Home Blog Page 88

ಕೊಳ್ಳೇಗಾಲದಲ್ಲಿ ವರನಿಗೆ ಚಾಕು ಇರಿತ ಕೇಸ್; ಭಾವಿ ಗಂಡನ ಹತ್ಯೆಗೆ ಸುಫಾರಿ ಕೊಟ್ಟಿದ್ದೇ ವಧು!

0

ಚಾಮರಾಜನಗರ:- ಕೊಳ್ಳೇಗಾಲ ತಾಲ್ಲೂಕಿನ ವೆಂಕಟೇಶ್ವರ ಕಲ್ಯಾಣ ಮಂಟಪದ ಬಳಿ ವರನಿಗೆ ಚಾಕು ಇರಿತ ನಡೆದ ಪ್ರಕರಣದಲ್ಲಿ ಇದೀಗ ಬೆಚ್ಚಿಬೀಳಿಸುವ ಸತ್ಯ ಹೊರಬಿದ್ದಿದೆ.

ವರನ ಮೇಲೆ ನಡೆದ ದಾಳಿಯ ಹಿಂದಿನ ಪ್ರಮುಖ ಸೂತ್ರಧಾರಿಯೇ ವಧು ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಡಿ.30ರಂದು ಕುಣಗಳ್ಳಿ ಗ್ರಾಮದ ರವೀಶ್ ಹಾಗೂ ನಯನ ಅವರ ವಿವಾಹ ನಿಗದಿಯಾಗಿತ್ತು. ಮದುವೆಯ ಹಿಂದಿನ ದಿನ ನಡೆದ ರಿಸೆಪ್ಷನ್ ಗೆ ರವೀಶ್ ತಮ್ಮ ಸಂಬಂಧಿಕರೊಂದಿಗೆ ಕಾರಿನಲ್ಲಿ ಕಲ್ಯಾಣ ಮಂಟಪದತ್ತ ತೆರಳುತ್ತಿದ್ದಾಗ, ಮತ್ತೊಂದು ಕಾರಿನಲ್ಲಿ ಬಂದ ಆರೋಪಿಗಳು ಅವರ ವಾಹನವನ್ನು ಅಡ್ಡಗಟ್ಟಿ ಗಲಾಟೆ ನಡೆಸಿ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡ ರವೀಶ್ ಪ್ರಾಣಾಪಾಯದಿಂದ ಪಾರಾಗಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದು, ಈ ವೇಳೆ ವಧು ನಯನಳ ಕರೆ ವಿವರಗಳನ್ನು ಪರಿಶೀಲಿಸಿದಾಗ ಅಚ್ಚರಿಯ ಮಾಹಿತಿಗಳು ಹೊರಬಿದ್ದಿವೆ. ಚಾಕು ಇರಿತ ನಡೆಸಿದ ಆರೋಪಿಗಳೊಂದಿಗೆ ನಯನ ನಿರಂತರ ಸಂಪರ್ಕದಲ್ಲಿದ್ದದ್ದು ಪತ್ತೆಯಾಗಿದೆ. ಪ್ರಥಮ ಆರೋಪಿ ದರ್ಶನ್ ತಮಟೆ ಬಾರಿಸುವ ಹಾಗೂ ಪುಸ್ತಕ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದು, ಕಳೆದ ಎರಡು ವರ್ಷಗಳಿಂದ ನಯನಳೊಂದಿಗೆ ಪ್ರೀತಿಯಲ್ಲಿ ಇದ್ದನು. ಇದಾದರೂ ನಯನಗೆ ಕುಟುಂಬದವರು ಕುಣಗಳ್ಳಿ ಗ್ರಾಮದ ರವೀಶ್ ಜೊತೆ ವಿವಾಹ ನಿಶ್ಚಯಿಸಿದ್ದರು. ಮದುವೆ ನಿಲ್ಲಿಸುವ ಉದ್ದೇಶದಿಂದ ನಯನ, ರವೀಶ್‌ನ ಮೊಬೈಲ್ ಸಂಖ್ಯೆ ದರ್ಶನ್‌ಗೆ ನೀಡಿ ಬೆದರಿಕೆ ಹಾಕುವಂತೆ ಸೂಚಿಸಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಇಷ್ಟವಿಲ್ಲದಿದ್ದರೂ ಕುಟುಂಬದ ಒತ್ತಡದಿಂದ ಮದುವೆಗೆ ಮುಂದಾಗಿದ್ದ ನಯನ, ಕೊನೆಯ ಪ್ರಯತ್ನವಾಗಿ ತನ್ನ ತಂಗಿಯ ಮೊಬೈಲ್ ಬಳಸಿ ದರ್ಶನ್‌ಗೆ ಕರೆ ಮಾಡಿ ವರನನ್ನು ಹತ್ಯೆ ಮಾಡುವಂತೆ ಹೇಳಿದ್ದಾಳೆ ಎನ್ನಲಾಗಿದೆ. ಪೊಲೀಸ್ ವಿಚಾರಣೆಯಲ್ಲಿ ಆರೋಪಿ ದರ್ಶನ್ ಈ ಎಲ್ಲಾ ವಿಚಾರಗಳನ್ನು ಬಾಯಿಬಿಟ್ಟಿದ್ದಾನೆ. ಪ್ರಸ್ತುತ ನಯನ, ಆಕೆಯ ಪ್ರೇಮಿ ದರ್ಶನ್ ಹಾಗೂ ಮಿಥುನ್ ಅವರನ್ನು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದಿದ್ದಾರೆ. ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ.
ಚಾಕು ಇರಿತದ ಬಳಿಕ ಮದುವೆ ರದ್ದಾಗಿದ್ದು, ಆಸ್ಪತ್ರೆಗೆ ಓಡಿಬಂದ ನಯನ ತನಗೆ ಯಾವುದೇ ವಿಷಯ ಗೊತ್ತಿಲ್ಲ ಎಂಬಂತೆ ಕಣ್ಣೀರಿಟ್ಟಿದ್ದಳು. ರವೀಶ್ ಬಳಿ ಮದುವೆ ಮಾಡಿಕೊಳ್ಳುವಂತೆ ಬೇಡಿಕೊಂಡು, “ನೀವು ಕೈಕೊಟ್ಟರೆ ನನ್ನನ್ನು ಯಾರೂ ಮದುವೆಯಾಗುವುದಿಲ್ಲ” ಎಂದು ನಾಟಕವಾಡಿದ್ದಾಳೆ ಎಂಬುದೂ ತನಿಖೆಯಲ್ಲಿ ಬಹಿರಂಗವಾಗಿದೆ.

