Home Blog Page 71

ಪೊಲೀಸರ ಮೇಲೆ ಹಲ್ಲೆ ಮಾಡಿ ತಲೆಮರೆಸಿಕೊಂಡಿದ್ದ ‘ಕೈ’ ಮುಖಂಡನ ಮತ್ತಿಬ್ಬರು ಪುತ್ರರು ಅರೆಸ್ಟ್!

0

ದಾವಣಗೆರೆ:- ಚಿಗಟೇರಿ ಜಿಲ್ಲಾಸ್ಪತ್ರೆ ಬಳಿ ನಡೆದಿದ್ದ ಪೊಲೀಸರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್ ಅವರ ಇನ್ನಿಬ್ಬರು ಪುತ್ರರಾದ ಹುಸೇನ್ ಮತ್ತು ಹಮ್ಝಾರನ್ನು ಪೊಲೀಸರು ಬಂಧಿಸಿದ್ದಾರೆ.

ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಮೊಬೈಲ್ ಲೊಕೇಷನ್ ಹಾಗೂ ಸಿಡಿಆರ್ ಮಾಹಿತಿಗಳ ಆಧಾರದ ಮೇಲೆ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಕಳೆದ ಶನಿವಾರ ಆರೋಪಿಗಳನ್ನು ಬಂಧಿಸಲು ಬಡಾವಣೆ ಠಾಣೆಯ ಸಿಪಿಐ ಗಾಯಿತ್ರಿ ಹಾಗೂ ಕಾನ್ಸ್‌ಟೇಬಲ್‌ಗಳಾದ ಹರೀಶ್ ಮತ್ತು ಕೆಂಚಪ್ಪ, ಸ್ಥಳಕ್ಕೆ ತೆರಳಿದ್ದ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಯೂಬ್ ಪೈಲ್ವಾನ್ ಅವರ ಮತ್ತೊಬ್ಬ ಪುತ್ರ ಹಸೇನ್‌ ನನ್ನು ಪೊಲೀಸರು ಬಂಧಿಸಿದ್ದರು.

ಆರೋಪಿಗಳ ಬಂಧನಕ್ಕಾಗಿ ಸಿಟಿ ಡಿವೈಎಸ್ಪಿ ಶರಣಬಸವೇಶ್ವರ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಬಂಧಿತ ಆರೋಪಿಗಳನ್ನು ಇಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಸಾಲದ ವಿಚಾರಕ್ಕೆ ಜಗಳ; ಪತ್ನಿಯ ಕತ್ತು ಸೀಳಿ ಕೊಲೆಗೈದ ಗಂಡ!

0

ಹುಬ್ಬಳ್ಳಿ: ಸಾಲದ ವಿಷಯವನ್ನು ಪ್ರಶ್ನಿಸಿದ್ದಕ್ಕೆ ಪತಿಯೇ ಪತ್ನಿಯನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ ಅಮಾನುಷ ಘಟನೆ ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದಲ್ಲಿ ನಡೆದಿದೆ.

