Home Blog Page 8

‘ಪ್ರೇಮದ ಊರಲಿ’ಗೂ ರುಕ್ಮಿಣಿ ವಸಂತ್ʼಗೂ ಇದೆ ಸ್ಪೆಷಲ್ ಕನೆಕ್ಷನ್: ನಿರ್ದೇಶಕ ಮನೋಜ್ ಬಿಚ್ಚಿಟ್ಟ ಇಂಟರೆಸ್ಟಿಂಗ್ ಸೀಕ್ರೆಟ್!

0

‘ಪ್ರೇಮದ ಊರಲಿ’ ಸಿನಿಮಾದ ಗೆಲುವಿನ ಖುಷಿಯಲ್ಲಿರುವ ನಿರ್ದೇಶಕ ಮನೋಜ್ ಕುಮಾರ್ ಸಾಲು ಸಾಲು ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಸಿನಿಮಾ, ಅದರ ಪಾತ್ರಗಳು ಹಾಗೂ ತೆರೆ ಹಿಂದಿನ ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಳ್ಳುತ್ತಿರುವ ಅವರು, ಇದೀಗ ನಟಿ ರುಕ್ಮಿಣಿ ವಸಂತ್ ಹಾಗೂ ತಮ್ಮ ಸಿನಿಮಾಗಿರುವ ವಿಶೇಷ ಕನೆಕ್ಷನ್‌ವೊಂದನ್ನು ಬಹಿರಂಗಪಡಿಸಿದ್ದಾರೆ.

ರುಕ್ಮಿಣಿ ವಸಂತ್‌ರನ್ನು ಸಿನಿಮಾಗೆ ಕರೆತರಬೇಕೆಂಬ ಆಸೆ!

ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲೂ ಗಮನ ಸೆಳೆಯುತ್ತಿರುವ ನಟಿ ರುಕ್ಮಿಣಿ ವಸಂತ್ ಅವರ ಅಭಿನಯಕ್ಕೆ ತಾವು ಕೂಡ ದೊಡ್ಡ ಅಭಿಮಾನಿ ಎಂದು ಮನೋಜ್ ಕುಮಾರ್ ಹೇಳಿದ್ದಾರೆ.

‘ಪ್ರೇಮದ ಊರಲಿ’ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ರುಕ್ಮಿಣಿ ವಸಂತ್ ಅವರನ್ನು ಕರೆತರಬೇಕು ಎಂಬ ಆಸೆಯೂ ನಿರ್ದೇಶಕರಿಗಿತ್ತಂತೆ. ಈ ಸಂಬಂಧ ನಟಿಯನ್ನು ಸಂಪರ್ಕಿಸಲು ಚಿತ್ರತಂಡ ಪ್ರಯತ್ನಿಸಿತ್ತು ಎಂದು ಮನೋಜ್ ತಿಳಿಸಿದ್ದಾರೆ.

ಆದರೆ ರುಕ್ಮಿಣಿ ಅವರ ಕಾಲ್‌ಶೀಟ್ ಹಾಗೂ ಡೇಟ್ಸ್ ಹೊಂದಾಣಿಕೆಯಾಗದಿರುವುದು, ಜೊತೆಗೆ ಚಿತ್ರ ಸಣ್ಣ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದ್ದ ಕಾರಣ ಈ ಪ್ಲ್ಯಾನ್ ಕಾರ್ಯರೂಪಕ್ಕೆ ಬರಲಿಲ್ಲ ಎಂದು ಅವರು ವಿವರಿಸಿದ್ದಾರೆ.

ನಟಿ ಬರಲಿಲ್ಲ.. ಆದರೆ ಹೆಸರು ಸಿನಿಮಾದಲ್ಲಿ ಉಳಿಯಿತು!

ರುಕ್ಮಿಣಿ ವಸಂತ್ ಅವರನ್ನು ಸಿನಿಮಾಗೆ ಕರೆತರಲು ಸಾಧ್ಯವಾಗದಿದ್ದರೂ ನಿರ್ದೇಶಕರು ಮಾತ್ರ ಅವರ ಹೆಸರನ್ನು ಬಿಟ್ಟಿಲ್ಲ! ‘ರುಕ್ಮಿಣಿ ವಸಂತ್’ ಎಂಬ ಹೆಸರು ತಮಗೆ ತುಂಬಾ ಇಷ್ಟವಾಗಿದ್ದರಿಂದ, ಸಿನಿಮಾದ ಇಬ್ಬರು ನಾಯಕಿಯರ ಪಾತ್ರಗಳಿಗೆ ಆ ಹೆಸರನ್ನೇ ವಿಭಜಿಸಿ ‘ರುಕ್ಮಿಣಿ’ ಮತ್ತು ‘ವಸಂತ’ ಎಂದು ಹೆಸರಿಟ್ಟಿದ್ದಾರೆ. ಹೀಗೆ ರುಕ್ಮಿಣಿ ವಸಂತ್ ಸಿನಿಮಾದಲ್ಲಿ ನಟಿಸದಿದ್ದರೂ, ಅವರ ಹೆಸರು ಮಾತ್ರ ಚಿತ್ರದ ಎರಡು ಪ್ರಮುಖ ಪಾತ್ರಗಳ ಮೂಲಕ ಉಳಿದುಕೊಂಡಿದೆ.

