Home Blog Page 60

ತಾಮ್ರದ ದರದಲ್ಲಿ ಭರ್ಜರಿ ಏರಿಕೆ; LMEಯಲ್ಲಿ ಹೊಸ ಸಾರ್ವಕಾಲಿಕ ದಾಖಲೆ!

0

ಲಂಡನ್: ಜಾಗತಿಕ ಲೋಹ ಮಾರುಕಟ್ಟೆಯಲ್ಲಿ ತಾಮ್ರದ ಬೆಲೆ ಹೊಸ ದಾಖಲೆ ನಿರ್ಮಿಸಿದೆ.

ಲಂಡನ್ ಮೆಟಲ್ ಎಕ್ಸ್‌ಚೇಂಜ್‌ನಲ್ಲಿ (LME) ತಾಮ್ರದ ಬೆಲೆ ಪ್ರತಿ ಮೆಟ್ರಿಕ್ ಟನ್‌ಗೆ 14,533 ಡಾಲರ್ ತಲುಪಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟ ದಾಖಲಿಸಿದೆ.

ಕಳೆದ 12 ತಿಂಗಳಲ್ಲಿ ತಾಮ್ರದ ಬೆಲೆಯಲ್ಲಿ ಜಾಗತಿಕವಾಗಿ ಸುಮಾರು ಶೇ.47ರಷ್ಟು ಏರಿಕೆ ಕಂಡುಬಂದಿದೆ. ತಾಮ್ರದ ಬೇಡಿಕೆ ಹೆಚ್ಚುತ್ತಿರುವುದು ಹಾಗೂ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವೇ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ಬೆಲೆ ಏರಿಕೆಗೆ ಪ್ರಮುಖ ಕಾರಣಗಳೇನು?

ಅಮೆರಿಕದ ಆಮದು ಸುಂಕದ ಭೀತಿ: ರೀಫೈನ್ಡ್ ಕಾಪರ್ ಆಮದಿನ ಮೇಲೆ ಅಮೆರಿಕ ಸರ್ಕಾರ ಹೆಚ್ಚುವರಿ ಸುಂಕ ವಿಧಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಜಾಗತಿಕ ಪೂರೈಕೆದಾರರು ಹೆಚ್ಚಿನ ಪ್ರಮಾಣದ ತಾಮ್ರವನ್ನು ಅಮೆರಿಕಕ್ಕೆ ರವಾನಿಸುತ್ತಿದ್ದಾರೆ. ಇದರಿಂದ ಇತರ ಮಾರುಕಟ್ಟೆಗಳಲ್ಲಿ ತಾಮ್ರದ ಲಭ್ಯತೆ ಕಡಿಮೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಎಐ ಮತ್ತು ಡೇಟಾ ಸೆಂಟರ್‌ಗಳ ಬೇಡಿಕೆ: ಕೃತಕ ಬುದ್ಧಿಮತ್ತೆ (AI) ಆಧಾರಿತ ಡೇಟಾ ಸೆಂಟರ್‌ಗಳ ನಿರ್ಮಾಣ, ವಿದ್ಯುತ್ ಗ್ರಿಡ್‌ಗಳ ವಿಸ್ತರಣೆ, ಎಲೆಕ್ಟ್ರಿಕ್ ವಾಹನಗಳು (EV) ಹಾಗೂ ನವೀಕರಿಸಬಹುದಾದ ಇಂಧನ ಯೋಜನೆಗಳ ಹೆಚ್ಚಳದಿಂದ ತಾಮ್ರದ ಬೇಡಿಕೆ ಗಣನೀಯವಾಗಿ ಹೆಚ್ಚಿದೆ.

ಗಣಿ ಉತ್ಪಾದನೆಯಲ್ಲಿ ಕುಸಿತ: ಹೊಸ ತಾಮ್ರದ ಗಣಿಗಾರಿಕೆ ಯೋಜನೆಗಳು ವಿಳಂಬವಾಗಿರುವುದು ಮತ್ತು ಕೆಲವು ಪ್ರಮುಖ ಗಣಿಗಳಲ್ಲಿ ಉತ್ಪಾದನೆ ಕುಸಿದಿರುವುದರಿಂದ ಜಾಗತಿಕ ಪೂರೈಕೆ ಮೇಲೆ ಒತ್ತಡ ಉಂಟಾಗಿದೆ. ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರ ಹೆಚ್ಚುತ್ತಿರುವುದು ಬೆಲೆ ಏರಿಕೆಗೆ ಮತ್ತಷ್ಟು ಕಾರಣವಾಗಿದೆ.

ಭಾರತದ ಮಾರುಕಟ್ಟೆ ಮೇಲೂ ಪರಿಣಾಮ:

ಜಾಗತಿಕ ಮಾರುಕಟ್ಟೆಯಲ್ಲಿ ತಾಮ್ರದ ಬೆಲೆ ಏರಿಕೆಯ ಪರಿಣಾಮ ಭಾರತೀಯ ಮಾರುಕಟ್ಟೆಯಲ್ಲೂ ಕಂಡುಬಂದಿದೆ. ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಕಾಪರ್ ಕಂಪನಿಯ ಷೇರು ಮೌಲ್ಯ ಶೇ.5ಕ್ಕಿಂತ ಹೆಚ್ಚು ಏರಿಕೆ ಕಂಡಿದೆ.

