ಗೋ-ಪಂಚಗವ್ಯ ಆಧಾರಿತ ಕೃಷಿ ಅತ್ಯಗತ್ಯ : ಸುನೀಲ ಮಾನಸಿಂಗಕಾ

0
Panchagavya expert Sunila Manasingaka is a fan
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕೃಷಿ ಪದ್ಧತಿಯಲ್ಲಿ ಬೆಳೆಗಳಿಗೆ ರಾಸಾಯನಿಕ ಔಷಧಿಯನ್ನು ಬಳಕೆ ಮಾಡುತ್ತಿರುವುದರಿಂದ ಕೃಷಿ ಉತ್ಪನ್ನಗಳು, ಆಹಾರ ವಿಷಯುಕ್ತವಾಗುತ್ತಿದ್ದು, ಗೋವು ಆಧಾರಿತ ಹಾಗೂ ಪಂಚಗವ್ಯ ಆಧಾರಿತ ಕೃಷಿ ಪದ್ಧತಿಯಿಂದ ಮಾತ್ರ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ನಾಗಪೂರದ ದೇವಲಾಪೂರ ಗೋ ವಿಜ್ಞಾನ ಅನುಸಂಧಾನ ಕೇಂದ್ರದ ಮುಖ್ಯಸ್ಥ ಸುನೀಲ ಮಾನಸಿಂಗಕಾ ಹೇಳಿದರು.
ಅವರು ಗದುಗಿನ ಡಿಜಿಎಂ ಆಯುರ್ವೆದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಭಾಂಗಣದಲ್ಲಿ ಗೋ ಸೇವಾ ಗತಿವಿಧಿ ಉತ್ತರಪ್ರಾಂತ ಮತ್ತು ಗೋ-ಜೈವಿಕ ಕೃಷಿ ಅನುಸಂಧಾನ ಕೇಂದ್ರ ಟ್ರಸ್ಟ್ ಗದಗ ಹಾಗೂ ಡಿಜಿಎಂ ಮಹಾವಿದ್ಯಾಲಯದ ಆಶ್ರಯದಲ್ಲಿ ಏರ್ಪಡಿಸಿದ್ದ ಪಂಚಗವ್ಯ ಆಯುರ್ವೇದ ವಿಷಯವಾಗಿ ಉಪನ್ಯಾಸ ನೀಡಿದರು.
ಕೃಷಿ ಪ್ರಧಾನವಾದ ಭಾರತದಲ್ಲಿ ಗೋ ಆಧಾರಿತ, ಪಂಚಗವ್ಯ ಆಧಾರಿತ ಕೃಷಿ ಬದಲಾವಣೆ ಆಗಬೇಕು. ಅಂದಾಗ ಭೂಮಿ ಸತ್ವಯುತವಾಗಿ ಉಳಿಯುವದು ಹಾಗೂ ಹೆಚ್ಚು ಪ್ರಮಾಣದಲ್ಲಿ ಫಸಲು ಪಡೆಯಲು ಸಾಧ್ಯ. ಇದರಿಂದ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರದಂತಹ ಆಹಾರವನ್ನು ಪಡೆಯಬಹುದಾಗಿದೆ. ಈ ಕುರಿತು ಈಗಾಗಲೇ ದೇಶದಾದ್ಯಂತ ಗಂಭೀರ ಚಿಂತನೆಗಳು ನಡೆದಿವೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಗೋ ಸೇವಾ ಗತಿವಿಧಿ ಪ್ರಾಂತ ಪಂಚಗವ್ಯ ಚಿಕಿತ್ಸೆ ಪ್ರಮುಖರಾದ ಡಾ. ಡಿ.ಪಿ. ರಮೇಶ ಮಾತನಾಡಿ, ಪಂಚಗವ್ಯ ಬಳಕೆ ಎಂದಿಗಿಂತ ಇಂದು ಅವಶ್ಯವಿದೆ. ಪರಿಸರದ ಮೇಲೆ ಹಾಗೂ ಮಾನವ ಜನಾಂಗದ ಮೇಲೆ ಯಾವುದೇ ಅಡ್ಡಪರಿಣಾಮ ಬೀರದೆ ಪರಿಣಾಮಕಾರಿ ಫಲಿತಾಂಶ ನೀಡಬಲ್ಲದು ಎಂದರು.
