Home Blog Page 7

ವಿಜಯಪುರದಲ್ಲಿ ಮಳೆಯ ರೌದ್ರನರ್ತನ: ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು!

ವಿಜಯಪುರ: ಭಾರೀ ಗಾಳಿ ಸಹಿತ ಸುರಿದ ಮಳೆಗೆ ಮನೆ ಮೇಲ್ಚಾವಣಿ ಕುಸಿದು ಪತಿ-ಪತ್ನಿ ಹಾಗೂ ಇಬ್ಬರು ಮಕ್ಕಳು ಜೀವಂತ ಸಮಾಧಿಯಾಗಿರುವ ಹೃದಯವಿದ್ರಾವಕ ಘಟನೆ ವಿಜಯಪುರ ಜಿಲ್ಲೆಯ ಮೊರಟಗಿ ಗ್ರಾಮದಲ್ಲಿ ನಡೆದಿದೆ.

ಆಲಮೇಲ ತಾಲೂಕಿನ ಮೊರಟಗಿ ಗ್ರಾಮದಲ್ಲಿ ನಡೆದ ಈ ದುರಂತದಲ್ಲಿ ಗುರುನಾಥ ಬಡಿಗೇರ (35), ಪತ್ನಿ ಜ್ಯೋತಿ ಬಡಿಗೇರ (28), ಮಕ್ಕಳಾದ ಕಾಳಮ್ಮ ಬಡಿಗೇರ (13) ಹಾಗೂ ಕೀರ್ತಿ ಬಡಿಗೇರ (9) ಮೃತಪಟ್ಟ ದುರ್ದೈವಿಗಳು.

ತಮ್ಮ ಮನೆಯ ದುರಸ್ಥಿ ಕಾರ್ಯ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕುಟುಂಬವು ಹಳೆಯ ಮನೆಯಲ್ಲಿ ಬಾಡಿಗೆಗೆ ವಾಸವಾಗಿತ್ತು. ಆದರೆ ನಿನ್ನೆ ರಾತ್ರಿ ಸುರಿದ ಭಾರೀ ಗಾಳಿ-ಮಳೆಯ ಅಬ್ಬರಕ್ಕೆ ಮನೆಯ ಮೇಲ್ಚಾವಣಿ ಏಕಾಏಕಿ ಕುಸಿದು ಬಿದ್ದ ಪರಿಣಾಮ ನಾಲ್ವರೂ ಅವಶೇಷಗಳಡಿ ಸಿಲುಕಿ ಜೀವಂತ ಸಮಾಧಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ದೌಡಾಯಿಸಿ ರಕ್ಷಣಾ ಕಾರ್ಯ ನಡೆಸಿದರು. ಅವಶೇಷಗಳಡಿ ಸಿಲುಕಿದ್ದ ನಾಲ್ವರ ಶವಗಳನ್ನು ಹೊರತೆಗೆದಿದ್ದಾರೆ.

ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ. ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ದುರಂತದಿಂದ ಗ್ರಾಮದಲ್ಲಿ ಶೋಕ ಮಡುಗಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮನಕಲುಕುವಂತಿತ್ತು.

ಜೆ.ಕೆ. ಬಾರ್‌ನಿಂದ ಹೊಂಬಳಕ್ಕೆ ಮದ್ಯ ಸಪ್ಲೈ..? ಮನೆ ಮುಂದೆಯೇ ‘ಟೆಟ್ರಾ ಪ್ಯಾಕ್’ ದಂಧೆ!

ಪರವಾನಗಿ ಇಲ್ಲದೆ ಮದ್ಯ ವ್ಯಾಪಾರ : ಗದಗ ಗ್ರಾಮೀಣ ಪೊಲೀಸರ ದಾಳಿ

ಗದಗ: ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಮನೆ ಮುಂದೆಯೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ದಂಧೆ ಮೇಲೆ ಗದಗ ಗ್ರಾಮೀಣ ಪೊಲೀಸರು ದಾಳಿ ನಡೆಸಿ ಸಾವಿರಾರು ರೂಪಾಯಿ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಮದ್ಯ ಪೂರೈಕೆಯ ಹಿಂದೆ ಬಾರ್ ಸಂಪರ್ಕವಿದೆಯೇ ಎಂಬ ಅನುಮಾನವೂ ಮೂಡಿದ್ದು, ತನಿಖೆ ಚುರುಕುಗೊಂಡಿದೆ.

