Home Blog Page 86

ಮೆಹಬೂಬ್‌ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಭದ್ರತಾ ಲೋಪ: ಶವಾಗಾರದಲ್ಲಿ ಶವವನ್ನು ಕಚ್ಚಿ ವಿರೂಪಗೊಳಿಸಿದ ಬೀದಿ ನಾಯಿ

ತೆಲಂಗಾಣ: ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆಯ ಜಡ್ಚೆರ್ಲಾ ಪಟ್ಟಣದ ಸರ್ಕಾರಿ ಏರಿಯಾ ಆಸ್ಪತ್ರೆಯಲ್ಲಿ ಶವಾಗಾರ ಭದ್ರತೆ ಕುರಿತು ಗಂಭೀರ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಶವಾಗಾರದೊಳಗೆ ಪ್ರವೇಶಿಸಿದ ಬೀದಿ ನಾಯಿಯೊಂದು ಮೃತದೇಹವನ್ನು ಕಚ್ಚಿ ವಿರೂಪಗೊಳಿಸಿರುವ ಘಟನೆ ವರದಿಯಾಗಿದೆ.

ಮೃತರನ್ನು ಜಡ್ಚೆರ್ಲಾ ನಿವಾಸಿ 32 ವರ್ಷದ ಪೋಲ್ ಭೀಮೇಶ್ವರ್ ಎಂದು ಗುರುತಿಸಲಾಗಿದೆ. ಅವರು ಅನುಮಾನಾಸ್ಪದ ಸ್ಥಿತಿಯಲ್ಲಿ ಕೊಳದಲ್ಲಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು.

ಆಸ್ಪತ್ರೆಯ ಫ್ರೀಜರ್ ದೋಷಗೊಂಡಿದ್ದರಿಂದ ಮೃತದೇಹವನ್ನು ಶವಾಗಾರದ ಮಹಡಿಯಲ್ಲಿ ಇರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶವವು ಊದಿಕೊಂಡಿದ್ದ ಕಾರಣ ಲಭ್ಯವಿದ್ದ ಶೇಖರಣಾ ಘಟಕದಲ್ಲಿ ಇರಿಸಲಾಗಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶವಾಗಾರವನ್ನು ವಾರ್ಡ್ ಬಾಯ್ ಲಾಕ್ ಮಾಡಿದ್ದರೂ, ಬೀದಿ ನಾಯಿ ಹೇಗೆ ಒಳನುಗ್ಗಿತು ಎಂಬುದು ಸ್ಪಷ್ಟವಾಗಿಲ್ಲ. ನಂತರ ನಾಯಿ ಒಳಗಿರುವುದನ್ನು ಗಮನಿಸಿದ ಸಿಬ್ಬಂದಿ ಅದನ್ನು ಓಡಿಸಿದ್ದಾರೆ. ಆದರೆ ಆ ವೇಳೆಗೆ ದೇಹದ ಒಂದು ಭಾಗವನ್ನು ನಾಯಿ ವಿರೂಪಗೊಳಿಸಿದ್ದೆಂದು ತಿಳಿದುಬಂದಿದೆ.

ಘಟನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ತೆಲಂಗಾಣ ಆರೋಗ್ಯ ಸಚಿವ ಸಿ ದಾಮೋದರ್ ರಾಜನರಸಿಂಹ ತನಿಖೆ ನಡೆಸುವಂತೆ ರಾಜ್ಯ ವೈದ್ಯ ವಿಧಾನ ಪರಿಷತ್ ಆಯುಕ್ತ ಅಜಯ್ ಕುಮಾರ್ ಅವರಿಗೆ ಸೂಚಿಸಿದ್ದಾರೆ.

ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರು, ಪೊಲೀಸ್ ಸಿಬ್ಬಂದಿ ಹಾಗೂ ವೈದ್ಯರೊಂದಿಗೆ ಚರ್ಚೆ ನಡೆಸಿದ್ದಾರೆ. ಆಸ್ಪತ್ರೆಯ ಸೂಪರಿಂಟೆಂಡೆಂಟ್, ಕರ್ತವ್ಯದಲ್ಲಿದ್ದ ವೈದ್ಯಾಧಿಕಾರಿ ಹಾಗೂ ಶವಾಗಾರ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಭದ್ರತೆ ಬಲಪಡಿಸುವ ಮತ್ತು ಮೂಲಸೌಕರ್ಯ ಸುಧಾರಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟಿ20 ವಿಶ್ವಕಪ್ ವೈಫಲ್ಯಕ್ಕೆ ಪಿಸಿಬಿ ಕಠಿಣ ಕ್ರಮ: 50 ಲಕ್ಷ ದಂಡ, ಅಫ್ರಿದಿಯಿಂದ 2 ವರ್ಷ ಬ್ಯಾನ್ ಆಗ್ರಹ

0

ಟಿ20 ವಿಶ್ವಕಪ್ 2026ರಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆ ಪಾಕಿಸ್ತಾನ್ ತಂಡದ ವಿರುದ್ಧ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಅದರ ಮೊದಲ ಹೆಜ್ಜೆಯಾಗಿ ಆಟಗಾರರಿಗೆ 50 ಲಕ್ಷ ಪಾಕಿಸ್ತಾನಿ ರೂ. ದಂಡ ವಿಧಿಸುವ ನಿರ್ಧಾರ ಕೈಗೊಂಡಿದೆ ಎಂಬ ವರದಿ ಹೊರಬಿದ್ದಿದೆ.

ಈ ಬೆಳವಣಿಗೆಯ ಬೆನ್ನಲ್ಲೇ ಮಾಜಿ ನಾಯಕ ಶಾಹಿದ್ ಅಫ್ರಿದಿ ಹಿರಿಯ ಆಟಗಾರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳಪೆ ಪ್ರದರ್ಶನ ನೀಡುತ್ತಿರುವ ಆಟಗಾರರನ್ನು ಕನಿಷ್ಠ 2 ವರ್ಷಗಳ ಕಾಲ ರಾಷ್ಟ್ರೀಯ ತಂಡದಿಂದ ಬ್ಯಾನ್ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಅಫ್ರಿದಿ ಪ್ರಕಾರ, ಬಾಬರ್ ಆಝಂ, ಶಾಹೀನ್ ಅಫ್ರಿದಿ ಹಾಗೂ ಶಾದಾಬ್ ಖಾನ್ ಮುಂತಾದ ಪ್ರಮುಖ ಆಟಗಾರರು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುತ್ತಿಲ್ಲ. ಇವರು “ರಿಯಾಲಿಟಿ ಚೆಕ್” ಎದುರಿಸಬೇಕು ಎಂದು ಅವರು ಹೇಳಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ವಿಫಲವಾಗುತ್ತಿರುವ ಆಟಗಾರರನ್ನು ದೇಶೀಯ ಕ್ರಿಕೆಟ್‌ಗೆ ಕಳುಹಿಸಿ ಫಾರ್ಮ್ ಸಾಬೀತುಪಡಿಸುವಂತೆ ಮಾಡಬೇಕು. ವರ್ಷಗಳಿಂದ ಕಳಪೆ ಪ್ರದರ್ಶನ ನೀಡುತ್ತಿದ್ದರೂ ತಂಡದಲ್ಲಿ ಸ್ಥಾನ ಉಳಿಸಿಕೊಂಡಿರುವವರ ವಿರುದ್ಧ ಕ್ರಮ ಅಗತ್ಯ ಎಂದು ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.

ಹಿರಿಯರನ್ನು ಬೆಂಚ್ ಮೇಲೆ ಕೂರಿಸಿ, ದೇಶೀಯ ಮಟ್ಟದಲ್ಲಿ ಮಿಂಚುತ್ತಿರುವ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಬೇಕು. ತಂಡದ ಪುನರ್‌ನಿರ್ಮಾಣ ಪ್ರಕ್ರಿಯೆ ತಕ್ಷಣ ಆರಂಭವಾಗಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಅದೇ ವೇಳೆ ಅನುಭವಿ ಬ್ಯಾಟ್ಸ್‌ಮನ್ ಫಖರ್ ಝಮಾನ ಅವರಿಗೆ ಟಿ20 ನಾಯಕತ್ವ ನೀಡುವ ವಿಚಾರವನ್ನೂ ಮುಂದಿಟ್ಟಿದ್ದಾರೆ.