ಇನ್ನು, ಭಾರತದ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ತಾಮ್ರದ ಫ್ಯೂಚರ್ಸ್ ಬೆಲೆ ಕೆಜಿಗೆ ₹1,400ರ ಸಮೀಪ ತಲುಪಿದೆ. ರೂಪಾಯಿ ಮೌಲ್ಯದಲ್ಲಿ ಸ್ಥಿರತೆ ಇರುವುದರಿಂದ ಜಾಗತಿಕ ಮಾರುಕಟ್ಟೆಗೆ ಹೋಲಿಸಿದರೆ ದೇಶೀಯ ಬೆಲೆ ಏರಿಕೆಯ ಪ್ರಮಾಣ ಕೊಂಚ ನಿಯಂತ್ರಣದಲ್ಲಿದೆ ಎನ್ನಲಾಗಿದೆ.

ತಾಮ್ರವು ವಿದ್ಯುತ್ ಉಪಕರಣಗಳು, ಸೆಮಿಕಂಡಕ್ಟರ್‌ಗಳು, ವಾಹನ ತಯಾರಿಕೆ ಮತ್ತು ಎಲೆಕ್ಟ್ರಾನಿಕ್ಸ್ ಉದ್ಯಮಗಳಲ್ಲಿ ಪ್ರಮುಖ ಕಚ್ಚಾ ವಸ್ತುವಾಗಿದೆ. ಹೀಗಾಗಿ ತಾಮ್ರದ ಬೆಲೆ ಇದೇ ರೀತಿ ಏರಿಕೆಯಾಗುತ್ತಿದ್ದರೆ, ಮುಂದಿನ ದಿನಗಳಲ್ಲಿ ಈ ಕ್ಷೇತ್ರಗಳ ತಯಾರಿಕಾ ವೆಚ್ಚವೂ ಹೆಚ್ಚಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಟ್ರಾಲಿ ಬ್ಯಾಗ್‌ನಲ್ಲಿ 180 ನಕ್ಷತ್ರ ಆಮೆ ಸಾಗಾಟ; ಓರ್ವ ಅರೆಸ್ಟ್!

0

ಬೆಂಗಳೂರು: ಟ್ರಾಲಿ ಬ್ಯಾಗ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳನ್ನು ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ನಗರದ ಗಾಂಧಿನಗರದಲ್ಲಿ ನಡೆದಿದೆ.

ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಡಿಆರ್‌ಐ ಅಧಿಕಾರಿಗಳು, ಟ್ರಾಲಿ ಬ್ಯಾಗ್‌ನಲ್ಲಿ ನಕ್ಷತ್ರ ಆಮೆಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿಯು ನಕ್ಷತ್ರ ಆಮೆಗಳನ್ನು ತಲಾ ₹10 ಸಾವಿರದಂತೆ ಮಾರಾಟ ಮಾಡಲು ಯತ್ನಿಸಿದ್ದ ಎನ್ನಲಾಗಿದೆ. ಕಲಾಸಿಪಾಳ್ಯದಿಂದ ಮತ್ತೊಬ್ಬ ವ್ಯಕ್ತಿ ಈ ಆಮೆಗಳನ್ನು ಆರೋಪಿಗೆ ತಂದುಕೊಟ್ಟಿದ್ದ ಎಂಬ ಮಾಹಿತಿ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ.

ನಕ್ಷತ್ರ ಆಮೆಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಅದೃಷ್ಟ ಬರುತ್ತದೆ ಎಂದು ಜನರನ್ನು ನಂಬಿಸಿ ಮಾರಾಟ ಮಾಡಲು ಆರೋಪಿಗಳು ಯತ್ನಿಸುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ವನ್ಯಜೀವಿ ವ್ಯಾಪಾರದ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ವಶಪಡಿಸಿಕೊಂಡಿರುವ 180 ನಕ್ಷತ್ರ ಆಮೆಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವ ಕ್ರಮ ಕೈಗೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿಯನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ.

ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ನಕ್ಷತ್ರ ಆಮೆಗಳ ಅಕ್ರಮ ಸಾಗಾಟ ಹಾಗೂ ಮಾರಾಟದ ಜಾಲದ ಕುರಿತು ತನಿಖೆ ಮುಂದುವರಿದಿದೆ.

ಬೈಕ್ ಸವಾರರೇ ಗಮನಿಸಿ: ಬೆಂಗಳೂರು ಏರ್‌ಪೋರ್ಟ್ ರಸ್ತೆಯಲ್ಲಿ ಹೊಸ ಸಂಚಾರ ನಿಯಮ!

0

ಬೆಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್ ಕಾರಿಡಾರ್‌ನಲ್ಲಿ ವಾಹನ ಸಂಚಾರಕ್ಕೆ ಸಂಬಂಧಿಸಿದ ನಿರ್ಬಂಧಗಳನ್ನು ಹಂತ ಹಂತವಾಗಿ ಜಾರಿಗೊಳಿಸಲು ಬೆಂಗಳೂರು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ.

ಮೊದಲ ಹಂತದಲ್ಲಿ ನಿಗದಿತ ಸಮಯದಲ್ಲಿ ಸರಕು ವಾಹನಗಳ ಸಂಚಾರದ ಮೇಲಿನ ನಿರ್ಬಂಧ ಮುಂದುವರಿಯಲಿದೆ. ಆದರೆ ಸದ್ಯ ದ್ವಿಚಕ್ರ ವಾಹನಗಳು ಹಾಗೂ ಆಟೋರಿಕ್ಷಾಗಳಿಗೆ ಎಲಿವೇಟೆಡ್ ಕಾರಿಡಾರ್‌ನಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ.

