಾತನಾಡಿದ್ದೇವೆ ಎಂಬುದು ನನಗೆ ಸ್ಪಷ್ಟವಾಗಿದೆ. ನಾವು ಯಾವ ಮಾತನ್ನೂ ಕದ್ದುಮುಚ್ಚಿ ಮಾತನಾಡಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ದೆಹಲಿಗೆ ತೆರಳುವ ಮುನ್ನ ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೊಂದಲ ಬೇರೆಯವರಿಗೆ ಇರಬಹುದು, ಆದರೆ ನನಗೆ ಯಾವುದೇ ಗೊಂದಲ ಇಲ್ಲ. ನಾವು ನಮ್ಮ ವರಿಷ್ಠರೊಂದಿಗೆ ಚರ್ಚೆ ಮಾಡಿಕೊಂಡಿದ್ದೇವೆ. ಅನಾವಶ್ಯಕವಾಗಿ ಟೆನ್ಶನ್ ತೆಗೆದುಕೊಳ್ಳುವುದರಿಂದಾಗಲಿ, ಹೇಳಿಕೆ ನೀಡುವುದರಿಂದಾಗಲಿ ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದರು.

ನನ್ನ ಪರ ಅಥವಾ ವಿರುದ್ಧವಾಗಿ ಶಾಸಕರು ಹಾಗೂ ಸಚಿವರು ಹೇಳಿಕೆ ನೀಡುವುದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಮೌನ ಪಾಲಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚನೆ ನೀಡಿದ್ದಾರೆ. ಅದನ್ನು ಪಾಲಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಡಿಕೆಶಿ ಹೇಳಿದರು.

ಇನ್ನು ಅಸ್ಸಾಂ ಚುನಾವಣೆಗೆ ಸಂಬಂಧಿಸಿದಂತೆ ಇಂದು ಸಂಜೆ ಎಐಸಿಸಿ ನಾಯಕರು ನನ್ನನ್ನು ಚರ್ಚೆಗೆ ಕರೆದಿದ್ದಾರೆ. ಕೇರಳ ಪ್ರವಾಸ ಮುಗಿಸಿಕೊಂಡು ಇದೀಗ ಅಸ್ಸಾಂಗೆ ತೆರಳಲಿದ್ದೇನೆ ಎಂದು ತಿಳಿಸಿದರು.

ಗಂಡು ಮಗು ಬೇಕು ಎಂದು ಜಾತ್ರೆಯಲ್ಲಿ ಬಾಲಕನ ಕಿಡ್ಯ್ನಾಪ್:‌ ಇಬ್ಬರ ಬಂಧನ

0

ತುಮಕೂರು: ಜಾತ್ರೆಯ ಸಂಭ್ರಮದ ನಡುವೆ ನಡೆದಿದ್ದ ಮಗು ಅಪಹರಣ ಪ್ರಕರಣದಲ್ಲಿ ಶಿರಾ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಶಿರಾ ತಾಲ್ಲೂಕಿನ ಮಾಗೋಡು ಗ್ರಾಮದಲ್ಲಿ ನಡೆದ ಶ್ರೀರಂಗ ಜಾತ್ರಾ ಮಹೋತ್ಸವದ ವೇಳೆ ಅಪಹರಣಗೊಂಡಿದ್ದ ಎರಡುವರೆ ವರ್ಷದ ಗಂಡು ಮಗು, ಬೆಂಗಳೂರಿನ ಕೊರಮಂಗಲದಲ್ಲಿ ಪತ್ತೆಯಾಗಿದ್ದು, ಪ್ರಕರಣಕ್ಕೆ ಬೆಚ್ಚಿಬೀಳಿಸುವ ಟ್ವಿಸ್ಟ್ ಸಿಕ್ಕಿದೆ.

