Home Blog Page 67

ರಾಷ್ಟ್ರೀಯ ಬಾಲ ಪ್ರತಿಭೆ ಪ್ರಶಸ್ತಿಗೆ ಶ್ರೀರಕ್ಷ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ರಾಮನಗರದ ಪ್ರತಿಭಾವಂತ ಬಾಲಕಿ ಕುಮಾರಿ ಹೆಚ್. ಶ್ರೀರಕ್ಷ ಅವರು ಪ್ರತಿಷ್ಠಿತ ಶ್ರೀ ವಾಲ್ಮೀಕಿ ಕಲಾ ಸೇವಾ ರಾಷ್ಟ್ರೀಯ ಬಾಲ ಪ್ರತಿಭೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆಯ ಶ್ರೀ ವಾಲ್ಮೀಕಿ ಮಹಿಳಾ ಕಲಾ ಸಂಸ್ಥೆ (ರಿ.) ವತಿಯಿಂದ ಜೂನ್ 28ರಂದು ಆಯೋಜಿಸಿರುವ 13ನೇ ವಾರ್ಷಿಕೋತ್ಸವ ಹಾಗೂ ರಾಜ್ಯ-ರಾಷ್ಟ್ರ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀರಕ್ಷ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷೆ ಅನುರಾಧ ವಾಲ್ಮೀಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಮನಗರದ ಹಿಟ್ನಾಳ್ ಶ್ರೀನಿವಾಸ ಹಾಗೂ ಶ್ರೀದೇವಿ ದಂಪತಿಯ ಪುತ್ರಿಯಾಗಿರುವ ಶ್ರೀರಕ್ಷ, ಪ್ರಸಿದ್ಧಿ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕರಾಟೆ ಹಾಗೂ ಭರತನಾಟ್ಯ ಕ್ಷೇತ್ರಗಳಲ್ಲಿ ವಿಶೇಷ ಪ್ರತಿಭೆ ತೋರಿದ್ದಾರೆ. ಅಲ್ಲದೇ ಮೊದಲನೇ ತರಗತಿಯಲ್ಲಿಯೇ 10 ಅಡಿ ಎತ್ತರದ ಮಲ್ಲಗಂಬ ಏರುವ ಮೂಲಕ ಗಮನ ಸೆಳೆದಿದ್ದರು.

ಬಾಲ್ಯದಲ್ಲಿಯೇ ವಿವಿಧ ಕ್ಷೇತ್ರಗಳಲ್ಲಿ ತೋರಿದ ಸಾಧನೆ ಹಾಗೂ ಪ್ರತಿಭೆಯನ್ನು ಪರಿಗಣಿಸಿ ರಾಷ್ಟ್ರೀಯ ಬಾಲ ಪ್ರತಿಭೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಶ್ರೀರಕ್ಷ ಅವರ ಸಾಧನೆಗೆ ಕರಾಟೆ ತರಬೇತುದಾರರಾದ ಅಲಬೂರು ನಾಗರಾಜ ಮತ್ತು ಕಿರಣ್, ಭರತನಾಟ್ಯ ಶಿಕ್ಷಕಿ ಅಂಬಿಕಾ ಮೇಡಂಗು ಅಭಿನಂದನೆ ಸಲ್ಲಿಸಿದ್ದಾರೆ.

ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿರುವ ಶ್ರೀರಕ್ಷ ಅವರಿಗೆ ಕುಟುಂಬ ಸದಸ್ಯರು, ಪ್ರಸಿದ್ಧಿ ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ ಹಾಗೂ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

ಬೀದಿ ನಾಯಿಗಳ ಅಟ್ಟಹಾಸಕ್ಕೆ ಕರು ಬಲಿ..!

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾಂಸ ಹಾಗೂ ಎಗ್‌ರೈಸ್ ಅಂಗಡಿಗಳ ಪರಿಣಾಮ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಮಕ್ಕಳು ಹಾಗೂ ಸಾಕು ಪ್ರಾಣಿಗಳ ಜೀವಕ್ಕೆ ಅಪಾಯ ಎದುರಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಅಂಗಡಿಗಳ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ರಸ್ತೆ ಬದಿ, ಖಾಲಿ ಜಾಗ ಹಾಗೂ ಚರಂಡಿಗಳ ಬಳಿ ಎಸೆಯುತ್ತಿರುವುದರಿಂದ ಬೀದಿ ನಾಯಿಗಳಿಗೆ ಶಾಶ್ವತ ಆಹಾರ ಮೂಲ ಸಿಗುತ್ತಿದ್ದು, ನಾಯಿಗಳು ಗುಂಪುಗೂಡಿ ಸಾಕು ಪ್ರಾಣಿಗಳು ಹಾಗೂ ಸಾರ್ವಜನಿಕರ ಮೇಲೆ ದಾಳಿ ನಡೆಸುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ.

ಇದಕ್ಕೆ ಸಾಕ್ಷಿಯೆಂಬಂತೆ ಬುಧವಾರ ಬೆಳಗಿನ ಜಾವ ತಾಲೂಕಿನ ಗೊಜನೂರ ಗ್ರಾಮದಲ್ಲಿ ರೈತ ಚನ್ನಪ್ಪ ಷಣ್ಮುಕಿ ಅವರ ಮನೆಯಲ್ಲಿದ್ದ ಹಸುಗರುವಿನ ಮೇಲೆ ಬೀದಿ ನಾಯಿಗಳು ಮಾರಣಾಂತಿಕ ದಾಳಿ ನಡೆಸಿವೆ. ಗಂಭೀರವಾಗಿ ಗಾಯಗೊಂಡ ಕರುವನ್ನು ಗದಗ ಜಿಲ್ಲಾ ಪಶುವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.

