Home Blog Page 86

೩೫ ಎಕರೆ ಜಾಗದಲ್ಲಿ ಗದಗದ ಭವ್ಯ ಬ್ಯುಸಿನೆಸ್ ಸೆಂಟರ್

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರದ ಹೃದಯ ಭಾಗದಲ್ಲಿರುವ ಸುಮಾರು ೩೫ ಎಕರೆ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಗದಗ-ಬೆಟಗೇರಿ ಬ್ಯುಸಿನೆಸ್ ಸೆಂಟರ್ ಯೋಜನೆಯ ಕಾಮಗಾರಿಗಳು ಅತ್ಯುತ್ತಮ ಗುಣಮಟ್ಟದಿಂದ ಕೂಡಿರಬೇಕು. ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಬಾರದು. ಯೋಜನೆಯ ಪ್ರತಿಯೊಂದು ಕಾಮಗಾರಿಯೂ ಜನರಿಗೆ ದೀರ್ಘಕಾಲ ಉಪಯೋಗವಾಗುವಂತಿರಬೇಕು ಎಂದು ಶಾಸಕ ಡಾ. ಎಚ್.ಕೆ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಹಾಗೂ ವಸ್ತು ಪ್ರದರ್ಶನ ಪ್ರಾಧಿಕಾರದ ಆಶ್ರಯದಲ್ಲಿ ಶನಿವಾರ ಜಿಲ್ಲಾಡಳಿತ ಭವನದಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ದ್ವಿತೀಯ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಬ್ಯುಸಿನೆಸ್ ಸೆಂಟರ್ ಕುರಿತು ಬಿಡ್‌ದಾರರು, ಉದ್ಯಮಿಗಳು, ವ್ಯಾಪಾರಸ್ಥರು ಹಾಗೂ ಹೂಡಿಕೆದಾರರೊಂದಿಗೆ ಸಮಗ್ರ ಚರ್ಚೆ ನಡೆಸಿದರು.

ಯೋಜನೆಗೆ ರೂಪಿಸಿರುವ ವಿನ್ಯಾಸದಂತೆ ಅತ್ಯಾಕರ್ಷಕ ಹಾಗೂ ಜನೋಪಯೋಗಿ ಕಟ್ಟಡ ನಿರ್ಮಾಣವಾಗಬೇಕು. ಸಾರ್ವಜನಿಕರಿಗೆ ದೀರ್ಘಕಾಲಿಕವಾಗಿ ಸದ್ಬಳಕೆಯಾಗುವ ರೀತಿಯಲ್ಲಿ ಮೂಲಸೌಕರ್ಯ ಕಲ್ಪಿಸಬೇಕು. ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಯೋಜನೆಯನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಬೇಕು ಎಂದರು.

ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಯೋಜನೆ ಅನುಷ್ಠಾನಗೊಳ್ಳುತ್ತಿರುವುದರಿಂದ ಬಿಡ್‌ದಾರರು ಕೇವಲ ಲಾಭದ ದೃಷ್ಟಿಯಿಂದ ಮಾತ್ರ ಯೋಜನೆಯಲ್ಲಿ ಭಾಗವಹಿಸದೆ ಸೇವಾ ಮನೋಭಾವದಿಂದ ಪಾಲ್ಗೊಳ್ಳಬೇಕು. ಸರ್ಕಾರ, ಸಾರ್ವಜನಿಕರು ಹಾಗೂ ಖಾಸಗಿ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ರೂಪುಗೊಳ್ಳುತ್ತಿರುವ ಈ ಯೋಜನೆಯ ಮೂಲ ಉದ್ದೇಶ ಜನಸಾಮಾನ್ಯರಿಗೆ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸುವುದಾಗಿದೆ ಎಂದು ಹೇಳಿದರು.

ಯೋಜನೆ ಕುರಿತು ಈಗಾಗಲೇ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿದೆ. ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಹಾಗೂ ವಸ್ತು ಪ್ರದರ್ಶನ ಪ್ರಾಧಿಕಾರವು ಸರ್ಕಾರದ ಅಧಿಕೃತ ಸಂಸ್ಥೆಯಾಗಿದ್ದು, ನಗರದ ಹೃದಯ ಭಾಗದಲ್ಲಿರುವ ಸುಮಾರು ೩೫ ಎಕರೆ ಭೂಮಿಯನ್ನು ಪ್ರಾಧಿಕಾರದ ಹೆಸರಿಗೆ ವರ್ಗಾಯಿಸಲಾಗಿದೆ. ಈ ಪ್ರದೇಶದಲ್ಲಿ ಅತ್ಯುತ್ತಮ ವಾಣಿಜ್ಯ ಕೇಂದ್ರ ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ಡಾ. ಎಚ್.ಕೆ. ಪಾಟೀಲ ವಿವರಿಸಿದರು.

ಹೂಡಿಕೆದಾರರು ಹಾಗೂ ಖಾಸಗಿ ಸಂಸ್ಥೆಗಳನ್ನು ಆಕರ್ಷಿಸುವ ಉದ್ದೇಶದಿಂದ Expression of Interest (EOI) ಆಹ್ವಾನಿಸಲಾಗಿದೆ. ವಾಣಿಜ್ಯ ಚಟುವಟಿಕೆಗಳಿಗೆ ಅತ್ಯಂತ ಸೂಕ್ತ ಸ್ಥಳವಾಗಿರುವ ಈ ಪ್ರದೇಶವನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಐತಿಹಾಸಿಕ ಗದಗಕ್ಕೆ ಹೊಸ ವಾಣಿಜ್ಯ ಗುರುತು

ಗದಗವು ಐತಿಹಾಸಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ ತನ್ನದೇ ಆದ ಮಹತ್ವ ಹೊಂದಿರುವ ನಗರವಾಗಿದೆ. ಹಿಂದಿನಿಂದಲೂ ಹತ್ತಿ ವಹಿವಾಟು ಸೇರಿದಂತೆ ವಿವಿಧ ವ್ಯಾಪಾರ ಚಟುವಟಿಕೆಗಳಿಗೆ ಗದಗ ಪ್ರಮುಖ ಕೇಂದ್ರವಾಗಿತ್ತು. ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣ ಚಳವಳಿಯಲ್ಲಿಯೂ ಗದಗ ಪ್ರಮುಖ ಪಾತ್ರ ವಹಿಸಿದೆ.

ಲಕ್ಕುಂಡಿ ಸೇರಿದಂತೆ ಹಲವು ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳನ್ನು ಹೊಂದಿರುವ ಗದಗ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ವಿಪುಲ ಅವಕಾಶಗಳಿವೆ. ಈ ಅವಕಾಶಗಳನ್ನು ಹೂಡಿಕೆದಾರರು ಹಾಗೂ ಸ್ಥಳೀಯ ಉದ್ಯಮಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಏಳು ಸೆಕ್ಟರ್‌ಗಳಲ್ಲಿ ಹಂತಹಂತವಾಗಿ ಅಭಿವೃದ್ಧಿ

ಬ್ಯುಸಿನೆಸ್ ಸೆಂಟರ್ ಯೋಜನೆಯನ್ನು ಒಟ್ಟು ಏಳು ಸೆಕ್ಟರ್‌ಗಳಾಗಿ ವಿಂಗಡಿಸಿ ಹಂತಹಂತವಾಗಿ ಅನುಷ್ಠಾನಗೊಳಿಸುವ ಉದ್ದೇಶ ಹೊಂದಲಾಗಿದೆ. ಯೋಜನೆಯಡಿ ಪಂಚತಾರಾ ಹೋಟೆಲ್, ಆಧುನಿಕ ವಾಣಿಜ್ಯ ಮಳಿಗೆಗಳು, ಸಭಾಂಗಣ, ಟೆಕ್ಸ್‌ಟೈಲ್ ಕೇಂದ್ರ, ಮಕ್ಕಳ ಮನರಂಜನಾ ಪ್ರದೇಶ, ಗಾಂಧಿ ಭವನ, ಆಕರ್ಷಕ ವೃತ್ತಗಳು, ಅಗಲವಾದ ರಸ್ತೆಗಳು ಹಾಗೂ ವ್ಯವಸ್ಥಿತ ಸಾರಿಗೆ ಸಂಪರ್ಕ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಯೋಜಿಸಲಾಗಿದೆ.