ಆಟೋ ಪಾರ್ಕಿಂಗ್ ವಿಚಾರಕ್ಕೆ ಯುವಕರ ನಡುವೆ ಕಿರಿಕ್; ಸ್ನೇಹಿತನ ಕೊಲೆಯಲ್ಲಿ ಅಂತ್ಯ

0

ಬೆಂಗಳೂರು: ನಾಯಂಡಹಳ್ಳಿ ಬಳಿಯ ಅಂಬೇಡ್ಕರ್ ಕಾಲೋನಿಯಲ್ಲಿ ಮನೆ ಬಳಿ ಆಟೋ ನಿಲ್ಲಿಸುವ ವಿಚಾರಕ್ಕೆ ಯುವಕರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ಕೊಲೆಯಾದ ಯುವಕನನ್ನು ಗುಣ (28) ಎಂದು ಗುರುತಿಸಲಾಗಿದ್ದು, ಆತನ ಸ್ನೇಹಿತ ವಿನೋದ್ ಕೊಲೆ ಆರೋಪಿಯಾಗಿದ್ದಾನೆ. ಘಟನೆಯಲ್ಲಿ ವೇಲು ಎಂಬ ಇನ್ನೊಬ್ಬ ಯುವಕನಿಗೆ ಚಾಕು ಇರಿತದಿಂದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂವರು ಅಂಬೇಡ್ಕರ್ ಕಾಲೋನಿಯ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ಮನೆ ಬಳಿ ಆಟೋ ನಿಲ್ಲಿಸುವ ವಿಚಾರಕ್ಕೆ ಗುಣ, ವೇಲು ಹಾಗೂ ವಿನೋದ್ ನಡುವೆ ಜಗಳ ನಡೆದಿತ್ತು. ಇದೇ ದ್ವೇಷದ ಹಿನ್ನೆಲೆ ಬೈಕ್‌ನಲ್ಲಿ ಬರುತ್ತಿದ್ದ ಗುಣ ಮತ್ತು ವೇಲು ಅವರನ್ನು ವಿನೋದ್ ಅಡ್ಡಗಟ್ಟಿ, ಮಾತಿನ ಚಕಮಕಿ ತೀವ್ರಗೊಂಡು ಇಬ್ಬರಿಗೂ ಚಾಕು ಇರಿಸಿದ್ದಾನೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಗುಣ ಸ್ಥಳದಲ್ಲೇ ಸಾವನ್ನಪ್ಪಿದ್ದು, ವೇಲು ಜೀವಾಪಾಯದಿಂದ ಪಾರಾಗಿದ್ದಾನೆ. ಇನ್ನು, ಈ ಮೂವರೂ ಹಿಂದೆಯೇ ಒಂದು ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಗೆ ಸಂಬಂಧಿಸಿ ಬ್ಯಾಟರಾಯನಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ವಿನೋದ್‌ಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಜನರನ್ನು ಒಳಗೊಂಡಿರುವ ಆರ್ಥಿಕ ಅಭಿವೃದ್ಧಿ ಮತ್ತು ಎಲ್ಲರನ್ನು ಮುಟ್ಟುವಂತಹ ಬಜೆಟ್: ಬೊಮ್ಮಾಯಿ

0

ಬೆಂಗಳೂರು: ಭಾರತವನ್ನು ವಿಶ್ವದ 3 ನೇ ಆರ್ಥಿಕ ಶಕ್ತಿಯನ್ನಾಗಿ ಮಾಡಲು ವಿಕಸಿತ ಭಾರತ ಕಟ್ಟುವಂತ ಅಭಿವೃದ್ದಿ ಶೀಲವಾಗಿರುವ ಮಾದರಿ ಬಜೆಟ್ ನ್ನು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಕೇಂದ್ರದ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ವಿಶ್ವದ ಎಲ್ಲ ರಾಷ್ಟ್ರಗಳು ಜಾಗತಿಕ ಆರ್ಥಿಕ ಸಂಕಷ್ಟದಲ್ಲಿರುವಾಗ ಭಾರತ ತನ್ನ ಆರ್ಥಿಕ ಪ್ರಗತಿಯನ್ನು ಮುಂದುವರೆಸಿಕೊಂಡು ಹೋಗುವಂತಹ ಅಭಿವೃದ್ಧಿ ಪರವಾದ ಬಜೆಟನ್ನು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ನಾಗರಿಕರ ಸಾಮರ್ಥ್ಯವನ್ನು ದೇಶದ ಆರ್ಥಿಕ ಚಟುವಟಿಕೆಯಲ್ಲಿ ಅಳವಡಿಸಲು ಯೋಜನೆಗಳನ್ನು ಹಲವಾರು ನೀತಿಗಳನ್ನು ಈ ಬಜೆಟ್ ನಲ್ಲಿ ಘೋಷಿಸಿದ್ದಾರೆ.

