ವಿಜಯಸಾಕ್ಷಿ ಸುದ್ದಿ, ಗದಗ: ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (MPLADS) ಅಡಿಯಲ್ಲಿ ಗದಗ ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳ ವಿಳಂಬಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಒಂದು ವಾರದೊಳಗೆ ಬಾಕಿ ಇರುವ ಎಲ್ಲಾ ಪ್ರಗತಿ ವರದಿಗಳನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಎಂಪಿಎಲ್ಎಡಿಎಸ್ ಹಾಗೂ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಕೈಗೆತ್ತಿಕೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2024-25 ಹಾಗೂ 2025-26ನೇ ಸಾಲಿನ ಅನುದಾನದಡಿ ಒಟ್ಟು 35 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, ಇದುವರೆಗೆ ಕೇವಲ 8 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. 11 ಕಾಮಗಾರಿಗಳಿಗೆ ಅಂದಾಜು ಪತ್ರಿಕೆ ಸಲ್ಲಿಕೆಯಾಗದೇ ಹಾಗೂ 16 ಕಾಮಗಾರಿಗಳಿಗೆ ಎರಡನೇ ಹಂತದ ಅನುದಾನ ಬಿಡುಗಡೆಗೆ ಅಗತ್ಯ ಪ್ರಸ್ತಾವನೆ ಸಲ್ಲಿಸದೇ ಅಧಿಕಾರಿಗಳು ವಿಳಂಬ ಮಾಡಿರುವುದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಸಾರ್ವಜನಿಕರ ಹಣ ವ್ಯರ್ಥವಾಗದಂತೆ ಆರ್ಟಿಸಿ, ಈ-ಸ್ವತ್ತು, ಆಸ್ತಿ ದಾಖಲೆ ಹಾಗೂ ಕಟ್ಟಡ ನಿರ್ಮಾಣ ಪರವಾನಗಿ ಸಂಬಂಧಿತ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ, ಒಂದು ವಾರದೊಳಗೆ ಎಲ್ಲಾ ದಾಖಲೆಗಳನ್ನು ಸರಿಪಡಿಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಚರ್ಚೆಯಾದ ಐದು ಪ್ರಮುಖ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರು ಅಥವಾ ಅನುಷ್ಠಾನ ಸಂಸ್ಥೆಗಳು ನಿಗದಿತ ಅವಧಿಯಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸದಿದ್ದರೆ, ಆ ಕಾಮಗಾರಿಗಳ ಅನುದಾನವನ್ನು ರದ್ದುಪಡಿಸಿ ಬೇರೆ ಅಗತ್ಯ ಕಾಮಗಾರಿಗಳಿಗೆ ಮರುಹಂಚಿಕೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ದುರ್ಗಾದೇವಿ ದೇವಸ್ಥಾನದ ಸಭಾಭವನ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಕಂಪ್ಯೂಟರ್ ಉತಾರದಲ್ಲಿನ ತಾಂತ್ರಿಕ ದೋಷಗಳನ್ನು ಸರಿಪಡಿಸಿ, ನಿಯಮಾನುಸಾರ ಕಾಮಗಾರಿ ಆರಂಭಿಸಲು ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು. ವಿವಿಧ ಗ್ರಾಮಗಳ ಸ್ಮಶಾನ ವೈರಾಗ್ಯ ಧಾಮ, ಅಂಬೇಡ್ಕರ್ ಭವನ ಹಾಗೂ ಸಮುದಾಯ ಭವನಗಳ ಕಾಮಗಾರಿಗಳಿಗೆ ಅಗತ್ಯ ದಾಖಲೆ ಮತ್ತು ನಿರಾಕ್ಷೇಪಣಾ ಪತ್ರಗಳನ್ನು ಶೀಘ್ರವಾಗಿ ಪಡೆಯುವಂತೆ ನಿರ್ದೇಶಿಸಿದರು.
ಕೇಂದ್ರ ಸರ್ಕಾರದ ದರ್ಪಣ್ ಪೋರ್ಟಲ್ನಲ್ಲಿ ಎಲ್ಲಾ ಕಾಮಗಾರಿಗಳ ಜಿಪಿಎಸ್ ಮಾಹಿತಿ ಹಾಗೂ ಪ್ರಗತಿ ವಿವರಗಳನ್ನು ಕಾಲಕಾಲಕ್ಕೆ ಕಡ್ಡಾಯವಾಗಿ ನವೀಕರಿಸುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಸಂಸದರು ನೀಡಿರುವ ಸೂಚನೆಗಳನ್ನು ಗಂಭೀರವಾಗಿ ಅನುಷ್ಠಾನಗೊಳಿಸಲಾಗುವುದು. ಒಂದು ವಾರದೊಳಗೆ ಬಾಕಿ ಇರುವ ಎಲ್ಲಾ ಅಂದಾಜು ಪತ್ರಿಕೆ ಹಾಗೂ ಪ್ರಸ್ತಾವನೆಗಳನ್ನು ಸಲ್ಲಿಸಬೇಕು. ತಾಂತ್ರಿಕ ನೆಪ ಹೇಳಿ ಕಾಮಗಾರಿಗಳನ್ನು ವಿಳಂಬಗೊಳಿಸುವುದನ್ನು ಸಹಿಸುವುದಿಲ್ಲ. ಕರ್ತವ್ಯಲೋಪ ಎಸಗುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು, ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್., ಉಪವಿಭಾಗಾಧಿಕಾರಿ ಗಂಗಪ್ಪ ಎಂ., ವಿವಿಧ ಇಲಾಖೆಗಳ ಕಾರ್ಯಪಾಲಕ ಅಭಿಯಂತರರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
“ಒಂದು ವಾರದೊಳಗೆ ದಾಖಲೆಗಳನ್ನು ಪೂರ್ಣಗೊಳಿಸಿ ಕಾಮಗಾರಿಗಳಿಗೆ ವೇಗ ನೀಡಿ. ವಿಳಂಬ ಮುಂದುವರಿದರೆ ಅನುದಾನ ರದ್ದುಪಡಿಸಿ ಬೇರೆ ಕಾಮಗಾರಿಗಳಿಗೆ ಮರುಹಂಚಿಕೆ ಮಾಡಲಾಗುವುದು.”
– ಬಸವರಾಜ ಬೊಮ್ಮಾಯಿ, ಸಂಸದ, ಹಾವೇರಿ–ಗದಗ ಲೋಕಸಭಾ ಕ್ಷೇತ್ರ



