Home Blog Page 91

ಪಪಂಗೆ ನೂತನ ಕಾರ್ಯಾಲಯ ನಿರ್ಮಿಸಲು ಆಗ್ರಹಿಸಿ ಮನವಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಪಟ್ಟಣ ಪಂಚಾಯಿತಿಗೆ ನೂತನ ಕಾರ್ಯಾಲಯ ನಿರ್ಮಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಜಾಪರ ವೇದಿಕೆ ವತಿಯಿಂದ ಮಂಗಳವಾರ ತಹಶೀಲ್ದಾರ ಕೆ. ರಾಘವೇಂದ್ರ ರಾವ್ ಅವರ ಮೂಲಕ ಪೌರಾಡಳಿತ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯ ತಾಲೂಕು ಅಧ್ಯಕ್ಷ ಹಸನ ತಹಶೀಲ್ದಾರ, ಅಜ್ಜಪ್ಪ ಬಿಢವೆ, ಶರೀಫ ಗುಡಿಮನಿ, ಶಿವಾನಂದ ಸುಲ್ತಾನಪೂರ, ಮಂಜುನಾಥ ಲಮಾಣಿ, ಎಂ.ಎನ್. ಮೂರಶಿಳ್ಳಿ, ಸಾಧಿಕ ಮುಳಗುಂದ, ಮಂಜುನಾಥ ಪೂಜಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರಾಷ್ಟ್ರೀಯ ಕ್ರೀಡಾ ದಿನದ ಸಂಭ್ರಮ: ಗದಗದಲ್ಲಿ ಕುಸ್ತಿ ಪಂದ್ಯಾವಳಿಗೆ ಚಾಲನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಮೇಜರ್ ಧ್ಯಾನಚಂದರವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಪ್ರಯುಕ್ತ ನಗರದ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿ ನಡೆಯಿತು.

ಗದಗ ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ ವಸಂತ ಸಿದ್ದಮ್ಮನಹಳ್ಳಿ ಅವರು ಪಂದ್ಯಾವಳಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಶರಣು ಗೋಗೇರಿ, ಬಸವರಾಜ ಹಾತಲಗೇರಿ, ಮಂಜುನಾಥ ಹಾತಲಗೇರಿ, ಕುಸ್ತಿ ತರಬೇತುದಾರ ಬಾಹುಬಲಿ, ಹಾಕಿ ತರಬೇತುದಾರ ಮಂಜು ಬಾಗಡೆ, ಸೈಕ್ಲಿಂಗ್ ತರಬೇತುದಾರ ವಿದ್ಯಾ ಕುಲಕರ್ಣಿ ಸೇರಿದಂತೆ ಮಹಿಳೆಯರು ಹಾಗೂ ಕುಸ್ತಿಪಟುಗಳು ಉಪಸ್ಥಿತರಿದ್ದರು.

ಎಎಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಪಿ.ವಿ. ಗೋಣೆಣ್ಣವರ ನೇಮಕ

0

ವಿಜಯಸಾಕ್ಷಿ ಸುದ್ದಿ, ಗದಗ: ಆಮ್ ಆದ್ಮಿ ಪಕ್ಷದ ಗದಗ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿ ನಿವೃತ್ತ ಉಪನ್ಯಾಸಕ ಪಿ.ವಿ. ಗೋಣೆಣ್ಣವರ ಅವರನ್ನು ನೇಮಕ ಮಾಡಲಾಗಿದೆ.

ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರ ಆದೇಶದ ಮೇರೆಗೆ ಗದಗ ಜಿಲ್ಲಾ ಅಧ್ಯಕ್ಷ ಡಾ. ದಾದಾಪೀರ ಭಾಷಾಸಾಬ ಕಲೇಗಾರ ಅವರು ಗೋಣೆಣ್ಣವರ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಪಕ್ಷದ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿ ಮುಂದಿನ ಆದೇಶದವರೆಗೆ ಜವಾಬ್ದಾರಿಯನ್ನು ನಿರ್ವಹಿಸುವಂತೆ ಸೂಚಿಸಲಾಗಿದೆ.

ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಅಧ್ಯಕ್ಷ ಡಾ. ದಾದಾಪೀರ ಭಾಷಾಸಾಬ ಕಲೇಗಾರ, ಮುನಾಫ ಹರ್ಲಾಪೂರ, ಜಾಕೀರ ನಾಗನೂರ, ಪೀರಸಾಬ ಶೇಖ, ರಾಜೇಂದ್ರಕುಮಾರ ಹಿರೇಮಠ, ರಮೇಶ ಗದಗ, ಸಿರಾಜ ರೋಣದ, ಶೃತಿ ಹಿರೇಮಠ, ರೇಷ್ಮಾ ಜಕ್ಕಲಿ, ಆಂಜನೇಯ ಎಂ., ಮಂಜುನಾಥ ಗಾರ್ಗಿ, ಸಂತೋಷ ಜೈನ್, ಸುಭಾಸ ಕುಂಬಾರ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದು ಶುಭ ಕೋರಿದರು.

