Home Blog Page 89

ಶಕ್ತಿ ಯೋಜನೆ ಯಶಸ್ವಿ ಜಾರಿಗೆ ಶ್ರಮಿಸಿದ ಅಧಿಕಾರಿಗೆ ಗೌರವ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ ಗದಗ ವಿಭಾಗೀಯ ಕಚೇರಿಯ ಸಹಾಯಕ ಸಂಚಾರ ವ್ಯವಸ್ಥಾಪಕರಾಗಿ ವರ್ಗಾವಣೆಗೊಂಡಿರುವ ಸವಿತಾ ಆದಿ ಅವರನ್ನು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು.

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳ ಮಾತನಾಡಿ, ಸವಿತಾ ಆದಿ ಅವರು ಲಕ್ಷ್ಮೇಶ್ವರ ಘಟಕದಲ್ಲಿ ಆಡಳಿತಾತ್ಮಕ ದಕ್ಷತೆ, ಕಾರ್ಯನಿಷ್ಠೆ ಹಾಗೂ ಸಾರ್ವಜನಿಕ ಸ್ನೇಹಿ ಸೇವೆಯ ಮೂಲಕ ಉತ್ತಮ ಹೆಸರು ಗಳಿಸಿದ್ದಾರೆ ಎಂದು ಶ್ಲಾಘಿಸಿದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಮಹಿಳಾ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಸೇವೆ ಒದಗಿಸಿರುವುದು ಶ್ಲಾಘನೀಯವಾಗಿದೆ. ಅವರ ಸೇವಾ ಮನೋಭಾವ ಇತರ ಅಧಿಕಾರಿಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಲಕ್ಷ್ಮೇಶ್ವರ ಕೆಎಸ್‌ಆರ್‌ಟಿಸಿ ಘಟಕದ ನೂತನ ವ್ಯವಸ್ಥಾಪಕರಾಗಿ ಅಧಿಕಾರ ಸ್ವೀಕರಿಸಿರುವ ಪವಿತ್ರಾ ಪಿ. ಅವರನ್ನು ಸಮಿತಿ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಸಾರ್ವಜನಿಕ ಸ್ನೇಹಿ ಆಡಳಿತಕ್ಕೆ ಆದ್ಯತೆ ನೀಡಿ ಶಕ್ತಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಶ್ರಮಿಸುವಂತೆ ಶುಭ ಹಾರೈಸಲಾಯಿತು.

ಕಾರ್ಯಕ್ರಮದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು, ತಾಲೂಕು ಪಂಚಾಯಿತಿ ಅಧಿಕಾರಿಗಳು, ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಆ. 8ರಂದು ಗದಗದಲ್ಲಿ ಸಂಗೀತ ಸಂಜೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗಾನಲಹರಿ ಸಾಂಸ್ಕೃತಿಕ ಕಲಾ ಸಂಸ್ಥೆ, ಹಾವೇರಿ ಹಾಗೂ ಅಜೆಯ ಮ್ಯೂಜಿಕಲ್ ಅಕಾಡೆಮಿ, ಕೊಪ್ಪಳ ಇವರ ಸಹಯೋಗದಲ್ಲಿ ಆಗಸ್ಟ್ 8ರಂದು ಸಂಜೆ ನಗರದ ಭೀಮಸೇನ ಜೋಷಿ ರಂಗಮಂದಿರದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕನ್ನಡ ಚಿತ್ರರಂಗದ ಹಿರಿಯ ನಟ ಡಾ. ಶ್ರೀನಾಥ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷೆ ಶೀಲಾ ಪಾಟೀಲ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಸಾನ್ನಿಧ್ಯವನ್ನು ಪ.ಪೂ. ಡಾ. ಕಲ್ಲಯ್ಯಜ್ಜನವರು ಹಾಗೂ ಪ.ಪೂ. ಶಿವಶಾಂತವೀರ ಶರಣರು ವಹಿಸಲಿದ್ದು, ಫೀರಸಾಬ್ ಕೌತಾಳ್ ಉದ್ಘಾಟನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೀಲಾ ವೀರನಗೌಡ ಪಾಟೀಲ ವಹಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಶಾಸಕರಾದ ಡಾ. ಎಚ್.ಕೆ. ಪಾಟೀಲ, ಜಿ.ಎಸ್. ಪಾಟೀಲ, ಸಿ.ಸಿ. ಪಾಟೀಲ, ಮುಖಂಡರಾದ ಸಚಿನ್ ಪಾಟೀಲ, ರಾಜಶೇಖರ ಕಲ್ಲೂರ, ಡಾ. ಬಸವರಾಜ ಬಳ್ಳಾರಿ, ಗವಿಸಿದ್ದಪ್ಪ ಪಲ್ಲೇದ, ಡಾ. ಶ್ರೀಧರ ಕುರಡಗಿ, ಸಿದ್ದರಾಮೇಶ್ವರ ಗಡೇದ, ವಿಜಯಕುಮಾರ ಗಡ್ಡಿ, ಇಮಾಮ್ ಮೊರಬದ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅಮರ ಜವಳಿ ಹಾಗೂ ಶಶಾಂಕ್ ಗಜಾಕೋಶ ಉಪಸ್ಥಿತರಿದ್ದರು.