‘ವಸಂತ’ ಪಾತ್ರದ ಹಿಂದಿದೆ ವಿಶೇಷ ಅರ್ಥ

ಇಷ್ಟೇ ಅಲ್ಲ, ‘ವಸಂತ’ ಎನ್ನುವ ಪಾತ್ರಕ್ಕೂ ವಿಶೇಷ ಅರ್ಥವಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಈ ಪಾತ್ರವನ್ನು ರೂಪಕವಾಗಿ ನಿಸರ್ಗ ಅಥವಾ ಪ್ರಕೃತಿಯನ್ನು ಪ್ರತಿಬಿಂಬಿಸುವಂತೆ ಕಟ್ಟಿಕೊಡಲಾಗಿದೆ ಎಂದು ಮನೋಜ್ ಕುಮಾರ್ ವಿವರಿಸಿದ್ದಾರೆ. ಹೀಗಾಗಿ ಸಿನಿಮಾದ ಪಾತ್ರಗಳಿಗೆ ಇಟ್ಟಿರುವ ಹೆಸರುಗಳು ಕೇವಲ ಹೆಸರುಗಳಾಗಿರದೆ, ಕಥೆಯೊಳಗೂ ಅವುಗಳಿಗೆ ಪ್ರತ್ಯೇಕ ಮಹತ್ವವಿದೆ ಎನ್ನಲಾಗಿದೆ.

ಮೊದಲು ಸಿನಿಮಾದ ಟೈಟಲ್ ಕೂಡ ‘ರುಕ್ಮಿಣಿ ವಸಂತ’!

ಇಡೀ ಕಥೆಯಲ್ಲಿರುವ ಮತ್ತೊಂದು ಇಂಟರೆಸ್ಟಿಂಗ್ ಟ್ವಿಸ್ಟ್ ಎಂದರೆ, ‘ಪ್ರೇಮದ ಊರಲಿ’ ಚಿತ್ರಕ್ಕೆ ಆರಂಭದಲ್ಲಿ ‘ರುಕ್ಮಿಣಿ ವಸಂತ’ ಎಂದೇ ಟೈಟಲ್ ಇಡಲಾಗಿತ್ತಂತೆ. ನಂತರ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸಿ ಅಂತಿಮವಾಗಿ ‘ಪ್ರೇಮದ ಊರಲಿ’ ಎಂದು ಹೆಸರಿಡಲಾಯಿತು ಎಂದು ನಿರ್ದೇಶಕರು ತಿಳಿಸಿದ್ದಾರೆ.

ಹೀಗಾಗಿ ನಟಿ ರುಕ್ಮಿಣಿ ವಸಂತ್ ಚಿತ್ರದಲ್ಲಿ ಕಾಣಿಸಿಕೊಳ್ಳದಿದ್ದರೂ, ಸಿನಿಮಾದ ಆರಂಭಿಕ ಟೈಟಲ್‌ನಿಂದ ಹಿಡಿದು ಎರಡು ಪ್ರಮುಖ ಪಾತ್ರಗಳ ಹೆಸರಿನವರೆಗೂ ಅವರ ಹೆಸರಿನ ಕನೆಕ್ಷನ್ ಇರುವುದು ಇದೀಗ ಅಭಿಮಾನಿಗಳ ಗಮನ ಸೆಳೆದಿದೆ. ಇನ್ನು ಚಿತ್ರವು ಬಿಡುಗಡೆಯಾದ ನಂತರ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ನಿರ್ದೇಶಕರ ಹೇಳಿಕೆಯಂತೆ 10 ದಿನಗಳಲ್ಲಿ ಸುಮಾರು ₹16 ಕೋಟಿ ಗಳಿಕೆ ಮಾಡಿದೆ. ಚಿತ್ರದ ಗೆಲುವಿನ ಬೆನ್ನಲ್ಲೇ ನಿರ್ದೇಶಕ ಮನೋಜ್ ಕುಮಾರ್ ಹಂಚಿಕೊಳ್ಳುತ್ತಿರುವ ತೆರೆ ಹಿಂದಿನ ಇಂತಹ ಸಂಗತಿಗಳು ಸಿನಿಪ್ರಿಯರಲ್ಲಿ ಮತ್ತಷ್ಟು ಕುತೂಹಲ ಮೂಡಿಸುತ್ತಿವೆ.

ಟ್ರಾಲಿಗೆ ಚಿನ್ನದ ಬಿಸ್ಕೆಟ್ ಅಂಟಿಸಿ ಸ್ಮಗ್ಲಿಂಗ್; DRI ಬಲೆಗೆ ಬಿದ್ದ ಇಬ್ಬರು ಆರೋಪಿಗಳು!

0

ಬೆಂಗಳೂರು: ಡಿಆರ್‌ಐ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಲಗೇಜ್ ಟ್ರಾಲಿಯಲ್ಲಿ ಸಾಗಿಸುತ್ತಿದ್ದ 1.3 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ವಶಪಡಿಸಿಕೊಂಡ ಚಿನ್ನದ ಮೌಲ್ಯ ಸುಮಾರು 1 ಕೋಟಿ 80 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ.