ಈ ಘಟನೆಗೆ ಬೇಸರ ವ್ಯಕ್ತಪಡಿಸಿರುವ ರೈತ ಚನ್ನಪ್ಪ ಷಣ್ಮುಕಿ, ತಹಸೀಲ್ದಾರರು, ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಪಶುವೈದ್ಯಕೀಯ ಇಲಾಖೆಗೆ ಮನವಿ ಸಲ್ಲಿಸಿ, ಇಂತಹ ಘಟನೆಗಳಿಗೆ ಕಾರಣವಾಗುತ್ತಿರುವ ಅನಧಿಕೃತ ಮಾಂಸ ಮಾರಾಟದ ಅಂಗಡಿಗಳನ್ನು ಬಂದ್ ಮಾಡಬೇಕು ಹಾಗೂ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮನವಿ ಸ್ವೀಕರಿಸಿದ ಗ್ರಾಮ ಆಡಳಿತಾಧಿಕಾರಿ ಅನಿಲಕುಮಾರ ಬೇವಿನಮರದ, ಘಟನೆಯ ಕುರಿತು ಮಾಹಿತಿ ಪಡೆದು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಶಾಲೆಗೆ ತೆರಳುವ ಮಕ್ಕಳು, ವೃದ್ಧರು ಹಾಗೂ ಬೆಳಗಿನ ಜಾವ ವಾಯುವಿಹಾರಕ್ಕೆ ಹೋಗುವ ನಾಗರಿಕರು ಕೂಡ ನಾಯಿಗಳ ದಾಳಿಯ ಭಯದಲ್ಲೇ ಓಡಾಡುವಂತಾಗಿದೆ. ಬೈಕ್ ಸವಾರರನ್ನು ಬೆನ್ನಟ್ಟುವ ಘಟನೆಗಳು ಅಪಘಾತಗಳಿಗೆ ಕಾರಣವಾಗುತ್ತಿರುವುದು ಸಾರ್ವಜನಿಕರ ಆತಂಕ ಹೆಚ್ಚಿಸಿದೆ.

ಬೀದಿ ನಾಯಿಗಳ ಸಂತಾನಹರಣ, ರೇಬೀಸ್ ಲಸಿಕಾ ಅಭಿಯಾನ ಹಾಗೂ ಮಾಂಸದ ಅಂಗಡಿಗಳಿಗೆ ಕಡ್ಡಾಯ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಜಾರಿಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಲೂಕಿನಾದ್ಯಂತ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಅಧಿಕಾರಿಗಳು ತಾತ್ಕಾಲಿಕ ಕ್ರಮಕ್ಕೆ ಸೀಮಿತರಾಗದೇ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದರೆ ರೈತರೊಂದಿಗೆ ಹೋರಾಟ ನಡೆಸಲಾಗುವುದು ಎಂದು ಸಮಗ್ರ ರೈತ ಸಂಘಟನೆಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಮಂಜುನಾಥ ಮಾಗಡಿ ಎಚ್ಚರಿಕೆ ನೀಡಿದ್ದಾರೆ.

“ಅನಧಿಕೃತ ಮಾಂಸ ಹಾಗೂ ಎಗ್‌ರೈಸ್ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಿ, ಬೀದಿ ನಾಯಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.”

ಮಂಜುನಾಥ ಮಾಗಡಿ, ತಾಲೂಕು ಅಧ್ಯಕ್ಷರು, ಸಮಗ್ರ ರೈತ ಸಂಘಟನೆಗಳ ಒಕ್ಕೂಟ

ವಿದ್ಯುತ್ ಖಾಸಗೀಕರಣಕ್ಕೆ ರೈತರ ತೀವ್ರ ವಿರೋಧ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಾಜ್ಯದಲ್ಲಿ ವಿದ್ಯುತ್ ವಿತರಣೆಯನ್ನು ಖಾಸಗಿ ಕಂಪನಿಗಳಿಗೆ ವಹಿಸಬಾರದು ಹಾಗೂ ಟಾಟಾ ಕಂಪನಿಗೆ ವಿದ್ಯುತ್ ವಿತರಣಾ ಪರವಾನಿಗೆ ನೀಡಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಲಕ್ಷ್ಮೇಶ್ವರ ತಾಲೂಕು ಘಟಕದ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ್ ಎಂ. ಧನಂಜಯ ಅವರಿಗೆ ಮನವಿ ಸಲ್ಲಿಸಿದರು.

ವಿದ್ಯುತ್ ವಿತರಣಾ ಕ್ಷೇತ್ರಕ್ಕೆ ಖಾಸಗಿ ಕಂಪನಿಗಳು ಪ್ರವೇಶಿಸಿದರೆ ರೈತರ ಪಂಪ್‌ಸೆಟ್‌ಗಳಿಗೆ ಹಾಗೂ ಗೃಹ ಬಳಕೆದಾರರಿಗೆ ತೊಂದರೆಯಾಗಲಿದೆ. ಜೊತೆಗೆ ನಿರುದ್ಯೋಗ ಸಮಸ್ಯೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ವಿದ್ಯುತ್ ಇಲಾಖೆಯನ್ನು ಖಾಸಗಿಯವರಿಗೆ ವಹಿಸಲು ಯಾವುದೇ ಪರವಾನಿಗೆ ನೀಡಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈಗಾಗಲೇ ಕೆಲವು ರಾಜ್ಯಗಳಲ್ಲಿ ಖಾಸಗಿ ಕಂಪನಿಗಳು ವಿದ್ಯುತ್ ಕ್ಷೇತ್ರಕ್ಕೆ ಪ್ರವೇಶಿಸಿದ ಪರಿಣಾಮ ರೈತರು ಹಾಗೂ ಸಾಮಾನ್ಯ ಗ್ರಾಹಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹೆಸ್ಕಾಂನ ಆರ್ಥಿಕ ಸ್ಥಿರತೆ, ವಿದ್ಯುತ್ ಕಾರ್ಮಿಕರ ಹಿತಾಸಕ್ತಿ ಹಾಗೂ ಗ್ರಾಮೀಣ ಗ್ರಾಹಕರ, ವಿಶೇಷವಾಗಿ ರೈತರ ಹಿತದೃಷ್ಟಿಯಿಂದ ಖಾಸಗಿ ವಿತರಣಾ ಪರವಾನಗಿ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಲಾಯಿತು.