ಭವಿಷ್ಯದ ಚಾಂಪಿಯನ್ ಗಳಿಗಾಗಿ ಸುಮಾರು 10 ಸಾವಿರ ಕೋಟಿ ರೂ. ಆರ್ಥಿಕ ನೆರವು ಕೊಡುವಂತಹ ಯೋಜನೆ ಮಾಡಿದ್ದಾರೆ. ಆರ್ಥಿಕ ಅಭಿವೃದ್ಧಿ ಸ್ಥೀರಿಕರಣ ಮತ್ತು ಹಣದುಬ್ಬರ ನಿಯಂತ್ರಣ ಮಾಡುವುದು, ಜನರ ಆಶೋತ್ತರಗಳನ್ನು ಈಡೇರಿಸುವುದರ ಜೊತೆಗೆ 7.4 ಆರ್ಥಿಕ ಬೆಳವಣಿಗೆಯನ್ನು ಮುಂದುವರೆಸಿ ಎಲ್ಲ ಜನರನ್ನು ಒಳಗೊಂಡಿರುವ ಆರ್ಥಿಕ ಅಭಿವೃದ್ಧಿ ಮತ್ತು ಎಲ್ಲರನ್ನು ಮುಟ್ಟುವಂತಹ ಬಜೆಟ್ ಆಗಿದೆ ಎಂದು ಹೇಳಿದ್ದಾರೆ.

ಸಣ್ಣ ಕೈಗಾರಿಕೆಗೆ ವಿಶೇಷವಾದ ಒತ್ತು ಕೊಟ್ಟಿದ್ದಾರೆ. ಟೆಕ್ಸ್ ಟೈಲ್, ಚರ್ಮದ ಉತ್ಪನ್ನಗಳು, ಐಟಿ ಬಿಟಿ ಡಾಟಾ ಸೆಂಟರ್ ಗಳಿಗೆ ಬಹಳಷ್ಟು ಒತ್ತು ಕೊಟ್ಟಿದ್ದಾರೆ. ವಿಶೇಷವಾಗಿ ನಗರ ಮೂಲಸೌಕರ್ಯ ಕ್ಕೆ ಬಹಳ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಎರಡು ಮತ್ತು ಮೂರನೇ ಹಂತದ ನಗರಗಳಿಗೆ ಬಹಳಷ್ಟು ಒತ್ತು ಕೊಟ್ಟಿದೆ.

ಸುಮಾರು 12.5 ಲಕ್ಷ ಕೋಟಿ ರೂ. ಗಳನ್ನು ಕೇಂದ್ರ ಸರ್ಕಾರ ವಿವಿಧ ಯೋಜನೆಗಳಲ್ಲಿ ಹೂಡುತ್ತಿದೆ. ವಿತ್ತೀಯ ಕೊರತೆಯನ್ನು 4.3ಗೆ ನಿಯಂತ್ರಣ ಮಾಡಿರುವುದು ದೊಡ್ಡ ಸಾಧನೆ. ಮೂಲ ಸೌಕರ್ಯದಲ್ಲಿ ರಸ್ತೆಹೈ ಸ್ಪೀಡ್ ರೈಲುಗಳು, 20 ಜಲ ಸಾರಿಗೆ ಒತ್ತು ಕೊಟ್ಟಿರುವುದು ಸಾರಿಗೆಯಲ್ಲಿ ಹೊಸ ಆಯಾಮ ತೆರೆದಂತಾಗಿದೆ.

ಅಭಿವೃದ್ಧಿ ಪಥದಲ್ಲಿ ಭಾರತವನ್ನು ಆರ್ಥಿಕವಾಗಿ ವಿಶ್ವದ ಮೂರನೇ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ವಿಕಸಿತ ಭಾರತ ಕಟ್ಟುವಂತ ಅಭಿವೃದ್ದಿ ಶೀಲವಾಗಿರುವ ಮಾದರಿ ಬಜೆಟ್ ನ್ನು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ ಎಂದು ಹೇಳಿದರು.

ವಿದೇಶಗಳಿಂದ ಬರುವ ವಸ್ತುಗಳಿಗೆ ಸಂಪೂರ್ಣ ತೆರಿಗೆ ಫ್ರೀ ಮಾಡಿದ್ದಾರೆ. ನಾಲ್ಕು ಕರ್ತವ್ಯ ಪಥ ಅಂತ ಹೇಳಿದ್ದಾರೆ. ಮೊದಲನೆಯದಾಗಿ ಆರ್ಥಿಕ ಬೆಳವಣಿಗೆ, ಎರಡನೇಯದು ಸಬ್ ಬೆ ಸಾಥ್ ಸಬ್ ಕೆ ವಿಕಾಸ್ ಎನ್ನುವ ತತ್ವದಲ್ಲಿ ಮಹಿಳೆಯರು, ಯುವಕರು ರೈತರಿಗೆ ಎಲ್ಲರನ್ನು ಒಳಗೊಂಡಿರುವ ಈ ಬಜೆಟ್ ಇದಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಕನಕಗುರುಪೀಠ ಜಾತ್ಯಾತೀತ ಪೀಠವಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

0

ರಾಯಚೂರು: ರಾಜ್ಯದಲ್ಲಿ ಕನಕಗುರುಪೀಠ ಜಾತ್ಯಾತೀತ ಪೀಠವಾಗಿ ಕೆಲಸ ಮಾಡುತ್ತಿದ್ದು, ಗುರುಪೀಠದಲ್ಲಿ ಪೂಜ್ಯಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರು ಶಿಕ್ಷಣ, ಆಧ್ಯಾತ್ಮ ಮತ್ತು ಜಾತ್ಯಾತೀತ ಮನೋಭಾವಕ್ಕೆ ಹೆಚ್ಚು ಒತ್ತು ನೀಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ತಿಂಥಣಿ ಬ್ರಿಡ್ಜ್ ವತಿಯಿಂದ ಆಯೋಜಿಸಲಾಗಿದ್ದ ಬ್ರಹ್ಮಲೀನರಾದ ಪರಮಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶ್ರೀಗಳ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