ಗದಗ ತಾಲೂಕಿನ ಹೊಂಬಳ ಗ್ರಾಮದ ಜನತಾ ಕಾಲೋನಿಯಲ್ಲಿ ಮನೋಹರ ಮಲ್ಲಪ್ಪ ಹರಣಶಿಕಾರಿ ಎಂಬಾತ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ನಡೆಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ರಾತ್ರಿ ಕಾರ್ಯಾಚರಣೆ ನಡೆಸಿದರು.

ದಾಳಿ ವೇಳೆ ಆರೋಪಿಯ ವಶದಿಂದ 94 “ಒರಿಜಿನಲ್ ಚಾಯ್ಸ್” ವಿಸ್ಕಿ 90 ಎಂ.ಎಲ್ ಟೆಟ್ರಾ ಪ್ಯಾಕೆಟ್‌ಗಳು ಹಾಗೂ 48 “ಒರಿಜಿನಲ್ ಚಾಯ್ಸ್ ಡಿಲಕ್ಸ್” 180 ಎಂ.ಎಲ್ ಟೆಟ್ರಾ ಪ್ಯಾಕೆಟ್‌ಗಳನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ಮದ್ಯದ ಒಟ್ಟು ಮೌಲ್ಯ ₹9,260 ಎಂದು ಅಂದಾಜಿಸಲಾಗಿದೆ.

ಕೂಲಿ ಕೆಲಸ ಮಾಡಿಕೊಂಡಿದ್ದ ಆರೋಪಿಯು ಹೆಚ್ಚುವರಿ ಲಾಭದ ಆಸೆಗೆ ಗ್ರಾಮದಲ್ಲೇ ಅಕ್ರಮ ಮದ್ಯ ಮಾರಾಟ ಜಾಲ ನಡೆಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ “ಜೆ.ಕೆ. ಬಾರ್” ಹೆಸರು ಕೇಳಿಬಂದ ಹಿನ್ನೆಲೆ, ಮದ್ಯ ಪೂರೈಕೆ ಯಾವ ಮಾರ್ಗದಿಂದ ನಡೆಯುತ್ತಿತ್ತು ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ.116/2026ರಂತೆ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 32 ಹಾಗೂ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿರುವ ಅಕ್ರಮ ಮದ್ಯ ಮಾರಾಟ ಜಾಲದ ವಿರುದ್ಧ ಪೊಲೀಸ್ ಇಲಾಖೆ ವಿಶೇಷ ನಿಗಾ ವಹಿಸಿದ್ದು, ಇಂತಹ ದಂಧೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ಎಚ್ಚರಿಸಿವೆ.

ಅಮಿತಾಭ್ ಬಳಿಕ ರಣಬೀರ್ ಕಪೂರ್‌ಗೂ ಅಯೋಧ್ಯೆ ಕ್ರೇಜ್: ಸರಯೂ ದಡದಲ್ಲಿ ಕೋಟಿ ಕೋಟಿ ಹೂಡಿಕೆ

ಮುಂಬೈ: ಅಯೋಧ್ಯೆಯಲ್ಲಿ ಭೂಮಿ ಖರೀದಿಸುವ ಸೆಲೆಬ್ರಿಟಿಗಳ ಪಟ್ಟಿಗೆ ಇದೀಗ ಬಾಲಿವುಡ್ ನಟ ರಣಬೀರ್ ಕಪೂರ್ ಕೂಡ ಸೇರಿದ್ದಾರೆ. ಅವರು 3.31 ಕೋಟಿ ರೂಪಾಯಿ ಮೌಲ್ಯದ ಜಾಗವನ್ನು ಸರಯೂ ನದಿ ದಂಡೆಯ ‘ದಿ ಸರಯೂ’ ಯೋಜನೆಯಲ್ಲಿ ಖರೀದಿಸಿದ್ದಾರೆ.

ಈ ಯೋಜನೆಯನ್ನು ‘ದಿ ಹೌಸ್ ಆಫ್ ಅಭಿನಂದನ್ ಲೋಧಾ’ ಸಂಸ್ಥೆ ನಿರ್ಮಿಸುತ್ತಿದ್ದು, 75 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಇಲ್ಲಿ ಕ್ಲಬ್‌ಹೌಸ್, ಐಷಾರಾಮಿ ಹೋಟೆಲ್ ಮತ್ತು ಅನೇಕ ಪ್ರೀಮಿಯಂ ಸೌಲಭ್ಯಗಳು ಇರಲಿವೆ.

