Home Blog Page 68

ತುಮಕೂರನ್ನು ಬೆಳೆಸುವ ಉದ್ದೇಶವೇ ಹೊರತು ಇತಿಹಾಸ ಬದಲಿಸುವುದಲ್ಲ: ಬಿಜೆಪಿ ಟೀಕೆಗೆ ಪರಮೇಶ್ವರ್ ಸ್ಪಷ್ಟನೆ

ಬೆಂಗಳೂರು: ತುಮಕೂರಿನ ಇತಿಹಾಸ ಅಥವಾ ಅಸ್ತಿತ್ವವನ್ನು ಬದಲಿಸುವ ಉದ್ದೇಶ ಸರ್ಕಾರಕ್ಕಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ಮಾತ್ರ ತುಮಕೂರನ್ನು ಬೆಂಗಳೂರು ಉತ್ತರ ಭಾಗದೊಂದಿಗೆ ಸಂಪರ್ಕಿಸುವ ಕುರಿತು ಪ್ರಸ್ತಾಪ ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ನಗರದ ಸದಾಶಿವನಗರದಲ್ಲಿರುವ ತಮ್ಮ ಸರ್ಕಾರಿ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತುಮಕೂರನ್ನು ಬೆಂಗಳೂರಿಗೆ ಸೇರಿಸುವುದೇ ನಮ್ಮ ಉದ್ದೇಶವಲ್ಲ. ಈ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ತುಮಕೂರು ಜಿಲ್ಲೆಯ ಹೆಸರನ್ನು ಬದಲಿಸುವ ಪ್ರಶ್ನೆಯೇ ಇಲ್ಲ. ತುಮಕೂರಿಗೆ ತನ್ನದೇ ಆದ ಇತಿಹಾಸ, ಅಸ್ಮಿತೆ ಮತ್ತು ಭಾವನಾತ್ಮಕ ಸಂಬಂಧವಿದೆ. ಅದನ್ನು ಬದಲಿಸಲು ಯಾರೂ ಹೋಗುವುದಿಲ್ಲ. ಬಂಡವಾಳ ಹೂಡಿಕೆ ಸೇರಿದಂತೆ ಹೆಚ್ಚಿನ ಅಭಿವೃದ್ಧಿ ಅವಕಾಶಗಳು ತುಮಕೂರಿಗೆ ಸಿಗಲಿ ಎಂಬ ಉದ್ದೇಶದಿಂದ ಮಾತ್ರ ಈ ವಿಚಾರ ಪ್ರಸ್ತಾಪವಾಗಿದೆ” ಎಂದು ತಿಳಿಸಿದರು.

ಬಿಜೆಪಿ ನಾಯಕರು ವಿಷಯವನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ ಪರಮೇಶ್ವರ್, “ತುಮಕೂರಿನ ಬಗ್ಗೆ ಎಲ್ಲರಿಗೂ ಇರುವ ಭಾವನೆ ನನಗೂ ಇದೆ. ನಾನು ಹುಟ್ಟಿ ಬೆಳೆದದ್ದೇ ತುಮಕೂರಿನಲ್ಲಿ. ತುಮಕೂರಿನ ಹೆಸರು, ಆಡಳಿತ ವ್ಯವಸ್ಥೆ ಅಥವಾ ಭೌಗೋಳಿಕ ವಿಸ್ತೀರ್ಣ ಯಾವುದೂ ಬದಲಾಗುವುದಿಲ್ಲ” ಎಂದು ಪುನರುಚ್ಚರಿಸಿದರು.

ಬೆಂಗಳೂರಿಗೆ ಹತ್ತಿರ ಇರುವ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ವಲಯದೊಂದಿಗೆ ಅಭಿವೃದ್ಧಿ ದೃಷ್ಟಿಯಿಂದ ಸಂಪರ್ಕಿಸಬೇಕೆಂದು ಕೇಳಲಾಗಿದೆ ಅಷ್ಟೇ ಎಂದು ಹೇಳಿದರು.

ದೆಹಲಿ ಸಮೀಪದ ನೋಯ್ಡಾ ಮಾದರಿಯನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು, “ದೇಶದ ವಿವಿಧ ಭಾಗಗಳಲ್ಲಿ ಅಭಿವೃದ್ಧಿಯನ್ನು ವಿಕೇಂದ್ರೀಕರಿಸುವ ಉದ್ದೇಶದಿಂದ ಈ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ತುಮಕೂರನ್ನೂ ಅಭಿವೃದ್ಧಿಪಡಿಸಬಾರದೆಯೇ?” ಎಂದು ಪ್ರಶ್ನಿಸಿದರು.