ನಗರದ ಜನರಿಗೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸುವ ವ್ಯಾಪಾರಸ್ಥರು, ಹೂಡಿಕೆದಾರರು ಮತ್ತು ಪ್ರವಾಸಿಗರಿಗೆ ಅನುಕೂಲವಾಗುವ ರೀತಿಯಲ್ಲಿ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಆಶಯ ಹೊಂದಲಾಗಿದೆ.

ವಿವಿಧ ಕ್ಷೇತ್ರಗಳ ವ್ಯಾಪಾರಸ್ಥರಿಗೆ ಅಗತ್ಯವಿರುವ ಸೌಲಭ್ಯಗಳ ಕುರಿತು ಸಲಹೆ ನೀಡಲು ಅವಕಾಶ ಕಲ್ಪಿಸಲಾಗಿದೆ. ವಿಶೇಷವಾಗಿ ಬಂಗಾರ ವ್ಯಾಪಾರಸ್ಥರು ಸೇರಿದಂತೆ ವಿವಿಧ ವ್ಯಾಪಾರ ವಲಯಗಳ ಪ್ರತಿನಿಧಿಗಳು ತಮ್ಮ ಅಗತ್ಯತೆಗಳನ್ನು ಲಿಖಿತವಾಗಿ ಸಲ್ಲಿಸಿದರೆ, ಅವುಗಳನ್ನು ಯೋಜನೆಯಲ್ಲಿ ಅಳವಡಿಸುವ ಸಾಧ್ಯತೆಗಳ ಕುರಿತು ಪರಿಶೀಲಿಸಲಾಗುವುದು ಎಂದರು.

ಹೂಡಿಕೆದಾರರು ಹಾಗೂ ವ್ಯಾಪಾರಸ್ಥರು ಸೆಪ್ಟೆಂಬರ್ ೧೦ರೊಳಗಾಗಿ ತಮ್ಮ ಅಗತ್ಯತೆಗಳು ಮತ್ತು ಸಲಹೆಗಳನ್ನು ಲಿಖಿತವಾಗಿ ಸಲ್ಲಿಸುವ ಮೂಲಕ ಯೋಜನೆಯ ಅನುಷ್ಠಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಡಾ. ಎಚ್.ಕೆ. ಪಾಟೀಲ ಮನವಿ ಮಾಡಿದರು.

ಗುಣಮಟ್ಟಕ್ಕೆ ಯಾವುದೇ ರಾಜಿ ಇಲ್ಲ: ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಯೋಜನೆಯ ಅನುಷ್ಠಾನದಲ್ಲಿ ಕಾನೂನು ಪಾಲನೆ ಹಾಗೂ ಗುಣಮಟ್ಟಕ್ಕೆ ಯಾವುದೇ ರಾಜಿ ಮಾಡಿಕೊಳ್ಳಲು ಅವಕಾಶವಿಲ್ಲ. ಯೋಜನೆ ಅಂತಿಮವಾಗಿ ರೂಪುಗೊಳ್ಳುವಾಗ ಈಗಾಗಲೇ ನಿರ್ಧರಿಸಿರುವ ಉದ್ದೇಶ ಹಾಗೂ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿರಬೇಕು ಎಂದರು.

ಸ್ಥಳೀಯ ವ್ಯಾಪಾರಸ್ಥರು ಹಾಗೂ ಹೂಡಿಕೆದಾರರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಯೋಜನೆಯಲ್ಲಿ ಪಾಲ್ಗೊಳ್ಳಬೇಕು. ಸ್ಥಳೀಯ ಉದ್ಯಮಿಗಳು ಅವಕಾಶವನ್ನು ಕೈಬಿಟ್ಟರೆ ಹೊರಗಿನಿಂದ ದೊಡ್ಡ ಪ್ರಮಾಣದ ಹೂಡಿಕೆದಾರರು ಬಂದು ಇಲ್ಲಿ ವ್ಯಾಪಾರ ಚಟುವಟಿಕೆ ನಡೆಸುವ ಸಾಧ್ಯತೆಯಿದೆ. ಈಗಾಗಲೇ ಕೆಲವು ವ್ಯಾಪಾರ ಚಟುವಟಿಕೆಗಳಲ್ಲಿ ಇಂತಹ ಅನುಭವವಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯರು ಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.

ಗದಗ ನಗರದ ಭವಿಷ್ಯದ ವಾಣಿಜ್ಯ ಬೆಳವಣಿಗೆಗೆ ಈ ಯೋಜನೆ ಮಹತ್ವದ ಹೆಜ್ಜೆಯಾಗಲಿದ್ದು, ಯೋಜನೆ ಪೂರ್ಣಗೊಂಡ ನಂತರ ವ್ಯಾಪಾರ, ಉದ್ಯೋಗ, ಹೂಡಿಕೆ, ಪ್ರವಾಸೋದ್ಯಮ ಹಾಗೂ ನಗರ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯುವ ನಿರೀಕ್ಷೆಯಿದೆ ಎಂದರು.

ಸಭೆಯಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಡಾ. ಎನ್.ಎಚ್. ನಾಗನೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಸಹಾಯಕ ಆಯುಕ್ತ ಗಂಗಪ್ಪ ಎಂ., ಬಸನಗೌಡ ಕೊಟೂರ, ರಾಜಾರಾಮ ಪವಾರ್, ಕೊಟ್ರೇಶ್ ವಿಭೂತಿ, ವಸಂತ ಮಡ್ಲೂರ, ಜಿ.ಜೆ. ರುದ್ರಣ್ಣಗೌಡ, ನಿಜಾಮುದ್ದೀನ್, ಜಂಟಿ ನಿರ್ದೇಶಕ (ಕೈಗಾರಿಕೆ) ಪ್ರಕಾಶ್, ಗೋಪಾಲ್ ಅಗರವಾಲ್, ಆಕಾಶ್ ಅಗರವಾಲ್, ನವೀನ್ ಸೇರಿದಂತೆ ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳು, ವ್ಯಾಪಾರಸ್ಥರು, ಸಣ್ಣ ಕಟ್ಟಡ ಹಾಗೂ ಬಡಾವಣೆ ನಿರ್ಮಾಣದಾರರು, ಹೂಡಿಕೆದಾರರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

ಗದಗ ನಗರದ ಹೃದಯ ಭಾಗದಲ್ಲಿರುವ ೩೫ ಎಕರೆ ಪ್ರದೇಶವನ್ನು ಕೇವಲ ವಾಣಿಜ್ಯ ಚಟುವಟಿಕೆಗಳಿಗೆ ಸೀಮಿತಗೊಳಿಸದೆ, ನಗರದ ಭವಿಷ್ಯದ ಬೆಳವಣಿಗೆಗೆ ಪೂರಕವಾಗುವ ಸಮಗ್ರ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಆಶಯವಿದೆ. ಸ್ಥಳೀಯ ವ್ಯಾಪಾರಸ್ಥರು ಹಾಗೂ ಹೂಡಿಕೆದಾರರು ತಮ್ಮ ಅಗತ್ಯತೆ ಮತ್ತು ಸಲಹೆಗಳನ್ನು ನೀಡುವ ಮೂಲಕ ಈ ಮಹತ್ವದ ಯೋಜನೆಯ ಭಾಗವಾಗಬೇಕು.

— ಡಾ. ಎಚ್.ಕೆ. ಪಾಟೀಲ, ಶಾಸಕ

ಕೆಪಿಎಂಸಿಯಿಂದ ಯೋಜನೆ ಪ್ರಸ್ತುತಿ

ಸಭೆಯಲ್ಲಿ ಕೆಪಿಎಂಸಿ ಸಂಸ್ಥೆಯ ಪ್ರತಿನಿಧಿಗಳು ಬ್ಯುಸಿನೆಸ್ ಸೆಂಟರ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಿದ್ಧಪಡಿಸಿರುವ ಯೋಜನೆಯ ಸಮಗ್ರ ರೂಪುರೇಷೆ, ಕಟ್ಟಡ ವಿನ್ಯಾಸ, ಮೂಲಸೌಕರ್ಯ, ವಿವಿಧ ಸೆಕ್ಟರ್‌ಗಳ ಅಭಿವೃದ್ಧಿ ಹಾಗೂ ಹಂತಹಂತವಾಗಿ ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.