ಮಲೇಷ್ಯಾದ ಕೌಲಾಲಂಪುರದಿಂದ ಚಿನ್ನದ ಬಿಸ್ಕೆಟ್‌ಗಳನ್ನು ಸಾಗಿಸಿ ತಂದಿದ್ದ ಇಬ್ಬರು ಆರೋಪಿಗಳು, ವಿಮಾನ ನಿಲ್ದಾಣದಲ್ಲಿ ಯಾವುದೋ ಪ್ರಯಾಣಿಕರ ಲಗೇಜ್ ಟ್ರಾಲಿಗೆ ಚಿನ್ನದ ಬಿಸ್ಕೆಟ್‌ಗಳನ್ನು ಅಂಟಿಸಿ ಕಳುಹಿಸುತ್ತಿದ್ದರು ಎನ್ನಲಾಗಿದೆ.

ಅಮಾಯಕ ಪ್ರಯಾಣಿಕರು ತಮ್ಮ ಟ್ರಾಲಿಯನ್ನು ತೆಗೆದುಕೊಂಡು ಕಸ್ಟಮ್ಸ್ ತಪಾಸಣೆ ದಾಟುತ್ತಿದ್ದರು. ಬಳಿಕ ಆರೋಪಿಗಳು ಆ ಪ್ರಯಾಣಿಕರನ್ನು ಹಿಂಬಾಲಿಸಿ, ಸೂಕ್ತ ಸಮಯದಲ್ಲಿ ಟ್ರಾಲಿಯಿಂದ ಚಿನ್ನದ ಬಿಸ್ಕೆಟ್‌ಗಳನ್ನು ತೆಗೆದುಕೊಳ್ಳುತ್ತಿದ್ದರು ಎನ್ನಲಾಗಿದೆ.

ಹೀಗೆ ಪ್ರಯಾಣಿಕರಿಗೆ ಅರಿವೇ ಇಲ್ಲದಂತೆ ಅವರ ಲಗೇಜ್ ಟ್ರಾಲಿಯನ್ನು ಬಳಸಿಕೊಂಡು ಚಿನ್ನ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ಡಿಆರ್‌ಐ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 1.3 ಕೆಜಿ ತೂಕದ ಚಿನ್ನದ ಬಿಸ್ಕೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

ಆಯಿಲ್ ಟ್ಯಾಂಕರ್ ಪಲ್ಟಿ: ಆಯಿಲ್‌ ತುಂಬಿಕೊಳ್ಳಲು ಮುಗಿಬಿದ್ದ ಜನರು!

0

ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ಆಯಿಲ್ ಟ್ಯಾಂಕರ್ ಲಾರಿ ಪಲ್ಟಿಯಾದ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹೊರ್ತಿ ಬಳಿ ನಡೆದಿದೆ.

ಲಾರಿ ಪಲ್ಟಿಯಾಗುತ್ತಿದ್ದಂತೆ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಟ್ಯಾಂಕರ್‌ನಿಂದ ಆಯಿಲ್ ಹೊರಬರುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆ ಸುತ್ತಮುತ್ತಲಿನ ಸಾರ್ವಜನಿಕರು ಸ್ಥಳಕ್ಕೆ ಧಾವಿಸಿದ್ದಾರೆ. ಆಯಿಲ್ ತುಂಬಿಕೊಳ್ಳಲು ಮಹಿಳೆಯರು, ಪುರುಷರು ಕೈಯಲ್ಲಿ ಕೊಡ ಹಾಗೂ ವಿವಿಧ ಪಾತ್ರೆಗಳನ್ನು ಹಿಡಿದುಕೊಂಡು ಸ್ಥಳದಲ್ಲಿ ಜಮಾಯಿಸಿರುವುದು ಕಂಡುಬಂದಿದೆ.

ಘಟನೆ ವಿಷಯ ತಿಳಿಯುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸ್ಥಳಕ್ಕೆ ಆಗಮಿಸಿದ್ದರಿಂದ ಕೆಲಕಾಲ ಸ್ಥಳದಲ್ಲಿ ಜನಜಂಗುಳಿ ಕಂಡುಬಂದಿದೆ. ಟ್ಯಾಂಕರ್ ಪಲ್ಟಿಯಾದ ರೀತಿ ಕಂಡು ಜನರಲ್ಲಿ ಆತಂಕ ಮೂಡಿಸಿದ್ದರೂ, ಅದೃಷ್ಟವಶಾತ್ ಯಾವುದೇ ಜೀವಹಾನಿ ಅಥವಾ ದೊಡ್ಡ ಅನಾಹುತ ಸಂಭವಿಸಿಲ್ಲ.

ಘಟನೆಯ ಮಾಹಿತಿ ಪಡೆದ ಹೊರ್ತಿ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಜನರನ್ನು ನಿಯಂತ್ರಿಸುವುದರ ಜೊತೆಗೆ ಘಟನೆಯ ಕುರಿತು ಪರಿಶೀಲನೆ ನಡೆಸಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಲು ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ. ಪಲ್ಟಿಯಾದ ಟ್ಯಾಂಕರ್‌ನ್ನು ತೆರವುಗೊಳಿಸುವ ಕಾರ್ಯಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ.

ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಸಾಹುಕಾರ್-ಗೀತಾ ಹಣದ ವಹಿವಾಟು; ಕೆಪಿಎಸ್‌ಸಿ ಅಕ್ರಮ ತನಿಖೆಯಲ್ಲಿ ಹೊಸ ತಿರುವು!