ವನ್ಯಜೀವಿ ದಾಳಿ ಹೆಚ್ಚಳಕ್ಕೆ ಸರ್ಕಾರದ ಕಠಿಣ ಕ್ರಮ: ಓಪನ್ ಜೀಪ್ ಸಫಾರಿಗೆ ಬ್ರೇಕ್- ಪನ್ಸೋಲಿ ಆನೆ ಬಿಡಾರಕ್ಕೆ ಪ್ರವೇಶ ನಿರ್ಬಂಧ

ಬೆಂಗಳೂರು/ಕಾರವಾರ, ಮೇ 21: ರಾಜ್ಯದಲ್ಲಿ ವನ್ಯಜೀವಿ ದಾಳಿ ಪ್ರಕರಣಗಳು ಸರಣಿ ರೂಪದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆ ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದ್ದು, ಇನ್ನುಮುಂದೆ ಓಪನ್ ಜೀಪ್ ಸಫಾರಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಪ್ರವಾಸಿಗರಿಗೆ ಕೇವಲ ಬಸ್ ಸಫಾರಿಗೆ ಮಾತ್ರ ಅವಕಾಶ ನೀಡಲು ಸರ್ಕಾರ ಮುಂದಾಗಿದೆ.

ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ನಡೆದ ಭೀಕರ ದುರಂತ, ನಾಗಮಲೆ ಭಾಗದಲ್ಲಿ ಚಿರತೆ ದಾಳಿಗೆ 10 ವರ್ಷದ ಬಾಲಕ ಬಲಿಯಾದ ಘಟನೆ ಹಾಗೂ ಬಂಡೀಪುರ-ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದ್ದ ಹುಲಿ ದಾಳಿಗಳ ಸರಣಿ ಪ್ರಕರಣಗಳು ಸರ್ಕಾರವನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿವೆ.

ದುಬಾರೆ ಶಿಬಿರದಲ್ಲಿ ಮೇ 18ರಂದು ಮದವೇರಿದ್ದ ಕಂಜನ್ ಆನೆ ಮಾರ್ತಾಂಡ ಆನೆ ಮೇಲೆ ದಾಳಿ ನಡೆಸಿದ ಪರಿಣಾಮ ನಿಯಂತ್ರಣ ತಪ್ಪಿದ ಮಾರ್ತಾಂಡ ಪ್ರವಾಸಿಗರ ಮೇಲೆ ಬಿದ್ದಿತ್ತು. ಘಟನೆಯಲ್ಲಿ ಚೆನ್ನೈ ಮೂಲದ ಮಹಿಳೆ ತುಳಸಿ ಸಾವನ್ನಪ್ಪಿದ್ದರೆ, ಮಾರ್ತಾಂಡ ಆನೆಯೂ ಗಂಭೀರ ಗಾಯಗಳಿಂದ ಬಳಿಕ ಮೃತಪಟ್ಟಿತ್ತು. ಈ ಘಟನೆ ರಾಜ್ಯಾದ್ಯಂತ ಭಾರೀ ಆತಂಕ ಸೃಷ್ಟಿಸಿತ್ತು.

ಇದರ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪನ್ಸೋಲಿ ಆನೆ ಬಿಡಾರಕ್ಕೂ ಸಾರ್ವಜನಿಕರ ಪ್ರವೇಶ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ರಾಜ್ಯದ ವಿವಿಧ ಆನೆ ಶಿಬಿರಗಳು ಹಾಗೂ ಸಫಾರಿ ಕೇಂದ್ರಗಳಲ್ಲಿ ಭದ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಅರಣ್ಯ ಇಲಾಖೆ ಮುಂದಾಗಿದೆ.

ಹೊಸ ಎಸ್‌ಒಪಿ ಪ್ರಕಾರ, ಈಗಾಗಲೇ ಬಳಕೆಯಲ್ಲಿರುವ ಓಪನ್ ಜೀಪ್‌ಗಳಲ್ಲಿ ಸಫಾರಿ ನಡೆಸಬೇಕಾದರೆ ಕಡ್ಡಾಯವಾಗಿ ಒಡೆಯದ ಗ್ಲಾಸ್ ಅಥವಾ ಕಬ್ಬಿಣದ ಮೆಶ್ ಅಳವಡಿಸಬೇಕು ಎಂದು ಸೂಚಿಸಲಾಗಿದೆ. ಪ್ರವಾಸಿಗರು ಮತ್ತು ವನ್ಯಜೀವಿಗಳ ನಡುವೆ ಸುರಕ್ಷಿತ ಅಂತರ ಕಾಪಾಡುವುದು, ನಿಯಂತ್ರಿತ ಪ್ರವಾಸ ವ್ಯವಸ್ಥೆ ರೂಪಿಸುವುದು ಹಾಗೂ ಅಪಾಯದ ಪ್ರದೇಶಗಳಲ್ಲಿ ಮಾನವ ಚಟುವಟಿಕೆ ಕಡಿಮೆ ಮಾಡುವುದು ಸರ್ಕಾರದ ಮುಂದಿನ ಗುರಿಯಾಗಿದೆ.

