Home Blog Page 7

ಪೆಟ್ರೋಲ್ ಬಂಕ್‌ನ ಲೈಟಿಂಗ್ ಕಂಬ ಕುಸಿದು ಸಮಾಜವಾದಿ ಪಕ್ಷದ ನಾಯಕ ಸಾವು!

0

ಪ್ರತಾಪಗಢ: ಚಲಿಸುತ್ತಿದ್ದ ಕಾರಿನ ಮೇಲೆ ಪೆಟ್ರೋಲ್ ಬಂಕ್‌ನ ಲೈಟಿಂಗ್ ಕಂಬ ಕುಸಿದು ಬಿದ್ದ ಪರಿಣಾಮ, ಸಮಾಜವಾದಿ ಪಕ್ಷದ ನಾಯಕ ಲಾಲ್ ಬಹದ್ದೂರ್ ಯಾದವ್ ಸಾವನ್ನಪ್ಪಿದ್ದಾರೆ.

ಈ ಘಟನೆ ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ನಡೆದಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಸಂಪೂರ್ಣ ದೃಶ್ಯ ಸೆರೆಯಾಗಿದೆ. ವರದಿಯ ಪ್ರಕಾರ, ಲಾಲ್ ಬಹದ್ದೂರ್ ಯಾದವ್ ವೈಯಕ್ತಿಕ ಕೆಲಸಕ್ಕಾಗಿ ಬಾಬುಗಂಜ್‌ನಿಂದ ಪ್ರತಾಪಗಢ ನಗರಕ್ಕೆ ಕ್ರೆಟಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅವರ ಮನೆದಿಂದ ಕೇವಲ 500 ಮೀಟರ್ ದೂರದಲ್ಲಿಯೇ ಈ ಅಪಘಾತ ಸಂಭವಿಸಿತು.

ಪೆಟ್ರೋಲ್ ಪಂಪ್ ಮುಂದೆ ಭಾರತ್ ಪೆಟ್ರೋಲಿಯಂದ ಸಹಾಯದಿಂದ ಕ್ರೇನ್ ಉಪಯೋಗಿಸಿ ಸುಮಾರು 65 ಅಡಿ ಎತ್ತರದ ಲೈಟಿಂಗ್ ಮಾಸ್ಟ್ ಕಂಬವನ್ನು ನಿರ್ಮಿಸಲಾಗುತ್ತಿತ್ತು. ಆ ಕಂಬದ ತೂಕ ಸುಮಾರು 40 ಕ್ವಿಂಟಾಲ್ ಎಂದು ವರದಿಯಾಗಿದೆ. ಈ ದುರ್ಘಟನೆ ಸ್ಥಳೀಯರಿಗೆ ಆಶ್ಚರ್ಯಕಾರಿಯಾಗಿದೆ ಮತ್ತು ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.

ದರ್ಶನ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಪತ್ನಿ ವಿಜಯಲಕ್ಷ್ಮೀ: ಕಾರಾಗೃಹದಲ್ಲೇ ನಟನ ಹುಟ್ಟುಹಬ್ಬ

ಕನ್ನಡ ಚಿತ್ರರಂಗದ ನಟ ದರ್ಶನ್‌ ಅವರ ಜನ್ಮದಿನ ಈ ಬಾರಿ ನಿಶ್ಶಬ್ದವಾಗಿಯೇ ಕಳೆಯುತ್ತಿದೆ. ಪ್ರಕರಣದ ಹಿನ್ನೆಲೆ ಅವರು ಕಾರಾಗೃಹದಲ್ಲಿರುವುದರಿಂದ ಯಾವುದೇ ದೊಡ್ಡ ಆಚರಣೆ ನಡೆಯುತ್ತಿಲ್ಲ.

ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರ ಹರಿಸುತ್ತಿದ್ದು, ಕೆಲವರು ಸೇವಾ ಕಾರ್ಯಗಳನ್ನು ನಡೆಸಿ ನಟನ ಮೇಲಿನ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.