0

ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.

ಜಾರಿ ನಿರ್ದೇಶನಾಲಯದ ತನಿಖೆ ವೇಳೆ ಹಣದ ವಹಿವಾಟು, ಅಭ್ಯರ್ಥಿಗಳ ಸಂಪರ್ಕ ಹಾಗೂ ಪರೀಕ್ಷೆಗೂ ಮುನ್ನ ಉತ್ತರಗಳನ್ನು ನೀಡಿದ್ದರೆನ್ನಲಾದ ಚೀಟಿಗಳ ಬಗ್ಗೆ ಹಲವು ಮಾಹಿತಿಗಳು ಹೊರಬಿದ್ದಿವೆ ಎನ್ನಲಾಗಿದೆ.

ತನಿಖೆಯ ವೇಳೆ ಶಿವಶಂಕರಪ್ಪ ಸಾಹುಕಾರ್ ಅವರು ಗೀತಾ ಅವರಿಗೆ ಫ್ಲಾಟ್ ಬಾಡಿಗೆಗಾಗಿ ಮೂರ್ನಾಲ್ಕು ತಿಂಗಳ ಕಾಲ 70ರಿಂದ 75 ಸಾವಿರ ರೂಪಾಯಿ ಹಣ ನೀಡಿದ್ದರೆನ್ನಲಾಗಿದೆ. ಅಪಾರ್ಟ್‌ಮೆಂಟ್ ಬಾಡಿಗೆಗೆ ಸಹಾಯ ಮಾಡುವ ಉದ್ದೇಶದಿಂದ ಈ ಹಣ ನೀಡಲಾಗಿತ್ತು ಎಂದು ಶಿವಶಂಕರಪ್ಪ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಇದರ ನಡುವೆ ಗೀತಾ ಮತ್ತು ಅವರ ಮಗಳ ಖಾತೆಗಳಿಗೆ ಸಾಹುಕಾರ್ ಅವರ ಕಡೆಯಿಂದ ಹೆಚ್ಚುವರಿ ಹಣ ವರ್ಗಾವಣೆಯಾಗಿರುವುದೂ ತನಿಖೆಯಲ್ಲಿ ಪತ್ತೆಯಾಗಿದೆ.

ಮತ್ತೊಂದೆಡೆ, ಪ್ರಕರಣದಲ್ಲಿ ಆರು ಅಭ್ಯರ್ಥಿಗಳು ಭಾಗಿಯಾಗಿರುವ ಶಂಕೆ ಇಡಿ ತನಿಖೆಯಲ್ಲಿ ವ್ಯಕ್ತವಾಗಿದ್ದು, ವಿನುತಾ ಮಲ್ಲಪ್ಪ ಹಿತ್ತಲಮನಿ, ನಂದೀಶ್, ಸೂಗುರೇಶ್, ತೇಜಸ್, ನವೀನ್ ಕುಮಾರ್ ಮತ್ತು ಕಿರಣ್ ಕುಮಾರ್ ಎನ್ ಎಂಬ ಹೆಸರುಗಳು ತನಿಖೆಯಲ್ಲಿ ಕೇಳಿಬಂದಿವೆ ಎನ್ನಲಾಗಿದೆ.

ಈ ಆರು ಅಭ್ಯರ್ಥಿಗಳು ಸಾಹುಕಾರ್ ಮತ್ತು ಗೀತಾ ಅವರೊಂದಿಗೆ ನೇರ ಸಂಪರ್ಕದಲ್ಲಿದ್ದರು ಎನ್ನಲಾಗಿದ್ದು, ಪರೀಕ್ಷೆಗೂ ಮುನ್ನ ಉತ್ತರಗಳನ್ನು ತಲುಪಿಸುವ ವ್ಯವಸ್ಥೆ ನಡೆದಿತ್ತೇ ಎಂಬ ಬಗ್ಗೆ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಇದರಲ್ಲೂ ಗ್ಯಾನೇಂದ್ರ ಕುಮಾರ್ ಎಂಬಾತ ಚಿಕ್ಕ ಚೀಟಿಗಳ ಮೂಲಕ ಸುಮಾರು 80 ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದ ಎನ್ನಲಾಗಿದೆ. ಚೀಟಿಯ ಮೇಲ್ಭಾಗದಲ್ಲಿ ಅಭ್ಯರ್ಥಿಗೆ ಸಂಬಂಧಿಸಿದ ಮೂರು ಇಂಗ್ಲಿಷ್ ಅಕ್ಷರಗಳ ಕೋಡ್ ಹಾಗೂ ಆನ್ಸರ್ ಬುಕ್‌ಲೆಟ್ ಸೀರೀಸ್ ಬರೆಯಲಾಗುತ್ತಿತ್ತು ಎನ್ನಲಾಗಿದೆ.

ಶಿವಶಂಕರಪ್ಪ ಅವರ ಮನೆ ಮೇಲೆ ಇಡಿ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಇಂತಹ ಚೀಟಿಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಸದ್ಯ ಆರೋಪಿಗಳನ್ನು ಅಕ್ಟೋಬರ್ 19ರವರೆಗೆ ಇಡಿ ಕಸ್ಟಡಿಗೆ ಪಡೆದುಕೊಂಡಿದ್ದು, ಕೆಪಿಎಸ್‌ಸಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದ ಹಣದ ವಹಿವಾಟು ಮತ್ತು ಅಭ್ಯರ್ಥಿಗಳ ಸಂಪರ್ಕದ ಕುರಿತು ತನಿಖೆ ಮುಂದುವರಿದಿದೆ.