ಒಂದು ವೇಳೆ ವಿದ್ಯುತ್ ಖಾಸಗೀಕರಣಕ್ಕೆ ಮುಂದಾದರೆ ರಾಜ್ಯಾದ್ಯಂತ ಬಂದ್ ಹಾಗೂ ಬಾರಕೋಲು ಚಳವಳಿ ನಡೆಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ನಾಗರಾಜ ಕಳ್ಳಿಹಾಳ, ಮಂಜುನಾಥ ಅಣ್ಣಿಗೇರಿ ಸೇರಿದಂತೆ ರಾಮಣ್ಣ ಕಾಶಿಕೋವಿ, ಶಿವಾನಂದ ಲಿಂಗಶೆಟ್ಟಿ, ಮಂಜುನಾಥ ಹಾವಳಕೇರಿ, ಮುರುಗೇಶ ಬಳಿಗಾರ, ಶಂಭಣ್ಣ ಬಳಿಗಾರ, ಸಿದ್ಧಲಿಂಗಪ್ಪ ಕಳ್ಳಿಹಾಳ, ಪ್ರಕಾಶ ಬಡಿಗೇರ, ಖಾದರ್‌ಸಾಬ್ ರಿತ್ತಿ, ಶಿವಪ್ಪ ಶಿವಸಿಂಪಿಗೇರ, ದಾಲವ್‌ಸಾಬ ತಬ್ಬಲ, ಫಕ್ಕೀರೇಶ ಶೀರನಹಳ್ಳಿ, ಕುಮಾರ ಕರಡಿಕೊಪ್ಪ ಹಾಗೂ ರಮೇಶ ಕಾಶಿಕೋವಿ ಉಪಸ್ಥಿತರಿದ್ದರು.

ಬೆಂಗಳೂರಿನಲ್ಲಿ ಕುಖ್ಯಾತ ಅಪರಾಧಿಯ ಹೆಡೆಮುರಿ ಕಟ್ಟಿದ ಪೊಲೀಸ್!

ಬೆಂಗಳೂರು: ವಿವಿಧ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಅಪರಾಧಿ ಸೈಯದ್ ಅಬ್ರಾರ್‌ನನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ವಿರುದ್ಧ ಕೊಲೆ, ಕೊಲೆಯತ್ನ, ಡಕಾಯಿತಿ ಸೇರಿದಂತೆ ಒಟ್ಟು 67 ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮನೆಗಳ್ಳತನ ಪ್ರಕರಣವೊಂದರ ತನಿಖೆ ನಡೆಸುತ್ತಿದ್ದ ವೇಳೆ ಪೊಲೀಸರು ಸೈಯದ್ ಅಬ್ರಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಆತನ ವಿರುದ್ಧ ಹಲವು ಜಿಲ್ಲೆಗಳಲ್ಲಿ ದಾಖಲಾಗಿರುವ ಅಪರಾಧ ಪ್ರಕರಣಗಳ ಮಾಹಿತಿ ಬಹಿರಂಗಗೊಂಡಿದೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ವಿರುದ್ಧ 30 ಜಾಮೀನುರಹಿತ ವಾರಂಟ್‌ಗಳು ಬಾಕಿ ಇದ್ದು, ಐದು ಪ್ರೊಕ್ಲಮೇಷನ್ ಪ್ರಕರಣಗಳಲ್ಲೂ ಆತ ತಲೆಮರೆಸಿಕೊಂಡಿದ್ದ. ಬೆಂಗಳೂರು, ಕೋಲಾರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿಯೂ ಅಬ್ರಾರ್ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆ್ಯಂಟಿ ರೌಡಿ ಸ್ಕ್ವಾಡ್‌ಗಳನ್ನು ರಚಿಸುವ ಕ್ರಮಕ್ಕೆ ಸರ್ಕಾರ ಮುಂದಾಗಿರುವ ನಡುವೆಯೇ ಈ ಕಾರ್ಯಾಚರಣೆ ಮಹತ್ವ ಪಡೆದುಕೊಂಡಿದೆ.

ಸದ್ಯ ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

 