ಪತ್ನಿ ವಿಜಯಲಕ್ಷ್ಮೀ ದರ್ಶನ್‌ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ವಿಶೇಷ ಅನುಮತಿ ಪಡೆದು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಅವರು ಹಂಚಿಕೊಂಡಿರುವ ಚಿತ್ರದಲ್ಲಿ ಕುಟುಂಬದೊಂದಿಗೆ ಕೇಕ್ ಎದುರು ನಿಂತಿರುವುದು ಕಾಣಿಸಿಕೊಂಡಿದ್ದು, ಕೇಕ್ ಮೇಲೆ ಆನೆಯ ಆಕೃತಿ ಗಮನ ಸೆಳೆಯುತ್ತಿದೆ.

ಪ್ರಕರಣದ ಹಿನ್ನೆಲೆಯಲ್ಲಿ ನಟನಿಗೆ ಇದೇ ಮೊದಲ ಬಾರಿಗೆ ಕಾರಾಗೃಹದಲ್ಲೇ ಜನ್ಮದಿನ ಆಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಅಭಿಮಾನಿಗಳು ಅವರ ಬಿಡುಗಡೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ.

Breaking News; ಮಹಾಶಿವರಾತ್ರಿ ಜಾಗರಣೆಗೆ ಹೋಗಿದ್ದವರ ಮನೆಗೆ ಕನ್ನ; ಮಾಲೀಕರು ಕಂಗಾಲು!

0

ವಿಜಯಪುರ: ವಿಜಯಪುರದ ಶಾರದಾ ನಗರದಲ್ಲಿ ಶಿವರಾತ್ರಿ ಜಾಗರಣೆಗೆ ಹೋಗಿದ್ದವರ ಮನೆಗೆ ನುಗ್ಗಿ ಖದೀಮರು ಕಳ್ಳತನ ಮಾಡಿರುವ ಘಟನೆ ಜರುಗಿದೆ.

ಸೋಮಶೇಖರ ಗಣಿ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯಲ್ಲಿದ್ದ 40 ಸಾವಿರ ನಗದು, 154 ಗ್ರಾಂ ಚಿನ್ನಾಭರಣ, 270 ಗ್ರಾಂ ಬೆಳ್ಳಿ ಆಭರಣ ಕದ್ದು ಖದೀಮರು ಪರಾರಿಯಾಗಿದ್ದಾರೆ.

ಸದ್ಯ ಸ್ಥಳಕ್ಕೆ ಗೋಲಗುಂಬಜ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಿತ್ರದುರ್ಗ| ಕಾಲ್ಕೆರೆ ಗ್ರಾಮದ ಕೆರೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಸಾವು!

0

ಚಿತ್ರದುರ್ಗ:- ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕಾಲ್ಕೆರೆ ಗ್ರಾಮದ ಕೆರೆಯಲ್ಲಿ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜರುಗಿದೆ.

ಬಟ್ಟೆ ತೊಳೆಯಲು ತೆರಳಿದ್ದ ವೇಳೆ ಕಾಲು ಜಾರಿಬಿದ್ದು ಈ ದುರಂತ ಸಂಭವಿಸಿದೆ. ಕವಿತಾ ಹನುಮಂತಪ್ಪ(14), ಪ್ರಜ್ವಲ್ ಪ್ರಭು(12) ಮೃತರು.

ಘಟನೆ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ನೀರಿಗೆ ಬಿದ್ದು ಮೃತಪಟ್ಟ 3 ವರ್ಷದ ಕಂದಮ್ಮ; ತಾಯಿಯ ಫೋಟೋ ಶೂಟ್​​ ವೇಳೆಯೇ ದುರಂತ!

0

ನೆಲಮಂಗಲ:- ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಿಡ್ಡೆನಹಳ್ಳಿಯಲ್ಲಿ ಎರಡನೇ ಮಗುವಿನ ಖುಷಿಯಲ್ಲಿದ್ದ ದಂಪತಿಯ ಮೊದಲನೇ ಮಗು ನೀರಿಗೆ ಬಿದ್ದು ದಾರುಣವಾಗಿ ಮೃತಪಟ್ಟಿರುವ ಘಟನೆ ಜರುಗಿದೆ.

