Home Blog Page 70

ಅಮಿತ್ ಶಾ ಹೆಸರಿನಲ್ಲಿ ವಂಚನೆ ಆರೋಪ: ಸುಜಯೇಂದ್ರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

0

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿಶೇಷ ಕರ್ತವ್ಯಾಧಿಕಾರಿ ಎಂದು ನಂಬಿಸಿ ಜಮ್ಮು-ಕಾಶ್ಮೀರ ಮೂಲದ ವೈದ್ಯನಿಂದ ₹2.70 ಕೋಟಿ ವಂಚನೆ ಮಾಡಿದ ಪ್ರಕರಣದಲ್ಲಿ ಆರೋಪಿ ಸುಜಯೇಂದ್ರ ವಿರುದ್ಧ ಪೊಲೀಸರು ಬೆಂಗಳೂರಿನ 24ನೇ ಎಸಿಜೆಎಂ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

ಯದುಗಿರಿ ಯತಿರಾಜ ಮಠದೊಂದಿಗೆ ಆಪ್ತ ಸಂಬಂಧ ಬೆಳೆಸಿಕೊಂಡಿದ್ದ ಸುಜಯೇಂದ್ರ, ಮಠಕ್ಕೆ ಧನಸಹಾಯ ನೀಡಿ ವಿಶ್ವಾಸ ಗಳಿಸಿದ್ದ. ನಂತರ ದೇಶದ ವಿವಿಧ ಭಾಗಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ,

ರಾಜಕೀಯ ವ್ಯಕ್ತಿಗಳೊಂದಿಗೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಬಳಸಿಕೊಂಡು ಜನರನ್ನು ನಂಬಿಸುವ ಮೂಲಕ ವಂಚನೆ ನಡೆಸುತ್ತಿದ್ದನು. 2023ರಲ್ಲಿ ಏರ್‌ಪೋರ್ಟ್ ಸಮೀಪ ಜಮೀನು ಒದಗಿಸುವುದಾಗಿ ಹೇಳಿ ಮೋಸ ಮಾಡಿದ ಪ್ರಕರಣವೂ ಈತನ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ಡಾ. ರಾಜಾ ಲಂಗೇರ್ ಎಂಬ ವೈದ್ಯರು ಕೂಡ ಮಠದ ಭಕ್ತರಾಗಿದ್ದು, ಅಲ್ಲಿಯೇ ಸುಜಯೇಂದ್ರನ ಪರಿಚಯವಾಗಿತ್ತು. ತನ್ನನ್ನು ಅಮಿತ್ ಶಾ ಅವರ ವಿಶೇಷ ಕರ್ತವ್ಯಾಧಿಕಾರಿ ಎಂದು ಪರಿಚಯಿಸಿಕೊಂಡ ಆತ, ಬೆಂಗಳೂರಿನ ಏರ್‌ಪೋರ್ಟ್ ಸಮೀಪ ಮಠಕ್ಕೆ ಸೇರಿದ ಜಮೀನನ್ನು ಕಡಿಮೆ ದರದಲ್ಲಿ ಕೊಡಿಸುವುದಾಗಿ ಹೇಳಿ ವಿಶ್ವಾಸ ಗಳಿಸಿದ್ದ.

ಸ್ವಾಮೀಜಿಯ ಸಹಮತವೂ ಇದೆ ಎಂದು ಹೇಳಿ ವೈದ್ಯರಿಂದ ₹2.70 ಕೋಟಿ ಹಣ ಪಡೆದುಕೊಂಡಿದ್ದನು. ಆದರೆ ಭರವಸೆ ನೀಡಿದಂತೆ ಜಮೀನು ಒದಗಿಸದೇ ವಿಳಂಬವಾಗುತ್ತಿದ್ದಂತೆ ಅನುಮಾನಗೊಂಡ ವೈದ್ಯರು ವಿಚಾರಣೆ ನಡೆಸಿದಾಗ ಮೋಸದ ಅಸಲಿ ಮುಖ ಬಹಿರಂಗವಾಗಿದೆ.