ಈ ಬಗ್ಗೆ ಮಾತನಾಡಿದ ರಣಬೀರ್ ಕಪೂರ್, “ಅಯೋಧ್ಯೆ ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಅವಿಭಾಜ್ಯ ಅಂಗ. ಇಲ್ಲಿ ಜಾಗ ಖರೀದಿಸಿರುವುದು ನನಗೆ ವಿಶೇಷ ಭಾವನೆ ನೀಡಿದೆ” ಎಂದು ಹೇಳಿದ್ದಾರೆ.

ಪ್ರಸ್ತುತ ರಣಬೀರ್ ‘ರಾಮಾಯಣ’ ಸಿನಿಮಾದಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಯಶ್ ರಾವಣನಾಗಿ, ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿರುವುದು ವಿಶೇಷ.

ಈ ಹಿಂದೆ ಅಮಿತಾಭ್ ಬಚ್ಚನ್ ಕೂಡ ಅಯೋಧ್ಯೆಯಲ್ಲಿ ಹಲವು ಬಾರಿ ಭೂಮಿ ಖರೀದಿಸಿದ್ದರು. ಇದೀಗ ರಣಬೀರ್ ಕೂಡ ಅದೇ ಹಾದಿ ಹಿಡಿದಿರುವುದು ಸಿನಿ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

‘ಯಾರೂ ಗಮನಿಸಲಿಲ್ಲ’ ಎಂದ ನೆಟ್ಟಿಗ; ಆಲಿಯಾ ಭಟ್ ಕೊಟ್ಟ ಉತ್ತರಕ್ಕೆ ಫ್ಯಾನ್ಸ್ ಫಿದಾ!

ಕಾನ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟಿ ಆಲಿಯಾ ಭಟ್ ಅವರನ್ನು ಕೆಲ ನೆಟ್ಟಿಗರು ಟ್ರೋಲ್ ಮಾಡಲು ಯತ್ನಿಸಿದರೂ, ಅವರ ಸ್ಮಾರ್ಟ್ ಉತ್ತರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಕಾನ್ ರೆಡ್ ಕಾರ್ಪೆಟ್ ವಿಡಿಯೋ ಹಂಚಿಕೊಂಡಿದ್ದ ಆಲಿಯಾ ಅವರ ಪೋಸ್ಟ್‌ಗೆ ಒಬ್ಬ ನೆಟ್ಟಿಗ “ಅಯ್ಯೋ ಪಾಪ, ಯಾರೂ ನಿನ್ನನ್ನು ಗಮನಿಸಲಿಲ್ಲ” ಎಂದು ಕಾಮೆಂಟ್ ಮಾಡಿದ್ದ. ಇದಕ್ಕೆ ಕೋಪಗೊಳ್ಳದೇ ಪ್ರತಿಕ್ರಿಯಿಸಿದ ಆಲಿಯಾ, “ಯಾಕೆ ಅಯ್ಯೋ ಅಂತೀರಿ? ನೀವು ನನ್ನನ್ನು ಗಮನಿಸಿದಿರಲ್ಲ” ಎಂದು ಮಾರ್ಮಿಕ ಉತ್ತರ ನೀಡಿದ್ದಾರೆ.

ಆಲಿಯಾ ಅವರ ಈ ಉತ್ತರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. “ಸ್ಟೈಲ್ ಮತ್ತು ಮಾತು ಎರಡರಲ್ಲೂ ಕ್ಲಾಸ್”, “ಇದೇ ಆತ್ಮವಿಶ್ವಾಸ” ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ಈ ವಿಚಾರದಲ್ಲಿ ನಟ ಅಲಿ ಗೋನಿ ಕೂಡ ಆಲಿಯಾ ಪರವಾಗಿ ಮಾತನಾಡಿದ್ದು, “ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಕಲಾವಿದರನ್ನು ಬೆಂಬಲಿಸಬೇಕು” ಎಂದು ಹೇಳಿದ್ದಾರೆ.

ಈ ಬಾರಿ ಕಾನ್ ಉತ್ಸವದಲ್ಲಿ ಆಲಿಯಾ ಧರಿಸಿದ್ದ ಡಿಸೈನರ್ ಔಟ್‌ಫಿಟ್ ಕೂಡ ಸಾಕಷ್ಟು ಗಮನ ಸೆಳೆದಿತ್ತು. ಹಲವಾರು ಬಾಲಿವುಡ್ ತಾರೆಯರು ಅವರ ಫ್ಯಾಶನ್ ಸೆನ್ಸ್ ಅನ್ನು ಮೆಚ್ಚಿಕೊಂಡಿದ್ದಾರೆ.