ವಿದ್ಯುತ್ ಖಾಸಗೀಕರಣಕ್ಕೆ ರೈತ ಸಂಘದ ತೀವ್ರ ವಿರೋಧ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣ ನೀತಿಯನ್ನು ಜಾರಿಗೆ ತರಲು ಮುಂದಾಗಿರುವ ಕ್ರಮವನ್ನು ವಿರೋಧಿಸಿ ತಾಲೂಕು ರೈತ ಸಂಘದ ನೇತೃತ್ವದಲ್ಲಿ ರೈತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಶಿವಕುಮಾರ್ ಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ರೈತ ಸಂಘದ ಸಂಚಾಲಕ ಶಿಗೇನಹಳ್ಳಿ ಬಸವರಾಜ್, ವಿದ್ಯುತ್ ಖಾಸಗೀಕರಣದಿಂದ ರೈತರಿಗೆ ದೊರೆಯುತ್ತಿರುವ ಸೌಲಭ್ಯಗಳಿಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ. ಕೃಷಿ ಪಂಪ್‌ಸೆಟ್‌ಗಳಿಗೆ ನೀಡುತ್ತಿರುವ ಉಚಿತ ವಿದ್ಯುತ್ ಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಬಾರದು ಹಾಗೂ ಗ್ರಾಮೀಣ ಭಾಗಗಳಿಗೆ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ತಾಲೂಕು ರೈತ ಸಂಘದ ಮುಖಂಡ ಟಿ. ಕೊಟ್ರೇಶ್ ಮಾತನಾಡಿ, ವಿದ್ಯುತ್ ಕ್ಷೇತ್ರವನ್ನು ಖಾಸಗಿ ಕಂಪನಿಗಳಿಗೆ ಒಪ್ಪಿಸಿದರೆ ರೈತರು ಹಾಗೂ ಸಾಮಾನ್ಯ ಗ್ರಾಹಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ. ವಿದ್ಯುತ್ ಇಲಾಖೆಯಲ್ಲಿನ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಿ, ಹಳೆಯ ಟ್ರಾನ್ಸ್‌ಫಾರ್ಮರ್‌ಗಳ ಬದಲಾವಣೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಮನವಿಯಲ್ಲಿ ವಿದ್ಯುತ್ ಖಾಸಗೀಕರಣ ನೀತಿಯನ್ನು ಹಿಂಪಡೆಯುವುದು, ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಯೋಜನೆಯನ್ನು ಮುಂದುವರಿಸುವುದು, ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಖಚಿತಪಡಿಸುವುದು, ವಿದ್ಯುತ್ ಅವಘಡಗಳಲ್ಲಿ ಮೃತಪಟ್ಟ ಹಾಗೂ ಗಾಯಗೊಂಡವರಿಗೆ ಸೂಕ್ತ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಪ್ರಸ್ತಾಪಿಸಲಾಯಿತು.

ಈ ಸಂದರ್ಭದಲ್ಲಿ ನಾಗೇಶ್ ಸಿ., ನಾಗರಾಜ ತಳವಾರ, ಸೋಮು, ಮಾಬು, ಎಸ್.ಕೆ. ಸೋಮನಾಥ್, ಎಸ್.ಕೆ. ಮಹೇಶ್, ತಂಬ್ರಹಳ್ಳಿ ಮಹೇಶ್, ಮದ್ದಿ ದುರ್ಗಮ್ಮ ಸೇರಿದಂತೆ ತಾಲೂಕು ರೈತ ಸಂಘದ ಪದಾಧಿಕಾರಿಗಳು, ವಿವಿಧ ಗ್ರಾಮಗಳ ರೈತರು ಹಾಗೂ ರೈತ ಹೋರಾಟಗಾರರು ಉಪಸ್ಥಿತರಿದ್ದರು.

“ವಿದ್ಯುತ್ ಖಾಸಗೀಕರಣ ರೈತರಿಗೆ ಮಾರಕವಾಗಲಿದೆ. ಉಚಿತ ವಿದ್ಯುತ್ ಯೋಜನೆ ಮತ್ತು ಗ್ರಾಮೀಣ ವಿದ್ಯುತ್ ಪೂರೈಕೆಯನ್ನು ಯಾವುದೇ ಕಾರಣಕ್ಕೂ ದುರ್ಬಲಗೊಳಿಸಬಾರದು.”

ಶಿಗೇನಹಳ್ಳಿ ಬಸವರಾಜ್, ತಾಲೂಕು ರೈತ ಸಂಘದ ಸಂಚಾಲಕ

ಯೋಗದಲ್ಲಿ ಆರೋಗ್ಯದ ಜೊತೆಗೆ ವಿಜ್ಞಾನ ಅಡಗಿದೆ: ಶ್ರೀಧರ್ ಕೊಟಗಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ, ಅದರೊಳಗೆ ಆರೋಗ್ಯಕರ ಬದುಕಿನ ವಿಜ್ಞಾನ ಅಡಗಿದ್ದು, ಪ್ರತಿಯೊಬ್ಬರೂ ಯೋಗವನ್ನು ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಯೋಗ ಸಾಧಕ ಶ್ರೀಧರ್ ಕೊಟಗಿ ಹೇಳಿದರು.

ಪಟ್ಟಣದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸಿನ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಂಸ್ಥೆಯ ಮುಖ್ಯಸ್ಥೆ ಸ್ವಾತಿ ಉ. ಪೈ ಮಾತನಾಡಿ, ಯೋಗವು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಶಾಂತಿ, ಏಕಾಗ್ರತೆ ಹಾಗೂ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ವಿದ್ಯಾರ್ಥಿಗಳು ನಿತ್ಯ ಯೋಗಾಭ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಭುಗೌಡ ಯಕಿಕೊಪ್ಪ ಅವರು ಆರೋಗ್ಯಕರ ಜೀವನಶೈಲಿಗೆ ಯೋಗದ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರಾದ ಮೃತ್ಯುಂಜಯ ಹಿರೇಮಠ, ಆರ್.ಎಂ. ಕದಡಿ ಹಾಗೂ ರಾಜು ಲಮಾಣಿ ಅವರು ವಿದ್ಯಾರ್ಥಿಗಳಿಗೆ ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆ ನಡೆಸಿ ಯೋಗಾಭ್ಯಾಸ ಮಾಡಿಸಿದರು.

