“ಬಸವಾದಿ ಶರಣರ ತತ್ವ ಸಮಾನತೆಗಾಗಿ, ಅದನ್ನು ಹಿಂದೂತ್ವದ ರಾಜಕೀಯಕ್ಕೆ ಬಳಸುವುದು ಸರಿಯಲ್ಲ.”ಬಸವರಾಜ ಸೂಳಿಬಾವಿ, ಬಂಡಾಯ ಸಾಹಿತಿ
ಬಸವಾದಿ ಶರಣರ ಹೆಸರಲ್ಲಿ ಹಿಂದೂ ಸಮಾವೇಶ ಯಾಕೆ?
ಇಂದು ಅಧಿಕ ಮಾಸದ ಆಧ್ಯಾತ್ಮಿಕ ಸಂಭ್ರಮ
ಅಂಬಾಭವಾನಿ ಸನ್ನಿಧಿಯಲ್ಲಿ 111 ಮುತ್ತೈದೆಯರ ಕುಂಕುಮಾರ್ಚನೆ ವೈಭವ
ಬೆಟಗೇರಿ: ಅಧಿಕ ಮಾಸದ ಪುಣ್ಯಪರ್ವದ ಅಂಗವಾಗಿ ಬೆಟಗೇರಿಯ ಐತಿಹಾಸಿಕ ಶ್ರೀ ಅಂಬಾಭವಾನಿ ದೇವಸ್ಥಾನ ಇಂದು ಭಕ್ತಿಯ ರಂಗಿನಿಂದ ಕಂಗೊಳಿಸಲಿದ್ದು, ಎಸ್‌ಎಸ್‌ಕೆ ಸಮಾಜದ ಆಶ್ರಯದಲ್ಲಿ ವಿಶೇಷ ಕುಂಕುಮಾರ್ಚನೆ ಕಾರ್ಯಕ್ರಮ ಭವ್ಯವಾಗಿ ನಡೆಯಲಿದೆ.
ಮೂರು ವರ್ಷಕ್ಕೊಮ್ಮೆ ಬರುವ ಈ ಪವಿತ್ರ ಅಧಿಕ ಮಾಸದಲ್ಲಿ ದೇವಿ ಆರಾಧನೆ ಮಾಡಿದರೆ ಐಶ್ವರ್ಯ, ಶಾಂತಿ ಮತ್ತು ಸೌಭಾಗ್ಯ ಲಭಿಸುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಭಕ್ತರಲ್ಲಿ ಅಪಾರ ಉತ್ಸಾಹ ಮನೆ ಮಾಡಿದೆ.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ 111 ಮುತ್ತೈದೆಯರು ಕೆಂಪು ಸೀರೆ ಧರಿಸಿ ದೇವಿಯ ಸನ್ನಿಧಿಯಲ್ಲಿ ಸಾಲಾಗಿ ಕುಳಿತು ಕುಂಕುಮಾರ್ಚನೆ ನೆರವೇರಿಸಲಿದ್ದಾರೆ. ಕೆಂಪು ಬಣ್ಣವನ್ನು ಶಕ್ತಿ, ಮಂಗಳ ಮತ್ತು ಸೌಭಾಗ್ಯದ ಪ್ರತೀಕವೆಂದು ಪರಿಗಣಿಸಲಾಗಿದ್ದು, 111 ಸಂಖ್ಯೆಯನ್ನು ಶುಭ ಸಂಕೇತವಾಗಿ ಆರಿಸಲಾಗಿದೆ.
ದೇವಿಯ ಸಹಸ್ರ ಅಂಬಾಭವಾನಿ ನಾಮಾವಳಿ ಪಠಣದ ನಡುವೆ ಪ್ರತಿಯೊಂದು ನಾಮಕ್ಕೂ ಮಹಿಳೆಯರು ಭಕ್ತಿಭಾವದಿಂದ ಕುಂಕುಮ ಅರ್ಪಿಸಲಿದ್ದಾರೆ. ದೇವಾಲಯದ ಆಧ್ಯಾತ್ಮಿಕ ವಾತಾವರಣ ಭಕ್ತರನ್ನು ಭಾವಪರವಶಗೊಳಿಸುವ ನಿರೀಕ್ಷೆ ಇದೆ.