ದ್ವಿಚಕ್ರ ವಾಹನ ಸವಾರರು ಸಾಧ್ಯವಾದಷ್ಟು ಎಡಭಾಗದ ಲೇನ್‌ನಲ್ಲಿ ಸಂಚರಿಸಬೇಕು. ಲೇನ್ ಶಿಸ್ತು ಪಾಲಿಸುವುದರ ಜೊತೆಗೆ ಅಪಾಯಕಾರಿ ರೀತಿಯಲ್ಲಿ ಓವರ್‌ಟೇಕ್ ಮಾಡುವುದನ್ನು ತಪ್ಪಿಸಬೇಕು. ಅಲ್ಲದೆ, ಗಂಟೆಗೆ ಗರಿಷ್ಠ 60 ಕಿ.ಮೀ. ವೇಗದ ಮಿತಿಯೊಳಗೆ ಸುರಕ್ಷಿತವಾಗಿ ಸಂಚರಿಸುವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ.

ರಸ್ತೆ ಸುರಕ್ಷತೆ ಹೆಚ್ಚಿಸುವ ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ನಗರದ ಐದು ಪ್ರಮುಖ ಮೇಲ್ಸೇತುವೆ ಹಾಗೂ ಎಲಿವೇಟೆಡ್ ಕಾರಿಡಾರ್‌ಗಳಲ್ಲಿ ವಿವಿಧ ವಾಹನಗಳ ಸಂಚಾರಕ್ಕೆ ನಿರ್ಬಂಧಗಳನ್ನು ಬೆಂಗಳೂರು ಸಂಚಾರ ಪೊಲೀಸರು ಘೋಷಿಸಿದ್ದರು. ಈ ಪೈಕಿ ನಾಲ್ಕು ಕಾರಿಡಾರ್‌ಗಳಲ್ಲಿ ನಿರ್ಬಂಧ ಜಾರಿಗೊಳಿಸಿದ ಬಳಿಕ ಸ್ಥಳ ಪರಿಶೀಲನೆ ನಡೆಸಲಾಗಿದೆ.

ಬಿಜಿಎಸ್ ಮೇಲ್ಸೇತುವೆ, ಪೀಣ್ಯ ಮೇಲ್ಸೇತುವೆ ಹಾಗೂ ಡಬಲ್ ಡೆಕ್ಕರ್ ಮೇಲ್ಸೇತುವೆಗಳಲ್ಲಿ ಸಂಚಾರ ಸುಗಮವಾಗಿ ನಡೆಯುತ್ತಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ.

ಆದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್ ಕಾರಿಡಾರ್‌ನ ಸಂಜೀವನಗರ ಕ್ರಾಸ್‌ನಿಂದ ವಿದ್ಯಾಶಿಲ್ಪ ಜಂಕ್ಷನ್‌ವರೆಗಿನ ಮಾರ್ಗದಲ್ಲಿ ಸರಕು ವಾಹನಗಳು, ದ್ವಿಚಕ್ರ ವಾಹನಗಳು ಹಾಗೂ ಆಟೋರಿಕ್ಷಾಗಳನ್ನು ಪ್ರವೇಶ ಮಾರ್ಗಗಳಲ್ಲೇ ಏಕಕಾಲದಲ್ಲಿ ಬೇರೆಡೆಗೆ ತಿರುಗಿಸುತ್ತಿದ್ದರಿಂದ ಸಂಚಾರ ಗೊಂದಲ ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ.

ಇದರಿಂದ ವಾಹನಗಳ ಸರದಿ ಹಾಗೂ ದಟ್ಟಣೆ ಹೆಚ್ಚಾಗಿ, ಪಕ್ಕದ ಸಾಮಾನ್ಯ ರಸ್ತೆಯ ಸಂಚಾರದ ಮೇಲೂ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ಹಂತ ಹಂತವಾಗಿ ಜಾರಿಗೊಳಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಸೆ.11ರಿಂದ ಎಲೆಕ್ಟ್ರಾನಿಕ್ ಸಿಟಿ ಕಾರಿಡಾರ್‌ನಲ್ಲೂ ನಿಯಮ:

ಇದೇ ರೀತಿಯ ಹಂತ ಹಂತದ ಸಂಚಾರ ನಿಯಮವನ್ನು ಸೆಪ್ಟೆಂಬರ್ 11, 2026ರಿಂದ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್‌ನಲ್ಲೂ ಜಾರಿಗೊಳಿಸಲಾಗುತ್ತದೆ.

ಮೊದಲ ಹಂತದಲ್ಲಿ ಸರಕು ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗುವುದು. ದ್ವಿಚಕ್ರ ವಾಹನಗಳಿಗೆ ಸದ್ಯ ಸಂಚರಿಸಲು ಅವಕಾಶ ನೀಡಲಾಗುತ್ತದೆ. ಪರಿಶೀಲನೆಯ ಫಲಿತಾಂಶದ ಆಧಾರದ ಮೇಲೆ ಉಳಿದ ನಿಗದಿತ ನಿರ್ಬಂಧಗಳನ್ನು ಮುಂದಿನ ಹಂತಗಳಲ್ಲಿ ಜಾರಿಗೊಳಿಸಲಾಗುವುದು ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಪ್ರದೋಷ್ ಮಾಫಿ ಸಾಕ್ಷಿ ಕೇಸಲ್ಲಿ ನಟ ದರ್ಶನ್ʼಗೆ ರಿಲೀಫ್: ಒಂದು ವಾರದಲ್ಲಿ ಹೊಸ ಆದೇಶಕ್ಕೆ ಹೈಕೋರ್ಟ್ ಸೂಚನೆ!