ಜಿಯೋ ಹಾಟ್‌ಸ್ಟಾರ್‌ಗೆ ‘ಧುರಂಧರ್ 2 ’ ಎಂಟ್ರಿ: OTTಯಲ್ಲಿ ಇನ್ನಷ್ಟು ಹಿಂಸಾತ್ಮಕ ದೃಶ್ಯಗಳ ದರ್ಶನ!

ರಣವೀರ್ ಸಿಂಗ್ ನಟನೆಯ ‘ಧುರಂಧರ್ 2: ದಿ ರಿವೆಂಜ್’ ಸಿನಿಮಾ ಭರ್ಜರಿ ಕಲೆಕ್ಷನ್ ಬಳಿಕ ಈಗ ಒಟಿಟಿಗೆ ಕಾಲಿಡಲು ಸಜ್ಜಾಗಿದೆ. ಭಾರತದಲ್ಲಿ ಜಿಯೋ ಹಾಟ್‌ಸ್ಟಾರ್ ಹಾಗೂ ವಿದೇಶಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಈ ಚಿತ್ರದ ಒಟಿಟಿ ಹಕ್ಕುಗಳನ್ನು ಜಿಯೋ ಹಾಟ್‌ಸ್ಟಾರ್ ಸುಮಾರು 150 ಕೋಟಿ ರೂಪಾಯಿಗಳಿಗೆ ಪಡೆದುಕೊಂಡಿದೆ ಎನ್ನಲಾಗಿದೆ. ಮೊದಲ ಭಾಗ ನೆಟ್‌ಫ್ಲಿಕ್ಸ್‌ನಲ್ಲಿ ಬಂದಿದ್ದರಿಂದ ಎರಡನೇ ಭಾಗವೂ ಅಲ್ಲಿಯೇ ಬರುತ್ತದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಭಾರತದಲ್ಲಿ ಹಾಟ್‌ಸ್ಟಾರ್‌ಗೆ ಸ್ಟ್ರೀಮಿಂಗ್ ಹಕ್ಕು ಸಿಕ್ಕಿರುವುದು ಅಚ್ಚರಿ ಮೂಡಿಸಿದೆ.

ಒಟಿಟಿ ಆವೃತ್ತಿಯಲ್ಲಿ ಥಿಯೇಟರ್‌ಗಿಂತ ಹೆಚ್ಚುವರಿ ದೃಶ್ಯಗಳು ಇರಲಿವೆ. ಸೆನ್ಸಾರ್ ಮಂಡಳಿಯಿಂದ ತೆಗೆದುಹಾಕಲಾಗಿದ್ದ ಹಿಂಸಾತ್ಮಕ ದೃಶ್ಯಗಳು ಹಾಗೂ ಡೈಲಾಗ್‌ಗಳನ್ನು ಮತ್ತೆ ಸೇರಿಸಲಾಗಿದೆ. ಈ ಕಾರಣದಿಂದ ಒಟಿಟಿ ಆವೃತ್ತಿ ಇನ್ನಷ್ಟು ರೋಚಕವಾಗಿರಲಿದೆ ಎಂದು ಹೇಳಲಾಗುತ್ತಿದೆ.

ಕಲೆಕ್ಷನ್ ವಿಚಾರದಲ್ಲೂ ಸಿನಿಮಾ ದಾಖಲೆ ಬರೆದಿದೆ. ಭಾರತದಲ್ಲಿ 1,369 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿರುವ ಈ ಸಿನಿಮಾ, ವಿಶ್ವದಾದ್ಯಂತ 1,796.51 ಕೋಟಿ ರೂಪಾಯಿ ಗಳಿಸಿದೆ. ಇನ್ನೂ 10 ರಿಂದ 20 ಕೋಟಿ ರೂಪಾಯಿ ಹೆಚ್ಚುವರಿ ಕಲೆಕ್ಷನ್ ಆಗುವ ನಿರೀಕ್ಷೆ ಇದೆ.

‘ಬಾಹುಬಲಿ 2’ ಚಿತ್ರದ 1,810 ಕೋಟಿ ರೂಪಾಯಿ ದಾಖಲೆಯನ್ನು ‘ಧುರಂಧರ್ 2’ ಮುರಿಯುತ್ತದೆಯೇ ಎಂಬ ಪ್ರಶ್ನೆ ಈಗ ಸಿನಿರಂಗದಲ್ಲಿ ಚರ್ಚೆಯಾಗುತ್ತಿದೆ.

