Home Blog Page 73

ಕಾಲು ಕಳೆದುಕೊಂಡರೂ ಛಲ ಕಳೆದುಕೊಳ್ಳಲಿಲ್ಲ: ಸ್ಟ್ರೇಚರ್‌ನಲ್ಲೇ ಪರೀಕ್ಷೆ ಬರೆದು ಕುಸುಮಾಗೆ ಸಿಕ್ತು ಬಂಪರ್‌ ಗಿಫ್ಟ್

0

ಕೋಲಾರಾ: ಅಪಘಾತದಲ್ಲಿ ಕಾಲು ಕಳೆದುಕೊಂಡರೂ ಶಿಕ್ಷಣದ ಕನಸನ್ನು ಕೈಬಿಡದ ವಿದ್ಯಾರ್ಥಿನಿಯೊಬ್ಬಳ ಸಾಧನೆ ಇದೀಗ ಎಲ್ಲರ ಮನ ಗೆದ್ದಿದೆ. ಕೆಜಿಎಫ್ ತಾಲೂಕಿನ ಚಿನ್ನನಾಗನಹಳ್ಳಿಯ ಕುಸುಮಾ ಎಂಬ ವಿದ್ಯಾರ್ಥಿನಿ ಸ್ಟ್ರೇಚರ್‌ನಲ್ಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾಳೆ.

ಭೀಕರ ರಸ್ತೆ ಅಪಘಾತದಲ್ಲಿ ತನ್ನ ಒಂದು ಕಾಲು ಕಳೆದುಕೊಂಡಿದ್ದ ಕುಸುಮಾ, ಚಿಕಿತ್ಸೆ ನಡುವೆಯೇ ಪರೀಕ್ಷೆ ಬರೆಯಲು ನಿರ್ಧರಿಸಿದ್ದಳು. ವೈದ್ಯರ ಸಲಹೆ ನಡುವೆಯೂ ಧೈರ್ಯದಿಂದ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಎದುರಿಸಿದ್ದಳು.

ಇದೀಗ ಫಲಿತಾಂಶ ಪ್ರಕಟವಾಗಿದ್ದು, ಕುಸುಮಾ ಉತ್ತಮ ಅಂಕಗಳೊಂದಿಗೆ ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಆಗಿದ್ದಾಳೆ. ಆಕೆಯ ಹೋರಾಟ ಮತ್ತು ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ವಿಷಯ ತಿಳಿದ ಕೆಜಿಎಫ್ ಶಾಸಕಿಯರಾದ ರೂಪಕಲಾ ಶಶಿಧರ್ ಅವರು ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಅಭಿನಂದಿಸಿದ್ದಾರೆ. ಜೊತೆಗೆ ಮುಂದಿನ ಚಿಕಿತ್ಸೆ ಹಾಗೂ ರೋಬೋಟಿಕ್ ಕೃತಕ ಕಾಲು ಅಳವಡಿಕೆಗೆ ಸಂಪೂರ್ಣ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

‘ಲೈಫ್ ಸೇವರ್’ ಸಂಸ್ಥೆಯ ಸಹಯೋಗದಲ್ಲಿ ಕುಸುಮಾಗೆ ಅತ್ಯಾಧುನಿಕ ಕೃತಕ ಕಾಲು ಅಳವಡಿಸುವ ಕಾರ್ಯ ನಡೆಯಲಿದ್ದು, ಬಾಲಕಿಯ ಜೀವನಕ್ಕೆ ಹೊಸ ಭರವಸೆ ಮೂಡಿದೆ.

ಗದಗ| ಲಕ್ಕುಂಡಿಯ ಅಡಗಿದ ಇತಿಹಾಸ ಪತ್ತೆಗೆ ಸ್ಯಾಟಲೈಟ್ ಸರ್ವೆ!

ಗದಗ/ಬೆಂಗಳೂರು: ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಗದಗ ಜಿಲ್ಲೆಯ ಲಕ್ಕುಂಡಿಯ ಪಾರಂಪರಿಕ ವೈಭವವನ್ನು ಮರು ಅನಾವರಣಗೊಳಿಸಲು ಇದೀಗ ಉಪಗ್ರಹ ತಂತ್ರಜ್ಞಾನದ ನೆರವು ಪಡೆಯಲು ಸರ್ಕಾರ ಮುಂದಾಗಿದೆ.