ಗದಗ ಜಿಲ್ಲೆಗೆ ಉಪಲೋಕಾಯುಕ್ತ ನ್ಯಾ. ಫಣೀಂದ್ರ ಭೇಟಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಆಗಸ್ಟ್ 6 ಮತ್ತು 7ರಂದು ಗದಗ ಜಿಲ್ಲೆಗೆ ಪ್ರವಾಸ ಕೈಗೊಳ್ಳಲಿದ್ದು, ಈಗಾಗಲೇ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿಗೆ ಸಂಬಂಧಿಸಿದ ಸಭೆ ನಡೆಸಲಿದ್ದಾರೆ.

ಆಗಸ್ಟ್ 6ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಹಾಗೂ ಮಧ್ಯಾಹ್ನ 2.30ರಿಂದ ಸಂಜೆ 5ರವರೆಗೆ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಪ್ರಕರಣಗಳ ವಿಚಾರಣೆ ನಡೆಯಲಿದೆ. ಈ ಸಂದರ್ಭದಲ್ಲಿ ಹೊಸ ದೂರುಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಲೋಕಾಯುಕ್ತ ಕಚೇರಿ ಸ್ಪಷ್ಟಪಡಿಸಿದೆ.

ಆಗಸ್ಟ್ 7ರಂದು ಉಪಲೋಕಾಯುಕ್ತರು ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ಹಾಗೂ ವಿಚಾರಣೆ ನಡೆಸಲಿದ್ದಾರೆ ಎಂದು ಕರ್ನಾಟಕ ಲೋಕಾಯುಕ್ತ ಗದಗ ಕಚೇರಿಯ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಡರಕಟ್ಟಿ ರೈತರ ಗೋಳು ಕೇಳಿದ ಜಿಲ್ಲಾಡಳಿತ!

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸುಮಾರು 15-20 ವರ್ಷಗಳಿಂದ ಚರಂಡಿ ನೀರು ನಿಂತು 160ಕ್ಕೂ ಹೆಚ್ಚು ಎಕರೆ ಫಲವತ್ತಾದ ಕೃಷಿಭೂಮಿ ಹಾಳಾಗಿರುವ ಅಡರಕಟ್ಟಿ ಗ್ರಾಮದ ಸಮಸ್ಯೆಗೆ ಕೊನೆಗೂ ಜಿಲ್ಲಾಡಳಿತ ಸ್ಪಂದಿಸಿದೆ. ರೈತರು ಒಂದು ವಾರದ ಗಡುವು ನೀಡಿ ಹೋರಾಟದ ಎಚ್ಚರಿಕೆ ನೀಡಿದ ಬೆನ್ನಲ್ಲೇ ಗದಗ ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಆಡಳಿತಾಧಿಕಾರಿ ಗಂಗಪ್ಪ ಎಂ. ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಅವರೊಂದಿಗೆ ಗದಗ ನಾಕಾ ಬಳಿಯ ಲಂಡಿ ಹಳ್ಳದಿಂದ ಹರಿದುಬರುವ ಚರಂಡಿ ನೀರನ್ನು ವೀಕ್ಷಿಸಿದ ಉಪವಿಭಾಗಾಧಿಕಾರಿಗಳು, ಬಳಿಕ ಅಡರಕಟ್ಟಿ ಗ್ರಾಮಕ್ಕೆ ತೆರಳಿ ಜವುಳು ಬೆಳೆದು ನಿರುಪಯುಕ್ತವಾಗಿರುವ ಕೃಷಿಭೂಮಿಗಳನ್ನು ಪರಿಶೀಲಿಸಿ ರೈತರ ಅಹವಾಲು ಆಲಿಸಿದರು.

