ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್ 29ರವರೆಗೆ ಹಾಗೂ ಬೆಂಗಳೂರಿನಲ್ಲಿ ಮೇ 5ರವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಿಸಿಲಿನ ತೀವ್ರತೆಗೆ ಬೇಸತ್ತಿರುವ ಜನರಿಗೆ ಇದರಿಂದ ಸ್ವಲ್ಪ ಮಟ್ಟಿನ ತಂಪು ಸಿಗುವ ನಿರೀಕ್ಷೆ ಮೂಡಿದೆ.
ಕರಾವಳಿ, ದಕ್ಷಿಣ ಕನ್ನಡ, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಏಪ್ರಿಲ್ 29ರವರೆಗೆ ಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. ಈ ನಡುವೆ ಬೆಂಗಳೂರಿನಲ್ಲೂ ಬಿಸಿಲಿನ ಬೇಗೆಯಿಂದ ಸ್ವಲ್ಪ ರಿಲೀಫ್ ಸಿಗುವ ಸಾಧ್ಯತೆ ಇದೆ.
ಏಪ್ರಿಲ್ 28ರಿಂದ ಮೇ 5ರವರೆಗೆ ರಾಜಧಾನಿಯಲ್ಲಿ ಭಾರೀ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಹೆಚ್ಚಿದ ಉಷ್ಣಾಂಶದಿಂದ ಬಸವಳಿದಿರುವ ಜನರು, ಮಳೆಯ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.
ಮಳೆಯ ಸಿಂಚನದಿಂದ ತಾಪಮಾನ ಇಳಿಕೆಯಾಗುವ ಮೂಲಕ ವಾತಾವರಣ ತಂಪಾಗುವ ಸಾಧ್ಯತೆ ಇರುವುದರಿಂದ ಜನರಿಗೆ ಸ್ವಲ್ಪ ನೆಮ್ಮದಿ ಸಿಗುವ ಸಾಧ್ಯತೆ ಇದೆ.