ಮಣ್ಣಿನಡಿ ಅಡಗಿರುವ ಪುರಾತತ್ವ ಸಂಪತ್ತು, ಉತ್ಖನನ ಸ್ಥಳಗಳು ಹಾಗೂ “ನೂರೊಂದು ಗುಡಿ–ನೂರೊಂದು ಭಾವಿ”ಗಳ ಗುರುತು ಪತ್ತೆಗಾಗಿ ಸ್ಯಾಟಲೈಟ್ ಇಮೇಜಿಂಗ್ ತಂತ್ರಜ್ಞಾನ ಬಳಕೆಯ ಕುರಿತು ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಯಿತು.

ಸಚಿವ ಎಚ್.ಕೆ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೆಂಗಳೂರಿನ ಎನ್‌ಐಎಎಸ್‌ (NIAS) ಸಂಸ್ಥೆಯ ತಜ್ಞರು ಭಾಗವಹಿಸಿ, ಲಕ್ಕುಂಡಿ ಪ್ರದೇಶದ ಪುರಾತತ್ವ ಅಧ್ಯಯನವನ್ನು ವೈಜ್ಞಾನಿಕವಾಗಿ ಕೈಗೊಳ್ಳುವ ಕುರಿತು ಸಮಗ್ರ ಚರ್ಚೆ ನಡೆಸಿದರು.

ಸಭೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಮಾಜಿ ಅಧ್ಯಕ್ಷ ಡಾ. ಕೆ. ಕಿರಣಕುಮಾರ ಉಪಸ್ಥಿತರಿದ್ದು, ಉಪಗ್ರಹ ಚಿತ್ರಣ ತಂತ್ರಜ್ಞಾನದ ಮೂಲಕ ನೆಲದಡಿ ಅಡಗಿರುವ ಪುರಾತನ ದೇವಾಲಯಗಳು, ಪಾರಂಪರಿಕ ಕಟ್ಟಡಗಳು ಹಾಗೂ ಜಲಸಂಪನ್ಮೂಲಗಳನ್ನು ಪತ್ತೆಹಚ್ಚುವ ತಾಂತ್ರಿಕ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಿದರು.

ಲಕ್ಕುಂಡಿಯ ಐತಿಹಾಸಿಕ ವೈಭವವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಜೊತೆಗೆ ಪಾರಂಪರಿಕ ತಾಣಗಳ ಸಂರಕ್ಷಣೆಗೆ ಆಧುನಿಕ ತಂತ್ರಜ್ಞಾನ ಬಳಕೆಯ ಅಗತ್ಯತೆಯನ್ನು ಸಭೆಯಲ್ಲಿ ಒತ್ತಿಹೇಳಲಾಯಿತು.

“ಲಕ್ಕುಂಡಿ ಕೇವಲ ಐತಿಹಾಸಿಕ ಗ್ರಾಮವಲ್ಲ; ಅದು ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕ. ಅದರ ಅಡಗಿರುವ ಇತಿಹಾಸವನ್ನು ಜಗತ್ತಿನ ಮುಂದಿಡುವ ಕೆಲಸ ನಡೆಯಬೇಕು” ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಹಾಗೂ ಲಕ್ಕುಂಡಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಉಪಸ್ಥಿತರಿದ್ದರು.

ವಾಟ್ಸಾಪ್ ಮೆಸೇಜ್‌ಗೆ ಹೊತ್ತಿಕೊಂಡ ಕೋಪ; ನಡುರಸ್ತೆಯಲ್ಲೇ ಬಾಡಿ ಬಿಲ್ಡರ್ಸ್ ಬಡಿದಾಟ!