ಬೆಳಗ್ಗಿನಿಂದಲೇ ದೇವಸ್ಥಾನದಲ್ಲಿ ಭಕ್ತರ ಸಂಚಾರ ಹೆಚ್ಚಾಗಲಿದ್ದು, ನೂರಾರು ಮಂದಿ ಈ ಧಾರ್ಮಿಕ ವೈಭವಕ್ಕೆ ಸಾಕ್ಷಿಯಾಗಲಿದ್ದಾರೆ.
ಊರಿನ ಸುಖ-ಶಾಂತಿ, ಉತ್ತಮ ಮಳೆ-ಬೆಳೆ ಹಾಗೂ ಜನರ ಸಂಕಲ್ಪ ಸಿದ್ಧಿಯಾಗಲಿ ಎಂಬ ಪ್ರಾರ್ಥನೆಯೊಂದಿಗೆ ನಡೆಯಲಿರುವ ಈ ಕುಂಕುಮಾರ್ಚನೆ ಭಕ್ತಿ, ಪರಂಪರೆ ಮತ್ತು ಸಂಸ್ಕೃತಿಯ ಅದ್ಭುತ ಸಂಗಮವಾಗಿ ಗಮನ ಸೆಳೆಯುತ್ತಿದೆ.
ಜನಸೇವೆಗೆ ಡಾಕ್ಟರೇಟ್ ಗೌರವ!
“ಈ ಗೌರವ ನನ್ನೊಬ್ಬರದ್ದಲ್ಲ; ಗ್ರಾಮಸ್ಥರು, ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಕುಟುಂಬದವರ ಬೆಂಬಲದ ಫಲ ಇದು. ಜನರ ನೋವಿಗೆ ಸ್ಪಂದಿಸುವ ಆಡಳಿತವೇ ನಿಜವಾದ ಸೇವೆ. ಈ ಸನ್ಮಾನ ಇನ್ನಷ್ಟು ಜನಪರ ಸೇವೆ ಮಾಡಲು ಹೊಸ ಪ್ರೇರಣೆ ನೀಡಿದೆ.”ಅಮೀರ ನಾಯಕ, ಪಿಡಿಒ
ಸಿದ್ದರಾಮಯ್ಯ ರಾಜೀನಾಮೆ ಫಿಕ್ಸ್!? ಗುರುವಾರವೇ ಅಧಿಕಾರ ತೊರೆಯಲಿದ್ದಾರೆ ಸಿಎಂ? ಮುಂದಿನ ಮುಖ್ಯಮಂತ್ರಿ ಡಿಕೆಶಿ!?
ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತ ಸಸ್ಪೆನ್ಸ್ ಇದೀಗ ಮತ್ತಷ್ಟು ತೀವ್ರಗೊಂಡಿದ್ದು, ದೆಹಲಿಯಲ್ಲಿ ನಡೆದ ಸುದೀರ್ಘ ಹೈಕಮಾಂಡ್ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿರುವ ಸಾಧ್ಯತೆ ವ್ಯಕ್ತವಾಗಿದೆ.
ಮೂಲಗಳ ಪ್ರಕಾರ, ಸುಮಾರು 6 ಗಂಟೆಗಳ ಮ್ಯಾರಥಾನ್ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಸಭಾ ಸದಸ್ಯತ್ವ ಹಾಗೂ ರಾಷ್ಟ್ರ ರಾಜಕಾರಣಕ್ಕೆ ತೆರಳುವಂತೆ ಹೈಕಮಾಂಡ್ ಆಫರ್ ನೀಡಿದೆ ಎನ್ನಲಾಗಿದೆ. ಆದರೆ ಈ ಪ್ರಸ್ತಾವಕ್ಕೆ ಅವರು ತಕ್ಷಣ ಒಪ್ಪಿಗೆ ನೀಡಿಲ್ಲ ಎಂದು ತಿಳಿದುಬಂದಿದೆ.