ನಾಲ್ವಾಡ ಓಣಿಗೆ ಹೊಸ ಸೌಲಭ್ಯಗಳ ಸ್ಪರ್ಶ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರಸಭೆಯ ವಾರ್ಡ್ ನಂ. 24ರ ನಾಲ್ವಾಡ ಓಣಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಹಾಗೂ ಐತಿಹಾಸಿಕ ಪಂಚರ ಹೊಂಡ ಬಾವಿಯ ಸ್ವಚ್ಛತಾ ಮತ್ತು ಕುಡಿಯುವ ನೀರಿನ ಯೋಜನೆ ಕಾಮಗಾರಿಗಳಿಗೆ ಶಾಸಕ ಡಾ. ಎಚ್.ಕೆ. ಪಾಟೀಲ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರದ ಅಭಿವೃದ್ಧಿಗೆ ಈಗಾಗಲೇ ವಾರ್ಡ್ ನಂ. 24ರಲ್ಲಿ ಅತ್ಯಂತ ಅಗತ್ಯವಿರುವ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಗುಣಮಟ್ಟದ ಕಾಮಗಾರಿಗಳಿಗೆ ಆದ್ಯತೆ ನೀಡುವ ಮೂಲಕ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಮುಂಬರುವ ದಿನಗಳಲ್ಲಿ ಗದಗ-ಬೆಟಗೇರಿ ನಗರಕ್ಕೆ ಹೆಚ್ಚಿನ ಅನುದಾನ ತಂದು ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ವಾರ್ಡ್ ನಂ. 24ರಲ್ಲಿ ಸಿ.ಸಿ. ರಸ್ತೆ ನಿರ್ಮಾಣ, ಒಳಚರಂಡಿ ನಿರ್ಮಾಣ, ಬೋರ್‌ವೆಲ್ ಕೊರೆಸಿ ನೀರಿನ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಒಟ್ಟು ₹1 ಕೋಟಿ ಮೊತ್ತದ ಬೃಹತ್ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮೂರು ಬೋರ್‌ವೆಲ್‌ಗಳ ನಿರ್ಮಾಣ ಹಾಗೂ ಎರಡು ಹೈಮಾಸ್ಟ್ ಬೀದಿ ದೀಪಗಳ ಅಳವಡಿಕೆಯೂ ಯೋಜನೆಯಲ್ಲಿ ಸೇರಿವೆ.

ಇದೇ ವೇಳೆ ನಾಲ್ವಾಡಗಲ್ಲಿಯ ಓಂಕಾರೇಶ್ವರ ದೇವಸ್ಥಾನದ ಫಾರ್ಮ್ ನಂ. 3ರ ಉತಾರವನ್ನು ಮಾಡಿಸಿ ದೇವಸ್ಥಾನ ಸಮಿತಿಯವರಿಗೆ ವಿತರಿಸಲಾಯಿತು.

ಐತಿಹಾಸಿಕ ಪಂಚರ ಹೊಂಡ ಬಾವಿಯನ್ನು ಸ್ವಚ್ಛಗೊಳಿಸಿ, ಅಲ್ಲಿಂದ ಮೋಟರ್ ಅಳವಡಿಸುವ ಮೂಲಕ ಪೈಪ್‌ಲೈನ್ ಮೂಲಕ ಶಿವಳ್ಳಿಯವರ ಓಣಿ, ಗಾಳಪ್ಪನವರ ಓಣಿ, ಎಲಿಗಾರವರ ಓಣಿ, ಮಕಾನದಾರ ಮನೆ ಲೈನ್ ಹಾಗೂ ವೆಂಕಟೇಶ್ವರ ದೇವಸ್ಥಾನದ ಸುತ್ತಮುತ್ತಲಿನ ನಿವಾಸಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಿವಪ್ಪ ತಿಪ್ಪಣ್ಣ ಬಳ್ಳಾರಿ ಅವರು ಕಾಮಗಾರಿಯ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಭು ಬುರಬುರೆ, ಬಿ.ಬಿ. ಅಸೂಟಿ, ಎಂ.ಸಿ. ಶೇಖ, ಬರಕತಲಿ ಮುಲ್ಲಾ, ಓಣಿಯ ಹಿರಿಯರಾದ ಬುಡ್ಡಣ್ಣ ಹಬೀಬ, ಅಶೋಕ ಜೈನ, ಈರಣ್ಣ ಲಕ್ಕುಂಡಿ, ಕುಬೇರಪ್ಪ ಪರ್ವತಗೌಡ್ರ, ವಿ.ಕೆ. ಮಟ್ಟಿ, ಅಪ್ಪುರಾಜ ಭದ್ರಕಾಳಿಮಠ, ಪ್ರವೀಣ ವಾರಕರ, ಸಿದ್ದಣ್ಣ ಹರ್ತಿ, ಮಂಜುನಾಥ ಲಕ್ಕುಂಡಿ, ಬಸವರಾಜ ಗಾಳಪ್ಪನವರ, ಬಸವರಾಜ ಹರ್ತಿ, ಮಲ್ಲಪ್ಪ ಅಣ್ಣಿಗೇರಿ, ಶ್ರೀಧರ ವಜ್ರಬಂಡಿ, ನಜೀರ ಕುನ್ನಿಬಾವಿ, ಮಂಜು ಮುಳಗುಂದ ಸೇರಿದಂತೆ ವಾರ್ಡ್ ನಂ. 24ರ ಗುರುಹಿರಿಯರು, ಯುವಕರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.