ಇದರ ಜೊತೆಗೆ, ಸುಜಯೇಂದ್ರನ ವಿರುದ್ಧ ರಾಜ್ಯಪಾಲರ ನಕಲಿ ಸಹಿ ಮತ್ತು ಲೋಕಭವನದ ಅಧಿಕೃತ ಲೆಟರ್‌ಹೆಡ್ ಬಳಸಿಕೊಂಡು ವಂಚನೆ ನಡೆಸಿದ ಆರೋಪವೂ ಕೇಳಿಬಂದಿದೆ. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರದೀಪ್ ಅವರ ದೂರಿನ ಮೇರೆಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

2025ರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗೆ ಪತ್ರ ಬರೆದಿದ್ದ ಸುಜಯೇಂದ್ರ, ರಾಜ್ಯಪಾಲರ ಶಿಫಾರಸ್ಸು ಇದೆ ಎಂದು ನಂಬಿಸಿ ವಿದ್ಯಾರ್ಥಿಗೆ ಸೀಟ್ ನೀಡುವಂತೆ ಒತ್ತಡ ಹೇರಿದ್ದನೆಂಬ ಆರೋಪವೂ ಇದೆ. ಈತನ ಮನೆ ಮೇಲೆ ನಡೆದ ದಾಳಿಯಲ್ಲಿ ಕೇಂದ್ರ ಗೃಹ ಸಚಿವಾಲಯ ಮತ್ತು ಲೋಕಭವನದ ಹೆಸರಿನ ನಕಲಿ ಲೆಟರ್‌ಹೆಡ್‌ಗಳು ಹಾಗೂ ನಕಲಿ ಮುದ್ರೆಗಳು ಪತ್ತೆಯಾಗಿದ್ದು, ವಂಚನೆ ಜಾಲದ ವ್ಯಾಪ್ತಿ ದೊಡ್ಡದಾಗಿರುವ ಅನುಮಾನ ಮೂಡಿಸಿದೆ.

ಕರಾವಳಿ ಜನರಿಗೆ ಗುಡ್‌ ನ್ಯೂಸ್: ವಂದೇ ಭಾರತ್ ಸಂಚಾರಕ್ಕೆ ರೈಲ್ವೆ ಸಚಿವರಿಂದ ಮಹತ್ವದ ಸುಳಿವು

ದಕ್ಷಿಣ ಕನ್ನಡ: ಕರಾವಳಿ ಕರ್ನಾಟಕ ಮತ್ತು ಗೋವಾವನ್ನು ವೇಗವಾಗಿ ಸಂಪರ್ಕಿಸುವ ಮಹತ್ವಾಕಾಂಕ್ಷಿ ಬೆಂಗಳೂರು–ಮಂಗಳೂರು–ಮಡ್ಗಾಂವ್ ವಂದೇ ಭಾರತ್ ರೈಲು ಸೇವೆ ಶೀಘ್ರದಲ್ಲೇ ಆರಂಭವಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ನೀಡಿರುವ ಹೇಳಿಕೆ ಕರಾವಳಿ ಭಾಗದ ಜನರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಇತ್ತೀಚೆಗೆ ಯೋಜನೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಮುಂದಿನ ಕೆಲವು ತಿಂಗಳೊಳಗೆ ಬೆಂಗಳೂರು, ಮಂಗಳೂರು ಮತ್ತು ಮಡ್ಗಾಂವ್ ನಡುವೆ ವೇಗದ ವಂದೇ ಭಾರತ್ ರೈಲು ಸಂಚಾರ ಆರಂಭಿಸುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.