ಸಭೆಯ ಬಳಿಕ ಬೆಂಗಳೂರಿಗೆ ವಾಪಸಾದ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರು ಹಾಗೂ ಶಾಸಕರೊಂದಿಗೆ ಜಾರ್ಜ್ ನಿವಾಸದಲ್ಲಿ ರಹಸ್ಯ ಚರ್ಚೆ ನಡೆಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಈ ವೇಳೆ ಸಿಎಂ ಸ್ಥಾನದಿಂದ ರಾಜೀನಾಮೆ ನೀಡುವ ಕುರಿತು ಚರ್ಚೆ ನಡೆದಿದ್ದು, ಆರಂಭದಲ್ಲಿ ಆಪ್ತರು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಿದರೆಂದು ಮೂಲಗಳು ತಿಳಿಸಿವೆ. ನಿಮ್ಮ ಪರವಾಗಿ ಹೈಕಮಾಂಡ್ ಜೊತೆ ಮಾತುಕತೆ ನಡೆಸುತ್ತೇವೆ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.
ಆದರೆ ಸಿದ್ದರಾಮಯ್ಯ ಅವರು ಹೈಕಮಾಂಡ್ ನಿರ್ಧಾರವನ್ನು ನೇರವಾಗಿ ನಿರಾಕರಿಸಲು ಸಾಧ್ಯವಿಲ್ಲ ಎಂಬ ನಿಲುವು ವ್ಯಕ್ತಪಡಿಸಿ, ಅಗತ್ಯವಿದ್ದರೆ ರಾಜೀನಾಮೆ ನೀಡಲು ಸಿದ್ಧ ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
ಈ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ಪಕ್ಷದಿಂದ ಯಾವುದೇ ಅಧಿಕೃತ ಸ್ಪಷ್ಟೀಕರಣ ಬಂದಿಲ್ಲ. ಹೀಗಾಗಿ ರಾಜ್ಯ ರಾಜಕೀಯದಲ್ಲಿ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ರೇಡಿಯೋ ಜಾಕಿ ಆತ್ಮಹತ್ಯೆ! ಸಾವಿಗೆ ಸ್ನೇಹಿತನ ಕಿರುಕುಳ ಕಾರಣವಾಯ್ತಾ?
ಬೆಂಗಳೂರು: ನಗರದಲ್ಲಿ ಮುಂಬೈ ಮೂಲದ ರೇಡಿಯೋ ಜಾಕಿ (RJ) ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೃತರನ್ನು 49 ವರ್ಷದ ಮನೀಷಾ ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಮಾನ್ಯತಾ ಟೆಕ್ ಪಾರ್ಕ್ ಸಮೀಪದ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನಲ್ಲಿ ಮನೀಷಾ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಮೇ 23ರಂದು ನಡೆದಿದ್ದು, ಸಂಬಂಧಿಕರು ಹಲವು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಮನೆಗೆ ತೆರಳಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಮನೀಷಾ ಅವರು ಮುಂಬೈನಲ್ಲಿ ರೇಡಿಯೋ ಜಾಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, 2024ರಲ್ಲಿ ವಿಚ್ಛೇದನ ಪಡೆದ ನಂತರ ಇತ್ತೀಚೆಗೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಕಳೆದ ಏಪ್ರಿಲ್ ತಿಂಗಳಲ್ಲಿ ಅವರು ಮಾನ್ಯತಾ ಟೆಕ್ ಪಾರ್ಕ್ ಬಳಿ ಹೊಸ ಫ್ಲಾಟ್ ಖರೀದಿಸಿ ಒಂಟಿಯಾಗಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ಘಟನಾ ಸ್ಥಳದಲ್ಲಿ ಪತ್ತೆಯಾದ ಡೆತ್‌ನೋಟ್‌ನಲ್ಲಿ ತಮ್ಮ ಸಾವಿಗೆ ಹರ್ಷವರ್ಧನ್ ಸಿಂಗ್ ಬನ್ಸಾಲ್ ಎಂಬ ವ್ಯಕ್ತಿಯ ಮಾನಸಿಕ ಕಿರುಕುಳವೇ ಕಾರಣ ಎಂದು ಅವರು ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಬಂಧದಲ್ಲಿದ್ದಾಗ ನಿರಂತರ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪವೂ ಡೆತ್‌ನೋಟ್‌ನಲ್ಲಿ ಉಲ್ಲೇಖವಾಗಿದೆ.