ಒಳ ಮೀಸಲಾತಿ ತೀರ್ಪು ಬರುವವರೆಗೆ ಹಳೆಯ ವ್ಯವಸ್ಥೆ ಮುಂದುವರಿಸಿ: ಸಿಎಂಗೆ ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗೀಕರಣ ಹಾಗೂ ಶೇಕಡಾವಾರು ಹಂಚಿಕೆಗೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಹಿನ್ನೆಲೆಯಲ್ಲಿ, ಅಂತಿಮ ತೀರ್ಪು ಪ್ರಕಟವಾಗುವವರೆಗೆ ಹಳೆಯ ಮೀಸಲಾತಿ ವ್ಯವಸ್ಥೆಯನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಬಂಜಾರ, ಭೋವಿ, ಕೊರಚ ಹಾಗೂ ಕೊರಮ (ಕೊಲಂಬೆ) ಕ್ಷೇಮಾಭಿವೃದ್ಧಿ ಸಂಘದ ಮುಖಂಡರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಗದಗಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ಸಂಘದ ಮುಖಂಡರು, ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಯಾವುದೇ ಹೊಸ ವರ್ಗೀಕರಣವನ್ನು ಜಾರಿಗೊಳಿಸದೆ ಹಿಂದಿನ ಮೀಸಲಾತಿ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ 2025ರ ಆಗಸ್ಟ್ 19ರಿಂದ 2026ರ ಮೇ 13ರವರೆಗೆ ವಿವಿಧ ಹಂತಗಳಲ್ಲಿ ನಿರ್ಣಯಗಳನ್ನು ಕೈಗೊಂಡಿದೆ. ಆದರೆ, ಒಳ ಮೀಸಲಾತಿಯ ವರ್ಗೀಕರಣ ಹಾಗೂ ಶೇಕಡಾವಾರು ಹಂಚಿಕೆಯನ್ನು ಪ್ರಶ್ನಿಸಿ ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿದ್ದು, ಇನ್ನೂ ಅಂತಿಮ ತೀರ್ಪು ಪ್ರಕಟವಾಗಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ವರ್ಗೀಕರಣಕ್ಕೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿ ಅಂತಿಮವಾಗಿ ಇತ್ಯರ್ಥವಾಗುವವರೆಗೆ ಹಳೆಯ ಮೀಸಲಾತಿ ವ್ಯವಸ್ಥೆಯನ್ನು ಮುಂದುವರಿಸುವ ಕುರಿತು ಸರ್ಕಾರವು 2026ರ ಫೆಬ್ರವರಿ 27ರಂದು ನಿರ್ಣಯ ಪ್ರಕಟಿಸಿತ್ತು ಎಂದೂ ಮುಖಂಡರು ಗಮನ ಸೆಳೆದರು.