ವಿದ್ಯಾರ್ಥಿ ಜೀವನವೇ ಭವಿಷ್ಯ ರೂಪಿಸುವ ಪ್ರಮುಖ ಹಂತ: ನಿಂಗಪ್ಪ ಕಟ್ಟಿಮನಿ

0

ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿ ಜೀವನವು ವ್ಯಕ್ತಿಯ ಉತ್ತಮ ಭವಿಷ್ಯವನ್ನು ರೂಪಿಸುವ ಅತ್ಯಂತ ಮಹತ್ವದ ಹಂತವಾಗಿದ್ದು, ಸತ್ಯ, ಪ್ರಾಮಾಣಿಕತೆ, ಶಿಸ್ತು, ದಯೆ, ಸಹಕಾರ ಹಾಗೂ ಗೌರವದಂತಹ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಬದುಕು ರೂಪಿಸಿಕೊಳ್ಳಬೇಕು ಎಂದು ಭಾರತೀಯ ಶ್ರಮಿಕ ಕಾರ್ಮಿಕ ಕರ್ಮಚಾರಿ ಮಹಾಸಂಘದ ಗದಗ ಜಿಲ್ಲಾ ಅಧ್ಯಕ್ಷ ನಿಂಗಪ್ಪ ಕಟ್ಟಿಮನಿ ಹೇಳಿದರು.

ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ. ೨ರಲ್ಲಿ ಗದಗ ಜಿಲ್ಲಾ ಶರಣ ಸಂಕುಲದ ಶರಣೆ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ‘ಅಮೃತ ಭೋಜನ–ಜ್ಞಾನ ಸಿಂಚನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೈತಿಕ ಮೌಲ್ಯಗಳು ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸುತ್ತವೆ. ಶರಣರ ವಚನಗಳು ಹಾಗೂ ಅವರ ಆದರ್ಶಗಳನ್ನು ಮಕ್ಕಳು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಮೂಲಕ ಆದರ್ಶಪ್ರಾಯ ವಿದ್ಯಾರ್ಥಿ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅತಿಥಿಯಾಗಿ ಆಗಮಿಸಿದ್ದ ಪ್ರಶಸ್ತಿ ವಿಜೇತ ಗಾಯಕಿ ಪದ್ಮಾ ಕಬಾಡಿ ಮಾತನಾಡಿ, ವಚನಗಳು ಹಾಡಲು ಸುಲಭವಾಗಿದ್ದು, ಅತ್ಯಂತ ಅರ್ಥಗರ್ಭಿತವಾಗಿವೆ. ಮಕ್ಕಳು ವಚನಗಳ ಅರ್ಥ ತಿಳಿದುಕೊಂಡು ಹಾಡುವ ರೂಢಿ ಬೆಳೆಸಿಕೊಳ್ಳಬೇಕು. ವಚನಗಳ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿ, ಕದಳಿಶ್ರೀ ವೇದಿಕೆ ವತಿಯಿಂದ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಸರ್ಕಾರಿ ಶಾಲೆಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಆಹ್ವಾನಿಸಿ, ಮಕ್ಕಳಿಗೆ ಸಿಹಿಭೋಜನ ಉಣಬಡಿಸುವುದು ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದರು. ಈ ಸೇವಾ ಕಾರ್ಯಕ್ಕೆ ಸಹಕರಿಸಿದ ಡಾ. ರಾಧಿಕಾ ಕುಲಕರ್ಣಿ, ಆಶಿಕಾ ಹಾಗೂ ಆಶಿಕ ಖತ್ರಿ, ಸುಮಾ ಪಾಟೀಲ ಮತ್ತು ವಾಣಿ ಅಬ್ಬಿಗೇರಿ (ಪಾಟೀಲ) ಅವರನ್ನು ಅಭಿನಂದಿಸಿದರು.

ಶಾಲೆಯ ಮುಖ್ಯೋಪಾಧ್ಯಾಯಿನಿ ಕಮಲಾಕ್ಷಿ ರೇಶ್ಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕದಳಿಶ್ರೀ ವೇದಿಕೆ ವತಿಯಿಂದ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಶಿಕ್ಷಣ ಪ್ರೇಮಿಗಳು ಸಿಹಿಭೋಜನ ಹಾಗೂ ಕಲಿಕಾ ಸಾಮಗ್ರಿಗಳೊಂದಿಗೆ ಸರ್ಕಾರಿ ಶಾಲೆಗೆ ಆಗಮಿಸಿ ಮಕ್ಕಳಿಗೆ ಉಪಯುಕ್ತ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ವಿದ್ಯಾರ್ಥಿಗಳಾದ ಅಮೃತಾ ಮರಾಠಿ, ಕವನಾ ಬರಡಿ ಹಾಗೂ ಸಿಂಧೂ ಹರ್ತಿ ವಚನ ಪ್ರಾರ್ಥನೆ ಸಲ್ಲಿಸಿದರು. ರೇಣುಕಾ ಪಾಟೀಲ ಹಾಗೂ ಸ್ನೇಹಾ ಜಡಿ ವಚನಗಳನ್ನು ಹಾಡಿದರು. ಎಸ್.ವಿ. ಇಂದಿರಾಬಾಯಿ ಸ್ವಾಗತಿಸಿದರು. ಪಿ.ಎಫ್. ನಾಗನೂರ ಪರಿಚಯಿಸಿದರು. ಗೌರಮ್ಮ ಕಮತರ ನಿರೂಪಿಸಿದರು. ಸಂಗಮ್ಮ ಅಲಗೂರ ವಂದಿಸಿದರು.

ಕಾರ್ಯಕ್ರಮದಲ್ಲಿ ಕಲ್ಪನಾ ಅರ್ಕಸಾಲಿ, ಹೊನ್ನಮ್ಮ ಹರಿಜನ, ಶಿಲ್ಪಾ ಕಮ್ಮಾರ, ಸಂಗೀತಾ ಬದಿ, ಗೀತಾ ಮಂಗಳೂರ, ದೀಪಾ ಬೆಟಗೇರಿ, ಲಕ್ಷ್ಮೀ ಜಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇನ್ಮುಂದೆ ಬೆಳಗ್ಗೆ 9ಕ್ಕೇ ಅಂಚೆ ಸೇವೆ ಆರಂಭ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಅಂಚೆ ವಿಭಾಗದ ವ್ಯಾಪ್ತಿಯಲ್ಲಿರುವ ಅಂಚೆ ಕಚೇರಿಗಳಲ್ಲಿ ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಏಕರೂಪದ ವ್ಯವಹಾರ ಸಮಯ ಜಾರಿಗೆ ತರಲಾಗಿದೆ ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ಎಸ್.ಎಸ್. ಶಿರಹಟ್ಟಿ ತಿಳಿಸಿದ್ದಾರೆ.

ಹೊಸ ವ್ಯವಸ್ಥೆಯಿಂದ ಸಾರ್ವಜನಿಕರು ಬೆಳಗ್ಗೆ 9 ಗಂಟೆಯಿಂದಲೇ ಅಂಚೆ ಕಚೇರಿಗಳಿಗೆ ಭೇಟಿ ನೀಡಿ ವಿವಿಧ ಅಂಚೆ ಹಾಗೂ ಹಣಕಾಸು ಸೇವೆಗಳನ್ನು ಪಡೆಯಬಹುದಾಗಿದೆ. ಉಳಿತಾಯ ಬ್ಯಾಂಕ್ (POSB) ವ್ಯವಹಾರಗಳು, ಸ್ಪೀಡ್ ಪೋಸ್ಟ್, ಪಾರ್ಸೆಲ್ ಸೇರಿದಂತೆ ವಿವಿಧ ಅಂಚೆ ಲೇಖನಗಳ ಬುಕ್ಕಿಂಗ್, ಇ-ಪಾವತಿ ಸೇವೆಗಳು, ಅಂಚೆ ಜೀವ ವಿಮೆ (PLI/RPLI) ಪ್ರೀಮಿಯಂ ಪಾವತಿ ಸೇರಿದಂತೆ ವಿವಿಧ ಸೇವೆಗಳು ನಿಗದಿತ ಸಮಯದಿಂದಲೇ ಲಭ್ಯವಾಗಲಿವೆ.

