ಯಶ್ ಮತ್ತು ರಣಬೀರ್ ಕಪೂರ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಬಿಡುಗಡೆಯಾಗಿ ಮೂರು ವಾರಗಳನ್ನು ಪೂರ್ಣಗೊಳಿಸುವ ಹಂತದಲ್ಲಿರುವ ಈ ಚಿತ್ರ, ವಿಶ್ವಾದ್ಯಂತ ಈಗಾಗಲೇ 1,704 ಕೋಟಿ ರೂ. ಗಳಿಕೆ ಮಾಡಿದೆ. ದಿನದಿಂದ ದಿನಕ್ಕೆ ಚಿತ್ರದ ಕಲೆಕ್ಷನ್ ಹೆಚ್ಚುತ್ತಿದ್ದು, ಹಲವು ದಾಖಲೆಗಳನ್ನು ತನ್ನದಾಗಿಸಿಕೊಳ್ಳುತ್ತಿದೆ.
ದೇಶೀಯ ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ಸಿನಿಮಾ ಒಟ್ಟು 1,141 ಕೋಟಿ ರೂ. ಗಳಿಸಿದೆ. ಈ ಪೈಕಿ ಹಿಂದಿ ಆವೃತ್ತಿಯೊಂದೇ 700 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದೆ. ಒಟ್ಟಾರೆ ಕಲೆಕ್ಷನ್ನಲ್ಲಿ ಈ ಚಿತ್ರವು ‘ಧುರಂಧರ್ 2’ ಸಿನಿಮಾಕ್ಕಿಂತ ಸುಮಾರು 70 ಕೋಟಿ ರೂ. ಮುನ್ನಡೆ ಸಾಧಿಸಿದೆ. ಅಲ್ಲದೆ, ಭಾರತದಲ್ಲಿ ‘ಅನಿಮಲ್’ ಚಿತ್ರದ ನಿವ್ವಳ ಕಲೆಕ್ಷನ್ ದಾಖಲೆಯನ್ನೂ ಹಿಂದಿಕ್ಕಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಬಿಡುಗಡೆಯ 19ನೇ ದಿನವಾದ ಮಂಗಳವಾರ ‘ರಾಮಾಯಣ’ ಸಿನಿಮಾ ದೇಶಾದ್ಯಂತ 15,696 ಪ್ರದರ್ಶನಗಳಿಂದ 12.70 ಕೋಟಿ ರೂ. ಗಳಿಸಿದೆ. ಇದರಲ್ಲಿ ಹಿಂದಿ ಆವೃತ್ತಿಯ ಕೊಡುಗೆ ದೊಡ್ಡದಾಗಿದ್ದು, 13,442 ಪ್ರದರ್ಶನಗಳ ಮೂಲಕ 9.25 ಕೋಟಿ ರೂ. ಸಂಗ್ರಹಿಸಿದೆ.
ಇನ್ನು ಭಾಷಾವಾರು ಗಳಿಕೆಯನ್ನು ಗಮನಿಸಿದರೆ, ಕನ್ನಡದಲ್ಲಿ 85 ಲಕ್ಷ ರೂ., ತಮಿಳಿನಲ್ಲಿ 80 ಲಕ್ಷ ರೂ., ತೆಲುಗಿನಲ್ಲಿ 30 ಲಕ್ಷ ರೂ. ಹಾಗೂ ಮಲಯಾಳಂನಲ್ಲಿ 1.50 ಕೋಟಿ ರೂ. ಕಲೆಕ್ಷನ್ ಆಗಿದೆ. ವಿದೇಶಿ ಮಾರುಕಟ್ಟೆಯಲ್ಲೂ ಚಿತ್ರ ಉತ್ತಮ ಪ್ರದರ್ಶನ ನೀಡುತ್ತಿದ್ದು, ಈವರೆಗೆ 567 ಕೋಟಿ ರೂ. ಗಳಿಸಿದೆ. ಇದರೊಂದಿಗೆ ಚಿತ್ರದ ವಿಶ್ವಾದ್ಯಂತ ಒಟ್ಟು ಗಳಿಕೆ 1,704 ಕೋಟಿ ರೂ.ಗೆ ತಲುಪಿದೆ.
ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್, ಸನ್ನಿ ಡಿಯೋಲ್, ರವಿ ದುಬೆ ಮತ್ತು ಲಾರಾ ದತ್ತ ಸೇರಿದಂತೆ ದೊಡ್ಡ ತಾರಾಗಣವಿದೆ. ಭರ್ಜರಿ ಗಳಿಕೆಯೊಂದಿಗೆ ಮುನ್ನುಗ್ಗುತ್ತಿರುವ ‘ರಾಮಾಯಣ’ ಮುಂದಿನ ದಿನಗಳಲ್ಲಿ ಬಾಕ್ಸ್ ಆಫೀಸ್ನಲ್ಲಿ ಇನ್ನಷ್ಟು ದಾಖಲೆಗಳನ್ನು ನಿರ್ಮಿಸಲಿದೆಯೇ ಎಂಬ ಕುತೂಹಲ ಮೂಡಿದೆ.