ಬೆಂಗಳೂರು: ಜಿಮ್‌ನ ವಾಟ್ಸಾಪ್ ಗ್ರೂಪ್‌ನಲ್ಲಿ ನಡೆದ ವಾಗ್ವಾದ ಯುವಕನ ಮೇಲೆ ಹಲ್ಲೆಗೆ ತಿರುಗಿದ ಘಟನೆ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಟೀಚರ್ಸ್ ಕಾಲೊನಿಯಲ್ಲಿ ನಡೆದಿದೆ.

ಟ್ರೈನರ್ ಬಗ್ಗೆ ಅವಹೇಳನವಾಗಿ ಮಾತನಾಡಿದ್ದೀಯೆಂದು ಆರೋಪಿಸಿ ಅನ್ಶ್ ಠಾಕೂರ್ ಎಂಬಾತನ ಮೇಲೆ ಮತಿನ್ ಹಾಗೂ ಆತನ ಸಹಚರರು ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪದವಿ ವ್ಯಾಸಂಗ ಮಾಡುತ್ತಾ ಪಾರ್ಟ್‌ಟೈಂ ಜಿಮ್ ಟ್ರೈನರ್ ಆಗಿರುವ ಅನ್ಶ್ ಠಾಕೂರ್ ಈ ಹಿಂದೆ ಇಲಿಯಾಜ್ ಎಂಬಾತನಿಂದ ಖಾಸಗಿ ಜಿಮ್‌ನಲ್ಲಿ ತರಬೇತಿ ಪಡೆದಿದ್ದ. ಕಳೆದ ಆರು ತಿಂಗಳಿಂದ ಇಬ್ಬರ ನಡುವೆ ಸಂಪರ್ಕ ಇರಲಿಲ್ಲ ಎನ್ನಲಾಗಿದೆ. ಆದರೆ ಮೇ 18ರ ರಾತ್ರಿ ಜಿಮ್‌ನ ವಾಟ್ಸಾಪ್ ಗ್ರೂಪ್‌ನಲ್ಲಿ ನಡೆದ ಚರ್ಚೆ ವೇಳೆ ಬಾಡಿ ಬಿಲ್ಡಿಂಗ್ ವಿಚಾರವಾಗಿ ಇಲಿಯಾಜ್ ಮತ್ತು ಅನ್ಶ್ ನಡುವೆ ಮಾತಿನ ಚಕಮಕಿ ನಡೆದಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ “ಟ್ರೈನರ್ ಬಗ್ಗೆ ಮಾತನಾಡ್ತೀಯಾ” ಎಂದು ರೊಚ್ಚಿಗೆದ್ದ ಮತಿನ್ ಹಾಗೂ ಗ್ಯಾಂಗ್ ಮಾತನಾಡುವ ನೆಪದಲ್ಲಿ ಅನ್ಶ್ ಮನೆ ಬಳಿ ತೆರಳಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ಅನ್ಶ್ ಗಾಯಗೊಂಡಿದ್ದು, ರಕ್ತಸ್ರಾವವಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಸಂಜಯನಗರ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ 6 ಮಂದಿ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ವಿಜಯಪುರದಲ್ಲಿ ದಾರುಣ ದುರಂತ: ಮನೆ ಮೇಲ್ಛಾವಣಿ ಕುಸಿದು ಮಹಿಳೆ ಸಾವು!

ವಿಜಯಪುರ: ಮನೆಯ ಮೇಲ್ಛಾವಣಿ ಕುಸಿದು ಮಹಿಳೆಯೊಬ್ಬರು ಜೀವಂತ ಸಮಾಧಿಯಾದ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಗೌರೀಶ್ವರ ದೇವಸ್ಥಾನ ಸಮೀಪ ಈ ದುರಂತ ಸಂಭವಿಸಿದೆ.