3 ವರ್ಷದ ಲಕ್ಷ್ಮೀರ್ ಮೃತ ಮಗುವಾಗಿದ್ದು, ತಾಯಿ ಗರ್ಭಿಣಿ ಫೋಟೊ ಶೂಟ್ ಮಾಡಿಸುತ್ತಿದ್ದ ವೇಳೆ, ಆಟವಾಡಿಕೊಂಡಿದ್ದ ಮಗು ಸ್ಥಳದಲ್ಲಿದ್ದ ಸಣ್ಣ ನೀರಿನ ಪೂಲ್​​ಗೆ ಬಿದ್ದು ಮೃತಪಟ್ಟಿದೆ. ಮಗುವಿನ ವಿಚಾರದಲ್ಲಿನ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎನ್ನಲಾಗಿದೆ.

ಲಕ್ಷ್ಮೀರ್ ಜೆ.ಪಿ. ನಗರ ನಿವಾಸಿಯಾಗಿರುವ ಸ್ವಾತಿ ಹಾಗೂ ಚರಣ್ ರಾಜ್ ದಂಪತಿಯ ಮಗುವಾಗಿದ್ದು, ಒಂದು ವಾರದ ಹಿಂದೆ ಕೆಲಸದ ನಿಮಿತ್ತ ಚರಣ್ ರಾಜ್ ವಿದೇಶಕ್ಕೆ ತೆರಳಿದ್ದರು. ಪೋಟೋ ಶೂಟ್ ಮಾಡಿಸುವುದಾಗಿ ಗಂಡನ ಬಳಿ ಹೇಳಿ ಸ್ವಾತಿ ಸ್ನೇಹಿತೆಯೊಂದಿಗೆ ಬಂದಿದ್ದರು. ಈ ವೇಳೆ ಅವಘಡ ನಡೆದಿದೆ.

ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಸರ್ಕಾರಿ ಆಸ್ಪತ್ರಗೆ ರವಾನೆ ಮಾಡಲಾಗಿದೆ.

ಇನ್ನು ವಿದೇಶದಲ್ಲಿರುವ ಚರಣ್ ರಾಜ್ ನಾಳೆ ಬೆಂಗಳೂರಿಗೆ ಬರಲಿದ್ದು, ಈ ಹಿನ್ನೆಲೆ ಮಗುವಿನ ಮರಣೋತ್ತರ ಪರೀಕ್ಷೆ ನಾಳೆ ನಡೆಸಲಿದೆ ಎಂಬ ಮಾಹಿತಿ ಸಿಕ್ಕಿದೆ.

ಹಾಸ್ಟೆಲ್ ಕೋಣೆಯಲ್ಲೇ ನೇಣಿಗೆ ಕೊರಳೊಡ್ಡಿದ ಎಂಬಿಬಿಎಸ್ ವಿದ್ಯಾರ್ಥಿನಿ!

0

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ದುರ್ಘಟನೆ ನಡೆದಿದೆ.

ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಲಾವಣ್ಯ ಪ್ರತಾಪ್ ಮೃತಳಾಗಿದ್ದಾರೆ.
ಹಾಸ್ಟೆಲ್ ಕೋಣೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಸ್ನೇಹಿತರು ಕರೆ ಮಾಡಿದರೂ ಪ್ರತಿಕ್ರಿಯೆ ಇಲ್ಲದ ಹಿನ್ನೆಲೆ ಅನುಮಾನಗೊಂಡು ಬಾಗಿಲು ಒಡೆದು ನೋಡಿದಾಗ, ಆಕೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಮಾಹಿತಿ ಪಡೆದ ತಕ್ಷಣ ದುರ್ಗಾಪುರ ಪೊಲೀಸರ ತಂಡ ಕ್ಯಾಂಪಸ್‌ಗೆ ಆಗಮಿಸಿ, ಹಾಸ್ಟೆಲ್ ಕೊಠಡಿಯಿಂದ ಶವವನ್ನು ವಶಪಡಿಸಿಕೊಂಡಿತು. ಬಳಿಕ ಆಸ್ಪತ್ರೆಯಲ್ಲಿ ಇರಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಘಟನೆ ನಡೆದ ನಂತರ ಭಾನುವಾರ ಕ್ಯಾಂಪಸ್‌ನಲ್ಲಿ ನೀರವ ಮೌನ ಆವರಿಸಿತು.

