HomePolitics Newsಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ MLC ರವಿ ಆಯ್ಕೆ: ಶರಣಗೌಡ ಬಯ್ಯಾಪುರಗೆ ಉಪಾಧ್ಯಕ್ಷ ಸ್ಥಾನ, ರಾಜಣ್ಣಗೆ...

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ MLC ರವಿ ಆಯ್ಕೆ: ಶರಣಗೌಡ ಬಯ್ಯಾಪುರಗೆ ಉಪಾಧ್ಯಕ್ಷ ಸ್ಥಾನ, ರಾಜಣ್ಣಗೆ ನಿರಾಸೆ

ಬೆಂಗಳೂರು: ರಾಜ್ಯ ಸಹಕಾರ ಕ್ಷೇತ್ರದ ಪ್ರಮುಖ ಸಂಸ್ಥೆಯಾಗಿರುವ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್‌ನ ಅಧ್ಯಕ್ಷ ಸ್ಥಾನ ಕೊನೆಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಬಂಧಿ ಹಾಗೂ ಆಪ್ತರಾಗಿರುವ ವಿಧಾನ ಪರಿಷತ್ ಸದಸ್ಯ ರವಿ ಅವರ ಪಾಲಾಗಿದೆ. ಉಪಾಧ್ಯಕ್ಷರಾಗಿ ಶರಣಗೌಡ ಬಯ್ಯಾಪುರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಪೆಕ್ಸ್ ಬ್ಯಾಂಕ್‌ಗೆ ನಾಲ್ಕು ತಿಂಗಳ ಹಿಂದೆಯೇ ಚುನಾವಣೆ ನಡೆಯಬೇಕಿತ್ತು. ಆದರೆ ಅಧ್ಯಕ್ಷ ಸ್ಥಾನಕ್ಕಾಗಿ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಇದ್ದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಿಕೆಯಾಗಿತ್ತು. ಅಂತಿಮವಾಗಿ ಎಂಎಲ್‌ಸಿ ರವಿ ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ತೀವ್ರಗೊಂಡಿತ್ತು.

ಈ ನಡುವೆ ಕಾಂಗ್ರೆಸ್ ಹೈಕಮಾಂಡ್ ರವಿ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಶರಣಗೌಡ ಬಯ್ಯಾಪುರ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಹಲವು ದಿನಗಳಿಂದ ನಡೆಯುತ್ತಿದ್ದ ಕುತೂಹಲಕ್ಕೆ ತೆರೆ ಎಳೆದಿದೆ.

ಬುಧವಾರ ಸಹಕಾರ ಸಚಿವ ಲಕ್ಷ್ಮಣ ಸವದಿ ಅವರ ಉಪಸ್ಥಿತಿಯಲ್ಲಿ ಡಿ.ಕೆ. ಶಿವಕುಮಾರ್ ಅವರು ಅಪೆಕ್ಸ್ ಬ್ಯಾಂಕ್‌ನ 19 ನಿರ್ದೇಶಕರೊಂದಿಗೆ ಸಭೆ ನಡೆಸಿದ್ದರು. ಬಳಿಕ ಸಂಜೆ ನಿರ್ದೇಶಕರು, ಸಚಿವ ಲಕ್ಷ್ಮಣ ಸವದಿ ಹಾಗೂ ಕೆ.ಎನ್. ರಾಜಣ್ಣ ಅವರು ಖಾಸಗಿ ಹೋಟೆಲ್‌ನಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದರು. ಈ ವೇಳೆ ಬಹುತೇಕ ನಿರ್ದೇಶಕರು ರವಿ ಅವರ ಪರ ನಿಂತ ಹಿನ್ನೆಲೆಯಲ್ಲಿ ಚುನಾವಣೆ ನಡೆಸದೇ ಇಬ್ಬರನ್ನೂ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಅಪೆಕ್ಸ್ ಬ್ಯಾಂಕ್ ಚುನಾವಣಾ ಪ್ರಕ್ರಿಯೆ ಕುರಿತು ಬೆಂಗಳೂರಿನಲ್ಲಿ ಸಹಕಾರ ಸಚಿವ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದ್ದು, ಮೊದಲ ಎರಡೂವರೆ ವರ್ಷಗಳ ಅವಧಿಗೆ ಎಂಎಲ್‌ಸಿ ರವಿ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಶರಣಗೌಡ ಬಯ್ಯಾಪುರ ಅವರನ್ನು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ನಾಮಪತ್ರ ಸಲ್ಲಿಕೆಯ ಬಳಿಕ ಇಬ್ಬರ ಆಯ್ಕೆ ಅಂತಿಮಗೊಂಡಿದ್ದು, ಮುಂದಿನ ಎರಡೂವರೆ ವರ್ಷಗಳ ಅಧಿಕಾರಾವಧಿ ಕುರಿತು ನಂತರ ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.

ಇತ್ತ ಮಾಜಿ ಸಚಿವ ಹಾಗೂ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿರುವ ಕೆ.ಎನ್. ರಾಜಣ್ಣ ಅವರಿಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಕೈತಪ್ಪಿರುವುದು ರಾಜಕೀಯವಾಗಿ ಹಿನ್ನಡೆಯಾಗಿ ಪರಿಣಮಿಸಿದೆ. ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನ ವಂಚಿತರಾಗಿದ್ದ ರಾಜಣ್ಣ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನು ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಇದೀಗ ಆ ಸ್ಥಾನವೂ ಅವರ ಕೈತಪ್ಪಿದೆ.

ಈ ಬೆಳವಣಿಗೆಯ ಬೆನ್ನಲ್ಲೇ ಕಾಂಗ್ರೆಸ್‌ನೊಳಗಿನ ರಾಜಕೀಯ ಸಮೀಕರಣಗಳ ಬಗ್ಗೆಯೂ ಚರ್ಚೆ ಜೋರಾಗಿದೆ. ಡಿ.ಕೆ. ಶಿವಕುಮಾರ್ ಅವರ ಕಾರ್ಯವೈಖರಿಯನ್ನು ಬಹಿರಂಗವಾಗಿ ಪ್ರಶ್ನಿಸುತ್ತಿದ್ದ ನಾಯಕರನ್ನು ಪ್ರಮುಖ ಹಾಗೂ ಆಯಕಟ್ಟಿನ ಹುದ್ದೆಗಳಿಂದ ದೂರವಿಡಲಾಗುತ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಮಾಜಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಹಾಗೂ ಕೆ.ಎನ್. ರಾಜಣ್ಣ ಅವರು ಅಧಿಕಾರದಿಂದ ದೂರ ಉಳಿಯುವಂತಾಗಿರುವುದು ಇದೇ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದೆ. ಮತ್ತೊಂದೆಡೆ, ಸನ್ನಿವೇಶಕ್ಕೆ ತಕ್ಕಂತೆ ರಾಜಕೀಯ ಹೆಜ್ಜೆ ಇಟ್ಟಿರುವ ಜಮೀರ್ ಅಹ್ಮದ್ ಅವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ ಎಂಬ ವಿಶ್ಲೇಷಣೆಗಳೂ ಕೇಳಿಬರುತ್ತಿವೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img