ಅಂಚೆ ಕಚೇರಿಗಳ ವ್ಯವಹಾರದ ಸಮಯವನ್ನು ಏಕರೂಪಗೊಳಿಸುವುದರಿಂದ ಸಾರ್ವಜನಿಕರು ತಮ್ಮ ಅಗತ್ಯದ ಅಂಚೆ ಸೇವೆಗಳನ್ನು ಸುಸಂಘಟಿತವಾಗಿ ಪಡೆದುಕೊಳ್ಳಲು ಅನುಕೂಲವಾಗಲಿದೆ. ಅಲ್ಲದೆ, ಅಂಚೆ ಸೇವೆಗಳ ಗುಣಮಟ್ಟ ಹಾಗೂ ದಕ್ಷತೆ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕರು ಹಾಗೂ ಅಂಚೆ ಇಲಾಖೆಯ ಗ್ರಾಹಕರು ಬೆಳಗ್ಗೆ 9 ಗಂಟೆಯಿಂದ ಲಭ್ಯವಾಗುವ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ಎಸ್.ಎಸ್. ಶಿರಹಟ್ಟಿ ಮನವಿ ಮಾಡಿದ್ದಾರೆ.

ಆ. 23ರಂದು ಕವಿಗೋಷ್ಠಿ, ಸಂಗೀತ, ಆಧ್ಯಾತ್ಮ ಚಿಂತನ

ವಿಜಯಸಾಕ್ಷಿ ಸುದ್ದಿ, ಗದಗ: ಮಣಕವಾಡದ ಮಹಿಮಾ ಪುರುಷ ಶ್ರೀ ಗುರು ಮೃತ್ಯುಂಜಯ ಮಹಾಸ್ವಾಮಿಗಳ ಸ್ಮರಣೋತ್ಸವ ಮಾಲಿಕೆ–೩೬೭ರ ಅಂಗವಾಗಿ ಕವಿಗೋಷ್ಠಿ, ಸಂಗೀತ ಹಾಗೂ ಆಧ್ಯಾತ್ಮ ಚಿಂತನ ಕಾರ್ಯಕ್ರಮವನ್ನು ಆ. ೨೩ರಂದು ಭಾನುವಾರ ಬೆಳಗ್ಗೆ ೧೦.೩೦ಕ್ಕೆ ನಗರದ ಮುನ್ಸಿಪಲ್ ಹೈಸ್ಕೂಲ್ ಪಕ್ಕದಲ್ಲಿರುವ ಶ್ರೀ ಗುರು ಮೃತ್ಯುಂಜಯ ಗುರುಕುಲ ಆಶ್ರಮದ ಸಭಾಭವನದಲ್ಲಿ ಆಯೋಜಿಸಲಾಗಿದೆ.

ಹಿರಿಯ ಸಾಹಿತಿ ಐ.ಕೆ. ಕಮ್ಮಾರ ಅಧ್ಯಕ್ಷತೆ ವಹಿಸುವರು. ವಿಶ್ರಾಂತ ಉಪನ್ಯಾಸಕ ವಿಜಯ ಮಹಾಂತ ದೇವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ನಾಗಾವಿಯ ಮೃತ್ಯುಂಜಯ ಹಟ್ಟಿ, ಸಂಭಾಪುರದ ರಾಯಪ್ಪ ನಾಗನೂರ, ಚಿಕ್ಕೋಪ್ಪದ ಶಿವಣ್ಣ ಒಡೆಯರ, ಹಿರೇಹಂದಿಗೋಳದ ಶಿವಶಂಕ್ರಪ್ಪ ಆರಟ್ಟಿ, ರಾಜಣಸಾ ಕಲಬುರ್ಗಿ ಹಾಗೂ ಎಚ್.ಎನ್. ಕುರಿ ಉಪಸ್ಥಿತರಿರುವರು.

ಬಸು ಹಿರೇಮಠ ಅವರಿಂದ ಸಂಗೀತ ಕಾರ್ಯಕ್ರಮ ಹಾಗೂ ಆಯ್ದ ೨೦ ಕಾಲೇಜು ವಿದ್ಯಾರ್ಥಿಗಳಿಂದ ಕವಿಗೋಷ್ಠಿ ನಡೆಯಲಿದೆ.

ಆಶ್ರಮದ ವಿದ್ಯಾರ್ಥಿಗಳಾದ ಆಲಮ್, ಅಸ್ಲಮ್ ಹಾಗೂ ಅಕ್ರಮ್ ಅವರು ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ದೇವಿಯರ ಜಾತ್ರೆ ಸಂಭ್ರಮ, ಸೌಹಾರ್ದದ ಹಬ್ಬ

0

ವಿಜಯಸಾಕ್ಷಿ ಸುದ್ದಿ, ಗದಗ: ಜಾತ್ರೆಗಳು ಪರಸ್ಪರ ಪ್ರೀತಿ, ಸೌಹಾರ್ದತೆ ಹಾಗೂ ಏಕತೆಯನ್ನು ಬೆಸೆಯುವ ಹಬ್ಬಗಳಾಗಿದ್ದು, ವಿಶೇಷವಾಗಿ ಗ್ರಾಮ ದೇವತೆಗಳ ಜಾತ್ರೆಗಳು ಸಡಗರ–ಸಂಭ್ರಮದ ಪ್ರತೀಕವಾಗಿವೆ. ಸದ್ಗುಣಗಳ ಬೆಳವಣಿಗೆ ಹಾಗೂ ದುರ್ಗುಣಗಳ ಅವನತಿಯೇ ಜಾತ್ರೆಗಳ ಪ್ರಮುಖ ಉದ್ದೇಶವಾಗಿದ್ದು, ಭಕ್ತರು ಜಾತ್ರೆಯ ನಿಜವಾದ ಮೌಲ್ಯಗಳನ್ನು ಅರಿತು ಭಾಗವಹಿಸಬೇಕು ಎಂದು ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಒಕ್ಕಲಗೇರಿ ಓಣಿಯ ಉಸುಗಿನಕಟ್ಟಿ ಬಳಿ ಗದಗ-ಬೆಟಗೇರಿ ಗ್ರಾಮ ದೇವತೆಗಳಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರುಗಮ್ಮ ದೇವಿಯರ ಹರಿ ಜಾತ್ರೋತ್ಸವದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಗ್ರಾಮಗಳ ರಕ್ಷಣೆ, ಕಳ್ಳಕಾಕರ ಹಾವಳಿ ತಡೆ ಹಾಗೂ ರೋಗ-ರುಜಿನಗಳಿಂದ ಜನರನ್ನು ರಕ್ಷಿಸುವ ಉದ್ದೇಶದಿಂದ ಹಿಂದಿನ ಕಾಲದಲ್ಲಿ ಜಾತ್ರೆಗಳು ಆರಂಭಗೊಂಡಿದ್ದವು. ಆಧುನಿಕ ಕಾಲಘಟ್ಟದಲ್ಲಿ ಅವುಗಳಿಗೆ ವೈಚಾರಿಕ ಹಾಗೂ ವೈಜ್ಞಾನಿಕ ದೃಷ್ಟಿಕೋನ ದೊರೆತಿದ್ದು, ಜಾತ್ರೆಗಳು ಹೊಸ ಸ್ವರೂಪ ಪಡೆದುಕೊಂಡಿವೆ ಎಂದರು.

ಹಿಂದೆ ಗ್ರಾಮ ದೇವತೆಗಳನ್ನು ವಿವಿಧ ಕುತಂತ್ರ ವಿದ್ಯೆಗಳ ಮೂಲಕ ಉಗ್ರ ಸ್ವರೂಪಕ್ಕೆ ತರುವ ಆಚರಣೆಗಳಿದ್ದವು. ಮಧುರೈ ಮೀನಾಕ್ಷಿ ಹಾಗೂ ಕೊಲ್ಲೂರು ಮೂಕಾಂಬಿಕೆ ದೇವಿಯರು ಉಗ್ರ ಸ್ವರೂಪದಲ್ಲಿದ್ದ ಸಂದರ್ಭದಲ್ಲಿ ಶ್ರೀ ಶಂಕರಾಚಾರ್ಯರು ಭಕ್ತಿ ಹಾಗೂ ಜ್ಞಾನದ ಮೂಲಕ ದೇವಿಯರನ್ನು ಸಮಾಧಾನಗೊಳಿಸಿ ಭಕ್ತರನ್ನು ಭಯಮುಕ್ತರನ್ನಾಗಿಸಿದ ಸಂಗತಿಗಳು ಹಲವು ಗ್ರಂಥಗಳಲ್ಲಿ ಉಲ್ಲೇಖವಾಗಿವೆ ಎಂದು ಹೇಳಿದರು.