ಬೆಂಗಳೂರು: ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಮಾಡುವ ಪ್ರಕ್ರಿಯೆಯನ್ನು ಪ್ರಶ್ನಿಸಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಭಾಗಶಃ ಅಂಗೀಕರಿಸಿದೆ.

ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದ್ದು, ಪ್ರದೋಷ್ ಮಾಫಿ ಸಾಕ್ಷಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೆಷನ್ಸ್ ಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಮಾರ್ಪಡಿಸಿ, ಯಾವುದೇ ವಾದ-ಪ್ರತಿವಾದಕ್ಕೆ ಅವಕಾಶ ನೀಡದೆ ಒಂದು ವಾರದೊಳಗೆ ಹೊಸ ಆದೇಶ ನೀಡುವಂತೆ ಸೂಚಿಸಿದೆ.

ಈ ಹಿಂದೆ ಸೆಷನ್ಸ್ ಕೋರ್ಟ್‌ನಲ್ಲಿ ಪ್ರದೋಷ್ ಅವರ ಸನ್ನಡತೆ ಕುರಿತು ಪ್ರೊಬೇಷನರಿ ಅಧಿಕಾರಿಯೊಬ್ಬರು ವರದಿ ಸಲ್ಲಿಸಿದ್ದರು. ಈ ವರದಿಯನ್ನು ಪ್ರಶ್ನಿಸಿ ದರ್ಶನ್ ಹೈಕೋರ್ಟ್‌ ಮೊರೆ ಹೋಗಿದ್ದರು.

ಪ್ರೊಬೇಷನರಿ ಅಧಿಕಾರಿಯು ಸಜಾಬಂಧಿಯಲ್ಲಿರುವ ವ್ಯಕ್ತಿಯ ಕುರಿತು ವರದಿ ನೀಡಬೇಕಿತ್ತು. ಆದರೆ ಪ್ರದೋಷ್ ವಿಚಾರಣಾಧೀನ ಆರೋಪಿಯಾಗಿರುವುದರಿಂದ ಅವರ ನಡವಳಿಕೆ ಕುರಿತು ಪ್ರೊಬೇಷನರಿ ಅಧಿಕಾರಿಗೆ ವರದಿ ಸಲ್ಲಿಸುವ ಅವಕಾಶವಿಲ್ಲ ಎಂದು ದರ್ಶನ್ ಪರ ವಾದಿಸಲಾಗಿತ್ತು.

ಹೀಗಾಗಿ ಪ್ರೊಬೇಷನರಿ ಅಧಿಕಾರಿ ಸಲ್ಲಿಸಿರುವ ವರದಿಯನ್ನು ರದ್ದುಪಡಿಸಬೇಕು ಎಂದು ದರ್ಶನ್ ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದರು. ಇದೀಗ ಹೈಕೋರ್ಟ್ ಅರ್ಜಿಯನ್ನು ಭಾಗಶಃ ಅಂಗೀಕರಿಸಿದ್ದು, ಈ ವಿಚಾರದಲ್ಲಿ ಸೆಷನ್ಸ್ ಕೋರ್ಟ್ ಹೊಸದಾಗಿ ಆದೇಶ ನೀಡಬೇಕಿದೆ.

108 ಆಂಬುಲೆನ್ಸ್ ಖಾಸಗೀಕರಣಕ್ಕೆ ಸರ್ಕಾರದ ನಿರ್ಧಾರ: ‘ಕ್ಯಾಬಿನೆಟ್ ಹಾಗೂ ಸಿಎಂ ಒಪ್ಪಿಗೆ ಇದೆ’ ಎಂದ ಯು.ಟಿ. ಖಾದರ್

0

ಬೆಂಗಳೂರು: 108 ಆಂಬುಲೆನ್ಸ್ ಸೇವೆಯ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಈ ಸಂಬಂಧ ಹೊಸ ನೀತಿ ರೂಪಿಸಲಾಗುತ್ತಿದ್ದು, ಆಂಬುಲೆನ್ಸ್‌ಗಳ ನಿರ್ವಹಣೆಯನ್ನು ಟೆಂಡರ್ ಮೂಲಕ ಖಾಸಗಿ ಸಂಸ್ಥೆಗಳಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಸಚಿವರು, 108 ಆಂಬುಲೆನ್ಸ್ ಸೇವೆಯ ನಿರ್ವಹಣೆಗೆ ಹೊಸ ಪಾಲಿಸಿ ರೂಪಿಸಲಾಗುತ್ತಿದೆ. ಈ ಹೊಸ ನೀತಿಯಡಿ 108 ಆಂಬುಲೆನ್ಸ್‌ಗಳನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಲು ತೀರ್ಮಾನಿಸಲಾಗಿದೆ. ಈ ನಿರ್ಧಾರಕ್ಕೆ ಇಡೀ ರಾಜ್ಯ ಸಚಿವ ಸಂಪುಟ ಹಾಗೂ ಮುಖ್ಯಮಂತ್ರಿ ಕೂಡ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಆರೋಗ್ಯ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ಅವರು 108 ಆಂಬುಲೆನ್ಸ್ ಸೇವೆಯನ್ನು ಸರ್ಕಾರವೇ ನಿರ್ವಹಿಸಲಿದೆ ಮತ್ತು ಜಿಕೆವಿಕೆಗೆ ವಹಿಸುವುದಿಲ್ಲ ಎಂದು ಹೇಳಿದ್ದರು. ಇದೀಗ ಯು.ಟಿ. ಖಾದರ್ ಆರೋಗ್ಯ ಸಚಿವರಾದ ಬಳಿಕ 108 ಆಂಬುಲೆನ್ಸ್ ಸೇವೆಗೆ ಟೆಂಡರ್ ನೀಡಲು ಸರ್ಕಾರ ಮುಂದಾಗಿದೆ.