ಹಾಸನ–ಮಂಗಳೂರು ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿಯ ಅಂತಿಮ ಪರಿಶೀಲನೆ ಮಾತ್ರ ಬಾಕಿಯಿದ್ದು, ಅದು ಪೂರ್ಣಗೊಂಡ ಬಳಿಕವೇ ಸೇವೆಗೆ ಹಸಿರು ನಿಶಾನೆ ಸಿಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ರೈಲು ಸೇವೆ ಆರಂಭವಾದರೆ ಕರಾವಳಿ ಹಾಗೂ ಮಲೆನಾಡು ಭಾಗಗಳ ನಡುವಿನ ಸಂಚಾರಕ್ಕೆ ಹೊಸ ಚೈತನ್ಯ ಸಿಗಲಿದೆ. ಈಗಾಗಲೇ ಮಾರ್ಗದ ಬಹುತೇಕ ಭಾಗಗಳಲ್ಲಿ ವಿದ್ಯುದೀಕರಣ ಪೂರ್ಣಗೊಂಡಿದ್ದು, ಪ್ರಯೋಗಾತ್ಮಕ ಸಂಚಾರ ಕಾರ್ಯಗಳೂ ನಡೆಯುತ್ತಿವೆ. ಇದರಿಂದ ಯೋಜನೆ ಅಂತಿಮ ಹಂತ ತಲುಪಿರುವುದು ಸ್ಪಷ್ಟವಾಗಿದೆ.

ರೈಲ್ವೆ ಇಲಾಖೆಯ ಮೂಲಗಳ ಪ್ರಕಾರ, ಬಹುಕಾಲದಿಂದ ನಿರೀಕ್ಷೆಯಲ್ಲಿದ್ದ ಈ ಸೇವೆಯನ್ನು ಮಳೆಗಾಲ ಆರಂಭಕ್ಕೂ ಮುನ್ನವೇ ಸಾರ್ವಜನಿಕರಿಗೆ ಪರಿಚಯಿಸುವ ಸಾಧ್ಯತೆ ಇದೆ. ಸುರಕ್ಷತಾ ಅನುಮೋದನೆ ಹಾಗೂ ತಾಂತ್ರಿಕ ಪರೀಕ್ಷೆಗಳು ಪೂರ್ಣಗೊಂಡ ಬಳಿಕ ಅಧಿಕೃತ ಚಾಲನೆ ನೀಡಲಾಗುತ್ತದೆ.

ಜನಗಣತಿ ರಾಷ್ಟ್ರೀಯ ಕರ್ತವ್ಯ: ಖಾಸಗಿ ಶಾಲಾ ಸಿಬ್ಬಂದಿಯೂ ಪಾಲ್ಗೊಳ್ಳಬೇಕು – ಹೈಕೋರ್ಟ್ ಸೂಚನೆ

ಬೆಂಗಳೂರು: ಜನಗಣತಿ ರಾಷ್ಟ್ರೀಯ ಕರ್ತವ್ಯವಾಗಿದ್ದು, ಅದಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ರಜೆಯಲ್ಲಿರುವ ಶಿಕ್ಷಕರನ್ನು ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿ, ಗಣತಿ ಕಾರ್ಯದಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡುವಂತೆ ನಗರದ ಖಾಸಗಿ ಶಾಲೆಯ ಪ್ರಾಂಶುಪಾಲರಿಗೆ ನಿರ್ದೇಶನ ನೀಡಿದೆ.

ಜೆ.ಪಿ. ನಗರದ 7ನೇ ಹಂತದಲ್ಲಿರುವ ‘ದಿ ಬ್ರಿಗೇಡ್ ಶಾಲೆ’ ಪ್ರಾಂಶುಪಾಲ ಶುಭಾರ್ ಜೈನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚ್ಚಿನ್ ಶಂಕರ್ ಮಗದಂ ಅವರಿದ್ದ ಪೀಠ ಈ ಆದೇಶ ನೀಡಿದೆ.