ಕುರುಬ ಸಮುದಾಯಕ್ಕೆ ಮೊದಲ ಬಾರಿಗೆ ಕಾಗಿನೆಲೆ ಗುರುಪೀಠ1992 ರಲ್ಲಿ ಸ್ಥಾಪಿತವಾಗಿ, ಶ್ರೀ ತಾರಕಾನಂದ ಸ್ವಾಮೀಜಿಯವರು ಅದರ ಮೊದಲ ಗುರುಗಳಾಗಿದ್ದರು. ಕಲ್ಯಾಣ ಕರ್ನಾಟಕ, ಬೆಂಗಳೂರು , ಮೈಸೂರು ಮುಂಬಯಿ ಕರ್ನಾಟಕ ವಿಭಾಗಗಳಿದ್ದು, ಈ ಎಲ್ಲಾ ವಿಭಾಗಗಳಿಗೂ ಪ್ರತ್ಯೇಕ ಗುರುಗಳಿದ್ದು, ಈ ವಿಭಾಗಕ್ಕೆ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರು ಗುರುಗಳಾಗಿದ್ದರು.

ಗುರುಪೀಠದಲ್ಲಿ ಶಿಕ್ಷಣ, ಆಧ್ಯಾತ್ಮ, ಜಾತ್ಯಾತೀತ ಮನೋಭಾವಕ್ಕೆ ಹೆಚ್ಚು ಒತ್ತು ನೀಡಿದರು. ಕಾಗಿನೆಲೆ ಗುರುಪೀಠ ಸ್ಥಾಪನೆಯ ಉದ್ದೇಶವೇ ಸಮಸಮಾಜ ನಿರ್ಮಾಣ ವಾಗಿದೆ.ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬ ವರ್ಗ ಹಾಗೂ ಇಡೀ ಸಮಾಜಕ್ಕೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

ಮನುಜರೆಲ್ಲರೂ ಒಂದೇ ಕುಟುಂಬ

ಕನಕದಾಸರು ‘ಕುಲಕುಲವೆಂದು ಹೊಡೆದಾಡದಿರಿ’ ಎಂದಂತೆ ಬುದ್ಧಬಸವಾದಿಶರಣರು ಜಾತಿವ್ಯವಸ್ಥೆಯನ್ನು ವಿರೋಧಿಸುತ್ತಾ ಬಂದಿದ್ದಾರೆ. ನಮ್ಮ ಸಮಾಜ ವಿವಿಧ ಜಾತಿ ಧರ್ಮ ವರ್ಗ ಭಾಷೆಗಳಿಂದ ಕೂಡಿದೆ. ಮನುಜರೆಲ್ಲರೂ ಒಂದೇ ಕುಟುಂಬ ಎಂದು ಭಾವಿಸಬೇಕು. ಸಾಮಾಜಿಕ ಚಿಂತಕರಾದ ಲೋಹಿಯಾ ಅವರು ಮುಂದುವರಿದ ಜಾತಿಯವರು ಸಮಾಜವನ್ನು ದಾರಿತಪ್ಪಿಸುವ ಕೆಲಸವನ್ನು ಮಾಡುತ್ತಾರೆ ಎಂದಿದ್ದರು.

ಸಮಾನ ಅವಕಾಶವಿರುವ ಸಮಸಮಾಜವನ್ನು ನಿರ್ಮಿಸುವುದು ಅವಶ್ಯಕ. ಶಿಕ್ಷಣವಿಲ್ಲದೇ ಪ್ರಗತಿ ಸಾಧ್ಯವಿಲ್ಲ. ಕಾಗಿನೆಲೆ ಗುರುಪೀಠ ಸ್ಥಾಪನೆಯ ಉದ್ದೇಶವೇ ಸಮಸಮಾಜ ನಿರ್ಮಾಣ ವಾಗಿದೆ. ಯಾವುದೇ ಧರ್ಮವೂ ಪ್ರೀತಿಯನ್ನು ಬೋಧಿಸುತ್ತದೆಯೇ ಹೊರತು ದ್ವೇಷಿಸುವುದನ್ನು ಬೋಧಿಸುವುದಿಲ್ಲ ಎಂದರು.

ಗುಲಾಮಗಿರಿಯ ಮನಸ್ಥಿತಿಯಿಂದ ಹೊರಬನ್ನಿ-ಸಮಾಜಕ್ಕೆ ಸಿಎಂ ಕರೆ

ಕೆಲವರು ಶಿಕ್ಷಣ ದೊರೆತರೂ ಗುಲಾಮಗಿರಿಯ ಮನಸ್ಥಿತಿಯಿಂದ ಹೊರಬಂದಿಲ್ಲ. ಸ್ವಾಭೀಮಾನಿಗಳಾಗಿ ಬದುಕುವುದು ಮುಖ್ಯ. ವೈಚಾರಿಕ ಮತ್ತು ವೈಜ್ಞಾನಿಕ ಶಿಕ್ಷಣ ಯುವಪೀಳಿಗೆ ಬೆಳೆಸಿಕೊಳ್ಳಬೇಕು. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಶೇ. 15 ರಷ್ಟಿದ್ದ ಶಿಕ್ಷಣ ಈಗ ಶೇ.76 ಆಗಿದ್ದರೂ, ನಮ್ಮಲ್ಲಿ ಜಾತಿವ್ಯವಸ್ಥೆ ನಶಿಸಿಲ್ಲ. ಜಡತ್ವದಿಂದ ಕೂಡಿದ ಸಮಾಜಕ್ಕೆ ಚಲನೆ ಬರಲು ಆರ್ಥಿಕ , ಸಾಮಾಜಿಕ ಸಮಾನತೆ ಬೇಕು. ಸಮಾಜದ ಮೌಢ್ಯಗಳನ್ನು ಅಳಿಸುವ ಕಾರ್ಯದಲ್ಲಿ ಸ್ವಾಮೀಜಿಯವರು ತೊಡಗಿದ್ದರು ಎಂದರು.