ಪೊಲೀಸರ ತನಿಖೆಯ ಪ್ರಕಾರ, ಆರೋಪಿ ಶಾಂತಮೇರಿ ಎಂಬ ಮಹಿಳೆಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳು ಇದ್ದರೂ, ಗಂಡು ಮಗು ಬೇಕೆಂಬ ದುರಾಸೆಯಿಂದ ಸಂಬಂಧಿ ನರಸಯ್ಯನೊಂದಿಗೆ ಸೇರಿ ಈ ಅಪಹರಣಕ್ಕೆ ಸಂಚು ರೂಪಿಸಿದ್ದಾಳೆ. ಜಾತ್ರೆಗೆ ಎರಡು ದಿನಗಳ ಮುಂಚಿತವಾಗಿಯೇ ತುಮಕೂರಿಗೆ ಬಂದಿದ್ದ ಆರೋಪಿಗಳು, ಪೂರ್ವ ಯೋಜನೆಯೊಂದಿಗೆ ಜಾತ್ರೆಯಲ್ಲಿ ಮಗುವನ್ನು ಅಪಹರಿಸಿದ್ದಾರೆ ಎನ್ನಲಾಗಿದೆ.

ಜಾತ್ರಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಚಲನವಲನ ಪತ್ತೆ ಹಚ್ಚಿದ ಪೊಲೀಸರು, ಆಂಧ್ರ ಪ್ರದೇಶ ಸೇರಿದಂತೆ ವಿವಿಧೆಡೆ ಶೋಧ ನಡೆಸಿದರು. ಕೊನೆಗೆ ಬೆಂಗಳೂರು ಕೊರಮಂಗಲದಲ್ಲಿರುವ ಶಾಂತಮೇರಿ ನಿವಾಸದಲ್ಲಿ ಮಗುವನ್ನು ಪತ್ತೆ ಮಾಡಿ ರಕ್ಷಿಸಿದ್ದಾರೆ. ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

ಈ ಘಟನೆ 21ನೇ ಶತಮಾನದಲ್ಲೂ ಸಮಾಜದಲ್ಲಿ ಜೀವಂತವಾಗಿರುವ ಲಿಂಗಭೇದ ಮನೋಭಾವದ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

ರಾಜ್ಯಾದ್ಯಂತ ಒಣಹವೆ ಮುಂದುವರಿಕೆ: ಕರಾವಳಿ-ಉತ್ತರ ಒಳನಾಡಿನಲ್ಲಿ ತೀವ್ರ ಚಳಿ, ಬೆಂಗಳೂರಿನಲ್ಲಿ 17 ಡಿಗ್ರಿಗೆ ಇಳಿದ ತಾಪಮಾನ

0

ಬೆಂಗಳೂರು: ಕಳೆದ ಹಲವು ದಿನಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಆವರಿಸಿಕೊಂಡಿದ್ದು, ಈ ವಾತಾವರಣ ಇನ್ನೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ತೀವ್ರ ಚಳಿಯೊಂದಿಗೆ ಒಣಹವೆ ಮುಂದುವರಿಯಲಿದ್ದು, ದಕ್ಷಿಣ ಒಳನಾಡಿನಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಇಲಾಖೆ ತಿಳಿಸಿದೆ.

ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಹಲವು ದಿನಗಳಿಂದ ಒಣಹವೆಯ ವಾತಾವರಣ ಮುಂದುವರಿದಿದ್ದು, ಇಂದು ಕೂಡ ಇದೇ ಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಒಣಹವೆಯ ವಾತಾವರಣ ಕಂಡುಬರಲಿದೆ. ದಕ್ಷಿಣ ಒಳನಾಡಿನ ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಲ್ಲಿಯೂ ಒಣಹವೆ ಮುಂದುವರಿಯಲಿದೆ.

ಇಂದು ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಳಿಯ ವಾತಾವರಣ ಹೆಚ್ಚಿರುವುದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಚಳಿಯಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಎಚ್ಚರಿಕೆ ವಹಿಸಬೇಕು. ಬೆಚ್ಚಗಿನ ಹೊದಿಕೆ ಬಳಸುವುದು, ಬಿಸಿ ಆಹಾರ ಸೇವನೆ ಹಾಗೂ ಸಮತೋಲನ ಆಹಾರಕ್ಕೆ ಆದ್ಯತೆ ನೀಡುವಂತೆ ವೈದ್ಯರು ಹಾಗೂ ಹವಾಮಾನ ಇಲಾಖೆ ಸೂಚನೆ ನೀಡಿವೆ.