ಜೆ.ಡಿ. ಲಮಾಣಿ ಕಾರ್ಯಕ್ರಮ ನಿರೂಪಿಸಿದರೆ, ವಿಜಯಕುಮಾರ್ ಬಿಳಿಯಲಿ ವಂದಿಸಿದರು. ಡಾ. ಶಿವಾನಂದ ಹೂವಿನ, ಸುಮಿತ್ರಾ ಹೂಗಾರ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಮಳೆ ಕೈಕೊಟ್ಟರೂ ಬೆಳೆ ಉಳಿಸಬಹುದು: ಬಸವರಾಜ ಗದಗಿನ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮುಂಗಾರು ಮಳೆ ಕೊರತೆಯಿಂದ ಬೆಳೆಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರೈತರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಬೆಳೆಗಳನ್ನು ಸಂರಕ್ಷಿಸಬೇಕು ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಬಸವರಾಜ ಗದಗಿನ ಸಲಹೆ ನೀಡಿದ್ದಾರೆ.

ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಬೆಳೆಗಳ ಮೇಲಿನ ಒತ್ತಡ ಕಡಿಮೆ ಮಾಡಲು ನೀರಿನಲ್ಲಿ ಕರಗುವ ರಸಗೊಬ್ಬರಗಳನ್ನು ಎಲೆಗಳ ಮೂಲಕ ಸಿಂಪಡಿಸಬೇಕು. 19:19:19 ಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 3 ರಿಂದ 5 ಗ್ರಾಂ ಪ್ರಮಾಣದಲ್ಲಿ ಬೆರೆಸಿ, ಪ್ರತಿ ಎಕರೆಗೆ 180 ರಿಂದ 200 ಲೀಟರ್ ದ್ರಾವಣವನ್ನು ಸಿಂಪಡಿಸಬಹುದು ಎಂದು ತಿಳಿಸಿದರು.

ಪರ್ಯಾಯವಾಗಿ ಪೊಟ್ಯಾಶಿಯಂ ನೈಟ್ರೇಟ್ (13:0:45) ಅನ್ನು ಪ್ರತಿ ಲೀಟರ್ ನೀರಿಗೆ 5 ರಿಂದ 10 ಗ್ರಾಂ ಪ್ರಮಾಣದಲ್ಲಿ ಬೆರೆಸಿ ಸಿಂಪಡಿಸುವುದರಿಂದ ಬೆಳೆಗಳ ಬೆಳವಣಿಗೆಗೆ ನೆರವಾಗುತ್ತದೆ ಎಂದು ಹೇಳಿದರು.

ಮಣ್ಣಿನಲ್ಲಿರುವ ತೇವಾಂಶ ಉಳಿಸಿಕೊಳ್ಳಲು ಹೊಲಗಳಲ್ಲಿ ಹೊದಿಕೆ ಪದ್ಧತಿ ಅಳವಡಿಸಿಕೊಳ್ಳಬೇಕು. ಕಳೆ ನಿಯಂತ್ರಣ ಮಾಡಿ, ಒಣಗಿದ ಬೆಳೆ ಅವಶೇಷಗಳನ್ನು ಹೊದಿಕೆಯಾಗಿ ಬಳಸುವುದರಿಂದ ಮಣ್ಣಿನ ತೇವಾಂಶ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ತೆಳುವಾಗಿ ಎಡೆಕುಂಟಿ ಹೊಡೆಯುವುದರಿಂದ ಜಮೀನಿನಲ್ಲಿ ಉಂಟಾಗಿರುವ ಬಿರುಕುಗಳು ಮುಚ್ಚಿಕೊಳ್ಳುತ್ತವೆ. ಇದರಿಂದ ಮಳೆಯ ಕೊರತೆಯ ನಡುವೆಯೂ ಬೆಳೆಗಳ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.

ನರೇಗಲ್ಲ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕೃಷಿ ಇಲಾಖೆಯ ಸಿಬ್ಬಂದಿ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ರೈತರಿಗೆ ಈ ಸಲಹೆಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಕೃಷಿಗೆ ನೆರವಾಗುವ ವಿಶೇಷ ಬೈಕ್

ಈ ಸಂದರ್ಭದಲ್ಲಿ ಇಳಕಲ್ ತಾಲೂಕಿನ ಸೂಳಿಬಾವಿ ಗ್ರಾಮದ ರೈತ ಬಸವರಾಜ ಉಳ್ಳಾಗಡ್ಡಿ ಅವರು ತಮ್ಮ ಬೈಕ್‌ನ್ನು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಪರಿವರ್ತಿಸಿರುವುದನ್ನು ಪ್ರದರ್ಶಿಸಿದರು. ಅಂತರ ಬೇಸಾಯ, ಔಷಧಿ ಸಿಂಪರಣೆ ಹಾಗೂ ಹರಗುವ ಕಾರ್ಯಗಳಿಗೆ ಬಳಸಬಹುದಾದ ಈ ವಾಹನವನ್ನು ಸುಮಾರು ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಸಿದ್ಧಪಡಿಸಲಾಗಿದೆ.

ಒಂದು ಎಕರೆ ಕೃಷಿ ಕಾರ್ಯಕ್ಕೆ ಕೇವಲ ಒಂದು ಲೀಟರ್ ಪೆಟ್ರೋಲ್ ಸಾಕಾಗುತ್ತಿದ್ದು, 200 ಲೀಟರ್ ಸಿಂಪಡಣೆ ದ್ರಾವಣವನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ ಎಂದು ಅವರು ಮಾಹಿತಿ ನೀಡಿದರು.

ಗಾಂಜಾ ಬೆಳೆ ಬೆಳೆದರೆ ಕಾನೂನು ಕ್ರಮ

ಕೆಲವು ರೈತರು ಹೊಲಗಳಲ್ಲಿ ಗಾಂಜಾ ಬೆಳೆ ಬೆಳೆಯುತ್ತಿರುವ ಕುರಿತು ಮಾಹಿತಿ ಲಭ್ಯವಾಗುತ್ತಿದೆ. ಗಾಂಜಾ ಬೆಳೆಯುವುದು ಕಾನೂನುಬಾಹಿರವಾಗಿದ್ದು, ನರೇಗಲ್ಲ ಹೋಬಳಿ ವ್ಯಾಪ್ತಿಯಲ್ಲಿ ಅಂತಹ ಪ್ರಕರಣಗಳು ಇಲಾಖೆಯ ಗಮನಕ್ಕೆ ಬಂದರೆ ಸಂಬಂಧಿಸಿದ ರೈತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಸವರಾಜ ಗದಗಿನ ಎಚ್ಚರಿಕೆ ನೀಡಿದರು.