ಗಾರೆ ಕೆಲಸ ಮಾಡುತ್ತಿದ್ದ ಇರ್ಫಾನ್ ಎಂಬಾತ ತನ್ನ ಪತ್ನಿ ಮಾಸಬ್ಬಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಮಾಸಬ್ಬಿ–ಇರ್ಫಾನ್ ದಂಪತಿಗೆ ಇಬ್ಬರು ಚಿಕ್ಕ ಮಕ್ಕಳು ಇದ್ದರೂ, ಮನೆಯೊಳಗಿನ ಸಾಲದ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಇರ್ಫಾನ್ ಸಾಲ ತೀರಿಸಲು ಪತ್ನಿಯ ಚಿನ್ನಾಭರಣಗಳನ್ನು ಅಡವಿಟ್ಟಿದ್ದನು. ಇದೇ ವಿಚಾರಕ್ಕೆ ದಂಪತಿಯ ನಡುವೆ ನಿರಂತರವಾಗಿ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಇತ್ತೀಚೆಗೆ ಮಾಸಬ್ಬಿಯ ಸಹೋದರ 20 ಸಾವಿರ ರೂ. ಹಣ ನೀಡಿದ್ದರೂ ಸಹ, ಇನ್ನಷ್ಟು ಹಣ ತರಬೇಕು ಎಂದು ಇರ್ಫಾನ್ ಪತ್ನಿಗೆ ಒತ್ತಡ ಹಾಕುತ್ತಿದ್ದನು. ಸೋಮವಾರ ಈ ವಿಚಾರಕ್ಕೆ ಮತ್ತೆ ಜಗಳ ಉಂಟಾಗಿ, ಆಕ್ರೋಶಗೊಂಡ ಇರ್ಫಾನ್ ಚಾಕುವಿನಿಂದ ಪತ್ನಿಯ ಕತ್ತು ಸೀಳಿ ದಾಳಿ ನಡೆಸಿದ್ದಾನೆ. ಪ್ರಾಣ ಉಳಿಸಿಕೊಳ್ಳಲು ಮಾಸಬ್ಬಿ ರಕ್ತಸ್ರಾವವಾಗುತ್ತಿದ್ದಂತೆಯೇ ಮನೆ ಹೊರಗೆ ಓಡಿ ಬಂದಿದ್ದಾಳೆ. ಆದರೆ ಹಿಂಬಾಲಿಸಿದ ಇರ್ಫಾನ್, ಮನೆಯ ಎದುರಲ್ಲೇ ಮತ್ತೆ ಚಾಕುವಿನಿಂದ ಕತ್ತಿಗೆ ಇರಿದು ಹತ್ಯೆ ಮಾಡಿದ್ದಾನೆ.

ಈ ದೃಶ್ಯವನ್ನು ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಮೃತದೇಹದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ದೃಶ್ಯಗಳು ಮನಕಲಕುವಂತಿದ್ದವು. ಘಟನೆ ಬಳಿಕ ಇರ್ಫಾನ್ ಸ್ವತಃ ಕೇಶ್ವಾಪುರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದು, ನಂತರ ಆತನನ್ನು ಗೋಕುಲ್ ರೋಡ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಈ ಘಟನೆಯಿಂದ ಒಂದೆಡೆ ತಂದೆ ಜೈಲು ಪಾಲಾದರೆ, ಮತ್ತೊಂದೆಡೆ ತಾಯಿ ಮೃತಳಾಗಿದ್ದಾಳೆ. ಪ್ರಪಂಚದ ಅರಿವು ಇಲ್ಲದ ಇಬ್ಬರು ಮುದ್ದಾದ ಮಕ್ಕಳು ಅನಾಥರಾಗಿದ್ದು, ಅವರ ಭವಿಷ್ಯವೇ ಇದೀಗ ಪ್ರಶ್ನಾರ್ಥಕವಾಗಿದೆ.

ಚುನಾವಣೆಗೆ ಸ್ಪರ್ಧಿಸಲು 6 ವರ್ಷದ ಮಗಳನ್ನೇ ಕೊಲೆಗೈದ ಪಾಪಿ ತಂದೆ!

0

ಮುಂಬೈ:- ಪಾಪಿ ತಂದೆಯೋರ್ವ ಚುನಾವಣೆಗೆ ಸ್ಪರ್ಧಿಸಲು ಮಗಳನ್ನೇ ಕೊಲೆಗೈದಿರುವ ಆಘಾತಕಾರಿ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಜರುಗಿದೆ.

ಎರಡಕ್ಕಿಂತ ಹೆಚ್ಚು ಮಕ್ಕಳಿದ್ರೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇಲ್ಲ ಎಂಬ ಕಾರಣಕ್ಕೆ ಮಹಾರಾಷ್ಟ್ರದ ವ್ಯಕ್ತಿಯೊಬ್ಬ ತನ್ನ 6 ವರ್ಷದ ಮಗಳನ್ನು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಬೋಧನ್ ಕಾಲುವೆಗೆ ನೂಕಿ ಹತ್ಯೆ ಮಾಡಿದ್ದಾನೆ.