ನಿರ್ದೇಶಕ ರೋಹಿತ್ ಶೆಟ್ಟಿ ತಲೆಗೆ ಬಾಟಲಿಯಿಂದ ಹೊಡೆದ ನಟಿ ದೀಪಿಕಾ ಪಡುಕೋಣೆ?

ನಟಿ ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ರೋಹಿತ್ ಶೆಟ್ಟಿ ಸಂಬಂಧಿಸಿದ ಹಳೆಯ ವಿಡಿಯೋವೊಂದು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ‘ಚೆನ್ನೈ ಎಕ್ಸ್‌ಪ್ರೆಸ್’ ಚಿತ್ರದ ಸೆಟ್‌ನಲ್ಲಿ ದೀಪಿಕಾ ಬಾಟಲಿಯಿಂದ ರೋಹಿತ್ ಶೆಟ್ಟಿ ತಲೆಗೆ ಹೊಡೆದ ದೃಶ್ಯ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

ವಿಡಿಯೋದಲ್ಲಿ ದೀಪಿಕಾ ಅವರು ಕೈಯಲ್ಲಿದ್ದ ಬಾಟಲಿಯಿಂದ ರೋಹಿತ್ ಶೆಟ್ಟಿ ಅವರ ತಲೆಗೆ ಹೊಡೆಯುತ್ತಾರೆ. ತಕ್ಷಣ ಬಾಟಲಿ ಒಡೆದು, ರೋಹಿತ್ ಅವರ ತಲೆಯಿಂದ ರಕ್ತ ಬರುತ್ತಿರುವಂತೆ ಕಾಣಿಸುತ್ತದೆ. ಇದನ್ನು ನೋಡಿ ಸೆಟ್‌ನಲ್ಲಿದ್ದವರೂ ಬೆಚ್ಚಿಬಿದ್ದಂತೆ ಕಾಣುತ್ತಾರೆ.

ಆದರೆ ಇದು ನಿಜವಾದ ಘಟನೆ ಅಲ್ಲ. ಸಿನಿಮಾಗಳಲ್ಲಿ ಸಾಹಸ ದೃಶ್ಯಗಳಿಗಾಗಿ ಬಳಸುವ ‘ಸಕ್ಕರೆ ಬಾಟಲಿ’ ಮೂಲಕ ಈ ದೃಶ್ಯವನ್ನು ತಮಾಷೆಗಾಗಿ ಸೃಷ್ಟಿಸಲಾಗಿತ್ತು. ರಕ್ತವೂ ಮೇಕಪ್ ಮೂಲಕ ತೋರಿಸಲಾಗಿತ್ತು ಎನ್ನಲಾಗಿದೆ.

2013ರಲ್ಲಿ ಬಿಡುಗಡೆಯಾದ ‘ಚೆನ್ನೈ ಎಕ್ಸ್‌ಪ್ರೆಸ್’ ಸಿನಿಮಾ ಶಾರುಖ್ ಖಾನ್ ಮತ್ತು ದೀಪಿಕಾ ಜೋಡಿಯ ದೊಡ್ಡ ಹಿಟ್ ಆಗಿತ್ತು. ಆ ಚಿತ್ರದ ಚಿತ್ರೀಕರಣದ ವೇಳೆ ತೆಗೆದ ಈ ಬ್ಲೂಪರ್ ವಿಡಿಯೋ ಈಗ ಮತ್ತೆ ವೈರಲ್ ಆಗಿದ್ದು, ನೆಟ್ಟಿಗರು ಮಜಾದಾಯಕ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಪವನ್ ಕಲ್ಯಾಣ್ ಸಿನಿಮಾಗೆ ಕಂಬ್ಯಾಕ್ ಮಾಡಲು ತಡವಾಗುತ್ತಿರುವುದಕ್ಕೆ ಅಸಲಿ ಕಾರಣ ಬಯಲು

ಉಪಮುಖ್ಯಮಂತ್ರಿ ಆದ ಬಳಿಕ ಸಿನಿಮಾಗಳಿಂದ ದೂರ ಉಳಿದಿರುವ ಪವನ್ ಕಲ್ಯಾಣ್ ಬಗ್ಗೆ ಹಲವು ಊಹಾಪೋಹಗಳು ಕೇಳಿಬಂದಿದ್ದವು. ಇದೀಗ ಅವರ ಸಿನಿ ವಿರಾಮದ ಹಿಂದಿನ ನಿಜವಾದ ಕಾರಣ ಆರೋಗ್ಯ ಸಮಸ್ಯೆ ಎಂಬ ಮಾಹಿತಿ ಹೊರಬಿದ್ದಿದೆ.