ಪ್ರಸ್ತುತ WP No. 23399/2026 ಪ್ರಕರಣದಲ್ಲಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳದಂತೆ ಮಧ್ಯಂತರ ತಡೆ ಆದೇಶ ಜಾರಿಯಲ್ಲಿರುವುದರಿಂದ, ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಹಳೆಯ ಮೀಸಲಾತಿ ವ್ಯವಸ್ಥೆಯನ್ನೇ ಮುಂದುವರಿಸುವುದು ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳ ಹಿತದೃಷ್ಟಿಯಿಂದ ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಇದೇ ತಿಂಗಳ 13ರಂದು ಆರಂಭವಾಗಲಿರುವ ಕರ್ನಾಟಕ ವಿಧಾನಸಭೆಯ ಮಳೆಗಾಲದ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಬಂಜಾರ, ಭೋವಿ, ಕೊರಚ ಹಾಗೂ ಕೊರಮ (ಕೊಲಂಬೆ) ಸಮುದಾಯಗಳ ಪರವಾಗಿ ಸದನದಲ್ಲಿ ಧ್ವನಿ ಎತ್ತಬೇಕು ಎಂದು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ತೂಚ ಚೌಹಾಣ್, ಗುರು ಲಮಾಣಿ, ತುಕಾರಾಮ ಲಮಾಣಿ, ಸಂತೋಷ್ ರಾಥೋಡ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮನವಿ ಸಲ್ಲಿಕೆಗೆ ಅಖಿಲ ಕರ್ನಾಟಕ ಬಂಜಾರ, ಭೋವಿ, ಕೊರಚ ಹಾಗೂ ಕೊರಮ ಕ್ಷೇಮಾಭಿವೃದ್ಧಿ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಪರಮೇಶ ನಾಯಕ ನೇತೃತ್ವ ವಹಿಸಿದ್ದರು.

KEA ಭರ್ಜರಿ ನೇಮಕಾತಿ: 4,744 ಹುದ್ದೆಗಳಿಗೆ ಈ ತಿಂಗಳಲ್ಲೇ ಅಧಿಸೂಚನೆ!

0

ಬೆಂಗಳೂರು: ಸರ್ಕಾರಿ ಉದ್ಯೋಗ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಹಿಸುದ್ದಿ ನೀಡಿದೆ.

ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 4,744 ಹುದ್ದೆಗಳ ನೇಮಕಾತಿಗೆ ಈ ಸೆಪ್ಟೆಂಬರ್ ತಿಂಗಳಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನೇಮಕಾತಿ ಪ್ರಕ್ರಿಯೆಯ ಭಾಗವಾಗಿ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಲಿಖಿತ ಪರೀಕ್ಷೆಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಹುದ್ದೆಗಳಿಗೆ ಸಂಬಂಧಿಸಿದ ಅರ್ಹತೆ, ಯಾವ ಇಲಾಖೆಯಲ್ಲಿ ಯಾವ ಹುದ್ದೆಗಳು ಖಾಲಿ ಇವೆ ಹಾಗೂ ಅಭ್ಯರ್ಥಿಗಳು ಯಾವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಎಂಬ ವಿವರಗಳನ್ನು KEA ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸಿ, ನೀಡಲಾಗಿರುವ ಪಠ್ಯಕ್ರಮದ ಆಧಾರದ ಮೇಲೆ ಈಗಿನಿಂದಲೇ ಪರೀಕ್ಷಾ ತಯಾರಿ ಆರಂಭಿಸುವಂತೆ ಹೆಚ್. ಪ್ರಸನ್ನ ಸಲಹೆ ನೀಡಿದ್ದಾರೆ.

ಯಾವ ವಿದ್ಯಾರ್ಹತೆಗೆ ಎಷ್ಟು ಹುದ್ದೆಗಳು?

ಒಟ್ಟು 4,744 ಹುದ್ದೆಗಳಲ್ಲಿ ಪದವಿ ಮಟ್ಟದ ತಾಂತ್ರಿಕೇತರ ಹುದ್ದೆಗಳು 2,421 ಇವೆ. ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ 2,062 ತಾಂತ್ರಿಕೇತರ ಹುದ್ದೆಗಳು ಲಭ್ಯವಿವೆ.

ಇದರ ಜೊತೆಗೆ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ 261 ತಾಂತ್ರಿಕ ಹುದ್ದೆಗಳು ಕೂಡ ಖಾಲಿ ಇದ್ದು, ಇವುಗಳ ನೇಮಕಾತಿಗೂ ಅಧಿಸೂಚನೆ ಹೊರಬೀಳಲಿದೆ.

ಪ್ರಸ್ತುತ ಗುರುತಿಸಲಾಗಿರುವ ಹುದ್ದೆಗಳ ಜತೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಇಲಾಖೆಗಳು ಹಾಗೂ ಹೊಸ ಹುದ್ದೆಗಳು ನೇಮಕಾತಿ ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು KEA ಮಾಹಿತಿ ನೀಡಿದೆ.

ಹೀಗಾಗಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಪದವಿ, ಪಿಯುಸಿ ಹಾಗೂ ತಾಂತ್ರಿಕ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಈ ನೇಮಕಾತಿ ಪ್ರಮುಖ ಅವಕಾಶವಾಗಲಿದೆ. ಅಧಿಸೂಚನೆ ಬಿಡುಗಡೆಯಾದ ಬಳಿಕ ಅರ್ಜಿ ಸಲ್ಲಿಕೆ ದಿನಾಂಕ, ವಯೋಮಿತಿ, ಶುಲ್ಕ, ಪರೀಕ್ಷಾ ವಿಧಾನ ಸೇರಿದಂತೆ ಸಂಪೂರ್ಣ ವಿವರಗಳನ್ನು KEA ಪ್ರಕಟಿಸಲಿದೆ.

ಬೆಂಗಳೂರಿನಲ್ಲಿ ಚಿಕನ್ ಅಂಗಡಿಗಳಿಗೆ ಬೀಗ; ತ್ಯಾಜ್ಯ ಶುಲ್ಕ ವಿರೋಧಿಸಿ 2 ದಿನ ಬಂದ್‌ಗೆ ಕರೆ!

0

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೋಳಿ ಮಾಂಸದ ತ್ಯಾಜ್ಯ ವಿಲೇವಾರಿ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದೆ.

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಕಳೆದ 15 ದಿನಗಳಿಂದ ಹೊಸ ನೋಟಿಸ್ ಜಾರಿಗೊಳಿಸಿದ್ದು, ಕೋಳಿ ಮಾಂಸದ ಅಂಗಡಿಗಳಿಂದ ಉತ್ಪತ್ತಿಯಾಗುವ ತ್ಯಾಜ್ಯಕ್ಕೆ ಪ್ರತಿ ಕೆಜಿಗೆ ₹5 ಶುಲ್ಕ ಪಾವತಿಸುವಂತೆ ಸೂಚಿಸಿದೆ. ಈ ಕ್ರಮವನ್ನು ವಿರೋಧಿಸಿ ಬೆಂಗಳೂರಿನ ಚಿಕನ್ ಅಂಗಡಿ ಮಾಲೀಕರು ಸೆಪ್ಟೆಂಬರ್ 3 ಮತ್ತು 4ರಂದು ಎರಡು ದಿನ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಕೋಳಿ ಮಾಂಸದ ತ್ಯಾಜ್ಯ ಸಂಗ್ರಹಣೆಗೆ ಪ್ರತಿ ಕೆಜಿಗೆ ₹5 ಶುಲ್ಕ ವಿಧಿಸಿರುವುದು ಸರಿಯಲ್ಲ ಎಂದು ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಆಕ್ಷೇಪ ವ್ಯಕ್ತಪಡಿಸಿದೆ. ಈ ಹಿಂದೆ ಕೋಳಿ ತ್ಯಾಜ್ಯವನ್ನು ಖಾಸಗಿ ಸಂಸ್ಥೆಗಳು ವ್ಯಾಪಾರಿಗಳಿಂದ ಹಣ ನೀಡಿ ಖರೀದಿಸುತ್ತಿದ್ದವು. ಬಳಿಕ ಅದನ್ನು ವಿವಿಧ ಕೈಗಾರಿಕೆಗಳಿಗೆ ರವಾನೆ ಮಾಡಲಾಗುತ್ತಿತ್ತು. ಈ ತ್ಯಾಜ್ಯವನ್ನು ಪ್ರಾಣಿಗಳ ಆಹಾರ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಈಗ ಅದೇ ತ್ಯಾಜ್ಯಕ್ಕಾಗಿ ಸರ್ಕಾರವೇ ವ್ಯಾಪಾರಿಗಳಿಂದ ಶುಲ್ಕ ವಸೂಲಿ ಮಾಡುತ್ತಿರುವುದರ ಉದ್ದೇಶವೇನು ಎಂಬ ಪ್ರಶ್ನೆಯನ್ನು ಪೌಲ್ಟ್ರಿ ಉದ್ಯಮಿಗಳು ಎತ್ತಿದ್ದಾರೆ. ತ್ಯಾಜ್ಯ ವಿಲೇವಾರಿ ವ್ಯವಸ್ಥೆಯಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪವಿದ್ದು, ಇದೊಂದು ದೊಡ್ಡ ಮಾಫಿಯಾ ರೂಪ ಪಡೆಯುತ್ತಿದೆ ಎಂದು ಆರೋಪಿಸಿರುವ ಅವರು, ಸರ್ಕಾರ ಕೂಡಲೇ ನೂತನ ಶುಲ್ಕವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂಬಂಧ ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದೆ. ಸರ್ಕಾರದ ಕ್ರಮವನ್ನು ವಿರೋಧಿಸಿ ಸೆಪ್ಟೆಂಬರ್ 3 ಮತ್ತು 4ರಂದು ನಗರದಾದ್ಯಂತ ಚಿಕನ್ ಅಂಗಡಿಗಳನ್ನು ಬಂದ್ ಮಾಡುವುದಾಗಿ ಸಂಘಟನೆ ತಿಳಿಸಿದೆ.