ಆದರೆ, ಶಿವಶಂಕರಪ್ಪ ಅವರ ಖಾತೆಯಿಂದ ಗೀತಾ ಅವರಿಗೆ ಹಣ ವರ್ಗಾವಣೆಯಾಗಿದೆ ಎಂಬ ಆರೋಪವನ್ನು ಅವರ ಪರ ವಕೀಲರು ನಿರಾಕರಿಸಿದ್ದಾರೆ. ಹಿಂದೆಯೇ ಸಹಾಯಕ್ಕಾಗಿ ಹಣ ನೀಡಲಾಗಿತ್ತು. ಬಹಳ ಹಿಂದಿನ ಹಣ ವರ್ಗಾವಣೆಯನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಉಲ್ಲೇಖಿಸಲಾಗುತ್ತಿದೆ ಎಂದು ವಕೀಲರು ತಿಳಿಸಿದ್ದಾರೆ.

ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಬೆಂಕಿ; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ!

0

ಶಿವಮೊಗ್ಗ: ಬೆಂಗಳೂರಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಆನಂದಪುರ ಬಳಿಯ ಮುಂಬಾಳು ಗ್ರಾಮದಲ್ಲಿ ನಡೆದಿದೆ.

ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬಸ್ ಸಂಚರಿಸುತ್ತಿದ್ದ ವೇಳೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಕ್ಷಣಾರ್ಧದಲ್ಲೇ ಬೆಂಕಿ ಬಸ್‌ನಾದ್ಯಂತ ವ್ಯಾಪಿಸಿದ್ದು, ಬಸ್ ಸಂಪೂರ್ಣವಾಗಿ ಸುಟ್ಟುಹೋಗಿದೆ.

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಮತ್ತು ಕ್ಲೀನರ್‌ ಕೂಡಲೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬಹುತೇಕ ಪ್ರಯಾಣಿಕರು ಶಿವಮೊಗ್ಗದಲ್ಲೇ ಇಳಿದಿದ್ದರು. ಘಟನೆ ವೇಳೆ ಬಸ್‌ನಲ್ಲಿ ಇಬ್ಬರು ಪ್ರಯಾಣಿಕರು ಮಾತ್ರ ಸಾಗರಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.

ಹೆಚ್ಚಿನ ಪ್ರಯಾಣಿಕರು ಬಸ್‌ನಲ್ಲಿದ್ದಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ. ಆನಂದಪುರ ಠಾಣೆಯ ಪಿಎಸ್‌ಐ ಪ್ರವೀಣ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪೆಟ್ರೋಲ್ ಬಂಕ್‌ಗೆ ನುಗ್ಗಿದ ಜಾಗ್ವಾರ್; ಕ್ಷಣಾರ್ಧದಲ್ಲೇ ಹೊತ್ತಿ ಉರಿದ ಕಾರು! ಯುವಕ-ಯುವತಿ ಪಾರು

0

ಆನೇಕಲ್: ಐಷಾರಾಮಿ ಜಾಗ್ವಾರ್ ಕಾರೊಂದು ನೇರವಾಗಿ ಪೆಟ್ರೋಲ್ ಬಂಕ್‌ಗೆ ನುಗ್ಗಿ ಬೆಂಕಿಗಾಹುತಿಯಾದ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ.

ಬುಧವಾರ ತಡರಾತ್ರಿ ಅತ್ತಿಬೆಲೆಯ ಹೆಚ್‌ಪಿ ಪೆಟ್ರೋಲ್ ಬಂಕ್‌ಗೆ ಜಾಗ್ವಾರ್ ಕಾರಿನಲ್ಲಿ ಯುವಕ ಮತ್ತು ಯುವತಿ ಬಂದಿದ್ದರು. ಕಾರು ಚಾಲನೆ ಮಾಡುತ್ತಿದ್ದ ಸಂಜಯ್ ಎಂಬಾತ, ಮೊದಲು ಪೆಟ್ರೋಲ್ ಬಂಕ್ ಸಿಬ್ಬಂದಿ ಗುಡ್ಡು ಕುಮಾರ್ ಅವರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.

ಬಳಿಕ ಕಾರು ನೇರವಾಗಿ ಪೆಟ್ರೋಲ್ ಪಂಪ್‌ಗೆ ಅಪ್ಪಳಿಸಿದ್ದು, ಕ್ಷಣಾರ್ಧದಲ್ಲೇ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದ ಯುವಕ ಮತ್ತು ಯುವತಿ ಇಬ್ಬರೂ ಹೊರಗೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನು ಘಟನೆಯಲ್ಲಿ ಸಿಬ್ಬಂದಿ ಗುಡ್ಡು ಕುಮಾರ್ ಅವರ ಕಾಲಿಗೆ ಗಾಯವಾಗಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಲಕ ಸಂಜಯ್ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದನೇ ಎಂಬ ಅನುಮಾನ ವ್ಯಕ್ತವಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸಂಜಯ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆ ಉದ್ದೇಶಪೂರ್ವಕವಾಗಿತ್ತೇ ಅಥವಾ ಬೇರೆ ಯಾವುದಾದರೂ ಕಾರಣದಿಂದ ಕಾರು ನಿಯಂತ್ರಣ ತಪ್ಪಿ ಪೆಟ್ರೋಲ್ ಬಂಕ್‌ಗೆ ನುಗ್ಗಿತೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇತ್ತ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಯಶಸ್ವಿಯಾಗಿ ನಂದಿಸಿದ್ದಾರೆ.