ಕೊಲೆಯಾದ ಬಾಲಕಿಯ ಹೆಸರು ಪ್ರಾಚಿ (6), ಮತ್ತು ಹತ್ಯೆಗೈದ ಆರೋಪಿಯನ್ನು ಪಾಂಡುರಂಗ ಕೊಂಡ್ಮಂಗಳೆ (28) ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ ಸೆಲೂನ್ ನಡೆಸುತ್ತಿದ್ದ ಪಾಂಡುರಂಗ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸಿದ್ದ. ಅವನಿಗೆ ಮೂರು ವರ್ಷದ ಗಂಡು ಮಗು ಮತ್ತು ಆರು ವರ್ಷದ ಅವಳಿ ಹೆಣ್ಣು ಮಕ್ಕಳಿದ್ದರು. ಇದರಿಂದ ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಎರಡು ಮಕ್ಕಳ ನಿಯಮ ಇರುವುದರಿಂದ ಸ್ಪರ್ಧಿಸಲು ಅನರ್ಹನಾಗಿದ್ದ.

ಈ ವಿಚಾರವನ್ನು ಸ್ನೇಹಿತ ಮತ್ತು ಗ್ರಾಮದ ಪ್ರಸ್ತುತ ಸರಪಂಚ್ ಗಣೇಶ್ ಶಿಂಧೆ ಜೊತೆ ಚರ್ಚಿಸಿ ಅವಳಿ ಮಕ್ಕಳಲ್ಲಿ ಹಿರಿಯಳಾದ ಪ್ರಾಚಿಯನ್ನು ಎಲ್ಲಾದರೂ ಬಿಟ್ಟು ಬರಲು ಯೋಚಿಸಿದ್ದ. ಬಳಿಕ ಅವಳು ವಾಪಸ್‌ ಬಂದರೆ ತೊಂದರೆ ಆಗುತ್ತದೆ ಎಂದು ಕಾಲುವೆಗೆ ತಳ್ಳಿ ಆಕಸ್ಮಿಕ ಸಾವು ಎಂದು ಬಿಂಬಿಸಲು ಯತ್ನಿಸಿದ್ದ.

ಅಲ್ಲಿಯೇ ಸಮೀಪದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರಿಗೆ ನೀರಿಗೆ ಏನೋ ಬಿದ್ದ ಶಬ್ಧ ಕೇಳಿ, ಬಂದು ನೋಡಿದಾಗ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಇದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಬಾಲಕಿಯ ಫೋಟೋ ವೈರಲ್‌ ಆಗಿತ್ತು. ಇದರ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡು ಪಾಪಿ ತಂದೆಯನ್ನು ಬಂಧಿಸಿದ್ದಾರೆ.

ತೆರಿಗೆ ಪಾವತಿಸದ ಮಾಲೀಕರಿಗೆ ಬಿಗ್ ಶಾಕ್; 7 ಸಾವಿರ ಆಸ್ತಿಗಳ ಹರಾಜಿಗೆ ಮುಂದಾದ ಜಿಬಿಎ!

0

ಬೆಂಗಳೂರು: ಆಸ್ತಿ ತೆರಿಗೆ ಬಾಕಿ ಪಾವತಿಸದ ಮಾಲೀಕರ ವಿರುದ್ಧ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) ಕಠಿಣ ಕ್ರಮಕ್ಕೆ ಮುಂದಾಗಿದೆ.

ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಒಟ್ಟು 437 ಕೋಟಿ ರೂ.ಗಳಿಗಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿದಿದ್ದು, ಈ ಹಿನ್ನೆಲೆಯಲ್ಲಿ ಸುಮಾರು 7 ಸಾವಿರ ಆಸ್ತಿಗಳನ್ನು ಹರಾಜು ಹಾಕಲು ಪ್ರಾಧಿಕಾರ ನಿರ್ಧರಿಸಿದೆ.