ಪಿಸಿಬಿ ವಿಧಿಸಿರುವ 50 ಲಕ್ಷ ದಂಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಫ್ರಿದಿ, “ಹಣಕಾಸಿನ ದಂಡಕ್ಕಿಂತ ಶಿಸ್ತು ಮತ್ತು ವ್ಯವಸ್ಥಾತ್ಮಕ ಬದಲಾವಣೆ ಮುಖ್ಯ” ಎಂದು ಟೀಕಿಸಿದ್ದಾರೆ.

ನಿಧಿ ಆಸೆಗಾಗಿ ಅಪಾರ್ಟ್‌ಮೆಂಟ್ ಬೇಸ್ಮೆಂಟ್ ಅಗೆದ ಬಿಲ್ಡರ್‌!

ಬೆಂಗಳೂರು: ಇತ್ತೀಚೆಗೆ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಮನೆ ಅಗೆಯುವ ವೇಳೆ ನಿಧಿ ಪತ್ತೆಯಾದ ಘಟನೆ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದ್ದ ಹಿನ್ನೆಲೆ, ಇದೀಗ ಬೆಂಗಳೂರಿನಲ್ಲಿ ಸಹ ನಿಧಿ ಆಸೆ ಪ್ರಕರಣ ಬೆಳಕಿಗೆ ಬಂದಿದೆ.

ನಗರದ ಎಚ್‌ಎಸ್‌ಆರ್ ಲೇಔಟ್ ವ್ಯಾಪ್ತಿಯ ಎಳ್ಳುಕುಂಟೆ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ನ ಬೇಸ್ಮೆಂಟ್ ಹಿಂಭಾಗದಲ್ಲಿ ಅಗೆದಿರುವ ಆರೋಪ ಕೇಳಿಬಂದಿದೆ. ಬಿಲ್ಡರ್ ಸುಧಾಕರ್ ನಾಯ್ಡು ಎಂಬಾತ ಹಳೆಯ ವೀರಗಲ್ಲಿನ ಕೆಳಗೆ ನಿಧಿ ಇದೆ ಎಂಬ ನಂಬಿಕೆಯಿಂದ ಅಗೆತ ನಡೆಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಅಪಾರ್ಟ್‌ಮೆಂಟ್ ಹಿಂಭಾಗದಲ್ಲಿರುವ ವೀರಗಲ್ಲಿನ ಸುತ್ತ ಕಾಂಪೌಂಡ್‌ಗೆ ತಗಡಿನ ಶೀಟ್ ಹೊಡೆದು ಮುಚ್ಚಳ ಹಾಕಿ, ಬೇಸ್ಮೆಂಟ್ ಭಾಗದಲ್ಲಿ ಅಗೆದಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿ ಬಿಲ್ಡರ್‌ಗೆ ಪ್ರಶ್ನಿಸಿದ್ದಾರೆ.

ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

ಅಮೆರಿಕ ರಾಯಭಾರಿ ಕಚೇರಿ ಮೇಲೆ ಇರಾನ್ ಡ್ರೋನ್ ದಾಳಿ!

0

ದುಬೈ: ದುಬೈನಲ್ಲಿ ಅಮೆರಿಕ ರಾಯಭಾರಿ ಕಚೇರಿ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದ್ದು, ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಟೆಹ್ರಾನ್ ಅಮೆರಿಕದ ಸೈನಿಕ ನೆಲೆಗಳು ಹಾಗೂ ಪ್ರದೇಶದ ಇಸ್ರೇಲಿ ಸ್ವತ್ತುಗಳನ್ನು ಗುರಿಯಾಗಿಸಿಕೊಂಡು ಪ್ರತಿದಾಳಿ ನಡೆಸಿದೆ.

ಇದಕ್ಕೂ ಮುನ್ನ ಇಸ್ರೇಲ್-ಅಮೆರಿಕದ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿಯನ್ನು ಹತ್ಯೆ ಮಾಡಿದ ಘಟನೆ ನಡೆದಿತ್ತು, ಅದರಿಂದ ಸಂಘರ್ಷ ಮತ್ತಷ್ಟು ತೀವ್ರವಾಗಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಘಟನೆಯನ್ನು ದೃಢಪಡಿಸಿದ್ದಾರೆ.