ಹೊಸ ವ್ಯವಸ್ಥೆಯಲ್ಲಿ ಆಂಬುಲೆನ್ಸ್‌ಗಳು ರೋಗಿಗಳನ್ನು ನಿಗದಿತ ಸಮಯದಲ್ಲಿ ಆಸ್ಪತ್ರೆಗೆ ತಲುಪಿಸುವಂತೆ ಸಮಯದ ಗಡುವು ನಿಗದಿಪಡಿಸಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ 10 ನಿಮಿಷದೊಳಗೆ ಹಾಗೂ ನಗರ ಪ್ರದೇಶಗಳಲ್ಲಿ 15ರಿಂದ 20 ನಿಮಿಷದೊಳಗೆ ಆಸ್ಪತ್ರೆಗೆ ತಲುಪಿಸುವ ಗುರಿ ಇರಲಿದೆ. ನಿಗದಿತ ಸಮಯ ಮೀರಿದರೆ ಟೆಂಡರ್ ಪಡೆದಿರುವ ಕಂಪನಿಗಳಿಗೆ ₹5 ಸಾವಿರದಿಂದ ₹10 ಸಾವಿರದವರೆಗೆ ದಂಡ ವಿಧಿಸುವ ವ್ಯವಸ್ಥೆ ಇರಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದೇ ವೇಳೆ ವಿವಿಧ ಬೇಡಿಕೆಗಳ ಈಡೇರಿಕೆಗೆ 108 ಆಂಬುಲೆನ್ಸ್ ಸಿಬ್ಬಂದಿ ಸರ್ಕಾರಕ್ಕೆ 15 ದಿನಗಳ ಗಡುವು ನೀಡಿದ್ದಾರೆ. ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಷ್ಕರ ನಡೆಸುವುದಾಗಿ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್, ಪ್ರತಿಭಟನೆ ನಡೆಸಿ ರೋಗಿಗಳಿಗೆ ತೊಂದರೆಯಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. 108 ಸಿಬ್ಬಂದಿಯ ಸಮಸ್ಯೆಗಳು ಸಂಬಂಧಪಟ್ಟ ಕಂಪನಿಗೆ ಸೇರಿದ್ದು, ಕಂಪನಿಯೊಂದಿಗೇ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾದರೆ ಸಂಬಂಧಪಟ್ಟ ಎಲ್ಲ ಸಿಬ್ಬಂದಿ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನ ಪ್ರಮುಖ ಫ್ಲೈಓವರ್ʼಗಳಲ್ಲಿ ಸಂಚಾರ ನಿರ್ಬಂಧ! ಹಂತ ಹಂತವಾಗಿ ಹೊಸ ರೂಲ್ಸ್ ಜಾರಿ ಎಂದ ಪ್ರಿಯಾಂಕ್ ಖರ್ಗೆ

0

ಬೆಂಗಳೂರು: ನಗರದಲ್ಲಿ ರಸ್ತೆ ಸುರಕ್ಷತೆ ಹೆಚ್ಚಿಸುವುದು ಹಾಗೂ ವಾಹನ ಸಂಚಾರವನ್ನು ಸುಗಮಗೊಳಿಸುವ ಉದ್ದೇಶದಿಂದ ಐದು ಪ್ರಮುಖ ಫ್ಲೈಓವರ್‌ಗಳು ಮತ್ತು ಎಲಿವೇಟೆಡ್ ಕಾರಿಡಾರ್‌ಗಳಲ್ಲಿ ವಿವಿಧ ವರ್ಗದ ವಾಹನಗಳ ಸಂಚಾರಕ್ಕೆ ವಿಧಿಸಲಾಗಿರುವ ನಿರ್ಬಂಧಗಳನ್ನು ಹಂತ ಹಂತವಾಗಿ ಜಾರಿಗೊಳಿಸಲು ಬೆಂಗಳೂರು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ ಎಂದು ಗೃಹ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಐದು ಪ್ರಮುಖ ಎಲಿವೇಟೆಡ್ ಕಾರಿಡಾರ್‌ಗಳ ಪೈಕಿ ನಾಲ್ಕರಲ್ಲಿ ಈಗಾಗಲೇ ಸಂಚಾರ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದ್ದು, ಬಳಿಕ ಬೆಂಗಳೂರು ಸಂಚಾರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಬಿಜಿಎಸ್ ಫ್ಲೈಓವರ್, ಪೀಣ್ಯ ಫ್ಲೈಓವರ್ ಹಾಗೂ ಡಬಲ್ ಡೆಕ್ಕರ್ ಫ್ಲೈಓವರ್‌ಗಳಲ್ಲಿ ವಾಹನ ಸಂಚಾರ ಸುಗಮವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯುತ್ತಿರುವುದು ಕಂಡುಬಂದಿದೆ ಎಂದು ಸಚಿವರು ತಿಳಿಸಿದ್ದಾರೆ.

ಆದರೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಎಲಿವೇಟೆಡ್ ಕಾರಿಡಾರ್‌ನಲ್ಲಿ, ಅಂದರೆ ಸಂಜೀವನಗರ ಕ್ರಾಸ್‌ನಿಂದ ವಿದ್ಯಾಶಿಲ್ಪ ಜಂಕ್ಷನ್‌ವರೆಗೆ, ಹಲವು ವರ್ಗದ ವಾಹನಗಳನ್ನು ಏಕಕಾಲದಲ್ಲಿ ಪ್ರವೇಶ ಮಾರ್ಗಗಳಲ್ಲೇ ಕೆಳಗಿನ ರಸ್ತೆಗೆ ತಿರುಗಿಸುವುದರಿಂದ ಸಂಚಾರ ಸಮಸ್ಯೆ ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ.

ಸರಕು ವಾಹನಗಳು, ದ್ವಿಚಕ್ರ ವಾಹನಗಳು ಹಾಗೂ ಆಟೋರಿಕ್ಷಾಗಳನ್ನು ಕೆಳಗಿನ ರಸ್ತೆಗೆ ತಿರುಗಿಸುವುದರಿಂದ ಸಂಚಾರ ಸಂಘರ್ಷ, ಸರತಿ ಸಾಲು ಹಾಗೂ ದಟ್ಟಣೆ ಉಂಟಾಗುತ್ತಿದೆ. ಇದರಿಂದ ಎಲಿವೇಟೆಡ್ ಕಾರಿಡಾರ್‌ಗೆ ಹೊಂದಿಕೊಂಡಿರುವ ಕೆಳಮಟ್ಟದ ರಸ್ತೆಯ ಸಂಚಾರದ ಮೇಲೂ ಹೆಚ್ಚುವರಿ ಪರಿಣಾಮ ಬೀರುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ರಸ್ತೆಯ ಎಲಿವೇಟೆಡ್ ಕಾರಿಡಾರ್‌ನಲ್ಲೂ ವಿವಿಧ ವರ್ಗದ ವಾಹನಗಳ ಸಂಚಾರ ನಿರ್ಬಂಧಗಳನ್ನು ಹಂತ ಹಂತವಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಕರುನಾಡಿಗೆ ಮತ್ತೆ ಶಾಕ್! 15 ದಿನ 6000 ಕ್ಯೂಸೆಕ್ ನೀರು ಹರಿಸುವಂತೆ CWMA ಆದೇಶ

0

ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ. ರಾಜ್ಯದ ಅಧಿಕಾರಿಗಳು ಪ್ರಬಲವಾಗಿ ವಾದ ಮಂಡಿಸಿದರೂ, ತಮಿಳುನಾಡಿಗೆ ನಿತ್ಯ 6 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮಹತ್ವದ ಸೂಚನೆ ನೀಡಿದೆ.

ಈ ಮೂಲಕ ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಆದೇಶವನ್ನು CWMA ಎತ್ತಿಹಿಡಿದಿದೆ.

CWMA ಅಧ್ಯಕ್ಷ ಎಸ್.ಕೆ. ಹಲ್ದಾರ್ ಅವರ ನೇತೃತ್ವದಲ್ಲಿ ಇಂದು ಪ್ರಾಧಿಕಾರದ ಕಚೇರಿಯಲ್ಲಿ ಸಭೆ ನಡೆದಿದ್ದು, ಸಭೆಯ ಬಳಿಕ ತಮಿಳುನಾಡಿಗೆ 6 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚನೆ ನೀಡಲಾಗಿದೆ. ಸಭೆಯಲ್ಲಿ ತಮಿಳುನಾಡಿನ ಅಧಿಕಾರಿಗಳು ವರ್ಚ್ಯುವಲ್ ಮೂಲಕ ಭಾಗವಹಿಸಿದ್ದರು. ಕರ್ನಾಟಕದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಕೂಡ ವರ್ಚ್ಯುವಲ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ 6 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಶಿಫಾರಸು ಮಾಡಿತ್ತು. ಇದೀಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೂ ಅದೇ ಪ್ರಮಾಣದ ನೀರು ಹರಿಸಲು ಸೂಚನೆ ನೀಡಿರುವುದು ಕರ್ನಾಟಕದಲ್ಲಿ ಕಾವೇರಿ ನೀರು ಹಂಚಿಕೆ ವಿಚಾರವನ್ನು ಮತ್ತೆ ಚರ್ಚೆಗೆ ತಂದಿದೆ.

ತಮಿಳುನಾಡಿಗೆ 6 ಸಾವಿರ ಕ್ಯೂಸೆಕ್ ನೀರು ಬಿಡಲು CWRC ಆದೇಶ; ‘ಇದು ನಮಗೆ ನೋವಿನ ಸಂಗತಿ’ ಎಂದ ಸಚಿವ ಚೆಲುವರಾಯಸ್ವಾಮಿ

0

ಬೆಂಗಳೂರು: ತಮಿಳುನಾಡಿಗೆ 6 ಸಾವಿರ ಕ್ಯೂಸೆಕ್ ಕಾವೇರಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶ ನೀಡಿದ್ದು, ಇದು ಕರ್ನಾಟಕಕ್ಕೆ ನೋವಿನ ಸಂಗತಿಯಾಗಿದೆ ಎಂದು ಜಲಸಂಪನ್ಮೂಲ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪರಿಸ್ಥಿತಿ ಕಠಿಣವಾಗಿದ್ದು, ವಾಸ್ತವ ಸ್ಥಿತಿಯೂ ಕಷ್ಟಕರವಾಗಿದೆ. CWRC ಸಭೆಯಲ್ಲಿ ಕರ್ನಾಟಕದ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ತೆರಳಿ ರಾಜ್ಯದ ಪರಿಸ್ಥಿತಿಯನ್ನು ವಿವರಿಸಿ ವಾದ ಮಂಡಿಸಿದ್ದಾರೆ ಎಂದು ತಿಳಿಸಿದರು.