ಮೃತಳ ತಂದೆ ಅನಿಲ್ ಕುಮಾರ್, ಕಾಲೇಜು ಆಡಳಿತದ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದು, ಘಟನೆ ಕುರಿತು ಕುಟುಂಬಕ್ಕೆ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಿಲ್ಲ ಎಂದು ತಿಳಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಮೃತ ವಿದ್ಯಾರ್ಥಿನಿ ಬಿಹಾರದ ಪಾಟ್ನಾ ನಿವಾಸಿಯಾಗಿದ್ದು, ವೈದ್ಯಕೀಯ ಅಧ್ಯಯನಕ್ಕಾಗಿ ಹಾಸ್ಟೆಲ್‌ನಲ್ಲಿ ತಂಗಿದ್ದರು. ಕಳೆದ ಕೆಲವು ಸೆಮಿಸ್ಟರ್‌ಗಳಲ್ಲಿ ಅನುತ್ತೀರ್ಣರಾದ ಕಾರಣ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಸ್ನೇಹಿತರು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.

ಈ ಸಾವು ಆತ್ಮಹತ್ಯೆಯೇ ಅಥವಾ ಬೇರೆ ಯಾವುದೇ ಅಂಶಗಳು ಒಳಗೊಂಡಿವೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರಾವಳಿಯಲ್ಲಿ ಐಟಿ-ಬಿಟಿ ಕಂಪನಿ ಬಂಡವಾಳ ಹಾಕಲು ಹೆದರುತ್ತಿದೆ: ಪ್ರಿಯಾಂಕ್ ಖರ್ಗೆ ಆತಂಕ!

0

ಬೆಂಗಳೂರು: ಕೋಮುವಾದದ ಕಾರಣದಿಂದ ಕರಾವಳಿ ಭಾಗದಲ್ಲಿ ಐಟಿ–ಬಿಟಿ ಕಂಪನಿಗಳು ಬಂಡವಾಳ ಹೂಡಿಕೆಗೆ ಹೆದರುತ್ತಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆತಂಕ ವ್ಯಕ್ತಪಡಿಸಿದರು.

ನಗರದ ಗಾಂಧಿ ಭವನದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಐಟಿ–ಬಿಟಿ ಕಂಪನಿಗಳಿಗೆ ಹೂಡಿಕೆ ಮಾಡಲು ನಾವು ಆಹ್ವಾನ ನೀಡುತ್ತೇವೆ. ಕಂಪನಿಗಳು ಸಿದ್ಧವಾಗಿರುತ್ತವೆ. ಆದರೆ ನಾಳೆ ಅವರ ಉದ್ಯೋಗಿಗಳಿಗೆ ತೊಂದರೆ ಉಂಟಾದರೆ ಏನು ಮಾಡಬೇಕು ಎಂಬ ಚಿಂತೆಯೂ ಅವರಲ್ಲಿ ಇದೆ. ಧರ್ಮಗುರುಗಳು ಮತ್ತು ರಾಜಕಾರಣಿಗಳು ಪ್ರಬುದ್ಧವಾಗಿ ಮಾತನಾಡುವವರೆಗೂ ಸಮಾಜದ ಉದ್ಧಾರ ಸಾಧ್ಯವಿಲ್ಲ. ರಾಜಕಾರಣಿಗಳು ಮತ್ತು ಧರ್ಮಗುರುಗಳು ಸೃಷ್ಟಿಸುವ ಧರ್ಮದ ನಶೆ ನಿಲ್ಲಬೇಕು,” ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, “ನಾನು ಅದಮಾರು ಮಠದಲ್ಲಿ ಓದಿದವನು. ತೇಜಸ್ವಿ ಸೂರ್ಯ ಕಾನ್ವೆಂಟ್‌ನಲ್ಲಿ ಓದಿದ್ದಾರೆ. ಆದರೂ ನನ್ನನ್ನು ಮಾತ್ರ ಕಾನ್ವೆಂಟ್‌ನಲ್ಲಿ ಓದಿದವನು ಎಂದು ಹೇಳಲಾಗುತ್ತದೆ. ಧರ್ಮ ಮನುಷ್ಯನಿಗಾಗಿ ಇರಬೇಕು; ಮನುಷ್ಯ ಧರ್ಮಕ್ಕಾಗಿ ಅಲ್ಲ,” ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ, “ಈಗ ಔರಂಗಜೇಬನ ಸಮಾಧಿ ತೆಗೆಯಲು ಜ್ಞಾನೋದಯವಾಗಿದೆ ಎಂದು ಮಾತನಾಡುವುದು ಸರಿಯಲ್ಲ,” ಎಂದು ಕಿಡಿಕಾರಿದರು. ಅವರು ಪರೋಕ್ಷವಾಗಿ ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದರು.

