ಬೆಂಗಳೂರು: ವಿವಿಧ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಅಪರಾಧಿ ಸೈಯದ್ ಅಬ್ರಾರ್‌ನನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ವಿರುದ್ಧ ಕೊಲೆ, ಕೊಲೆಯತ್ನ, ಡಕಾಯಿತಿ ಸೇರಿದಂತೆ ಒಟ್ಟು 67 ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮನೆಗಳ್ಳತನ ಪ್ರಕರಣವೊಂದರ ತನಿಖೆ ನಡೆಸುತ್ತಿದ್ದ ವೇಳೆ ಪೊಲೀಸರು ಸೈಯದ್ ಅಬ್ರಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಆತನ ವಿರುದ್ಧ ಹಲವು ಜಿಲ್ಲೆಗಳಲ್ಲಿ ದಾಖಲಾಗಿರುವ ಅಪರಾಧ ಪ್ರಕರಣಗಳ ಮಾಹಿತಿ ಬಹಿರಂಗಗೊಂಡಿದೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ವಿರುದ್ಧ 30 ಜಾಮೀನುರಹಿತ ವಾರಂಟ್‌ಗಳು ಬಾಕಿ ಇದ್ದು, ಐದು ಪ್ರೊಕ್ಲಮೇಷನ್ ಪ್ರಕರಣಗಳಲ್ಲೂ ಆತ ತಲೆಮರೆಸಿಕೊಂಡಿದ್ದ. ಬೆಂಗಳೂರು, ಕೋಲಾರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿಯೂ ಅಬ್ರಾರ್ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆ್ಯಂಟಿ ರೌಡಿ ಸ್ಕ್ವಾಡ್‌ಗಳನ್ನು ರಚಿಸುವ ಕ್ರಮಕ್ಕೆ ಸರ್ಕಾರ ಮುಂದಾಗಿರುವ ನಡುವೆಯೇ ಈ ಕಾರ್ಯಾಚರಣೆ ಮಹತ್ವ ಪಡೆದುಕೊಂಡಿದೆ.
ಸದ್ಯ ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.