ಜಾತ್ರೆಗಳು ಭಕ್ತಿ, ಸಡಗರ, ಸಂಭ್ರಮದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವ ವೇದಿಕೆಗಳಾಗಿವೆ. ಎಲ್ಲರ ಒಗ್ಗೂಡುವಿಕೆ ಹಾಗೂ ಒಕ್ಕಟ್ಟೇ ಜಾತ್ರೆಗಳ ಯಶಸ್ಸಿಗೆ ಪ್ರಮುಖ ಕಾರಣ. ಆದ್ದರಿಂದ ಸದ್ಭಕ್ತರು ಜಾತ್ರೆಗಳ ಹಿಂದಿರುವ ಮಹತ್ವವನ್ನು ಅರಿತು ಅದರಂತೆ ನಡೆದುಕೊಳ್ಳಬೇಕು ಎಂದರು.

ಬದುಕಿನಲ್ಲಿ ದೇವಾಲಯ ಸಂಸ್ಕೃತಿ ಹಾಗೂ ಮಠದ ಸಂಸ್ಕೃತಿ ಎಂಬ ಎರಡು ಪ್ರಮುಖ ಪರಂಪರೆಗಳಿವೆ. ದೇವಾಲಯ ಸಂಸ್ಕೃತಿಯಲ್ಲಿ ನಮಗೆ ಇಷ್ಟವಾದ ದೇವರನ್ನು ಪ್ರತಿಷ್ಠಾಪಿಸಿ ಆರಾಧಿಸುತ್ತೇವೆ. ಮಠದ ಸಂಸ್ಕೃತಿಯಲ್ಲಿ ಮಠಾಧೀಶರ ಜ್ಞಾನ ಹಾಗೂ ಅವರು ನಡೆಸಿಕೊಂಡು ಬರುವ ಪರಂಪರೆಗೆ ಅನುಗುಣವಾಗಿ ನಡೆಯುತ್ತೇವೆ. ಈ ಎರಡೂ ಸಂಸ್ಕೃತಿಗಳು ಬದುಕನ್ನು ಸುಧಾರಿಸಿ ಉನ್ನತಿಗೆ ಕೊಂಡೊಯ್ಯುವ ಮಾರ್ಗಗಳಾಗಿವೆ ಎಂದು ಶ್ರೀಗಳು ವಿವರಿಸಿದರು.

ಜಾತ್ರಾ ಸಮಿತಿ ಕಾರ್ಯಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ಮಾತನಾಡಿ, ಸುಮಾರು ಎಂಟು ದಿನಗಳ ಕಾಲ ನಡೆಯುವ ಹರಿ ಜಾತ್ರೆಯಲ್ಲಿ ಸದ್ಭಕ್ತರ ಸಹಭಾಗಿತ್ವ, ಮಹಿಳೆಯರ ಸಮರ್ಪಣೆ ಹಾಗೂ ಒಗ್ಗಟ್ಟು ವಿಶೇಷವಾಗಿದೆ. ಮುಂದಿನ ದಿನಗಳಲ್ಲಿ ಜಾತ್ರೆಯನ್ನು ಮತ್ತಷ್ಟು ವಿಜೃಂಭಣೆಯಿಂದ ನಡೆಸಲು ಎಲ್ಲರ ಸಹಕಾರ ಅಗತ್ಯ ಎಂದರು.

ಶ್ರೀ ಫಕ್ಕೀರೇಶ್ವರ ಮಹಾಸ್ವಾಮಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲೆಕ್ಕ ಪರಿಶೋಧಕ ಶಂಕ್ರಪ್ಪ ಕನೋಜ, ಐ.ಎಸ್. ಪೂಜಾರ, ವಸಂತ ಪಡಗದ, ಕೃಷ್ಣಾಪುರ, ಅಬ್ದುಲ್ ಮುನಾಫ ಮುಲ್ಲಾ, ನಗರಸಭಾ ಸದಸ್ಯ ಮಹಾಂತೇಶ ನಲವಡಿ ಸೇರಿದಂತೆ ಹಲವು ಗಣ್ಯರು ಮಾತನಾಡಿ, ಶ್ರೀ ದ್ಯಾಮವ್ವ ಹಾಗೂ ಶ್ರೀ ದುರುಗಮ್ಮ ದೇವಿಯರ ಹರಿ ಜಾತ್ರೋತ್ಸವದಿಂದ ಗದುಗಿನ ಕೀರ್ತಿ ಹೆಚ್ಚಿದೆ. ಈ ಭಾಗದ ಒಗ್ಗಟ್ಟು ಪ್ರೇರಣಾದಾಯಕವಾಗಿದ್ದು, ರಚನಾತ್ಮಕ ಕಾರ್ಯಗಳಿಗೆ ದಾನಿಗಳು ಸಹಕಾರ ನೀಡುವ ಸಂದೇಶವನ್ನು ಜಾತ್ರೆ ಸಾರುತ್ತಿದೆ. ಇಂತಹ ಚಟುವಟಿಕೆಗಳು ನಿರಂತರವಾಗಿ ನಡೆದರೆ ಯುವ ಪೀಳಿಗೆಗೆ ಸೂಕ್ತ ಮಾರ್ಗದರ್ಶನ ದೊರೆಯಲಿದೆ ಎಂದರು.

ಗದಗ ಆಧ್ಯಾತ್ಮ ವಿದ್ಯಾಶ್ರಮದ ಶ್ರೀ ನೀಲಮ್ಮತಾಯಿ ಅಸುಂಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟ್ರಸ್ಟ್ ಕಮಿಟಿ ಅಧ್ಯಕ್ಷ ಕೊಟ್ರಪ್ಪ ಕಮತರ ಅಧ್ಯಕ್ಷತೆ ವಹಿಸಿದ್ದರು.

ಪ್ರೀತಿ ವಿಶ್ವನಾಥಯ್ಯ ಶಿವಪ್ಪಯ್ಯನಮಠ, ಎಚ್.ಕೆ. ಮುಲ್ಲಾ, ಎಫ್.ವಿ. ಮರಿಗೌಡ್ರ, ಚಿದಾನಂದ ಕ್ಷತ್ರಿಯ, ವಿನೋದ ಮರಬದ, ಪ್ರಭು ಕಲಬಂಡಿ, ಬಸವರಾಜ ಗೂಳಪ್ಪ ಹೆರಕಲ್, ಸಂತೋಷ ಕಬಾಡಿ, ಶಂಕರ ಶಿದ್ದಿಂಗ, ಸೀತಾರಾಮ ಕದಾಂಪೂರ, ರಾಮಣ್ಣ ಬರಬಣ್ಣವರ, ಅಶ್ವಿನಿ ಅಭಿಷೇಕ ಕುಂದಗೋಳ, ಅಭಿಷೇಕ ಕುಂದಗೋಳ, ವಿರುಪಾಕ್ಷಪ್ಪ ಅಕ್ಕಿ, ಈಶ್ವರಪ್ಪ ಖ್ಯಾಡದ, ಮುತ್ತು ರೋಣದ, ಶೈಲಾ ತುಪ್ಪದ, ಶಿವಾನಂದ ಹೂಗಾರ, ನವೀನ ನಾಲ್ವಾಡ ಸೇರಿದಂತೆ ಹಲವಾರು ಗಣ್ಯರು, ದಾನಿಗಳು, ಯುವಕರು ಹಾಗೂ ಹಿರಿಯರು ಉಪಸ್ಥಿತರಿದ್ದರು.