ಈ ಸಂಬಂಧ ಅಮೃತಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಡೆತ್‌ನೋಟ್ ಮತ್ತು ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 108 ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಕೊಹ್ಲಿ ಜೊತೆಗಿನ ವೈರಲ್ ರೀಲ್ಸ್ ಡಿಲೀಟ್ ಮಾಡಿದ ಅರ್ಷದೀಪ್ ಸಿಂಗ್!
ಐಪಿಎಲ್ 2026ರಲ್ಲಿ ಪಂಜಾಬ್ ಕಿಂಗ್ಸ್ ತಂಡ ಹೊರಬಿದ್ದ ನಂತರ, ತಂಡದ ಪ್ರಮುಖ ವೇಗಿ ಅರ್ಷದೀಪ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಿಂದ 200ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಮಾಹಿತಿಯ ಪ್ರಕಾರ, ಅರ್ಷದೀಪ್ ತಮ್ಮ ಖಾತೆಯಿಂದ ಹಲವು ಹಳೆಯ ಫೋಟೋಗಳು ಹಾಗೂ ರೀಲ್ಸ್‌ಗಳನ್ನು ತೆಗೆದುಹಾಕಿದ್ದು, ವಿರಾಟ್ ಕೊಹ್ಲಿ ಜೊತೆಗಿನ ವೈರಲ್ ರೀಲ್ಸ್ ಕೂಡ ಡಿಲೀಟ್ ಆಗಿದೆ. ಆ ರೀಲ್ಸ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಹಂಚಲಾಗಿದ್ದು, ಸುಮಾರು 1.5 ಕೋಟಿ ವೀಕ್ಷಣೆ ಪಡೆದಿತ್ತು.
ಐಪಿಎಲ್ 2026ರಲ್ಲಿ ಅರ್ಷದೀಪ್ ಸಿಂಗ್ ಅವರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ ಎಂದು ಹೇಳಲಾಗುತ್ತಿದ್ದು, 14 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಪಡೆದಿದ್ದಾರೆ ಎಂಬ ಅಂಕಿಅಂಶಗಳು ವರದಿಯಾಗಿವೆ.
ಸದ್ಯ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೇವಲ 44 ಪೋಸ್ಟ್‌ಗಳು ಮಾತ್ರ ಉಳಿದಿವೆ. ಈ ಹಠಾತ್ ಬದಲಾವಣೆಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ವೈಯಕ್ತಿಕ ಕಾರಣವೇ ಅಥವಾ ಸೋಶಿಯಲ್ ಮೀಡಿಯಾ ರೀಸೆಟ್ ಆಗಿರಬಹುದೆಂಬ ಊಹೆಗಳು ಮಾತ್ರ ಹರಿದಾಡುತ್ತಿವೆ.
ಈ ಬೆಳವಣಿಗೆಗೆ ಸಂಬಂಧಿಸಿದಂತೆ ಅರ್ಷದೀಪ್ ಸಿಂಗ್ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಬೆಂಗಳೂರಿನಲ್ಲಿ ಮಳೆ ಅಬ್ಬರ: ಮೆಟ್ರೋ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಜೆ ವೇಳೆ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ನಗರ ಜೀವನ ಅಸ್ತವ್ಯಸ್ತಗೊಂಡಿದೆ.
ಹಲವೆಡೆ ಅವಾಂತರಗಳು ಸಂಭವಿಸಿದ್ದು, ಪ್ರಯಾಣಿಕರು ಹಾಗೂ ವಾಹನ ಸವಾರರು ತೀವ್ರ ಪರದಾಟ ಅನುಭವಿಸಿದ್ದಾರೆ.
