Home Blog Page 93

ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ; 5 ಸ್ಥಾನಗಳ ಗೆಲುವು, ಜೆಡಿಎಸ್ ಗೆ ನಿರಾಸೆ!

ಬೆಂಗಳೂರು: ಭಾರಿ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದು ಮೇಲುಗೈ ಸಾಧಿಸಿದೆ.

ಬಿಜೆಪಿ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದು, ಜೆಡಿಎಸ್‌ನ ಏಕೈಕ ಅಭ್ಯರ್ಥಿ ಗೋವಿಂದರಾಜು ಸೋಲು ಕಂಡಿದ್ದಾರೆ.

ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರು, ಪಿ.ವಿ. ಮೋಹನ್, ಬಿ.ಎಸ್. ಶಿವಣ್ಣ ಹಾಗೂ ವಿನಯ್ ಕಾರ್ತಿಕ್ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳಾದ ಆರ್. ರಘು ಮತ್ತು ಲಿಂಗರಾಜು ಪಾಟೀಲ್ ಆಯ್ಕೆಯಾಗಿದ್ದಾರೆ.

ಮತ ಎಣಿಕೆ ಫಲಿತಾಂಶದ ಪ್ರಕಾರ, ಬಿ.ಕೆ. ಹರಿಪ್ರಸಾದ್ 30, ತಿಪ್ಪಣ್ಣಪ್ಪ ಕಮಕನೂರು 30, ಪಿ.ವಿ. ಮೋಹನ್ 29, ಬಿ.ಎಸ್. ಶಿವಣ್ಣ 30 ಹಾಗೂ ವಿನಯ್ ಕಾರ್ತಿಕ್ 32 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಆರ್. ರಘು 29 ಮತ್ತು ಲಿಂಗರಾಜು ಪಾಟೀಲ್ 27 ಮತಗಳನ್ನು ಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು 14 ಮತಗಳಿಗೆ ಸೀಮಿತರಾದರು.

ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 11 ಹೆಚ್ಚುವರಿ ಮತಗಳು ದೊರೆತಿರುವುದು ಗಮನಾರ್ಹವಾಗಿದೆ. ಬಿಜೆಪಿ ಮತ್ತು ಜೆಡಿಎಸ್‌ನ ಕೆಲ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಚಲಾಯಿಸಿರುವ ಶಂಕೆ ವ್ಯಕ್ತವಾಗಿದ್ದು, ಕ್ರಾಸ್‌ ವೋಟಿಂಗ್ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.

ಗೆಲುವಿಗೆ ಅಗತ್ಯವಿದ್ದ ಮತಗಳ ಕೋಟಾವನ್ನು ಲಿಂಗರಾಜು ಪಾಟೀಲ್ ನೇರವಾಗಿ ತಲುಪದಿದ್ದರೂ, ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಎಲಿಮಿನೇಟ್ ಆದ ಬಳಿಕ ಅವರ ಮತಗಳ ವರ್ಗಾವಣೆಯಿಂದ ಲಿಂಗರಾಜು ಪಾಟೀಲ್ ಗೆಲುವು ಸಾಧಿಸಿದರು.

ಒಟ್ಟು 222 ಮತಗಳು ಚಲಾವಣೆಯಾಗಿದ್ದು, ಅವುಗಳಲ್ಲಿ ಒಂದು ಮತ ಅಸಿಂಧುವಾಗಿದೆ. ಮತದಾನ ವೇಳೆ ಸಂಖ್ಯೆ ಸರಿಯಾಗಿ ನಮೂದಿಸದ ಕಾರಣ ಆ ಮತವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ.

ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದೊಂದಿಗೆ ಕಾಂಗ್ರೆಸ್ ತನ್ನ ಸಂಖ್ಯಾಬಲವನ್ನು ಮತ್ತಷ್ಟು ಬಲಪಡಿಸಿಕೊಂಡಿದ್ದು, ಜೆಡಿಎಸ್‌ಗೆ ಹಿನ್ನಡೆಯಾಗಿದೆ.

ಗದಗದಲ್ಲಿ ಸ್ಪಾ-ಸಲೂನ್‌ಗಳ ಮೇಲೆ ಪೊಲೀಸರ ದಿಢೀರ್ ದಾಳಿ; ಹಲವು ಕೇಂದ್ರಗಳ ಕಾರ್ಯಾಚರಣೆ ಸ್ಥಗಿತ!

0

ಗದಗ: ನಗರದಲ್ಲಿನ ವಿವಿಧ ಸ್ಪಾ ಹಾಗೂ ಸಲೂನ್‌ಗಳಲ್ಲಿ ಇಂದು ಪೊಲೀಸರು ದಿಢೀರ್ ತಪಾಸಣೆ ನಡೆಸಿ, ಅಗತ್ಯ ಪರವಾನಗಿ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿದರು.

ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಹಾಗೂ ಸಂಸ್ಥೆಗಳು ನಿಯಮಾನುಸಾರ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಯಿತು. ತಪಾಸಣೆ ವೇಳೆ ಹಲವು ಸಂಸ್ಥೆಗಳಲ್ಲಿ ಅಗತ್ಯ ದಾಖಲೆಗಳು, ಪರವಾನಗಿಗಳು ಹಾಗೂ ಕಾನೂನುಬದ್ಧ ಅನುಮತಿಗಳ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಸಂಬಂಧಿತ ಸಂಸ್ಥೆಗಳಿಗೆ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ಎಲ್ಲಾ ಕಡ್ಡಾಯ ಅನುಮತಿಗಳು ಮತ್ತು ಅಗತ್ಯ ದಾಖಲೆಗಳನ್ನು ಒದಗಿಸುವವರೆಗೆ ಕೆಲವು ಸಂಸ್ಥೆಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಸ್ಥೆಗಳ ಕುರಿತು ನಗರಸಭೆ, ಹೆಸ್ಕಾಂ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಹಾಗೂ ಆರೋಗ್ಯ ಇಲಾಖೆಗೆ ಪತ್ರ ಬರೆದು ವ್ಯಾಪಾರ ಪರವಾನಗಿ, ವಿದ್ಯುತ್ ಸಂಪರ್ಕ, ಅಗ್ನಿ ಸುರಕ್ಷತೆ ಹಾಗೂ ಆರೋಗ್ಯ ಮಾನದಂಡಗಳ ಕುರಿತು ಪರಿಶೀಲನೆ ನಡೆಸುವಂತೆ ಕೋರಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ತಿಳಿಸಿದ್ದಾರೆ.

ಇದಲ್ಲದೆ, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ (ಕೆಪಿಎಂಇ) ಅಡಿಯಲ್ಲಿ ಅಗತ್ಯ ಪರವಾನಗಿ ಮತ್ತು ನೋಂದಣಿಗಳನ್ನು ಹೊಂದಿರುವ ಬಗ್ಗೆ ಕೂಡ ಪರಿಶೀಲನೆ ನಡೆಸಲಾಗುತ್ತಿದೆ. ಸಂಬಂಧಿತ ಇಲಾಖೆಗಳ ವರದಿ ಹಾಗೂ ದಾಖಲೆಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ನಗರದಲ್ಲಿನ ಎಲ್ಲಾ ಸ್ಪಾ ಹಾಗೂ ಸಲೂನ್‌ಗಳು ಕಾನೂನುಬದ್ಧ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಎಸ್ಪಿ ಎಚ್ಚರಿಕೆ ನೀಡಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಮುರ್ತುಜಾ ಖಾದ್ರಿ, ಮಹಿಳಾ ಠಾಣೆಯ ಇನ್ಸ್‌ಪೆಕ್ಟರ್ ಎಲ್.ಕೆ.ಜೂಲಕಟ್ಟಿ, ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಿದ್ದರಾಮೇಶ್ವರ ಸೇರಿದಂತೆ ವಿವಿಧ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಬಿಸಿಯೂಟದಲ್ಲಿ ಹಲ್ಲಿ ಬಿದ್ದ ಶಂಕೆ; 67 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು!

ಮಂಡ್ಯ: ಶಾಲೆಯ ಬಿಸಿಯೂಟದಲ್ಲಿ ಹಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ 67 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ರಾವಣಿ ಗ್ರಾಮದಲ್ಲಿ ನಡೆದಿದೆ.

ರಾವಣಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮಧ್ಯಾಹ್ನದ ಬಿಸಿಯೂಟ ಸೇವಿಸುವ ವೇಳೆ ವಿದ್ಯಾರ್ಥಿಯೊಬ್ಬನ ತಟ್ಟೆಯಲ್ಲಿ ಹಲ್ಲಿ ಬಾಲದಂತಿರುವ ವಸ್ತು ಕಂಡುಬಂದಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಆತಂಕ ಉಂಟಾಗಿದೆ.

ತಕ್ಷಣ ಎಚ್ಚೆತ್ತ ಶಾಲಾ ಸಿಬ್ಬಂದಿ, ಊಟ ಸೇವಿಸಿದ್ದ 67 ವಿದ್ಯಾರ್ಥಿಗಳನ್ನು ಮಳವಳ್ಳಿ ತಾಲೂಕು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ.

ವೈದ್ಯರು ಎಲ್ಲಾ ಮಕ್ಕಳ ಆರೋಗ್ಯ ಪರೀಕ್ಷೆ ನಡೆಸಿದ್ದು, ಯಾವುದೇ ವಿದ್ಯಾರ್ಥಿಯಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ಮಕ್ಕಳಿಗಿಂತ ಮೊದಲು ಊಟ ಸೇವಿಸಿದ್ದ ಅಡುಗೆ ಸಿಬ್ಬಂದಿಗೂ ಯಾವುದೇ ತೊಂದರೆ ಉಂಟಾಗಿಲ್ಲ ಎನ್ನಲಾಗಿದೆ.

ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯಾರ್ಥಿಗಳನ್ನು ಆಸ್ಪತ್ರೆಯಲ್ಲೇ ವೈದ್ಯರ ನಿಗಾದಲ್ಲಿ ಇರಿಸಲಾಗಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ.