ಜನರ ಪ್ರೀತಿಯಿಂದ ರಾಜಕೀಯದಲ್ಲಿ ಬದುಕಿದ್ದೇನೆ

ಜನರ ಆರ್ಶೀವಾದದಿಂದ 8 ಬಾರಿ ಗೆದ್ದು, ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನಾಡಿನ ಎಲ್ಲ ಜನರ ಪ್ರೀತಿಯಿಂದಲೇ ರಾಜಕೀಯದಲ್ಲಿಯೂ ಇಂದಿಗೂ ಬದುಕಿದ್ದೇನೆ. ಈ ಸಮಾಜದ ಪ್ರೀತಿಗೆ ಬೆಲೆಕಟ್ಟಲಾಗದು. ಧ್ವನಿಯಿಲ್ಲದವರ ಪರವಾಗಿ ಹೋರಾಡುವುದೇ ನನ್ನ ಕೆಲಸ ಎಂದು ತಿಳಿಸಿದರು.

ಕುರುಬ ಸಮಾಜ ಎಸ್ ಟಿ ಸೇರಿಸಲು ರಾಜ್ಯದ ಶಿಫಾರಸ್ಸು

ಇಡೀ ರಾಜ್ಯಕ್ಕೆ ಕನಕಗುರುಪೀಠ ಜಾತ್ಯಾತೀತ ಪೀಠವಾಗಿ ಕೆಲಸ ಮಾಡುತ್ತಿದೆ. ವಿದ್ಯಾರ್ಥಿ , ವಿದ್ಯಾರ್ಥಿನಿಯರಿಗೆ ವಸತಿ ನಿಲಯ, ಯಾತ್ರಿನಿವಾಸ ಸೇರಿದಂತೆ ಹಲವು ಬೇಡಿಕೆಗಳಿಗೆ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. ಎಲ್ಲ ದಲಿತ ಹಾಗೂ ಹಿಂದುಳಿದ ವರ್ಗಗಳ ಮಠಗಳಿಗೆ ಬೆಂಗಳೂರಿಗೆ ಸುಮಾರು 50 ಎಕರೆ ಪ್ರದೇಶವನ್ನು ನೀಡಲು ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಕುರುಬ ಸಮುದಾಯಕ್ಕೆ ಎಸ್ ಟಿ ಗೆ ಸೇರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಳ್ಳಲಿದ್ದು, ರಾಜ್ಯ ಸರ್ಕಾರ ಈಗಾಗಲೇ ತನ್ನ ಶಿಫಾರಸ್ಸನ್ನು ಕೇಂದ್ರಕ್ಕೆ ಸಲ್ಲಿಸಿದೆ. ಜಾತಿಗಣತಿ ವರದಿಯನ್ನು ಇನ್ನೊಂದು ತಿಂಗಳ ಅವಧಿಯಲ್ಲಿ ಸಲ್ಲಿಕೆಯಾಗಲಿದ್ದು, ಸೂಕ್ತ ಚರ್ಚೆಯ ನಂತರ ಅಂಗೀಕರಿಸಿ ಜಾರಿಗೊಳಿಸಲಾಗುವುದು ಎಂದರು.

ಭೀಮಾತೀರದಲ್ಲಿ ಮತ್ತೆ ಹರಿದ ನೆತ್ತರು: ಕತ್ತು ಕೊಯ್ದು ರೌಡಿಶೀಟರ್ ಬರ್ಬರ ಹತ್ಯೆ!

0

ವಿಜಯಪುರ: ಭೀಮಾ ನದಿ ತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬರಗುಡಿ ಗ್ರಾಮದಲ್ಲಿ ರೌಡಿಶೀಟರ್‌ ನನ್ನು ಬರ್ಬರವಾಗಿ ಕತ್ತು ಕೊಯ್ದು ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಕೊಲೆಯಾದ ವ್ಯಕ್ತಿಯನ್ನು ಸಿದ್ದರಾಮ ದೊಂಡಿಬಾ ಕ್ಷತ್ರಿ (29) ಎಂದು ಗುರುತಿಸಲಾಗಿದ್ದು, ಆತ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಣ ಅಥವಾ ಮಹಿಳೆಯ ವಿಚಾರಕ್ಕೆ ಸಂಬಂಧಿಸಿದ ವೈಷಮ್ಯದಿಂದಲೇ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಸಿದ್ದು, ಘಟನೆಯ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಈ ಸಂಬಂಧ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಘಟನೆಯ ಕುರಿತು ವಿವಿಧ ಕೋನಗಳಿಂದ ತನಿಖೆ ಮುಂದುವರಿದಿದೆ.

ಪದೆ ಪದೇ ಅನ್ಯಾಯ, ಕೇಂದ್ರದ ಬಜೆಟ್ ಕರ್ನಾಟಕ ಪಾಲಿಗೆ ನಿರಾಸೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

0

ಕೊಪ್ಪಳ: ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಪದೆ ಪದೇ ಅನ್ಯಾಯ ಆಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ರಾಜ್ಯವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಟೀಕಿಸಿದ್ದಾರೆ.

ಕೊಪ್ಪಳದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ಕರ್ನಾಟಕಕ್ಕೆ ಬರಬೇಕಿದ್ದ ಅನುದಾನವನ್ನು ಬಿಡುಗಡೆ ಮಾಡುತ್ತಿಲ್ಲ. ರಾಜ್ಯದ ಜನತೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಅತಿಹೆಚ್ಚು ಬಿಜೆಪಿ ಸದಸ್ಯರನ್ನು ಆಯ್ಕೆ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ್‌ ಬೊಮ್ಮಾಯಿ, ಜಗದೀಶ್‌ ಶೆಟ್ಟರ್‌, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಚೆಯಂಥ ಹಿರಿಯ ನಾಯಕರು ಆಯ್ಕೆಯಾಗಿದ್ದರೂ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಮಾತನಾಡುತ್ತಿಲ್ಲ ಎಂದು ಸಚಿವರು ಹೇಳಿದರು.