ಮರದ ಕೊಂಬೆ ಹಳಿ ಮೇಲೆ ಬಿದ್ದ ಪರಿಣಾಮ ಐಟಿಪಿಎಲ್–ಸತ್ಯಸಾಯಿ ಆಸ್ಪತ್ರೆ ಮಾರ್ಗದ ನೇರಳೆ ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ವೈಟ್‌ಫೀಲ್ಡ್–ಗರುಡಾಚಾರಪಾಳ್ಯ ನಡುವಿನ ಸೇವೆ ಸಂಜೆ 6 ಗಂಟೆಯಿಂದ ಬಂದ್ ಆಗಿದ್ದು, ಪ್ರಸ್ತುತ ಗರುಡಾಚಾರಪಾಳ್ಯ–ಚಲ್ಲಘಟ್ಟ ನಡುವೆ ಮಾತ್ರ ಮೆಟ್ರೋ ಸಂಚಾರ ಲಭ್ಯವಾಗಿದೆ. ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಮನೆಗೆ ತೆರಳಲು ಸಾಧ್ಯವಾಗದೆ ಪರದಾಡುತ್ತಿರುವ ದೃಶ್ಯಗಳು ಕಂಡುಬಂದಿವೆ.
ಸ್ಥಗಿತಗೊಂಡ ಸೇವೆ ಪುನಃ ಆರಂಭಿಸಲು ಬಿಎಂಆರ್‌ಸಿಎಲ್ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದು, ಶೀಘ್ರದಲ್ಲೇ ಸೇವೆ ಪುನರಾರಂಭವಾಗುವ ನಿರೀಕ್ಷೆ ವ್ಯಕ್ತವಾಗಿದೆ.
ಇದೇ ವೇಳೆ ನಗರದೆಲ್ಲೆಡೆ ಮಳೆಯ ಆರ್ಭಟ ಮುಂದುವರಿದಿದ್ದು, ಮೆಜೆಸ್ಟಿಕ್, ಶಾಂತಿನಗರ, ಜಯನಗರ, ಜೆ.ಪಿ.ನಗರ, ವಸಂತನಗರ, ಕೆ.ಆರ್.ಮಾರ್ಕೆಟ್, ಬನಶಂಕರಿ, ಯಲಹಂಕ, ಹೆಬ್ಬಾಳ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಿದೆ. ಇದರಿಂದ ಪ್ರಮುಖ ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಟ ನಡೆಸಿದ್ದಾರೆ.
ಭಾರೀ ಮಳೆಯಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕೆ.ಆರ್. ಸರ್ಕಲ್ ಅಂಡರ್‌ಪಾಸ್ ಅನ್ನು ಪೊಲೀಸರು ತಾತ್ಕಾಲಿಕವಾಗಿ ಬಂದ್ ಮಾಡಿದ್ದಾರೆ. ಸಾಮಾನ್ಯ ಮಳೆಗೆ ಸಹ ಜಲಾವೃತವಾಗುವ ಹಿನ್ನೆಲೆಯಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರ ನಿರ್ಬಂಧಿಸಲಾಗಿದೆ.
ನಗರದ ಹಲವೆಡೆ ಮಳೆ ಮುಂದುವರಿಯುತ್ತಿರುವುದರಿಂದ ಜನಜೀವನ ಇನ್ನೂ ಕೆಲಕಾಲ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ.
ಚಿಕ್ಕಮಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ: ಮನೆಗಳಿಗೆ ನೀರು ನುಗ್ಗಿ ಅವಾಂತರ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸೋಮವಾರ ಸಂಜೆ ಗುಡುಗು, ಮಿಂಚು ಹಾಗೂ ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ.
ಬಿಸಿಲ ತಾಪದಿಂದ ಕಂಗೆಟ್ಟಿದ್ದ ಜನರಿಗೆ ವರುಣ ತಂಪೆರೆದರೂ, ಕೆಲವೆಡೆ ಮಳೆ ಅವಾಂತರಕ್ಕೂ ಕಾರಣವಾಗಿದೆ.