ಮಹಾದೇವಿ ವಾರದ್ (55) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ನೆನೆದಿದ್ದ ಹಳೆಯ ಮನೆಯ ಮೇಲ್ಛಾವಣಿ ನಸುಕಿನ ಜಾವ ಏಕಾಏಕಿ ಕುಸಿದಿದೆ. ಈ ವೇಳೆ ಮನೆಯಲ್ಲಿ ಮಲಗಿದ್ದ ಮಹಾದೇವಿ ಅವಶೇಷಗಳಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮನೆಯ ಹೊರಭಾಗದಲ್ಲಿ ಪತಿ ಶಿವಾನಂದ ಮಲಗಿದ್ದ ಕಾರಣ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ನಿಡಗುಂದಿ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳಾ ಹಾಸ್ಟೆಲ್ ಟೆರೇಸ್‌ನಿಂದ ಬಿದ್ದು ಎಂಬಿಎ ವಿದ್ಯಾರ್ಥಿನಿ ಸಾವು!

ಲಕ್ನೋ: ಉತ್ತರ ಪ್ರದೇಶದ ಮೀರತ್‌ನ ಐಐಎಂಟಿ ವಿಶ್ವವಿದ್ಯಾಲಯದ ಮಹಿಳಾ ಹಾಸ್ಟೆಲ್‌ನಲ್ಲಿ ಅಂತಿಮ ವರ್ಷದ ಎಂಬಿಎ ವಿದ್ಯಾರ್ಥಿನಿಯೊಬ್ಬಳು ಟೆರೇಸ್ ಮೇಲಿಂದ ಬಿದ್ದು ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಅನು ಗುಪ್ತಾ ಮೃತ ವಿದ್ಯಾರ್ಥಿನಿಯಾಗಿದ್ದು, ಆಕೆ ವಿಶ್ವವಿದ್ಯಾಲಯದ ಸರೋಜಿನಿ ನಾಯ್ಡು ಬಾಲಕಿಯರ ಹಾಸ್ಟೆಲ್‌ನಲ್ಲಿ ವಾಸವಾಗಿದ್ದಳು. ಬುಧವಾರ ರಾತ್ರಿ ಸುಮಾರು 9.30ರ ವೇಳೆಗೆ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಹಾಸ್ಟೆಲ್ ಕೆಲಸದಾಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿದ್ಯಾರ್ಥಿನಿಯನ್ನು ಗಮನಿಸಿ ತಕ್ಷಣವೇ ಇತರ ವಿದ್ಯಾರ್ಥಿನಿಯರು ಹಾಗೂ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ.

ಟೆರೇಸ್ ಮೇಲಿಂದ ಬಿದ್ದ ಪರಿಣಾಮ ಅನು ಗುಪ್ತಾ ತಲೆಗೆ ತೀವ್ರ ಗಾಯಗಳಾಗಿದ್ದು, ಮುಖ ಸಂಪೂರ್ಣ ರಕ್ತಮಯ ಸ್ಥಿತಿಯಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಇದು ಆಕಸ್ಮಿಕವಾಗಿ ನಡೆದ ಘಟನೆಯೇ ಅಥವಾ ಆತ್ಮಹತ್ಯೆಯೇ ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ.

ಪ್ರಕರಣ ಸಂಬಂಧ ಹಾಸ್ಟೆಲ್ ವಿದ್ಯಾರ್ಥಿನಿಯರು ಹಾಗೂ ವಿಶ್ವವಿದ್ಯಾಲಯ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಹಾಸ್ಟೆಲ್ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ.

ಪ್ರಕರಣದ ತನಿಖೆಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಮೀರತ್ ಗ್ರಾಮೀಣ ವಿಭಾಗದ ಎಸ್ಪಿ ಅಭಿಜಿತ್ ಕುಮಾರ್ ತಿಳಿಸಿದ್ದಾರೆ.

ಸಂಜೆ ಆಗುತ್ತಿದ್ದಂತೆ ರಸ್ತೆಗಿಳಿಯುವ ಕಾಡಾನೆ: ಗ್ರಾಮಸ್ಥರಲ್ಲಿ ಆತಂಕ!

ಚಾಮರಾಜನಗರ: ಜಿಲ್ಲೆಯ ತಮಿಳುನಾಡು ಗಡಿ ಭಾಗವಾದ ತಾಳವಾಡಿ ಸಮೀಪದ ಮರೂರು ಬಳಿ ಒಂಟಿ ಸಲಗದ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಆತಂಕದಲ್ಲೇ ದಿನ ಕಳೆಯುವಂತಾಗಿದೆ.