 ಮಹೇಶ್‌ ಟೆಂಗಿನಕಾಯಿ ಒಂಥರ ಬಲೂನ್‌ ಇದ್ದಂಗೆ

ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಇನ್ನಿಲ್ಲದ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ಶಾಸಕ ಮಹೇಶ್‌ ಟೆಂಗಿನಕಾಯಿ ಒಂಥರ ಬಲೂನ್‌ ಇದ್ದಂಗೆ, ಯಾವಾಗ ಗಾಳಿ ಹೋಗುತ್ತದೆ ಗೊತ್ತಿಲ್ಲ. ಅವರಿಗೆ ಬೇರೆ ಯಾವುದೇ ಕೆಲಸವಿಲ್ಲದೇ ಈ ರೀತಿ ಅನಾವಶ್ಯಕವಾಗಿ ಅವರು ಮಾತನಾಡುತ್ತಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಕಿಡಿಕಾರಿದರು.

ಹಿಂದಿನ ಬಿಜೆಪಿ ಸರ್ಕಾರದಿಂದ ರಾಜ್ಯದ ಜನತೆ ಭ್ರಮನಿರಸಗೊಂಡಿದ್ದರು. ಕೊಟ್ಟ ಮಾತಿನಂತೆ ನಾವು ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿದ್ದೇವೆ.

ಇದುವರೆಗೂ 26 ತಿಂಗಳ ಕಂತು ಬಿಡುಗಡೆಯಾಗಿದ್ದು, ಮನೆ ಮನೆಗೆ ನಮ್ಮ ಯೋಜನೆಗಳು ತಲುಪುತ್ತಿವೆ. ಕಳೆದ ವರ್ಷದ ಫೆಬ್ರವರಿ, ಮಾರ್ಚ್‌ ತಿಂಗಳ ಹಣ ಬಿಡುಗಡೆ ಕುರಿತು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹಾಗೂ ಹಣಕಾಸು ಇಲಾಖೆಯವರು ಇಷ್ಟರಲ್ಲೇ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಈ ದೇಶದ ಸರ್ವತೋಮುಖ ಅಭಿವೃದ್ಧಿಗೆ ಉತ್ತಮ ಆಯವ್ಯಯ ಪತ್ರ ಮಂಡನೆ: ಬಿ.ವೈ.ವಿಜಯೇಂದ್ರ

0

ಶಿವಮೊಗ್ಗ: ಪ್ರಧಾನಮಂತ್ರಿಗಳ ವಿಕಸಿತ ಭಾರತದ ಸಂಕಲ್ಪಕ್ಕೆ ಪೂರಕವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಮಂಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.

ಕೇಂದ್ರದ ಆಯವ್ಯಯಪತ್ರ ಮಂಡನೆಯನ್ನು ಇಂದು ವೀಕ್ಷಿಸಿದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. 3 ಕರ್ತವ್ಯಶಕ್ತಿಗಳ ಆಧಾರದ ಮೇಲೆ ಮಂಡಿಸಲ್ಪಟ್ಟ ಬಜೆಟ್ ಇದಾಗಿದೆ. ಉತ್ಪಾದನಾ ಹೆಚ್ಚಳ, ಜನರ ಆಶೋತ್ತರಗಳ ಈಡೇರಿಕೆ ಹಾಗೂ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ತಮ್ಮ ಬಜೆಟ್ ಮಂಡಿಸಿದ್ದಾರೆ ಎಂದು ವಿವರಿಸಿದರು.

ಕೈಗಾರಿಕೆ, ಪ್ರವಾಸೋದ್ಯಮ, ಐಟಿ, ಬಿಟಿ, ವಿಶೇಷವಾಗಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಘೋಷಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಎಲ್ಲ ಕ್ಷೇತ್ರಗಳಿಗೆ ಅವರು ಆದ್ಯತೆ ನೀಡಿದ್ದಾರೆ. ಯುವ ಶಕ್ತಿಗೂ ಪೂರಕ ಬಜೆಟ್ ಮಂಡಿಸಿದ್ದಾರೆ. ಕ್ರೀಡಾ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಪ್ರಕಟಿಸಿದ್ದಾರೆ ಎಂದು ತಿಳಿಸಿದರು.

ನಾರಿ ಶಕ್ತಿಗೆ ಆದ್ಯತೆ ಕೊಟ್ಟಿದ್ದು, ಎಲ್ಲಕ್ಕಿಂತ ಪ್ರಮುಖವಾಗಿ ಹೊಸ ತೆರಿಗೆಗೆ ಅವಕಾಶ ನೀಡದೇ, ಹೊಸ ತೆರಿಗೆ ಹೇರದೇ ಸರ್ವಸ್ಪರ್ಶಿ, ಸರ್ವವ್ಯಾಪ್ತಿಯಡಿ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಿದ್ದಾರೆ. ಈ ದೇಶದ ಸರ್ವತೋಮುಖ ಅಭಿವೃದ್ಧಿಗೆ, ಮುಂದಿನ ದಿನಗಳಲ್ಲಿ ಭಾರತವು ಆರ್ಥಿಕವಾಗಿ ಇನ್ನಷ್ಟು ಸದೃಢವಾಗುವ ನಿಟ್ಟಿನಲ್ಲಿ, ಭಾರತವು ವಿಶ್ವಗುರು ಆಗುವ ನಿಟ್ಟಿನಲ್ಲಿ ಒಂದು ಉತ್ತಮ ಬಜೆಟ್ ಅನ್ನು ಮಂಡಿಸಿದ್ದಾರೆ ಎಂದು ಶ್ಲಾಘಿಸಿದರು.

Bangalore Crime: ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಆರೋಪಿ..!