ಪ್ರತಿದಿನ ಬೆಳ್ಳುಳ್ಳಿ ಸೇವಿಸಿದರೆ ಕೊಲೆಸ್ಟ್ರಾಲ್ ನಿಯಂತ್ರಣ ಸಾಧ್ಯವೇ? ಸಂಪೂರ್ಣ ಮಾಹಿತಿ ತಿಳಿಯಿರಿ!

0

ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕರ ಆಹಾರ ಪದ್ಧತಿ ಹಾಗೂ ಜೀವನಶೈಲಿಯಿಂದಾಗಿ ಹೈ ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚಾಗುತ್ತಿದೆ.

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ ಅದು ರಕ್ತನಾಳಗಳಲ್ಲಿ ಪ್ಲೇಕ್ ರೂಪದಲ್ಲಿ ಸಂಗ್ರಹವಾಗಿ ರಕ್ತ ಪರಿಚಲನೆಗೆ ಅಡ್ಡಿಯಾಗುತ್ತದೆ. ಇದು ಮುಂದಿನ ದಿನಗಳಲ್ಲಿ ಹೃದಯಾಘಾತ ಸೇರಿದಂತೆ ಗಂಭೀರ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುವ ಸಾಧ್ಯತೆಯಿದೆ.

ಆಯುರ್ವೇದ ತಜ್ಞರ ಪ್ರಕಾರ, ಬೆಳ್ಳುಳ್ಳಿ ಕೇವಲ ಅಡುಗೆ ಪದಾರ್ಥವಲ್ಲದೆ ಹೃದಯದ ಆರೋಗ್ಯ ಕಾಪಾಡುವ ಔಷಧೀಯ ಗುಣಗಳನ್ನು ಹೊಂದಿದೆ. ಹಸಿ ಬೆಳ್ಳುಳ್ಳಿಯಲ್ಲಿ ಇರುವ ‘ಆಲಿಸಿನ್’ ಎಂಬ ಸಕ್ರಿಯ ಸಂಯುಕ್ತವು ಉತ್ಕರ್ಷಣ ನಿರೋಧಕ ಹಾಗೂ ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ರಕ್ತನಾಳಗಳನ್ನು ಸಡಿಲಗೊಳಿಸಲು ಮತ್ತು ರಕ್ತ ಸಂಚಾರ ಸುಧಾರಿಸಲು ಸಹಕಾರಿಯಾಗಿದೆ.

ನಿಯಮಿತ ಪ್ರಮಾಣದಲ್ಲಿ ಬೆಳ್ಳುಳ್ಳಿ ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ. ಜೊತೆಗೆ ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಲು ಸಹಕಾರಿ ಎಂದು ತಜ್ಞರು ತಿಳಿಸಿದ್ದಾರೆ.

ಆದರೆ ಬೆಳ್ಳುಳ್ಳಿಯ ಮೇಲೆ ಮಾತ್ರ ಅವಲಂಬಿತರಾಗದೆ, ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಉತ್ತಮ ನಿದ್ರೆ ಹಾಗೂ ಒತ್ತಡರಹಿತ ಜೀವನಶೈಲಿಯನ್ನು ಅನುಸರಿಸುವುದು ಅಗತ್ಯವಾಗಿದೆ. ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದವರು ಅಥವಾ ರಕ್ತ ತೆಳುಗೊಳಿಸುವ ಔಷಧಿಗಳನ್ನು ಸೇವಿಸುತ್ತಿರುವವರು ಬೆಳ್ಳುಳ್ಳಿಯನ್ನು ಔಷಧೀಯ ಉದ್ದೇಶಕ್ಕಾಗಿ ಬಳಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.

ಬೆಳ್ಳುಳ್ಳಿಯನ್ನು ಹಸಿ ರೂಪದಲ್ಲಿ ಜೇನುತುಪ್ಪ ಅಥವಾ ಬೆಚ್ಚಗಿನ ನೀರಿನೊಂದಿಗೆ ಸೇವಿಸಬಹುದು. ಗ್ಯಾಸ್ಟ್ರಿಕ್ ಅಥವಾ ಶಾಖದ ಸಮಸ್ಯೆ ಇರುವವರು ಹಾಲಿನೊಂದಿಗೆ ಕುದಿಸಿ ‘ಬೆಳ್ಳುಳ್ಳಿ ಹಾಲು’ ರೂಪದಲ್ಲಿ ಸೇವಿಸಿದರೆ ಉತ್ತಮ ಎಂದು ಸಲಹೆ ನೀಡಲಾಗಿದೆ.

‘ರೈತರ ವಾಹನಗಳಿಗೆ ಟೋಲ್ ಬೇಡ’: ರಾಜ್ಯಾದ್ಯಂತ ಹೋರಾಟಕ್ಕೆ ರೈತ ಸಂಘಗಳ ಕರೆ

0

ಮಂಡ್ಯ: ರೈತರ ವಾಹನಗಳಿಂದ ಟೋಲ್ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಹಾಗೂ ರಾಜ್ಯದ ಟೋಲ್ ವ್ಯವಸ್ಥೆಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ಜೂನ್ 23ರಂದು ರಾಜ್ಯಾದ್ಯಂತ ಟೋಲ್ ಬೂತ್‌ಗಳ ಮುಂದೆ ಪ್ರತಿಭಟನೆ ನಡೆಸಲು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘ ನಿರ್ಧರಿಸಿವೆ.

ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕೃಷಿ ಉತ್ಪನ್ನ ಸಾಗಿಸುವ ವಾಹನಗಳ ಮೇಲೆ ಟೋಲ್ ವಿಧಿಸುವುದು ರೈತರ ಬದುಕಿನ ಮೇಲೆ ಹೆಚ್ಚುವರಿ ಹೊರೆ ಹಾಕಿದಂತಾಗಿದೆ ಎಂದು ಆರೋಪಿಸಿದರು. ರೈತರು ಈಗಾಗಲೇ ಇಂಧನ, ರಸಗೊಬ್ಬರ, ಕಾರ್ಮಿಕ ವೆಚ್ಚಗಳ ಒತ್ತಡ ಎದುರಿಸುತ್ತಿದ್ದು, ಟೋಲ್ ಸುಂಕ ಮತ್ತೊಂದು ಹೊರೆ ಆಗಿದೆ ಎಂದು ಹೇಳಿದರು.

ವಾಹನ ಮಾಲೀಕರು ರಸ್ತೆ ತೆರಿಗೆಯನ್ನು ಪಾವತಿಸಿದ ನಂತರ ಮತ್ತೆ ಟೋಲ್ ಹೆಸರಿನಲ್ಲಿ ಹಣ ಸಂಗ್ರಹಿಸುವುದು ನ್ಯಾಯಸಮ್ಮತವಲ್ಲ. ಆದ್ದರಿಂದ ರೈತರ ವಾಹನಗಳಿಗೆ ಸಂಪೂರ್ಣ ವಿನಾಯಿತಿ ಘೋಷಿಸಬೇಕು ಹಾಗೂ ರಾಜ್ಯದ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

ಪಂಜಾಬ್‌ನಲ್ಲಿ ಜಾರಿಯಲ್ಲಿರುವ ಮಾದರಿಯನ್ನು ಕರ್ನಾಟಕದಲ್ಲೂ ಅನುಸರಿಸಬೇಕು. ಅಲ್ಲದೆ ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಬೇಕಿರುವ ಕಬ್ಬಿನ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನು ರೈತ ಸಂಘಟನೆಗಳು ನೀಡಿವೆ.

ದರ್ಶನ್ ಕೇಸ್‌ಗೆ ಕಾನೂನು ತಿರುವು: ದರ್ಶನ್ ಪರ ಈ ಕೋರ್ಟ್‌ನಲ್ಲಿ ವಾದ ಮಂಡಿಸಲ್ಲ ಎಂದ ವಕೀಲ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಸಂಬಂಧಿಸಿದ ಕಾನೂನು ಹೋರಾಟ ಹೊಸ ತಿರುವು ಪಡೆದಿದೆ. ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಮಹತ್ವದ ಅರ್ಜಿಯ ವಿಚಾರಣೆ ವೇಳೆ ದರ್ಶನ್ ಪರ ವಕೀಲ ಸುನೀಲ್ ಅವರು ಪ್ರಕರಣದಿಂದ ಹಿಂದೆ ಸರಿಯಲು ಮನವಿ ಸಲ್ಲಿಸಿದ್ದು, ನ್ಯಾಯಾಂಗ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ರೇಣುಕಾಸ್ವಾಮಿ ಅವರ ತಾಯಿಯನ್ನು ಮರು ಪಾಟೀಸವಾಲಿಗೆ ಒಳಪಡಿಸಲು ಅವಕಾಶ ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ವಕೀಲ ಸುನೀಲ್, ಹೈಕೋರ್ಟ್‌ನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಅವರಿಂದ ಯಾವುದೇ ಸ್ಪಷ್ಟ ಸೂಚನೆ ಪಡೆದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ಕಾರಣದಿಂದ ವಾದ ಮಂಡನೆಯಿಂದ ನಿವೃತ್ತಿಯಾಗಲು ಹಾಗೂ ಮುಂದಿನ ಕಾನೂನು ಕ್ರಮಗಳಿಗೆ ಸಮಯ ನೀಡುವಂತೆ ಕೋರಿದರು.

ಮನವಿಯನ್ನು ಪರಿಗಣಿಸಿದ ಹೈಕೋರ್ಟ್, ಪ್ರಕರಣದ ವಿಚಾರಣೆಯನ್ನು ಜೂನ್ 23ಕ್ಕೆ ಮುಂದೂಡಿದೆ. ಅಂದು ದರ್ಶನ್ ಪರ ಹೊಸ ವಕೀಲರು ಹಾಜರಾಗಲಿದ್ದಾರೆಯೇ ಅಥವಾ ಹಾಲಿ ವಕೀಲರೇ ಮುಂದುವರಿಸಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ.