ಬೆಂಗಳೂರಲ್ಲಿ ನಡುರಸ್ತೆಯಲ್ಲೇ ಆರ್‌ಎಂಯು ಬಾಕ್ಸ್ ಬ್ಲಾಸ್ಟ್! ಇಬ್ಬರಿಗೆ ಗಾಯ

0

ಬೆಂಗಳೂರು: ನಡುರಸ್ತೆಯಲ್ಲೇ ಏಕಾಏಕಿ ಆರ್‌ಎಂಯು ಬಾಕ್ಸ್ ಸ್ಫೋಟಗೊಂಡು ಇಬ್ಬರು ಗಾಯಗೊಂಡಿರುವ ಘಟನೆ ಬೆಂಗಳೂರಿನ ಬಾಗಲೂರು ಕ್ರಾಸ್ ಬಳಿ ನಡೆದಿದೆ.

ಅಮೆಜಾನ್ ಕಚೇರಿ ಗೇಟ್ ನಂಬರ್ 3ರ ಸಮೀಪ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಯುವಕರಿಗೆ ಸ್ಫೋಟದ ಪರಿಣಾಮ ಗಾಯಗಳಾಗಿವೆ.

ಸ್ಫೋಟದ ಬಳಿಕ ಬೆಂಕಿ ಹೊತ್ತಿಕೊಂಡಿದ್ದು, ಓರ್ವನಿಗೆ ಗಂಭೀರ ಗಾಯವಾಗಿದ್ದರೆ ಮತ್ತೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ಸ್ಥಳದಲ್ಲಿದ್ದ ಕೆಲವರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಘಟನೆಯಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಬೆಚ್ಚಿಬಿದ್ದಿದ್ದು, ಮಾಹಿತಿ ತಿಳಿದು ಯಲಹಂಕ ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಸ್ಫೋಟಕ್ಕೆ ಇಲಿ ಕಾರಣ?

ಆರ್‌ಎಂಯು ಬಾಕ್ಸ್ ಒಳಗೆ ಇಲಿ ಸೇರಿಕೊಂಡಿದ್ದರಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಸ್ಫೋಟವಾಗಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಸ್ಫೋಟಗೊಂಡ ಬಾಕ್ಸ್‌ನಲ್ಲಿ ಇಲಿ ಸುಟ್ಟುಹೋಗಿರುವುದು ಪತ್ತೆಯಾಗಿದೆ.

ವಿದ್ಯುತ್ ಪೂರೈಕೆಯಲ್ಲಿ ಆರ್‌ಎಂಯು ಪಾತ್ರ:

ಮೇನ್ ಕೇಬಲ್‌ನಿಂದ ವಿದ್ಯುತ್ ಆರ್‌ಎಂಯು ಬಾಕ್ಸ್‌ಗೆ ಬರುತ್ತದೆ. ಅಲ್ಲಿಂದ ಚಿಕ್ಕ ಕೇಬಲ್‌ಗಳ ಮೂಲಕ ವಿವಿಧ ಪ್ರದೇಶಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಇದೇ ವ್ಯವಸ್ಥೆಯಲ್ಲಿದ್ದ ಬಾಕ್ಸ್ ಸ್ಫೋಟಗೊಂಡಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ.

ಗದಗದಲ್ಲಿ ಗಮನ ಸೆಳೆದ ಗೋವಿನಜೋಳದ ಬೃಹತ್ ಹಾರ: ಅನಿಲ್ ಮೆಣಸಿನಕಾಯಿಗೆ ವಿನೂತನ ಸನ್ಮಾನ

0

ಗದಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಸ್ವಾಗತಿಸಲು ಹಾಗೂ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅವರಿಗೆ ಜನ್ಮದಿನದ ಶುಭಾಶಯ ಕೋರಲು ಅಭಿಮಾನಿಗಳು ಅರ್ಪಿಸಿದ ಗೋವಿನಜೋಳದ ಬೃಹತ್ ಹಾರ ಬುಧವಾರ ಗದಗ ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಎಲ್ಲರ ಗಮನ ಸೆಳೆಯಿತು.

ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷದ ಸಾರ್ವಜನಿಕ ಸೇವೆಯ ಅಂಗವಾಗಿ ಆಯೋಜಿಸಿದ್ದ ‘ಸೇವಾಜ್ಯೋತಿ ಯಾತ್ರೆ’ ಹಾಗೂ ‘ವಿಕಸಿತ ಭಾರತದ ಸಂಕಲ್ಪ ಯಾತ್ರೆ’ ಹಿನ್ನೆಲೆಯಲ್ಲಿ ಬೃಹತ್ ಮೆರವಣಿಗೆ ನಡೆಯಿತು. ಈ ವೇಳೆ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು.