ಈಗಾಗಲೇ ಸುನೀಲ ಮಾನಸಿಂಗಕಾ ಈ ಕುರಿತು ಜನಜಾಗೃತಿ ಕಾರ್ಯವನ್ನು ಕೈಗೊಂಡಿದ್ದು,  ಭಾರತೀಯ ಜೀವ ಜಂತು ಕಲ್ಯಾಣ ನಿಗಮ ರಾಷ್ಟ್ರೀಯ ಪಂಚಗವ್ಯ ಅನುಸಂಧಾನ ಸಮಿತಿ ಗೋಮಯ ಮತ್ತು ಗೋಮೂತ್ರ ಉಪಯೋಗದ ಸಮಿತಿ ನೀತಿ ಆಯೋಗದ ಸದಸ್ಯರಾಗಿ, ರಾಷ್ಟ್ರೀಯ ಗೋವಂಶ ಆಯೋಗ, ರಾಷ್ಟ್ರೀಯ ಕಾಮಧೇನು ಆಯೋಗದ ಪೂರ್ವ ಸದಸ್ಯರಾಗಿ ಹೆಚ್ಚು ಕ್ರಿಯಾಶೀಲತೆಯಿಂದ ಕಾರ್ಯ ಮಾಡಿದ ಚಿಂತಕರಾಗಿದ್ದು, ಅವರ ಉದ್ದೇಶ ಸಾಕಾರಗೊಳ್ಳಬೇಕು ಎಂದರು.
ಚನ್ನಬಸವ ರಡ್ಡಿ, ಡಾ. ಆರ್.ವ್ಹಿ. ಶೆಟ್ಟರ ಅವರು ಪಂಚಗವ್ಯ ತಯಾರಿಕೆ, ಬಳಕೆ ಮತ್ತು ಅದರ ಮಹತ್ವವನ್ನು ವಿಶ್ಲೇಷಿಸಿ ಮಾತನಾಡಿದರು. ದತ್ತಾತ್ರೇಯ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಬೂದೇಶ ಕನಾಜ ಸ್ವಾಗತಿಸಿ ನಿರೂಪಿಸಿದರು. ರವಿ ಟಿ.ಹಡಪದ ವಂದಿಸಿದರು.
Advertisement
ಕೃಷಿ ಭೂಮಿಯಲ್ಲಿ ಮಣ್ಣಿನಲ್ಲಿ ಸತ್ವ ಇಳಿಮುಖವಾಗುತ್ತಿದೆ. ರಾಸಾಯನಿಕ ಬಳಕೆ ಪರಿಣಾಮವಾಗಿ ಎರೆಹುಳುಗಳು ನಶಿಸುತ್ತಿವೆ. ಇದು ಅಂತರ್ಜಲದ ಮೇಲೆಯೂ ಪರಿಣಾಮ ಬೀರುತ್ತಿದೆ. ರಾಸಾಯನಿಕಯುಕ್ತ ಫಸಲಿನಿಂದಾಗಿ ಆಹಾರದ ಮೂಲಕ ಆರೋಗ್ಯದ ಮೇಲೆ ಪರಿಣಾಮವಾಗಿ ಹಲವು ಕಾಯಿಲೆಗಳಿಗೆ ಬಲಿಯಾಗುತ್ತಿದ್ದೇವೆ. ಅದರಲ್ಲೂ ಚಿಕ್ಕಮಕ್ಕಳಿಗೆ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳು ಬಾಧಿಸುತ್ತಿವೆ. ಆದ್ದರಿಂದ ಹಾಲು, ಮೊಸರು, ಸೆಗಣಿ, ಗೋಮೂತ್ರ, ತುಪ್ಪ ಮಿಶ್ರಣದೊಂದಿಗೆ ಸಿದ್ಧಗೊಂಡ ಪಂಚಗವ್ಯವು ರಾಮಬಾಣದಂತೆ ಕಾರ್ಯ ಮಾಡುವದು, ಕೀಟಬಾಧೆಯನ್ನು ನಿಯಂತ್ರಿಸಬಹುದಾದ ಔಷಧ ಗುಣವನ್ನು ಹೊಂದಿದೆ.
– ಸುನೀಲ ಮಾನಸಿಂಗಕಾ.
ಗೋ ವಿಜ್ಞಾನ ಅನುಸಂಧಾನ ಕೇಂದ್ರದ ಮುಖ್ಯಸ್ಥ.

Spread the love

LEAVE A REPLY

Please enter your comment!
Please enter your name here