ಸಂಜೆ ವೇಳೆಯಾಗುತ್ತಿದ್ದಂತೆ ಕಾಡಾನೆ ರಸ್ತೆಗಿಳಿದು ವಾಹನ ಸವಾರರನ್ನು ಅಟ್ಟಾಡಿಸುತ್ತಿರುವುದರಿಂದ ಜನರು ಭಯಭೀತರಾಗಿದ್ದಾರೆ. ವಿಶೇಷವಾಗಿ ರಾತ್ರಿ ವೇಳೆ ಈ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದುವರೆಗೆ ಬೆಳಗಿನ ಜಾವ ಜಮೀನುಗಳತ್ತ ಬರುತ್ತಿದ್ದ ಕಾಡಾನೆಗಳು ಇದೀಗ ಗ್ರಾಮಗಳ ಸುತ್ತಮುತ್ತಲೇ ಸಂಚಾರ ನಡೆಸುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಅರಣ್ಯ ಇಲಾಖೆ ಕೂಡಲೇ ಕ್ರಮ ಕೈಗೊಂಡು ಕಾಡಾನೆಯನ್ನು ಅರಣ್ಯ ಪ್ರದೇಶಕ್ಕೆ ಓಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಲೋಕಾಯುಕ್ತ ದೂರು ಕೊಟ್ಟಿದ್ದಕ್ಕೆ ರಕ್ತಪಾತ! ದೂರುದಾರನ ಮೇಲೆ 30 ಮಂದಿಯ ದಾಳಿ

ರಾಯಚೂರು: ವಕ್ಫ್ ಬೋರ್ಡ್ ಅನುದಾನ ದುರ್ಬಳಕೆ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ್ದ ವ್ಯಕ್ತಿ ಹಾಗೂ ಆತನ ಬೆಂಬಲಿಗರ ಮೇಲೆ ಸುಮಾರು 30 ಮಂದಿಯ ಗುಂಪು ಸಿನಿಮೀಯ ಶೈಲಿಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ರಾಯಚೂರು ನಗರದಲ್ಲಿ ನಡೆದಿದೆ.

ತಾಲೂಕಿನ ತಲಮಾರಿ ಗ್ರಾಮದ ಮಸೀದಿ, ಖಬರಸ್ತಾನ ಹಾಗೂ ಈದ್ಗಾ ಮೈದಾನದ ಅಭಿವೃದ್ಧಿಗಾಗಿ 2017-19ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಹಬ್ ಹಾಗೂ ವಕ್ಫ್ ಮಂಡಳಿಯಿಂದ ಒಟ್ಟು 26 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿತ್ತು. ಈ ಕಾಮಗಾರಿಯಲ್ಲಿ ಭಾರೀ ಪ್ರಮಾಣದ ಅನುದಾನ ದುರ್ಬಳಕೆ ನಡೆದಿದೆ ಎಂದು ಆರೋಪಿಸಿ ಗ್ರಾಮದ ಸನಾವುಲ್ಲಾ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಈ ಸಂಬಂಧ ಇತ್ತೀಚೆಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ತನಿಖೆ ನಡೆದ ಬೆನ್ನಲ್ಲೇ ದೂರುದಾರನ ಮೇಲೆ ದ್ವೇಷ ಹೊಂದಿದ್ದ ಎದುರಾಳಿಗಳು, ಪ್ರಕರಣವನ್ನು ರಾಜಿ ಮಾಡಿಕೊಳ್ಳುವ ನೆಪದಲ್ಲಿ ಸನಾವುಲ್ಲಾನನ್ನು ರಾಯಚೂರಿನ ತಹಶೀಲ್ದಾರ್ ಕಚೇರಿ ಸಮೀಪಕ್ಕೆ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ.