ವಾಣಿ ಅಸುಂಡಿ ಸ್ವಾಗತಿಸಿದರು. ಬಾಹುಬಲಿ ಜೈನರ ನಿರೂಪಿಸಿದರು. ನಂತರ ಶಂಕ್ರಣ್ಣ ಸಂಕಣ್ಣವರ ನೇತೃತ್ವದ ಅರುಣೋದಯ ಕಲಾತಂಡದಿಂದ ಜೋಗತಿ ನೃತ್ಯ ಪ್ರದರ್ಶನ ನಡೆಯಿತು.

ಜಾತ್ರೆಯ ಸಂಭ್ರಮ ಕೇವಲ ಆಚರಣೆಗೆ ಸೀಮಿತವಾಗದೆ, ನಮ್ಮೊಳಗಿನ ಸದ್ಗುಣಗಳನ್ನು ಬೆಳೆಸುವ ಹಾಗೂ ದುರ್ಗುಣಗಳನ್ನು ದೂರ ಮಾಡುವ ಸಂಕಲ್ಪವಾಗಬೇಕು. ಎಲ್ಲರ ಒಗ್ಗಟ್ಟು, ಪ್ರೀತಿ ಮತ್ತು ಸೌಹಾರ್ದತೆಯೇ ಜಾತ್ರೆಯ ನಿಜವಾದ ಯಶಸ್ಸು.

— ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ

ಸೌಹಾರ್ದತೆಯೊಂದಿಗೆ ಈದ್ ಮಿಲಾದ್ ಆಚರಿಸಿ: ಸಿಪಿಐ ವಿಕಾಸ್ ಲಮಾಣಿ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಈದ್ ಮಿಲಾದ್ ಹಬ್ಬವನ್ನು ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯ ವಾತಾವರಣದಲ್ಲಿ ಆಚರಿಸಬೇಕು. ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಎಲ್ಲ ಸಮುದಾಯಗಳ ಜನರು ಪರಸ್ಪರ ಗೌರವ ಹಾಗೂ ಸಹಕಾರದೊಂದಿಗೆ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು ಎಂದು ಸಿಪಿಐ ವಿಕಾಸ್ ಲಮಾಣಿ ಹೇಳಿದರು.

ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಹಿನ್ನೆಲೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಹಬ್ಬದ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.

ಡಿವೈಎಸ್‌ಪಿ ಮಲ್ಲೇಶ್ ನಾಯ್ಕ್ ದೊಡ್ಮನಿ ಮಾತನಾಡಿ, ಪಟ್ಟಣದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರ ಜವಾಬ್ದಾರಿಯೂ ಆಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ಕೂಡಲೇ ಪೊಲೀಸರ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.

ಈದ್ ಮಿಲಾದ್ ಕುರಿತು ಮಾತನಾಡಿದ ಸಂಪಾದಕ ಎಂ. ಶಿವಮೂರ್ತಿ, ಪ್ರವಾದಿ ಮೊಹಮ್ಮದ್ ಅವರ ಜೀವನ ಹಾಗೂ ಸಂದೇಶಗಳು ಸಮಾಜಕ್ಕೆ ಶಾಂತಿ, ಸಹೋದರತೆ ಮತ್ತು ಮಾನವೀಯ ಮೌಲ್ಯಗಳನ್ನು ಸಾರುತ್ತವೆ. ಎಲ್ಲರೂ ಪರಸ್ಪರ ಪ್ರೀತಿ, ಗೌರವ ಹಾಗೂ ಸೌಹಾರ್ದತೆಯಿಂದ ಬದುಕುವ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸಲು ಸಹಕರಿಸಬೇಕು ಎಂದರು.

ಸಭೆಯಲ್ಲಿ ಪಿಎಸ್‌ಐ ನಾಗರತ್ನಮ್ಮ, ಕ್ರೈಂ ಪಿಎಸ್‌ಐ ಉಮಾಪತಿ ನಾಯ್ಕ, ಪುರಸಭೆ ಸದಸ್ಯರಾದ ತೆಲಿಗಿ ನೆಲ್ಲು ಇಸ್ಮಾಯಿಲ್ ಸಾಹೇಬ್, ಜೋಗಿ ಹನುಮಂತಪ್ಪ, ಕೆಜಿಎನ್ ಅಲ್ಲಾಭಕ್ಷಿ, ರಾಜೇಶ್ ಬ್ಯಾಡಗಿ, ದೀಪಕ್ ಕಠಾರಿ, ಸಿಖಂದರ್, ಗ್ಯಾರಂಟಿ ತಾಲೂಕು ಅಧ್ಯಕ್ಷ ಸೊನ್ನದ ಗುರು ಬಸವರಾಜ್, ತತ್ತಿ ಕಾಸಿಂ ಸಾಹೇಬ್, ಯಮನೂರು ಸಾಬ್, ದಾದಾಪೀರ್, ಎಣ್ಣೆ ಬಾಷಾ, ಬುಡೆನ್ ಸಾಬ್ ಅರಳಿಹಳ್ಳಿ, ಕರೀಂ ಸಾಬ್ ಬಲಹುಣಿಸಿ, ಬಾಬು ಪೇಂಟರ್, ಬ್ರೆಡ್ ನಜೀರ್ ಸಾಬ್, ವರದಿಗಾರ ಸರ್ದಾರ್ ಯಮನೂರಪ್ಪ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಹಾಗೂ ಯುವಕರು ಉಪಸ್ಥಿತರಿದ್ದರು.

ವಿವಿಧ ಸಮುದಾಯಗಳ ಮುಖಂಡರು ಹಾಗೂ ಸಾರ್ವಜನಿಕರು ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವ ಕುರಿತು ಚರ್ಚಿಸಿದರು. ಸಭೆ ಸೌಹಾರ್ದತೆ, ಸಹಬಾಳ್ವೆ ಹಾಗೂ ಶಾಂತಿಯ ಸಂದೇಶ ಸಾರುವ ಮೂಲಕ ಗಮನ ಸೆಳೆಯಿತು.

ಯುವ ಛಾಯಾಗ್ರಾಹಕ ನಾಗರಾಜ ಸೂರಣಗಿಗೆ ‘ಕೆಪಿಎ ಛಾಯಾಭೂಷಣ’ ಪ್ರಶಸ್ತಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಯುವ ಛಾಯಾಗ್ರಾಹಕ ಹಾಗೂ ಕಲಾವಿದ ನಾಗರಾಜ ಟಿ. ಸೂರಣಗಿ ಅವರು ಛಾಯಾಗ್ರಹಣ ಕ್ಷೇತ್ರ ಹಾಗೂ ಛಾಯಾಗ್ರಾಹಕರ ಸಂಘಟನೆಗಳಲ್ಲಿ ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಗುರುತಿಸಿ, ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ‘ಕೆಪಿಎ ಛಾಯಾಭೂಷಣ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬುಧವಾರ ಆಯೋಜಿಸಿದ್ದ 187ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ನಾಗರಾಜ ಸೂರಣಗಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ನಾಗರಾಜ ಸೂರಣಗಿ ಅವರು ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಗದಗ ಜಿಲ್ಲೆಯ ಛಾಯಾಗ್ರಾಹಕರು ಹಾಗೂ ಜಿಲ್ಲಾ ಮತ್ತು ತಾಲೂಕು ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳು, ಸದಸ್ಯರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

15 ವರ್ಷಗಳ ಬಳಿಕ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಮಹಿಳಾ ಡಬಲ್ಸ್‌ಗೆ ಪದಕ; ತ್ರಿಶಾ–ಗಾಯತ್ರಿ ಐತಿಹಾಸಿಕ ಸಾಧನೆ!

0

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತ್ರಿಶಾ ಜಾಲಿ–ಗಾಯತ್ರಿ ಗೋಪಿಚಂದ್ ಜೋಡಿ ಇತಿಹಾಸ ಬರೆದಿದೆ.

2026ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಮಹಿಳಾ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್‌ವರೆಗೆ ಮುನ್ನಡೆದ ಭಾರತೀಯ ಜೋಡಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.

ನವದೆಹಲಿ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ನಂ.1 ಹಾಗೂ ಹಾಲಿ ಚಾಂಪಿಯನ್ ಚೀನಾದ ಲಿಯು ಶೆಂಗ್‌ಶು–ಟಾನ್ ನಿಂಗ್ ಜೋಡಿಯನ್ನು ಎದುರಿಸಿದ ತ್ರಿಶಾ–ಗಾಯತ್ರಿ, ಆರಂಭದಲ್ಲೇ ಭರ್ಜರಿ ಆಟ ಪ್ರದರ್ಶಿಸಿತು.