ದಾವಣಗೆರೆ| ಷೇರು ಮಾರುಕಟ್ಟೆ ಹೂಡಿಕೆ ನೆಪದಲ್ಲಿ 93 ಲಕ್ಷ ರೂ. ವಂಚನೆ!

0

ದಾವಣಗೆರೆ:- ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ನಂಬಿಸಿ ಮಹಿಳಾ ಟೆಕ್ಕಿಯೊಬ್ಬರಿಗೆ 93 ಲಕ್ಷ ರೂ. ವಂಚಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ನಗರದ ಸಿದ್ದವೀರಪ್ಪ ಬಡಾವಣೆಯ 38 ವರ್ಷದ ಮಹಿಳಾ ಟೆಕ್ಕಿಗೆ ಈ ವಂಚನೆ ನಡೆದಿದೆ. ‘ವಿಐಪಿ ರುದ್ರಾ ಷೇರ್ಸ್’ ಎಂಬ ಹೆಸರಿನ ವಾಟ್ಸಾಪ್ ಗ್ರೂಪ್‌ನಲ್ಲಿ ಬಂದ ಸಂದೇಶವನ್ನು ನಂಬಿ ಅವರು ಹೂಡಿಕೆ ಮಾಡಲು ಮುಂದಾಗಿದ್ದಾರೆ. ಆರಂಭದಲ್ಲಿ ಲಾಭ ಸಿಗುತ್ತದೆ ಎಂಬ ಭರವಸೆಯಿಂದ ಹಂತ ಹಂತವಾಗಿ ಒಟ್ಟು 93 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದಾರೆ.

ಆದರೆ ನಂತರ ಲಾಭಾಂಶ ಮಾತ್ರವಲ್ಲದೆ, ಹೂಡಿಕೆ ಮಾಡಿದ ಮೂಲಧನವೂ ವಾಪಸ್ ಬರದಿದ್ದಾಗ ತಮಗೆ ವಂಚನೆ ಆಗಿರುವುದು ಮಹಿಳೆಗೆ ಅರಿವಾಗಿದೆ. ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬಿಜೆಪಿ ಶಾಸಕ ಬೈರತಿ ಬಸವರಾಜ್ ಗೆ ಸಂಕಷ್ಟ; 7 ದಿನ ಸಿಐಡಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ!

0

ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಇಂದು ಸಿಐಡಿ ತಂಡ 42ನೇ ಎಸಿಜೆಎಂ ನ್ಯಾಯಾಧೀಶರ ಮುಂದೆ ಹಾಜರುಪಡಿಸಿತು.