ಮುಳ್ಳಯ್ಯನಗಿರಿ, ಹೊನ್ನಮ್ಮನಹಳ್ಳ ಹಾಗೂ ಬಾಬಾಬುಡನ್ ಗಿರಿ ಭಾಗಗಳಲ್ಲಿ ಕಳೆದ ಅರ್ಧ ಗಂಟೆಯಿಂದ ಭಾರಿ ಮಳೆಯಾಗಿದ್ದು, ಗುಡ್ಡ ಪ್ರದೇಶಗಳಿಂದ ದೊಡ್ಡ ಪ್ರಮಾಣದ ನೀರು ಹರಿದು ಬಂದಿದೆ. ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಮಳೆ ಮತ್ತು ಗಾಳಿಯ ಆರ್ಭಟ ಹೆಚ್ಚಾಗಿತ್ತು.
ನಗರ ಭಾಗದಲ್ಲಿಯೂ ಮಳೆಯ ಪರಿಣಾಮ ಗಂಭೀರವಾಗಿದ್ದು, ಹಳೆ ಉಪ್ಪಳ್ಳಿ ಮತ್ತು ಗೌರಿ ಕಾಲುವೆ ಬಡಾವಣೆಯ ಹಲವು ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ರಾಜಕಾಲುವೆಗಳ ಅವ್ಯವಸ್ಥೆಯಿಂದಾಗಿ ಮಳೆ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ನಿವಾಸಿಗಳು ಪರದಾಟ ನಡೆಸಿದ್ದಾರೆ. ಮನೆಯಲ್ಲಿದ್ದ ಅಗತ್ಯ ವಸ್ತುಗಳು ಮತ್ತು ಬಟ್ಟೆಗಳು ನೀರುಪಾಲಾದ ಘಟನೆಗಳು ವರದಿಯಾಗಿವೆ.
ಇದೇ ವೇಳೆ ಹೆಬ್ಬಳ್ಳಿ ಬಳಿ ಗಾಳಿಗೆ ಬೃಹತ್ ಮರ ರಸ್ತೆ ಮೇಲೆ ಉರುಳಿ ಬಿದ್ದಿದ್ದು, ಚಿಕ್ಕಮಗಳೂರು–ಶಾಂತವೇರಿ ಹಾಗೂ ಲಿಂಗದಹಳ್ಳಿ ಮಾರ್ಗದಲ್ಲಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಚಿಕ್ಕಮಗಳೂರು–ತರೀಕೆರೆ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಂತ ದೃಶ್ಯಗಳು ಕಂಡುಬಂದಿವೆ.
ಸ್ಥಳೀಯ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ಆರಂಭಿಸಿದ್ದು, ಸಂಚಾರವನ್ನು ಪುನಃಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿವೆ.
ಮಿಕ್ಸರ್ ಸರಿಯಾಗಿ ರುಬ್ಬುತ್ತಿಲ್ಲವೇ? ಮನೆಯಲ್ಲೇ ಈ ಉಪಾಯ ಟ್ರೈ ಮಾಡಿ
ಅಡುಗೆಮನೆಯಲ್ಲಿ ಪ್ರತಿದಿನ ಬಳಸುವ ಮಿಕ್ಸರ್ ಮತ್ತು ಗ್ರೈಂಡರ್‌ಗಳ ಬ್ಲೇಡ್‌ಗಳು ಕಾಲಕ್ರಮೇಣ ಹರಿತ ಕಳೆದುಕೊಳ್ಳುವುದು ಸಾಮಾನ್ಯ.
ಇದರಿಂದ ಚಟ್ನಿ, ಮಸಾಲೆ ಹಾಗೂ ಇತರೆ ಪದಾರ್ಥಗಳು ಸರಿಯಾಗಿ ನುಣ್ಣಗಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಹಲವರು ಮಿಕ್ಸರ್ ಜಾರ್‌ನ್ನು ಮೆಕ್ಯಾನಿಕ್ ಬಳಿ ತೆಗೆದುಕೊಂಡು ಹೋಗುವುದು ಅಥವಾ ಹೊಸ ಜಾರ್ ಖರೀದಿಸುವುದು ಮಾಡುತ್ತಾರೆ. ಆದರೆ ಮನೆಯಲ್ಲೇ ಇರುವ ಕೆಲವು ಸಾಮಾನ್ಯ ವಸ್ತುಗಳ ಸಹಾಯದಿಂದ ಯಾವುದೇ ಖರ್ಚಿಲ್ಲದೆ ಬ್ಲೇಡ್‌ಗಳನ್ನು ಮತ್ತೆ ಹರಿತಗೊಳಿಸಬಹುದು.