ಇದಲ್ಲದೆ, ಮುಂದಿನ ಒಂದು ವಾರದೊಳಗೆ ಎಲ್ಲ ಶಿಕ್ಷಕರನ್ನು ಹಿಂದಿರುಗುವಂತೆ ಸೂಚಿಸಿ, ಜನಗಣತಿ ಆಯುಕ್ತರ ಮುಂದೆ ವರದಿ ಮಾಡಿಸುವುದನ್ನು ಖಚಿತಪಡಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ. ಈ ಷರತ್ತಿನ ಆಧಾರದಲ್ಲಿ ಪ್ರಾಂಶುಪಾಲರ ವಿರುದ್ಧ ಜನಗಣತಿ ಕಾಯ್ದೆಯ ಸೆಕ್ಷನ್ 11ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸುವ ಕ್ರಮ ಕೈಗೊಳ್ಳಬಾರದು ಎಂದು ತಿಳಿಸಿದೆ.

ವಿಚಾರಣೆ ವೇಳೆ ನ್ಯಾಯಪೀಠ, “ಸುಮಾರು 10ರಿಂದ 11 ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ಅತ್ಯಂತ ಮಹತ್ವದ ರಾಷ್ಟ್ರೀಯ ಕಾರ್ಯ. ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಶಾಲಾ ಮುಖ್ಯಸ್ಥರು ಸಹಕರಿಸದಿದ್ದರೆ ಸರ್ಕಾರ ಈ ಕಾರ್ಯ ಪೂರ್ಣಗೊಳಿಸುವುದು ಹೇಗೆ?” ಎಂದು ಪ್ರಶ್ನಿಸಿತು.

ಮುಂದಿನ ವಿಚಾರಣೆಯ ವೇಳೆ ಶಾಲೆಯಲ್ಲಿ ಲಭ್ಯವಿರುವ ಶಿಕ್ಷಕರ ಸಂಪೂರ್ಣ ಪಟ್ಟಿಯನ್ನು ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ.

ಪ್ರಕರಣದ ಹಿನ್ನೆಲೆ:
ದೇಶಾದ್ಯಂತ 2026ರ ಜನಗಣತಿ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ಹಂತ ಏಪ್ರಿಲ್ 1ರಿಂದ ಸ್ವಯಂ ಗಣತಿಯೊಂದಿಗೆ ಶುರುವಾಗಿದೆ. ಎರಡನೇ ಹಂತದಲ್ಲಿ ಏಪ್ರಿಲ್ 16ರಿಂದ ಗಣತಿದಾರರು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸೆಪ್ಟೆಂಬರ್ ಅಂತ್ಯದೊಳಗೆ ಗಣತಿ ಪೂರ್ಣಗೊಳ್ಳಬೇಕಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಪ್ರಧಾನ ಜನಗಣತಿ ಅಧಿಕಾರಿ ಏಪ್ರಿಲ್ 9ರಂದು ದಿ ಬ್ರಿಗೇಡ್ ಶಾಲೆಗೆ ಪತ್ರ ಬರೆದು ಶಿಕ್ಷಕರನ್ನು ಗಣತಿ ಕಾರ್ಯಕ್ಕೆ ನಿಯೋಜಿಸುವಂತೆ ಸೂಚಿಸಿದ್ದರು. ಇದನ್ನು ಪ್ರಶ್ನಿಸಿ ಶಾಲೆ ಹೈಕೋರ್ಟ್ ಮೆಟ್ಟಿಲೇರಿತ್ತು.

ಅರ್ಜಿದಾರರ ಪರ ವಕೀಲರು, ಶಾಲೆಯ 84 ಶಿಕ್ಷಕರನ್ನು ನಿಯೋಜಿಸಬಹುದಾದರೂ, ಹಲವರು ಬೇಸಿಗೆ ರಜೆ ಹಿನ್ನೆಲೆಯಲ್ಲಿ ವಿದೇಶ ಪ್ರವಾಸದಲ್ಲಿದ್ದಾರೆ. ಈಗಾಗಲೇ 12 ಮಂದಿ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲರು, ಶಾಲೆಯಲ್ಲಿ ಎಷ್ಟು ಮಂದಿ ಶಿಕ್ಷಕರು ಲಭ್ಯವಿದ್ದಾರೆ ಎಂಬುದರ ಸ್ಪಷ್ಟ ಮಾಹಿತಿ ಅಗತ್ಯವಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