ರೈತರು, ತಾತ್ಕಾಲಿಕ ಕಾಮಗಾರಿ ಬದಲಾಗಿ ಶಾಶ್ವತ ಪರಿಹಾರ ಕಲ್ಪಿಸಬೇಕು. ಲಂಡಿ ಹಳ್ಳದಿಂದ ಪೈಪ್‌ಲೈನ್ ಅಳವಡಿಸಿ ಚರಂಡಿ ನೀರನ್ನು ಡಬ್ಬಾಡುಬ್ಬಿ ಹಳ್ಳಕ್ಕೆ ಹರಿಸುವ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಹನುಮಂತ ನಂದೆಣ್ಣವರ ಹಾಗೂ ರೈತರಾದ ಸಿದ್ದಣ್ಣ ಹವಳದ, ಮುತ್ತಣ್ಣ ಗಡೆಪ್ಪನವರ, ಚನ್ನಬಸಪ್ಪ ಹಳೆಮನಿ, ಗಂಗನಗೌಡ್ರ ಪಾಟೀಲ, ಯಲ್ಲಪ್ಪ ಗಡೆಪ್ಪನವರ, ಮಾಂತೇಶ ಲಿಂಗಶೆಟ್ಟಿ, ಮೌನೇಶ ಗಡೆಪ್ಪನವರ, ಚಂದ್ರು ಮಾಗಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಆಗಸ್ಟ್ 16ರ ನಂತರ ಸಂಬಂಧಿಸಿದ ಅಧಿಕಾರಿಗಳು, ಇಂಜಿನಿಯರ್‌ಗಳು ಹಾಗೂ ರೈತರ ಸಭೆ ನಡೆಸಿ ಎರಡು-ಮೂರು ಶಾಶ್ವತ ಯೋಜನೆಗಳ ರೂಪುರೇಷೆ ಸಿದ್ಧಪಡಿಸಿ. ಅಮೃತ್-2 ಯೋಜನೆಯಡಿ ಸಾಧ್ಯವಾದರೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ರೈತರ ಸಮಸ್ಯೆ ಬಗೆಹರಿಸಲು ವಿಶೇಷ ಕಾಳಜಿ ವಹಿಸುತ್ತೇವೆ.”

ಗಂಗಪ್ಪ ಎಂ., ಉಪವಿಭಾಗಾಧಿಕಾರಿ

ಕಾಂಗ್ರೆಸ್ ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು: ಶಾಸಕ ಸಿ.ಸಿ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಕಾಂಗ್ರೆಸ್‌ನಲ್ಲಿ ದಿನದಿಂದ ದಿನಕ್ಕೆ ಒಳಬೇಗುದಿ ಹೆಚ್ಚಾಗುತ್ತಿದ್ದು, ಸಂಪುಟ ವಿಸ್ತರಣೆಯ ಬಳಿಕ ಅಸಮಾಧಾನ ತಾರಕಕ್ಕೇರಿದೆ. ಸರ್ಕಾರ ಯಾವಾಗ ಬೇಕಾದರೂ ಪತನಗೊಂಡು ಚುನಾವಣೆ ಎದುರಾಗುವ ಸಾಧ್ಯತೆ ಇದೆ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಭವಿಷ್ಯ ನುಡಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಪ್ರಮಾಣವಚನ ಸಮಾರಂಭಕ್ಕೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರಾಗಿರುವುದು ಕಾಂಗ್ರೆಸ್‌ನ ಒಳಜಗಳಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್‌ನಲ್ಲಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ನಾಲ್ಕು ಬಣಗಳು ಸೃಷ್ಟಿಯಾಗಿದ್ದು, ಸರ್ಕಾರವೇ ಸಮ್ಮಿಶ್ರ ಸರ್ಕಾರದಂತೆ ಕಾಣುತ್ತಿದೆ ಎಂದು ಟೀಕಿಸಿದರು.