ಇತ್ತೀಚೆಗೆ ಪವನ್ ಕಲ್ಯಾಣ್ ಮೂಗಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಅವರ ನಿವಾಸಕ್ಕೆ ಭೇಟಿ ನೀಡಿದ ವೇಳೆ ಪವನ್ ಚೇತರಿಸಿಕೊಳ್ಳುತ್ತಿರುವುದು ಗಮನ ಸೆಳೆದಿತ್ತು.

ವರದಿಗಳ ಪ್ರಕಾರ, ಸಿನಿಮಾ ಶೂಟಿಂಗ್ ವೇಳೆ ಆಗಿದ್ದ ಹಲವು ಗಾಯಗಳನ್ನು ಪವನ್ ಕಲ್ಯಾಣ್ ವರ್ಷಗಳ ಕಾಲ ನಿರ್ಲಕ್ಷಿಸಿದ್ದರು. ಈಗ ಅವೇ ಗಾಯಗಳು ಆರೋಗ್ಯದ ಮೇಲೆ ಪರಿಣಾಮ ಬೀರತೊಡಗಿವೆ ಎನ್ನಲಾಗಿದೆ.

ಡಿಸಿಎಂ ಆಗಿ ಭಾರೀ ಜವಾಬ್ದಾರಿ ಹೊತ್ತಿರುವ ಪವನ್ ಅವರಿಗೆ ಸದ್ಯ ವಿಶ್ರಾಂತಿಗೆ ಸಮಯವೇ ಸಿಗುತ್ತಿಲ್ಲ. ಇದೇ ಕಾರಣದಿಂದ ಮತ್ತೆ ಸಿನಿಮಾ ಶೂಟಿಂಗ್‌ಗೆ ಮರಳುವುದು ಆರೋಗ್ಯದ ದೃಷ್ಟಿಯಿಂದ ಸೂಕ್ತವಲ್ಲ ಎಂದು ಆಪ್ತರು ಸಲಹೆ ನೀಡಿದ್ದಾರೆ.

ಸುರೇಂದರ್ ರೆಡ್ಡಿ ನಿರ್ದೇಶನದ ಹೊಸ ಸಿನಿಮಾದ ಚರ್ಚೆ ನಡೆದಿದ್ದರೂ, ಪವನ್ ಅವರ ಮೊದಲ ಆದ್ಯತೆ ಈಗ ಆರೋಗ್ಯ ಮತ್ತು ಆಡಳಿತ ಕಾರ್ಯಗಳಾಗಿವೆ. ಸಂಪೂರ್ಣ ಚೇತರಿಸಿಕೊಂಡ ಬಳಿಕವೇ ಅವರು ಕ್ಯಾಮೆರಾ ಎದುರು ಬರಲಿದ್ದಾರೆ ಎನ್ನಲಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಶಾಲಾ ವಿಲೀನ ಪ್ರಕ್ರಿಯೆ: ಗ್ರಾಮೀಣ ಶಿಕ್ಷಣಕ್ಕೆ ಧಕ್ಕೆ ಎಂದು ಆರೋಪ!

ಚಿಕ್ಕಬಳ್ಳಾಪುರ: ಕೆಪಿಎಸ್‌ ಮ್ಯಾಗ್ನೇಟ್ ಯೋಜನೆಯಡಿ ರಾಜ್ಯದಲ್ಲಿ ಸಾವಿರಾರು ಸರ್ಕಾರಿ ಶಾಲೆಗಳ ವಿಲೀನ ಪ್ರಕ್ರಿಯೆ ನಡೆಯುತ್ತಿರುವುದನ್ನು ಖಂಡಿಸಿ ಎಐಡಿಎಸ್‌ಒ ಸಂಘಟನೆ ಹೋರಾಟಕ್ಕೆ ಮುಂದಾಗಿದೆ.