PUC ವಿದ್ಯಾರ್ಥಿನಿಯರ ಮಿಸ್ಸಿಂಗ್ ಕೇಸ್: ಆಧಾರ್ ಹಿಡಿದು ಹೋದ ಬಳಿಕ ಸುಳಿವು ಇಲ್ಲ, CIDಗೆ ವರ್ಗಾವಣೆ

0

ಬೆಂಗಳೂರು: ನಗರದ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಜನವರಿಯಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿನಿಯರ ಪ್ರಕರಣವನ್ನು ರಾಜ್ಯ ಸರ್ಕಾರ ಅಪರಾಧ ತನಿಖಾ ಇಲಾಖೆ (ಸಿಐಡಿ)ಗೆ ವರ್ಗಾವಣೆ ಮಾಡಿದೆ. ಘಟನೆ ನಡೆದು ಎಂಟು ತಿಂಗಳು ಕಳೆದರೂ ವಿದ್ಯಾರ್ಥಿನಿಯರ ಬಗ್ಗೆ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತನಿಷ್ಕಾ ಹಾಗೂ ಆಕೆಯ ಜೂನಿಯರ್ ತೇಜಸ್ವಿನಿ ಜನವರಿ 31ರಂದು ಮನೆಯಿಂದ ಹೊರಟ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದರು. ಅವರು ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಪೋಷಕರು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನಿಖೆಯಲ್ಲಿ ವಿದ್ಯಾರ್ಥಿನಿಯರು ಮನೆ ಬಿಟ್ಟು ಹೋಗುವಾಗ ತಮ್ಮ ಆಧಾರ್ ಕಾರ್ಡ್‌ಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿದ್ದರೆಂಬುದು ಬೆಳಕಿಗೆ ಬಂದಿತ್ತು. ಆದರೆ, ಕಳೆದ ಎಂಟು ತಿಂಗಳ ಅವಧಿಯಲ್ಲಿ ಅವರು ಯಾವುದೇ ಮೊಬೈಲ್ ಫೋನ್ ಅಥವಾ ಎಟಿಎಂ ಕಾರ್ಡ್ ಬಳಸಿಲ್ಲ ಎಂಬುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಜೊತೆಗೆ, ಕುಟುಂಬ ಸದಸ್ಯರು ಅಥವಾ ಸ್ನೇಹಿತರನ್ನು ಸಹ ಸಂಪರ್ಕಿಸಿಲ್ಲ.

ಪ್ರಕರಣ ದಾಖಲಾದ ತಕ್ಷಣ ಪೊಲೀಸರು ತನಿಖೆ ಆರಂಭಿಸಿ, ಆರಂಭಿಕ ಹಂತದಲ್ಲಿ ವಿದ್ಯಾರ್ಥಿನಿಯರು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಸುಳಿವು ಪತ್ತೆಹಚ್ಚಿದ್ದರು. ಬಳಿಕ ಮುಂಬೈ, ಚೆನ್ನೈ, ಕೊಯಮತ್ತೂರು, ದೆಹಲಿ, ಕಾಶಿ, ಕೇರಳ, ಚಾಮರಾಜನಗರ ಮತ್ತು ಮೈಸೂರು ಸೇರಿದಂತೆ ದೇಶದ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಹುಡುಕಾಟ ನಡೆಸಲಾಗಿತ್ತು. ಆದರೂ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಲಿಲ್ಲ.