ತೆರಿಗೆ ಪಾವತಿಸದ ಆಸ್ತಿ ಮಾಲೀಕರಿಗೆ ಈಗಾಗಲೇ ಹಲವು ಬಾರಿ ನೋಟಿಸ್‌ಗಳನ್ನು ಜಾರಿ ಮಾಡಲಾಗಿತ್ತು. ಆದರೆ ನೋಟಿಸ್‌ಗಳ ಬಳಿಕವೂ ತೆರಿಗೆ ಪಾವತಿ ಆಗದ ಹಿನ್ನೆಲೆ, ಸಂಬಂಧಿಸಿದ ಆಸ್ತಿಗಳನ್ನು ಜಪ್ತಿ ಮಾಡುವ ಆದೇಶವನ್ನು ಜಿಬಿಎ ಹೊರಡಿಸಿದೆ. ಜಪ್ತಿ ಆದೇಶಗಳ ನಂತರವೂ ತೆರಿಗೆ ಬಾಕಿ ಪಾವತಿಸದಿದ್ದಲ್ಲಿ, ಫೆಬ್ರವರಿ 17ರಂದು ಜಂಟಿ ಆಯುಕ್ತರ ಕಚೇರಿಗಳಲ್ಲಿ ಈ ಆಸ್ತಿಗಳ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.

ತೆರಿಗೆ ಪಾವತಿಯಲ್ಲಿ ನಿರ್ಲಕ್ಷ್ಯ ತೋರಿದ ಆಸ್ತಿ ಮಾಲೀಕರಿಗೆ ಇದು ಕೊನೆಯ ಎಚ್ಚರಿಕೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ದಿಕ್ಕು-ದೆಸೆಯಿಲ್ಲದ ಕೇಂದ್ರ ಬಜೆಟ್: ಉಮರ ಫಾರೂಕ ಹುಬ್ಬಳ್ಳಿ

0

ವಿಜಯಸಾಕ್ಷಿ ಸುದ್ದಿ, ಗದಗ: ಬಜೆಟ್ ಅಂದ ತಕ್ಷಣ ಉತ್ಸಾಹ, ಉಲ್ಲಾಸ, ವಿಶ್ವಾಸ ಎಲ್ಲ ವರ್ಗದಲ್ಲಿಯೂ ಮೂಡಬೇಕು. ಆದರೆ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಮಧ್ಯಮ ವರ್ಗದವರನ್ನು ಕಡೆಗಣಿಸಲಾಗಿದೆ. ಸಾಲ ಮಾಡುವ ಯೋಜನೆ ಹೊಂದಿದ್ದು, ನಮ್ಮ ಭಾರತ ಜಿಡಿಪಿ ಬಗ್ಗೆ ಕಾಳಜಿಯೇ ಇಲ್ಲ ಎಂದು ಕೆಪಿಸಿಸಿ ಗದಗ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಉಮರ ಫಾರೂಕ ಹುಬ್ಬಳ್ಳಿ ಖಂಡಿಸಿದ್ದಾರೆ.

ಬಜೆಟ್‌ನಿಂದ ಶೇರು ಮಾರುಕಟ್ಟೆಯಲ್ಲಿ ಇಳಿಕೆಯಾಗುತ್ತಿದೆ. ಬಡವರು, ಬೀದಿ ಬದಿ ವ್ಯಾಪಾರಿಗಳಿಗೆ ಜೀವನೋಪಾಯ ಹಾಗೂ ಸಾಮಾಜಿಕ ಭದ್ರತೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಯೋಜನೆಗಳಿಗೆ ಯಾವುದೇ ಹಣವಿಲ್ಲ, ಮಧ್ಯಮ ವರ್ಗದವರಿಗೆ ಮಣ್ಣು, ಬಂಡವಾಳ ಹೂಡಿಕೆದಾರರಿಗೆ ಹೆದರಿ ಹೃದಯಾಘಾತಕ್ಕೆ ಒಳಗಾಗುವಂತೆ ಇರುವ ದಿಕ್ಕು-ದೆಸೆಯಿಲ್ಲದ ಬಜೆಟ್ ಇದಾಗಿದೆ ಎಂದಿದ್ದಾರೆ.