ಮೊದಲ ಗೇಮ್‌ನಲ್ಲಿ ಭಾರತೀಯ ಜೋಡಿ ಚೀನಾದ ಅಗ್ರ ಶ್ರೇಯಾಂಕದ ಆಟಗಾರ್ತಿಯರಿಗೆ ಪ್ರಬಲ ಪೈಪೋಟಿ ನೀಡಿ 21-18 ಅಂತರದಲ್ಲಿ ಗೆಲುವು ಸಾಧಿಸಿತು. ಈ ಮೂಲಕ ಫೈನಲ್ ಪ್ರವೇಶದ ಭರವಸೆ ಮೂಡಿಸಿತು. ಆದರೆ ನಂತರ ಚೀನಾದ ಜೋಡಿ ತಮ್ಮ ಅನುಭವ ಹಾಗೂ ಆಕ್ರಮಣಕಾರಿ ಆಟದ ಮೂಲಕ ಪಂದ್ಯಕ್ಕೆ ಮರಳಿತು.

ಎರಡನೇ ಗೇಮ್‌ನಲ್ಲಿ ಲಿಯು ಶೆಂಗ್‌ಶು–ಟಾನ್ ನಿಂಗ್ 21-13 ಅಂತರದಲ್ಲಿ ಗೆದ್ದು ಪಂದ್ಯವನ್ನು ಸಮಬಲಗೊಳಿಸಿತು. ನಿರ್ಣಾಯಕ ಮೂರನೇ ಗೇಮ್‌ನಲ್ಲಿ ಚೀನಾದ ಜೋಡಿ ಸಂಪೂರ್ಣ ಹಿಡಿತ ಸಾಧಿಸಿ 21-8ರಲ್ಲಿ ಗೆಲುವು ದಾಖಲಿಸಿತು. 70 ನಿಮಿಷಕ್ಕೂ ಹೆಚ್ಚು ಕಾಲ ನಡೆದ ಪಂದ್ಯದಲ್ಲಿ ಚೀನಾದ ಜೋಡಿ 21-18, 13-21, 8-21 ಅಂತರದಲ್ಲಿ ಗೆದ್ದು ಫೈನಲ್‌ಗೆ ಪ್ರವೇಶಿಸಿತು.

15 ವರ್ಷಗಳ ಬಳಿಕ ಭಾರತಕ್ಕೆ ಮಹಿಳಾ ಡಬಲ್ಸ್ ಪದಕ:

ಸೆಮಿಫೈನಲ್‌ನಲ್ಲಿ ಸೋತರೂ ತ್ರಿಶಾ ಜಾಲಿ–ಗಾಯತ್ರಿ ಗೋಪಿಚಂದ್ ಜೋಡಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ. ವಿಶ್ವ ಚಾಂಪಿಯನ್‌ಶಿಪ್ ಮಹಿಳಾ ಡಬಲ್ಸ್‌ನಲ್ಲಿ ಭಾರತಕ್ಕೆ 15 ವರ್ಷಗಳ ಬಳಿಕ ಪದಕ ದೊರೆತಿದೆ.

ಇದಕ್ಕೂ ಮೊದಲು ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ 2011ರಲ್ಲಿ ಕಂಚಿನ ಪದಕ ಗೆದ್ದಿತ್ತು. ಇದೀಗ ತ್ರಿಶಾ–ಗಾಯತ್ರಿ ಆ ಸಾಧನೆಯನ್ನು ಪುನರಾವರ್ತಿಸಿ ಭಾರತದ ಮಹಿಳಾ ಡಬಲ್ಸ್‌ಗೆ ಮತ್ತೊಂದು ವಿಶ್ವ ಮಟ್ಟದ ಪದಕ ತಂದುಕೊಟ್ಟಿದ್ದಾರೆ.

ಕ್ವಾರ್ಟರ್‌ಫೈನಲ್‌ನಲ್ಲಿ ಬಿಗ್ ಗೆಲುವು:

ತ್ರಿಶಾ–ಗಾಯತ್ರಿ ಜೋಡಿಯ ವಿಶ್ವ ಚಾಂಪಿಯನ್‌ಶಿಪ್ ಅಭಿಯಾನವೂ ಗಮನಾರ್ಹವಾಗಿತ್ತು. ಕ್ವಾರ್ಟರ್‌ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಚೀನಾದ ಜಿಯಾ ಯಿ ಫ್ಯಾನ್–ಜಾಂಗ್ ಶು ಕ್ಸಿಯಾನ್ ಜೋಡಿಯನ್ನು ಎದುರಿಸಿದ ಭಾರತೀಯ ಆಟಗಾರ್ತಿಯರು ಮೊದಲ ಗೇಮ್‌ನಲ್ಲಿ 16-21ರಲ್ಲಿ ಸೋತರೂ, ನಂತರದ ಎರಡು ಗೇಮ್‌ಗಳಲ್ಲಿ 21-15, 21-13 ಅಂತರದಲ್ಲಿ ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸಿದ್ದರು. ಈ ಗೆಲುವಿನೊಂದಿಗೆ ಭಾರತಕ್ಕೆ ಪದಕ ಖಚಿತಪಡಿಸಿದ್ದರು.

ಇದಕ್ಕೂ ಮುನ್ನ ಜಪಾನ್‌ನ ಏಳನೇ ಶ್ರೇಯಾಂಕದ ರಿನ್ ಇವಾನಾಗಾ–ಕೀ ನಕಾನಿಶಿ ಜೋಡಿಯನ್ನು 21-16, 21-12 ಅಂತರದಲ್ಲಿ ಮಣಿಸಿ ಕ್ವಾರ್ಟರ್‌ಫೈನಲ್ ತಲುಪಿದ್ದರು.

ಸೆಮಿಫೈನಲ್‌ನಲ್ಲಿ ಫೈನಲ್‌ಗೇರಲು ಸಾಧ್ಯವಾಗದಿದ್ದರೂ, ವಿಶ್ವದ ಅಗ್ರ ಜೋಡಿಗೆ ಮೊದಲ ಗೇಮ್‌ನಲ್ಲೇ ಸೋಲುಣಿಸಿ ಗಮನ ಸೆಳೆದ ತ್ರಿಶಾ–ಗಾಯತ್ರಿ, ಅಂತಿಮವಾಗಿ ಐತಿಹಾಸಿಕ ಕಂಚಿನ ಪದಕದೊಂದಿಗೆ ವಿಶ್ವ ಚಾಂಪಿಯನ್‌ಶಿಪ್ ಅಭಿಯಾನ ಮುಗಿಸಿದ್ದಾರೆ.

ಶಿಸ್ತು, ಪರಿಶ್ರಮದಿಂದ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ: ಡಾ. ಅಪ್ಪಣ್ಣ ಹಂಜೆ

0

ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾಲಯವೆಂದರೆ ಕೇವಲ ಪಾಠ ಕಲಿಸುವ ಕೇಂದ್ರವಲ್ಲ; ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಪ್ರತಿಭಾ ಅನಾವರಣ ಹಾಗೂ ಭವಿಷ್ಯ ನಿರ್ಮಾಣಕ್ಕೆ ದಾರಿದೀಪವಾಗಿರುವ ಜ್ಞಾನದೇಗುಲ. ವಿದ್ಯಾರ್ಥಿಗಳು ಮತ್ತು ವಿದ್ಯಾಲಯದ ನಡುವಿನ ಆತ್ಮೀಯ ಹಾಗೂ ವಿಶ್ವಾಸಪೂರ್ಣ ಸಂಬಂಧವು ಶೈಕ್ಷಣಿಕ ಪ್ರಗತಿಯ ಜೊತೆಗೆ ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಪ್ರಾಂಶುಪಾಲ ಡಾ. ಅಪ್ಪಣ್ಣ ಹಂಜೆ ಹೇಳಿದರು.

ಹುಲಕೋಟಿಯ ಶ್ರೀ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2026–27ನೇ ಸಾಲಿನಲ್ಲಿ ಪ್ರವೇಶ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ದಿಕ್ಸೂಚಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ, ಅವರ ಪ್ರತಿಭೆ ಹಾಗೂ ಆಸಕ್ತಿಗಳನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡುವುದು ವಿದ್ಯಾಲಯದ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.