ಮಾತುಕತೆ ನಡೆಯುತ್ತಿದ್ದ ವೇಳೆ ಏಕಾಏಕಿ ಸುಮಾರು 30 ಮಂದಿಯ ಗುಂಪು ಚಾಕು, ಭರ್ಜಿ ಹಾಗೂ ಕಲ್ಲುಗಳಿಂದ ಸನಾವುಲ್ಲಾ ಮತ್ತು ಆತನ ಸ್ನೇಹಿತರ ಮೇಲೆ ದಾಳಿ ನಡೆಸಿದೆ. ನಡುರಸ್ತೆಯಲ್ಲೇ ನಡೆದ ಈ ಭೀಕರ ಹಲ್ಲೆಯಲ್ಲಿ ಸನಾವುಲ್ಲಾ ಗಂಭೀರವಾಗಿ ಗಾಯಗೊಂಡಿದ್ದು, ಅವರ ದೇಹದ ವಿವಿಧ ಭಾಗಗಳಿಗೆ 24 ಹೊಲಿಗೆ ಹಾಕಲಾಗಿದೆ.

ಗಾಯಾಳು ಸನಾವುಲ್ಲಾಗೆ ರಾಯಚೂರಿನ ಓಪೆಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣ ಸಂಬಂಧ ಅಶುಪಟೇಲ್, ನಿಜಾಮ್ ಪಟೇಲ್, ಇರ್ಫಾನ್ ಸೇರಿದಂತೆ 15ಕ್ಕೂ ಹೆಚ್ಚು ಮಂದಿಯ ವಿರುದ್ಧ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮತ್ತೊಂದೆಡೆ, ಆರೋಪಿಗಳ ಕಡೆಯವರೂ ಸಹ ಸನಾವುಲ್ಲಾ ಮತ್ತು ಆತನ ಬೆಂಬಲಿಗರ ವಿರುದ್ಧ ಕೌಂಟರ್ ದೂರು ದಾಖಲಿಸಿದ್ದು, ಪೊಲೀಸರು ಎರಡೂ ಪ್ರಕರಣಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.

ಕಬ್ಬಿಣದ ಹಾರೆಯಿಂದ ಹೊಡೆದು ಮಾಜಿ ಸೈನಿಕನ ಪುತ್ರನ ಭೀಕರ ಕೊಲೆ: ಪ್ರೀತಿಯ ಮಡದಿ ಅರೆಸ್ಟ್!

ಗದಗ: ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಪತಿಯನ್ನೇ ಪತ್ನಿ ಕಬ್ಬಿಣದ ಹಾರೆಯಿಂದ ಹೊಡೆದು ಕೊಲೆಗೈದಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರ ನಾಗನೂರ ಗ್ರಾಮದಲ್ಲಿ ಮಂಗಳವಾರ ಮಧ್ಯರಾತ್ರಿ ಜರುಗಿದೆ.

ಡಿಪ್ಲೊಮಾ ಪದವೀಧರನಾಗಿದ್ದ ವಿಶ್ವನಾಥ ಶ್ರೀಶೈಲಪ್ಪ ಹಾದಿಮನಿ (28) ಕೊಲೆಯಾದ ದುರ್ದೈವಿ. ಪತ್ನಿ ಕವಿತಾ ಅಲಿಯಾಸ್ ಶ್ವೇತಾ ಹಾದಿಮನಿ (26) ಗಂಡನನ್ನೇ ಕೊಲೆಗೈದ ಹೆಂಡ್ತಿ. ಸದ್ಯ ಆರೋಪಿತೆಯನ್ನು ನರಗುಂದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪ್ರೀತಿಯ ಮದುವೆ, ಕಲಹದ ಬದುಕು ಆರಂಭಿಸಿದ್ದ ದಂಪತಿ!

