ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಹಾಗೂ ದಕ್ಷ ಸೇವೆಗಾಗಿ ನೀಡಲಾಗುವ ಪ್ರತಿಷ್ಠಿತ ‘ಡಿಜಿ-ಐಜಿಪಿ ಕಮೆಂಡೇಷನ್ ಡಿಸ್ಕ್–2025-26’ ಪ್ರಶಸ್ತಿಗೆ ಗದಗ ಜಿಲ್ಲೆಯ ಪಿಎಸ್ ಐ ಸೇರಿದಂತೆ ಸಿಬ್ಬಂದಿ ಭಾಜನರಾಗಿದ್ದಾರೆ.
ಬೆಂಗಳೂರು ನಗರದ ಕೋರಮಂಗಲದಲ್ಲಿರುವ 3ನೇ ಪಡೆ ಕೆಎಸ್ಆರ್ಪಿ ಮೈದಾನದಲ್ಲಿ ಶುಕ್ರವಾರ ನಡೆದ ರಾಜ್ಯಮಟ್ಟದ ಗೌರವ ಪ್ರದಾನ ಹಾಗೂ ಪಥಸಂಚಲನ ಸಮಾರಂಭದಲ್ಲಿ ಬೆಟಗೇರಿ ಬಡಾವಣೆ ಠಾಣೆಯ ಪಿಎಸ್ಐ ಮಾರುತಿ ಜೋಗದಂಡಕರ್, ಗ್ರಾಮೀಣ ಪೊಲೀಸ್ ಠಾಣೆಯ ವಿಶ್ವನಾಥ ಬಡಿಗೇರ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎಸ್ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ್ ಬಂಡಿಹಾಳ ಅವರಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರ (ಡಿಜಿ-ಐಜಿಪಿ) ವತಿಯಿಂದ ಪ್ರತಿಷ್ಠಿತ ಕಮೆಂಡೇಷನ್ ಡಿಸ್ಕ್ ಪ್ರದಾನ ಮಾಡಿ ಗೌರವಿಸಲಾಯಿತು.
ರಾಜ್ಯದ ವಿವಿಧ ಜಿಲ್ಲೆಗಳ ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಈ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಆಕರ್ಷಕ ಪಥಸಂಚಲನ, ಶಿಸ್ತಿನ ಕವಾಯತು ಹಾಗೂ ಗೌರವ ವಂದನೆಯೊಂದಿಗೆ ಸಮಾರಂಭ ವೈಭವದಿಂದ ನಡೆಯಿತು.
ಕರ್ತವ್ಯ ನಿರ್ವಹಣೆಯಲ್ಲಿ ತೋರಿದ ದಕ್ಷತೆ, ಸಾರ್ವಜನಿಕ ಸೇವೆಯಲ್ಲಿನ ಬದ್ಧತೆ ಹಾಗೂ ಉತ್ತಮ ಕಾರ್ಯಕ್ಷಮತೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದ್ದು, ಗದಗ ಜಿಲ್ಲಾ ಪೊಲೀಸ್ ಇಲಾಖೆಗೆ ಇದು ಹೆಮ್ಮೆಯ ಕ್ಷಣವಾಗಿದೆ. ಪ್ರಶಸ್ತಿ ಪುರಸ್ಕೃತ ಮೂವರು ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಡಿಎಸ್ಪಿಗಳಾದ ಮುರ್ತುಜಾ ಖಾದ್ರಿ, ಮಹಾಂತೇಶ್ ಸಜ್ಜನರ ಹಾಗೂ ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.