ಇನ್ನು ಚಿಕನ್ ಅಂಗಡಿ ಮಾಲೀಕರು ಕೂಡ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ಬಂದು ಕೋಳಿ ಮಾಂಸ ಮಾರಾಟದ ಮೂಲಕ ಜೀವನ ಕಟ್ಟಿಕೊಂಡಿರುವ ಸಣ್ಣ ವ್ಯಾಪಾರಿಗಳಿಗೆ ಈ ಶುಲ್ಕ ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ ಎಂದು ಹೇಳಿದ್ದಾರೆ.

ಪ್ರತಿ ತಿಂಗಳು ತ್ಯಾಜ್ಯ ವಿಲೇವಾರಿ ಶುಲ್ಕದ ರೂಪದಲ್ಲಿ ಹೆಚ್ಚುವರಿಯಾಗಿ ಸುಮಾರು ₹5 ಸಾವಿರದಿಂದ ₹7 ಸಾವಿರದವರೆಗೆ ಹೊರೆಯಾಗುವ ಸಾಧ್ಯತೆಯಿದೆ. ಈಗಾಗಲೇ ವ್ಯಾಪಾರದಲ್ಲಿ ಹಲವು ಖರ್ಚುಗಳಿದ್ದು, ಈ ಹೆಚ್ಚುವರಿ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲ. ಸರ್ಕಾರ ಬಡ ಹಾಗೂ ಸಣ್ಣ ವ್ಯಾಪಾರಿಗಳ ಪರವಾಗಿ ನಿಲ್ಲಬೇಕು ಎಂದು ಅಂಗಡಿ ಮಾಲೀಕರು ಮನವಿ ಮಾಡಿದ್ದಾರೆ.

ಯಾವುದೇ ಕಾರಣಕ್ಕೂ ಕೋಳಿ ಮಾಂಸದ ತ್ಯಾಜ್ಯಕ್ಕೆ ಹಣ ಸಂಗ್ರಹಿಸುವ ಕ್ರಮವನ್ನು ಒಪ್ಪುವುದಿಲ್ಲ ಎಂದು ವ್ಯಾಪಾರಿಗಳು ಸ್ಪಷ್ಟಪಡಿಸಿದ್ದಾರೆ. ಸರ್ಕಾರ ತಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಕಾನೂನಿನ ಮೊರೆ ಹೋಗುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಕೋಳಿ ಮಾಂಸದ ತ್ಯಾಜ್ಯ ವಿಲೇವಾರಿ ಶುಲ್ಕದ ವಿಚಾರದಲ್ಲಿ ಸರ್ಕಾರ ಮತ್ತು ಪೌಲ್ಟ್ರಿ ವ್ಯಾಪಾರಿಗಳ ನಡುವಿನ ಸಂಘರ್ಷ ತೀವ್ರಗೊಂಡಿದೆ. ಸೆಪ್ಟೆಂಬರ್ 3 ಮತ್ತು 4ರಂದು ಬೆಂಗಳೂರಿನಲ್ಲಿ ಚಿಕನ್ ಅಂಗಡಿಗಳು ಬಂದ್ ಆಗಲಿರುವ ಹಿನ್ನೆಲೆಯಲ್ಲಿ ಮಾಂಸಪ್ರಿಯರಿಗೆ ಎರಡು ದಿನ ತೊಂದರೆಯಾಗುವ ಸಾಧ್ಯತೆಯಿದೆ.

MUDA Scam: ಮುಡಾ ಬಿ-ರಿಪೋರ್ಟ್ ರದ್ದು ಅರ್ಜಿ; ನಾಳೆ ಹೈಕೋರ್ಟ್ ಮಹತ್ವದ ಆದೇಶ!

0

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಲ್ಲಿಸಿದ್ದ ಬಿ-ರಿಪೋರ್ಟ್ ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ಕುರಿತು ಹೈಕೋರ್ಟ್ ನಾಳೆ ಮಹತ್ವದ ಆದೇಶ ಪ್ರಕಟಿಸಲಿದೆ.

ಹೈಕೋರ್ಟ್‌ನ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಪ್ರಕರಣದ ವಿಚಾರಣೆ ನಡೆಸಿದ್ದು, ವಾದ-ಪ್ರತಿವಾದ ಆಲಿಸಿದ ಬಳಿಕ ಆದೇಶವನ್ನು ನಾಳೆಗೆ ಕಾಯ್ದಿರಿಸಿದೆ.

ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಲ್ಲಿಸಿದ್ದ ಬಿ-ರಿಪೋರ್ಟ್‌ನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಂಗೀಕರಿಸಿತ್ತು. ಇದನ್ನು ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಲೋಕಾಯುಕ್ತದ ಬಿ-ರಿಪೋರ್ಟ್‌ನ್ನು ರದ್ದುಪಡಿಸಿ, ಪ್ರಕರಣದ ಕುರಿತು ಮತ್ತಷ್ಟು ತನಿಖೆಗೆ ಅವಕಾಶ ನೀಡಬೇಕು ಎಂಬುದು ಅರ್ಜಿಯ ಪ್ರಮುಖ ಅಂಶವಾಗಿದೆ.

ಈ ನಡುವೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು, ಜಾರಿ ನಿರ್ದೇಶನಾಲಯ (ED) ಕೂಡ ಲೋಕಾಯುಕ್ತದ ಬಿ-ರಿಪೋರ್ಟ್‌ನ್ನು ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದೆ. ಮುಡಾ ಪ್ರಕರಣದ ತನಿಖೆಯಲ್ಲಿ ಜಾರಿ ನಿರ್ದೇಶನಾಲಯಕ್ಕೆ ಲಭ್ಯವಾದ ಕೆಲವು ಅಂಶಗಳನ್ನು ಲೋಕಾಯುಕ್ತದ ಬಿ-ರಿಪೋರ್ಟ್‌ನಲ್ಲಿ ಪರಿಗಣಿಸಲಾಗಿಲ್ಲ ಎಂದು ED ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ED ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಅರವಿಂದ್ ಕಾಮತ್, ಪ್ರಕರಣದಲ್ಲಿ ನಡೆದಿರುವುದಾಗಿ ಆರೋಪಿಸಲಾದ ಕಾನೂನುಬಾಹಿರ ಡಿನೋಟಿಫಿಕೇಷನ್ ಕುರಿತು ಸಮರ್ಪಕ ತನಿಖೆ ನಡೆದಿಲ್ಲ ಎಂದು ವಾದಿಸಿದರು. ಭೂ ಪರಿವರ್ತನೆಗೆ ಸಂಬಂಧಿಸಿದ ಅಕ್ರಮಗಳ ಬಗ್ಗೆಯೂ ಸೂಕ್ತವಾಗಿ ಪರಿಶೀಲನೆ ನಡೆಸಲಾಗಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಬೆಳಕಿಗೆ ಬಂದಿರುವ ಅಂಶಗಳನ್ನು ಪರಿಗಣಿಸದೆ ಬಿ-ರಿಪೋರ್ಟ್ ಸಲ್ಲಿಸಲಾಗಿದೆ ಎಂಬುದು EDಯ ಪ್ರಮುಖ ಆಕ್ಷೇಪವಾಗಿದೆ. ಈ ವಾದಗಳನ್ನು ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠವು ವಿಚಾರಣೆಯನ್ನು ನಾಳೆಗೆ ಮುಂದೂಡಿ, ಆದೇಶ ಕಾಯ್ದಿರಿಸಿದೆ.

ಹೀಗಾಗಿ ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಸಲ್ಲಿಸಿರುವ ಬಿ-ರಿಪೋರ್ಟ್ ಮುಂದುವರಿಯಲಿದೆಯೇ ಅಥವಾ ಅದನ್ನು ಪ್ರಶ್ನಿಸಿರುವ ಅರ್ಜಿಗಳಿಗೆ ನ್ಯಾಯಾಲಯ ಯಾವ ರೀತಿಯ ಆದೇಶ ನೀಡಲಿದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.

ಸಿಗರೇಟ್ ಸೇದುವ ವಿಚಾರಕ್ಕೆ ಯುವಕನ ಕೊಲೆ; 8 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ!

0

ಬೆಂಗಳೂರು: ಸಿಗರೇಟ್ ಸೇದುವ ವಿಚಾರಕ್ಕೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಯುವಕನನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದಲ್ಲಿ ಎಂಟು ಮಂದಿ ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಬೆಂಗಳೂರಿನ ಶಾಂತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2017ರಲ್ಲಿ ಈ ಘಟನೆ ನಡೆದಿತ್ತು. ಸಿಗರೇಟ್ ಸೇದುವ ವಿಚಾರವಾಗಿ ಹರೀಶ್ ಎಂಬ ಯುವಕನೊಂದಿಗೆ ಆರೋಪಿಗಳ ಗುಂಪು ಗಲಾಟೆ ನಡೆಸಿತ್ತು. ಆರಂಭದಲ್ಲಿ ಮಾತಿನ ಚಕಮಕಿ ನಡೆದಿದ್ದು, ಬಳಿಕ ಗಲಾಟೆ ವಿಕೋಪಕ್ಕೆ ತಿರುಗಿತ್ತು. ಆರೋಪಿಗಳು ಹರೀಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು.

