ಬೆಂಗಳೂರು: ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಕರ್ನಾಟಕದವರ ರಕ್ಷಣೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಯಾರೂ ಆತಂಕಪಡುವ ಅಗತ್ಯವಿಲ್ಲ. ರಾಜ್ಯ ಸರ್ಕಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಸಿಲುಕಿರುವ ಪ್ರತಿಯೊಬ್ಬರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಭರವಸೆ ನೀಡಿದರು.
ಶನಿವಾರದಿಂದಲೇ ಸಹಾಯವಾಣಿ ಆರಂಭಿಸಲಾಗಿದ್ದು, ಇದುವರೆಗೆ 109 ಮಂದಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ದೆಹಲಿಯಲ್ಲಿರುವ ರಾಜ್ಯದ ರೆಸಿಡೆಂಟ್ ಕಮೀಷನರ್ ಕೂಡ ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಸಿಲುಕಿರುವವರಿಗೆ ಮುಖ್ಯವಾಗಿ ಮೂರು ಆತಂಕಗಳಿವೆ – ಅವರನ್ನು ಹೇಗೆ ವಾಪಸ್ ಕರೆಸಿಕೊಳ್ಳಲಾಗುತ್ತದೆ? ವಿಶೇಷ ವಿಮಾನ ವ್ಯವಸ್ಥೆ ಇರಬಹುದೇ? ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಈ ಕುರಿತು ಸಚಿವರು, “ಪ್ರಸ್ತುತ ಏರ್ ಟ್ರಾಫಿಕ್ ನಿಷೇಧಗೊಂಡಿದೆ. ವಿಮಾನ ಸಂಚಾರ ಪುನರಾರಂಭವಾದ ಕೂಡಲೇ ಕೇಂದ್ರ ಸರ್ಕಾರ ಕೈಗೊಳ್ಳುವ ಕ್ರಮಗಳ ಬಗ್ಗೆ ಮಾಹಿತಿ ಸಿಗುತ್ತದೆ. ಏರ್ ಟ್ರಾಫಿಕ್ ಕ್ಲಿಯರ್ ಆಗುವವರೆಗೆ ತೆರವು ಕಾರ್ಯ ಸಾಧ್ಯವಿಲ್ಲ. ಹೀಗಾಗಿ ಎಲ್ಲರೂ ಶಾಂತವಾಗಿ ಇರಬೇಕು,” ಎಂದು ಮನವಿ ಮಾಡಿದರು.