ತುಂಗಭದ್ರಾ ಜಲಾಶಯಕ್ಕೆ ಹೊಸ ಜೀವ: ನಾಳೆ 33 ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆ, ಶಾಲೆಗಳಿಗೆ ರಜೆ

ಕೊಪ್ಪಳ: ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಹೊಸ ರೂಪ ಸಿಕ್ಕಿದ್ದು, ನೂತನ 33 ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆ ಕಾರ್ಯಕ್ರಮ ಜೂನ್ 25ರಂದು ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಕೊಪ್ಪಳ ತಾಲೂಕಿನ ಮುನಿರಾಬಾದ್‌ನ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

ತುಂಗಭದ್ರಾ ಜಲಾಶಯದ 33 ನೂತನ ಕ್ರಸ್ಟ್ ಗೇಟ್‌ಗಳ ಉದ್ಘಾಟನಾ ಸಮಾರಂಭಕ್ಕೆ ಭರದ ಸಿದ್ಧತೆಗಳು ನಡೆದಿವೆ. ಕಾರ್ಯಕ್ರಮ ನಡೆಯಲಿರುವ ಮುನಿರಾಬಾದ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣವನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಜರ್ಮನ್ ಮಾದರಿಯ ಹವಾಮಾನ ನಿಯಂತ್ರಿತ ಬೃಹತ್ ಟೆಂಟ್ ಹಾಗೂ ವಿಐಪಿಗಳಿಗಾಗಿ ಅತ್ಯಾಧುನಿಕ ವೇದಿಕೆ ನಿರ್ಮಿಸಲಾಗಿದೆ.

ಕಾರ್ಯಕ್ರಮದಲ್ಲಿ ಸಾವಿರಾರು ರೈತರು ಭಾಗವಹಿಸುವ ನಿರೀಕ್ಷೆಯಿದ್ದು, ಸುಮಾರು 5 ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದೆ. ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸುವ ನಿರೀಕ್ಷೆಯಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಆಗಮನ ಖಚಿತವಾಗಿದ್ದು, ಅವರು ನಾಳೆ ಬೆಳಿಗ್ಗೆ 9.40ಕ್ಕೆ ಮುನಿರಾಬಾದ್‌ಗೆ ಆಗಮಿಸಲಿದ್ದಾರೆ. ಬಳಿಕ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ 33 ನೂತನ ಕ್ರಸ್ಟ್ ಗೇಟ್‌ಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.

2024ರ ಡಿಸೆಂಬರ್‌ನಲ್ಲಿ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿಹೋಗಿದ್ದ ಪರಿಣಾಮ ಅಪಾರ ಪ್ರಮಾಣದ ನೀರು ನದಿಗೆ ಹರಿದುಹೋಗಿತ್ತು. ಈ ಘಟನೆ ಜಲಾನಯನ ಪ್ರದೇಶದ ರೈತರಲ್ಲಿ ಆತಂಕ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಾಶ್ವತ ಪರಿಹಾರಕ್ಕೆ ಮುಂದಾಗಿ, ಕೇವಲ ಒಂದು ಗೇಟ್ ದುರಸ್ತಿ ಮಾಡುವ ಬದಲು ಜಲಾಶಯದ ಎಲ್ಲಾ 33 ಕ್ರಸ್ಟ್ ಗೇಟ್‌ಗಳನ್ನು ಬದಲಾಯಿಸುವ ಮಹತ್ವದ ನಿರ್ಧಾರ ಕೈಗೊಂಡಿತ್ತು.

ಅದರಂತೆ ಸುಮಾರು 51 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ 33 ನೂತನ ಕ್ರಸ್ಟ್ ಗೇಟ್‌ಗಳನ್ನು ಅಳವಡಿಸಲಾಗಿದ್ದು, ಇದೀಗ ಅವು ಅಧಿಕೃತವಾಗಿ ಲೋಕಾರ್ಪಣೆಯಾಗಲಿವೆ. ಈ ಯೋಜನೆಯಿಂದ ತುಂಗಭದ್ರಾ ಜಲಾಶಯದ ಸುರಕ್ಷತೆ ಮತ್ತಷ್ಟು ಬಲವಾಗಲಿದ್ದು, ರೈತರ ನೀರಾವರಿ ಭರವಸೆಯೂ ಹೆಚ್ಚಲಿದೆ.

ಕನ್ನಡದ ಕೀರ್ತಿ ಪಸರಿಸಿದ ಮಹಿಳಾ ಸಾಧಕಿಯರು: ಸರಸ್ವತಿ ಹುಲ್ಲಣ್ಣವರ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕನ್ನಡ ನಾಡು ಕಲೆ, ಸಾಹಿತ್ಯ, ಶಿಕ್ಷಣ, ವಿಜ್ಞಾನ, ಸಮಾಜಸೇವೆ, ಆಡಳಿತ, ರಾಜಕೀಯ ಹಾಗೂ ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ ಮಹಿಳೆಯರನ್ನು ಕಂಡಿದ್ದು, ಅವರ ಪ್ರತಿಭೆ, ಪರಿಶ್ರಮ ಮತ್ತು ಸಮಾಜಮುಖಿ ಚಿಂತನೆ ಕನ್ನಡದ ಕೀರ್ತಿಯನ್ನು ದೇಶ-ವಿದೇಶಗಳಿಗೆ ಪಸರಿಸಿದೆ ಎಂದು ಶ್ರೀ ಜಗದ್ಗುರು ವೀರಗಂಗಾಧರ ಮಹಿಳಾ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯೆ ಸರಸ್ವತಿ ಹುಲ್ಲಣ್ಣವರ ಹೇಳಿದರು.