ಅಸ್ಪಷ್ಟ ಆರ್ಥಿಕ ಚಿತ್ರಣದ ಬಜೆಟ್: ಸಚಿವ ಡಾ. ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ರಾಷ್ಟ್ರದ ಆರ್ಥಿಕ ಪ್ರಗತಿಗೆ ಇಂಬು ಕೊಡಬಲ್ಲ ಮುಂಗಡ ಪತ್ರವಾಗಿರದೇ ರಾಷ್ಟ್ರದ ಅರ್ಥ ವ್ಯವಸ್ಥೆಯ ನೈಜ ಚಿತ್ರಣವನ್ನು ಮರೆಮಾಚಿದೆ. ರಾಜ್ಯಗಳಿಗೆ ಹಣಕಾಸು ಹಂಚಿಕೆ ರಚನಾತ್ಮಕವಾಗಿಲ್ಲ ಎಂದು ರಾಜ್ಯದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳು, ಪ್ರವಾಸೋದ್ಯಮ ಇಲಾಖೆ ಸಚಿವರೂ ಆಗಿರುವ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರದ 2026-27ನೇ ಸಾಲಿನ ಬಜೆಟ್ ಕುರಿತು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಆದಾಯ ಕರ ಮಿತಿಗಳನ್ನು ತರ್ಕಬದ್ಧಗೊಳಿಸುವಿಕೆಯನ್ನು ಬಿಟ್ಟು ಹೊಸ ಹಣಕಾಸು ಕಾಯ್ದೆಯನ್ನು ಜಾರಿಗೊಳಿಸುತ್ತಿರುವುದು ರಾಷ್ಟ್ರದ ಅರ್ಥ ವ್ಯವಸ್ಥೆಗೆ ತೀರಾ ಹಿನ್ನಡೆಯಾಗುತ್ತದೆ. ಆದಾಯ ತೆರಿಗೆಯ ರಿಟರ್ನ್‌ನ್ನು ದಾಖಲಿಸುವಲ್ಲಿ ಮಾಡುವ ವಿಳಂಬವನ್ನು ಮನ್ನಾ ಮಾಡುವುದು ಮತ್ತು ಪರಿಷ್ಕರಿಸಲು ಅವಕಾಶ ನೀಡಿರುವುದು ಕಪ್ಪು ಹಣದ ಉತ್ಪತ್ತಿ ಹೆಚ್ಚಾಗಲು ಕಾರಣವಾಗುತ್ತದೆ.

ಕೇಂದ್ರ ಮುಂಗಡ ಪತ್ರದಲ್ಲಿ ಕರ್ನಾಟಕದ ಹೆಸರು ಪ್ರಸ್ತಾಪವಾಗಿದ್ದರೂ ಸಹ ನೈಜ ಹಣಕಾಸಿನ ಸ್ಪಷ್ಟವಾದ ಉಲ್ಲೇಖವಿಲ್ಲದೇ ಯೋಜನೆಗಳು ಕೇವಲ ಕಾಗದದ ಹುಲಿಗಳಾಗಿವೆ. ಆದ್ದರಿಂದ ಅಸ್ಪಷ್ಟ ಆರ್ಥಿಕ ಚಿತ್ರಣವನ್ನು ಒಳಗೊಂಡಿರುವ ಕೇಂದ್ರ ಮುಂಗಡ ಪತ್ರ ರಾಷ್ಟ್ರದ ಜನತೆಗೆ ನಿರಾಶಾದಾಯಕವಾಗಿದೆ ಹೇಳಿದ್ದಾರೆ.

ಮೆಜೆಸ್ಟಿಕ್‌ನಲ್ಲಿ ಸಾರವೆ ಮರ ಕುಸಿತ; ಮೂವರಿಗೆ ಗಾಯ, ಬಸ್‌–ಬೈಕ್‌ಗಳಿಗೆ ಹಾನಿ!