ರಾಜ್ಯದ ಎಲ್ಲಾ ವನ್ಯಜೀವಿ ಪ್ರವಾಸಿ ತಾಣಗಳಲ್ಲಿ ಹೆಚ್ಚುವರಿ ಭದ್ರತಾ ಮಾನದಂಡ ಜಾರಿಗೆ ತರಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದ್ದು, ಶೀಘ್ರದಲ್ಲೇ ಸಮಗ್ರ ಮಾರ್ಗಸೂಚಿ ಪ್ರಕಟವಾಗುವ ಸಾಧ್ಯತೆ ಇದೆ.

ಆಸ್ಪತ್ರೆ ವಿವಾದ ಮರೆತ ಸಲ್ಲು ಭಾಯ್: ಒಂದೇ ದಿನದಲ್ಲಿ ಪಾಪರಾಜಿಗಳನ್ನು ಕ್ಷಮಿಸಿದ ನಟ

ಮುಂಬೈ: ಆಸ್ಪತ್ರೆ ಆವರಣದಲ್ಲಿ ಪಾಪರಾಜಿಗಳ ವರ್ತನೆಗೆ ಸಿಟ್ಟುಗೊಂಡು ತರಾಟೆಗೆ ತೆಗೆದುಕೊಂಡಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಇದೀಗ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ. ಆಸ್ಪತ್ರೆ ವಿವಾದದ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಅವರು, ಫೋಟೋಗ್ರಾಫರ್‌ಗಳ ಕ್ಷಮೆಯನ್ನು ಸ್ವೀಕರಿಸಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಮುಂಬೈನಲ್ಲಿ ನಡೆದ ‘ರಾಜಾ ಶಿವಾಜಿ’ ಚಿತ್ರದ ಸಕ್ಸಸ್ ಪಾರ್ಟಿಗೆ ಆಗಮಿಸಿದ್ದ ಸಲ್ಮಾನ್ ಖಾನ್ ಅವರನ್ನು ಕಂಡ ಪಾಪರಾಜಿಗಳು, ‘ಸಾರಿ ಭಾಯ್’ ಎಂದು ಒಟ್ಟಾಗಿ ಕ್ಷಮೆಯಾಚಿಸಿದರು. ಸಲ್ಮಾನ್ ಕೂಡ ಯಾವುದೇ ಅಸಮಾಧಾನ ತೋರದೆ, ನಗುಮುಖದಲ್ಲೇ ಪ್ರತಿಕ್ರಿಯಿಸಿದರು.

ಭದ್ರತಾ ಸಿಬ್ಬಂದಿ ಫೋಟೋಗ್ರಾಫರ್‌ಗಳನ್ನು ತಡೆಯಲು ಯತ್ನಿಸಿದಾಗ, ಸಲ್ಮಾನ್ ಸ್ವತಃ ಅವರನ್ನು ಹತ್ತಿರ ಬರಲು ಅವಕಾಶ ಮಾಡಿಕೊಟ್ಟರು. ಬಳಿಕ ‘ಏನಾಯ್ತು?’ ಎಂದು ಕೇಳಿದ ಅವರಿಗೆ ಪಾಪರಾಜಿಗಳು ಮತ್ತೆ ಕ್ಷಮೆ ಕೇಳಿದರು. ತಕ್ಷಣವೇ ‘ಎಲ್ಲವೂ ಸರಿ’ ಎಂಬಂತೆ ಕೈ ಸನ್ನೆ ಮಾಡಿದ ಸಲ್ಮಾನ್ ವಾತಾವರಣವನ್ನು ಸಾಮಾನ್ಯಗೊಳಿಸಿದರು.

ಈ ಸಂದರ್ಭ ಫೋಟೋಗ್ರಾಫರ್ ಒಬ್ಬ ‘ಲವ್ ಯೂ ಭಾಯ್’ ಎಂದು ಕೂಗಿದಾಗ, ಸಲ್ಮಾನ್ ನಗುತ್ತಾ ಪ್ರತಿಕ್ರಿಯಿಸಿದ ವಿಡಿಯೋ ಈಗ ವೈರಲ್ ಆಗಿದೆ. ಬಳಿಕ ‘ಸ್ವಲ್ಪ ಜೋರಾಗಿ ಹೇಳಿ… ಕೇಳಿಸಲಿಲ್ಲ’ ಎಂದು ತಮಾಷೆ ಮಾಡಿದ್ದೂ ಅಭಿಮಾನಿಗಳ ಗಮನ ಸೆಳೆದಿದೆ.

ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ, ಪಾಪರಾಜಿಗಳು ಆಸ್ಪತ್ರೆ ಹೊರಗಡೆ ಗದ್ದಲ ಸೃಷ್ಟಿಸಿ ‘ಮಾತೃಭೂಮಿ’ ಚಿತ್ರದ ಹೆಸರನ್ನು ಜೋರಾಗಿ ಕೂಗಿದ್ದರು. ಇದರಿಂದ ಕೋಪಗೊಂಡ ಸಲ್ಮಾನ್, ‘ನಿಮಗೆ ತಲೆ ಕೆಟ್ಟಿದೆಯಾ?’ ಎಂದು ಪ್ರಶ್ನಿಸಿ ಖಾಸಗಿತನದ ಮಹತ್ವದ ಬಗ್ಗೆ ಕಿಡಿಕಾರಿದ್ದರು.

ಆ ಘಟನೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್ ಹಾಕಿದ್ದ ಅವರು, ‘ನನ್ನ ನೋವಿನಿಂದ ಹಣ ಮಾಡಬೇಡಿ’ ಎಂದು ಪಾಪರಾಜಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಆದರೆ ಈಗ ಅದೇ ಪಾಪರಾಜಿಗಳೊಂದಿಗೆ ಸ್ನೇಹಪೂರ್ಣವಾಗಿ ವರ್ತಿಸಿರುವ ಸಲ್ಮಾನ್ ಖಾನ್ ಅವರ ನಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಕನಿಷ್ಠ ವೇತನ ಹೆಚ್ಚಳದ ಹೊರೆ ಗುತ್ತಿಗೆದಾರರ ಮೇಲೆ ಹಾಕಲು ಸಾಧ್ಯವಿಲ್ಲ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಾಕೀತು

ಬೆಂಗಳೂರು: ರಾಜ್ಯ ಸರ್ಕಾರ ಕನಿಷ್ಠ ವೇತನ ಪರಿಷ್ಕರಣೆ ಮಾಡಿದ ಬಳಿಕ, ಚಾಲ್ತಿಯಲ್ಲಿರುವ ಗುತ್ತಿಗೆ ಒಪ್ಪಂದವನ್ನು ನೆಪವೊಡ್ಡಿ ಕಾರ್ಮಿಕರಿಗೆ ಹೆಚ್ಚುವರಿ ವೇತನ ಪಾವತಿಸಲು ಗುತ್ತಿಗೆದಾರರಿಗೆ ಹಣ ನೀಡುವುದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಬೆಂಗಳೂರಿನ ಏಷ್ಯನ್ ಸೆಕ್ಯೂರಿಟಿ ಆ್ಯಂಡ್ ಪರ್ಸನಲ್ ಅರೇಂಜ್‌ಮೆಂಟ್ಸ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಭದ್ರತಾ ಸಿಬ್ಬಂದಿ ಮತ್ತು ಹೌಸ್‌ಕೀಪಿಂಗ್ ಸಿಬ್ಬಂದಿ ಪೂರೈಸಿದ ಸಂಸ್ಥೆಗೆ ಬಾಕಿಯಾಗಿರುವ ₹3.5 ಕೋಟಿ ಮೊತ್ತವನ್ನು ಶೇ.12ರಷ್ಟು ಬಡ್ಡಿಯೊಂದಿಗೆ ಪಾವತಿಸುವಂತೆ ಕರ್ನಾಟಕ ವಿಧಾನಸಭಾ ಸಚಿವಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಕನಿಷ್ಠ ವೇತನವನ್ನು ಸರ್ಕಾರವೇ ಪರಿಷ್ಕರಿಸಿದ ನಂತರ, ಗುತ್ತಿಗೆದಾರರಿಗೆ ಉಂಟಾಗುವ ಹೆಚ್ಚುವರಿ ವೆಚ್ಚವನ್ನು ಭರಿಸಲು ನಿರಾಕರಿಸುವುದು ಅಸಂಬದ್ಧ, ತರ್ಕಹೀನ ಹಾಗೂ ಸಾರ್ವಜನಿಕ ನೀತಿಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

“ರಾಜ್ಯ ಸರ್ಕಾರ ಮಾಡಿಕೊಂಡ ಯಾವುದೇ ಖಾಸಗಿ ಅಥವಾ ವಾಣಿಜ್ಯ ಗುತ್ತಿಗೆ ಒಪ್ಪಂದಗಳು ದೇಶದ ಶಾಸನಬದ್ಧ ಕಾನೂನುಗಳನ್ನು ಮೀರುವಂತಿಲ್ಲ. ಹಳೆಯ ದರಗಳ ಆಧಾರದ ಮೇಲೆ ಒಪ್ಪಂದವಾಗಿದೆ ಎಂಬ ಕಾರಣಕ್ಕೆ ಸರ್ಕಾರ ಅಧಿಸೂಚನೆ ಮೂಲಕ ಹೆಚ್ಚಿಸಿರುವ ಕನಿಷ್ಠ ವೇತನವನ್ನು ತಪ್ಪಿಸಲು ಸಾಧ್ಯವಿಲ್ಲ” ಎಂದು ಪೀಠ ಸ್ಪಷ್ಟಪಡಿಸಿದೆ.