ಸರ್ಕಾರವು ಪಿಎಂ ಶ್ರೀ ಶಾಲೆಗಳ ಜೊತೆಗೆ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳನ್ನೂ ವಿಲೀನಗೊಳಿಸುತ್ತಿದ್ದು, ಕೆಲವು ಪಿಯು ಕಾಲೇಜುಗಳನ್ನೂ ವಿಲೀನಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಕ್ರಮವನ್ನು ವಿರೋಧಿಸಿ ಸರ್ಕಾರಿ ಶಾಲೆಗಳ ವಿಲೀನವನ್ನು ತಕ್ಷಣ ನಿಲ್ಲಿಸಬೇಕು ಎಂದು ಎಐಡಿಎಸ್‌ಒ ಆಗ್ರಹಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ನೂರಾರು ಶಾಲೆಗಳ ವಿಲೀನ ನಡೆಯುತ್ತಿರುವುದಾಗಿ ತಿಳಿದುಬಂದಿದ್ದು, ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು ಕೆಪಿಎಸ್‌ ಮ್ಯಾಗ್ನೇಟ್ ಶಾಲೆಗೆ ದಿಬ್ಬೂರು, ಕತ್ತರಿಗುಪ್ಪೆ, ಮರಳಕುಂಟೆ ಹಾಗೂ ನೆಲ್ಲಿಮರದಹಳ್ಳಿ ಶಾಲೆಗಳ ವಿಲೀನ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.

ಇದೇ ರೀತಿ ಉತ್ತಮ ಮೂಲಸೌಕರ್ಯ ಇರುವ ಆಯ್ದ ಶಾಲೆಗಳಿಗೆ ಸುತ್ತಮುತ್ತಲಿನ 5 ರಿಂದ 6 ಕಿ.ಮೀ ವ್ಯಾಪ್ತಿಯ ಸರ್ಕಾರಿ ಶಾಲೆಗಳನ್ನ ವಿಲೀನಗೊಳಿಸುವ ಮೂಲಕ ಗ್ರಾಮೀಣ ಭಾಗದ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶ ಸರ್ಕಾರದ್ದಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಕ್ರಮವು ಸರ್ಕಾರಿ ಶಾಲೆಗಳನ್ನು ಹಂತ ಹಂತವಾಗಿ ಮುಚ್ಚುವ ಪ್ರಯತ್ನವಾಗಿದ್ದು, ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಹಿನ್ನಡೆಯಾಗಲಿದೆ ಎಂದು ಆರೋಪಿಸಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆಯ ಪರಿಣಾಮ ಲ್ಯಾಂಡಿಂಗ್ ವಿಳಂಬ: ಅರ್ಧಗಂಟೆ ಆಕಾಶದಲ್ಲೇ ಹಾರಾಟ ಮಾಡಿದ ವಿಮಾನಗಳು!

ಮಂಗಳೂರು: ಹವಾಮಾನ ವೈಪರಿತ್ಯದಿಂದಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳು ತಕ್ಷಣ ಲ್ಯಾಂಡ್ ಆಗಲು ಸಾಧ್ಯವಾಗದೆ ಸುಮಾರು ಅರ್ಧಗಂಟೆ ಕಾಲ ಆಕಾಶದಲ್ಲೇ ಹಾರಾಟ ನಡೆಸಿದ ಘಟನೆ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು, ವಿಮಾನ ನಿಲ್ದಾಣ ಪ್ರದೇಶದಲ್ಲಿಯೂ ಮಳೆಯ ಪರಿಣಾಮ ಲ್ಯಾಂಡಿಂಗ್ ಪ್ರಕ್ರಿಯೆ ವಿಳಂಬವಾಗಿದೆ ಎಂದು ತಿಳಿದುಬಂದಿದೆ. ಈ ಕಾರಣದಿಂದ ವಿಮಾನಗಳು ಲ್ಯಾಂಡ್ ಆಗಲು ಅವಕಾಶ ಸಿಗದೆ ಆಕಾಶದಲ್ಲೇ  ಹಾರಾಟ ನಡೆಸಿವೆ.

ಸುಮಾರು 30 ನಿಮಿಷಗಳ ಬಳಿಕ ಹವಾಮಾನದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದ ಹಿನ್ನೆಲೆಯಲ್ಲಿ ಎರಡೂ ವಿಮಾನಗಳನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವೇಳೆ ವಿಟ್ಲ ಸುತ್ತಮುತ್ತ ಕಡಿಮೆ ಎತ್ತರದಲ್ಲಿ ವಿಮಾನಗಳು ಹಾರಾಟ ನಡೆಸಿದ ಕಾರಣ ಸ್ಥಳೀಯ ಜನರಲ್ಲಿ ಕೆಲಕಾಲ ಆತಂಕದ ವಾತಾವರಣ ಉಂಟಾಗಿದೆ ಎಂದು ವರದಿಯಾಗಿದೆ. ನಂತರ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳಿದೆ ಎಂದು ತಿಳಿದುಬಂದಿದೆ.