ಪಟ್ಟಣದ ರಾಜರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಿದ್ದ “ಕನ್ನಡ ನಾಡಿನ ಅನನ್ಯ ಸಾಧಕೀಯರು” ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದ ಅವರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕನ್ನಡ ನಾಡಿನ ಮಹಿಳೆಯರ ಕೊಡುಗೆಯನ್ನು ಸ್ಮರಿಸಿದರು.

ಸಾಫ್ಟ್‌ವೇರ್ ಇಂಜಿನಿಯರಿಂಗ್ ಕ್ಷೇತ್ರದಿಂದ ಕೃಷಿ ಉದ್ಯಮಿಯಾಗಿ ಹೊರಹೊಮ್ಮಿ ಬಂಜರು ಭೂಮಿಯನ್ನು ಹನಿ ನೀರಾವರಿ ಹಾಗೂ ಸಾವಯವ ಕೃಷಿಯ ಮೂಲಕ ಸಮೃದ್ಧ ತೋಟವನ್ನಾಗಿ ರೂಪಿಸಿದ ಕವಿತಾ ಮಿಶ್ರಾ, ಆಡಳಿತ ಕ್ಷೇತ್ರದ ಡಿ. ರೂಪಾ, ಸಾಹಿತ್ಯ ಕ್ಷೇತ್ರದ ಬೂಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್, ಸಮಾಜಸೇವೆ ಮತ್ತು ಸಾಹಿತ್ಯ ಕ್ಷೇತ್ರದ ಸುಧಾ ಮೂರ್ತಿ, ಪರಿಸರ ಸಂರಕ್ಷಣೆಯ ಸಾಲುಮರದ ತಿಮ್ಮಕ್ಕ ಹಾಗೂ ತುಳಸಿ ಗೌಡ ಸೇರಿದಂತೆ ಅನೇಕ ಮಹಿಳೆಯರ ಸಾಧನೆಗಳನ್ನು ಅವರು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯೋಪಾಧ್ಯಾಯಿನಿ ಶಕುಂತಲಾ ಅಳಗವಾಡಿ ಮಾತನಾಡಿ, ರಾಜಕೀಯ, ಶಿಕ್ಷಣ, ವೈದ್ಯಕೀಯ, ವಿಜ್ಞಾನ, ಸಂಗೀತ, ನೃತ್ಯ, ಕ್ರೀಡೆ ಹಾಗೂ ರಂಗಭೂಮಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಕನ್ನಡ ನಾಡಿನ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಕಾಂಚನಮಾಲಾ ಹಸರೆಡ್ಡಿ, ಅರುಂಧತಿ ಬಿಂಕದಕಟ್ಟಿ ಹಾಗೂ ನಿವೃತ್ತ ಶಿಕ್ಷಕಿ ಸುವರ್ಣ ಹಿರೇಮಠ ಭಾಗವಹಿಸಿ ಕನ್ನಡ ಮಹಿಳೆಯರ ಸಾಧನೆಯನ್ನು ಸ್ಮರಿಸಿದರು.

ವೇದಿಕೆಯ ಅಧ್ಯಕ್ಷೆ ಲಲಿತಾ ಕೆರಿಮನಿ, ಕಾರ್ಯದರ್ಶಿ ನಿರ್ಮಲಾ ಅರಳಿ, ದೇವಕ್ಕ ಪಾಟೀಲ, ರತ್ನಾ ಕರ್ಕಿ, ನೀಲಕ್ಕ ಬೂದಿಹಾಳ, ಸಾವಿತ್ರಿಬಾಯಿ ಗುಡಗೇರಿ, ಮಹಾನಂದ ಕೊಣ್ಣೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಗಾಯತ್ರಿ ಅಂಗಡಿ, ಪಾರ್ವತಿ ಕಳ್ಳಿಮಠ, ನಂದಿನಿ ಮಾಳವಾಡ, ಚಿತ್ರಾ ಯಾಳಗಿ ಹಾಗೂ ನಾಗರತ್ನ ಬುರುಡಿ ಕಾರ್ಯಕ್ರಮ ನಿರ್ವಹಿಸಿದರು.

“ಮಹಿಳೆಯರ ಸಾಧನೆಯ ಹಿಂದೆ ಆತ್ಮವಿಶ್ವಾಸ, ಪರಿಶ್ರಮ ಮತ್ತು ಸಮಾಜದ ಬಗ್ಗೆ ಕಾಳಜಿ ಅಡಗಿರುತ್ತದೆ, ಅವರ ಯಶಸ್ಸು ಇಡೀ ಸಮಾಜಕ್ಕೆ ಪ್ರೇರಣೆ.”

— ಸರಸ್ವತಿ ಹುಲ್ಲಣ್ಣವರ

ಮಳೆಗಾಗಿ ಕಂಬಳಿ ಬೀಸಿ ಪ್ರಾರ್ಥನೆ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ, ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ ಹಾಗೂ ಗ್ರಾಮದಲ್ಲಿ ಸುಖ-ಶಾಂತಿ ನೆಲೆಸಲಿ ಎಂಬ ಆಶಯದೊಂದಿಗೆ ತಾಲೂಕಿನ ಹಂಪಾಪಟ್ಟಣದಲ್ಲಿ ಹಾಲುಮತ ಸಮಾಜದ ವತಿಯಿಂದ ಸಾಂಪ್ರದಾಯಿಕ ಕಂಬಳಿ ಬೀಸುವ ಆಚರಣೆ ಭಕ್ತಿಭಾವದಿಂದ ನೆರವೇರಿತು.