ಇನ್ನೊಂದೆಡೆ, ಪ್ರಕರಣದಲ್ಲಿ ಮಹತ್ವದ ಸಾಕ್ಷ್ಯವೆಂದು ಪರಿಗಣಿಸಲಾಗುತ್ತಿರುವ ಸಿಸಿಟಿವಿ ದೃಶ್ಯಾವಳಿ ಒಳಗೊಂಡ ಪೆನ್‌ಡ್ರೈವ್‌ಗೆ ಸೆಷನ್ಸ್ ನ್ಯಾಯಾಲಯ ಮಾನ್ಯತೆ ನೀಡಿದೆ. ತನಿಖಾಧಿಕಾರಿಗಳು ಸಲ್ಲಿಸಿದ್ದ ಡಿಜಿಟಲ್ ಸಾಕ್ಷ್ಯಕ್ಕೆ ಸಂಬಂಧಿಸಿದ ಪ್ರಮಾಣಪತ್ರವನ್ನು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕ, ಪೆನ್‌ಡ್ರೈವ್ ಅನ್ನು ಸಾಕ್ಷ್ಯಾಧಾರವಾಗಿ ಪರಿಗಣಿಸಲಾಗಿದೆ.

ಮಂಗಳವಾರದ ವಿಚಾರಣೆ ವೇಳೆ ದರ್ಶನ್ ಸೇರಿದಂತೆ ಇತರೆ ಆರೋಪಿಗಳು, ಸಾಕ್ಷ್ಯ ಕಾಯ್ದೆಯ ನಿಯಮಾನುಸಾರ ಪ್ರಮಾಣೀಕರಣವಿಲ್ಲದೆ ಡಿಜಿಟಲ್ ಸಾಕ್ಷ್ಯ ಸ್ವೀಕರಿಸಲಾಗುವುದಿಲ್ಲ ಎಂದು ಆಕ್ಷೇಪಿಸಿದ್ದರು. ಆದರೆ ಬುಧವಾರ ಅಗತ್ಯ ದಾಖಲೆಗಳು ಸಲ್ಲಿಕೆಯಾಗುತ್ತಿದ್ದಂತೆ ನ್ಯಾಯಾಲಯ ಪೆನ್‌ಡ್ರೈವ್‌ಗೆ ಕಾನೂನು ಮಾನ್ಯತೆ ನೀಡಿದೆ.

ಇದರಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಡಿಜಿಟಲ್ ಸಾಕ್ಷ್ಯಗಳ ಪಾತ್ರ ಮತ್ತಷ್ಟು ಮಹತ್ವ ಪಡೆದುಕೊಂಡಿದ್ದು, ಮುಂದಿನ ನ್ಯಾಯಾಂಗ ಪ್ರಕ್ರಿಯೆಗಳ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

ಕಚ್ಚಾ ತೈಲ ಬೆಲೆ ಇಳಿದ ತಕ್ಷಣ ಪೆಟ್ರೋಲ್ ದರ ಕಡಿತ ಸಾಧ್ಯವಿಲ್ಲ: ಸಚಿವ ಸುರೇಶ್ ಗೋಪಿ ಸ್ಪಷ್ಟನೆ

0

ಕೇರಳ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿದಿದೆ ಎಂಬ ಕಾರಣಕ್ಕೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ತಕ್ಷಣ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಹಾಗೂ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಇಂಧನ ದರವನ್ನು ಪ್ರತಿ ಲೀಟರ್‌ಗೆ ₹3.94 ಹೆಚ್ಚಿಸಲಾಗಿದ್ದು, ಅದರ ಪರಿಣಾಮ ಜನಸಾಮಾನ್ಯರ ಮೇಲೆ ಬೀರಿದೆ. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಬೆಲೆ ಕುಸಿದ ತಕ್ಷಣವೇ ಅದರ ಲಾಭ ದೇಶೀಯ ಮಾರುಕಟ್ಟೆಗೆ ತಲುಪುವುದಿಲ್ಲ ಎಂದು ಹೇಳಿದರು.

ಅಗ್ಗದ ದರದಲ್ಲಿ ಖರೀದಿಸಲಾದ ಕಚ್ಚಾ ತೈಲ ಭಾರತಕ್ಕೆ ತಲುಪಲು ಸಮಯ ಬೇಕಾಗುತ್ತದೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳ ಸಂಚಾರದಲ್ಲಿ ದಟ್ಟಣೆ ಇರುವುದರಿಂದ ಪೂರೈಕೆ ಸರಪಳಿ ಸಾಮಾನ್ಯ ಸ್ಥಿತಿಗೆ ಮರಳಲು ಸ್ವಲ್ಪ ಕಾಲಾವಕಾಶ ಅಗತ್ಯವಿದೆ ಎಂದು ವಿವರಿಸಿದರು.

ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಆರಂಭವಾದ ಬಳಿಕ ತೈಲ ಕಂಪನಿಗಳು ಸಾಕಷ್ಟು ಆರ್ಥಿಕ ಒತ್ತಡ ಎದುರಿಸಿವೆ. ಈ ಸಂಕಷ್ಟವನ್ನು ಕೇಂದ್ರ ಸರ್ಕಾರ ಸಮರ್ಥವಾಗಿ ನಿಭಾಯಿಸಿದ್ದು, ಸುಮಾರು ₹12,000 ಕೋಟಿ ನಷ್ಟವನ್ನೂ ಭರಿಸಿದೆ. ಇಂಧನ ದರ ಏರಿಳಿತದ ನಡುವೆಯೂ ಹಲವು ರಾಜ್ಯಗಳು ತಮ್ಮ ತೆರಿಗೆ ಆದಾಯದಲ್ಲಿ ಯಾವುದೇ ಕಡಿತ ಮಾಡಿಲ್ಲ ಎಂದು ಅವರು ತಿಳಿಸಿದರು.

ಕೇರಳದಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪನೆ ಕುರಿತು ಪ್ರತಿಕ್ರಿಯಿಸಿದ ಸುರೇಶ್ ಗೋಪಿ, ಇದು ಸಾಮಾನ್ಯ ಯೋಜನೆಯಲ್ಲ; ನಿಗದಿತ ನಿಯಮ ಮತ್ತು ಪ್ರಕ್ರಿಯೆಗಳ ಮೂಲಕವೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

ರಾಜ್ಯ ಸರ್ಕಾರವು ಏಮ್ಸ್‌ಗೆ ಸೂಕ್ತವೆಂದು ಗುರುತಿಸಿರುವ ಸ್ಥಳಗಳ ವಿವರವನ್ನು ಸಂಬಂಧಿತ ಸಮಿತಿಗೆ ಸಲ್ಲಿಸಬೇಕು. ಬಳಿಕ ಪರಿಶೀಲನೆ ನಡೆಸಿ ಅಂತಿಮ ಸ್ಥಳದ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ಕುರಿತು ಕೇರಳ ಆರೋಗ್ಯ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು. ಆದರೆ ಈವರೆಗೆ ಯಾವುದೇ ಅಧಿಕೃತ ಆಹ್ವಾನ ಬಂದಿಲ್ಲ ಎಂದು ಸಚಿವರು ಹೇಳಿದ್ದಾರೆ.

ವಸತಿ ಶಾಲೆಯಲ್ಲಿ 10 ವರ್ಷದ ವಿದ್ಯಾರ್ಥಿ ಅನುಮಾನಾಸ್ಪದ ಸಾವು; ‘ಶಿಕ್ಷಕರು ಹೊಡೆದಿದ್ದರು’ ಎಂದಿದ್ದ ಬಾಲಕ

0

ಧಾರವಾಡ: ವಸತಿ ಶಾಲೆಯಲ್ಲಿ ಓದುತ್ತಿದ್ದ 10 ವರ್ಷದ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿ ರಸ್ತೆಯಲ್ಲಿರುವ ವಿದ್ಯಾಜ್ಯೋತಿ ವಸತಿ ಶಾಲೆಯಲ್ಲಿ ಬೆಳಕಿಗೆ ಬಂದಿದೆ. ಘಟನೆಯು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಪೋಷಕರು ಶಾಲಾ ಆಡಳಿತದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಶಾನವಾಡ ಗ್ರಾಮದ ಆಕಾಶ್ ನೀಲಣ್ಣವರ್ (10) ಮೃತ ವಿದ್ಯಾರ್ಥಿ. ಸುಮಾರು 10 ದಿನಗಳ ಹಿಂದಷ್ಟೇ ತಂದೆ ವಸಂತ್ ಅವರು ಮಗನನ್ನು ನಾಲ್ಕನೇ ತರಗತಿಗೆ ವಸತಿ ಶಾಲೆಗೆ ಸೇರಿಸಿದ್ದರು.

ಬುಧವಾರ ಮುಂಜಾನೆ ಶಾಲಾ ಸಿಬ್ಬಂದಿ ಪೋಷಕರಿಗೆ ಕರೆ ಮಾಡಿ, ಆಕಾಶ್ ಕಾಂಪೌಂಡ್ ಮೇಲಿಂದ ಬಿದ್ದು ಗಾಯಗೊಂಡಿದ್ದು, ನವಲಗುಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಬಳಿಕ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲು ಪೋಷಕರು ಮುಂದಾದರೂ, ಮಾರ್ಗಮಧ್ಯೆಯೇ ಆಕಾಶ್ ಮೃತಪಟ್ಟಿದ್ದಾನೆ.

ಘಟನೆ ಕುರಿತು ಅನುಮಾನ ವ್ಯಕ್ತಪಡಿಸಿರುವ ಮೃತ ಬಾಲಕನ ತಂದೆ ವಸಂತ್, “ನಿನ್ನೆ ಮಗ ಕರೆ ಮಾಡಿ ಶಿಕ್ಷಕರು ಹೊಡೆದಿದ್ದಾರೆ ಎಂದು ಹೇಳಿದ್ದ. ಈಗ ಶಾಲೆಯವರು ಕಾಂಪೌಂಡ್ ಮೇಲಿಂದ ಬಿದ್ದಿದ್ದಾನೆ ಎನ್ನುತ್ತಿದ್ದಾರೆ. ಕಾಂಪೌಂಡ್ ಮೇಲಿಂದ ಬಿದ್ದರೆ ಸಾವಾಗುವುದಿಲ್ಲ. ಆತ ನಿಜವಾಗಿಯೂ ಕಾಂಪೌಂಡ್ ಮೇಲಿಂದ ಬಿದ್ದಿದ್ದಾನಾ, ಅಥವಾ ಶಾಲಾ ಕಟ್ಟಡದಿಂದ ಬಿದ್ದಿದ್ದಾನಾ ಎಂಬುದು ಸಿಸಿಟಿವಿ ದೃಶ್ಯ ಪರಿಶೀಲಿಸಿದ ಬಳಿಕವೇ ಗೊತ್ತಾಗಬೇಕು” ಎಂದು ಪ್ರಶ್ನಿಸಿದ್ದಾರೆ.