ಸಚಿವ ಸಂಪುಟದ ಪಟ್ಟಿಯಲ್ಲಿ ಪ್ರಕಟವಾಗಿದ್ದ ಇಬ್ಬರ ಹೆಸರನ್ನು ಕೈಬಿಟ್ಟು ಮತ್ತೊಬ್ಬರಿಗೆ ಅವಕಾಶ ನೀಡಲಾಗಿದೆ. ಈ ಬದಲಾವಣೆ ಯಾರ ಒತ್ತಡಕ್ಕೆ ನಡೆದಿದೆ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಮಹಿಳಾ ಪ್ರಾತಿನಿಧ್ಯದ ಕುರಿತು ಕಾಂಗ್ರೆಸ್ ಮಾತು ಮತ್ತು ಕೃತ್ಯದಲ್ಲಿ ವ್ಯತ್ಯಾಸವಿದೆ. ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದ್ದ ಕಾಂಗ್ರೆಸ್, ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಸಂಪುಟದಲ್ಲೂ ಒಬ್ಬ ಮಹಿಳೆಗೂ ಸಚಿವ ಸ್ಥಾನ ನೀಡಿಲ್ಲ ಎಂದು ಆರೋಪಿಸಿದರು.

ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆಗಳನ್ನು ವ್ಯಂಗ್ಯವಾಡಿದ ಅವರು, ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ಎದುರಿಸದವರಿಗೆ ಪಕ್ಷದ ಉನ್ನತ ಹುದ್ದೆ ನೀಡಲಾಗಿದೆ. ತಮ್ಮ ಜವಾಬ್ದಾರಿಯ ಅರಿವಿನಿಂದ ಮಾತನಾಡಬೇಕು ಎಂದು ಹೇಳಿದರು.

ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ವಾಗ್ದಾಳಿ ನಡೆಸಿದ ಸಿ.ಸಿ. ಪಾಟೀಲ, ತಮ್ಮ ಇಲಾಖೆಯ ಕೆಲಸ ಬಿಟ್ಟು ಅನಗತ್ಯ ರಾಜಕಾರಣದಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಇಸ್ಪೀಟ್, ಮರಳು ಹಾಗೂ ಡ್ರಗ್ಸ್ ದಂಧೆ ಹೆಚ್ಚಾಗಿರುವುದನ್ನು ತಡೆಯುವತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷ ಯಾವುದೇ ಇರಲಿ, ಗದಗ ಜಿಲ್ಲೆಗೆ ಒಬ್ಬ ಸಚಿವ ಇರಬೇಕು. ಸಚಿವರಿಲ್ಲದಿದ್ದರೆ ಅಧಿಕಾರಿಗಳ ಮೇಲೆ ನಿಯಂತ್ರಣ ಕಡಿಮೆಯಾಗಿ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ರಾಜು ಕುರಡಗಿ, ಎಂ.ಎಸ್. ಕರಿಗೌಡ್ರ, ಉಷಾ ದಾಸರ, ಎಂ.ಎಂ. ಹಿರೇಮಠ, ಲಿಂಗಾರಾಜ ಪಾಟೀಲ, ಮಂಜುನಾಥ ಮುಳಗುಂದ, ಅನಿಲ ಅಬ್ಬಿಗೇರಿ ಹಾಗೂ ಗೂಳಪ್ಪ ಮುಷಿಗೇರಿ ಉಪಸ್ಥಿತರಿದ್ದರು.

“ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ದಟ್ಟವಾಗಿದೆ. ಸರ್ಕಾರ ಯಾವಾಗ ಬೇಕಾದರೂ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.”

ಸಿ.ಸಿ. ಪಾಟೀಲ, ನರಗುಂದ ಶಾಸಕ

ಹೈಕಮಾಂಡ್ ವಿರುದ್ಧ ಗದಗ ಕಾಂಗ್ರೆಸ್‌ನ ಬಹಿರಂಗ ಬಂಡಾಯ!