ಸ್ಥಳೀಯ ಪೊಲೀಸರ ತನಿಖೆಯಿಂದ ಅಸಮಾಧಾನಗೊಂಡ ಪೋಷಕರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ನಂತರ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿದ್ದರು. ಇದೀಗ ಸರ್ಕಾರ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿದ್ದು, ವಿದ್ಯಾರಣ್ಯಪುರ ಪೊಲೀಸರು ಸಂಬಂಧಿತ ಎಲ್ಲಾ ದಾಖಲೆಗಳು ಮತ್ತು ಪ್ರಮುಖ ಮಾಹಿತಿಯನ್ನು ಸಿಐಡಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಪ್ರಕರಣದ ತನಿಖೆಯನ್ನು ಸಿಐಡಿಯ ವಿಶೇಷ ತಂಡ ಕೈಗೆತ್ತಿಕೊಂಡಿದ್ದು, ನಾಪತ್ತೆಯಾದ ವಿದ್ಯಾರ್ಥಿನಿಯರ ಪತ್ತೆಗೆ ಹೊಸ ದಿಕ್ಕಿನಲ್ಲಿ ತನಿಖೆ ಆರಂಭಿಸಿದೆ.

ಗದಗ| ವಾಕಿಂಗ್ ಮಾಡುತ್ತಿದ್ದ ಮೂವರ ಮೇಲೆ ಹರಿದ ಕಾರು! ಶಿಕ್ಷಕ ಸೇರಿ ಇಬ್ಬರು ಸಾವು, ಮತ್ತೋರ್ವ ಗಂಭೀರ

0

ಗದಗ: ವಾಕಿಂಗ್ ಮಾಡುತ್ತಿದ್ದ ಮೂವರ ಮೇಲೆ ಕಾರೊಂದು ಹರಿದ ಪರಿಣಾಮ ಶಿಕ್ಷಕ ಸೇರಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.

ಮೂಲತಃ ಮಾಡಳ್ಳಿ ಗ್ರಾಮದ ಅಶೋಕ ಸರವಿ(52) ಹಾಗೂ ಆಟೋ ಚಾಲಕ ಶಿವಾನಂದ ಹುಲಕೋಟಿ(50) ಮೃತರು. ಘಟನೆಯಲ್ಲಿ ಮತ್ತೋರ್ವ ಶಿಕ್ಷಕ ಎಮ್.ಎಸ್ ಚಾಕಲಬ್ಬಿ ಗಾಯಗೊಂಡಿದ್ದಾರೆ. ಮೃತರಲ್ಲಿ ಅಶೋಕ್ ಸರವಿ ಅಕ್ಕಿಗುಂದ ತಾಂಡಾದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಹುಬ್ಬಳ್ಳಿ ರಸ್ತೆಯಲ್ಲಿರುವ ಚೆನ್ನಮ್ಮ ಕಾಲೇಜ್ ಸಮೀಪ ಈ ಘಟನೆ ಸಂಭವಿಸಿದೆ. ಮುಂಜಾನೆ ಎಂದಿನಂತೆ ವಾಕಿಂಗ್‌ಗೆ ತೆರಳಿದ್ದ ಮೂವರಿಗೆ ಲಕ್ಷ್ಮೇಶ್ವರದಿಂದ ಹುಬ್ಬಳ್ಳಿ ಕಡೆಗೆ ಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡಿದ್ದಾರೆ ಅವರನ್ನು ತಕ್ಷಣ ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಹಾವೇರಿ| ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ವ್ಯಕ್ತಿ ನೀರುಪಾಲು!

ಹಾವೇರಿ: ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ವ್ಯಕ್ತಿಯೊಬ್ಬರು ಕಾಲು ಜಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಿರಗೆರೆ ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಅಬ್ಬಾಸ್ ನಾಸೂರ್ (52) ಎಂದು ಗುರುತಿಸಲಾಗಿದೆ. ಅವರು ಹಿರೇಕೆರೂರುಕೋಡ ಗ್ರಾಮದ ನಿವಾಸಿಯಾಗಿದ್ದು, ಮಂಗಳವಾರ ಕುಟುಂಬ ಸಮೇತ ಪಿಕ್ನಿಕ್‌ಗೆ ತೆರಳಿದ್ದರು.

ಈ ವೇಳೆ ನದಿಯಲ್ಲಿ ಸ್ನಾನ ಮಾಡಲು ಇಳಿದಾಗ ಕಾಲು ಜಾರಿ ನೀರಿನಲ್ಲಿ ಮುಳುಗಿ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನೆಯ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ನುರಿತ ಈಜುಗಾರರು ಹುಡುಕಾಟ ನಡೆಸಿ ಶವವನ್ನು ಹೊರತೆಗೆದಿದ್ದಾರೆ.

ರಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಕೌಟುಂಬಿಕ ಕಲಹದಿಂದ ಬೇಸತ್ತು ನೇಣಿಗೆ ಕೊರಳೊಡ್ಡಿದ ಸಬ್ ಇನ್ಸ್ಪೆಕ್ಟರ್ ಪತ್ನಿ!

ಚಿಕ್ಕಮಗಳೂರು: ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆಯೊಬ್ಬರು ನೇಣಿಗೆ ಶರಣಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಲ್ಲಿ ನಡೆದಿದೆ.

ಬೀರೂರು ಠಾಣೆಯ ಸಬ್ ಇನ್ಸ್‌ಪೆಕ್ಟರ್ ತಿಪ್ಪೇಶ್ ಅವರ ಪತ್ನಿ ಪದ್ಮ (34) ಮಂಗಳವಾರ ರಾತ್ರಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಿಪ್ಪೇಶ್ ಮತ್ತು ಪದ್ಮ ಪ್ರೀತಿಸಿ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಪದ್ಮ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲೇ ಇದ್ದು, ಕುಟುಂಬಸ್ಥರ ಬರುವಿಕೆಗೆ ಪೊಲೀಸರು ಕಾಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡುವ ಸಾಧ್ಯತೆ ಇದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ದೊಡ್ಡಬಳ್ಳಾಪುರ: ಸಿಡಿಲಿಗೆ ಎರಡು ಹಸುಗಳ ಸಾವು, ರೈತ ಕಂಗಾಲು!

ದೊಡ್ಡಬಳ್ಳಾಪುರ: ನೆನ್ನೆ ಸಂಜೆ ಸುರಿದ ಗುಡುಗು-ಮಿಂಚಿನ ಮಳೆಯಲ್ಲಿ ಸಿಡಿಲು ಬಡಿದು ಎರಡು ಹಸುಗಳು ಮೃತಪಟ್ಟ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ನಾರಸಿಂಹನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸಮೀಪದ ಸೋಲಾರ್ ಫ್ಯಾಕ್ಟರಿ ಬಳಿ ಆಲದ ಮರದ ಕೆಳಗೆ ಹಸುಗಳನ್ನು ಕಟ್ಟಿ ಹಾಕಲಾಗಿತ್ತು. ಈ ವೇಳೆ ಏಕಾಏಕಿ ಬಡಿದ ಸಿಡಿಲಿನಿಂದ ಎರಡು ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.

ಮೃತ ಹಸುಗಳು ಕೀರ್ತಿ ಎಂಬ ರೈತನಿಗೆ ಸೇರಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಹಸುಗಳನ್ನು ಕಳೆದುಕೊಂಡ ರೈತ ದುಃಖದಲ್ಲಿ ಮುಳುಗಿದ್ದಾನೆ. ಘಟನೆ ತಿಳಿದು ಸ್ಥಳೀಯರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಅಕಾಲಿಕವಾಗಿ ಹಸುಗಳನ್ನು ಕಳೆದುಕೊಂಡ ರೈತನಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಡ್ಡಕ್ಕೆ KSRTC ಬಸ್ ಡಿಕ್ಕಿ: ತಪ್ಪಿದ ದುರಂತ!

0

ಸೇಲಂ: ತಮಿಳುನಾಡಿನ ಸೇಲಂ ಸಮೀಪ ಕೆಎಸ್‌ಆರ್‌ಟಿಸಿ ಬಸ್ಸೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಡ್ಡಕ್ಕೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ.