ಘಟನೆಯ ಹಿನ್ನೆಲೆ ಶಾಲಾ ಆಡಳಿತದ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಸಾವಿನ ನಿಖರ ಕಾರಣ ಪತ್ತೆಹಚ್ಚುವಂತೆ ಆಗ್ರಹಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ನವಲಗುಂದ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ಆರಂಭಿಸಿದ್ದಾರೆ.

ವಿದ್ಯಾರ್ಥಿಯ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿರುವ ಹಿನ್ನೆಲೆಯಲ್ಲಿ ಸಿಸಿಟಿವಿ ದೃಶ್ಯಗಳು ಹಾಗೂ ವೈದ್ಯಕೀಯ ವರದಿಗಳು ತನಿಖೆಗೆ ಪ್ರಮುಖ ಸಾಕ್ಷಿಯಾಗುವ ಸಾಧ್ಯತೆಯಿದೆ.

ಗೌಪ್ಯ ಮತದಾನದ ನಿಯಮ ಉಲ್ಲಂಘಿಸಿಲ್ಲ, ನನ್ನ ಮತ ಮಾನ್ಯ: ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟನೆ

ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಗೌಪ್ಯ ಮತದಾನದ ನಿಯಮ ಉಲ್ಲಂಘಿಸಿದ್ದಾರೆ ಎಂಬ ಕಾಂಗ್ರೆಸ್ ಆರೋಪವನ್ನು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಳ್ಳಿಹಾಕಿದ್ದು, ತಾವು ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತದಾನದ ಕೊಠಡಿಯೊಳಗೆ ತಾವು ಯಾರಿಗೆ ಮತ ಹಾಕಿದ್ದೇವೆ ಎಂಬುದು ಸಂಪೂರ್ಣ ಗೌಪ್ಯವಾಗಿಯೇ ಉಳಿದಿದೆ. ಮತ ಚಲಾಯಿಸಿದ ತಕ್ಷಣ ಅಲ್ಲಿಯೇ ಯಾರಿಗಾದರೂ ಮತಪತ್ರವನ್ನು ತೋರಿಸಿದ್ದರೆ ಮಾತ್ರ ಅದು ಅಮಾನ್ಯವಾಗುತ್ತಿತ್ತು. ಆದರೆ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದರು.

“ನಾನು ಗೌಪ್ಯವಾಗಿಯೇ ಮತ ಹಾಕಿದ್ದೇನೆ. ಯಾರಿಗೂ ಮತಪತ್ರ ತೋರಿಸಿಲ್ಲ. ಹೀಗಾಗಿ ನನ್ನ ಮತ ಸಂಪೂರ್ಣ ಮಾನ್ಯವಾಗಿದೆ,” ಎಂದು ಯತ್ನಾಳ್ ಹೇಳಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ಪತ್ರ ಬರೆದಿರುವುದನ್ನು ಒಪ್ಪಿಕೊಂಡ ಅವರು, “ನಾನು ಲಿಂಗರಾಜ ಪಾಟೀಲ್ ಅವರ ಹೆಸರನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದೇನೆ. ಆದರೆ ಮತದಾನದ ಕೊಠಡಿಯೊಳಗೆ ಯಾರಿಗೆ ಮತ ಹಾಕಿದ್ದೇನೆ ಎಂಬುದನ್ನು ಯಾರಿಗೂ ತೋರಿಸಿಲ್ಲ. ಗೌಪ್ಯ ಮತದಾನದ ನಿಯಮವನ್ನು ಸಂಪೂರ್ಣವಾಗಿ ಪಾಲಿಸಿದ್ದೇನೆ,” ಎಂದು ಸ್ಪಷ್ಟನೆ ನೀಡಿದರು.

ತಾವು ಬಿಜೆಪಿ ಚಿಹ್ನೆಯಡಿ ಆಯ್ಕೆಯಾಗಿ ಶಾಸಕನಾಗಿದ್ದೇನೆ. ಆತ್ಮಸಾಕ್ಷಿಗೆ ಅನುಗುಣವಾಗಿ ಹಾಗೂ ಪಕ್ಷ ಸೂಚಿಸಿದ್ದ ಅಭ್ಯರ್ಥಿಗೆ ಮತ ಚಲಾಯಿಸಿದ್ದೇನೆ ಎಂದು ಹೇಳಿದ ಅವರು, ಬಿಜೆಪಿ ನಾಯಕ ಅಶ್ವತ್ಥ ನಾರಾಯಣ್ ಸೇರಿದಂತೆ 49 ಶಾಸಕರು ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದ್ದರು. ಪಕ್ಷದ ಚಿಹ್ನೆಯಡಿ ಗೆದ್ದು ಬಂದಿರುವ ಕಾರಣ ಪಕ್ಷದ ಸೂಚನೆಯನ್ನು ಪಾಲಿಸಿದ್ದೇನೆ ಎಂದು ಯತ್ನಾಳ್ ತಿಳಿಸಿದರು.