ಕೋರಮಂಗಲದಲ್ಲಿರುವ ನ್ಯಾಯಾಲಯದಲ್ಲಿ ವೈದ್ಯಕೀಯ ವರದಿಯನ್ನು ಸಲ್ಲಿಸಲಾಗಿದ್ದು, ವಿಚಾರಣೆ ಬಳಿಕ ನ್ಯಾಯಾಧೀಶರು ಅವರಿಗೆ ಸಿಐಡಿ ಕಸ್ಟಡಿ ನೀಡುವಂತೆ ಆದೇಶಿಸಿದರು. ಬೈರತಿ ಬಸವರಾಜ್ ಅವರ ವೈದ್ಯಕೀಯ ವರದಿ ನಾರ್ಮಲ್ ಆಗಿರುವ ಹಿನ್ನೆಲೆಯಲ್ಲಿ ಎಸ್‌ಪಿಪಿ 9 ದಿನಗಳ ಕಸ್ಟಡಿಗೆ ಮನವಿ ಸಲ್ಲಿಸಿದರು. ಇದಕ್ಕೆ ಅವರ ಪರ ವಕೀಲರು ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದರು.

ವಾದ-ವಿವಾದ ಆಲಿಸಿದ ನ್ಯಾಯಾಧೀಶರು 7 ದಿನಗಳ ಸಿಐಡಿ ಕಸ್ಟಡಿಗೆ ಆದೇಶ ನೀಡಿದ್ದು, ಫೆಬ್ರವರಿ 21ರವರೆಗೆ ಕಸ್ಟಡಿ ಮುಂದುವರಿಯಲಿದೆ. ಬಂಧನದ ಬಳಿಕ ಮೆಡಿಕಲ್ ಟೆಸ್ಟ್ ನಡೆಸಲಾಗಿದ್ದು, ಹೃದಯ ಸಂಬಂಧಿತ ಸಮಸ್ಯೆ ಇರುವುದಾಗಿ ಪತ್ತೆಯಾಗಿದೆ. ಹೀಗಾಗಿ ಹೆಚ್ಚಿನ ತಪಾಸಣೆಗೆ ಬೌರಿಂಗ್ ಆಸ್ಪತ್ರೆ ವೈದ್ಯರು ಜಯದೇವ ಆಸ್ಪತ್ರೆಗೆ ರೆಫರ್ ಮಾಡಿದ್ದರು ಎಂದು ಎಸ್‌ಪಿಪಿ ಅಶೋಕ್ ನಾಯ್ಕ್ ತಿಳಿಸಿದ್ದಾರೆ. ಈ ವರದಿಯ ಆಧಾರದಲ್ಲಿ ಚಿಕಿತ್ಸೆ ಬಗ್ಗೆ ನ್ಯಾಯಾಧೀಶರು ಸೂಚನೆ ನೀಡಿದ್ದು, ಸದ್ಯ ಯಾವುದೇ ಗಂಭೀರ ಸಮಸ್ಯೆ ಇಲ್ಲ, ಎಲ್ಲವೂ ನಾರ್ಮಲ್ ಎಂದು ವೈದ್ಯಕೀಯ ವರದಿ ಸ್ಪಷ್ಟಪಡಿಸಿದೆ.

ವಿಚಾರಣೆ ವೇಳೆ ಆಹಾರದ ಕುರಿತು ಮನವಿ ಮಾಡಲಾಗಿದ್ದು, ಜಯದೇವ ಆಸ್ಪತ್ರೆಯ ಚಾರ್ಟ್ ಪ್ರಕಾರ ಊಟದ ವ್ಯವಸ್ಥೆ ಕಲ್ಪಿಸಲು ನ್ಯಾಯಾಧೀಶರು ಸೂಚಿಸಿದ್ದಾರೆ. ಆದರೆ ವಿಶೇಷ ಊಟ ಅಥವಾ ಮನೆ ಊಟಕ್ಕೆ ಸಂಬಂಧಿಸಿದ ಮನವಿಗೆ ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಎಸ್‌ಪಿಪಿ ಮಾಹಿತಿ ನೀಡಿದ್ದಾರೆ.

ಮುರಿದ ಸೇತುವೆಗೆ ಬೈಕ್ ಬಿದ್ದು ದುರಂತ: ಮೂವರು ಯುವಕರ ಸಾವು; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವ್ಯಾಪಕ ಆಕ್ರೋಶ!