ಗ್ರಾಮದ ಪಾರಂಪರಿಕ ಸಂಪ್ರದಾಯದಂತೆ ಮೂರು ದಿನಗಳ ಕಾಲ ನಡೆದ ಗುರ್ಜಿ ಆಚರಣೆಯ ಸಮಾರೋಪದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕದಿರಲಿ ಹಾಗೂ ಕೃಷಿ ಚಟುವಟಿಕೆಗಳು ಯಶಸ್ವಿಯಾಗಿ ಸಾಗಲಿ ಎಂಬ ಉದ್ದೇಶದಿಂದ ಗ್ರಾಮಸ್ಥರು ಮಳೆರಾಯನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಹಾಲುಮತ ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಸಮಾಜದ ಹಿರಿಯರಾದ ರಂಗಪ್ಪ ಅವರು ಸಂಪ್ರದಾಯಬದ್ಧವಾಗಿ ಕಂಬಳಿ ಬೀಸುವ ಮೂಲಕ ಉತ್ತಮ ಮಳೆಯಾಗುವಂತೆ ಪ್ರಾರ್ಥಿಸಿದರು. ಈ ವೇಳೆ ರೈತರು ಹಾಗೂ ಗ್ರಾಮಸ್ಥರು ಬೆಳೆ ಸಮೃದ್ಧಿ ಮತ್ತು ಗ್ರಾಮ ಕಲ್ಯಾಣಕ್ಕಾಗಿ ಮೊರೆ ಇಟ್ಟರು.

ಹಾಲುಮತ ಸಮುದಾಯದಲ್ಲಿ ಕಂಬಳಿ ಬೀಸುವ ಆಚರಣೆಗೆ ವಿಶೇಷ ಮಹತ್ವವಿದ್ದು, ಇದು ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಜನಪದ ಸಂಪ್ರದಾಯವಾಗಿದೆ. ಪ್ರಕೃತಿಯೊಂದಿಗೆ ಬೆಸೆದುಕೊಂಡಿರುವ ರೈತ ಸಮುದಾಯದ ನಂಬಿಕೆ, ಭಕ್ತಿ ಹಾಗೂ ಕೃಷಿ ಸಂಸ್ಕೃತಿಯ ಪ್ರತೀಕವಾಗಿ ಈ ಆಚರಣೆ ಇಂದಿಗೂ ಜೀವಂತವಾಗಿದೆ.

ಬಳಿಕ ಗ್ರಾಮದ ದೇವರುಗಳ ಪ್ರದಕ್ಷಿಣೆ ನಡೆಸಿ, ಊರಿನ ಹೊರವಲಯದಲ್ಲಿರುವ ಬನ್ನಿ ಮರದ ಬಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಭಕ್ತರಿಗೆ ಕೇಸರಿ ಬಾತ್ ಹಾಗೂ ಉಪ್ಪಿಟ್ಟು ಪ್ರಸಾದ ವಿತರಿಸಲಾಯಿತು.

ಮಹಿಳೆಯರು ಜನಪದ ಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ವಿಶೇಷವಾಗಿ “ಗುರ್ಜಿ ಗುರ್ಜಿ ಎಲ್ಲಿಂದ ಬಂದೆ, ಮಳೆರಾಯನ ಸಂದೇಶ ತಂದೆ” ಎಂಬ ಜನಪದ ಗೀತೆ ಎಲ್ಲರ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಬಿನಾಗರಾಜ್, ಕನಕಪ್ಪ ಉಪ್ಪಾರ್, ರಂಗಪ್ಪ, ಬಸಪ್ಪ, ರಮೇಶ್, ಕರಕಟ್ಟಿ ನಾಗರಾಜ್, ಹುಲಿಗೆಮ್ಮ ಉಪ್ಪಾರ್, ಬಸವರಾಜ್ ಬಳಿಗಾರ, ಸಿ. ಸೋಮನಾಥ್, ಎಸ್. ಬಸವರಾಜ್, ಶರಣ್, ಶರಣಬಸನಗೌಡ, ಟಿ. ಕೊಟ್ರೇಶ್, ಎನ್ನ ನಾಗರಾಜ, ಪತ್ರಿ ಎಲ್ಲಪ್ಪ, ಟಿ. ಗೌತಮ್, ಉಪ್ಪರಂಗಪ್ಪ, ಸಣ್ಣಪ್ಪ ನಾಗರಾಜ, ಉಪ್ಪಾರ್ ಕೊಟ್ರೇಶ್, ಎಂ. ಕೊಟ್ರೇಶ್, ಮಾರ್ಗೇಶ್ ಸೇರಿದಂತೆ ಅನೇಕ ಗ್ರಾಮಸ್ಥರು ಭಾಗವಹಿಸಿದ್ದರು.

ಪೂರ್ವಜರ ಪರಂಪರೆ

“ಕಂಬಳಿ ಬೀಸುವ ಆಚರಣೆ ಕೇವಲ ಸಂಪ್ರದಾಯವಲ್ಲ; ಉತ್ತಮ ಮಳೆ, ಸಮೃದ್ಧ ಬೆಳೆ ಮತ್ತು ರೈತರ ಸುಖಜೀವನಕ್ಕಾಗಿ ನಮ್ಮ ಪೂರ್ವಜರು ರೂಪಿಸಿದ ನಂಬಿಕೆಯ ಸಂಕೇತವಾಗಿದೆ.”

– ಹಾಲುಮತ ಸಮಾಜದ ಮುಖಂಡರು