ಅಪಘಾತದ ತೀವ್ರತೆಗೆ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಘಟನೆಯಿಂದ ಆತಂಕಕ್ಕೊಳಗಾದ ಪ್ರಯಾಣಿಕರು ತಕ್ಷಣವೇ ಬಸ್ಸಿನಿಂದ ಕೆಳಗಿಳಿದು ಸುರಕ್ಷಿತವಾಗಿ ಪಾರಾಗಿದ್ದಾರೆ. “ಚಾಲಕ ನಿದ್ದೆಯ ಮಂಪರಿನಲ್ಲಿ ಬಸ್ ಚಾಲನೆ ಮಾಡುತ್ತಿದ್ದದ್ದೇ ಅಪಘಾತಕ್ಕೆ ಕಾರಣ” ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಅಪಘಾತದ ಬಳಿಕ ಆಕ್ರೋಶಗೊಂಡ ಕೆಲ ಪ್ರಯಾಣಿಕರು ಚಾಲಕನ ನಿರ್ಲಕ್ಷ್ಯತನವನ್ನು ಖಂಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಪ್ರಯಾಣಿಕರನ್ನು ಪರ್ಯಾಯ ಬಸ್ ಮೂಲಕ ಮದುರೈಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ.

ಬಿಜೆಪಿ ಮುಖಂಡನ ಪತ್ನಿ ಸೂಸೈಡ್! ದುರಂತಕ್ಕೆ ಪತಿಯ ಅನೈತಿಕ ಸಂಬಂಧ ಕಾರಣವಾ!?

ಶಿವಮೊಗ್ಗ: ಪತಿಯ ಅನೈತಿಕ ಸಂಬಂಧ ಹಾಗೂ ದೈಹಿಕ-ಮಾನಸಿಕ ಕಿರುಕುಳದಿಂದ ಮನನೊಂದ ಮಹಿಳೆಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹೊಸವೀರಾಪುರ ಗ್ರಾಮದ ಮಂಜುಳಾ (38) ಮೃತ ಮಹಿಳೆ. ಅವರು ಸೊರಬ ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಪ್ರಭು ಮೇಸ್ತ್ರಿ ಅವರ ಪತ್ನಿಯಾಗಿದ್ದಾರೆ.

ಮಂಜುಳಾ ಅವರ ಆತ್ಮಹತ್ಯೆಗೆ ಪತಿಯ ನಡತೆ ಕಾರಣ ಎನ್ನಲಾಗಿದ್ದು, ಪ್ರಭು ಮೇಸ್ತ್ರಿ ತನ್ನ ಹಾರ್ಡ್‌ವೇರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನೆಂಬ ಆರೋಪ ಕೇಳಿಬಂದಿದೆ. ಈ ಸಂಬಂಧವನ್ನು ಬಿಡುವಂತೆ ಕುಟುಂಬಸ್ಥರು ಹಲವು ಬಾರಿ ಸಲಹೆ ನೀಡಿದರೂ, ಅದನ್ನು ಲೆಕ್ಕಿಸದೆ ಮುಂದುವರಿಸಿದ್ದನೆಂದು ತಿಳಿದುಬಂದಿದೆ.

ಇದೇ ವಿಚಾರವಾಗಿ ಮಂಜುಳಾ ಅವರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎನ್ನಲಾಗಿದೆ. ಇದರಿಂದ ಬೇಸತ್ತ ಅವರು ಮನೆಯ ಹಿಂಭಾಗದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಭು ಮೇಸ್ತ್ರಿ ಈ ಮೊದಲು ಕೇರಳ ಮೂಲದ ಮಹಿಳೆಯನ್ನು ವಿವಾಹವಾಗಿ ಬಳಿಕ ದೂರವಾಗಿದ್ದರೆ, ನಂತರ ಮಂಜುಳಾ ಅವರನ್ನು ಎರಡನೇ ಮದುವೆಯಾಗಿದ್ದ ಎನ್ನಲಾಗಿದೆ.

ಮೃತಳ ತಾಯಿ ಶೋಭಾ ನೀಡಿದ ದೂರಿನ ಮೇರೆಗೆ ಸೊರಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಭು ಮೇಸ್ತ್ರಿಯನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

error: Content is protected !!