0

ಬೆಂಗಳೂರು: ನಗರದ ಸಿಲ್ಕ್ ಬೋರ್ಡ್ ಸಮೀಪದ ಬಿಟಿಎಂ ಲೇಔಟ್ 2ನೇ ಹಂತದ ಕೆಎಎಸ್ ಕಾಲೋನಿಯಲ್ಲಿ ಮಧ್ಯರಾತ್ರಿ ಭೀಕರ ಅಪರಾಧ ನಡೆದಿರುವ ಆರೋಪ ಕೇಳಿಬಂದಿದೆ. 65 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಅಮಾನುಷ ಕೃತ್ಯಕ್ಕೆ ಮನೆ ಕೆಲಸ ಮಾಡುತ್ತಿದ್ದ ದೇವರಾಜು (50) ಎಂಬ ವ್ಯಕ್ತಿಯೇ ಕಾರಣ ಎನ್ನಲಾಗಿದ್ದು, ಕೃತ್ಯ ಎಸಗಿದ ಬಳಿಕ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಘಟನೆ ಇಂದು ಮಧ್ಯರಾತ್ರಿ ನಡೆದಿದ್ದು, ಬೆಳಗಿನ ಜಾವ ಸುಮಾರು 4.30ರ ವೇಳೆಗೆ ಪ್ರಕರಣ ಬೆಳಕಿಗೆ ಬಂದಿದೆ. ಮೃತ ಮಹಿಳೆಯ ಪತಿ ಉದ್ಯೋಗ ನಿಮಿತ್ತ ದುಬೈಗೆ ತೆರಳಿದ್ದರು. ಅವರು ಇಂದು ಬೆಳಗ್ಗೆ 4.30ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಿ ಮನೆಗೆ ಬಂದಿದ್ದಾರೆ.

ಮನೆಗೆ ಬಂದ ಪತಿ ಬೆಲ್ ಹೊಡೆದಾಗ, ಮೊದಲ ಮಹಡಿಯಲ್ಲಿ ವಾಸವಿದ್ದ 27 ವರ್ಷದ ಮಗಳು ಬಾಗಿಲು ತೆರೆದು ತನ್ನ ಕೊಠಡಿಗೆ ತೆರಳಿದ್ದಾಳೆ. ಬಳಿಕ ಪತಿ ಕೆಳ ಮಹಡಿಯಲ್ಲಿ ಮಹಿಳೆ ಇದ್ದ ಕೊಠಡಿಗೆ ತೆರಳಿದಾಗ, ಮಹಿಳೆ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು,

ಈ ಭೀಕರ ಕೃತ್ಯ ಬೆಳಕಿಗೆ ಬಂದಿದೆ. ಘಟನೆ ನಡೆದ ಸಮಯದಲ್ಲಿ ಮಹಿಳೆಯ ಮಗಳು ಮನೆಯಲ್ಲೇ ಇದ್ದರೂ, ಮೊದಲ ಮಹಡಿಯಲ್ಲಿ ತನ್ನ ಕೊಠಡಿಯಲ್ಲಿ ಇದ್ದ ಕಾರಣ ಘಟನೆ ಗಮನಕ್ಕೆ ಬಂದಿಲ್ಲ ಎಂದು ತಿಳಿದುಬಂದಿದೆ.

ಸುದ್ದಿ ತಿಳಿದ ತಕ್ಷಣ ಮೈಕೋ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಿಳೆಯ ಸಾವಿನ ಹಿನ್ನೆಲೆ, ಅತ್ಯಾಚಾರ ಆರೋಪ ಹಾಗೂ ಮನೆ ಕೆಲಸದ ವ್ಯಕ್ತಿಯ ಆತ್ಮಹತ್ಯೆ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತೆರಿಗೆದಾರರಿಗೆ ರಿಲೀಫ್: ಪರಿಷ್ಕೃತ IT ರಿಟರ್ನ್ಸ್ ಸಲ್ಲಿಸಲು ಸಮಯ ಮಿತಿ ವಿಸ್ತರಿಸಿದ ಕೇಂದ್ರ ಸರ್ಕಾರ!

0

ನವದೆಹಲಿ: ನಾಮಮಾತ್ರ ಶುಲ್ಕ ಪಾವತಿಸುವ ಪರಿಷ್ಕೃತ ಆದಾಯ ತೆರಿಗೆ (ಐ-ಟಿ) ರಿಟರ್ನ್ಸ್ ಸಲ್ಲಿಕೆಗೆ ನೀಡಿದ್ದ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಈವರೆಗೆ ಡಿಸೆಂಬರ್ 31 ರವರೆಗೆ ಮಾತ್ರ ಅವಕಾಶ ಇದ್ದರೆ, ಇದೀಗ ಮಾರ್ಚ್ 31 ರವರೆಗೆ ಪರಿಷ್ಕೃತ ರಿಟರ್ನ್ಸ್ ಸಲ್ಲಿಸಲು ಅವಕಾಶ ನೀಡಲಾಗಿದೆ.

ಕೇಂದ್ರ ಬಜೆಟ್ ಭಾಷಣದ ವೇಳೆ ಈ ಘೋಷಣೆ ಮಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪರಿಷ್ಕೃತ ಐ-ಟಿ ರಿಟರ್ನ್ಸ್ ಸಲ್ಲಿಕೆಗೆ ತೆರಿಗೆದಾರರಿಗೆ ಹೆಚ್ಚುವರಿ ಸಮಯ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ, ಉದಾರೀಕೃತ ರವಾನೆ ಯೋಜನೆ (LRS) ಅಡಿಯಲ್ಲಿ ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣಕ್ಕಾಗಿ ವಿದೇಶಕ್ಕೆ ಹಣ ರವಾನಿಸುವುದರ ಮೇಲೆ ವಿಧಿಸಲಾಗುತ್ತಿದ್ದ ಟಿಸಿಎಸ್ ದರವನ್ನು ಶೇಕಡಾ 5ರಿಂದ ಶೇಕಡಾ 2ಕ್ಕೆ ಇಳಿಸಲು ಸರ್ಕಾರ ಪ್ರಸ್ತಾಪಿಸಿದೆ.