10 ಲಕ್ಷ ವರದಕ್ಷಿಣೆಗಾಗಿ ಪತ್ನಿಗೆ ಚಿತ್ರಹಿಂಸೆ: ವಿಡಿಯೋ ಕಾಲ್‌ನಲ್ಲಿ ಕಿರುಕುಳ ಬಹಿರಂಗ- ಕುಕ್ಕರ್‌ನಿಂದ ಹೊಡೆದು ಹತ್ಯೆ

0

ಕೋಲಾರ: ವರದಕ್ಷಿಣೆ ಬೇಡಿಕೆ, ನಿರಂತರ ಕಿರುಕುಳ ಮತ್ತು ಮಾರಣಾಂತಿಕ ಹಲ್ಲೆಯ ಆರೋಪಗಳ ನಡುವೆ ಯುವತಿಯೊಬ್ಬಳು ಸಾವನ್ನಪ್ಪಿರುವ ಪ್ರಕರಣ ಕೋಲಾರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹಸಾಳ ಗ್ರಾಮದ ನಿವಾಸಿ ಸಹನಾ (24) ಮೃತಪಟ್ಟಿದ್ದು, ಪತಿ ಮಂಜುನಾಥ್ ವಿರುದ್ಧ ಹತ್ಯೆ ಆರೋಪ ಕೇಳಿಬಂದಿದೆ.

ಮದುವೆಯಾಗಿ ಐದು ವರ್ಷಗಳಾಗಿದ್ದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ವಿವಾಹದ ಆರಂಭದಿಂದಲೇ ಮಂಜುನಾಥ್ ಹೆಚ್ಚುವರಿ ಹಣಕ್ಕಾಗಿ ಪತ್ನಿಯ ಮೇಲೆ ಒತ್ತಡ ಹೇರುತ್ತಿದ್ದ ಎಂದು ಆರೋಪಿಸಲಾಗಿದೆ. ಮದುವೆ ವೆಚ್ಚದ ಹೆಸರಿನಲ್ಲಿ ಈ ಹಿಂದೆ 2 ಲಕ್ಷ ರೂಪಾಯಿ ಪಡೆದಿದ್ದ ಆತ, ನಂತರ ಮನೆ ನಿರ್ಮಾಣಕ್ಕಾಗಿ 10 ಲಕ್ಷ ರೂಪಾಯಿ ತರಬೇಕೆಂದು ಆಗ್ರಹಿಸಿದ್ದ ಎನ್ನಲಾಗಿದೆ.

ಹಣದ ವಿಚಾರವಾಗಿ ಪದೇ ಪದೇ ಗಲಾಟೆ ನಡೆಯುತ್ತಿದ್ದ ಕಾರಣ ಹಲವು ಬಾರಿ ಕುಟುಂಬ ಮಟ್ಟದಲ್ಲಿ ರಾಜಿ ಪಂಚಾಯಿತಿಗಳು ನಡೆದಿದ್ದವು. ಆದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ ಎಂದು ಮೃತಳ ಸಂಬಂಧಿಕರು ತಿಳಿಸಿದ್ದಾರೆ.

ಘಟನೆಗೆ ಕೆಲವೇ ಗಂಟೆಗಳ ಮೊದಲು ಸಹನಾ ತನ್ನ ತಾಯಿ ಜಯಮ್ಮ ಅವರಿಗೆ ವಿಡಿಯೋ ಕಾಲ್ ಮಾಡಿ, “ನನ್ನ ಮೇಲೆ ಹಲ್ಲೆ ನಡೆಯುತ್ತಿದೆ, ಮೂಗಿನಿಂದ ರಕ್ತ ಬರುತ್ತಿದೆ” ಎಂದು ಹೇಳಿದ್ದಳು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬಳಿಕ ರಾತ್ರಿ ವೇಳೆ ಮಂಜುನಾಥ್ ಕುಕ್ಕರ್ ಸೇರಿದಂತೆ ಅಡುಗೆ ಪಾತ್ರೆಗಳಿಂದ ಹಲ್ಲೆ ನಡೆಸಿದ್ದು, ಸಹನಾ ಅಸ್ವಸ್ಥಳಾದ ನಂತರ ನೇಣು ಬಿಗಿದು ಆತ್ಮಹತ್ಯೆಯಂತೆ ತೋರಿಸಲು ಯತ್ನಿಸಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಪ್ರಕರಣದ ಮಾಹಿತಿ ಪಡೆದ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆರೋಪಿ ಮಂಜುನಾಥ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಸಾವಿನ ನಿಖರ ಕಾರಣ ಹಾಗೂ ಕುಟುಂಬಸ್ಥರ ಆರೋಪಗಳ ಕುರಿತು ತನಿಖೆ ಮುಂದುವರಿದಿದೆ.