ಮಂಗಳವಾರ ಬೆಳಗಿನ ಜಾವ ರಿಯಾದ್‌ನ ಅಮೆರಿಕ ರಾಯಭಾರಿ ಕಚೇರಿಯ ಮೇಲೆ ಎರಡು ಡ್ರೋನ್‌ಗಳು ಡಿಕ್ಕಿ ಹೊಡೆದು, ಸಣ್ಣ ಪ್ರಮಾಣದ ಬೆಂಕಿ ಹೊತ್ತಿಕೊಂಡಿತ್ತು. ಇದಕ್ಕೂ ಮುನ್ನ ಸೋಮವಾರ, ಕುವೈತ್‌ನ ಅಮೆರಿಕ ರಾಯಭಾರಿ ಕಚೇರಿಯಿಂದ ಹೊಗೆ ಕಾಣಿಸಿಕೊಂಡಿತ್ತು.

ಖಮೇನಿ ಹತ್ಯೆ ಹಿನ್ನಲೆ ಗಂಗಾವತಿಯಲ್ಲಿ ಉದ್ವಿಗ್ನತೆ: ಇನ್‌ಸ್ಟಾ ಸ್ಟೋರಿ ವಿವಾದಕ್ಕೆ ಯುವಕನ ಮೇಲೆ ಹಲ್ಲೆ ಆರೋಪ

ಕೊಪ್ಪಳ: ಅಮೆರಿಕ ಮತ್ತು ಇಸ್ರೇಲ್ ಕ್ಷಿಪಣಿ ದಾಳಿಯಲ್ಲಿ ಇರಾನ್ ಪರಮೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ಘಟನೆ ಜಾಗತಿಕ ಮಟ್ಟದಲ್ಲಿ ತೀವ್ರ ಪ್ರತಿಕ್ರಿಯೆ ಹುಟ್ಟಿಸಿದೆ. ದೇಶದ ಹಲವೆಡೆ ಪ್ರತಿಭಟನೆಗಳು ನಡೆದಿರುವ ನಡುವೆ, ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಸಾಮಾಜಿಕ ಜಾಲತಾಣದ ಪೋಸ್ಟ್ ವಿಚಾರವಾಗಿ ಹಲ್ಲೆ ಆರೋಪ ಕೇಳಿಬಂದಿದೆ.

ಅಯತೊಲ್ಲಾ ಅಲಿ ಖಮೇನಿ ಹತ್ಯೆ ಕುರಿತಾಗಿ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿದ್ದ ಚಂದ್ರಶೇಖರ ಎಂಬ ಯುವಕನ ಮೇಲೆ ಐದಾರು ಯುವಕರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಾಗಿದೆ. ಚಂದ್ರಶೇಖರ ಖರ್ಜೂರ ವ್ಯಾಪಾರಿಯಾಗಿದ್ದು, ವ್ಯಾಪಾರ ಮಾಡುತ್ತಿದ್ದ ವೇಳೆ ಏಕಾಏಕಿ ಬಂದ ಯುವಕರು “ನಮ್ಮ ಸಮಾಜದ ಬಗ್ಗೆ ಏಕೆ ಸ್ಟೋರಿ ಹಾಕಿದೆ” ಎಂದು ಪ್ರಶ್ನಿಸಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮನೆಗೆ ನುಗ್ಗಿ ಹೊಡೆಯುವ ಬೆದರಿಕೆ ಹಾಕಿದರೆಂಬ ಆರೋಪವೂ ಕೇಳಿಬಂದಿದ್ದು, ಭಯಗೊಂಡ ಚಂದ್ರಶೇಖರ ತಡರಾತ್ರಿ ಗಂಗಾವತಿ ನಗರ ಪೊಲೀಸ್ ಠಾಣೆಗೆ ತೆರಳಿ ಜೀವ ಭಯವಿದೆ ಎಂದು ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದಕ್ಕೂ ಮುನ್ನ ಖಮೇನಿ ಹತ್ಯೆ ಖಂಡಿಸಿ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು.