ಅರ್ಜಿದಾರ ಸಂಸ್ಥೆ ಹಾಗೂ ಸರ್ಕಾರದ ನಡುವೆ ನಡೆದ ಒಪ್ಪಂದದಲ್ಲಿ ವೇತನ ಪರಿಷ್ಕರಣೆ ಕುರಿತು ಯಾವುದೇ ಸ್ಪಷ್ಟ ಉಲ್ಲೇಖ ಇರಲಿಲ್ಲ. ಹೆಚ್ಚುವರಿ ವೇತನದ ಹೊರೆ ಗುತ್ತಿಗೆದಾರರೇ ಭರಿಸಬೇಕು ಎಂಬ ಷರತ್ತು ಇದ್ದರೂ, ಸಂವಿಧಾನದ ವಿಧಿ 12ರ ಅಡಿಯಲ್ಲಿ ಬರುವ ಸರ್ಕಾರ ಹಾಗೂ ಅದರ ಅಂಗ ಸಂಸ್ಥೆಗಳು ಖಾಸಗಿ ಕಂಪನಿಗಳಂತೆ ಲಾಭದ ದೃಷ್ಟಿಯಿಂದ ಮಾತ್ರ ವರ್ತಿಸಬಾರದು ಎಂದು ನ್ಯಾಯಾಲಯ ಹೇಳಿದೆ.

“ಸರ್ಕಾರವು ಮಾದರಿ ಉದ್ಯೋಗದಾತವಾಗಬೇಕು. ಗುತ್ತಿಗೆಯ ಕಟ್ಟುನಿಟ್ಟಿನ ಷರತ್ತುಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಕಲ್ಯಾಣ ಕಾಯ್ದೆಗಳ ಉಲ್ಲಂಘನೆಗೆ ಪರೋಕ್ಷವಾಗಿ ಕಾರಣವಾಗಬಾರದು” ಎಂದು ಪೀಠ ಅಭಿಪ್ರಾಯಪಟ್ಟಿದೆ.

ಕನಿಷ್ಠ ವೇತನ ಪಾವತಿಸುವುದು ಕೇವಲ ಒಪ್ಪಂದದ ವಿಷಯವಲ್ಲ; ಅದು ಶಾಸನಬದ್ಧ ಹಾಗೂ ಸಾಂವಿಧಾನಿಕ ಜವಾಬ್ದಾರಿಯಾಗಿದೆ. ಕನಿಷ್ಠ ವೇತನಕ್ಕಿಂತ ಕಡಿಮೆ ಸಂಬಳ ನೀಡುವುದು ಸಂವಿಧಾನದ 23ನೇ ವಿಧಿಯ ಅಡಿಯಲ್ಲಿ ಬಲವಂತದ ದುಡಿಮೆಗೆ ಸಮಾನವಾಗುತ್ತದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಕರಣದ ಹಿನ್ನೆಲೆ ಕುರಿತು ಹೇಳುವುದಾದರೆ, ಅರ್ಜಿದಾರ ಸಂಸ್ಥೆ ಕರ್ನಾಟಕ ವಿಧಾನಸಭಾ ಸಚಿವಾಲಯಕ್ಕೆ ಹೌಸ್‌ಕೀಪಿಂಗ್ ಹಾಗೂ ಭದ್ರತಾ ಸಿಬ್ಬಂದಿ ಒದಗಿಸುತ್ತಿತ್ತು. 2016ರಲ್ಲಿ ರಾಜ್ಯ ಸರ್ಕಾರ ಕನಿಷ್ಠ ವೇತನ ಹೆಚ್ಚಿಸಿ ಅಧಿಸೂಚನೆ ಹೊರಡಿಸಿದ ಬಳಿಕ, ಸಂಸ್ಥೆ ಕಾರ್ಮಿಕರಿಗೆ ಹೆಚ್ಚಿದ ವೇತನ ಪಾವತಿಸಿತ್ತು.

ಈ ಹೆಚ್ಚುವರಿ ವೆಚ್ಚದ ₹3.5 ಕೋಟಿ ಮೊತ್ತವನ್ನು ಪಾವತಿಸುವಂತೆ ವಿಧಾನಸಭಾ ಸಚಿವಾಲಯಕ್ಕೆ ಬಿಲ್ ಸಲ್ಲಿಸಲಾಗಿತ್ತು. ಆದರೆ ಗುತ್ತಿಗೆ ಹಳೆಯ ದರಗಳ ಆಧಾರದ ಮೇಲೆ ಇರುವುದರಿಂದ ಹೆಚ್ಚುವರಿ ವೆಚ್ಚವನ್ನು ಗುತ್ತಿಗೆದಾರರೇ ಭರಿಸಬೇಕು ಎಂದು ಹೇಳಿ ಸರ್ಕಾರ 2024ರಲ್ಲಿ ಬಿಲ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸಂಸ್ಥೆ ಹೈಕೋರ್ಟ್ ಮೊರೆ ಹೋಗಿತ್ತು.