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಕ್ಷೇತ್ರದ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಡಾ. ಎಚ್.ಕೆ. ಪಾಟೀಲ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡದ ಹಿನ್ನೆಲೆಯಲ್ಲಿ ಗದಗದಲ್ಲಿ ಕಾಂಗ್ರೆಸ್‌ನೊಳಗಿನ ಅಸಮಾಧಾನ ಭುಗಿಲೆದ್ದಿದೆ. ಗದಗ-ಬೆಟಗೇರಿ ನಗರಸಭೆಯ 17 ಚುನಾಯಿತ ಕಾಂಗ್ರೆಸ್ ಸದಸ್ಯರು ಹಾಗೂ 5 ನಾಮನಿರ್ದೇಶಿತ ಸದಸ್ಯರು ಸೇರಿ ಒಟ್ಟು 22 ಸದಸ್ಯರು ತಮ್ಮ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ನೀಡಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರಿಗೆ ಸಲ್ಲಿಸುವ ಮೂಲಕ ರಾಜ್ಯ ಕಾಂಗ್ರೆಸ್ ನಾಯಕತ್ವದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರಾಜೀನಾಮೆ ಸಲ್ಲಿಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಸದಸ್ಯರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಹಿರಿಯ ನಾಯಕ ಡಾ. ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿದರು.

ಕೆಲ ನಗರಸಭೆ ಸದಸ್ಯರು ಮಾತನಾಡಿ, ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಮೂರು ಬಾರಿ ಶಾಸಕರಾಗಿ, ಸಚಿವರಾಗಿ ಹಾಗೂ ರಾಜ್ಯ ರಾಜಕಾರಣದಲ್ಲಿ ಅನುಭವಿ ನಾಯಕರಾಗಿ ಸೇವೆ ಸಲ್ಲಿಸಿರುವ ಎಚ್.ಕೆ. ಪಾಟೀಲ ಅವರ ಅನುಭವವನ್ನು ಸಂಪುಟದಲ್ಲಿ ಬಳಸಿಕೊಳ್ಳದೇ ಇರುವುದು ಗದಗ ಜಿಲ್ಲೆಗೆ ಮಾತ್ರವಲ್ಲ, ಉತ್ತರ ಕರ್ನಾಟಕಕ್ಕೂ ಮಾಡಿದ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹ

ಪ್ರತಿ ಬಾರಿ ಉತ್ತರ ಕರ್ನಾಟಕ ಭಾಗವನ್ನು ಕಡೆಗಣಿಸಲಾಗುತ್ತಿದೆ. ಉತ್ತರ ಕರ್ನಾಟಕದ ಪ್ರಭಾವಿ ಹಾಗೂ ಅನುಭವಿ ನಾಯಕರಿಗೆ ಸಚಿವ ಸಂಪುಟದಲ್ಲಿ ಅವಕಾಶ ನಿರಾಕರಿಸುವ ಮೂಲಕ ಈ ಭಾಗದ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಿ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಕೃಷ್ಣಾ ಪರಾಪೂರ, ಸುರೇಶ ಕಟ್ಟಿಮನಿ, ಬರಕತ್ ಅಲಿ ಮುಲ್ಲಾ, ರವಿ ಕಮತರ, ಚಂದ್ರು ಕರಿಸೋಮನಗೌಡ್ರ, ಇಮ್ತಿಯಾಜ ಶಿರಹಟ್ಟಿ, ಪದ್ಮಾ ಕಟಗಿ, ಪರವೀನಬಾನು ಮುಲ್ಲಾ, ಶಕುಂತಲಾ ಅಕ್ಕಿ, ಜೈನುದ್ದೀನ್ ನಮಾಜಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಹಳೇ ಡಿಸಿ ಕಚೇರಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ

ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಮಾನವ ಸರಪಳಿ ನಿರ್ಮಿಸಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಳಿಸಿದ ಪ್ರತಿಭಟನಾಕಾರರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಿರಿಯ ನಾಯಕ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಿ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.

ಮುಪ್ಪಿನ ಬಸವಲಿಂಗ ಶ್ರೀಗಳಿಗೆ ಅದ್ಧೂರಿ ಪುರ ಪ್ರವೇಶ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ದೇವಪ್ರಯಾಗದಲ್ಲಿ ಮೌನಾನುಷ್ಠಾನ ಪೂರ್ಣಗೊಳಿಸಿ ಹಾಲಕೆರೆ ಗ್ರಾಮಕ್ಕೆ ಆಗಮಿಸಿದ ಶ್ರೀ ಅನ್ನದಾನೇಶ್ವರ ಮಠದ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರಿಗೆ ಭಕ್ತರು ಅದ್ಧೂರಿ ಪುರ ಪ್ರವೇಶದ ಮೂಲಕ ಆತ್ಮೀಯ ಸ್ವಾಗತ ಕೋರಿದರು.