ವಿಧಾನಸೌಧದಲ್ಲೇ ಬಂಗಾರದ ಕಳ್ಳತನ: ಪ್ರಭಾವಿ ಸಚಿವರ ಕಚೇರಿಯಲ್ಲಿ ಲಕ್ಷಾಂತರ ರೂ. ನಗದು–ಚಿನ್ನ ಲೂಟಿ

0

ಬೆಂಗಳೂರು: ರಾಜ್ಯದ ಆಡಳಿತ ಶಕ್ತಿ ಕೇಂದ್ರವಾದ ವಿಧಾನಸೌಧದ ಭದ್ರತಾ ವ್ಯವಸ್ಥೆ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಸದಾ ಬಿಗಿ ಪೊಲೀಸ್ ಬಂದೋಬಸ್ತ್ ಇರುವ ವಿಧಾನಸೌಧದಲ್ಲೇ, ಪ್ರಭಾವಿ ಸಚಿವರೊಬ್ಬರ ಕಚೇರಿಯಲ್ಲಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂಪಾಯಿ ನಗದು ಹಾಗೂ ನೂರಾರು ಗ್ರಾಂ ಚಿನ್ನಾಭರಣ ಕಳ್ಳರ ಪಾಲಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ವಿಧಾನಸೌಧದ ಕಚೇರಿಯಲ್ಲಿ ಈ ಕಳ್ಳತನ ನಡೆದಿದ್ದು, ಸಚಿವರನ್ನು ಭೇಟಿ ಮಾಡಲು ಬಂದಿದ್ದ ನವೀನ್ ಎಂಬುವರು ತಮ್ಮ ಬ್ಯಾಗ್ ಅನ್ನು ಕಚೇರಿಯಲ್ಲೇ ಮರೆತು ಹೋಗಿದ್ದರು. ಆ ಬ್ಯಾಗ್‌ನಲ್ಲಿ ಸುಮಾರು 300 ಗ್ರಾಂ ಚಿನ್ನಾಭರಣ ಹಾಗೂ 1.5 ಲಕ್ಷ ರೂಪಾಯಿ ನಗದು ಇತ್ತು ಎನ್ನಲಾಗಿದೆ.

ಮಾರನೇ ದಿನ ಬ್ಯಾಗ್ ನಾಪತ್ತೆಯಾಗಿರುವುದನ್ನು ಗಮನಿಸಿದ ನವೀನ್, ತಕ್ಷಣವೇ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಡಿಪಿಎಆರ್ ವಿಭಾಗದ ಡಿ–ಗ್ರೂಪ್ ನೌಕರನೊಬ್ಬ ಬ್ಯಾಗ್ ತೆಗೆದುಕೊಂಡು ಹೋಗುತ್ತಿರುವುದು ಪತ್ತೆಯಾಗಿದೆ. ಇದರ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.

ಬೀದರ್ ಜಿಲ್ಲೆಯಲ್ಲಿ 12ನೇ ಶತಮಾನದ ಶಿಲಾಶಾಸನ–ಶಿಲ್ಪ ಪತ್ತೆ: ವೈಜ್ಞಾನಿಕ ಸಂಶೋಧನೆಗೆ ಆಗ್ರಹ

0

ಬೀದರ್: ಐತಿಹಾಸಿಕ ಲಕ್ಕುಂಡಿ ಹಾಗೂ ಬಳ್ಳಾರಿಯಲ್ಲಿ ನಿಧಿ ಮತ್ತು ಶಿಲಾಶಾಸನಗಳು ಪತ್ತೆಯಾಗಿ ರಾಜ್ಯದ ಗಮನ ಸೆಳೆದ ಬೆನ್ನಲ್ಲೇ, ಇದೀಗ ಬೀದರ್ ಜಿಲ್ಲೆಯಲ್ಲೂ ಅಪರೂಪದ ಐತಿಹಾಸಿಕ ಪತ್ತೆಗಳು ಬೆಳಕಿಗೆ ಬಂದಿವೆ. ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಪ್ರಾಚೀನ ಶಿಲಾಶಾಸನಗಳು, ಶಿವಲಿಂಗಗಳು ಹಾಗೂ ಸರ್ಪ ರೂಪದ ಶಿಲ್ಪಗಳು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಕುತೂಹಲ ಮೂಡಿಸಿದೆ.

ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾವೇಶದ ಅಡುಗೆ ತಯಾರಿಗಾಗಿ ಭವಾನಿ ದೇವಸ್ಥಾನದ ಹಿಂಭಾಗದ ಜಾಗವನ್ನು ಸ್ವಚ್ಛಗೊಳಿಸುವ ವೇಳೆ ಈ ಪುರಾತನ ಅವಶೇಷಗಳು ಪತ್ತೆಯಾಗಿವೆ. ಐದು ಹೆಡೆಯ ಅಪರೂಪದ ನಾಗಮೂರ್ತಿ, ನಾಗ ಸರ್ಪದ ವಿಗ್ರಹಗಳು ಹಾಗೂ ಶಿಲಾಶಾಸನಗಳು ಭೂಗರ್ಭದಿಂದ ಹೊರಬಂದಿವೆ.

ಗ್ರಾಮಸ್ಥರ ಪ್ರಕಾರ, 12ನೇ ಶತಮಾನದ ಚಾಲುಕ್ಯರ ಕಾಲದಲ್ಲಿ ಇಲ್ಲಿ ಸುಮಾರು 108 ದೇವಸ್ಥಾನಗಳು ಒಂದೇ ಪ್ರದೇಶದಲ್ಲಿ ಇದ್ದವು ಎಂಬ ಪ್ರತೀತಿ ಇದೆ. ಈ ಹಿನ್ನೆಲೆಯಲ್ಲಿ ತಕ್ಷಣ ಪುರಾತತ್ವ ಇಲಾಖೆಯಿಂದ ವೈಜ್ಞಾನಿಕ ಸಂಶೋಧನೆ ನಡೆಸಬೇಕು ಎಂದು ಸರ್ಕಾರವನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅಯೋಧ್ಯೆ ರಾಮ ಮಂದಿರ ದಾಳಿ ಸಂಚು ಕೇಸ್‌ಗೆ ಶಾಕಿಂಗ್ ಟ್ವಿಸ್ಟ್: ಬಂಧಿತ ಆರೋಪಿ ಅಬ್ದುಲ್ ರೆಹಮಾನ್ ಜೈಲಿನಲ್ಲಿ ಹತ್ಯೆ

0

ಲಕ್ನೋ: ಅಯೋಧ್ಯೆಯ ರಾಮ ಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಆರೋಪಿಯೊಬ್ಬ ಫರಿದಾಬಾದ್ ಜೈಲಿನಲ್ಲೇ ಹತ್ಯೆಯಾಗಿರುವ ಘಟನೆ ವರದಿಯಾಗಿದೆ. ಅಬ್ದುಲ್ ರೆಹಮಾನ್ ಎಂಬ 20 ವರ್ಷದ ಆರೋಪಿಯನ್ನು ಜೈಲಿನಲ್ಲಿದ್ದ ಸಹ ಕೈದಿ ಅರುಣ್ ಚೌಧರಿ ಹರಿತವಾದ ವಸ್ತುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.

ಭಾನುವಾರ ಅಬ್ದುಲ್ ರೆಹಮಾನ್ ಮತ್ತು ಅರುಣ್ ಚೌಧರಿ ನಡುವೆ ಜಗಳ ನಡೆದಿದ್ದು, ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ರಾತ್ರಿ 8 ಗಂಟೆ ಸುಮಾರಿಗೆ ಅರುಣ್ ಚೌಧರಿ ರೆಹಮಾನ್‌ನ ತಲೆಗೆ ಹರಿತವಾದ ವಸ್ತುವಿನಿಂದ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ರೆಹಮಾನ್‌ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.

ಘಟನೆ ಸಂಬಂಧ ಜೈಲು ಆಡಳಿತ ಹಾಗೂ ಪೊಲೀಸ್ ಇಲಾಖೆ ತನಿಖೆಗೆ ಆದೇಶಿಸಿದ್ದು, ಜೈಲಿನ ಭದ್ರತಾ ವ್ಯವಸ್ಥೆಗಳ ಮೇಲೂ ಪರಿಶೀಲನೆ ನಡೆಸಲಾಗುತ್ತಿದೆ.