ಲಾಡ್ಜ್ ನಲ್ಲಿ ತಂಗಿದ್ದ ತಮಿಳುನಾಡು ಮೂಲದ ವ್ಯಕ್ತಿಗೆ ಹೃದಯಾಘಾತ! ಸ್ಥಳದಲ್ಲೇ ಸಾವು

ಬೆಂಗಳೂರು: ನಗರದ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಲಾಡ್ಜ್ೊಂದರಲ್ಲಿ ತಂಗಿದ್ದ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಮುರುಗನ್ ಮಧು (35) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪುಳಿಯಂಪಟ್ಟಿ ನಿವಾಸಿಯಾಗಿದ್ದ ಮಧು, ಬುಧವಾರ ಮಡಿವಾಳದ ಗೋಲ್ಡನ್ ನೆಕ್ಸ್ ಲಾಡ್ಜ್‌ನಲ್ಲಿ ತಂಗಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಲಾಡ್ಜ್ ಮಾಲೀಕರು ನೀಡಿದ ದೂರಿನ ಮೇರೆಗೆ ಮಡಿವಾಳ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಮಧು ಅವಿವಾಹಿತರಾಗಿದ್ದು ತಾಯಿಯೊಂದಿಗೆ ವಾಸಿಸುತ್ತಿದ್ದರು. ಅವರು ಕಿಡ್ನಿ ಸಂಬಂಧಿತ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಈ ಹಿಂದೆ ಎರಡು ಬಾರಿ ಲಘು ಹೃದಯಾಘಾತಕ್ಕೂ ಒಳಗಾಗಿದ್ದರು ಎನ್ನಲಾಗಿದೆ.

ಮೇ 18ರಂದು ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳುತ್ತಿರುವುದಾಗಿ ತಾಯಿಗೆ ತಿಳಿಸಿ ಮನೆಯಿಂದ ಹೊರಟಿದ್ದ ಮಧು, ಬಳಿಕ ಮಡಿವಾಳದ ಗೋಲ್ಡನ್ ನೆಕ್ಸ್ ಲಾಡ್ಜ್‌ಗೆ ಬಂದಿದ್ದರು ಎಂದು ತಿಳಿದುಬಂದಿದೆ.

ಫಜಿ ಉಲ್ಲಾ ಖಾನ್ ಹೆಸರಿನಲ್ಲಿ ಬುಕ್ ಮಾಡಲಾಗಿದ್ದ ಕೊಠಡಿಯಲ್ಲಿ ಮಧು ತಂಗಿದ್ದರು. ಬುಧವಾರ ಹೃದಯಾಘಾತದಿಂದ ಮೃತಪಟ್ಟಿರುವುದು ಪತ್ತೆಯಾಗಿದ್ದು, ಆರೋಗ್ಯ ಸಮಸ್ಯೆಯೇ ಸಾವಿಗೆ ಕಾರಣವಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಕರಣ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಬಾಲಿಷ ಹೇಳಿಕೆ ಸಹಿಸುವುದಿಲ್ಲ: ಪ್ರಧಾನಿ ಮೋದಿ ಕುರಿತು ರಾಹುಲ್ ಹೇಳಿಕೆಗೆ ವಿಜಯೇಂದ್ರ ಕಿಡಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ, ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿರುವುದನ್ನು ರಾಹುಲ್ ಗಾಂಧಿ ಸಹಿಸಿಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದು ಆರೋಪಿಸಿದರು.

“ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮಟ್ಟದ ನಾಯಕರು ಈ ರೀತಿಯ ಬಾಲಿಷ ಹೇಳಿಕೆಗಳನ್ನು ನೀಡಬಾರದು. ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರ ಬಗ್ಗೆ ಅವಮಾನಕಾರಿಯಾಗಿ ಮಾತನಾಡುವುದು ಸರಿಯಲ್ಲ” ಎಂದು ವಿಜಯೇಂದ್ರ ಹೇಳಿದರು.

ಹಿಂದುಳಿದ ವರ್ಗದ ಸಮುದಾಯದಿಂದ ಬಂದ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಭಾರತವನ್ನು ವಿಶ್ವದ ನಾಲ್ಕನೇ ಅತಿ ದೊಡ್ಡ ಆರ್ಥಿಕ ಶಕ್ತಿಯನ್ನಾಗಿ ರೂಪಿಸಿರುವ ನಾಯಕತ್ವವನ್ನು ಕಾಂಗ್ರೆಸ್ ಸಹಿಸಿಕೊಳ್ಳುತ್ತಿಲ್ಲ ಎಂದು ಟೀಕಿಸಿದರು.

ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಪಡಿಸುವ ಧೈರ್ಯ ಕಾಂಗ್ರೆಸ್‌ಗೆ ಇರಲಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಆ ನಿರ್ಧಾರ ಕೈಗೊಳ್ಳಲಾಯಿತು. ದೇಶದಲ್ಲಿ ನಕ್ಸಲಿಸಂ ನಿರ್ಮೂಲನೆ ಮಾಡುವ ದಿಸೆಯಲ್ಲಿಯೂ ಅಮಿತ್ ಶಾ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

ಪ್ರಧಾನಿ ಮೋದಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ದೇಶದ ಅಭಿವೃದ್ಧಿಯನ್ನು ಸಹಿಸದೇ ರಾಹುಲ್ ಗಾಂಧಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಕ್ಷಮೆ ಕೇಳದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಶೃಂಗೇರಿ ಮರು ಮತ ಎಣಿಕೆ ಕೇಸ್‌ಗೆ ಹೊಸ ಟ್ವಿಸ್ಟ್: ಟಿ.ಡಿ.ರಾಜೇಗೌಡರಿಗೆ ಮತ್ತೆ ಸುಪ್ರೀಂ ಕೋರ್ಟ್ ರಕ್ಷಣೆ

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಮರುಎಣಿಕೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡರಿಗೆ ಸುಪ್ರೀಂ ಕೋರ್ಟ್ ಮತ್ತೆ ಮಧ್ಯಂತರ ರಿಲೀಫ್ ನೀಡಿದೆ. ಪ್ರಕರಣದ ವಿಚಾರಣೆಯನ್ನು ಜುಲೈ 23ಕ್ಕೆ ಮುಂದೂಡಿರುವ ನ್ಯಾಯಾಲಯ, ಅದುವರೆಗೂ ಯಥಾಸ್ಥಿತಿ ಮುಂದುವರಿಯಬೇಕು ಎಂದು ಸ್ಪಷ್ಟ ಸೂಚನೆ ನೀಡಿದೆ.

ಬೈಕ್‌ಗೆ ಡಿಕ್ಕಿ ಹೊಡೆದ ಅಪರಿಚಿತ ವಾಹನ: ಇಬ್ಬರು ಯುವಕರ ಸ್ಥಳದಲ್ಲೇ ಸಾವು

0

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೆಳಗಲಿ ಗ್ರಾಮದ ಬಳಿ ನಡೆದ ಭೀಕರ ಹಿಟ್ ಅಂಡ್ ರನ್ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ.

ಗಂಡಸಿ ಹೋಬಳಿಯ ಕಾಲೇನಹಳ್ಳಿ ಗ್ರಾಮದ ನಿವಾಸಿಗಳಾದ ಪ್ರದೀಪ್ (22) ಮತ್ತು ಅರುಣ್ (21) ಮೃತ ದುರ್ದೈವಿಗಳಾಗಿದ್ದಾರೆ.

ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೈಕ್‌ನಲ್ಲಿ ತಮ್ಮ ಗ್ರಾಮಕ್ಕೆ ಮರಳುತ್ತಿದ್ದ ವೇಳೆ ಸೇತುವೆ ಸಮೀಪ ಅಪರಿಚಿತ ವಾಹನ ಅವರ ಬೈಕ್‌ಗೆ ವೇಗವಾಗಿ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಅಪಘಾತದ ತೀವ್ರತೆಗೆ ಇಬ್ಬರೂ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಘಟನೆ ಬಳಿಕ ವಾಹನ ಚಾಲಕ ಯಾವುದೇ ನೆರವು ನೀಡದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಹೀಗಾಗಿ ಪ್ರಕರಣ ಹಿಟ್ ಅಂಡ್ ರನ್ ಆಗಿರುವ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಸ್ತೆ ಪರಿಶೀಲನೆಗೆ ಬಂದ ಸಿ.ಟಿ.ರವಿ ವಿರುದ್ಧ ಘೇರಾವ್: ಚಿಕ್ಕಮಗಳೂರಲ್ಲಿ ಹೈಡ್ರಾಮಾ

ಚಿಕ್ಕಮಗಳೂರು: ಚಿಕ್ಕಮಗಳೂರು-ಕೆ.ಆರ್.ಪೇಟೆ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆಗೆ ಬಂದಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಘೇರಾವ್ ಹಾಕಿ ಪ್ರತಿಭಟನೆ ನಡೆಸಿದ ಪರಿಣಾಮ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ರಸ್ತೆ ಕಾಮಗಾರಿಯಲ್ಲಿ ಗುತ್ತಿಗೆ ಸಂಸ್ಥೆಯ ನಿರ್ಲಕ್ಷ್ಯದ ಬಗ್ಗೆ ಶಾಸಕ ಎಚ್.ಡಿ.ತಮ್ಮಯ್ಯ ಇತ್ತೀಚೆಗೆ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ, ಕಾಮಗಾರಿಯ ಪ್ರಗತಿ ಪರಿಶೀಲಿಸಲು ಸಿ.ಟಿ.ರವಿ ಗುರುವಾರ ಸ್ಥಳಕ್ಕೆ ಭೇಟಿ ನೀಡಿದ್ದರು.

