ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಗಳ ಮೇಲೆ ನಡೆದ ಜಾರಿ ನಿರ್ದೇಶನಾಲಯದ (ED) ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆದಿದೆ. ಜಾಲಹಳ್ಳಿಯಲ್ಲಿರುವ ಇಡಿ ಕಚೇರಿಯಲ್ಲಿ ನಿರ್ದೇಶಕ ರಾಹುಲ್ ನವೀನ್ ನೇತೃತ್ವದಲ್ಲಿ ಸಭೆ ನಡೆದಿದ್ದು, ದಾಳಿ ವೇಳೆ ಜಪ್ತಿ ಮಾಡಲಾಗಿರುವ ನಗದು, ವಿದೇಶಿ ಕರೆನ್ಸಿ ಹಾಗೂ ವಿವಿಧ ದಾಖಲೆಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ದೆಹಲಿಯಿಂದ ಆಗಮಿಸಿರುವ ಇಡಿ ಹಿರಿಯ ಅಧಿಕಾರಿಗಳು, ಸ್ಪೆಷಲ್ ಡೈರೆಕ್ಟರ್ ಹಾಗೂ ತಾಂತ್ರಿಕ ಸಮಿತಿ ತಂಡ ಸಭೆಯಲ್ಲಿ ಭಾಗವಹಿಸಿದೆ. ತನಿಖೆಯ ಮುಂದಿನ ಹಂತಗಳು, ವಿಚಾರಣೆ ನಡೆಸುವ ವಿಧಾನ ಹಾಗೂ ಮುಂದಿನ ಕಾರ್ಯತಂತ್ರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.
ಸತೀಶ್ ಜಾರಕಿಹೊಳಿ ಅವರ ನಿವಾಸಗಳ ಮೇಲೆ ನಡೆದ ದಾಳಿ ಸಂದರ್ಭದಲ್ಲಿ ₹3 ಕೋಟಿಗೂ ಅಧಿಕ ನಗದು, ಗಣನೀಯ ಪ್ರಮಾಣದ ವಿದೇಶಿ ಕರೆನ್ಸಿ ಹಾಗೂ ಹಲವು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ. ಜಪ್ತಿ ಮಾಡಲಾದ ಹಣ ಮತ್ತು ದಾಖಲೆಗಳ ಕುರಿತು ಅಧಿಕಾರಿಗಳು ಮರುಪರಿಶೀಲನೆ ನಡೆಸಿದ್ದಾರೆ.
ಇದರ ಜೊತೆಗೆ ಸತೀಶ್ ಜಾರಕಿಹೊಳಿ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ. ತನಿಖೆಯ ಮುಂದಿನ ಹಂತದ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ದೆಹಲಿಯಿಂದ ಬಂದಿರುವ ಇಡಿ ಅಧಿಕಾರಿಗಳ ತಂಡ ಇನ್ನೂ ಎರಡು ದಿನ ಬೆಂಗಳೂರಿನಲ್ಲೇ ಉಳಿದು ದಾಖಲೆಗಳ ಪರಿಶೀಲನೆ ಮುಂದುವರಿಸಲಿದೆ.
ಇಡಿ ನೀಡಿರುವ ಮಾಧ್ಯಮ ಪ್ರಕಟಣೆಯ ಪ್ರಕಾರ, ವಿದೇಶಗಳಲ್ಲಿ ಅಕ್ರಮ ಹೂಡಿಕೆ ನಡೆದಿರುವ ಆರೋಪಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ. ನಿರ್ದಿಷ್ಟವಾಗಿ ಆಫ್ರಿಕಾದ ಕಾಂಗೋದಲ್ಲಿರುವ ಚಿನ್ನದ ಗಣಿಗಾರಿಕೆ ಕಂಪನಿಯೊಂದರಲ್ಲಿ ಸತೀಶ್ ಜಾರಕಿಹೊಳಿ ಅವರಿಗೆ ಶೇ.40ರಷ್ಟು ಪಾಲುದಾರಿಕೆ ಇದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎಂದು ಇಡಿ ತಿಳಿಸಿದೆ.
ಅಲ್ಲದೆ, ಪಶ್ಚಿಮ ಬಂಗಾಳದ ಮೂಲಸೌಕರ್ಯ ಯೋಜನೆಗಳ ಟೆಂಡರ್ಗಳಿಗೆ ಸಂಬಂಧಿಸಿದಂತೆ ಕಿಕ್ಬ್ಯಾಕ್ ಹಣವನ್ನು ನೇರವಾಗಿ ಸ್ವೀಕರಿಸದೆ, ಆಫ್ರಿಕಾದ ಕಂಪನಿಗಳಲ್ಲಿ ಕುಟುಂಬ ಸದಸ್ಯರ ಹೆಸರಿನಲ್ಲಿ ಹೂಡಿಕೆ ಮಾಡಿರುವ ಆರೋಪಗಳ ಬಗ್ಗೆಯೂ ಇಡಿ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.
ಇದರೊಂದಿಗೆ ಲೋಕೋಪಯೋಗಿ ಇಲಾಖೆಯ ಗುತ್ತಿಗೆಗಳಿಗೆ ಸಂಬಂಧಿಸಿದಂತೆ ಲಂಚ ಅಥವಾ ಕಿಕ್ಬ್ಯಾಕ್ ಪಡೆದಿರುವ ಆರೋಪಗಳ ಬಗ್ಗೆಯೂ ತನಿಖಾಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಸತೀಶ್ ಜಾರಕಿಹೊಳಿ ಸಚಿವರಾದ ಬಳಿಕ ಕರೆಯಲಾದ ಟೆಂಡರ್ಗಳು, ಗುತ್ತಿಗೆ ಪಡೆದ ಕಂಪನಿಗಳು, ಟೆಂಡರ್ ಮೊತ್ತ ಹಾಗೂ ನಿರ್ದಿಷ್ಟ ಕಂಪನಿಗಳಿಗೆ ಗುತ್ತಿಗೆ ನೀಡಲು ಹಣ ಪಡೆದಿರುವ ಆರೋಪಗಳ ಕುರಿತು ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ಸೆಪ್ಟೆಂಬರ್ 13ರಂದು ಕೂಡ ಇಡಿ ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸಿದ್ದರು. ಇದೀಗ ಸೆಪ್ಟೆಂಬರ್ 14ರಂದು ಜಾಲಹಳ್ಳಿ ಇಡಿ ಕಚೇರಿಯಲ್ಲಿ ತನಿಖೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಮತ್ತಷ್ಟು ವಿಚಾರಣೆ ಹಾಗೂ ಕ್ರಮಗಳು ನಡೆಯುವ ಸಾಧ್ಯತೆ ಇದೆ.