ಇರಾನ್‌ನ ಹೊಸ ಸರ್ವೋಚ್ಚ ನಾಯಕನಾಗಿ ಖಮೇನಿ ಪುತ್ರ ಮೊಜ್ತಬಾ ನೇಮಕ!

0

ಟೆಹ್ರಾನ್: ಇಸ್ರೇಲ್-ಅಮೆರಿಕದ ದಾಳಿ ಮಧ್ಯೆ ಇರಾನ್ ಹೊಸ ಸರ್ವೋಚ್ಚ ನಾಯಕನ ಆಯ್ಕೆ ಮಾಡಿದೆ.

ಮೊಜ್ತಬಾ ಖಮೇನಿ (56) ಅವರನ್ನು ತಜ್ಞರ ಸಭೆ ನೂತನ ಸರ್ವೋಚ್ಚ ನಾಯಕರಾಗಿ ನೇಮಕ ಮಾಡಿದ್ದು, ಅವರು ಅಲಿ ಖಮೇನಿ ಅವರ 2ನೇ ಪುತ್ರರಾಗಿದ್ದಾರೆ.

ಮೊಜ್ತಬಾ ಖಮೇನಿ ದೇಶದ ಆಡಳಿತದ ಮೇಲೆ ಪ್ರಮುಖ ನಿಯಂತ್ರಣ ವಹಿಸುತ್ತಿದ್ದಾರೆ ಮತ್ತು ದೀರ್ಘಕಾಲದ ನಾಯಕನಾಗಿ ಮುಂದುವರಿಯುವ ನಿರೀಕ್ಷೆಯಿದೆ. IRGC ಅವರ ಬೆಂಬಲದೊಂದಿಗೆ ಧರ್ಮಗುರುಗಳ ಒತ್ತಡದಿಂದ ಈ ಆಯ್ಕೆ ಸಾಧ್ಯವಾಗಿದೆ.

ತಂಡದೊಳಗೆ ಪ್ರಾಯೋಗಿಕ ಅನುಭವವಿರುವ ಮೊಜ್ತಬಾ, ತಂದೆ ಅಲಿ ಖಮೇನಿಯ ಸಮಯದಲ್ಲಿಯೂ ಸುಪ್ರೀಂ ಲೀಡರ್ ಕಚೇರಿಯ ಕಾರ್ಯ ನಿರ್ವಹಿಸುತ್ತಿದ್ದರು. ಇಸ್ಲಾಮಿಕ್ ಗಣರಾಜ್ಯವು ವಂಶಪಾರಂಪರ್ಯ ಆಡಳಿತವನ್ನು ವಿರೋಧಿಸಿದ್ದರೂ, ಈಗ ಮೊಜ್ತಬಾ ಹೊಸ ನಾಯಕನಾಗಿ ಸ್ಥಾನ ಪಡೆದಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಕಲ್ಲಂಗಡಿ‌ ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿ: ಚಾಲಕ ಗಂಭೀರ!

ದೊಡ್ಡಬಳ್ಳಾಪುರ:- ಚಾಲಕನ ನಿಯಂತ್ರಣ ತಪ್ಪಿ ಕಲ್ಲಂಗಡಿ‌ ತುಂಬಿಕೊಂಡು ಹೋಗುತ್ತಿದ್ದ ಕ್ಯಾಂಟರ್ ಪಲ್ಟಿ ಹೊಡೆದಿರುವ ಘಟನೆ ದೊಡ್ಡಬಳ್ಳಾಪುರದ ಮೇಷ್ಟ್ರು ಮನೆ ಸರ್ಕಲ್‌ ಬಳಿ ಜರುಗಿದೆ.