ಅಲಂಕೃತ ಸಾರೋಟಿನಲ್ಲಿ ಶ್ರೀಗಳನ್ನು ಕೂರಿಸಿ, ವಾದ್ಯಮೇಳ ಹಾಗೂ ಜಯಘೋಷಗಳ ನಡುವೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಶ್ರೀಗಳು ಭಕ್ತರಿಗೆ ಆಶೀರ್ವಾದ ನೀಡಿದರೆ, ಭಕ್ತರು ಪುಷ್ಪಾರ್ಚನೆ ಮಾಡಿ ಭಕ್ತಿಭಾವದಿಂದ ಸ್ವಾಗತಿಸಿದರು.

ಬಳಿಕ ಶ್ರೀಗಳನ್ನು ಅನ್ನದಾನೇಶ್ವರ ಮಠಕ್ಕೆ ಕರೆದೊಯ್ದು ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.

ಮೆರವಣಿಗೆಯಲ್ಲಿ ನಾಡಿನ ವಿವಿಧ ಮಠಾಧೀಶರು, ಗಿರೀಶಗೌಡ ಮುಲ್ಕಿಪಾಟೀಲ, ರಾಜಶೇಖರಗೌಡ ಪಾಟೀಲ, ರವೀಂದ್ರನಾಥ ದೊಡ್ಡಮೇಟಿ, ಡಾ. ಜಿ.ಕೆ. ಕಾಳೆ, ಉಮೇಶ ಪಾಟೀಲ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು, ಗಣ್ಯರು, ಶ್ರೀಮಠದ ಭಕ್ತರು, ಅನ್ನದಾನೇಶ್ವರ ವಿದ್ಯಾಸಂಸ್ಥೆಗಳ ಸಿಬ್ಬಂದಿ ಹಾಗೂ ಸಾವಿರಾರು ಭಕ್ತರು ಭಾಗವಹಿಸಿದ್ದರು.

ಸ್ವಾತಂತ್ರ್ಯೋತ್ಸವ ಪೂರ್ವಭಾವಿ ಸಭೆಗೆ ಅಧಿಕಾರಿಗಳ ಗೈರು; ನೋಟಿಸ್ ನೀಡಲು ಶಾಸಕ ನೇಮಿರಾಜ್ ನಾಯ್ಕ ಸೂಚನೆ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ 80ನೇ ಸ್ವಾತಂತ್ರ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ವಿವಿಧ ಇಲಾಖೆಗಳ ಕೆಲವು ಅಧಿಕಾರಿಗಳು ಗೈರುಹಾಜರಾಗಿದ್ದಕ್ಕೆ ಶಾಸಕ ಕೆ. ನೇಮಿರಾಜ್ ನಾಯ್ಕ ಅಸಮಾಧಾನ ವ್ಯಕ್ತಪಡಿಸಿ, ಗೈರಾದ ಅಧಿಕಾರಿಗಳಿಗೆ ಕೂಡಲೇ ನೋಟಿಸ್ ಜಾರಿ ಮಾಡುವಂತೆ ತಹಶೀಲ್ದಾರ್‌ಗೆ ಸೂಚಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾವು ಕೊಟ್ಟೂರಿನಲ್ಲಿ ಧ್ವಜಾರೋಹಣ ಕಾರ್ಯಕ್ರಮ ಮುಗಿಸಿ ಆಗಮಿಸುವುದರಿಂದ ಶಾಲಾ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಉಪಾಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸ್ವಾತಂತ್ರ್ಯೋತ್ಸವವನ್ನು ಶಿಸ್ತುಬದ್ಧವಾಗಿ ಆಚರಿಸಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಿ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರು ಗಣ್ಯರನ್ನು ಸನ್ಮಾನಿಸಲು ತೀರ್ಮಾನಿಸಲಾಯಿತು.

ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಸೊನ್ನದ್ ಗುರು ಬಸವರಾಜ್, ಸಾಂಸ್ಕೃತಿಕ ಸ್ಪರ್ಧೆ ವಿಜೇತರಿಗೆ ಪುಸ್ತಕದ ಜೊತೆಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡುವಂತೆ ಸಲಹೆ ನೀಡಿದರು.