ಅಲ್ಲದೆ, ವಿದೇಶಿ ಪ್ರವಾಸ ಪ್ಯಾಕೇಜ್‌ಗಳ ಮಾರಾಟದ ಮೇಲಿನ ಟಿಸಿಎಸ್ ದರವನ್ನು ಕೂಡ ಶೇಕಡಾ 5ರಿಂದ ಶೇಕಡಾ 2ಕ್ಕೆ ಇಳಿಸಲಾಗುವುದು ಎಂದು ಘೋಷಿಸಲಾಗಿದೆ. ಈ ದರ ಈ ಹಿಂದೆ ಶೇಕಡಾ 20ರಷ್ಟಿತ್ತು ಎಂಬುದು ಗಮನಾರ್ಹ.

ಸಣ್ಣ ತೆರಿಗೆದಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ, 2027ರ ಹಣಕಾಸು ವರ್ಷದ ಬಜೆಟ್‌ನಲ್ಲಿ ನಿಯಮ ಆಧಾರಿತ ಸ್ವಯಂಚಾಲಿತ ತೆರಿಗೆ ಪ್ರಕ್ರಿಯೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ.

ಇನ್ನು ಮಹತ್ವದ ನಿರ್ಧಾರವಾಗಿ, ಮೋಟಾರು ಅಪಘಾತಗಳಲ್ಲಿ ಸಂತ್ರಸ್ತರು ಸಲ್ಲಿಸುವ ಪರಿಹಾರ ಕ್ಲೇಮುಗಳಿಗೆ ಆದಾಯ ತೆರಿಗೆ ವಿನಾಯಿತಿ ನೀಡಲಾಗುವುದು ಎಂದು ಸಚಿವೆ ಘೋಷಿಸಿದರು. ಅಂದರೆ ಅಪಘಾತ ಸಂತ್ರಸ್ತರಿಗೆ ದೊರಕುವ ಪರಿಹಾರ ಮೊತ್ತಕ್ಕೆ ಯಾವುದೇ ಆದಾಯ ತೆರಿಗೆ ವಿಧಿಸಲಾಗುವುದಿಲ್ಲ.

ಮತ್ತೇ ಜಾಗಕ್ಕಾಗಿ ಕಿರಿಕ್: ಕೆಡವಿದ್ದ ಕಾಂಪೌಂಡ್‌ ಕಟ್ಟಿಸಲು ಮುಂದಾದ ಯಶ್ ತಾಯಿ ಪುಷ್ಪಾ!

0

ಹಾಸನ: ಮತ್ತೆ ಹಾಸನ ನಗರದ ವಿದ್ಯಾನಗರ ಬಡಾವಣೆಯಲ್ಲಿ ನಿವೇಶನದ ಮಾಲೀಕತ್ವ ವಿಚಾರವಾಗಿ ನಟ ಯಶ್‌ ಅವರ ತಾಯಿ ಪುಷ್ಪಾ ಮತ್ತು ಜಿಪಿಎ ಹೋಲ್ಡರ್‌ ದೇವರಾಜು ನಡುವೆ ತೀವ್ರ ವಾಗ್ವಾದ ನಡೆಯಿತು. ಈ ಹಿಂದೆ ಕೆಡವಲಾಗಿದ್ದ ಕಾಂಪೌಂಡ್ ಅನ್ನು ಪುಷ್ಪಾ ಅರುಣ್ ಕುಮಾರ್ ಅವರು ಮರುನಿರ್ಮಿಸಲು ಮುಂದಾದಾಗ ಜಾಗದ ಮಾಲೀಕರೊಂದಿಗೆ ವಾಗ್ವಾದ ನಡೆದಿದೆ.

ನಿವೇಶನದ ಮಾಲೀಕ ದೇವರಾಜು ಅವರ ಬಳಿ ಮಾಲೀಕತ್ವದ ದಾಖಲೆಗಳನ್ನು ನೀಡುವಂತೆ ಪುಷ್ಪಾ ಅವರು ಒತ್ತಾಯಿಸಿದ್ದು, ದೇವರಾಜು ಅವರು ಕೋರ್ಟ್ ಆದೇಶದಂತೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪುಷ್ಪಾ ಅರುಣ್ ಕುಮಾರ್, ಜಡ್ಜ್‌ನನ್ನೇ ಇಲ್ಲಿಗೆ ಕರೆಸಿ ಇಲ್ಲಿಯೇ ತೀರ್ಮಾನ ಮಾಡಲಿ ಎಂದು ಹೇಳಿದ್ದಾರೆ.

ಜೊತೆಗೆ ಯಶ್ ಮನೆ ಮುಂದೆ ಕ್ಯಾಮೆರಾ ಹಿಡಿದು ಬಿಲ್ಡಪ್ ಪಡೆಯಲು ಬಂದಿದ್ದೀರಾ ಎಂದು ಪ್ರಶ್ನಿಸಿರುವುದಾಗಿ ತಿಳಿದುಬಂದಿದೆ.ಘಟನೆಯ ಮಾಹಿತಿ ಪಡೆದ ಬಡಾವಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಅವರ ಎದುರು ಕೂಡ ಪುಷ್ಪಾ ಅರುಣ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇವರಾಜು ಅವರನ್ನು ಏಕೆ ಬಂಧಿಸಿಲ್ಲ ಮತ್ತು ಜೆಸಿಬಿಯನ್ನು ಏಕೆ ಸೀಜ್ ಮಾಡಿಲ್ಲ ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ.

ಈ ವೇಳೆ ಮಾಧ್ಯಮದವರು ವಿಡಿಯೋ ಚಿತ್ರೀಕರಣ ಮಾಡದಂತೆ ಪುಷ್ಪಾ ಅವರು ತಾಕೀತು ಮಾಡಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳದಲ್ಲಿದ್ದ ಕಾರ್ಮಿಕರನ್ನು ತೆರವುಗೊಳಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

error: Content is protected !!