HomeKarnataka NewsSC/ST ಕಾಯ್ದೆ ದುರುಪಯೋಗಕ್ಕೆ ಅವಕಾಶವಿಲ್ಲ: ಕಂಪನಿ ಅಧಿಕಾರಿಗಳ ವಿರುದ್ಧದ FIR ರದ್ದುಪಡಿಸಿದ ಹೈಕೋರ್ಟ್

SC/ST ಕಾಯ್ದೆ ದುರುಪಯೋಗಕ್ಕೆ ಅವಕಾಶವಿಲ್ಲ: ಕಂಪನಿ ಅಧಿಕಾರಿಗಳ ವಿರುದ್ಧದ FIR ರದ್ದುಪಡಿಸಿದ ಹೈಕೋರ್ಟ್

For Dai;y Updates Join Our whatsapp Group

Spread the love

ಬೆಂಗಳೂರು: ಕಾರ್ಮಿಕ ಹಾಗೂ ಸಿವಿಲ್ ಸ್ವರೂಪದ ವಿವಾದಗಳಿಗೆ ಕ್ರಿಮಿನಲ್ ಪ್ರಕರಣದ ರೂಪ ನೀಡಿ, ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಲು ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಭದ್ರಾವತಿಯ ಮಾಲ್ನಾಡ್ ಅಲೋಯ್ಸ್ ಕಾಸ್ಟಿಂಗ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ಮಧುಕರ್ ಜೋಯಿಸ್ ಸೇರಿದಂತೆ ಐವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಅವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಹಾಗೂ ಸಂಬಂಧಿತ ಕ್ರಿಮಿನಲ್ ಪ್ರಕ್ರಿಯೆಯನ್ನು ರದ್ದುಪಡಿಸಿ ಆದೇಶಿಸಿದೆ.

ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಕಂಪನಿಯು ಶೋಕಾಸ್ ನೋಟಿಸ್ ಜಾರಿ ಮಾಡಿ ಶಿಸ್ತು ಕ್ರಮ ಕೈಗೊಂಡಿದ್ದಕ್ಕೆ ಪ್ರತೀಕಾರವಾಗಿ ಆಡಳಿತ ಮಂಡಳಿಯ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲು, ಜಾತಿ ನಿಂದನೆಯ ಘಟನೆ ಸಾರ್ವಜನಿಕರು ಇರುವ ಅಥವಾ ನೋಡಬಹುದಾದ ಸ್ಥಳದಲ್ಲಿ ನಡೆದಿರಬೇಕು ಎಂದು ಸುಪ್ರೀಂ ಕೋರ್ಟ್ ಹಲವು ತೀರ್ಪುಗಳಲ್ಲಿ ಸ್ಪಷ್ಟಪಡಿಸಿದೆ. ಆದರೆ, ಈ ಪ್ರಕರಣದಲ್ಲಿ ಆರೋಪಿತ ಘಟನೆ ಕಂಪನಿಯ ಕಚೇರಿಯ ನಾಲ್ಕು ಗೋಡೆಗಳ ಒಳಗೆ ನಡೆದಿದ್ದು, ಅಲ್ಲಿ ಸಾರ್ವಜನಿಕರು ಇರಲಿಲ್ಲ. ಆದ್ದರಿಂದ ಈ ಪ್ರಕರಣವು ಎಸ್‌ಸಿ/ಎಸ್‌ಟಿ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಸಿವಿಲ್ ಅಥವಾ ಸೇವಾ ಸಂಬಂಧಿತ ವಿವಾದಗಳಿಗೆ ಕ್ರಿಮಿನಲ್ ಸ್ವರೂಪ ನೀಡಿ ವಿಶೇಷ ಕಾಯ್ದೆಗಳನ್ನು ದುರುಪಯೋಗಪಡಿಸಿಕೊಳ್ಳುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ದೂರುದಾರರು ಮಾಡಿರುವ ಆರೋಪಗಳಲ್ಲಿ ಅಪರಾಧದ ಅಗತ್ಯ ಅಂಶಗಳು ಕಂಡುಬರದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣ ಹಾಗೂ ಮುಂದಿನ ವಿಚಾರಣಾ ಪ್ರಕ್ರಿಯೆಯನ್ನು ರದ್ದುಪಡಿಸಲಾಗಿದೆ.

ಪ್ರಕರಣದ ಹಿನ್ನೆಲೆ

ದೂರುದಾರ ರವಿ ಅವರು ಭದ್ರಾವತಿಯ ಮಾಲ್ನಾಡ್ ಅಲೋಯ್ಸ್ ಕಾಸ್ಟಿಂಗ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಸುಮಾರು 18 ವರ್ಷಗಳಿಂದ ಪ್ರೊಡಕ್ಷನ್ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ನಿರ್ಲಕ್ಷ್ಯದಿಂದ ಕಂಪನಿಗೆ ನಷ್ಟ ಉಂಟಾಗಿದೆ ಎಂದು ಆರೋಪಿಸಿ 2024ರ ಡಿಸೆಂಬರ್‌ನಲ್ಲಿ ಕಂಪನಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಬಳಿಕ ಆಂತರಿಕ ತನಿಖೆಗೆ ಆದೇಶಿಸಿ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು.

ಈ ಕ್ರಮವನ್ನು ಪ್ರಶ್ನಿಸಿ ರವಿ ಅವರು ಕೈಗಾರಿಕಾ ನ್ಯಾಯಾಧೀಕರಣದ ಮೊರೆ ಹೋಗಿ, ಶೋಕಾಸ್ ನೋಟಿಸ್ ರದ್ದುಪಡಿಸುವಂತೆ ಹಾಗೂ ಜಾತಿ ತಾರತಮ್ಯ ಮಾಡದಂತೆ ಕಂಪನಿಗೆ ನಿರ್ದೇಶನ ನೀಡುವಂತೆ ಮನವಿ ಸಲ್ಲಿಸಿದ್ದರು. ಆದರೆ, ನ್ಯಾಯಾಧೀಕರಣವು ಅವರ ಪರವಾಗಿ ಯಾವುದೇ ಏಕಪಕ್ಷೀಯ ಆದೇಶ ನೀಡಿರಲಿಲ್ಲ.

ಇದಾದ ಬಳಿಕ ರವಿ ಅವರು ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಕಂಪನಿಯ ವ್ಯವಸ್ಥಾಪಕ ಮಧುಕರ್ ಜೋಯಿಸ್, ಕಾರ್ಯನಿರ್ವಾಹಕ ನಿರ್ದೇಶಕ ಪ್ರತೀಕ್ ಎಂ. ಜೋಯಿಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್. ಜಗದೀಶ್ ಹಾಗೂ ಮಾನವ ಸಂಪನ್ಮೂಲ ವಿಭಾಗದ ಇನ್ನಿಬ್ಬರು ಅಧಿಕಾರಿಗಳ ವಿರುದ್ಧ ಜಾತಿ ನಿಂದನೆ ಮತ್ತು ಜೀವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿದ್ದರು.

ಈ ಎಫ್‌ಐಆರ್ ಅನ್ನು ಪ್ರಶ್ನಿಸಿ ಕಂಪನಿ ಅಧಿಕಾರಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಎಫ್‌ಐಆರ್ ಹಾಗೂ ಸಂಬಂಧಿತ ಕ್ರಿಮಿನಲ್ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!