ಮಿಕ್ಸರ್ ಬ್ಲೇಡ್ ಶಾರ್ಪ್ ಮಾಡಲು ಕಲ್ಲು ಉಪ್ಪು ಅತ್ಯಂತ ಪರಿಣಾಮಕಾರಿ ಎಂದು ಹೇಳಲಾಗುತ್ತಿದೆ. ಮೊದಲು ಹರಿತ ಕಡಿಮೆಯಾದ ಜಾರ್‌ಗೆ ಬ್ಲೇಡ್ ಮುಳುಗುವಷ್ಟು ಕಲ್ಲು ಉಪ್ಪು ಹಾಕಬೇಕು. ನಂತರ ಜಾರ್ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ ಮಿಕ್ಸರ್‌ನಲ್ಲಿ ಅಳವಡಿಸಬೇಕು. ಮಿಕ್ಸರ್ ಅನ್ನು ನಿರಂತರವಾಗಿ ಓಡಿಸದೆ, ಮಧ್ಯ ಮಧ್ಯೆ ನಿಲ್ಲಿಸುತ್ತಾ ಒಂದು ಅಥವಾ ಎರಡು ನಿಮಿಷಗಳ ಕಾಲ ಹೆಚ್ಚಿನ ವೇಗದಲ್ಲಿ ಚಲಾಯಿಸಬೇಕು.
ಈ ಪ್ರಕ್ರಿಯೆಯಲ್ಲಿ ಕಲ್ಲು ಉಪ್ಪಿನ ಘರ್ಷಣೆಯಿಂದ ಬ್ಲೇಡ್‌ಗಳು ಮತ್ತೆ ಚಾಕುವಿನಂತೆ ಹರಿತವಾಗುತ್ತವೆ. ಜೊತೆಗೆ ಜಾರ್‌ನೊಳಗಿನ ಕೊಳಕು ಕೂಡ ಸ್ವಚ್ಛವಾಗುತ್ತದೆ ಎಂದು ಹೇಳಲಾಗುತ್ತಿದೆ.
ಇನ್ನೊಂದು ವಿಧಾನವಾಗಿ ಅಲ್ಯೂಮಿನಿಯಂ ಫಾಯಿಲ್ ಬಳಕೆಯನ್ನೂ ಸೂಚಿಸಲಾಗಿದೆ. ಫಾಯಿಲ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಜಾರ್‌ಗೆ ಹಾಕಿ ಒಂದು ನಿಮಿಷ ಹೆಚ್ಚಿನ ವೇಗದಲ್ಲಿ ಮಿಕ್ಸ್ ಮಾಡಿದರೆ, ಬ್ಲೇಡ್‌ಗಳ ಅಂಚುಗಳು ಮತ್ತೆ ತೀಕ್ಷ್ಣವಾಗುತ್ತವೆ.
ಬ್ಲೇಡ್ ಶಾರ್ಪ್ ಮಾಡಿದ ಬಳಿಕ ಜಾರ್ ಅನ್ನು ಚೆನ್ನಾಗಿ ಸ್ವಚ್ಛಗೊಳಿಸುವುದು ಅಗತ್ಯ. ಜಾರ್‌ಗೆ ಸ್ವಲ್ಪ ನೀರು ಮತ್ತು ಪಾತ್ರೆ ತೊಳೆಯುವ ದ್ರವ ಸೇರಿಸಿ ಮತ್ತೊಮ್ಮೆ ಮಿಕ್ಸರ್ ಆನ್ ಮಾಡಿ ತೊಳೆಯಬೇಕು. ನಂತರ ಶುದ್ಧ ನೀರಿನಿಂದ ತೊಳೆದು ಸಂಪೂರ್ಣ ಒಣಗಿದ ಬಳಿಕವೇ ಬಳಸುವುದು ಉತ್ತಮ.