ಅನಿಲ ಮೆಣಸಿನಕಾಯಿ ಅವರ ಅಭಿಮಾನಿಗಳು 220ಕ್ಕೂ ಹೆಚ್ಚು ಗೋವಿನಜೋಳದ ತೆನೆಗಳನ್ನು ಬಳಸಿ, ಒಂದು ಕ್ವಿಂಟಲ್‌ಗೂ ಅಧಿಕ ತೂಕದ ಬೃಹತ್ ಹಾರ ಸಿದ್ಧಪಡಿಸಿದ್ದರು. ಕ್ರೇನ್‌ ಸಹಾಯದಿಂದ ಹಾರವನ್ನು ಅನಿಲ ಮೆಣಸಿನಕಾಯಿ ಅವರಿಗೆ ಹಾಕಿ ಗೌರವಿಸಲಾಯಿತು. ಇದೇ ವೇಳೆ ಕಂಬಳಿ ಹೊದಿಸಿ, ಕುರಿಯನ್ನು ಕಾಣಿಕೆಯಾಗಿ ನೀಡಿ ಸನ್ಮಾನಿಸಲಾಯಿತು.

ರೈತರು ಬೆವರು ಸುರಿಸಿ ಬೆಳೆದ ಬೆಳೆಯನ್ನು ತಮ್ಮ ನೆಚ್ಚಿನ ನಾಯಕನಿಗೆ ವಿನೂತನವಾಗಿ ಅರ್ಪಿಸುವ ಮೂಲಕ ಗೌರವ ಸಲ್ಲಿಸುವ ಉದ್ದೇಶದಿಂದ ಅಭಿಮಾನಿ ಬಳಗದ ವಸಂತ ಪಡಗದ, ಸಿದ್ದು ಪಲ್ಲೇದ, ರಾಘವೇಂದ್ರ ಯಳವತ್ತಿ, ಮುತ್ತಣ್ಣ ಗದಗಿನ, ಇರ್ಷಾದ್ ಮಾನ್ವಿ, ಪ್ರವೀಣ ಕರಬಿಷ್ಟಿ, ಮೋಹನ ವರವಿ, ಪರಮೇಶ ನಾಯಕ, ಶರಣಪ್ಪ ಚಿಂಚಲಿ, ಬಸವರಾಜ ಕುರಿ, ಬಾಬು ಯಲಿಗಾರ್, ಬಸವರಾಜ ಕೋರಿ, ಚಂದ್ರು ಗುಡ್ಡಿಮಠ, ಸತ್ಯನಾರಾಯಣ ಘೋಡಕೆ, ರಾಮು ವಾಲ್ಮೀಕಿ, ಪ್ರವೀಣ ಅಂದೇಲಿ, ಬಸು ಪೊಲೀಸಪಾಟೀಲ, ಸಂಗು ಚಿತ್ತರಗಿ ಸೇರಿದಂತೆ ಹಲವರು ಬೃಹತ್ ಹಾರ ಅರ್ಪಿಸಿದರು.

ಈ ಸಂದರ್ಭದಲ್ಲಿ ನರಗುಂದ ಶಾಸಕ ಸಿ.ಸಿ. ಪಾಟೀಲ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಗದಗ: ಅಕ್ರಮ ಮಣ್ಣು ಗಣಿಗಾರಿಕೆ ಆರೋಪ; ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

0

ಗದಗ: ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಂದಾಯ ಹಾಗೂ ಗಣಿ ಇಲಾಖೆಯ ಅಧಿಕಾರಿಗಳ ತಂಡ ನಾಗಾವಿ, ಕಳಸಾಪುರ ಹಾಗೂ ಶಿರುಂದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಉಪ ವಿಭಾಗಾಧಿಕಾರಿ ಗಂಗಪ್ಪ, ಕಂದಾಯ ನಿರೀಕ್ಷಕ ಅರುಣಗೌಡ ಮಂಟೂರ, ಡಿಎಂಜಿ ಇಲಾಖೆ ಅಧಿಕಾರಿ ರಕ್ಷಿತ್, ಗ್ರಾಮ ಆಡಳಿತಾಧಿಕಾರಿ ಮಹೇಶ್ ಪೊಲೀಸ್ ಪಾಟೀಲ ಸೇರಿದಂತೆ ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದೆ ಎನ್ನಲಾದ ಸ್ಥಳಗಳನ್ನು ಪರಿಶೀಲಿಸಿದರು.

ಮಣ್ಣು ಗಣಿಗಾರಿಕೆಗೆ ಸಂಬಂಧಿಸಿದಂತೆ ಸ್ಥಳದಲ್ಲಿನ ಪರಿಸ್ಥಿತಿ ಹಾಗೂ ಚಟುವಟಿಕೆಗಳ ಕುರಿತು ಅಧಿಕಾರಿಗಳು ಮಾಹಿತಿ ಪಡೆದುಕೊಂಡರು. ಆರೋಪಗಳ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಕುರಿತು ಪರಿಶೀಲನೆ ನಡೆಸಲಾಯಿತು.