ಪುರಸಭೆ ಅಧ್ಯಕ್ಷೆ ರೇಷ್ಮಾ ಸಿಕಂದರ್, ರಾಷ್ಟ್ರೀಯ ಹಬ್ಬವನ್ನು ಸಾರ್ವಜನಿಕರು, ರೈತರು ಹಾಗೂ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಂಭ್ರಮದಿಂದ ಆಚರಿಸಬೇಕೆಂದರು.

ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷೆ ಹಾಗೂ ತಹಶೀಲ್ದಾರ್ ಆರ್. ಕವಿತಾ, ಶಿಷ್ಟಾಚಾರದಂತೆ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ತಾಪಂ ಇಒ ಪಾಲಯ್ಯ, ಉಪ ತಹಶೀಲ್ದಾರ್ ಶಿವಕುಮಾರ್ ಗೌಡ, ಪುರಸಭೆ ಮುಖ್ಯಾಧಿಕಾರಿ ಎಂ.ಕೆ. ಮುಗಳಿ, ಬಿಇಒ ಎಸ್. ಜಗದೀಶ್, ಪಿಎಸ್‌ಐ ಉಮಾಪತಿ ನಾಯ್ಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

“ಪಟ್ಟಣದ ಎಲ್ಲ ಬ್ಯಾಂಕ್‌ಗಳ ಕಟ್ಟಡಗಳ ಮೇಲೂ ಕಡ್ಡಾಯವಾಗಿ ರಾಷ್ಟ್ರಧ್ವಜಾರೋಹಣ ನಡೆಯಬೇಕು.”

ಕೆ. ನೇಮಿರಾಜ್ ನಾಯ್ಕ, ಶಾಸಕ

ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಬಗ್ಗೆ ಇನ್ನೂ ನಿರ್ಧಾರ ಇಲ್ಲ; ಪಕ್ಷದ ನಾಯಕರ ಜೊತೆ ಚರ್ಚಿಸಿ ತೀರ್ಮಾನ – ಬಸವರಾಜ ಹೊರಟ್ಟಿ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ. ಈ ವಿಚಾರವಾಗಿ ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಹೊರಟ್ಟಿ, “ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ನಾನು ಇನ್ನೂ ನಿರ್ಧಾರ ಮಾಡಿಲ್ಲ. ಈ ರೀತಿಯ ಬೆಳವಣಿಗೆ ಈ ಹಿಂದೆ ನಡೆದಿರುವ ಉದಾಹರಣೆ ಇಲ್ಲ. ನಮ್ಮ ಪಕ್ಷದ ನಾಯಕರೊಂದಿಗೆ ಚರ್ಚಿಸಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ” ಎಂದು ಹೇಳಿದರು.

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕರೆ ಮಾಡಿ ರಾಜೀನಾಮೆ ನೀಡುವಂತೆ ತಿಳಿಸಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಮ್ಮ ವರಿಷ್ಠರು ಸಭಾಪತಿ ಮತ್ತು ಉಪಸಭಾಪತಿ ಸ್ಥಾನಗಳಿಗೆ ಹೊಸ ಹೆಸರುಗಳನ್ನು ಆಯ್ಕೆ ಮಾಡಿದ್ದಾರೆ. ಹೀಗಾಗಿ ನೀವು ರಾಜೀನಾಮೆ ನೀಡಬೇಕು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ” ಎಂದರು.

“ಮೊದಲು ಅಧಿಕೃತ ನೋಟಿಸ್ ನೀಡಲಿ. ಅದರ ನಂತರ ಪರಿಸ್ಥಿತಿಯನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತೇನೆ. ಸದನ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಸಂಪೂರ್ಣ ಗೌರವ ನೀಡುತ್ತೇನೆ. ಆದರೆ ಈ ಬೆಳವಣಿಗೆ ನನಗೆ ವೈಯಕ್ತಿಕವಾಗಿ ನೋವು ತಂದಿದೆ” ಎಂದು ಹೊರಟ್ಟಿ ಹೇಳಿದರು.