ಎಸ್, ಕೊಲೆಯಾದ ವಿಶ್ವನಾಥ್ ಮಾಜಿ ಸೈನಿಕರ ಪುತ್ರನಾಗಿದ್ದ. 2022ರ ಫೆಬ್ರವರಿಯಲ್ಲಿ ಬಾಗಲಕೋಟೆಯ ಶ್ರೀಕುಮಾರೇಶ್ವರ ನಗರ ನಿವಾಸಿಯಾದ ಕವಿತಾಳನ್ನು ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಮದುವೆ ಆಗಿದ್ದ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಬಳಿಕ ದಾಂಪತ್ಯದಲ್ಲಿ ಬಿರುಕು ಮೂಡುತ್ತಾ ಹೋಯ್ತು. ಸಣ್ಣ ಪುಟ್ಟ ವಿಚಾರಕ್ಕೂ ಇಬ್ಬರು ಕಿತ್ತಾಡುತ್ತಿದ್ದರು. ಅಲ್ಲದೇ ಸಾಕಷ್ಟು ಬಾರಿ ಪತ್ನಿ ಕವಿತಾ ತವರು ಮನೆ ಸೇರುತ್ತಿದ್ದಳು ಎನ್ನಲಾಗಿದೆ. ಇತ್ತೀಚೆಗೆ ವಿಶ್ವನಾಥ್ ಸಹೋದರಿಯ ಮದುವೆ ಹಿನ್ನೆಲೆ ಗಂಡನ ಮನೆಗೆ ಕವಿತಾ ವಾಪಸ್ ಆಗಿದ್ದಳು.

ಅದರಂತೆ ಮಂಗಳವಾರ ರಾತ್ರಿ ಊಟದ ಬಳಿಕ ಶುರುವಾದ ಜಗಳ ವಿಕೋಪಕ್ಕೆ ತಿರುಗಿ ಬೆಡ್‌ರೂಮ್‌ನಲ್ಲಿ ಮಲಗಿದ್ದ ವಿಶ್ವನಾಥನ ತಲೆ ಮೇಲೆ ಪತ್ನಿ ಕವಿತಾ ಕಬ್ಬಿಣದ ಹಾರೆಯಿಂದ ಬಲವಾಗಿ ಹೊಡೆದಿದ್ದಾಳೆ. ಇದರಿಂದ ಗಂಭೀರವಾಗಿ ಗಾಯಗೊಂಡ ವಿಶ್ವನಾಥ್ ರಕ್ತದ ಮಡುವಿನಲ್ಲಿ ಪ್ರಾಣ ಬಿಟ್ಟಿದ್ದಾನೆ. ಬೆಳಗ್ಗೆ ಬಂದು ಮಗನ ಸ್ಥಿತಿ ಕಂಡ ತಂದೆ ಶ್ರೀಶೈಲಪ್ಪ ಹಾಗೂ ತಾಯಿ ಗೌರವ್ವ ಆತಂಕಗೊಂಡು ರಕ್ತದ ದೃಶ್ಯ ಕಂಡು ಕಣ್ಣೀರು ಹಾಕಿದ್ದಾರೆ.

ಘಟನೆ ಬಳಿಕ ಪತ್ನಿ ಕವಿತಾ ತಪ್ಪು ಒಪ್ಪಿಕೊಂಡು ಪೊಲೀಸರಿಗೆ ಸರೆಂಡರ್ ಆಗಿದ್ದಾರೆ ಎನ್ನಲಾಗಿದೆ.

ಈ ಭೀಕರ ಘಟನೆಯಿಂದಾಗಿ ತಂದೆ ತಾಯಿ ಆಶ್ರಯದಲ್ಲಿ ಬೆಳೆಯಬೇಕಿದ್ದ ಮೂರು ವರ್ಷದ ಕಂದಮ್ಮ ಅನಾಥವಾಗಿದ್ದು, ಎಂಥವರನ್ನೂ ಮರುಕ ಹುಟ್ಟಿಸುವಂತೆ ಮಾಡಿದೆ. ಘಟನೆ ಸಂಬಂಧ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಸತ್ಯಪ್ಪ ಮಾಳಗೊಂಡ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

ಅಕ್ರಮ ಗಾಂಜಾ ದಂಧೆ ಬಯಲು: 860 ಗ್ರಾಂ ಮಾದಕ ವಸ್ತು ಜಪ್ತಿ!

ದೊಡ್ಡಬಳ್ಳಾಪುರ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ತಾಲೂಕಿನ ಕಂಟನಕುಂಟೆ ಗ್ರಾಮದಲ್ಲಿ ನಡೆದಿದೆ.