ಘಟನೆ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೂವರು ಅಪ್ರಾಪ್ತರು ಸೇರಿದಂತೆ ಒಟ್ಟು 13 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

ಪ್ರಕರಣದ ವಿಚಾರಣೆ ಸುದೀರ್ಘವಾಗಿ ನಡೆದಿದ್ದು, 59ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ್ದಾರೆ. ಆರೋಪಿಗಳ ವಿರುದ್ಧದ ಕೊಲೆ ಕೃತ್ಯ ಸಾಬೀತಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಪ್ರಕರಣದಲ್ಲಿದ್ದ ಮೂವರು ಅಪ್ರಾಪ್ತರನ್ನು ಹೊರತುಪಡಿಸಿ ಪ್ರಮುಖ ಎಂಟು ಮಂದಿ ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ವೆಂಕಟೇಶ್, ವಿಜಯ್, ವಿನೋದ್, ಜೆರಾಲ್ಡ್ ಆರೋಗ್ಯ ರಾಜ್, ಜೇಮ್ಸ್ ಕುಮಾರ್, ಕಿರಣ್, ವಿಕ್ರಮ್ ಹಾಗೂ ಮತ್ತೋರ್ವ ವಿಜಯ್ ಶಿಕ್ಷೆಗೆ ಗುರಿಯಾದ ಆರೋಪಿಗಳಾಗಿದ್ದಾರೆ.

ಸಿಗರೇಟ್ ಸೇದುವ ವಿಚಾರಕ್ಕೆ ಆರಂಭವಾದ ಸಣ್ಣ ಗಲಾಟೆಯೇ ಯುವಕನ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಹಲವು ವರ್ಷಗಳ ಬಳಿಕ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿರುವುದು ಗಮನಾರ್ಹವಾಗಿದೆ.

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ₹1.07 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ!

0

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ಜಪ್ತಿ ಮಾಡಲಾಗಿದೆ.

ಥೈಲ್ಯಾಂಡ್‌ನ ಪುಕೆಟ್‌ನಿಂದ ಬೆಂಗಳೂರಿಗೆ ಆಗಮಿಸಿದ್ದ ಪ್ರಯಾಣಿಕನೊಬ್ಬನಿಂದ ಬರೋಬ್ಬರಿ ₹1.07 ಕೋಟಿ ಮೌಲ್ಯದ 3.05 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಪುಕೆಟ್‌ನಿಂದ ವಿಮಾನದ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನ ಲಗೇಜ್ ಬ್ಯಾಗ್ ಮೇಲೆ ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮಾನ ಮೂಡಿದೆ. ಈ ಹಿನ್ನೆಲೆಯಲ್ಲಿ ಬ್ಯಾಗ್‌ನ್ನು ಪರಿಶೀಲನೆ ನಡೆಸಿದಾಗ ಅದರೊಳಗೆ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ.

ಅಧಿಕಾರಿಗಳು ತಕ್ಷಣವೇ 3.05 ಕೆಜಿ ತೂಕದ ಹೈಡ್ರೋಪೋನಿಕ್ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಇದರ ಅಂದಾಜು ಮೌಲ್ಯ ₹1.07 ಕೋಟಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾದಕ ವಸ್ತುವನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಪ್ರಯಾಣಿಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಪ್ರಯಾಣಿಕನು ಗಾಂಜಾವನ್ನು ಎಲ್ಲಿಂದ ಪಡೆದುಕೊಂಡಿದ್ದ, ಬೆಂಗಳೂರಿಗೆ ತಂದು ಯಾರಿಗೆ ಹಸ್ತಾಂತರಿಸಲು ಉದ್ದೇಶಿಸಿದ್ದ ಹಾಗೂ ಇದರ ಹಿಂದೆ ಯಾವುದೇ ಮಾದಕ ವಸ್ತು ಸಾಗಾಟ ಜಾಲ ಕಾರ್ಯನಿರ್ವಹಿಸುತ್ತಿದೆಯೇ ಎಂಬುದರ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಜಪ್ತಿಯಾಗಿರುವ ಮಾದಕ ವಸ್ತುವಿನ ಮೂಲ ಹಾಗೂ ಆರೋಪಿಯ ಸಂಪರ್ಕಗಳ ಬಗ್ಗೆ ತನಿಖೆ ನಡೆಯುತ್ತಿದೆ.