0

ಬೆಂಗಳೂರು: ನವೀಕರಣ ಕಾಮಗಾರಿಗಾಗಿ ಅಳವಡಿಸಿದ್ದ ಸಾರವೆ ಮರ ಏಕಾಏಕಿ ಕುಸಿದು ಭಾರೀ ಅವಘಡ ಸಂಭವಿಸಿರುವ ಘಟನೆ ಬೆಂಗಳೂರಿನ ಮೆಜೆಸ್ಟಿಕ್ ಸಮೀಪ ಜರುಗಿದೆ.

ಇಂದು (ಸೋಮವಾರ) ರಾತ್ರಿ ಸುಮಾರು 9.10ರ ವೇಳೆಗೆ ನಡೆದ ಈ ಘಟನೆ ವೇಳೆ ರಸ್ತೆಯಲ್ಲಿ ನಿಂತಿದ್ದ ಮೂವರಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸಾರವೆ ಮರ ಪತನದಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕೆಲ ಬೈಕ್‌ಗಳು ಜಖಂಗೊಂಡಿದ್ದು, ಅಕ್ಕಪಕ್ಕದ ಕೆಲವು ಅಂಗಡಿಗಳ ಮೇಲೂ ಮರ ಬಿದ್ದಿದೆ. ಜೊತೆಗೆ ಎರಡು ಖಾಸಗಿ ಬಸ್‌ಗಳಿಗೆ ಹಾನಿಯಾಗಿದ್ದು, ಅವುಗಳ ಗಾಜುಗಳು ಒಡೆದಿವೆ.

ಈ ಘಟನೆಯಿಂದ ಭಯಭೀತರಾದ ಜನರು ದಿಕ್ಕಾಪಾಲಾಗಿ ಓಡಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಘಟನೆ ದೃಶ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದು, ಉಪ್ಪಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅವಘಡದ ಪರಿಣಾಮ ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸಂಚಾರಕ್ಕೆ ತಾತ್ಕಾಲಿಕ ಅಡಚಣೆ ಎದುರಾಯಿತು.

ಚಾರ್ಮಾಡಿ ಅರಣ್ಯದಲ್ಲಿ ಭಾರೀ ಕಾಡ್ಗಿಚ್ಚು: ಪಶ್ಚಿಮ ಘಟ್ಟದ ಹುಲ್ಲುಗಾವಲು ಭಸ್ಮ!

0

ಚಿಕ್ಕಮಗಳೂರು:- ಪಶ್ಚಿಮ ಘಟ್ಟದ ಪ್ರಮುಖ ಅರಣ್ಯ ಪ್ರದೇಶವಾಗಿರುವ ಚಾರ್ಮಾಡಿ ಅರಣ್ಯದಲ್ಲಿ ಭಾರೀ ಪ್ರಮಾಣದ ಕಾಡ್ಗಿಚ್ಚು ಕಾಣಿಸಿಕೊಂಡಿದೆ.

ಬೆಂಕಿಯ ತೀವ್ರತೆಯಿಂದಾಗಿ ಅರಣ್ಯದ ಸೂಕ್ಷ್ಮ ಹುಲ್ಲುಗಾವಲುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಅರಣ್ಯ ಪರಿಸರಕ್ಕೆ ಭಾರೀ ಹಾನಿಯಾಗಿದೆ. ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ಮಾರ್ಗದ ಸಮೀಪವೇ ಬೆಂಕಿ ಕಾಣಿಸಿಕೊಂಡಿರುವುದರಿಂದ ಸ್ಥಳೀಯರಲ್ಲಿ ಆತಂಕ ಮೂಡಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಈ ಭಾಗದಲ್ಲಿ ಗಾಳಿ ವೇಗವಾಗಿ ಬೀಸುತ್ತಿರುವುದರಿಂದ ಬೆಂಕಿ ಕ್ಷಣ ಕ್ಷಣಕ್ಕೂ ವ್ಯಾಪಿಸುತ್ತಿದ್ದು, ನಿಯಂತ್ರಣಕ್ಕೆ ತರುವುದು ಕಷ್ಟಕರವಾಗಿದೆ. ಕಾಡ್ಗಿಚ್ಚಿನ ಹೊಗೆಯಿಂದ ಸುತ್ತಮುತ್ತಲ ಪ್ರದೇಶಗಳು ದಟ್ಟವಾದ ಹೊಗೆಯಿಂದ ಆವರಿಸಲ್ಪಟ್ಟಿದ್ದು, ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ.