0

ಮಧ್ಯಪ್ರದೇಶ: ಕಳೆದ ವರ್ಷ ಭಾರೀ ಮಳೆಗೆ ಭಾಗಶಃ ಕೊಚ್ಚಿಹೋಗಿದ್ದ ಸೇತುವೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ತಡರಾತ್ರಿ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಹೊರಟಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಮೃತರು ರಾಹ್ಲಿ ವಿಧಾನಸಭಾ ಕ್ಷೇತ್ರದ ನಿವಾಸಿಗಳಾಗಿದ್ದು, ತೆಂಡುಖೇಡಾದಿಂದ ಝಾಪನ್ ಕಡೆಗೆ ಪ್ರಯಾಣಿಸುತ್ತಿದ್ದರು. ಝಾಪನ್ ಸಮೀಪ ಬೈರ್ಮಾ ನದಿ ಮೇಲೆ ನಿರ್ಮಿಸಲಾದ ಸೇತುವೆ ಕಳೆದ ವರ್ಷದ ಮಳೆಯ ವೇಳೆ ತೀವ್ರವಾಗಿ ಹಾನಿಗೊಂಡು, ಅದರ ಒಂದು ಭಾಗ ಸಂಪೂರ್ಣವಾಗಿ ಕುಸಿದಿತ್ತು. ಆದರೆ ಸೇತುವೆ ಅಪಾಯಕಾರಿಯಾಗಿದೆ ಎಂಬುದನ್ನು ಸೂಚಿಸಲು ಯಾವುದೇ ಎಚ್ಚರಿಕೆ ಫಲಕಗಳು ಅಥವಾ ಬ್ಯಾರಿಕೇಡಿಂಗ್ ವ್ಯವಸ್ಥೆ ಮಾಡಲಾಗಿರಲಿಲ್ಲ. ಕತ್ತಲಿನಲ್ಲಿ ಸೇತುವೆ ಮುರಿದಿರುವುದನ್ನು ಅರಿಯದ ಯುವಕರು ವೇಗವಾಗಿ ಸಾಗಿದ ಪರಿಣಾಮ, ಬೈಕ್ ನೇರವಾಗಿ ಕುಸಿದ ಭಾಗಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದೆ.

ಡಿಕ್ಕಿಯ ತೀವ್ರತೆಗೆ ಮೋಟಾರ್‌ಸೈಕಲ್ ಸೇತುವೆಯ ಕೆಳಭಾಗದಲ್ಲಿ ಸಿಲುಕಿಕೊಂಡಿದೆ. ಪರಿಣಾಮ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು 21 ವರ್ಷದ ಅಜಯ್ ಘೋಸಿ, 21 ವರ್ಷದ ಅಮಿತ್ ಕುರ್ಮಿ ಮತ್ತು 22 ವರ್ಷದ ಪವನ್ ಕುರ್ಮಿ ಎಂದು ಗುರುತಿಸಲಾಗಿದೆ. ಅಪಘಾತದ ಬಳಿಕ ಕೆಲ ಸಮಯದವರೆಗೆ ಯಾರಿಗೂ ಘಟನೆ ಗಮನಕ್ಕೆ ಬರದೇ ಇದ್ದುದರಿಂದ ರಕ್ಷಣೆಗೆ ಅವಕಾಶವೇ ಸಿಗಲಿಲ್ಲ ಎಂದು ವರದಿಯಾಗಿದೆ.
ಈ ದುರ್ಘಟನೆಯು ಆಡಳಿತ ವ್ಯವಸ್ಥೆಯ ಗಂಭೀರ ನಿರ್ಲಕ್ಷ್ಯವನ್ನು ಬಹಿರಂಗಪಡಿಸಿದೆ.

ಕಳೆದ ವರ್ಷದಿಂದಲೇ ಹಾನಿಗೊಂಡಿದ್ದ ಸೇತುವೆಯನ್ನು ಮುಚ್ಚದೆ ಇರುವುದು, ಸಾರ್ವಜನಿಕ ಸುರಕ್ಷತೆಗೆ ಅಗತ್ಯವಾದ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿರುವುದಕ್ಕೆ ಅಧಿಕಾರಿಗಳ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ.

error: Content is protected !!