ಬನ್ನೇರುಘಟ್ಟ ರಸ್ತೆಯ ಪ್ಲಾಸ್ಟಿಕ್ ಗೋಡೌನ್‌ಗೆ ಭಾರೀ ಬೆಂಕಿ: ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮ

0

ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ದೊಡ್ಡಕಮ್ಮನಹಳ್ಳಿ ಪ್ರದೇಶದಲ್ಲಿರುವ ಪ್ಲಾಸ್ಟಿಕ್ ಗೋಡೌನ್‌ಗೆ ಬೆಂಕಿ ತಗುಲಿ, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ. ಸೋಮವಾರ ಮಧ್ಯರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.

ಘಟನೆ ನಡೆದ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಬೆಂಕಿಯ ತೀವ್ರತೆಯಿಂದಾಗಿ ಇನ್ನೂ ಸಂಪೂರ್ಣವಾಗಿ ಹತೋಟಿಗೆ ಬಂದಿಲ್ಲ ಎಂದು ತಿಳಿದುಬಂದಿದೆ.

ಪ್ಲಾಸ್ಟಿಕ್ ಗೋಡೌನ್ ಸಮೀಪದಲ್ಲೇ ಗ್ಯಾಸ್ ಸಿಲಿಂಡರ್ ಗೋಡೌನ್ ಇದ್ದುದರಿಂದ, ಬೆಂಕಿ ಅತ್ತ ವ್ಯಾಪಿಸಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಸಮಯಕ್ಕೆ ಸರಿಯಾಗಿ ಕೈಗೊಂಡ ಕ್ರಮಗಳಿಂದ ದೊಡ್ಡ ದುರಂತವೊಂದು ತಪ್ಪಿದೆ.

ಮೈಸೂರು ಸ್ಯಾಂಡಲ್ ಸೋಪ್‌ಗೆ ನವ ರೂಪ: ಕೆಎಸ್‌ಡಿಎಲ್ ಉತ್ಪನ್ನಗಳಿಗೆ ತಮನ್ನಾ ಭಾಟಿಯಾ ಬ್ರ್ಯಾಂಡ್ ಅಂಬಾಸಿಡರ್

ಬೆಂಗಳೂರು: ಶತಮಾನಕ್ಕೂ ಮೀರಿದ ಭವ್ಯ ಪರಂಪರೆ ಹೊಂದಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ–ಕೆಎಸ್‌ಡಿಎಲ್ ಸಂಸ್ಥೆ ತನ್ನ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಎರಡು ವರ್ಷಗಳ ಕಾಲ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಂಡಿದೆ. ಮಂಗಳವಾರದಿಂದ ಅವರ ಜಾಹೀರಾತು ಮತ್ತು ಪ್ರಚಾರ ಚಟುವಟಿಕೆಗಳು ಅಧಿಕೃತವಾಗಿ ಆರಂಭವಾಗಲಿವೆ.

ಈ ಹಿನ್ನೆಲೆಯಲ್ಲಿ ಮೈಸೂರು ಸ್ಯಾಂಡಲ್ ಸೋಪನ್ನು ನವ ವಿನ್ಯಾಸದೊಂದಿಗೆ ಬಿಡುಗಡೆ ಮಾಡಲಾಗುತ್ತಿದ್ದು, ಶವರ್ ಜೆಲ್, ಟಾಲ್ಕಂ ಪೌಡರ್, ಹ್ಯಾಂಡ್ ವಾಶ್, ಅಗರಬತ್ತಿ, ಸಾಂಬ್ರಾಣಿ, ಧೂಪ, ಮಿಲೆನಿಯಂ ಸೋಪ್ ಸೇರಿದಂತೆ ಸಂಸ್ಥೆಯ 57 ಉತ್ಕೃಷ್ಟ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆ ಇದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಪ್ರಚಾರ ರಾಯಭಾರಿಯಾಗಿರುವ ಅವಧಿಯಲ್ಲಿ ತಮನ್ನಾ ಭಾಟಿಯಾ ಅವರು ಇದೇ ರೀತಿಯ ಖಾಸಗಿ ಕಂಪನಿಗಳ ಉತ್ಪನ್ನಗಳಿಗೆ ರೂಪದರ್ಶಿಯಾಗಿ ಕಾಣಿಸಿಕೊಳ್ಳುವುದಿಲ್ಲ ಎಂಬ ಷರತ್ತು ವಿಧಿಸಲಾಗಿದೆ. ವಿಜಯಪುರ ಮತ್ತು ಡಾಬಸ್‌ಪೇಟೆ ಕೈಗಾರಿಕಾ ಪ್ರದೇಶಗಳಲ್ಲಿ ಹೊಸ ಉತ್ಪಾದನಾ ಘಟಕಗಳನ್ನು ಆರಂಭಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ರಫ್ತು ವಹಿವಾಟನ್ನು 25–30 ಕೋಟಿ ರೂಪಾಯಿಯಿಂದ ದ್ವಿಗುಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ.