ಬೆಂಕಿ ನಂದಿಸಲು ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಭೂಭಾಗದ ಕಠಿಣತೆ ಮತ್ತು ಗಾಳಿ ವೇಗ ಹೆಚ್ಚಿರುವುದರಿಂದ ಕಾರ್ಯಾಚರಣೆಗೆ ಅಡಚಣೆ ಎದುರಾಗಿದೆ. ಕಾಡ್ಗಿಚ್ಚಿನಿಂದ ಅರಣ್ಯದ ಜೀವಜಲಕ್ಕೂ ಅಪಾಯ ಎದುರಾಗಿದ್ದು, ಅರಣ್ಯ ಇಲಾಖೆ ಈ ಘಟನೆ ಬಗ್ಗೆ ತನಿಖೆ ಆರಂಭಿಸಿದೆ. ಪರಿಸರ ತಜ್ಞರು ಈ ರೀತಿಯ ಕಾಡ್ಗಿಚ್ಚುಗಳು ಪಶ್ಚಿಮ ಘಟ್ಟದ ಪರಿಸರ ಸಮತೋಲನಕ್ಕೆ ಗಂಭೀರ ಅಪಾಯ ಉಂಟುಮಾಡುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಫ್ಯೂಯಲ್ ಕಂಟ್ರೋಲ್ ಸ್ವಿಚ್ ದೋಷ: ಬೆಂಗಳೂರಿಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ಹಾರಾಟ ರದ್ದು!

0

ನವದೆಹಲಿ:- ಫ್ಯೂಯಲ್ ಕಂಟ್ರೋಲ್ ಸ್ವಿಚ್‌ (ಇಂಧನ ನಿಯಂತ್ರಣ ಸ್ವಿಚ್) ನಲ್ಲಿ ತಾಂತ್ರಿಕ ದೋಷ ಪತ್ತೆಯಾದ ಹಿನ್ನೆಲೆಯಲ್ಲಿ, ಲಂಡನ್‌ನಿಂದ ಬೆಂಗಳೂರಿಗೆ ಹಾರಾಟ ನಡೆಸಲು ನಿಗದಿಯಾಗಿದ್ದ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ನಿಗದಿಯಂತೆ AI132 ಸಂಖ್ಯೆಯ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಲಂಡನ್‌ನಿಂದ ಬೆಂಗಳೂರಿಗೆ ಹೊರಡಬೇಕಾಗಿತ್ತು. ಆದರೆ ಹಾರಾಟಕ್ಕೆ ಮುಂಚಿತವಾಗಿ ಪೈಲಟ್‌ಗಳು ಕಡ್ಡಾಯ ಕಾರ್ಯವಿಧಾನ ಪರಿಶೀಲನೆ ನಡೆಸುವ ವೇಳೆ ಫ್ಯೂಯಲ್ ಕಂಟ್ರೋಲ್ ಸ್ವಿಚ್‌ನಲ್ಲಿ ದೋಷ ಕಂಡುಬಂದಿದೆ. ಈ ಬಗ್ಗೆ ಪೈಲಟ್‌ಗಳು ತಕ್ಷಣವೇ ವಿಮಾನಯಾನ ಸಂಸ್ಥೆಗೆ ವರದಿ ಮಾಡಿದರು.