ಜನವರಿಯಲ್ಲಿ ಪಂಚಾಯಿತಿ ಎಲೆಕ್ಷನ್? 1,129 ಜಿಪಂ, 3,656 ತಾಪಂ ಸ್ಥಾನಗಳ ಮೀಸಲಾತಿ ಪ್ರಕಟ

0

ಬೆಂಗಳೂರು: ಕರ್ನಾಟಕದಲ್ಲಿ ಬಹುಕಾಲದಿಂದ ಬಾಕಿ ಉಳಿದಿರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಸರ್ಕಾರ ಚುನಾವಣಾ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ.

ಇದರ ಭಾಗವಾಗಿ 31 ಜಿಲ್ಲಾ ಪಂಚಾಯಿತಿಗಳ 1,129 ಸ್ಥಾನಗಳು ಹಾಗೂ 239 ತಾಲೂಕು ಪಂಚಾಯಿತಿಗಳ 3,656 ಸ್ಥಾನಗಳಿಗೆ ವರ್ಗವಾರು ಮೀಸಲಾತಿ ಅಧಿಸೂಚನೆ ಪ್ರಕಟಿಸಲಾಗಿದೆ.

1,129 ಜಿಲ್ಲಾ ಪಂಚಾಯಿತಿ ಸ್ಥಾನಗಳಿಗೆ ಮೀಸಲಾತಿ:

ರಾಜ್ಯದ 1,129 ಜಿಲ್ಲಾ ಪಂಚಾಯಿತಿ ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿಗೆ 225, ಪರಿಶಿಷ್ಟ ಪಂಗಡಕ್ಕೆ 102, ಹಿಂದುಳಿದ ವರ್ಗ ‘ಅ’ಕ್ಕೆ 183 ಹಾಗೂ ಹಿಂದುಳಿದ ವರ್ಗ ‘ಬ’ಕ್ಕೆ 43 ಸ್ಥಾನಗಳನ್ನು ಮೀಸಲಿಡಲಾಗಿದೆ. ಉಳಿದ 576 ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಸೇರಿವೆ.

ವರ್ಗವಾರು ಮಹಿಳಾ ಮೀಸಲಾತಿಯನ್ನೂ ಪ್ರಕಟಿಸಲಾಗಿದ್ದು, ಎಸ್‌ಸಿ ವರ್ಗದ 225 ಸ್ಥಾನಗಳಲ್ಲಿ 121, ಎಸ್‌ಟಿ ವರ್ಗದ 102 ಸ್ಥಾನಗಳಲ್ಲಿ 59, ಹಿಂದುಳಿದ ವರ್ಗ ‘ಅ’ದ 183 ಸ್ಥಾನಗಳಲ್ಲಿ 98 ಹಾಗೂ ಹಿಂದುಳಿದ ವರ್ಗ ‘ಬ’ದ 43 ಸ್ಥಾನಗಳಲ್ಲಿ 25 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಸಾಮಾನ್ಯ ವರ್ಗದ 576 ಸ್ಥಾನಗಳಲ್ಲಿ 268 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.

ತಾಲೂಕು ಪಂಚಾಯಿತಿ ಸ್ಥಾನಗಳ ಮೀಸಲಾತಿ:

ತಾಲೂಕು ಪಂಚಾಯಿತಿಗಳ 3,656 ಸ್ಥಾನಗಳಿಗೂ ವರ್ಗವಾರು ಮೀಸಲಾತಿ ಪ್ರಕಟಿಸಲಾಗಿದೆ. ಪರಿಶಿಷ್ಟ ಜಾತಿಗೆ 733, ಪರಿಶಿಷ್ಟ ಪಂಗಡಕ್ಕೆ 394, ಹಿಂದುಳಿದ ವರ್ಗ ‘ಅ’ಕ್ಕೆ 508, ಹಿಂದುಳಿದ ವರ್ಗ ‘ಬ’ಕ್ಕೆ 111 ಹಾಗೂ ಸಾಮಾನ್ಯ ವರ್ಗಕ್ಕೆ 1,910 ಸ್ಥಾನಗಳನ್ನು ನಿಗದಿಪಡಿಸಲಾಗಿದೆ.

ಜನವರಿಯಲ್ಲಿ ಚುನಾವಣೆ ನಡೆಸಲು ಸಿದ್ಧತೆ:

ಸಚಿವ ಸಂಪುಟ ಸಭೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಕುರಿತು ಚರ್ಚೆ ನಡೆದಿದ್ದು, ಡಿಸೆಂಬರ್‌ನಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಿಸಿ ಜನವರಿ ಮೊದಲ ವಾರದಲ್ಲಿ ಚುನಾವಣೆ ಪೂರ್ಣಗೊಳಿಸುವ ಉದ್ದೇಶ ಸರ್ಕಾರಕ್ಕಿದೆ ಎಂದು ವರದಿಯಾಗಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಬಳಿಕ ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವ ಸಾಧ್ಯತೆಯೂ ಇದೆ.

ಇದರಿಂದ ಗ್ರಾಮೀಣ ಭಾಗದಲ್ಲಿ ಚುನಾವಣಾ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳುವ ನಿರೀಕ್ಷೆಯಿದ್ದು, ಟಿಕೆಟ್‌ ಆಕಾಂಕ್ಷಿಗಳ ಲೆಕ್ಕಾಚಾರವೂ ಗರಿಗೆದರಲಿದೆ.