ಇದಾದ ಬಳಿಕ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದ್ದು, ಅಲ್ಲಿ ಆದೇಶದಲ್ಲಿ ಬಹಳಷ್ಟು ವ್ಯತ್ಯಾಸವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಕೆಲವು ವಿರಳ ಪ್ರಕರಣಗಳಲ್ಲಿ ಮಾತ್ರ ಕಡಿಮೆ ಪ್ರಮಾಣದ ನೀರು ಬಿಡುವಂತೆ ಆದೇಶಿಸಿರುವ ಉದಾಹರಣೆಗಳಿವೆ ಎಂದು ಸಚಿವರು ಹೇಳಿದರು.

ನಿರ್ವಹಣಾ ಸಮಿತಿಯ ಆದೇಶವನ್ನು ಪರಿಶೀಲಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಲಾಗುವುದು. ಬಳಿಕ ಅಡ್ವೊಕೇಟ್ ಜನರಲ್ ಹಾಗೂ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಚೆಲುವರಾಯಸ್ವಾಮಿ ತಿಳಿಸಿದರು.

ಕಳೆದ ಒಂದು ವಾರದಿಂದಲೇ ಜಲಾಶಯಗಳಿಗೆ ಒಳಹರಿವು ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ 6 ಸಾವಿರ ಕ್ಯೂಸೆಕ್ ನೀರು ಬಿಡುವುದು ಕಷ್ಟಕರವಾಗಿದೆ. ರಾಜ್ಯದಲ್ಲಿ ಕುಡಿಯುವ ನೀರಿಗೂ ಕೊರತೆ ಎದುರಾಗುವ ಪರಿಸ್ಥಿತಿ ಇದೆ. ಹೀಗಾಗಿ ಈ ಆದೇಶವನ್ನು ಒಪ್ಪುವಂತಹ ಪರಿಸ್ಥಿತಿ ಇಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ಹೆಜ್ಜೆ ಏನು ಇಡಬೇಕು ಎಂಬುದನ್ನು ನಾಳೆ ತೀರ್ಮಾನಿಸಲಾಗುವುದು. ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ದೆಹಲಿಯಲ್ಲಿ ಕುಳಿತು ಆಡಳಿತ ನಡೆಸುವವರಿಗೆ ರಾಜ್ಯದ ವಾಸ್ತವ ಸಮಸ್ಯೆ ಅರ್ಥವಾಗುವುದಿಲ್ಲ ಎಂದು ಚೆಲುವರಾಯಸ್ವಾಮಿ ಹೇಳಿದರು.

ಲಕ್ಷ್ಮೀದೇವಿ ಆರೋಗ್ಯವಾಗಿದ್ದಾರೆ: 92ರ ಹಿರಿಯ ನಟಿ ಬಗ್ಗೆ ಹರಡಿದ ಫೇಕ್ ನ್ಯೂಸ್‌ಗೆ ಕುಟುಂಬ ತಿರುಗೇಟು

ಬೆಂಗಳೂರು: ಹಿರಿಯ ನಟಿ ಲಕ್ಷ್ಮೀದೇವಿ ಅವರ ನಿಧನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸುದ್ದಿ ಸುಳ್ಳು ಎಂದು ಕುಟುಂಬ ಸ್ಪಷ್ಟಪಡಿಸಿದೆ. 92 ವರ್ಷದ ಲಕ್ಷ್ಮೀದೇವಿ ಅವರು ಆರೋಗ್ಯವಾಗಿದ್ದು, ನಿಧನರಾಗಿಲ್ಲ ಎಂದು ಮೊಮ್ಮಗಳು ದೀಪಿಕಾ ಶರಣ್ ತಿಳಿಸಿದ್ದಾರೆ. ಸುಳ್ಳು ಸುದ್ದಿಯನ್ನು ಯಾರೂ ಹರಡಬಾರದು ಎಂದು ಅವರು ಮನವಿ ಮಾಡಿದ್ದು, ಲಕ್ಷ್ಮೀದೇವಿ ಅವರೂ ವಿಡಿಯೋ ಮೂಲಕ ತಮ್ಮ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಹಿರಿಯ ಕಲಾವಿದರ ನಿಧನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಡುವುದು ಇದೇ ಮೊದಲೇನಲ್ಲ. ಈ ಹಿಂದೆ ನಟ ದೊಡ್ಡಣ್ಣ ಅವರ ಬಗ್ಗೆಯೂ ಇದೇ ರೀತಿಯ ವದಂತಿ ಹರಡಿತ್ತು. ಆಗ ದೊಡ್ಡಣ್ಣ ಅವರೇ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿ ತಾವು ಆರೋಗ್ಯವಾಗಿರುವುದಾಗಿ ತಿಳಿಸಿ ಫೇಕ್ ನ್ಯೂಸ್‌ಗೆ ತೆರೆ ಎಳೆದಿದ್ದರು. ಇದೀಗ ಲಕ್ಷ್ಮೀದೇವಿ ಅವರ ವಿಚಾರದಲ್ಲೂ ಅಂತಹದ್ದೇ ವದಂತಿ ಹರಡಿದೆ.