ಪೈಲಟ್‌ಗಳ ವರದಿ ಸ್ವೀಕರಿಸಿದ ತಕ್ಷಣವೇ ಎಚ್ಚೆತ್ತ ಏರ್ ಇಂಡಿಯಾ, ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿಮಾನ ಹಾರಾಟವನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿತು. ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಏರ್ ಇಂಡಿಯಾ, “ನಮ್ಮ ಪೈಲಟ್‌ಗಳಲ್ಲಿ ಒಬ್ಬರು ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ದೋಷವಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಪೈಲಟ್‌ಗಳ ಕಾಳಜಿಗಳಿಗೆ ಆದ್ಯತೆ ನೀಡಿ ಪರಿಶೀಲನೆ ನಡೆಸಲು OEM (ವಿಮಾನ ಬಿಡಿಭಾಗ ತಯಾರಿಕಾ ಸಂಸ್ಥೆ) ಜೊತೆ ಸಮನ್ವಯ ಮಾಡಿಕೊಳ್ಳಲಾಗುತ್ತಿದೆ” ಎಂದು ತಿಳಿಸಿದೆ.

ಇದಲ್ಲದೆ, ಈ ವಿಷಯವನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA)ದ ಗಮನಕ್ಕೂ ತರಲಾಗಿದೆ. ವಿಮಾನ ತಯಾರಕರೊಂದಿಗೆ ಸೇರಿ ಹೆಚ್ಚಿನ ತಾಂತ್ರಿಕ ಪರಿಶೀಲನೆಗಳು ನಡೆಯುತ್ತಿವೆ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.

ಬೆಳಗಾವಿಯಲ್ಲಿ ಮರಗಳ ಮಾರಣಹೋಮ; ಸೋಲಾರ್ ಪ್ಲಾಂಟ್‌ ಹೆಸರಲ್ಲಿ ಗುಡ್ಡ ಅಗೆದು ಅರಣ್ಯ ನಾಶ!

0

ಬೆಳಗಾವಿ:- ತಾಲ್ಲೂಕಿನ ಬಡಲಾ ಅಂಕಲಗಿ ಗ್ರಾಮದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತವರು ಕ್ಷೇತ್ರದ ಕೌರಿ ಗುಡ್ಡದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣದ ಹೆಸರಿನಲ್ಲಿ ಸಾವಿರಾರು ಮರಗಳ ಮಾರಣಹೋಮವೇ ನಡೆದಿದೆ.

ಕಳೆದ ಒಂದೂವರೆ ತಿಂಗಳಿಂದ 40 ಎಕರೆಗೂ ಹೆಚ್ಚು ಪ್ರದೇಶವನ್ನು ಅಗೆದು ಹಾಳು ಮಾಡಲಾಗಿದೆ. ಈ ಗುಡ್ಡದಲ್ಲಿ ಶ್ರೀಗಂಧ, ತೇಗು, ವಿವಿಧ ಹಣ್ಣಿನ ಮರಗಳು, ಮತ್ತು ನವಿಲು ಸೇರಿದಂತೆ ಹಲವು ಪ್ರಾಣಿ-ಪಕ್ಷಿಗಳು ವಾಸಿಸುತ್ತಿದ್ದರೂ, ಅರಣ್ಯ ಇಲಾಖೆಯಿಂದ ಅನುಮತಿ ಸಿಗದೆ ಇಂತಹ ಹಾನಿ ನಡೆಯುತ್ತಿದೆ. ಸ್ಥಳೀಯ ರೈತರು ತಡೆಗಟ್ಟಲು ಪ್ರಯತ್ನಿಸಿದಾಗ ಜೆಸಿಬಿ ಬಳಸಿ ಮರಗಳನ್ನು ಕಟ್ ಮಾಡುವ ಕಾರ್ಯ ಮುಂದುವರಿಸಿದ್ದು ಅಲ್ಲದೇ, ಅವರಿಗೆ ಬೆದರಿಕೆ ಕೂಡ ಹಾಕಿದ್ದಾರೆ.

ಸ್ಥಳಕ್ಕೆ ಅರಣ್ಯ ಮತ್ತು ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಗಳನ್ನು ಕಟಾವು ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

error: Content is protected !!