‘ನೀವೇ ನಿರ್ಮಾಪಕರಾಗಿ’… ಜಯಣ್ಣ-ಭೋಗೇಂದ್ರ ಬದುಕು ಬದಲಿಸಿದ ವಿಜಯಲಕ್ಷ್ಮಿ ದರ್ಶನ್ ಸಲಹೆ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಜಯಣ್ಣ-ಭೋಗೇಂದ್ರ ಅವರ ಸಿನಿ ಪಯಣದ ಹಿಂದೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರ ಪ್ರೇರಣೆ ಅಡಗಿದೆ. ಈ ಅಚ್ಚರಿಯ ಸಂಗತಿಯನ್ನು ಅವರು ಇತ್ತೀಚಿನ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

ದರ್ಶನ್ ನಟನೆಯ ‘ಸ್ನೇಹನಾ ಪ್ರೀತಿನಾ’ ಹಾಗೂ ‘ಭೂಪತಿ’ ಸಿನಿಮಾಗಳ ವಿದೇಶಿ ಚಿತ್ರೀಕರಣದ ವೇಳೆ ಆಸ್ಟ್ರೇಲಿಯಾದಲ್ಲಿ ವಿಜಯಲಕ್ಷ್ಮಿ ದರ್ಶನ್ ಅವರು, ‘ಇತರರ ಸಿನಿಮಾಗಳನ್ನು ವಿತರಣೆ ಮಾಡುವ ಬದಲು ನೀವೇ ನಿರ್ಮಾಪಕರಾಗಿ. ಹಣ ಹೂಡಿ ಸಿನಿಮಾ ಮಾಡಿ. ಕಾಲ್‌ಶೀಟ್ ನಮ್ಮದು’ ಎಂದು ಸಲಹೆ ನೀಡಿದ್ದರು ಎಂದು ಜಯಣ್ಣ ಹೇಳಿದ್ದಾರೆ.

ಆ ವೇಳೆ ನಿರ್ಮಾಪಕರಾಗುವ ಉದ್ದೇಶವೇ ಇರಲಿಲ್ಲ. ಸಿನಿಮಾ ನಿರ್ಮಾಣದಲ್ಲಿ ದೊಡ್ಡ ರಿಸ್ಕ್ ಇರುವುದರಿಂದ ವಿತರಣೆ ವ್ಯವಹಾರದಲ್ಲೇ ಮುಂದುವರಿಯಲು ನಿರ್ಧರಿಸಿದ್ದೆವು. ಆದರೆ ವಿಜಯಲಕ್ಷ್ಮಿ ಅವರ ವಿಶ್ವಾಸ ಮತ್ತು ಪ್ರೋತ್ಸಾಹವೇ ನಮ್ಮ ನಿರ್ಧಾರವನ್ನು ಬದಲಿಸಿತು. ಅದರ ಫಲವಾಗಿ ‘ಅರ್ಜುನ್’ ಚಿತ್ರದ ಮೂಲಕ ನಿರ್ಮಾಪಕರಾಗಿ ಹೊಸ ಅಧ್ಯಾಯ ಆರಂಭವಾಯಿತು ಎಂದು ಅವರು ತಿಳಿಸಿದ್ದಾರೆ.

ಅಷ್ಟೇ ಅಲ್ಲ, ಆ ಸಹಾಯವನ್ನು ಎಂದಿಗೂ ಮರೆಯದ ಜಯಣ್ಣ-ಭೋಗೇಂದ್ರ, ‘ಅರ್ಜುನ್’ ಚಿತ್ರದ ಟೈಟಲ್‌ನಲ್ಲಿ ‘ವಿಜಯಲಕ್ಷ್ಮಿ ದರ್ಶನ್ ಪ್ರೆಸೆಂಟ್ಸ್’ ಎಂದು ವಿಶೇಷ ಕ್ರೆಡಿಟ್ ನೀಡಿ ಕೃತಜ್ಞತೆ ಸಲ್ಲಿಸಿದ್ದರು. ಆ ದಿನದಿಂದ ಇಂದಿನವರೆಗೆ ನಿರ್ಮಾಣ ಕ್ಷೇತ್ರದಲ್ಲಿ ಯಶಸ್ವಿಯಾಗಿ ಸಾಗುತ್ತಿರುವುದಾಗಿ ಭೋಗೇಂದ್ರ ಹೇಳಿದ್ದಾರೆ.