ಘಟನೆಯಲ್ಲಿ ಕ್ಯಾಂಟರ್ ಚಾಲಕ ವೇದಮೂರ್ತಿ (22) ಗಂಭೀರ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಚೆನೈನಿಂದ ದಾವಣಗೆರೆಗೆ ಕಲ್ಲಂಗಡಿ‌ ತುಂಬಿಕೊಂಡು ಕ್ಯಾಂಟರ್ ಹೋಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮೂರು ಡಿವೈಡರ್ ದಾಟಿ ಹಳ್ಳಕ್ಕೆ ಬಂದು ಬಿದ್ದಿದೆ. ಕ್ಯಾಂಟರ್ ಪಲ್ಟಿ ಹೊಡೆದ ಪರಿಣಾಮ ಚಾಲಕನಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ವಿದೇಶ ಪ್ರವಾಸ ಮುಗಿಸಿ ಕಾಂಗ್ರೆಸ್ ಶಾಸಕರು ವಾಪಸ್: ಒಬ್ಬೊಬ್ಬರು ಒಂದೊಂದು ಹೇಳಿಕೆ!?

ಬೆಂಗಳೂರು: ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪ್ರವಾಸ ಮುಗಿಸಿ ಕಾಂಗ್ರೆಸ್ ಶಾಸಕರು ಇಂದು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ವಿದೇಶ ಪ್ರವಾಸದ ಉದ್ದೇಶದ ಬಗ್ಗೆ ಭಿನ್ನ ಅಭಿಪ್ರಾಯಗಳು ಕೇಳಿಬಂದಿವೆ.

ಸಿರಗುಪ್ಪ ಶಾಸಕ ಬಿಎಂ ನಾಗರಾಜ್ ಮಾಧ್ಯಮಗಳೊಂದಿಗೆ ಮಾತನಾಡಿ, “ನಾವು ಕುಟುಂಬ ಸಮೇತ ಪ್ರವಾಸಕ್ಕೆ ಹೋಗಿದ್ದೆವು. ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ಅಧಿಕೃತ ಸರ್ಕಾರಿ ಪ್ರವಾಸವಾಗಿರಲಿಲ್ಲ. ಕೆಲವು ತೋಟಗಳಿಗೆ ಭೇಟಿ ನೀಡಿದ್ದೇವೆ. ಕೆಲ ಕಡೆಗಳಿಗೆ ಅವಕಾಶ ಸಿಗಲಿಲ್ಲ,” ಎಂದು ಸ್ಪಷ್ಟಪಡಿಸಿದರು. ರಾಜಕೀಯ ನಾಯಕರಿಂದ ಯಾವುದೇ ಕರೆ ಬಂದಿಲ್ಲ ಎಂದೂ ಹೇಳಿದರು.

ಇದಕ್ಕೆ ವಿರುದ್ಧವಾಗಿ ಜಗಳೂರು ಶಾಸಕ ದೇವೇಂದ್ರಪ್ಪ ಪ್ರತಿಕ್ರಿಯಿಸಿ, “ಪ್ರವಾಸದ ಜೊತೆಗೆ ಅಧ್ಯಯನವೂ ಮಾಡಿದ್ದೇವೆ. ಹೈನುಗಾರಿಕೆ, ಕಾನೂನು ಹಾಗೂ ಅಲ್ಲಿನ ವ್ಯವಸ್ಥೆಗಳ ಕುರಿತು ತಿಳಿದುಕೊಂಡಿದ್ದೇವೆ. ಆ ದೇಶಗಳ ಕೆಲವು ಮಾದರಿಗಳನ್ನು ನಮ್ಮ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ,” ಎಂದು ಹೇಳಿದರು. ರಾಜಕೀಯ ಚರ್ಚೆ ಈ ಪ್ರವಾಸದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಕೂಡ ಮಾತನಾಡಿ, “ಹೈನುಗಾರಿಕೆ ಮತ್ತು ರಸ್ತೆ ವ್ಯವಸ್ಥೆಗಳನ್ನು ನೋಡಲು ಹೋಗಿದ್ದೆವು. ಸರ್ಕಾರಕ್ಕೆ ಉತ್ತಮ ರಸ್ತೆ ನಿರ್ಮಾಣದ ಬಗ್ಗೆ ಸಲಹೆ ನೀಡುತ್ತೇವೆ. ರಾಜಕೀಯ ಇಲ್ಲಿ ಬಂದ ಮೇಲೆ ಮಾಡುತ್ತೇವೆ, ವಿದೇಶದಲ್ಲಿ ಅಲ್ಲ,” ಎಂದು ತಿಳಿಸಿದರು.