ರಾಂಪುರ ಸರ್ಕಲ್ ಬಳಿ ಅವರು ವಾಹನದಿಂದ ಇಳಿಯುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಸುತ್ತುವರಿದು ಧಿಕ್ಕಾರ ಕೂಗಲು ಆರಂಭಿಸಿದರು. ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ಜೋರಾಗಿ ತಳ್ಳಾಟ-ನೂಕಾಟಕ್ಕೂ ಕಾರಣವಾಯಿತು.

“ಇಪ್ಪತ್ತು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ” ಎಂದು ಆರೋಪಿಸಿದ ಕಾಂಗ್ರೆಸ್ ಕಾರ್ಯಕರ್ತರು ಸಿ.ಟಿ.ರವಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಎರಡೂ ಬಣಗಳನ್ನು ನಿಯಂತ್ರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

ತಮಿಳುನಾಡಿನಲ್ಲಿ ವಿಜಯ್ ಸಚಿವ ಸಂಪುಟ ವಿಸ್ತರಣೆ: 23 ಶಾಸಕರು ಸಚಿವರಾಗಿ ಪ್ರಮಾಣವಚನ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, 23 ಶಾಸಕರು ನೂತನ ಸಚಿವರಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಟಿವಿಕೆ ಪಕ್ಷದ 21 ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರು ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ವಿಜಯ್ ಸರ್ಕಾರದಲ್ಲಿ ಸಚಿವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ತಮಿಳುನಾಡು ವಿಧಾನಸಭೆಯ ಬಲದ ಪ್ರಕಾರ ಗರಿಷ್ಠ 35 ಸಚಿವರನ್ನು ಸರ್ಕಾರ ಹೊಂದಲು ಅವಕಾಶವಿದೆ.

ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಟಿವಿಕೆ ಪಕ್ಷದ ಹಲವು ಪ್ರಮುಖ ಶಾಸಕರು ಸೇರಿದ್ದಾರೆ. ಜೊತೆಗೆ ಕಾಂಗ್ರೆಸ್ ಪಕ್ಷದ ರಾಜೇಶ್ ಕುಮಾರ್ ಹಾಗೂ ತಿರು ಪಿ. ವಿಶ್ವನಾಥನ್ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸುಮಾರು ಆರು ದಶಕಗಳ ಬಳಿಕ ತಮಿಳುನಾಡು ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷ ಸಚಿವ ಸಂಪುಟದ ಭಾಗವಾಗಿರುವುದು ವಿಶೇಷವೆಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. 1967ರಲ್ಲಿ ಎಂ. ಭಕ್ತವತ್ಸಲಂ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಳಿಕ ಪಕ್ಷಕ್ಕೆ ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನ ದೊರೆತಿರಲಿಲ್ಲ.

ಇನ್ನೊಂದೆಡೆ, ಮೈತ್ರಿ ಪಕ್ಷಗಳಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಹಾಗೂ ವಿದುತಲೈ ಚಿರುತೈಗಲ್ ಕಚ್ಚಿ ಪಕ್ಷಗಳಿಗೆ ತಲಾ ಒಂದು ಸಚಿವ ಸ್ಥಾನ ಮೀಸಲಿಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈವರೆಗೆ ಆ ಪಕ್ಷಗಳು ತಮ್ಮ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿಲ್ಲ. ಮುಂದಿನ ಹಂತದಲ್ಲಿ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ.

ಗಮನಾರ್ಹವಾಗಿ, ಮೇ 10ರಂದು ಜೋಸೆಫ್ ವಿಜಯ್ ಮುಖ್ಯಮಂತ್ರಿಯಾಗಿ ಹಾಗೂ 9 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು. ಇದೀಗ ನಡೆದ ಸಚಿವ ಸಂಪುಟ ವಿಸ್ತರಣೆಯೊಂದಿಗೆ ವಿಜಯ್ ಸರ್ಕಾರ ಆಡಳಿತಾತ್ಮಕ ಚಟುವಟಿಕೆಗಳನ್ನು ಮತ್ತಷ್ಟು ವೇಗಗೊಳಿಸುವ ನಿರೀಕ್ಷೆ ವ್ಯಕ್ತವಾಗಿದೆ.

 

error: Content is protected !!