ಸರ್ಕಾರಿ ನೌಕರರಿಗೆ ವಾರದಲ್ಲಿ 2 ದಿನ ವರ್ಕ್ ಫ್ರಂ ಹೋಮ್! ದೆಹಲಿ ಸಿಎಂ ಆದೇಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಿತವ್ಯಯ ಮತ್ತು ಇಂಧನ ಉಳಿತಾಯ ಕರೆ ಬೆನ್ನಲ್ಲೇ ದೆಹಲಿ ಸರ್ಕಾರವು ಸರ್ಕಾರಿ ನೌಕರರಿಗೆ ಹೊಸ ನಿಯಮಾವಳಿ ಜಾರಿಗೆ ತಂದಿದೆ. ಈ ಮೂಲಕ ಆಡಳಿತ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳು ಘೋಷಣೆಯಾಗಿವೆ.

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ‘ಮೇರಾ ಭಾರತ್ ಮೇರಾ ಯೋಗಧಾನ್’ ಅಭಿಯಾನದಡಿ ನಾಳೆಯಿಂದ (ಮೇ 15) ಹೊಸ ಕ್ರಮಗಳನ್ನು ಜಾರಿಗೆ ತರುವಂತೆ ಆದೇಶಿಸಿದ್ದಾರೆ. ಇದರಡಿ ಸರ್ಕಾರಿ ನೌಕರರಿಗೆ ವಾರದಲ್ಲಿ ಎರಡು ದಿನ ವರ್ಕ್ ಫ್ರಂ ಹೋಮ್ ವ್ಯವಸ್ಥೆ ಜಾರಿಗೆ ಬರಲಿದೆ.

ಇದಲ್ಲದೆ, ವಾರದಲ್ಲಿ ಒಂದು ದಿನ ಮೆಟ್ರೋ ರೈಲಿನಲ್ಲಿ ಸಂಚಾರ ಕಡ್ಡಾಯಗೊಳಿಸಲಾಗಿದೆ. ಸರ್ಕಾರಿ ಸಭೆಗಳ ಶೇಕಡಾ 50ರಷ್ಟು ಆನ್‌ಲೈನ್ ಮೂಲಕ ನಡೆಸಲು ಸೂಚಿಸಲಾಗಿದೆ.

ಇಂಧನ ಉಳಿತಾಯದ ಭಾಗವಾಗಿ ಮುಂದಿನ ಆರು ತಿಂಗಳವರೆಗೆ ಹೊಸ ವಾಹನಗಳ ಖರೀದಿಗೆ ನಿರ್ಬಂಧ ವಿಧಿಸಲಾಗಿದ್ದು, ಅಧಿಕಾರಿಗಳ ಇಂಧನ ಬಳಕೆಯಲ್ಲಿ ಶೇಕಡಾ 20ರಷ್ಟು ಕಡಿತಕ್ಕೆ ಆದೇಶಿಸಲಾಗಿದೆ. ಜೊತೆಗೆ ಅಧಿಕಾರಿಗಳ ವಿದೇಶಿ ಪ್ರವಾಸಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.

ಸರ್ಕಾರಿ ನೌಕರರಿಗಾಗಿ 58 ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಸೋಮವಾರ ‘ಮಂಡೇ ಮೆಟ್ರೋ’ ಅಭಿಯಾನದಲ್ಲಿ ಸಚಿವರು ಹಾಗೂ ಅಧಿಕಾರಿಗಳು ಮೆಟ್ರೋದಲ್ಲಿ ಸಂಚರಿಸಲಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಇದರೊಂದಿಗೆ ವಾರಕ್ಕೆ ಒಂದು ದಿನ ವಾಹನ ರಹಿತ ದಿನ ಆಚರಿಸಲು ಸಾರ್ವಜನಿಕರಿಗೂ ಮನವಿ ಮಾಡಲಾಗಿದೆ. ಈ ಕ್ರಮಗಳು ಇಂಧನ ಉಳಿತಾಯ ಹಾಗೂ ಪರಿಸರ ಸಂರಕ್ಷಣೆಗೆ ಸಹಾಯಕವಾಗಲಿದೆ ಎಂದು ಸರ್ಕಾರ ಹೇಳಿದೆ.

error: Content is protected !!