ಒಟ್ಟಿನಲ್ಲಿ, ವಿದೇಶ ಪ್ರವಾಸದ ಉದ್ದೇಶ ಕುರಿತು ಶಾಸಕರಿಂದಲೇ ವಿಭಿನ್ನ ಹೇಳಿಕೆಗಳು ಹೊರಬಿದ್ದಿರುವುದು ಚರ್ಚೆಗೆ ಕಾರಣವಾಗಿದೆ.

ಮೈಸೂರು! ನಂಜನಗೂಡು ದೇವಸ್ಥಾನದ ದಾಸೋಹ ಭವನದ ಬಳಿ ಮಾಂಸಾಹಾರ ಸೇವನೆ!

ಮೈಸೂರು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾದ ನಂಜನಗೂಡು ನಂಜುಂಡೇಶ್ವರ ದೇವಸ್ಥಾನದ ದಾಸೋಹ ಭವನದ ದ್ವಾರದ ಬಳಿ ಸ್ಥಳೀಯ ವ್ಯಾಪಾರಿಯೊಬ್ಬರು ಮಾಂಸಾಹಾರ ಸೇವಿಸಿರುವ ಘಟನೆ ಬೆಳಕಿಗೆ ಬಂದಿದೆ.

ಹೂವಿನ ವ್ಯಾಪಾರಿ ಪ್ರದೀಪ್ ಎಂಬಾತ ದೇವಸ್ಥಾನದ ಆವರಣದ ಸಮೀಪದಲ್ಲೇ ಮಾಂಸಾಹಾರ ಸೇವಿಸಿದ್ದಾನೆ ಎಂದು ತಿಳಿದುಬಂದಿದೆ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತಕ್ಷಣವೇ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಭದ್ರತಾ ಸಿಬ್ಬಂದಿ ಪ್ರದೀಪ್‌ಗೆ ತರಾಟೆ ತೆಗೆದುಕೊಂಡ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಘಟನೆ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಮಲ್ಪೆ ಮೀನುಗಾರರ ಮುಖಂಡನಿಗೆ ಚಾಕು ಇರಿತ: ಪ್ರೇಮ ಪ್ರಕರಣದ ರಾಜಿ ಪಂಚಾಯಿತಿ ವೇಳೆ ದುರಂತ!

ಉಡುಪಿ: ಪ್ರೇಮ ಪ್ರಕರಣದ ರಾಜಿ ಪಂಚಾಯ್ತಿ ವೇಳೆ ಮೀನುಗಾರರ ಮುಖಂಡನಿಗೆ ಚಾಕು ಇರಿದ ಘಟನೆ ಜಿಲ್ಲೆಯ ಮಲ್ಪೆಯಲ್ಲಿ ನಡೆದಿದೆ. ಮಂಜು ಕೊಳ ಯಾನೆ ಮಂಜುನಾಥ ಸಾಲಿಯಾನ್ ಗಾಯಗೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.

ಮಲ್ಪೆ ಮೂಲದ ಯುವಕ ಹಾಗೂ ಪಡುಬಿದ್ರಿ ಪಲಿಮಾರು ಭಾಗದ ಯುವತಿಯ ಪ್ರೇಮ ಸಂಬಂಧದ ಕುರಿತು ಮಾತುಕತೆ ನಡೆಸಲು ಯುವತಿಯ ಕಡೆಯವರು ಬಂದಿದ್ದರು. ಈ ವೇಳೆ ಉಂಟಾದ ವಾಗ್ವಾದ ತೀವ್ರಗೊಂಡು ಮಂಜು ಕೊಳ ಅವರಿಗೆ ಚಾಕು ಇರಿಯಲಾಗಿದೆ ಎಂದು ತಿಳಿದುಬಂದಿದೆ.

ಗಾಯಾಳುವನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆರೋಪಿಗಳನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಸದ್ಯ ಅವರು ಪೊಲೀಸ್ ವಶದಲ್ಲಿದ್ದಾರೆ. ಘಟನೆ ಸಂಬಂಧ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

error: Content is protected !!