ಕನ್ನಡ ಚಿತ್ರರಂಗದ ಕಪ್ಪು-ಬಿಳುಪು ಕಾಲದಿಂದಲೂ ಅಭಿನಯಿಸುತ್ತಿರುವ ಲಕ್ಷ್ಮೀದೇವಿ ಅವರು ಸುಮಾರು 1000ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ವಿವಿಧ ಬಗೆಯ ಪೋಷಕ ಪಾತ್ರಗಳನ್ನು ನಿರ್ವಹಿಸುವ ಮೂಲಕ ಹಲವು ದಶಕಗಳಿಂದ ಕನ್ನಡ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ.

‘ಶ್ರೀನಿವಾಸ ಕಲ್ಯಾಣ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಅವರು ‘ಭಕ್ತ ಕನಕದಾಸ’, ‘ಬಂಗಾರದ ಮನುಷ್ಯ’, ‘ವೀರ ಕೇಸರಿ’ ಸೇರಿದಂತೆ ಹಲವು ಪ್ರಮುಖ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರರಂಗದ ದಿಗ್ಗಜರೊಂದಿಗೆ ನಟಿಸಿದ ಅವರು ವೈವಿಧ್ಯಮಯ ಪಾತ್ರಗಳ ಮೂಲಕ ತಮ್ಮದೇ ಆದ ಸ್ಥಾನವನ್ನು ಗಳಿಸಿಕೊಂಡಿದ್ದಾರೆ.

‘ಕಳ್ಳರ ಕಳ್ಳ’ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿಗೆ ಭಾಜನರಾಗಿರುವ ಲಕ್ಷ್ಮೀದೇವಿ ಅವರು ತಾಯಿ, ಪೋಷಕ ನಟಿ ಸೇರಿದಂತೆ ಹಲವು ಪಾತ್ರಗಳಲ್ಲಿ ಗಮನ ಸೆಳೆದಿದ್ದಾರೆ. ದೀರ್ಘಕಾಲದ ತಮ್ಮ ನಟನಾ ಪಯಣದ ಮೂಲಕ ಕನ್ನಡ ಚಿತ್ರರಂಗಕ್ಕೆ ನೀಡಿರುವ ಅವರ ಕೊಡುಗೆ ಗಮನಾರ್ಹವಾಗಿದೆ.

ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವುದು ಗ್ಯಾರಂಟಿ ಆದ್ಮೇಲೆ ಪಾದಯಾತ್ರೆ ಫಿಕ್ಸ್: ಯತ್ನಾಳ್ ವ್ಯಂಗ್ಯ

0

ವಿಜಯಪುರ: ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವುದು ಖಚಿತವಾದ ಬಳಿಕವೇ ಪಾದಯಾತ್ರೆ ಫಿಕ್ಸ್ ಆಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್. ಅಶೋಕ್, ಸುನೀಲ್ ಕುಮಾರ್ ಸೇರಿದಂತೆ ಹಲವರು ಸದನದ ಬಾವಿಗೆ ಇಳಿದು ಹೋರಾಟ ನಡೆಸಿದ್ದರು. ಆದರೆ ಆಗ ವಿಜಯೇಂದ್ರ ಐದು ನಿಮಿಷವೂ ಸದನದ ಬಾವಿಯಲ್ಲಿ ನಿಲ್ಲಲಿಲ್ಲ ಎಂದು ಟೀಕಿಸಿದರು.

ಬರೀ ಪುಕ್ಸಟ್ಟೆ ಒಂದು ಪಾದಯಾತ್ರೆ ಮಾಡಿದರೆ ಕ್ರೆಡಿಟ್ ಬರುತ್ತದೆಯೇ ಎಂದು ಪ್ರಶ್ನಿಸಿದ ಯತ್ನಾಳ್, ರಾಜ್ಯಾಧ್ಯಕ್ಷ ಸ್ಥಾನದಿಂದ ತಮ್ಮನ್ನು ತೆಗೆಯುವುದು ಖಚಿತ ಎಂಬ ಭಯ ವಿಜಯೇಂದ್ರ ಅವರಿಗೆ ಬಂದಿದೆ. ಹೀಗಾಗಿ ತಮ್ಮ ಅಸ್ತಿತ್ವ ತೋರಿಸಿಕೊಳ್ಳಲು ಹಾಗೂ ಹೀರೋ ಆಗಲು ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಪಾದಯಾತ್ರೆ ಯಾರಿಗೆ ಮೈನಸ್ ಆಗುತ್ತದೆ, ಯಾರಿಗೆ ಪ್ಲಸ್ ಆಗುತ್ತದೆ ಎಂಬುದು ಗೊತ್ತಿಲ್ಲ. ಆದರೆ ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಳ್ಳುವ ಭಯದಿಂದಲೇ ಈ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಯತ್ನಾಳ್ ಆರೋಪಿಸಿದರು. ಹೋರಾಟ ಮತ್ತು ಪಾದಯಾತ್ರೆ ಮಾಡುವುದಾದರೆ ಕೆಪಿಎಸ್‌ಸಿ ಹಗರಣದ ವಿರುದ್ಧ ಹೋರಾಟ ನಡೆಸಲಿ ಎಂದು ಯತ್ನಾಳ್ ಸಲಹೆ ನೀಡಿದರು.