ದಾಳಿ ನಡೆಸಿದ ಪೊಲೀಸರು 860 ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತನನ್ನು ಕಂಟನಕುಂಟೆ ಗ್ರಾಮದ ನಿವಾಸಿ ಚೇತನ್ ಎಂದು ಗುರುತಿಸಲಾಗಿದೆ. ಅಕ್ರಮವಾಗಿ ಗಾಂಜಾ ಮಾರಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಇನ್ಸಪೆಕ್ಟರ್ ಎಂ.ಬಿ. ನವೀನ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ದಾಳಿಯಲ್ಲಿ ಪಿಎಸ್‌ಐ ಸುಮಂತ್ ಹಾಗೂ ಸಿಬ್ಬಂದಿಗಳಾದ ಪ್ರೀತಿ, ಚಂದ್ರು, ಸುನೀಲ್, ನಟರಾಜ್ ಮತ್ತು ಪ್ರವೀಣ್ ಭಾಗವಹಿಸಿದ್ದರು.

ಪೊಲೀಸರ ಈ ಕಾರ್ಯಾಚರಣೆಗೆ ಸ್ಥಳೀಯ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಉರಿ ಬಿಸಿಲಿನ ಆರ್ಭಟ: ಬಂಡಾ ನಗರದಲ್ಲಿ ವಿಶ್ವ ದಾಖಲೆಯ ತಾಪಮಾನ!

ಲಕ್ನೋ: ಉತ್ತರ ಪ್ರದೇಶದ ಬುಂದೇಲ್‌ಖಂಡ ಪ್ರದೇಶದ ಬಂಡಾ ನಗರವು ಭಾರೀ ಉಷ್ಣ ಅಲೆಯಿಂದ ತತ್ತರಿಸಿದ್ದು, ವಿಶ್ವದಲ್ಲೇ ಅತ್ಯಂತ ಹೆಚ್ಚಿನ ತಾಪಮಾನ ದಾಖಲಾದ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

ಇತ್ತೀಚೆಗೆ ಇಲ್ಲಿ ಬರೋಬ್ಬರಿ 48 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ಗಮನ ಸೆಳೆದಿದೆ.

ಈ ಮೂಲಕ ಈವರೆಗಿನ ಹಳೆಯ ದಾಖಲೆಗಳು ಮುರಿದಿದ್ದು, 75 ವರ್ಷಗಳ ಹಿಂದಿನ 1951ರಲ್ಲಿ ದಾಖಲಾಗಿದ್ದ 47.4 ಡಿಗ್ರಿ ಸೆಲ್ಸಿಯಸ್ ದಾಖಲೆಯನ್ನೂ ಮೀರಿಸಿದೆ. ಅದಕ್ಕೂ ಮುನ್ನ ಏಪ್ರಿಲ್ 27ರಂದು 47.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.

ಬಂಡಾ ನಗರದಲ್ಲಿ ಗರಿಷ್ಠ ಮಟ್ಟದ ಉಷ್ಣಾಂಶ ದಾಖಲಾಗುತ್ತಿರುವುದು ಇದೇ ಮೊದಲಲ್ಲವಾದರೂ, ಈ ಬಾರಿಯ ತೀವ್ರತೆ ಅತಿಹೆಚ್ಚಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ತೀವ್ರ ಬಿಸಿಲಿನ ಪರಿಣಾಮ ಮಧ್ಯಾಹ್ನದ ವೇಳೆಗೆ ಅಂಗಡಿ-ಮುಂಗಟ್ಟುಗಳು ಹಾಗೂ ವ್ಯಾಪಾರ ಸಂಸ್ಥೆಗಳು ಮುಚ್ಚಲಾಗುತ್ತಿದ್ದು, ನಗರದಲ್ಲಿ ಅಘೋಷಿತ ಕರ್ಫ್ಯೂ ಮಾದರಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರು ಅಗತ್ಯವಿಲ್ಲದ ಹೊರಗೆ ಹೋಗುವುದನ್ನು ತಪ್ಪಿಸುತ್ತಿದ್ದಾರೆ.

error: Content is protected !!