ಇನ್ನು, ಕೆಎಸ್‌ಡಿಎಲ್ ಸಂಸ್ಥೆಯ ಅಧ್ಯಕ್ಷ ಸಿ.ಎಸ್. ಅಪ್ಪಾಜಿ ನಾಡಗೌಡ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ ಅವರು, ದೆಹಲಿ ಮತ್ತು ಮಧ್ಯ ಭಾರತದ ಮಾರುಕಟ್ಟೆ ವಿಸ್ತರಣೆಯೊಂದಿಗೆ 2025–26ರ ವೇಳೆಗೆ ಸಂಸ್ಥೆಯ ವಹಿವಾಟು 2,000 ಕೋಟಿ ರೂ. ತಲುಪುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ತುಮಕೂರಿನಲ್ಲಿ ಮದುವೆ ಮಂಟಪದಲ್ಲೇ ಟ್ವಿಸ್ಟ್: ಮೊದಲ ಪತ್ನಿ ಎಂಟ್ರಿ ಬಳಿಕ ವಧುವಿಂದಲೂ ವರನ ವಿರುದ್ಧ ದೂರು

0

ತುಮಕೂರು: ಮೊದಲ ಪತ್ನಿಯ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ ಮತ್ತೊಂದು ಮದುವೆಗೆ ಮುಂದಾಗಿದ್ದ ವರನಿಗೆ ಮದುವೆ ಮಂಟಪದಲ್ಲೇ ಭಾರೀ ಶಾಕ್ ಎದುರಾಗಿದೆ. ಮಂಟಪದಲ್ಲಿ ನಡೆದ ಹೈಡ್ರಾಮಾ ನೇರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.

ತುಮಕೂರಿನ ಎಡೆಯೂರು ದೇವಸ್ಥಾನದ ಸಮೀಪದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಬೇಕಿತ್ತು. ಮದುವೆ ಮಂಟಪದಲ್ಲಿ ಇನ್ನೇನು ಮದುಮಗ ಹರಿಪ್ರಸಾದ್ ವಧುವಿಗೆ ತಾಳಿ ಕಟ್ಟಬೇಕಿದ್ದ ಕ್ಷಣದಲ್ಲೇ, ಆತನ ಮೊದಲ ಪತ್ನಿ ಲೇಪಾಕ್ಷಿ ಮಂಟಪಕ್ಕೆ ಎಂಟ್ರಿ ನೀಡಿ ರಂಪಾಟ ನಡೆಸಿ ಮದುವೆಯನ್ನು ನಿಲ್ಲಿಸಿದ್ದಳು.

ಈ ಘಟನೆಯ ಬಳಿಕ ಥಂಡ ಹೊಡೆದಿದ್ದ ಹರಿಪ್ರಸಾದ್‌ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಎರಡನೇ ಮದುವೆಗೆ ಹಸೆಮಣೆ ಏರಿದ್ದ ಮಂಡ್ಯ ಮೂಲದ ಯುವತಿ ಕೂಡ ಹರಿಪ್ರಸಾದ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಮೊದಲ ಮದುವೆ ವಿಚಾರವನ್ನು ಮರೆಮಾಚಿ, ಮದುವೆಗೆಂದು ಲಕ್ಷ ಲಕ್ಷ ಹಣ ಹಾಗೂ ಚಿನ್ನಾಭರಣ ಪಡೆದುಕೊಂಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಅಮೃತೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ವಂಚನೆ ಪ್ರಕರಣವನ್ನು ಯುವತಿಯ ಸ್ವಂತ ಜಿಲ್ಲೆ ಮಂಡ್ಯದಲ್ಲಿ ದಾಖಲಿಸುವಂತೆ ಪೊಲೀಸರು ಸೂಚಿಸಿದ್ದಾರೆ.

error: Content is protected !!