ಕಾರ್ಯಕ್ರಮದ ಸಂಘಟಕ ಹಾಗೂ ಸಾಂಸ್ಕೃತಿಕ ವಿಭಾಗದ ಸಂಯೋಜಕ ರಮೇಶ ಹುಲಕುಂದ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಲಯವನ್ನು ತಮ್ಮದೇ ಕುಟುಂಬವೆಂದು ಭಾವಿಸಿ ಶಿಸ್ತು, ಸಮಯಪಾಲನೆ, ಉತ್ತಮ ನಡತೆ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಕುಮಾರಿ ಪ್ರಜ್ಞಾ ವರ್ಣೇಕರ ಪ್ರಾರ್ಥಿಸಿದರು. ಕಲಾ ವಿಭಾಗದ ಮುಖ್ಯಸ್ಥೆ ಮಹಾನಂದ ಹಿರೇಮಠ ಸ್ವಾಗತಿಸಿದರು. ಐಕ್ಯುಎಸಿ ಸಹ ಸಂಯೋಜಕ ಡಾ. ಮಂಜುನಾಥ ತ್ಯಾಲಗಡಿ, ಉದ್ಯೋಗ ಮಾಹಿತಿ ಕೋಶದ ಸಂಯೋಜಕ ಡಾ. ಶ್ರೀಶವಿಠ್ಠಲ ಡಿ., ಎನ್‌ಎಸ್‌ಎಸ್ ಘಟಕದ ಸಂಯೋಜಕ ವಿಜಯಕುಮಾರ ಎಸ್., ಹೊಸ ದಿಗಂತ ಕಾರ್ಯಕ್ರಮದ ಸಂಯೋಜಕ ಹುಸೇನಭಾಷಾ, ಶಿಸ್ತು ಸಮಿತಿ ಸಂಯೋಜಕ ಮಹಾಂತೇಶ ಹಾಗೂ ರೆಡ್‌ಕ್ರಾಸ್ ಸಂಯೋಜಕ ಭೀಮೇಶ ಕಾಲೇಜಿನ ವಿವಿಧ ಶೈಕ್ಷಣಿಕ ಹಾಗೂ ಸಹಪಠ್ಯ ಘಟಕಗಳ ಕುರಿತು ಪರಿಚಯಿಸಿದರು.

ಆಂತರಿಕ ಪರೀಕ್ಷಾ ವಿಭಾಗದ ಸಂಯೋಜಕ ಮನೋಜಕುಮಾರ ಜೋತಾವರ ವಂದಿಸಿದರು. ರೋವರ್ಸ್–ರೇಂಜರ್ಸ್ ಸಂಯೋಜಕಿ ಸಾವಿತ್ರಿ ಟಿ. ಕಾರ್ಯಕ್ರಮ ನಿರ್ವಹಿಸಿದರು.

ಮಾದಕ ವಸ್ತುಗಳ ದಾಸರಾಗಬೇಡಿ: ಡಾ. ಎಚ್.ವಿ. ಡಂಬಳ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಮಾದಕ ವಸ್ತು ಸೇವನೆ ನಾಗರಿಕ ಸಮಾಜದ ದುರಂತವಾಗಿದ್ದು, ನಾಡಿನ ಆಸ್ತಿ ಎಂದು ಕರೆಯಲ್ಪಡುವ ಯುವಕರೇ ಇದರ ಕರಾಳ ಛಾಯೆಗೆ ಹೆಚ್ಚು ಸಿಲುಕುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಾದಕ ವಸ್ತುಗಳ ಸೇವನೆ ಒಂದು ರೀತಿಯ ಮಾನಸಿಕ ದಾಸ್ಯವಾಗಿದ್ದು, ವಿದ್ಯಾರ್ಥಿಗಳು ಇದರ ಆಕರ್ಷಣೆಗೆ ಒಳಗಾಗಬಾರದು ಎಂದು ಸೋನಿಯಾ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಎಚ್.ವಿ. ಡಂಬಳ ಹೇಳಿದರು.

ಸಂಗೊಳ್ಳಿ ರಾಯಣ್ಣ ನಗರದ ಸೋನಿಯಾ ಪದವಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪದ ವತಿಯಿಂದ ‘ಮಾದಕ ವಸ್ತು ದುರ್ಬಳಕೆ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ’ ಕುರಿತು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಅಪಾರ ಶಕ್ತಿಯಿದ್ದು, ದೇಶದ ಸಮಗ್ರ ಚಿತ್ರಣವನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಒಮ್ಮೆ ಮಾದಕ ವಸ್ತುಗಳ ಆಕರ್ಷಣೆಗೆ ಒಳಗಾದರೆ ಅದರಿಂದ ಹೊರಬರುವುದು ಕಷ್ಟ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಜವಾಬ್ದಾರಿಯಿಂದ ಬಳಸಬೇಕು. ಆರೋಗ್ಯಕ್ಕೆ ಆದ್ಯತೆ ನೀಡಿ, ನೆರೆಹೊರೆಯವರಲ್ಲಿಯೂ ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸಬೇಕು ಎಂದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಮಾದಕ ವಸ್ತುಗಳ ದುರ್ಬಳಕೆ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ದೊಡ್ಡ ಸಮಸ್ಯೆಯಾಗಿದೆ. ಇದರ ಹಿಂದೆ ದೊಡ್ಡ ಮಾಫಿಯಾ ಕಾರ್ಯನಿರ್ವಹಿಸುತ್ತಿದೆ. ಯುವಶಕ್ತಿ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದರ ಕುರಿತು ಆತ್ಮಾವಲೋಕನ ಅಗತ್ಯ. ವಿದ್ಯಾರ್ಥಿಗಳು ಯಾವುದೇ ಆಕರ್ಷಣೆ ಅಥವಾ ಒತ್ತಡಕ್ಕೆ ಒಳಗಾಗಿ ಮಾದಕ ವಸ್ತುಗಳ ದಾಸರಾಗಬಾರದು ಎಂದರು.

ಧಾರವಾಡದ ಡಿಮಾನ್ಸ್‌ನ ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಪಾಟೀಲ ಉಪನ್ಯಾಸ ನೀಡಿ, ಮಾದಕ ವಸ್ತುಗಳ ದುರಭ್ಯಾಸವು ದಾರಿತಪ್ಪಿದ ವರ್ತನೆಯಾಗಿದೆ. ಅರೆಕ್ಷಣದ ಥ್ರಿಲ್ ಹಾಗೂ ಸಹವಾಸದೋಷದಿಂದ ವಿದ್ಯಾರ್ಥಿಗಳು ಮಾದಕ ವಸ್ತು ಸೇವನೆಗೆ ಬಲಿಯಾದರೆ ಅನೇಕ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಆರೋಗ್ಯಪೂರ್ಣ ಜೀವನ ನಡೆಸಬೇಕು ಎಂದರು.

ಪ್ರಾಚಾರ್ಯ ಡಾ. ಪ್ರಕಾಶ ಜೋಗಿನ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಮಾದಕ ವಸ್ತು ಸೇವನೆಯ ದುರಭ್ಯಾಸಕ್ಕೆ ಬಲಿಯಾಗದೆ ಆತ್ಮಸಾಕ್ಷಿಗನುಗುಣವಾಗಿ ಆರೋಗ್ಯಕರ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಪ್ರೊ. ಶಾಂಭವಿ ನರಗುಂದ ಪ್ರಾರ್ಥಿಸಿದರು. ಪ್ರೊ. ಮಲ್ಲಪ್ಪ ಭೈರಪ್ಪನವರ ಸ್ವಾಗತಿಸಿದರು. ಕ.ವಿ.ವ. ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಗಂಗಾಧರ ಮರಳಿಹಳ್ಳಿ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರೊ. ಯಾಸ್ಮಿನ್ ಬೀಳಗಿ ವಂದಿಸಿದರು. ಪ್ರೊ. ಲಕ್ಷ್ಮೀ ಕುರಿ ನಿರೂಪಿಸಿದರು. ಡಾ. ಎಚ್.ವಿ. ಡಂಬಳ ಸೇರಿದಂತೆ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.